‘ಇಲ್ಲಿಂದ ಅಲ್ಲಿಂದ’ ಕೃತಿ ಪರಿಚಯ

ಪಾಲಹಳ್ಳಿ ವಿಶ್ವನಾಥ್ ಅವರ ಇಲ್ಲಿಂದ ಅಲ್ಲಿಂದ ಕೃತಿಯ ಕುರಿತು ರಘುನಾಥ್ ಕೃಷ್ಣಮಾಚಾರ್ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಪುಸ್ತಕ : ಇಲ್ಲಿಂದ ಅಲ್ಲಿಂದ
ಲೇಖಕರು : ಪಾಲಹಳ್ಳಿ ವಿಶ್ವನಾಥ್
ಪ್ರಕಾಶನ : ಮಡಿಲು

 ಅವಳ ತೊಡಿಗೆ ಇವಳಿಗಿಟ್ಟು ನೋಡ ಬಯಸಿದೆ:

ಕಳೆದವಾರ ತಾನೇ ನಮ್ಮನ್ನು ತಮ್ಮ ಮನೆಗೆ ಕರೆದು ಅನೌಪಚಾರಿಕವಾಗಿ ಮೇಲಿನ ಪುಸ್ತಕವನ್ನು ಬಿಡುಗಡೆ ಮಾಡಿ ಕೊಟ್ಟು, ಆತಿಥ್ಯ ನೀಡಿದರು.ಹೊಟ್ಟೆ ತುಂಬಿದ್ದರ ಜೊತೆಗೆ ,ಅವರ ಈ ಔದಾರ್ಯಕ್ಕೆ ಎದೆಯೂ ತುಂಬಿತು. ಅವರು ಕೊಟ್ಟ ಪುಸ್ತಕದಿಂದ ಈಗ ತಲೆಯೂ … ಏಕಕಾಲಕ್ಕೆ ಮೂರನ್ನೂ ತುಂಬಿಸಿದ ಅವರಿಗೆ ಕೃತಜ್ಞತೆಗಳು ಎಂದು ಹೇಳಿದರೆ ಅದು ಔಪಚಾರಿಕವಾಗುತ್ತದೆ.

ಅಮೇರಿಕಾದಲ್ಲಿ ಕಳೆದ ಏಳು ವರ್ಷಗಳಿಂದ ಇರುವ ನನ್ನ ಕಿರಿಯ ಮಗನಿಗೆ ಅವನ ಪ್ರತಿ ವರ್ಷದ ಹುಟ್ಟಿದ ಹಬ್ಬಕ್ಕೆ ” ದೊಡ್ಡ ಕನಸುಗಳನ್ನು ಕಾಣು , ಬೇರುಗಳನ್ನು ಮರೆಯಬೇಡ” ಎಂದು ಹಾರೈಸುತ್ತೇನೆ.

ಅವನಿಗಿಂತ ಆರು ದಶಕಗಳ ಹಿಂದೆ ಅಮೇರಿಕಾಗೆ ಹೋಗಿ, ಅಲ್ಲಿ ಹತ್ತು ವರ್ಷಗಳ ಕಾಲ ಉನ್ನತ ಶಿಕ್ಷಣದ ಸಂಶೋಧನೆ ನಡೆಸಿ ಪಾಲಹಳ್ಳಿ ವಿಶ್ವನಾಥ್ ಅವರು ,ಮರಳಿ ಮುಂಬೈಗೆ ಬಂದು ,ಮುಂಬೈಯಲ್ಲಿ ಟಾಟಾ ಮೂಲಭೂತ ಸಂಶೋಧನಾ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸಿ, ನಿವೃತ್ತಿಯ ನಂತರ ಈಗ ಎರಡು ದಶಕಗಳಿಂದ ಮರಳಿ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.ಈ ಅವಧಿಯಲ್ಲಿ ಅವರು ಬೆಂಗಳೂರಿನಲ್ಲಿ ಮುಂಬೈನಲ್ಲಿ ಪಡೆದ ಅನುಭವಗಳನ್ನು” ಇಲ್ಲಿಂದ “ಎಂದು, ಮತ್ತು ಅಮೇರಿಕಾದಲ್ಲಿನ ಅವರ ಅನುಭವಗಳನ್ನು “ಅಲ್ಲಿಂದ “ಎಂದು ಕರೆದಿದ್ದಾರೆ. ಇದರಿಂದಾಗಿ ಅವರ ಈ ಎರಡೂ ಅನುಭವಗಳು ಇಲ್ಲಿ ಮೇಳೈಸಿವೆ.

ಇಲ್ಲಿಂದ: ಈ ಭಾಗದಲ್ಲಿ ಪುಸ್ತಕದ ಕೊನೆಯಲ್ಲಿನ ‘ನನ್ನ ಪ್ರಪಂಚ’ದಲ್ಲಿ ಐದು ಆರು ದಶಕಗಳ ಹಿಂದಿನ ಅವರ ಮನೆಯಿಂದ ಮೊದಲುಗೊಂಡು, ಬಸವನ ಗುಡಿಯ ಅಂದಿನ ಚಿತ್ರಗಳನ್ನು ಕೊಟ್ಟಿದ್ದಾರೆ. ಆ ಕಾಲದ ಸಾಂಸ್ಕೃತಿಕ ದಾಖಲೆಯಾಗಿ ಕೂಡ ಇದಕ್ಕೆ ಮಹತ್ವ ಇದೆ.ಇದರ ಎರಡನೇ ಭಾಗದಲ್ಲಿ ಮುಂಬೈ ಅನುಭವಗಳನ್ನು ದಾಖಲಿಸಿರುವರು. ಅದರಲ್ಲಿ ರಾಜಕಫೂರ್ ನನ್ನು ನೋಡಿದ, ನಮ್ಮ ಗಿರೀಶ್ ಕಾರ್ನಾಡ್ ರ ಜೊತೆಗಿನ ಸಹಪಯಣದ ಅನುಭವಗಳು ಸೇರಿವೆ.ಇದರೊಂದಿಗೆ ಅವರ ಕೆ.ಜಿ.ಎಫ್ ಅನುಭವಗಳು ಕೂಡ ಅನಾವರಣಗೊಂಡಿವೆ. ಗಾಂಧೀಜಿ ಮತ್ತು ನೆಹರೂ ಅವರ ಕುರಿತು ( ಪತ್ರಕರ್ತ) ವಿವರಗಳು ಸೇರ್ಪಡೆ ಆಗಿದೆ.

ಪುಸ್ತಕದ ಕೊನೆಯ ಭಾಗ :

ಅವರ ತಂದೆ ತಾಯಿಗಳ ಕುಟುಂಬ ಚರಿತ್ರೆ ಇದೆ. ಅವರ ತಂದೆ ಪಿ.ಆರ್. ರಾಮಯ್ಯನವರು ಕಳೆದ ಶತಮಾನದ ಆರಂಭದಲ್ಲಿ ತಾಯಿನಾಡು ಪತ್ರಿಕೆಯನ್ನು ಆರಂಭಿಸಿದ ಪ್ರಾತಃ ಸ್ಮರಣೀಯರು. ಅಣ್ಣ ಪಿ.ಆರ್. ಬ್ರಹ್ಮಾನಂದ, ಕಳೆದ ಶತಮಾನದ ಭಾರತದ ಅರ್ಥಶಾಸ್ತ್ರಜ್ಞರಲ್ಲಿ ಪ್ರಮುಖರಾಗಿ ಮೂವತ್ತಕ್ಕೂ ಹೆಚ್ಚು ಪುಸ್ತಕಗಳನ್ನು ರಚಿಸಿದ್ದಾರೆ. ಅವರ ಅಕ್ಕ ರಾಮೇಶ್ವರಿ ವರ್ಮಾ ಅದ್ಭುತ ರಂಗಕಲಾವಿದೆ. ಇವರು ಕಣ ವಿಜ್ಞಾನಿ. ಪರೋಪಕಾರಿ ಪಾಪಣ್ಣನ ಅವತಾರ ಸಾಮಿ ಅವರ ಕೊನೆಯ ದುರಂತ ಚಿತ್ರ ಹೃದಯ ವಿದ್ರಾವಕವಾಗಿದೆ.

ಅಲ್ಲಿಂದ: ಇಂದು ಜಗತ್ತಿನ ದೊಡ್ಡಣ್ಣ ಅಮೆರಿಕಾಗೆ ೬೮ ರಲ್ಲಿ ಪ್ರವೇಶಿಸಿ ಹತ್ತು ವರ್ಷಗಳ ಕಾಲ ಅಲ್ಲಿ ಸಂಶೋಧನೆಯಲ್ಲಿ ತೊಡಗಿದ್ದರು.ಆಗ ಆದ ವಿಭಿನ್ನ ಅನುಭವಗಳನ್ನು ಸ್ವಾರಸ್ಯಕರವಾಗಿ ದಾಖಲಿಸಿದ್ದಾರೆ.

ಸಂಶೋಧನೆ: ಕಣಗಳನ್ನು ಕುರಿತು ಸಂಶೋಧನೆ ಮಾಡುವಾಗ ಪರ್ವತ ಶ್ರೇಣಿಯ ನಡುವೆ, ಇವರನ್ನು ಹಿಮದಲ್ಲಿ ಹುಗಿಸಿ ಆಳ ನೋಡಿದ ಇವರ ಸಹ ಅಮೇರಿಕಾ ವಿಜ್ಞಾನಿಗಳನ್ನು ಕುರಿತು, ಲೇಖನದ ಕೊನೆಯಲ್ಲಿ ಅವರು ಬರೆದ. ” ಕಂಡವರ ಮಕ್ಕಳನ್ನು ಬಾವಿಗೆ ದೂಡಿ ಆಳ ನೋಡುವವರು” ಗಾದೆ ಅಮೇರಿಕಾದ ಪಕ್ಷಪಾತ ಧೋರಣೆಗೆ ಹಿಡಿದ ಸಮರ್ಥ ರೂಪಕವಾಗಿದೆ.

ಜರ್ಮನಿಯ ಹಿಟ್ಲರ್ ಯಹೂದಿಗಳ ವಿರುದ್ಧ ನಡೆಸಿದ ಮಾರಣ ಹೋಮ, ಕಾನ್ಸಂಟ್ರೇಷನ್ ಕ್ಯಾಂಪಗಳ ಕುರಿತ ಇವರ ಬರಹ ಇವರ ಮಾನವೀಯ ಮಿಡಿತಕ್ಕೆ ಸಾಕ್ಷಿ.

ಸಿನಿಮಾ: ಅಲ್ಲಿ ಅವರು ನೋಡಿದ ಬರ್ನಾರ್ಡ್ ಷಾ ನಾಟಕ ‘ಪಿಗ್ಮೇಲಿಯನ್’ ಮುಂತಾದ ಕ್ಲಾಸಿಕ್ ಸಿನಿಮಾಗಳು ,ಅದರಲ್ಲಿ ಪಾತ್ರ ವಹಿಸಿದ, ಮಹಾನ್ ನಟರು, ಹಿಂದಿಯಲ್ಲಿ ಅವುಗಳ ಪ್ರೇರಣೆ ಯಿಂದ ಬಂದ ಶೋಲೆ ಸಿನಿಮಾ ಕುರಿತು ಬರೆದದ್ದು ಅವುಗಳ ತೌಲನಿಕ ಅಧ್ಯಯನಕ್ಕೆ ಅನುವು ಮಾಡಿಕೊಡುತ್ತದೆ.

“ಬೇರು ನೀರುಂಡಾಗ ತಣಿಯವೆ ಭೂರುಹದ ಶಾಖೋಪಶಾಖೆಗಳು” ಎನ್ನುವ ಕುಮಾರವ್ಯಾಸನ ಮಾತು ಇವರ ಪುಸ್ತಕಕ್ಕೆ ಯಥಾವತ್ತಾಗಿ ಅನ್ವಹಿಸುವಂತಿದೆ. ಕನ್ನಡದ ನೀರಿನ ಬೇರುಗಳನ್ನು ಹೀರಿಕೊಂಡು ಬೆಳೆದ, ಇವರ ಜೀವನ ವೃಕ್ಷ, ಜಗತ್ತಿನೊಂದಿಗೆ ನಡೆಸಿದ ಸಂವಾದದ ಫಲವಾಗಿ ಈ ಪುಸ್ತಕ ರೂಪುಗೊಂಡಿದೆ. ಇದನ್ನು ಕೊಟ್ಟು ನನ್ನ ಅರಿವನ್ನು ವಿಸ್ತರಿಸಿದ ಲೇಖಕರಿಗೆ ವಂದನೆ ಅಭಿನಂದನೆ.

ಈ ಕೃತಿಯ ವೈಶಿಷ್ಟ್ಯಗಳು:

೧: ಹಲವಾರು ಕತೆಗಳನ್ನು ಒಳಗೊಂಡಿರುವುದು.ಅವು: ವಿದೇಶಿ ಕತೆಗಳಿಗೆ ದೇಶಿ ಕತೆಗಳನ್ನಾಗಿಸಿ ರೂಪಾಂತರಗೊಳಿಸಿರುವುದು.
೨: ಬರ್ನಾರ್ಡ್ ಷಾ ನಾಟಕಗಳ ಸಿನಿಮಾ ರೂಪಗಳ ನಡುವಿನ ತೌಲನಿಕ ಬರಹ.
೩: ಅವುಗಳ ಪ್ರೇರಣೆಯಿಂದ ಹುಟ್ಟಿದ ಹಿಂದಿ ಸಿನೆಮಾದ ಅಂತರದ ಅನಾವರಣ.
೪: ಚಿತ್ರಗಳ ಸೇರ್ಪಡೆ ಕೃತಿಯ ಶೋಭೆಯನ್ನು ಹೆಚ್ಚಿಸಿದೆ.
೫: ಮೂಲತಃ ವಿಜ್ಞಾನಿಯಾದ ಅವರ ಬಹುಮುಖಿ ಆಸಕ್ತಿಗೆ ಕನ್ನಡಿ ಹಿಡಿಯುತ್ತದೆ.


  • ರಘುನಾಥ್ ಕೃಷ್ಣಮಾಚಾರ್ – ಲೇಖಕರು, ರಾಮನಿರಂಜನ್ ಝುನ್ಝುನ್ವಾಲ ಕಾಲೇಜು ಉಪನ್ಯಾಸಕರು

0 0 votes
Article Rating

Leave a Reply

0 Comments
Inline Feedbacks
View all comments
All Articles
Menu
About
Send Articles
Search
×
0
Would love your thoughts, please comment.x
()
x

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

Aakruti Kannada

FREE
VIEW