ಪಶುವೈದ್ಯಾಧಿಕಾರಿ ಡಾ.ಎನ್.ಬಿ.ಶ್ರೀಧರ ಅವರ ‘ಪಶುವೈದ್ಯನ ಪಯಣ’ ಕೃತಿ ಓದುಗರ ಮುಂದಿದೆ. ಲೇಖಕರು ಈಗಾಗಲೇ 18 ಕ್ಕೂ ಹೆಚ್ಚು ಕನ್ನಡ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಅವೆಲ್ಲಾ ರೈತರು ಮತ್ತು ಪಶುಪಾಲಕರಿಗೆ ಕನ್ನಡ ಭಾಷೆಯಲ್ಲಿ ಪಶುಗಳ ವಿವಿಧ ಆಯಾಮಗಳ ಬಗ್ಗೆ ಬರೆದ ಪುಸ್ತಕಗಳಾಗಿವೆ. ಇನ್ನೂ ನಿಯತಕಾಲಿಕ ಪತ್ರಿಕೆಯಲ್ಲಿ೨,೫೫೦ಕ್ಕೂ ಹೆಚ್ಚಿನ ಲೇಖನಗಳು ಪ್ರಕಟವಾಗಿದೆ. ಪಶುವೈದ್ಯಕೀಯ ವೃತ್ತಿಯ ರೋಚಕ ಅನುಭವಗಳು ತಿಳಿಯಲ್ಲಿ ಈ ಕೃತಿಯನ್ನು ಓದಲೇ ಬೇಕು…
ಪುಸ್ತಕ : ಪಶುವೈದ್ಯನ ಪಯಣ
ಲೇಖಕರು : ಡಾ.ಎನ್.ಬಿ.ಶ್ರೀಧರ
ಪ್ರಕಾಶನ : ನವಕರ್ನಾಟಕ ಪ್ರಕಾಶನ
ಬೆಲೆ : ೩೧೦ ರೂ
ಇತ್ತೀಚೆಗೆ ಪಶುವೈದ್ಯಕೀಯ ವೃತ್ತಿ ತುಂಬಾ ಜನಪ್ರಿಯವಾಗುತ್ತಿದೆ. ಹಳ್ಳಿಯಲ್ಲಿ ಪಶುವೈದ್ಯರಿಗೆ ಅವರದೇ ಆದ ಗೌರವ ಮತ್ತು ಸ್ಥಾನಮಾನಗಳಿವೆ. ಕೆಲವೊಮ್ಮೆ ಬಹಳ ನಿರೀಕ್ಷೆಯೊಂದಿಗೆ ನೂತನವಾಗಿ ಪಶುವೈದ್ಯಕೀಯ ಇಲಾಖೆಗೆ ಸೇರಿದ ಪಶುವೈದ್ಯರು ಕೆಲವೊಮ್ಮೆ ಅಲ್ಲಿನ ಆಡಳಿತ ವ್ಯವಸ್ಥೆ, ಕೆಲಸದ ಒತ್ತಡ, ಔಷಧದ ಕೊರತೆ, ಹಳ್ಳಿಯಲ್ಲಿನ ವಾತಾವರಣ, ಪಶು ಆಸ್ಪತ್ರೆಗಳ ಅ ವ ಸ್ಥೆ, ಕೆಂಪುಪಟ್ಟಿ ವ್ಯವಸ್ಥೆ ಮತ್ತು ಪೈಪೋಟಿ ಇತ್ಯಾದಿಗಳಿಂದ ತಾವು ಪಶುವೈದ್ಯಕೀಯ ವೃತ್ತಿಗೆ ಸೇರಿ ತಪ್ಪು ಮಾಡಿದೆವೇನೋ ಎಂಬ ಭಾವನೆಯಿಂದ ಹತಾಶರಾಗುವುದಿದೆ. ಇದು ಎಲ್ಲಾ ವೃತ್ತಿಗಳಲ್ಲೂ ಸಾಮಾನ್ಯ. ಕರ್ನಾಟಕದ ಹಲವಾರು ಪಶುವೈದ್ಯರು ಜನಾರುರಾಗಿಗಳಾಗಿ ಕೆಲಸ ಮಾಡುತ್ತಿದ್ದಾರೆ. ಒಬ್ಬ ಪಶುವೈದ್ಯನಾಗಿ ೧೫ ವರ್ಷ ಪಶುಪಾಲನೆ ಮತ್ತು ಪಶುವೈದ್ಯಕೀಯ ಇಲಾಖೆಯಲ್ಲಿದ್ದು ಸಾರ್ಥಕ ಸೇವೆ ಸಲ್ಲಿಸಿ ನಂತರ ವಿಶ್ವವಿದ್ಯಾಲಯದಲ್ಲಿ ಸೇರಿ ಬೋಧಕ ವೃತ್ತಿಯನ್ನು ಕೈಗೊಂಡಿರುವ ನನ್ನ ಅನುಭವನ್ನು ಹಂಚಿಕೊ೦ಡು ಯುವ ಪಶುವೈದ್ಯರನ್ನು ಉತ್ತೇಜಿಸುವ ನಿಟ್ಟಿನಲ್ಲಿ ಈ ಕೃತಿಯನ್ನು ರಚಿಸಲಾಗಿದೆಯೇ ಹೊರತು ಆತ್ಮ ಪ್ರಶಂಸೆಗೋಸ್ಕರವಲ್ಲ.
ಹಳ್ಳಿಗರ ಜೀವನವನ್ನು ಮತ್ತು ಪಶುಪಾಲನೆಯ ಮೇಲಿನ ಅವರ ಅವಲಂಭನೆ ಮತ್ತು ಜೀವನ ಕಟ್ಟಿಕೊಳ್ಳುವ ರೀತಿಯನ್ನು ಅತಿ ಸಮೀಪದಿಂದ ಅನುಭವಿಸಿ ಬರೆದಾಗ ಸಿಗುವ ಸಾರ್ಥಕತೆಯೇ ಬೇರೆ. ಕೆಲವೊಮ್ಮೆ ವೇದಿಕೆಯ ಭಾಷಣಕಾರರು, ಧಾರ್ಮಿಕ ಮುಖಂಡರುಗಳು ಪಶುಗಳ ಬಗ್ಗೆ ಆಧಾರ ರಹಿತವಾದ ವಿಷಯಗಳನ್ನು ಹೇಳಿದಾಗ ಸಾರ್ವಜನಿಕವಾಗಿ ಅದು ತಪ್ಪು ಎಂಬ ನೇರವಾಗಿ ಯಾವುದೇ ವೇದಿಕೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸುವಾಗ ಹಳ್ಳಿ ಜನರ ಬದುಕು, ಬವಣೆ, ಪಶುಪಾಲನೆಗಳನ್ನು ಹತ್ತಿರದಿಂದ ನೋಡಿದ ಅನುಭವವೇ ನನ್ನ ಆತ್ಮ ವಿಶ್ವಾಸಕ್ಕೆ ಕಾರಣವಿರಬಹುದು ಅನಿಸುತ್ತದೆ.

ಈಗ ೪೫ ವರ್ಷಗಳ ಹಿಂದಿನ ಕಾಲ ಬದಲಾಗಿ ಆಧುನಿಕ ಮಾಹಿತಿ ಜಗತ್ತು ಹೇಗೆ ಕೈಬೆರಳ ತುದಿಗೆ ಬಂದಿಗೆ ಬಂದಿದೆ ಎಂಬುದನ್ನು ನೆನೆಸಿ ಅನೇಕ ಬಾರಿ ಬೆರಗಾಗುತ್ತೇನೆ. ನೋಡ ನೋಡುತ್ತಿದ್ದಂತೆ ಪ್ರಪಂಚ ಬದಲಾಗಿ ಹೋಯಿತು. ತಂತಿಯ ಮೂಲಕ ಮನೆಯಲ್ಲಿ ರಿಂಗಣಿಸುತ್ತಿದ್ದ ದೂರವಾಣಿ ಈಗ ಮೊಬೈಲ್ ಆಗಿ ಬದಲಾಗಿದೆ. ವಿದ್ಯುತ್ ಬಲ್ಬುಗಳು ಒಂದು ಕಾಲದಲ್ಲಿ ಇದ್ದವೇ ಎಂಬ ಮಟ್ಟಿಗೆ ಎಲ್‌ಇಡಿ ವಿದ್ಯುತ್ ದೀಪಗಳು ಬೆಳಗುತ್ತಿವೆ. ಒಂದು ಕಾಲದಲ್ಲಿ ನಾನು ಪ್ರೀತಿಯಿಂದ ಬಳಸಿದ ‘ಅಸಡಲಕe” ಎಂದು ಬೆರಳು ನೋಯುವವರೆಗೆ ಕುಟ್ಟುವ ಕನ್ನಡ ಬೆರಳಚ್ಚು ಯಂತ್ರಗಳು ಮಾಯವಾಗಿ ಗಣಕಯಂತ್ರ ಬಂದಿದೆ. ಉಗಿಬಂಡಿಗಳು ವಿದ್ಯುತ್ ಟ್ರೇನುಗಳಾಗಿವೆ. ಈ ಕಾಲದ ಯುವ ಪೀಳಿಗೆ ವಿಜ್ಞಾನದ ಮೂಲಕ ಎಷ್ಟೊಂದು ಸೌಲಭ್ಯಗಳಿಂದ ಜೀವನ ಸರಳ ಮಾಡಿಕೊಂಡಿದೆಯಲ್ಲ ! ಇದನ್ನು ನೋಡಿ ಕೆಲವೊಮ್ಮೆ ನನಗೆ ಇನ್ನೂ ತುಂಬಾ ತಡವಾಗಿ ಹುಟ್ಟಿದರೆ ಏನೇನು ಬದಲಾವಣೆಗಳನ್ನು ನೋಡಬಹುದಿತ್ತಲ್ಲಾ ಎಂದು ಬೆರಗು ಮೂಡುತ್ತದೆ.
ನಾನು ಪಶುವೈದ್ಯಾಧಿಕಾರಿಯಾಗಿ ಪಶುವೈದ್ಯ ವೃತ್ತಿಗೆ ಕಾಲಿಟ್ಟಿದ್ದು 11-03-1992 ರಲ್ಲಿ ಕಲಘಟಗಿಯ ಪಶುವೈದ್ಯಕೀಯ ಆಸ್ಪತ್ರೆಯಲ್ಲಿ ವಿಸ್ತರಣಾಧಿಕಾರಿಯಾಗಿ. ಪಶುವೈದ್ಯಕೀಯ ಔಷಧಶಾಸ್ತ್ರದಲ್ಲಿ ಬರೇಲಿಯ ಪ್ರತೀಷ್ಠಿತ ಭಾರತೀಯ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆಯಲ್ಲಿ ಸ್ನಾತಕೋತ್ತರ ಶಿಕ್ಷಣ ಪಡೆದು ಬಹಳ ಹುಮ್ಮಸ್ಸಿನಿಂದ ಇಲಾಖೆಗೆ ಸೇರಿದ ನನಗೆ ಬಹಳ ನಿರಾಸೆಯೇ ಕಾದಿತ್ತು ಎಂದರೆ ಅತಿಶಯೋಕ್ತಿಯಲ್ಲ. ರೈತರ ಮೂಡನಂಬಿಕೆ, ಅಸಹಕಾರ, ಔಷಧಗಳ ಕೊರತೆ, ಕಸಾಯಿಖಾನೆಯ ಮಧ್ಯವರ್ತಿಗಳ ಅಟ್ಟಹಾಸ ಇತ್ಯಾದಿಗಳು ಪಶುಚಿಕಿತ್ಸೆಯಲ್ಲಿ ತೊಡಕುನ್ನುಂಟು ಮಾಡಿದವು.
ಉತ್ತಮ ಚಿಕಿತ್ಸಾ ವಿಧಾನ, ಸೆಡೆಗಾಲು ಶಸ್ತ್ರ ಚಿಕಿತ್ಸೆ, ಹೆಗಲು ಬಾವಿನ ಶಸ್ತ್ರಚಿಕಿತ್ಸೆ, ಮೂತ್ರನಾಳದ ಕಟ್ಟಿಕೊಳ್ಳುವಿಕೆಯ ಶಸ್ತ್ರ ಚಿಕಿತ್ಸೆ ಇತ್ಯಾದಿಗಳ ಸತತ ಯತ್ನದಿಂದ ಪ್ರತಿ ದಿನ ಆಸ್ಪತ್ರೆಗೆ ಬರುವ ಜಾನುವಾರುಗಳ ಸಂಖ್ಯೆ 15 ರಿಂದ 65 ಕ್ಕೆ ಏರಿತು. ಮುಖ್ಯವಾಗಿ ಪಶುವೈದ್ಯರು ತಾಂತ್ರಿಕ ಜ್ಞಾನವನ್ನು ಸರಿಯಾಗಿ ಬಳಸಿ ರೈತರ ವಿಶ್ವಾಸಗಳಿಸಬಹುದೇ ಹೊರತು ನಮ್ಮದೇ ಸಿಬ್ಬಂದಿ ವರ್ಗದವರೊಂದಿಗೆ ಸ್ಪರ್ಧೆಗೆ ಬೀಳಬಾರದು. ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜಾನುವಾರು ಚಿಕಿತ್ಸೆಯಲ್ಲಿ ತೊಡಗಿದರೆ ಯಶಸ್ವಿ ಪಶುವೈದ್ಯರಾಗಬಹುದು ಎನ್ನುವುದು ನಾನು ಕಲಘಟಗಿಯಲ್ಲಿ ಇದ್ದ ಸಮಯದಲ್ಲಿ ಕಲಿತ ಪಾಠ.

ಪಶುವೈದ್ಯರು ತಾಂತ್ರಿಕ ಜ್ಞಾನವನ್ನು ಸರಿಯಾಗಿ ಬಳಸಿ ರೈತರ ವಿಶ್ವಾಸಗಳಿಸಬಹುದೇ ಹೊರತು ನಮ್ಮದೇ ಸಿಬ್ಬಂದಿ ವರ್ಗದವರೊಂದಿಗೆ ಸ್ಪರ್ಧೆಗೆ ಬೀಳಬಾರದು. ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜಾನುವಾರು ಚಿಕಿತ್ಸೆಯಲ್ಲಿ ತೊಡಗಿದರೆ ಯಶಸ್ವಿ ಪಶುವೈದ್ಯರಾಗಬಹುದು ಎನ್ನುವುದು ನಾನು ಕಲಘಟಗಿಯಲ್ಲಿ ಇದ್ದ ಸಮಯದಲ್ಲಿ ಕಲಿತ ಪಾಠ.
ನಾನು 18 ಕ್ಕೂ ಹೆಚ್ಚು ಕನ್ನಡ ಪುಸ್ತಕಗಳನ್ನು ಪ್ರಕಟಿಸಿದರೂ ಸಹ ಅವೆಲ್ಲಾ ರೈತರು ಮತ್ತು ಪಶುಪಾಲಕರಿಗೆ ಕನ್ನಡ ಭಾಷೆಯಲ್ಲಿ ಪಶುಗಳ ವಿವಿಧ ಆಯಾಮಗಳ ಬಗ್ಗೆ ಬರೆದ ಪುಸ್ತಕಗಳು. ನಾಡಿನ ಜನಪ್ರಿಯ ಪತ್ರಿಕೆಗಳಾದ ವಿಜಯ ಕರ್ನಾಟಕ, ವಿಜಯ ವಾಣಿ, ಉದಯವಾಣಿ ಇವೆಲ್ಲಾ ನನ್ನ ಲೇಖನಗಳನ್ನು ಕಳೆದ 20 ವರ್ಷಗಳಿಂದ 2550 ಕ್ಕೂ ಹೆಚ್ಚಿನ ಲೇಖನ ಪ್ರಕಟಿಸಿದರೂ ಅವೆಲ್ಲಾ ಸಹ ಪಶುಪಾಲಕರ ಮಾಹಿತಿಗಷ್ಟೆ ಸೀಮಿತವಾಗಿ ಸೃಜನ ಸಾಹಿತ್ಯ ಅನಿಸಿಕೊಳ್ಳಲೇ ಇಲ್ಲ ಎಂಬ ಕೊರಗಿದೆ.
ನನ್ನ ವೃತ್ತಿ ಜೀವನದಲ್ಲಿ ನಡೆದ ಘಟನೆಗಳನ್ನು ನನಗೆ ತಿಳಿದ ಹಾಗೆ ಬರೆದು ಫೇಸ್ಬುಕ್ಕಿನಂತ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊ೦ಡೆ. ಕೆಲವರು “ಲೇಖನಗಳು ಚೆನ್ನಾಗಿವೆಯಲ್ಲ, ಇದನ್ನು ಏಕೆ ಪುಸ್ತಕವಾಗಿ ಪ್ರಕಟಿಸಬಾರದು”? ಎಂದು ಇಲ್ಲಿನ ಅನೇಕರು ತಲೆಯಲ್ಲಿ ಹುಳಬಿಟ್ಟರು.
ಪುಸ್ತಕ ಪ್ರಕಟಿಸಿದರೆ ನವಕರ್ನಾಟಕ ಪ್ರಕಾಶನದಲ್ಲಿಯೇ ಎಂಬ ನನ್ನ ಆಶಯಕ್ಕೆ ಓಗೊಟ್ಟು ಈಗಾಗಲೇ ನನ್ನ ” ಸಾಕು ನಾಯಿ: ಸಚಿತ್ರ ಕೈಪಿಡಿ” ಪುಸ್ತಕ ಪ್ರಕಟಿಸಿದ ಸಹೃದಯಿ ಮೃದು ಭಾಷಿ ಉಡುಪರವರು “ಪ್ರಕಟಿಸೋಣ, ಆದರೆ ಬಹಳ ಕ್ಯೂ ಇದೆ, ಕಾಯುತ್ತೀರಾ?” ಎಂದರು. ಸರಿ ಎಂದೆ. ಇದು ನಡೆದಿದ್ದು ಕೋವಿಡ್ ೨೦೧೯ ರ ಸಮಯದಲ್ಲಿ. ಇದಾಗಿ ೬ ವರ್ಷಗಳ ನಂತರ ಪುಸ್ತಕ ಹೊರಬರುತ್ತಿದೆ. ಎಲ್ಲರಿಗೂ ನಮನಗಳು.
- ಈ ಪುಸ್ತಕವನ್ನು ಎಲ್ಲರೂ ನವಕರ್ನಾಟಕ ಪ್ರಕಾಶನದವರ ಆನ್ಲೈನ್ ಮೂಲಕ ಕೊಂಡು ಓದಿದರೆ ಬರೆದ ನನ್ನ ಶ್ರಮ ಸಾರ್ಥಕ . ಇಲ್ಲಿದೆ ಕೊಂಡಿ.
https://navakarnataka.com/pashuvaidyana-payana ರೂ : 310 - ಅಮೆಜಾನ್ ನಲ್ಲಿಯೂ ಸಹ ಪುಸ್ತಕ ಲಭ್ಯ : https://amzn.in/d/3JLKJwK ರೂ : 384
- ಪುಸ್ತಕದ ಬಗ್ಗೆ ವಿವರಣೆ ಇಲ್ಲಿದೆ : https://youtu.be/iY1U7VG_JDo
- 10 ಕ್ಕಿಂತ ಹೆಚ್ಚಿನ ಪ್ರತಿಗಳು ರಿಯಾಯಿತಿ ದರದಲ್ಲಿ ಬೇಕಾದಲ್ಲಿ ನನ್ನನ್ನು ಸಂಪರ್ಕಿಸಿ : shridharvet@gmail.com
- ಡಾ.ಎನ್.ಬಿ.ಶ್ರೀಧರ – ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು, ಪಶುವೈದ್ಯಕೀಯ ಔಷಧಶಾಸ್ತ್ರ ಮತ್ತು ವಿಷಶಾಸ್ತ್ರ ವಿಭಾಗ, ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗ .
