ರಿಮಳಗಳ ಮಾಯೆ – ಸಮತಾ ಆರ್

ಲೇಖಕಿ ಸಮತಾ ಆರ್ ಅವರ ‘ಪರಿಮಗಳ ಮಾಯೆ’ 18 ಲಲಿತ ಪ್ರಬಂಧಗಳ ಸಂಕಲನಗಳ ಕುರಿತು ನವೀನಕೃಷ್ಣ ಎಸ್. ಉಪ್ಪಿನಂಗಡಿ ಅವರು ಬರೆದ ಪುಸ್ತಕ ಪರಿಚಯವನ್ನು ತಪ್ಪದೆ ಓದಿ…

ಪುಸ್ತಕ : ಪರಿಮಗಳ ಮಾಯೆ (ಪ್ರಬಂಧಗಳು)
ಲೇಖಕರು : ಸಮತಾ ಆರ್
ಪ್ರಕಾಶನ : ಅಹರ್ನಿಶಿ, ಶಿವಮೊಗ್ಗ
ಪುಟ: ೧೪೦
ಬೆಲೆ : ೧೪೦ /
ಖರೀದಿ : 9449174332

ಲೇಖಕಿ ಸಮತಾ ಆರ್. ಅವರು ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜನಿಸಿ, ಪ್ರಸ್ತುತ ಕೊಡಗಿನ ಸರ್ಕಾರಿ ಶಾಲೆಯೊಂದರಲ್ಲಿ ಗಣಿತ ಶಿಕ್ಷಕಿಯಾಗಿ ಕರ್ತವ್ಯನಿರ್ವಹಿಸುತ್ತಿದ್ದಾರೆ. ಕನ್ನಡದ ಕೆಲವು ಕವಿತೆಗಳನ್ನು ಇಂಗ್ಲೀಷ್ ಗೆ ಅನುವಾದಿಸಿರುವ ಸಮತಾ ಅವರ ಲಲಿತ ಪ್ರಬಂಧಗಳ ಸಂಕಲನವೇ ‘ಪರಿಮಳಗಳ ಮಾಯೆ’.

‘ಪರಿಮಗಳ ಮಾಯೆ’ 18 ಲಲಿತ ಪ್ರಬಂಧಗಳ ಸಂಕಲನ. ಇಲ್ಲಿರುವ ಪ್ರಬಂಧಗಳೆಲ್ಲವೂ ಪತ್ರಿಕೆ ಮತ್ತು ಬ್ಲಾಗ್ ಗಳಲ್ಲಿ ಪ್ರಕಟವಾದಂತವುಗಳು. ಇಲ್ಲಿನ ಪ್ರಬಂಧಗಳಿಗೆ ನಮ್ಮ ದಿನನಿತ್ಯದ ವಿಷಯಗಳೇ ವಸ್ತುಗಳು! ಒಂದು ರೀತಿಯಲ್ಲಿ ಇದು ಲೇಖಕಿಯ ಭಟ್ಟಿ ಇಳಿಸಿದ ಗಟ್ಟಿ ಅನುಭವಗಳ ಹೂರಣಗಳು. ಇದು ಲೇಖಕಿಯ ಅನುಭವ ಕಥನದಂತೆ ನಮ್ಮ ನಿಮ್ಮೆಲ್ಲರ ಅನುಭವ ಕಥನವೂ ಹೌದು. ಇಲ್ಲಿನ ಪ್ರಬಂಧಗಳು ಕೇಂದ್ರೀಕೃತವಾಗಿರುವುದು ನಮ್ಮ ಸುತ್ತಮುತ್ತಲೇ ನಡೆಯುವ ವಿಷಯಗಳಲ್ಲಿ. ನವಿರಾದ ಹಾಸ್ಯಲೇಪನವೇ ಪ್ರಬಂಧದ ಹೊರಮೈಯಾದರೂ ಇದರ ಒಳಮೈ ಯಾವುದೋ ಒಂದು ಗಂಭೀರವಾದ ವಿಷಯವನ್ನು ಧ್ವನಿಸುತ್ತದೆ. ಅಲ್ಲಲ್ಲಿ ಲಘು ಹರಟೆಯ ಧಾಟಿಯಂತೆ ತಮ್ಮ ವಿಷಯವನ್ನು ಓದುಗನಲ್ಲಿ ಹೇಳುತ್ತಾ ಹೋಗುವ ಲೇಖಕಿ, ಮೊದಲು ಲಘು ಹರಟೆಗಳನ್ನು ಬರೆಯುತ್ತಿದ್ದುದರ ಛಾಪನ್ನು ಇಲ್ಲಿ ಕಾಣಬಹುದು.

‘ಲಿಯೋ ಬೆನ್ನೇರಿ ಹೊರಟ ಸವಾರಿ’ , ‘ಸೆಕೆಂಡ್ ಹ್ಯಾಂಡ್ ಕಾರುಗಳ ಲೋಭ’ ಪ್ರಬಂಧಗಳು ನಿರ್ಜೀವ ವಸ್ತುವಾದ ವಾಹನಗಳಿಗೆ ಜೀವ ಕೊಟ್ಟು ಅವುಗಳ ಸುಖ-ದು:ಖಗಳನ್ನು ಹೊರಹಾಕುವುದಾಗಿದೆ. ಇದನ್ನು ಓದುವಾಗ ದ್ವಿತೀಯ ಸೆಮಿಸ್ಟರ್ ನಲ್ಲಿ ನಮಗೆ ಪಠ್ಯವಾಗಿದ್ದ ಸಬಿಹಾ ಭೂಮಿಗೌಡರ ‘ನನ್ನ ಪ್ರೀತಿಯ ಕುಕ್ಕರ್’ ಎಂಬ ಕವನ ನೆನಪಾಗುತ್ತದೆ (ಅದು ಕುಕ್ಕರ್ ನ ಮೂಲಕ ಹೆಣ್ಣಿನ ಒಳತುಮುಲಗಳನ್ನು ಒರೆಗೆ ಹಚ್ಚುವುದಾಗಿತ್ತು).

ಅಡುಗೆಗೆ ಸಂಬಂಧಿಸಿಯಂತೂ ಬಹಳಷ್ಟು ಪ್ರಬಂಧಗಳಿವೆ. ಅಡುಗೆಮನೆಯ ಪುರಾಣಗಳೇ ಇಲ್ಲಿನ ಪ್ರಬಂಧಗಳ ಬಂಡವಾಳ! ‘ಬೋಟಿ ಗೊಜ್ಜು’ , ‘ಭಾನುವಾರದ ಬಾಡೂಟ’ , ‘ನಾಳೆ ಅಡುಗೆ ಏನು ಮಾಡುವುದು’ , ‘ಚಮಚಾಯಣ’ ಪ್ರಬಂಧಗಳು ಅಡುಗೆಮನೆಗೆ ಸಂಬಂಧಿಸಿದಂತವುಗಳು. ‘ಚಮಚಾಯಣ’ ಪ್ರಬಂಧ ವಿಶಿಷ್ಠವಾಗಿದ್ದು, ಪ್ರಬಂಧ ವಿಸ್ತರಿಸುವ ರೀತಿ ಸೊಗಸಾಗಿದೆ.


ಪರಿಮಗಳ ಮಾಯೆ (ಪ್ರಬಂಧಗಳು) ಲೇಖಕಿ ಸಮತಾ ಆರ್

80-90 ರ ದಶಕರಲ್ಲಿ ಟಾಕೀಸ್ ನಲ್ಲಿ ಸಿನೆಮಾ ನೋಡುವ ಗಮ್ಮತ್ತು, ಅಪ್ಪನ ನೆನಪುಗಳು, ವ್ಯಾಪಕವಾಗಿ ಹರಡಿರುವ ಅಡ್ಡ ಹೆಸರುಗಳ ಲೋಕದಲ್ಲಿ, ಹುಡುಗಿ ನೋಡುವ ಶಾಸ್ತ್ರ, ಚೌಕಾಸಿ, ಸೆದಕಲಲ್ಲೊಂದು ಮನೆಯನ್ನು ಮಾಡಿ ಎದುರಿಸಬೇಕಾಗುವ ಸನ್ನಿವೇಷಗಳು, ಮರೆವು, ಸ್ಮಾರ್ಟ್ ಫೋನ್ ಮುಂತಾದವುಗಳು ಉಳಿದ ಪ್ರಬಂಧಗಳ ವಸ್ತುಗಳು. ಹೆಣ್ಣುಮಕ್ಕಳ ಸಂಕಷ್ಟಗಳನ್ನೂ ಇಲ್ಲಿನ ಪ್ರಬಂಧಗಳು ಹೇಳುತ್ತವೆ. ಅದರಲ್ಲಿಯೂ ‘ಹೊಟ್ಟೆ ಬರುತ್ತೆ ಹೋಗಲ್ಲ’ , ‘ಕೂದುಲು ಹೋಗುತ್ತೆ ಬರೋಲ್ಲ’ ಪ್ರಬಂಧಗಳಂತೂ ವಾಸ್ತವವನ್ನು ಬಹಳ ಚೆನ್ನಾಗಿ ಚಿತ್ರಿಸಿದೆ. ಇದು ವರ್ತಮಾನದಲ್ಲಿ ಬಹುತೇಕರ ಪಾಡೂ ಆಗಿದೆ.

ವಿರಾಮದ ಓದಿಗೆ ಹೇಳಿಮಾಡಿಸಿದವುಗಳು ಇಲ್ಲಿನ ಪ್ರಬಂಧಗಳು. ಯಾಂತ್ರಿಕವಾಗಿ ಸಾಗುತ್ತಿರುವ ಬದುಕಿನಲ್ಲೊಮ್ಮೆ ನಿಧಾನಿಸಿ ಇಲ್ಲಿನ ಪ್ರಬಂಧಗಳನ್ನು ಓದಬೇಕು.ಈ ಕೃತಿಯನ್ನು ಶಿವಮೊಗ್ಗದ ಅಹರ್ನಿಶಿ ಪ್ರಕಾಶನದವರು ಪ್ರಕಟಿಸಿದ್ದಾರೆ. ಈ ಪುಸ್ತಕ ನಾನು ಪುಸ್ತಕ ಅವಲೋಕನ ಬಳಗದಲ್ಲಿ ಹಮ್ಮಿಕೊಳ್ಳಲಾದ ಕಥಾಸ್ಪರ್ಧೆಯ ತೀರ್ಪುಗಾರನಾಗಿ ಭಾಗವಹಿಸಿದ್ದಕ್ಕೆ ನಾಗರಾಜ. ಜಿ. ಅವರು ಕೊಟ್ಟ ಬಹುಮಾನವಾಗಿತ್ತು.


  • ನವೀನಕೃಷ್ಣ ಎಸ್. ಉಪ್ಪಿನಂಗಡಿ

0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW