ನಮ್ಮ ಬಯಲು ಸೀಮೆಯ ಹಳ್ಳಿಗಳ ಕಡೆ ನಾನು ಚಿಕ್ಕ ಹುಡುಗನಾಗಿದ್ದಾಗಿನಿಂದ ತೀರ ಇತ್ತೀಚೆಗೆ ಏಳೆಂಟು ವರ್ಷಗಳ ಹಿಂದಿನವರೆಗೂ ಇಂಥ ಪಾಯಸ ಅರ್ಥಾತ್ ಕೀರು ತುಂಬಾ ಫೇಮಸ್ ಆಗಿತ್ತು. ಎಲ್ಲಾ ಸಂದರ್ಭಗಳಲ್ಲೂ ಈ ಪಾಯಸವೇ ದೊಡ್ಡ ಸಿಹಿಯೂಟವಾಗಿರುತ್ತಿತ್ತು.ಕೇಶವ ರೆಡ್ಡಿ ಹಂದ್ರಾಳ ಅವರ ನೆನಪಿನಂಗಳದಲ್ಲಿ ಪಾಯಸದ ಗಮ್ಮತ್ತನ್ನು ತಪ್ಪದೆ ಮುಂದೆ ಓದಿ…
ನಿನ್ನೆ ರಾತ್ರಿ ಫರಿದಾಬಾದ್ನ MIFM Academy ಯ ಮೆಸ್ನಲ್ಲಿ ಊಟ ಮಾಡುವಾಗ ಪುದೀನಾ ಸೊಪ್ಪು , ಕಡಲೇಬೇಳೆ ಮತ್ತು ಎಂಥದ್ದೊ ತರಕಾರಿ ರುಬ್ಬಿ ಮಾಡಿದ ತಿಳಿಯಾದ ಸಿಹಿಯನ್ನು ಕೊಟ್ಟಿದ್ದರು. ರುಚಿ ಒಂದು ರೀತಿ ಭಿನ್ನವಾಗಿತ್ತು. ಪೂರ್ತಿ ತಿನ್ನಲಾಗದೆ ಮಿಕಿ ಮಿಕಿ ನೋಡುತ್ತಿದ್ದ ನನ್ನತ್ತ ಬಗ್ಗಿ ನನ್ನ ಮಗ ” ಈ ಕಡೆ ಮಾಡೊ ಸ್ಪೆಷಲ್ ಪಾಯ್ಸನಪ್ಪ ಇದು..” ಎಂದು ಪಿಸುಗುಟ್ಟಿದ್ದ. ಆ ಕ್ಷಣ ನನಗೆ ನಮ್ಮ ಬಯಲು ಸೀಮೆಯ ಅಕ್ಕಿರೆವೆ ಬೆಲ್ಲದ ಪಾಯಸ ಕಣ್ತುಂಬಿಕೊಂಡಿತ್ತು.
ನಮ್ಮ ಬಯಲು ಸೀಮೆಯ ಹಳ್ಳಿಗಳ ಕಡೆ ನಾನು ಚಿಕ್ಕ ಹುಡುಗನಾಗಿದ್ದಾಗಿನಿಂದ ತೀರ ಇತ್ತೀಚೆಗೆ ಏಳೆಂಟು ವರ್ಷಗಳ ಹಿಂದಿನವರೆಗೂ ಇಂಥ ಪಾಯಸ ಅರ್ಥಾತ್ ಕೀರು ತುಂಬಾ ಫೇಮಸ್ ಆಗಿತ್ತು. ಮದುವೆ, ತಿಥಿ, ಜಾತ್ರೆ, ಸಣ್ಣಪುಟ್ಟ ಹಬ್ಬ , ನೆಂಟರಿಷ್ಟರು ಬಂದಾಗ, ಹೆಣ್ಣು ಮಕ್ಕಳು ಋತುಮತಿಯಾದಾಗ ಮುಂತಾದ ಬಹುತೇಕ ಎಲ್ಲಾ ಸಂದರ್ಭಗಳಲ್ಲೂ ಈ ಪಾಯಸವೇ ದೊಡ್ಡ ಸಿಹಿಯೂಟವಾಗಿರುತ್ತಿತ್ತು. ಅಕ್ಕಿಯನ್ನು ಹದವಾಗಿ ಹುರಿದು, ರವೆ ಬೀಸಿಕೊಂಡು ರವೆ ಬೆಲ್ಲ, ಕಾಯಿತುರಿ, ಏಲಕ್ಕಿ ಹಾಕಿ ಮಾಡುತ್ತಿದ್ದ ಪಾಯಸ ಘಮ್ಮೆಂದು ವಾಸನೆ ಬರುತ್ತಿತ್ತು. ಅದಕ್ಕೆ ತುಪ್ಪ ಹಾಕಿಕೊಂಡರಂತೂ ಅದರ ಗಮ್ಮತ್ತೆ ಬೇರೆ ಇರುತ್ತಿತ್ತು. ಮಕ್ಕಳು ಮುದುಕರಾದಿಯಾಗಿ ಬಿಸಿಬಿಸಿ ಪಾಯಸವನ್ನು ಸೊರಬರ ಅಂತ ಬಾಯ್ತುಂಬ , ಹೊಟ್ಟೆ ತುಂಬಾ ಜೂರಿ ಲೊಟ್ಗೆ ಹಾಕುತ್ತಿದ್ದರು .ಆತುರದಲ್ಲಿ ಕೆಲವರು ಬಿಸಿ ಪಾಯಸ ದಿಂದ ಕೈಬಾಯನ್ನು ಸುಟ್ಟುಕೊಳ್ಳುತ್ತಿದ್ದದ್ದೂ ಉಂಟು.
ಮನೆಗಳಲ್ಲಿ ಮದುವೆಗೆ ಬೆಳೆದು ನಿಂತ ಹೆಣ್ಣು ಗಂಡುಗಳಿದ್ದರೆ ಮನೆಯ ಯಜಮಾನನನ್ನು “ಏನಪ್ಪ ಈ ಸಾರಿನಾದ್ರು ಪಾಯಸ್ದ್ನೀರು ಹಾಕುಸ್ತೀಯೋ ಯಂಗೆ..” ಎಂದು
ಕೇಳುತ್ತಿದ್ದರು. ವಯಸ್ಸಾದವರಂತೂ “ಅಪ್ಪಯ್ಯ ಯಾಸಟ್ಗೆ ನಾನು ಪ್ರಾಣ ಬಿಡೋದ್ರೊಳ್ಗೆ ಪಾಯಸ್ದ್ನೀರು ಹಾಕಿಸ್ಬಡೊ ಅತ್ತ..” ಎಂದು ಜೊಲ್ಲು ಸುರಿಸುತ್ತಿದ್ದರು. ನಮ್ಮ ಊರಿನಲ್ಲಿ ಕೆಲವರಂತೂ ಪಾಯವನ್ನು ಚನ್ನಾಗಿ ಬಾರಿಸುತ್ತಿದ್ದರು. ಪಾಯಸ ಹೆಚ್ಚಾಗಿ ತಿನ್ನುತ್ತಿದ್ದರಿಂದ ನಮ್ಮ ಪಕ್ಕದ ಮನೆಯ ರಂಗ ಶ್ಯಾಮಣ್ಣನಿಗೆ ಹಂಡೆಪಾಯ್ಸ ಎಂದೇ ಅಡ್ಡೆಸರು ಬಿದ್ದಿತ್ತು. ರಂಗಶ್ಯಾಮಣ್ಣನಿಗೆ ಕಡ್ಲೆಹಿಟ್ಟಂದ್ರೂ ಬಲು ಪ್ರಾಣ. ಒಂದು ಸಾರಿ ನೀರು ಕಟ್ಟಲು ರಾತ್ರಿ ಕರೆಂಟ್ ರೂಮಿನ ಹತ್ತಿರ ಹೋದವನು ಒಂದು ಕೇಜಿ ಕಡ್ಲೆಪಪ್ಪುಹಿಟ್ಟು ಮಾಡಿಸಿ ಬೆಲ್ಲ ತೆಂಗಿನತುರಿ ಕಲೆಸಿ ತಿಂದುಬಿಟ್ಟಿದ್ದ.ಹೊಟ್ಟೆ ನೋವು ಬಂದು ಕೇರಿಯವರೆಲ್ಲ ಸೇರುವಂತೆ ಕೂಗಿಕೊಂಡಿದ್ದ . ಹೆಂಡತಿ ಮುದ್ದನುಮಕ್ಕ ” ಅಯ್ಯೋ ಮೂಳ ಕಡ್ಲೆಹಿಟ್ನ ಅನ್ನ ತಿಂದಂಗೆ ತಿಂದಿದ್ದೀಯಲ್ಲ ಅದ್ಯಾತ್ರ ಗಂಡ್ಸಾದೆ ನೀನು , ನಾಲ್ಕು ಮಕ್ಕಳ್ನ ಹುಟ್ಸಿದ್ದೀಯ ಒಂದೀಸೂ ಅರಾಸ ಇಲ್ದಿದ್ರೆಂಗೆ ” ಎಂದು ಗಾಡಿಯಲ್ಲಿ ಬಾಲ್ಯದ ಭಟ್ಟರ ಶ್ಯಾಪಿಗೆ ಕರೆದುಕೊಂಡು ಹೋಗಿ ನೂರು ರೂಪಾಯಿ ಕುಕ್ಕಿ ಬಂದಿದ್ದಳು.

ಒಂದು ಸಾರಿ ಬಾಬಯ್ಯನ ಹಬ್ಬಕ್ಕೆ ಬಾಬಯ್ಯನನ್ನು ಕೂರಿಸಲು ಬಂದಿದ್ದ ಅಕ್ಕಿರಾಂಪುರದ ಬುಡೇನ್ಸಾಬಿ ಅವೊತ್ತು ರಾತ್ರಿ ನಮ್ಮ ಮನೆಗೆ ಊಟಕ್ಕೆ ಬಂದಿದ್ದನು. ಪಾಯಸ ಮಾಡಿದ್ದರಿಂದ ಬಲು ಖುಷಿಯಾಗಿ ” ಇನ್ನೊಂದೀಟು ಪಾಯ್ಸ ಬಿಡು ಯಂಕ್ಟಮ್ಮಕ್ಕಯ್ಯ ನಮ್ಮನೇವುಕ್ಕೆ ಯೀಟ್ಚಂದಾಗಿ ಪಾಯ್ಸ ಮಾಡೋಕ್ಬರಲ್ಲ..” ಎಂದು ಎರಡು ಮೂರು ಸಾರಿ ಹಾಕಿಸಿಕೊಂಡು ಜೂರಿ ಚಾವಡಿಯಲ್ಲಿ ಹೋಗಿ ಮಲಗಿದ್ದ.ಬೆಳಿಗ್ಗೆ ಕಾಫಿ ಕುಡಿಯಲೆಂದು ಮನೆಗೆ ಬಂದಿದ್ದ ಸಾಬಿಯ ಮುಖ ಸ್ವಲ್ಪ ಊದಿಕೊಂಡು ಕಣ್ಣು ಕೆಂಪಗಾಗಿದ್ದವು.ನಮ್ಮಪ್ಪ ಬೀಡಿ ಕೊಡುತ್ತಾ ” ಏನ್ ಬುಡೇನು ಕಣ್ಣೆಲ್ಲ ಕೆಂಪ್ಗಾಗೆವೆ , ನಿದ್ದೆ ಸರ್ಯಾಗಿ ಮಾಡ್ದಂಗಿಲ್ಲ..” ಎಂದಿದ್ದ. ” ಹೋಗೋಗಣ್ಣೊ ರಾತ್ರಿ ಪಾಯಸ ತಿನ್ನೊವಾಗ ಗಡ್ಡಕ್ಕೆ ಪಾಯಸ ಅಂಟ್ಕಂಡಿದ್ದಿದ್ದನ್ನ ನಾನು ಪರ್ಪಾಟ್ನಾಗೆ ಒರಸ್ಕಂಡಿರ್ಲಿಲ್ಲ. ಒಂದೊತ್ನಲ್ಲಿ ಬಾಂಚೋದ್ ಕೆಂಪಿರ್ವೆ ಮುಸಿರ್ಕಂಡು ಕಡ್ದಾಕ್ಬಿಟ್ವಣ್ಣ…” ಎಂದು ಪುಸಪುಸ ಬೀಡಿ ಸೇದಿ ಪರಪರ ಗಡ್ಡ ಕೆರೆದುಕೊಂಡಿದ್ದ.
ನಾನು ಮಿಡ್ಲಿ ಸ್ಕೂಲು ಮುಗಿಸುವ ಹೊತ್ತಿಗೆ ಮದುವೆಗಳಲ್ಲಿ ಪಾಯಸದ ಜೊತೆಗೆ ಬೂಂದಿ ಹಾಕುವ ಪರಿಪಾಠ ನಮ್ಮ ಹಳ್ಳಿಗಾಡಿನಲ್ಲೂ ಪ್ರಾರಂಭವಾಗಿತ್ತು. ಅನುಕೂಲದಿಂದಿದ್ದವರು ಮದುವೆಗೆ ಪಾಯಸದ ಜೊತೆಗೆ ಬೂಂದಿಯನ್ನೂ ಮಾಡಿಸ ತೊಡಗಿದರು. ಗಂಡಿನ ಕಡೆಯವರು ಹೆಣ್ಣಿನ ಕಡೆಯವರಿಗೆ “ನಮ್ಮಪ್ಪಯ್ಯನ ಮದ್ವೆಗೆ ಬೆಂಗಳೂರ್ ಕಡೆಯಿಂದ ಶ್ಯಾನೆ ಜನ ಬರ್ತಾರೆ. ಬಂದೋರ್ಗೊಂದಿಷ್ಷು ಬೂಂದಿ ಕಾಳಾಕ್ದಿದ್ರೆ ಅವುನ್ ಮಾನ ಮರ್ಯಾದೆ ಏನಾಗ್ಬೆಡ…”ಎಂದು ಮದುವೆಗೆ ಬೂಂದಿ ಮಾಡಲು ಒಪ್ಪಿಸಿ ಬಿಡುತ್ತಿದ್ದರು. ನಾನು ಎಂಟನೆಯ ಕ್ಲಾಸಿನಲ್ಲಿದ್ದಾಗ ನನ್ನ ಎರಡನೆಯ ಅಕ್ಕನ ಮದುವೆಗೆ ನಮ್ಮಪ್ಪ ಎರಡು ಕೊಳಗ ಬೂಂದಿಯನ್ನು ಮಾಡಿಸಿ ತಾನೆ ಊಟದ ಪಂಕ್ತಿಯಲ್ಲಿ ನಿಂತು ಎರಡೊತ್ತು ಊಟಕ್ಕೂ ಬೂಂದಿ ಹಾಕಿಸಿದ್ದ. ಬೂಂದಿ ಹಾಕುತ್ತಿದ್ದ ಚೆನ್ನರಾಯಪ್ಪ ತಮಾಷೆ ಮಾಡಲು ಪಂಕ್ತಿಯಲ್ಲಿ ಕುಳಿತಿದ್ದ ಪರಿಕ್ಲಿ ವೆಂಕಟ್ರೋಣನ ಎಲೆಗೆ ಬೇಕಾಗಿಯೇ ಇಷ್ಟೇ ಇಷ್ಟು ಬೂಂದಿ ಹಾಕಿ ಮುಂದೆ ಹೋಗಿದ್ದ. ವೆಂಟ್ರೋಣ ಕೂಡಲೇ ” ಲೇ ಚೆನ್ರಾಯಿ ಸರ್ಯಾಗಿ ಬೂಂದಿ ಹಾಕೋಗಲೇ ಅತ್ತ , ಸುಮ್ನೆ ಅವ್ತಾರ ಕೆಯ್ಬೇಡ..” ಎಂದು ಆಕಾಶ ಕಳಚಿ ಬಿದ್ದಂತೆ ರೇಗಿದ್ದ.ಪಂಕ್ತಿಯಲ್ಲಿ ಎಲ್ಲರೂ ಕ್ಯಾಕ ಹಾಕ್ಕೊಂಡು ನಕ್ಕಿದ್ದರು. ಅಲ್ಲೆ ಇದ್ದ ನಾನು ಬೊಗಸೆ ತುಂಬಾ ಬೂಂದಿಯನ್ನು ಎಲೆಗೆ ಹಾಕಿ ಸಮಾಧಾನ ಪಡಿಸಿದ್ದೆ. ಈಗಂತೂ ಕ್ಷಣಾರ್ಧದಲ್ಲಿ ಶಾವಿಗೆ ಪಾಯಸ ಮಾಡುತ್ತಾರೆ. ಆದರೆ ನನಗಂತೂ ಪಾಯಸ ಅಂದರೆ ನನ್ನ ಕಣ್ಣೆದುರಿಗೆ ಬರುವುದು ಅದೇ ಅಕ್ಕಿರವೆ ಬೆಲ್ಲದ ಪಾಯಸ.

ನನಗೆ ಅದ್ಯಾಕೋ ಪಾಯಸ ಅಷ್ಟು ಇಷ್ಟ ಆಗುತ್ತಿರಲಿಲ್ಲ. ಒಬ್ಬಟ್ಟು, ಕರ್ಗಡಬೆಂದರೆ ನನಗೆ ಎರಡೊಟ್ಟೆ ಆಗಿಬಿಡುತ್ತಿದ್ದವು. ನನ್ನ ಮಟ್ಟಿಗೆ ಪ್ರಪಂಚದ ಯಾವ ಸ್ವೀಟೂ ಅವುಗಳ ಮುಂದೆ ತೂಗಲಾರವು. ಎಂ ಎ ಎರಡನೆಯ ವರ್ಷದಲ್ಲಿದ್ದಾಗೊಮ್ಮೆ ಊರಿಗೆ ಹೋಗಿದ್ದಾಗ ಒಂದು ದಿನ ಸಂಜೆ ದೀಪ ಹಚ್ಚುವ ಸಮಯದಲ್ಲಿ ಮಾತನಾಡಿಸಲೆಂದು ಮಾದಿಗರ ಮುದ್ದಯ್ಯನ ಮನೆಯ ಹತ್ತಿರ ಹೋಗಿದ್ದೆ.ಘಮಘಮ ವಾಸನೆ ಮೂಗಿಗೆ ಬಡಿದಿತ್ತು. ಮುದ್ದಯ್ಯ “ಕೇಶ್ವಣ ನೆಂಟ್ರ್ ಬಂದಿದ್ರು,ಒಬ್ಬಟ್ ಮಾಡಿದ್ವಿ, ಬಿಸಿಬಿಸಿ ಎರಡು ತಿನ್ನಣ್ಣ..” ಎಂದು ಪ್ಲೇಟಿಗೆ ಹಾಕಿಕೊಟ್ಟಿದ್ದ.ನಾನು ದನಗಳ ಗೊಂದಿಗೆಯ ಮೋಟು ಗೋಡೆಯ ಮೇಲೆ ಕುಳಿತು ಒಬ್ಬಟ್ಟು ಅಮರಿಸುತ್ತಿರುವಾಗ ” ಲೇ ಮುದ್ದ ಇದ್ದಿಯನಲೇ ..” ಎಂದು ನಮ್ಮಪ್ಪ ಬಂದಿದ್ದ. ” ಅಣಿಯ ಅಪ್ಪ ಬಂದ ” ಎಂದು ಮುದ್ದಯ್ಯ ನನ್ನನ್ನು ಗೊಂದಿಗೆಯಲ್ಲಿ ಕೂರಿಸಿದ್ದ.ಸಧ್ಯ ಇನ್ನೂ ಹುಲ್ಲೂ ಹಾಕಿರಲಿಲ್ಲ, ದನಗಳನ್ನೂ ಕಟ್ಟಿರಲಿಲ್ಲ.ಬೆಳಿಗ್ಗೆ ಗದ್ದೆ ಕೊಯ್ಲು ಮಾಡಲು ಆಳುಗಳಿಗೆ ಹೇಳಲು ಬಂದಿದ್ದ ನಮ್ಮಪ್ಪ ” ಏನೋ ಮುದ್ದ ಬಲು ಘಮ್ಮಂಥದೆ ” ಎಂದಿದ್ದ. ” ಹೇ ಬಾರಣಿಯ ಒಬ್ಬಟ್ಟು ಮಾಡಿದ್ವಿ.. ಒಂದೆರ್ಡ ಉಂಬಿವಂತೆ..” ಎಂದು ನಮ್ಮಪ್ಪನಿಗೂ ಹಾಕಿ ಕೊಟ್ಟಿದ್ದ.ಮೋಟು ಗೋಡೆಯ ಮೇಲೆ ನಮ್ಮಪ್ಪ ಬುಡ್ಡಿ ದೀಪದ ಬೆಳಕಲ್ಲಿ ಒಬ್ಬಟ್ಟು ತಿನ್ನುತ್ತಿದ್ದರೆ ನಾನು ಗ್ವಾಂದಿಗೆಯಲ್ಲಿ ಸದ್ದು ಮಾಡದೆ ಕುಳಿತಿದ್ದೆ..! ಅನ್ನದೇವರಿಗೆ ಜಾತಿಯ ಅಮಲುಂಟೆ..?
ಸ್ನೇಹಿತರೆ , ಫರಿದಾಬಾದ್ ಮತ್ತು ದೆಹಲಿಯಲ್ಲಿ ಚಳಿಯ ಜೊತೆಗೆ ಬಿಡುವೂ ಜಾಸ್ತಿ ಇದ್ದಿದ್ದರಿಂದ ಇನ್ನೊಂದು ಬರಹ. ಇವೊತ್ತು ಸೋಮವಾರ ಆದ್ರಿಂದ ಯಾರದ್ದಾದರೂ ಮನೆಯಲ್ಲಿ ಮಧ್ಯಾಹ್ನದ ಊಟಕ್ಕೆ ಪಾಯಸ ಮಾಡಿರುತ್ತೀರಿ..ಆದರೆ ಅಕ್ಕಿ ರವೆ ಪಾಯಸ ಇರಲಾರದು..
- ಕೇಶವ ರೆಡ್ಡಿ ಹಂದ್ರಾಳ
