ನೆಚ್ಚಿನ ನಿರ್ದೇಶಕ ಷಾಜಿ ಕರುಣ್ (ಷಾಜಿ ನೀಲಕಂಠ ನ್ ಕರುಣಾಕರನ್) ೭೩ರ ಇಳಿವಯಸ್ಸಿನಲ್ಲಿ ತಮ್ಮ ಜೀವನಯಾತ್ರೆ ಮುಗಿಸಿದ್ದಾರೆ. ’ಪಿರವಿ’ ಮತ್ತು ’ವಾನಪ್ರಸ್ಥಮ್’ ಎಂಬ ಎರಡು ಅವಿಸ್ಮರಣೀಯ ಚಿತ್ರಗಳು ಮಳಿಯಾಳ೦ ಸಿನಿಮಾವನ್ನು ಮಗದಷ್ಟು ಎತ್ತರಕ್ಕೆ ಕೊಂಡೊಯ್ದದನ್ನು ಅಲ್ಲಗಳೆಯಲಾಗದು. ಅವರ ನಿರ್ದೇಶನದ ‘ಪಿರವಿ’ ಸಿನಿಮಾದ ಕುರಿತು ಲೇಖಕರಾದ ರಾಘವನ್ ಚಕ್ರವರ್ತಿ ಅವರು ತಮ್ಮ ಅಭಿಪ್ರಾಯವನ್ನು ಓದುಗರ ಮುಂದೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಕರಣ್ ರ ಎಲ್ಲಾ ಚಿತ್ರಗಳಲ್ಲಿ ‘ಪಿರವಿ’ ಗೆ ಅಗ್ರ-ವಿಶಿಷ್ಟ ಸ್ಥಾನವಿದೆ. ಅರವಿಂದನ್, ಜಾರ್ಜ್, ಎಂಟಿ ವಾಸುದೇವನ್ ರಂತಹ ನಿರ್ದೇಶಕರ ಮೊದಲ ಆಯ್ಕೆ ಕರುಣ್ ರೇ ಆಗಿರುತ್ತಿದ್ದರು. ಮಲಯಾಳಂ ಸಿನಿಮಾದ ಹಲವು ತಂತ್ರಜ್ಞರಿಗೆ ಕರುಣ್ ರ ಕ್ಯಾಮರಾ ಕುಸುರಿ ಕಲೆ ಅಮೂಲ್ಯ ಪಾಠಗಳನ್ನು ಕಲಿಸಿದೆ.
ಎಲ್ಲರಂತೆ ಕರುಣ್ ಕೂಡಾ ಮನುಷ್ಯಸಹಜ ಅವಿವೇಕ, ಅಹಂಕಾರಗಳನ್ನು ತೋರಿದ್ದಿದೆ. ಕೇರಳ ಸರ್ಕಾರದ ಚಲನ ಚಿತ್ರ ಅಭಿವೃದ್ಧಿ ನಿಗಮ (KSFDC) ದ ಅಧ್ಯಕ್ಷ ಪದವಿಗೆ ನೇಮಿಸಲ್ಪಟ್ಟಾಗ ಬಹಳ ಜನ ಹರ್ಷಿಸಿದ್ದರು. ಆದರೆ ಈ ಹರ್ಷ ಅಲ್ಪಕಾಲದ್ದಾಗಿತ್ತು. ಕರಣ್ ತಮ್ಮ ಬಗ್ಗೆಯೇ ಹಲವು ಭ್ರಮೆ-ಶ್ರೇಷ್ಟತೆಯ ವ್ಯಸನಗಳಿಗೆ ಈಡಾಗಿದ್ದರು. ಇಂದುಲಕ್ಷ್ಮಿ ಮತ್ತು ಮಿನಿ ಎಂಬ ಇಬ್ಬರು ಪ್ರತಿಭಾವಂತ ಮಹಿಳಾ ನಿರ್ದೇಶಕಿಯರ ಚಿತ್ರಗಳಿಗೆ ಕರಣ್ ಬಹಳ ತೊಂದರೆ ಕೊಟ್ಟ ಬಗ್ಗೆ, ನಿರ್ದೇಶಕಿಯರಿಬ್ಬರೂ ಮಾಧ್ಯಮಗಳ ಮುಂದೆ ತೀವ್ರ ಖಂಡನಾತ್ಮಕವಾಗಿ ಮಾತನಾಡಿದ್ದರು. ಕರಣ್ ತಮ್ಮನ್ನು ಸಭೆಗಳಲ್ಲಿ ಅವಹೇಳನ ಮಾಡುವುದರ ಬಗ್ಗೆ ನಿರ್ದೇಶಕಿಯರು ತೀವ್ರವಾಗಿ ಆಕ್ಷೇಪಿಸಿದ್ದರು. ಇಂತಹದೇ ಹಲವು ಆಕ್ಷೇಪಗಳು ಕರಣ್ ವಿರುದ್ಧ ಪುಟಿದ್ದೆದ್ದು ಬರಲಾರಂಭಿಸಿದವು. ಕರಣ್ ರಾಜೀನಾಮೆ ನೀಡಿ ಹೊರಬಂದರು.

ನಿರ್ದೇಶಕ ಷಾಜಿ ಕರುಣ್ (ಫೋಟೋ ಕೃಪೆ : ಅಂತರ್ಜಾಲ)
ಇಂತಹಾ ವರ್ತನೆಗಳೆಲ್ಲಾ ಶೋಭೆ ತರುವುದಿಲ್ಲ ಎಂಬುದನ್ನು ಒಪ್ಪುತ್ತಲೇ…..ತಮ್ಮೊಂದಿಗೆ ಇಡೀ ಚಿತ್ರತಂಡವನ್ನೂ ಧ್ಯಾನಾವಸ್ಥೆಗೆ ಕೊಂಡೊಯ್ದು ಚಿತ್ರಿಸಿದ ’ಪಿರವಿ’ಯ ಬಗೆಗಿನ ಒಂದು ಹಳೆಯ ಲೇಖನ..
ನವೆಂಬರ್ ೨, ೨೦೧೮:
ಬೇಕು…ಕನ್ನಡ ಸಿನಿಮಾಗೊಂದು ಹೊಸ ’ಪಿರವಿ’
****
ಚಿತ್ರ: ಪಿರವಿ (ಹುಟ್ಟು ಅಥವಾ ಜನ್ಮ)
ಭಾಷೆ: ಮಲಯಾಳಂ
ವರ್ಷ: ೧೯೮೮-೮೯
ನಿರ್ದೇಶನ: ಷಾಜಿ.ಎನ್.ಕರುಣ್
ಛಾಯಾಗ್ರಹಣ: ಸನ್ನಿ ಜೋಸೆಫ್
ಸಂಕಲನ: ವೇಣು
ಕಲಾವಿದರು: ಪ್ರೇಮ್ ಜಿ, ಅರ್ಚನಾ, ಲಕ್ಷ್ಮಿ ಕೃಷ್ಣಮೂರ್ತಿ ಇತರರು..
ಆ ವೃದ್ಧರ ಹೆಸರು ರಾಘವ ಚಾಕ್ಯರ್. ಪುಟ್ಟ ಸಂಸಾರ. ಅವರಾಕೆ ದೃಷ್ಟಿ ಕಳೆದುಕೊಂಡಿದ್ದಾರೆ. ಮಗಳು ಮಾಲತಿ, ಮಗ ರಘು (ರಹು). ಮದುವೆಯಾಗಿ ಹಲವು ವರ್ಷಗಳ ನಂತರ ಹುಟ್ಟಿದ ರಘು ಎಂದರೆ ತಂದೆಗೆ ಅಪಾರ ಮಮತೆ. ಅವನು ಓದಿ ಕಾಲೇಜು ತಲುಪವರೆಗೂ ಕಣ್ಣಾಕಾವಲಾಗಿ ಕಾಯುತ್ತಾರೆ ಚಾಕ್ಯರ್. ಮೂಲತಃ ಶಿಸ್ತಿನ, ಪ್ರೀತಿಯ, ಯಾರಿಗೂ ಕೇಡು ಬಯಸದ ಚಾಕ್ಯರ್ ರಿಗೆ ಮಗ ರಘುವಿನ ಬಗ್ಗೆ ಹಲವು ಭರವಸೆಗಳು. ಹಲವಾರು ಕನಸುಗಳು.

ಫೋಟೋ ಕೃಪೆ : ಅಂತರ್ಜಾಲ
ರಘು ಈಗ ದೂರದೂರಿನಲ್ಲಿ ಇಂಜಿನೀರಿಂಗ್ ವಿದ್ಯಾರ್ಥಿ. ಮಾಲತಿಗೆ ಮದುವೆ ನಿಶ್ಚಯವಾಗಿದೆ. ಚಾಕ್ಯರ್ ಗೆ ಸಂಭ್ರಮ. ನಿಶ್ಚಿತಾರ್ಥಕ್ಕೆ ರಘು ಬರದೇ ಇರುವುದಿಲ್ಲ ಎಂದವರ ಎಣಿಕೆ. ನಿಶ್ಚಿತಾರ್ಥದ ದಿನವೂ ಬಂದುಬಿಟ್ಟಿತು. ಆದರೆ ರಘುವಿನ ಸುಳಿವಿಲ್ಲ. ರಘು ಬರಲಿಲ್ಲ. ನಾಳೆ ಬರಬಹುದೆಂದು ಕುಟುಂಬದವರೆಲ್ಲಾ ಕಾಯುತ್ತಾರೆ. ಈಗ ಬರುವ, ಆಗ ಬರುವ ಎಂದು ಕಾದ ವೃದ್ಧ ತಂದೆ ಹತಾಶೆಯ ಗೂಡಾಗುತ್ತಾರೆ. ಅವರ ಮನೆಯಿಂದ ಬಸ್ ನಿಲ್ದಾಣ ತಲುಪಲು, ದೋಣಿಯೇರಿ ನದಿ ದಾಟಬೇಕು. ಚಾಕ್ಯರ್ ದಿನವೂ ಬಸ್ ನಿಲ್ದಾಣ ತಲುಪಿ, ಬರುವ ಪ್ರತಿ ಬಸ್ಸಿನಲ್ಲೂ ರಘುಗಾಗಿ ಹುಡುಕುತ್ತಾರೆ. ತಡರಾತ್ರಿ ಬರುವ ಕೊನೆಯ ಬಸ್ಸಿನ ಕೊನೆಯ ಪ್ರಯಾಣಿಕ ಇಳಿಯುವವರೆಗೂ ಆತಂಕಭರಿತ ಕುತೂಹಲದಿಂದ ಕಾದು ಮತ್ತದೇ ಹತಾಶೆಯಿಂದ ದೋಣಿಯೇರಿ ತಮ್ಮ ಹಳೆಯ ಮನೆ ಸೇರುತ್ತಾರೆ. ರಘುವಿನ ಸುಳಿವಿಲ್ಲ. ದಿನಪೂರ್ತಿ ಅನಿರ್ವಚನೀಯ ಆತಂಕ. ದಿನದ ಕೊನೆಯಲ್ಲೊಂದು ಹತಾಶ ಭಾವ. ನಾಳೆ ಅವ ಬರಬಹುದೆನ್ನುವ ವಿಶ್ವಾಸ, ಹೀಗೆ ಮೂರು ವಿವಿಧ ಭಾವನಾತ್ಮಕ ಮಜಲುಗಳನ್ನು ಹಾಯುತ್ತಾ ಚಾಕ್ಯರ್ ಮನೆಗೆ ಮರಳುತ್ತಾರೆ. ಇದು ದಿನಗಟ್ಟಲೇ ನಡೆಯುತ್ತದೆ. ದೃಷ್ಟಿಹೀನ ಪತ್ನಿಯ, ಮಾತೃಸಹಜ ಕಳಕಳಿಗೆ ಚಾಕ್ಯರ್ ನಿರಾಶೆಯ ಭಾವದಿಂದಲೇ ಸ್ಪಂದಿಸುತ್ತಾರೆ. ವಿಶಾಲವಾದ ಮನೆ. ಮೂರು ಜನರನ್ನು ಹೊರತು ಪಡಿಸಿದರೆ, ಮನೆಯ ತುಂಬೆಲ್ಲಾ ಆಕ್ರಮಿಸಿರುವುದು (ಬಾರದ ರಘುವಿನಿಂದ ಉಂಟಾದ) ವಿಲಕ್ಷಣ, ವಿಕೃತ ಮೌನ.. ಈ ವಿಲಕ್ಷಣ ಮೌನ, ಆಗಾಗ ಜೋರಾಗಿ ಬೀಸುವ ಗಾಳಿ, ಅಬ್ಬರದ ಗುಡುಗು, ಚಾಕ್ಯರ್ ಮನೆಯಲ್ಲಿನ ನಿರಾಶೆಯನ್ನು ಪ್ರತಿಧ್ವನಿಸುತ್ತದೆ.
ಚಾಕ್ಯರ್ ಗೆ ಆದರೂ ಏನೋ ವಿಶ್ವಾಸ. ಮಾಲತಿಗೆ ಈ ವಿಶ್ವಾಸವಿಲ್ಲ. ರಘುವಿಗೆ ಏನೋ ಆಗಿದೆ. ಇಲ್ಲವಾದಲ್ಲಿ ಅವನಿಂದ ಏನಾದರೂ ಸಂದೇಶ ಬರಬೇಕಿತ್ತು ಎಂದು ಮನನ ಮಾಡಿಕೊಂಡ ಮಾಲತಿ ತನ್ನದೇ ಶೋಧ ಆರಂಭಿಸುತ್ತಾಳೆ. ರಘುವಿನ ಹಳೆಯ ಗೆಳೆಯ ಹರಿ, ಚಾಕ್ಯರ್ ರನ್ನು ಕಂಡೂ ಕಾಣದಂತೆ ಮರೆಯಾಗುವುದನ್ನು ಗಮನಿಸಿದ ಚಾಕ್ಯರ್ ಬೇಸರಿಸುತ್ತಾರೆ. ಆವರಿಗೂ ಈಗ ಸಂದೇಹ ಬರಲಾಂಭಿಸಿದೆ. ಮಾಲತಿಗೆ ತಮ್ಮ ಬೇಸರ ತಿಳಿಸುತ್ತಾರೆ. ದೇವಸ್ಥಾನಕ್ಕೆ ಬಂದಿದ್ದ ಹರಿಯನ್ನು ಮಾಲತಿ ಹಿಡಿದು ನಿಲ್ಲಿಸಿ ರಘುವಿನ ಬಗ್ಗೆ ಪ್ರಶ್ನಿಸುತ್ತಾಳೆ. ಬಹಳ ಹಿಂಜರಿಕೆಯಿಂದ ಬಾಯಿಬಿಡುವ ಹರಿ, ರಜೆಗೆ ಮುಂಚೆ ನಾಕೈದು ಜನ ವಿದ್ಯಾರ್ಥಿಗಳನ್ನು ಪೋಲೀಸರು ಕರೆದೊಯ್ದಿದ್ದರೆಂದು ಎಲ್ಲರನ್ನೂ ನಂತರ ಬಿಟ್ಟರೆಂದೂ ತೊದಲುತ್ತಾ ತಿಳಿಸುತ್ತಾನೆ. ’ರಘುವನ್ನು ಕೂಡಾ ಬಿಟ್ಟಿರಬಹುದು’ ಎಂದು ತಾನು ಅಂದುಕೊಂಡಿದ್ದಾಗಿ ಹೇಳಿ ಹೊರಟುಬಿಡುತ್ತಾನೆ. ಮಾಲತಿಗೆ ಸಂದೇಹ ಉಲ್ಬಣವಾಗುತ್ತದೆ. ರಘು ಏನಾದ?
ಅಷ್ಟರಲ್ಲಿ ದಿನಪತ್ರಿಕೆಯೊಂದರಲ್ಲಿ ನಾಲ್ಕು ಇಂಜಿನೀರಿಂಗ್ ವಿದ್ಯಾರ್ಥಿಗಳನ್ನು ಪೋಲೀಸರು ಬಂಧಿಸಿ ಕರೆದೊಯ್ದಿದ್ದರೆಂದೂ ನಂತರ ಬಿಡುಗಡೆ ಮಾಡಿದರೆಂದೂ ಪ್ರಕಟವಾಗಿರುವುದನ್ನು ಓದಿದ ಚಾಕ್ಯರ್, ಮತ್ತಷ್ಟು ಗಾಬರಿಯಾಗುತ್ತಾರೆ. ಚಾಕ್ಯರ್ ರ ಕುಟುಂಬ ತಲ್ಲಣಿಸಿಹೋಗುತ್ತದೆ. ಆಡಳಿತಾರೂಢ ಪಕ್ಷದ ಮಂತ್ರಿಯೊಬ್ಬರು ಚಾಕ್ಯರ್ ರ ಹಳೆಯ ವಿದ್ಯಾರ್ಥಿ. ಅವರನ್ನು ಭೇಟಿಯಾಗಿ ರಘುವಿನ ಬಗ್ಗೆ ತಿಳಿದುಕೊಳ್ಳಲು ಚಾಕ್ಯರ್ ತಿರುವನಂತಪುರದ ಬಸ್ ಹಿಡಿಯುತ್ತಾರೆ. ಅಧಿಕಾರದ ಮದ ಹಿಡಿದ ಮಂತ್ರಿವರ್ಯನಿಗೆ ತಮ್ಮ ಮೇಷ್ಟ್ರನ್ನು ಕಂಡೊಡನೆಯೇ ಮುಖ ಕಪ್ಪಿಡುತ್ತದೆ. ಅವರು ಇಷ್ಟು ದೂರ ಬರುವ ಅಂದಾಜು ಆತನಿಗಿಲ್ಲ. ಆತನಿಗೆ ನಿಜ ತಿಳಿದಿದೆ. ಐ.ಜಿ.ಪಿ ಗೆ ಒಂದು ಪತ್ರ ಕೊಡುವ ಮಂತ್ರಿ, ’ಅವರನ್ನು ಕಾಣಿ…ಅವರು ನೋಡಿಕೊಳ್ಳುತ್ತಾರೆ’ ಎಂದು ಹೇಳಿ ಚಾಕ್ಯರ್ ರನ್ನು ಸಾಗಹಾಕುತ್ತಾನೆ. ಚಾಕ್ಯರ್ ಐಜಿ ಕಚೇರಿಗೆ ಎಡತಾಕುತ್ತಾರೆ. ಮಂತ್ರಿಯ ಕಾಗದ ಓದಿದ ಐಜಿ ಬೆವರುತ್ತಾರೆ. ’ಆ ಹೆಸರಿನ ಯಾರೂ ಈಗ ಕಸ್ಟಡಿಯಲ್ಲಿಲ್ಲ. ಎಲ್ಲರನ್ನೂ ಬಿಟ್ಟಿದ್ದೇವೆ. ಅವನ ಬಗ್ಗೆ ಏನಾದರೂ ಸುಳಿವು ಸಿಕ್ಕರೆ ನಾವೇ ತಿಳಿಸುತ್ತೇವೆ..ನೀವೀಗ ಹೊರಡಿ’ ಎನ್ನುವ ಐಜಿಯ ಕೃತ್ರಿಮವನ್ನರಿಯದ ಚಾಕ್ಯರ್, ’ದೇವರು ನಿಮಗೆ ಒಳ್ಳೆಯದು ಮಾಡಲಿ’ ಎಂದು ಮುಗ್ಧವಾಗಿ ಹರಿಸಿ ಬರುತ್ತಾರೆ. ಅಲ್ಲಿಗೆ ಮಂತ್ರಿಯಾಗಲೀ, ಸಂಬಂಧ ಪಟ್ಟ ಇಲಾಖೆಯಾಗಲೀ ಚಾಕ್ಯರ್ ನೆರವಿಗೆ ಬರಲಿಲ್ಲ. ವ್ಯವಸ್ಥೆ ತಮಗೆ ತೋರಿದ ಕಡು ನಿರ್ಲಕ್ಷ್ಯವನ್ನು ಚಾಕ್ಯರ್ ಮನಗಾಣದೇ ಹೋಗುತ್ತಾರೆ. ಅವರ ಮುಗ್ಧತೆಯೇ ಅವರನ್ನು ಕುರುಡಾಗಿಸಿಬಿಡುತ್ತದೆ.
ಊರಿಗೆ ಮರಳಿ ವಿಷಯ ತಿಳಿಸಿದ ಚಾಕ್ಯರ್ ಮೇಲೆ ಮಾಲತಿ ಕೋಪಾವಿಷ್ಟಳಾಗುತ್ತಾಳೆ. ಮಂತ್ರಿಯ-ಪೋಲೀಸ್ ಅಧಿಕಾರಿಯ ಮಾತನ್ನು ನಂಬಿ ಬಂದ ತಂದೆಯ ಬಗ್ಗೆ ತೀವ್ರ ಕೋಪಗೊಳ್ಳುವ ಮಾಲತಿ, ’ಇವರೆಲ್ಲಾ ಏನನ್ನೋ ಮುಚ್ಚಿಡುತ್ತಿದ್ದಾರೆ’ ಎಂಬುದನ್ನು ಖಾತ್ರಿಪಡಿಸಿಕೊಂಡು ತಾನೇ ರಘು ಓದುತ್ತಿದ್ದ ಕಾಲೇಜಿನ ಹಾಸ್ಟೆಲ್ ಗೆ ಹೋಗುತ್ತಾಳೆ. ರಘುವಿನ ಸ್ನೇಹಿತರೆಲ್ಲಾ ಅವಳ ಬಳಿ ಬಹಳ ಗೌರವದಿಂದ ವರ್ತಿಸುತ್ತಾರೆ. ರಘುವಿನ ಎಲ್ಲಾ ಸ್ನೇಹಿತರೂ ಪೋಲೀಸರು ಹಾಸ್ಟೆಲ್ ಗೆ ಬಂದು ಅವನನ್ನು ಕರೆದೊಯ್ದಿದ್ದನ್ನು ದೃಢಪಡಿಸುತ್ತಾರೆ. ಒಬ್ಬ ಸಹಪಾಠಿ ಮಾತ್ರ ಸ್ವಲ್ಪ ಹೆಚ್ಚಿನ ಮಾಹಿತಿ ಕೊಡುತ್ತಾನೆ.: ಆ ದಿನ ಕಾಲೇಜಿನ ಸಮಾರಂಭವೊಂದರಲ್ಲಿ, ಒಳ್ಳೆಯ ಕವಿಯೂ ಆಗಿದ್ದ ರಘು, ಮಂತ್ರಿವರ್ಯರೊಬ್ಬರ ಮೇಲೆ ಕುಹಕದ ಕವಿತೆಯೊಂದನ್ನು ಕಟ್ಟಿ ಹಾಡಿದ್ದನೆಂದೂ, ಅದಾದ ಸ್ವಲ್ಪ ಸಮಯದ ನಂತರ ಪೋಲೀಸರು ರಘುವಿನ ಸಂಗಡ ನಾಲ್ಕೈದು ಜನ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋದರೆಂಬ ಗಾಬರಿಗೊಳಿಸುವ ಸತ್ಯ ಆತ ಹೊರಗೆಡಹುತ್ತಾನೆ. ’ಆತನಿಗೆ ಕಸ್ಟಡಿಯಲ್ಲೇ ಏನೋ ಆಗಿರಬೇಕು’ ಎಂದು ರಘುವಿನ ಸಹಪಾಠಿ ಹೇಳಿದಾಗ ಮಾಲತಿಗೆ ದಿಕ್ಕೇ ತೋಚದಾಗುತ್ತದೆ. ಮಾಲತಿ ರಘುವಿನ ಕೋಣೆಯನ್ನೆಲ್ಲಾ ಶೋಧಿಸುತ್ತಾಳೆ. ಅವನು ಅರ್ಧಂಬರ್ಧ ಬರೆದಿಟ್ಟಿದ್ದ ಪತ್ರವೊಂದು ಕಾಣುತ್ತದೆ. ತಂದೆಯನ್ನು ಉದ್ದೇಶಿಸಿ ಬರೆದ ಪತ್ರದಲ್ಲಿ ’ಸುಮ್ಮನೆ ಬಸ್ ಸ್ಟ್ಯಾಂಡ್ ಗೆ ಬಂದು ಕಾಯುತ್ತಾ ನಿಲ್ಲಬೇಡ..ನಾನು ಬಂದು ಸೇರುತ್ತೇನೆ’ ಎಂಬ ವಾಕ್ಯ ಕಂಡು ತೀವ್ರ ಭಾವುಕಳಾಗುವ ಮಾಲತಿ, ಅಲ್ಲಿ ನಿಲ್ಲಲಾಗದೇ ಎಲ್ಲರಿಗೂ ವಂದಿಸಿ ಹೊರಬೀಳುತ್ತಾಳೆ.

ಫೋಟೋ ಕೃಪೆ : ಅಂತರ್ಜಾಲ
ಇತ್ತ ಮನೆಯಲ್ಲಿ ಚಾಕ್ಯರ್ ಹಾಗೂ ಅವರ ಅನಾರೋಗ್ಯ ಪೀಡಿತ ಪತ್ನಿ, ತಮ್ಮ ಮಗಳು ಸಿಹಿಸುದ್ದಿ ತರಬಹುದೆಂದು ಕಾತರರಾಗಿ ಕಾಯುತ್ತಿರುತ್ತಾರೆ. ಬಿಕ್ಕಿ-ಬಿಕ್ಕಿ ಅಳುತ್ತಾ ಮಾಲತಿ ’ರಘುವನ್ನು ಇನ್ನು ಹುಡುಕುವುದಾಗಲೀ, ಅವನಿಗಾಗಿ ಕಾಯುವುದಾಗಲೀ ಬೇಡ’ ಎಂದಾಗ, ಚಾಕ್ಯರ್ ದಿಗ್ಭ್ರಮೆಗೆ ಒಳಗಾಗುತ್ತಾರೆ. ’ರಘು ಹಾಗೆಲ್ಲಾ ಮಾಡಲಾರ..ಬಂದೇ ಬರುತ್ತಾನೆ.’ ಎನ್ನುವ ಚಾಕ್ಯರ್, ಮತ್ತೆ ಮಾರನೆ ದಿನದಿಂದ ದೋಣಿ ಹತ್ತಿ ಬಸ್-ನಿಲ್ದಾಣಕ್ಕೆ ಹೋಗಲು ಆರಂಭಿಸುತ್ತಾರೆ.
ಬೆಳಗಿನಿಂದ ರಾತ್ರಿಯ ಕೊನೆಯ ಬಸ್ ಬರುವವರೆಗೂ ರಘುಗಾಗಿ ಕಾಯುತ್ತಾರೆ. ಆತ ಬರುವುದೇ ಇಲ್ಲ. ದೋಣಿ ಹತ್ತಿ ಮನೆಯ ಬಳಿ ಇಳಿದು ಮನೆ ತಲುಪುವಾಗ ಮಾನಸಿಕವಾಗಿ, ದೈಹಿಕವಾಗಿ ಜರ್ಝರಿತರಾದ ಚಾಕ್ಯರ್ ಕುಸಿದು ಬೀಳುತ್ತಾರೆ. ದೋಣಿಯಲ್ಲಿ ಅವರನ್ನು ಕರೆದೊಯ್ಯುತ್ತಿದ್ದ, ಮನೆಯವರಂತೆಯೇ ಇದ್ದ ಶಂಕರನ್ ಓಡಿ ಬಂದು ಕೈ ಹಿಡಿಯುತ್ತಾನೆ. ಚಾಕ್ಯರ್ ಗೆ ಬುದ್ಧಿ ಭ್ರಮಣೆಯಾಗುತ್ತದೆ. ಓಡೋಡಿ ಬಂದು ಕೈಹಿಡಿದಾತ ತನ್ನ ಪ್ರೀತಿಪಾತ್ರ ಮಗ ರಘುವೇ ಎಂಬ ಭ್ರಮೆಗೊಳಗಾಗುತ್ತಾರೆ. ಶಂಕರನ್ ನ್ನು ಹಿಡಿದ ಚಾಕ್ಯರ್ ’ರಘು..ರಘು..ನೀ ಬಂದುಬಿಟ್ಟೆಯಾ’ ಎಂದು ಕನವರಿಸುತ್ತಾರೆ. ಶಂಕರನ್ ಗೆ ಇದು ಮತಿಭ್ರಮಣೆ ಎಂದು ತಿಳಿಯಲು ಹೆಚ್ಚು ಸಮಯ ಬೇಕಾಗುವುದಿಲ್ಲ. ತನ್ನ ಪತ್ನಿ, ಮಗಳು ಮಾಲತಿಗೆ ’ರಘು ಬಂದ ನೋಡಿ..ಇನ್ನು ಮೇಲೆ ಅವನನ್ನು ಎಲ್ಲಿಗೂ ಕಳಿಸಬೇಡಿ’ ಎನ್ನುತ್ತ ವಿಷಾದ-ಸಂಕಟಗಳು ಮಡುಗಟ್ಟಿದ ಭ್ರಾಂತಿಯ ನಗೆ ನಗುತ್ತಾರೆ ಚಾಕ್ಯರ್. ಕುಟುಂಬ ಶಾಶ್ವತವಾಗಿ ದುಃಖದ ಪಾಲಾಗುತ್ತದೆ. ಹೊರಗಡೆ ಧಾರಾಕಾರ ಮಳೆ, ಮನೆಯೊಳಗಡೆ ಮಾಲತಿ ಮತ್ತವಳ ತಾಯಿಯ ಕಣ್ಣೀರಧಾರೆ. ಕ್ಷೋಭೆಗೊಳಗೊಂಡಂತೆ ಕಂಡ ನದಿಯಲ್ಲಿ, ಶಂಕರನ್ ನ ಏಕಾಂಗಿ ದೋಣಿ…ಇವೆಲ್ಲಾ ಚಾಕ್ಯರ್ ಕುಟುಂಬದ ಪ್ರಸಕ್ತ ಪರಿಸ್ಥಿತಿಯನ್ನು ಸಂಕೇತಿಸುತ್ತವೆ.
====
೧೯೭೫ ರಿಂದ ೧೯೭೭ ರವರೆಗೂ ಹೇರಲಾಗಿದ್ದ ಆಂತರಿಕ ತುರ್ತು-ಪರಿಸ್ಥಿತಿಯ ಸಂದರ್ಭದಲ್ಲಿ ಕೇರಳದ ಈಚರ ವಾರಿಯರ್ ಎಂಬ ಮೇಷ್ಟ್ರಮಗ ರಾಜನ್, ಪೋಲೀಸರ ಪೈಶಾಚಿಕ ಹಿಂಸಾಚಾರಕ್ಕೆ (’ವಿಚಾರಣೆ’ಯ ವೇಳೆ )ಬಲಿಯಾದ ಘಟನೆ ಆಧರಿಸಿ, ಪತ್ರಕರ್ತ ಜಯಚಂದ್ರನ್ ನಾಯರ್ ಬರೆದ ಕಥೆ ’ಪಿರವಿ’, ಷಾಜಿ ಕರುಣ್ ಸ್ವತಂತ್ರ ನಿರ್ದೇಶಕರಾಗಿ ಮಾಡಿದ ಮೊದಲ ಚಿತ್ರ. ಸಿನಿಮಾದ ವ್ಯಾಕರಣ-ಛಂದಸ್ಸುಗಳನ್ನೆಲ್ಲಾ ತಮ್ಮ ಗುರು ಜಿ. ಅರವಿಂದನ್ ರಿಂದ ಧಾರೆ ಎರೆಸಿಕೊಂಡಿದ್ದ ಕರುಣ್, ತಾವು ಸ್ವತಂತ್ರ ನಿರ್ದೇಶಕರಾಗಲು ಇಚ್ಚಿಸಿದಾಗ ಅವರ ಮನಸ್ಸಿಗೆ ಬಂದಿದ್ದು ರಾಜನ್ ಘಟನೆ. ಮೆಡಿಕಲ್ ಓದಬೇಕೆಂಬ ಕುಟುಂಬದವರ ಬಯಕೆಗೆ ವಿರುದ್ಧವಾಗಿ. ಕರುಣ್ ಪುಣೆಯ ಎಫ್ ಟಿ ಟಿ ಐ ಸೇರಿದರು. ಸಿನಿಮಾಟೋಗ್ರಫಿಯಲ್ಲಿ ಡಿಪ್ಲೋಮಾ ಪಡೆದರು. ಅರವಿಂದನ್ ರ ಶಿಷ್ಯವೃತ್ತಿ ಸ್ವೀಕರಿಸಿದರು. ಅರವಿಂದನ್ ರ ಹಲವು ರಾಷ್ಟ್ರೀಯ-ಅಂತಾರಾಷ್ಟ್ರೀಯ ಮನ್ನಣೆ ಪಡೆದ ಚಿತ್ರಗಳಿಗೆ ’ಕಣ್ಣಾ’ದರು. ಅಲ್ಲದೇ ಸನ್ನಿ ಜೋಸೆಫ್ ತರದ ಶಿಷ್ಯರನ್ನು ಬೆಳೆಸಿದರು. (ಸನ್ನಿ, ’ಅಮೆರಿಕ ಅಮೆರಿಕಾ’, ’ಕೊಟ್ರೇಶಿ ಕನಸು’ ಚಿತ್ರಗಳ ಛಾಯಾಗ್ರಾಹಕರೂ ಹೌದು). ತಮ್ಮೆಲ್ಲಾ ಕ್ಯಾಮೆರಾ ತಂತ್ರಗಳ, ನೆರಳು-ಬೆಳಕಿನ ಪಟ್ಟುಗಳನ್ನೆಲ್ಲಾ ಅರಗಿಸಿಕೊಂಡಿದ್ದ ಸನ್ನಿಗೆ ’ಪಿರವಿ’ಯ ಕ್ಯಾಮೆರಾ ಹೊಣೆ ಹೊರೆಸಿ, ತಮ್ಮ ಸಂಪೂರ್ಣ ಗಮನವನ್ನು ಸ್ಕ್ರಿಪ್ಟ್-ನಿರ್ದೇಶನದತ್ತ ಕೇಂದ್ರೀಕರಿಸಿದರು. ’ಪಿರವಿ’ ಇತಿಹಾಸ ಬರೆಯಿತು. ಕರುಣ್ ಶ್ರೇಷ್ಟ ನಿರ್ದೇಶನಕ್ಕೆ, ಪ್ರೇಮ್ ಜಿ ತಮ್ಮ ಅಭಿನಯಕ್ಕೆ ರಾಷ್ಟ್ರ ಪ್ರಶಸ್ತಿ ಪಡೆದರು. ದೋಣಿಯ ಹುಟ್ಟುಹಾಕುವ ಶಬ್ದ, ಚಾಕ್ಯರ್ ಮನೆಯಲ್ಲಿನ ಕ್ರೂರ ಮೌನ, ಚಾಕ್ಯರ್ ರ ಅನಾದಿ ಕಾಲದ ಕೈ ಗಡಿಯಾರದ ’ಟಿಕ್ ಟಿಕ್’ ಶಬ್ದ, ನಿಡುಸುಯ್ಯುವ ಮಳೆ, ಒಮ್ಮೆಲೇ ಭೋರ್ಗರೆಯುವ ಗಾಳಿ, ಆ ಗಾಳಿಗೆ ಹಾರಿಹೋಗುವ ದಿನಪತ್ರಿಕೆಯ ತತ್ತರದ ಶಬ್ದ, ಕುಯ್ ಗುಟ್ಟುತ್ತಾ ಮುಚ್ಚಿಕೊಳ್ಳುವ ಕಿಟಕಿಗಳ ಚೀತ್ಕಾರವನ್ನೂ ಅದ್ಭುತವಾಗಿ ’ಗ್ರಹಿಸಿದ’, ಶಬ್ದಗ್ರಾಹಕ ಉನ್ನಿಕೃಷ್ಣನ್ ಕೂಡಾ ರಾಷ್ಟ್ರಪ್ರಶಸ್ತಿಗೆ ಭಾಜನರಾದರು. ಒಟ್ಟು ನಾಲ್ಕು ರಾಷ್ಟ್ರಪ್ರಶಸ್ತಿಗಳಲ್ಲದೇ ಹಲವಾರು ಅಂತರರಾಷ್ಟೀಯ ಪ್ರಶಸ್ತಿಗಳನ್ನೂ ಪಡೆದ ’ಪಿರವಿ’, ಹಲವು ಸಿನಿಮಾ ಪಂಡಿತರು ಹೇಳುವಂತೆ “೧೯೫೫ರಲ್ಲಿ ಸತ್ಯಜಿತ್ ರೇ ಅವರ ’ಪಥೇರ್ ಪಾಂಚಾಲಿ’ಯ ಮಟ್ಟಕ್ಕೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಂಚಲನ ಉಂಟುಮಾಡಿದ ಮತ್ತೊಂದು ಚಿತ್ರ “. ಇದು ಅತಿಶಯೋಕ್ತಿಯೇನೂ ಇರಲಾರದು. ’ಗಾರ್ಡಿಯನ್’ ಪತ್ರಿಕೆಯಲ್ಲಿ ಖ್ಯಾತ ವಿಮರ್ಶಕ ಡೆರೆಕ್ ಮಾಲ್ಕಮ್ ಕೂಡಾ ಇಂತಹದೇ ಅಭಿಪ್ರಾಯ ಕೊಟ್ಟಿದ್ದಾರೆ.

ನಿಜಜೀವನದ ಈಚರ ವಾರಿಯರ್ , ರಾಘವ ಚಾಕ್ಯರ್ ರಂತೆ ಭಾವುಕ-ಭ್ರಾಮಕರಾಗದೇ ಎಡಬಿಡದೇ ಹೋರಾಡಿದರು. ಕಣ್ಣಾಲಿಗಳನ್ನು ಬಿಟ್ಟುಕೊಂಡು ವಿಚಾರಣೆಯ ಸ್ಥಳದಲ್ಲೇ ಹಿಂಸೆ ತಡೆದುಕೊಳ್ಳಲಾರದೇ ರಾಜನ್ ಕೊನೆಯುಸಿರೆಳೆದಾಗ, ಅವನ ಶವವನ್ನು ಕೇರಳದ ವೀರ ಪೋಲೀಸರು, ತಮಿಳುನಾಡು-ಕೇರಳ ಗಡಿಯ ದಟ್ಟಡವಿಯಲ್ಲೆಲ್ಲೋ, ಸುಮಾರು ೬೦ ಕೆಜಿಯಷ್ಟು ಸಕ್ಕರೆ ಸುರಿದು ಸುಟ್ಟುಹಾಕಿದ್ದರು. ಹೀಗೆ ಮಾಡಿದ್ದರಿಂದ ರಾಜನ್ ನ ಮೂಳೆಯ ಒಂದು ಸಣ್ಣ ತುಂಡೂ ಸಿಗಲಿಲ್ಲ. ಅಲ್ಲಿಗೆ ರಾಜನ್ ಗೆ ಸಂಬಂಧಿಸಿದ ಪ್ರಮುಖ ಸಾಕ್ಷಿಗಳ್ಯಾವುದೂ ಇರಲಿಲ್ಲ. (ರಾಜನ್ ನ ಶವವನ್ನು ಸಾಗಿಸಿದನೆಂದು ಹೇಳಲಾದ ಪೊಲೀಸ್ ಜೀಪಿನ ಡ್ರೈವರ್ ಒಬ್ಬರು ಬೇರೆಯ ಕಥೆಯನ್ನೇ ಹೇಳಿದ್ದರು. ಅದನ್ನು ಇಲ್ಲಿ ಉಲ್ಲೇಖಿಸಲು ನನಗೆ ಇಚ್ಛೆಯಿಲ್ಲ)ವಾರಿಯರ್ ಕಮ್ಯುನಿಸ್ಟರೊಂದಿಗೆ ಗುರುತಿಸಿಕೊಂಡಿದ್ದರು. ಆಗ ಗೃಹಮಂತ್ರಿ ಆಗಿದ್ದ ಕರುಣಾಕರನ್, ಇಂದಿರಾ ಭಕ್ತರು ಅಲ್ಲದೇ ಕಮ್ಯುನಿಸ್ಟ್ ದ್ವೇಷಿ. ಒಂದು ದಿನ ಪೋಲೀಸ್ ಠಾಣೆಯೊಂದರ ಮೇಲೆ ’ನಕ್ಸಲ’ರೆಂದು ಹೇಳಲಾದ ಕೆಲವರು ದಾಳಿ ನಡೆಸಿದ್ದರು. ಆಗ ಪೋಲಿಸ್ ಅಧಿಕಾರಿಯಾಗಿದ್ದ ಜಯರಾಮ ಪಡಿಕ್ಕಲ್, ಆರೋಪಿಗಳನ್ನು ಹಿಡಿಯುವುದಕ್ಕಿಂತ, ಯಾರನ್ನಾದರೂ ’ಬಲಿಪಶು’ ಮಾಡುವುದರಲ್ಲಿ ಸಿದ್ದಹಸ್ತರಾಗಿದ್ದವರು. ಅಲ್ಲದೇ ಕರುಣಾಕರನ್ ರ ’ನೀಲಿಕಣ್ಣಿನ’ ಅಧಿಕಾರಿಗಳಲ್ಲೊಬ್ಬರಾಗಿದ್ದವರು. ರಾಜನ್ ನ ಹಿನ್ನಲೆ, ಅವನ ತಂದೆ ವಾರಿಯರ್ ಕಮ್ಯುನಿಸ್ಟರು ಎಂದು ತಿಳಿದುಕೊಂಡ ಪಡಿಕ್ಕಲ್, ತುರ್ತು-ಪರಿಸ್ಥಿತಿ ಸಂದರ್ಭದ ಅರಾಜಕತೆಯ ಸಂಪೂರ್ಣ ಪ್ರಯೋಜನ ಪಡೆದರು. ರಾಜನ್ ಬಂಧನವಾಯಿತು. ’ರೋಲಿಂಗ್’ ಎಂಬ ಕೇರಳದ ಪೋಲೀಸರೇ ಶೋಧಿಸಿದರೆನ್ನಲಾದ ಭೀಭತ್ಸ ಶಿಕ್ಷೆಯೊದಕ್ಕೆ ರಾಜನ್ ರನ್ನು ಒಳಪಡಿಸಿದ ಕೆಲವೇ ನಿಮಿಷಗಳಲ್ಲೇ ಅವನ ಪ್ರಾಣ ಪಕ್ಷಿ ಹಾರಿಹೋಯಿತು. ೧೯೭೭ ರ ನಂತರ ಛಲಬಿಡದ ತ್ರಿವಿಕ್ರಮನಾದ ವಾರಿಯರ್ , ಸುಪ್ರೀಂ ಕೋರ್ಟಿಗೂ ಹೋಗಿ ಹೊಡೆದಾಡಿದರು. ಅಷ್ಟರಲ್ಲಿ ಮುಖ್ಯಮಂತ್ರಿಯಾಗಿದ್ದ ಕರುಣಾಕರನ್ ಅಧಿಕಾರ ಕಳೆದುಕೊಂಡರು. ವಾರಿಯರ್ ಅಷ್ಟು ಮಾತ್ರ ಯಶಸ್ವಿಯಾದರು. ಆದರೆ ರಾಜನ್ ಬದುಕಿಲ್ಲ ಎನ್ನುವುದಕ್ಕೆ ಯಾವುದೇ ಸಾಕ್ಷ್ಯಾಧಾರಗಳಿಲ್ಲ. ಜಯರಾಮ್ ಪಡಿಕ್ಕಲ್, ದೇವರ ರಾಜ್ಯದ ’ಡಿ ಜಿ ಪಿ’ ಕೂಡಾ ಆದರು. ವಾರಿಯರ್ ನಿಧನರಾದಾಗ ಕರುಣಾಕರನ್ ಗೆ ವಿಷಯ ತಿಳಿಸಲಾಯಿತು. ’ಯಾರ್ರೀ ಅವ್ನು ವೇರಿಯರ್…ಹೋಗ್ಲೀ ಬಿಡ್ರೀ’ ಎಂಬ ತಮ್ಮ ಧೂರ್ತ ಸಹಜ ಪ್ರತಿಕ್ರಿಯೆ ನೀಡಿದ್ದರು. ವೇರಿಯರ್ ತಮ್ಮ ಹೋರಾಟವನ್ನು ವಿವರಿಸಿ ಬರೆದ ಕೃತಿಯ ಕನ್ನಡ ಅನುವಾದವನ್ನು ಹಿರಿಯ ಮಿತ್ರ, ಪತ್ರಕರ್ತ (Jagadish Koppa) ಜಗದೀಶ್ ಕೊಪ್ಪ ’ಪುತ್ರಶೋಕ’ ಎಂಬ ಕೃತಿಯಾಗಿ ಪ್ರಕಟಿಸಿದ್ದಾರೆ.
ಆದರೆ ಇಲ್ಲಿ ಅಚ್ಚರಿಯಾಗುವುದು ಕರುಣ್ ಇದ್ಯಾವುದೇ ರಾಜಕೀಯ ಘಟನೆಯನ್ನೂ ತಮ್ಮ ಚಿತ್ರಕಥೆಯಲ್ಲಿ ಗಣನೆಗೆ ತೆಗೆದುಕೊಳ್ಳದೇ, ಮಾನವೀಯ ಸಂಬಂಧ, ತುಮುಲ, ಹತಾಶೆ, ವ್ಯವಸ್ಥೆಯ ವಿರುದ್ಧ ತಣ್ಣನೆಯ ವಿರೋಧಗಳಲ್ಲೇ ಚಿತ್ರ ಕಟ್ಟಿ ಕೊಟ್ಟಿರುವ ಬಗೆ. ಈ ಬಗ್ಗೆ ಸಂದರ್ಶನವೊಂದರಲ್ಲಿ ವಿವರಿಸಿದ ಕರುಣ್, ’ಚಿತ್ರ ಸರಳವಾಗಿರಬೇಕು. ನೇರವಾಗಿರಬೇಕು. ಭ್ರಷ್ಟ ವ್ಯವಸ್ಥೆಯೊಂದರಲ್ಲಿ ನಿಷ್ಪಾಪಿಯೊಬ್ಬನ, ಮುಗ್ಧನೋರ್ವನ ಕೊಲೆಯೊಂದು ಸರ್ಕಾರ ಕಡೆಗಣಿಸಿದ್ದನ್ನು ಸ್ಪಷ್ಟವಾಗಿ ಹೇಳುವುದೇ ಮುಖ್ಯವಾಗಿತ್ತು. ಅಲ್ಲದೇ ಇದೊಂದು ರಾಜಕೀಯ ಡಾಕ್ಯುಮೆಂಟರಿಯಂತಾಗುವುದು ನನಗೆ ಇಷ್ಟವಿರಲಿಲ್ಲ.” ಅಷ್ಟೇ ಅಲ್ಲ..ಇಡೀ ಚಿತ್ರದಲ್ಲಿ ’ರಘು’ವನ್ನು ತೋರಿಸುವುದಿಲ್ಲ. ಅವನನ್ನು ಅದೃಶ್ಯವಾಗಿಸಿಯೇ, ಆ ಪಾತ್ರವನ್ನು ಕರುಣ್ ಪರಿಣಾಮಕಾರಿಯಾಗಿ ತಲುಪಿಸಿದ್ದಾರೆ.
ರಾಘವ ಚಾಕ್ಯರ್ ಪಾತ್ರದ ಪ್ರೇಮ್ ಜಿ (ನಿಜ ನಾಮಧೇಯ: ಮುಲ್ಲಮಂಗಲಾತ್ ಪರಮೇಶ್ವರನ್ ಭಟ್ಟಾತಿರಿಪಾಡ್)’ಅಭಿನಯಿಸಿದ್ದಾರೆ’ ಎಂದರೆ, ಅದು ಅವರಿಗೆ ನಾವು ಮಾಡುವ ಅಪಚಾರ. ಚಾಕ್ಯರ್ ಪಾತ್ರದ ಕಣಕಣವನ್ನೂ ಹೊಕ್ಕಿರುವ ಪ್ರೇಮ್ ಜಿಯವರ ಹೊರತು ಇನ್ನ್ಯಾರೂ ಆ ಪಾತ್ರವನ್ನು ನೋಡುಗನ ಹೃದಯಾಳಕ್ಕಿಳಿಸಲಾರರು. ಈ ಚಿತ್ರ ಮಾಡಿದಾಗ ಪ್ರೇಮ್ ಜಿ ಯವರ ವಯಸ್ಸು ೮೦ ದಾಟಿತ್ತು. ಅವರ ವಯಸ್ಸು, ಪ್ರತಿಭೆ ಪರಿಶ್ರಮಗಳನ್ನೆಲ್ಲಾ ಗಮನಿಸಿಯೇ ಕರುಣ್ ’ರಾಘವ ಚಾಕ್ಯರ್’ ಎಂಬ ಅವಿಸ್ಮರಣೀಯ ಪಾತ್ರವನ್ನು ಪ್ರೇಮ್ ಜಿಯವರಿಗೆ ವಹಿಸಿದರು. ಪ್ರೇಮ್ ಜಿ ಯವರ ಸೋದರ ಎಮ್ ಆರ್ ಭಟ್ಟಾತಿರಿಪಾಡ್ ಕಂಪನಿ ನಾಟಕಗಳಿಂದ ಸಾಮಾಜಿಕ ಬದಲಾವಣೆಯಲ್ಲಿ ತೊಡಗಿದ್ದವರು. ತಮ್ಮ ಬಂಧು ಇ.ಎಮ್.ಎಸ್.ನಂಬೂದರಿಪಾಡ್ ರೊಂದಿಗೆ ’ಯೋಗಕ್ಷೇಮ ಸಭಾ’ ಎಂಬ ಸಮಾಜಸೇವಾ ಸಂಸ್ಥೆ ಸೇರಿದ ಪ್ರೇಮ್ ಜಿ, ಜಾತಿಪದ್ಧತಿ, ಜೀತಗಾರಿಕೆಯ ವಿರುದ್ಧ ಮೂವತ್ತರ ದಶಕದಿಂದಲೇ ಧ್ವನಿ ಎತ್ತಿದ್ದವರು. ಬೀದಿನಾಟಕ, ಕಂಪನಿ ನಾಟಕಗಳ ಮೂಲಕ ಸಮಾಜ ಸುಧಾರಣೆಗೆ ತಮ್ಮನ್ನು ತೊಡಗಿಸಿಕೊಂಡ ಪ್ರೇಮ್ ಜಿ, ೧೯೪೩ ರಲ್ಲಿ ಆರ್ಯ ಎಂಬ ವಿಧವೆಯನ್ನು ಮದುವೆಯಾದರು. ೪೦ರ ದಶಕದಲ್ಲಿ ವಿಧವಾ ವಿವಾಹವನ್ನು ನಂಬೂದಿರಿ ವರ್ಗದಲ್ಲಿ ತೀವ್ರವಾಗಿ ವಿರೋಧಿಸಲಾಗುತ್ತಿತ್ತು. ಪ್ರೇಮ್ ಜಿ ಸಡ್ಡು ಹೊಡೆದು ನಿಂತರು. ಆರ್ಯ ಎಂಬ ಆ ಹೆಣ್ಣು ಮಗಳು ೧೮ ರ ವಯಸ್ಸಿನಲ್ಲಿ ವಿಧವೆಯಾಗಿದ್ದಳು. ೧೯೪೩ ರಲ್ಲಿ ಪ್ರೇಮ್ ಜಿಯವರನ್ನು ಅತ್ಯಂತ ಸರಳ ವಿವಾಹದಲ್ಲಿ ವರಿಸಿದ ಆಕೆ, ೧೯೯೮ರಲ್ಲಿ ಪ್ರೇಮ್ ಜಿ ಇಹಲೋಕದ ಯಾತ್ರೆ ಮುಗಿಸುವವರೆಗೂ ಸಂಗಾತಿಯಾಗಿದ್ದರು.
‘ಪಿರವಿ’ ಯ ಕೊನೆಯ ದೃಶ್ಯಗಳಲ್ಲಿನ ಪ್ರೇಮ್ ಜಿ ಅವರ ಅಭಿನಯ ಸ್ತಂಭೀಭೂತಗೊಳಿಸುತ್ತದೆ. ಅಭಿನಯದಲ್ಲಿ ಅರ್ಚನಾ, ಲಕ್ಷ್ಮಿ ಕೃಷ್ಣಮೂರ್ತಿ ಕೂಡಾ ತಮ್ಮ ಪಾತ್ರಗಳಿಗೆ ಸಂಪೂರ್ಣ ನ್ಯಾಯ ಒದಗಿಸಿದ್ದಾರೆ.
ಸನ್ನಿ ಜೋಸೆಫ್ ಚಿತ್ರದ ’ಅದೃಶ್ಯ’ನಾಯಕ ಎಂದರೆ ಅತಿಶಯೋಕ್ತಿಯಲ್ಲ. ಮಾನ್ ಸೂನ್ ಗಾಗಿ ಆರು ತಿಂಗಳು ಕಾದ ಕರುಣ್-ಸನ್ನಿ ಜೋಡಿ, ಕೇರಳದಲ್ಲಿ ಮಾನ್ ಸೂನ್ ಆರಂಭವಾಗುತ್ತಿದ್ದಂತೆ ಕ್ರಿಯಾಶೀಲವಾಯಿತು. ಬಹುತೇಕ ನೈಸರ್ಗಿಕ ಬೆಳಕಲ್ಲೇ ಚಿತ್ರೀಕರಿಸಿರುವುದು ಹೆಗ್ಗಳಿಕೆ. ಕೇರಳದ ಮಾನ್ಸೂನ್ (ಮುಂಗಾರು) ಸನ್ನಿ ಜೋಸೆಫರ ಕ್ಯಾಮೆರಾದಲ್ಲಿ ಮೂಡಿಬಂದಿರುವ ಪರಿಯೇ ಸೋಜಿಗವೆನಿಸುತ್ತದೆ. ಅಲ್ಲದೇ ಕಥೆಗೆ ಸನ್ನಿವೇಶಕ್ಕೆ ಪೂರಕವಾಗುವಂತೆ ಕೇರಳದ ನಿಸರ್ಗ ಸಹಜ ವಾತಾವರಣವನ್ನು ಪ್ರತಿಮೆಯಾಗಿ ಒಮ್ಮೊಮ್ಮೆ ರೂಪಕವಾಗಿ ಬಳಸಿರುವುದರಲ್ಲಿ ಸನ್ನಿಯವರ ಪರಿಶ್ರಮ ಕಾಣುತ್ತದೆ. ಮಾನ್ ಸೂನ್ ನ ಘಮಲು ಆಘ್ರಾಣಿಸಬಹುದೇನೋ ಎಂಬಷ್ಟೇ ಸಹಜವಾಗಿ ಸುಂದರವಾಗಿದೆ ಸನ್ನಿಯವರ ಕ್ಯಾಮೆರಾ ಕುಸುರಿ.

ಇಲ್ಲಿ ಮಳೆ ಚಾಕ್ಯರ್ ರ ಗೊಂದಲಗೊಂಡ, ದಿಕ್ಕುಗಾಣದ ಮನಸ್ಸಿನ ದೃಶ್ಯವನ್ನು ಸಂಕೇತಿಸುತ್ತದೆ. ಸ್ತಬ್ಧ ಅಥವಾ ನಿಶ್ಚಲವೆನಿಸಿಬಿಡಬಹುದಾಗಿದ್ದ frame(ಚಿತ್ರಿಕೆ)ಗಳಿಗೆ ಮಳೆ ತಂದುಕೊಟ್ಟಿರುವ ಚಲನಶೀಲತೆ ಗಮನಾರ್ಹ.
“ಮಾನ್ ಸೂನ್ ಎಂದರೆ ತಮಗದೊಂದು ಹೊಸಜನ್ಮವಿದ್ದಂತೆ” ಎಂದು ಕರುಣ್ ಬ್ರಿಟೀಶ್ ಟೆಲೆವಿಶನ್ ನ ಸಂದರ್ಶನದಲ್ಲಿ ಹೇಳಿದ್ದರು. “ಮಾನ್ ಸೂನ್ ನಲ್ಲಿ ಬೆಳಕು ಬಹಳ ಕಡಿಮೆ..ಸಮಯ ಎಷ್ಟು ಎಂಬುದು ಸರಿಯಾಗಿ ತಿಳಿಯುವುದಿಲ್ಲ. ಯಾವ ಸಮಯ ಅಥವಾ ಕಾಲಘಟ್ಟದಲ್ಲಿದ್ದೇವೆ ಎಂಬುದನ್ನು ತಪ್ಪಾಗಿ ನಿರ್ಣಯಿಸುತ್ತೇವೆ. ಸೂರ್ಯ ಕಂಡರೆ ಬೆಳಕು..ಸಮಯದ ಬಗ್ಗೆ ಸರಿಯಾಗಿ ನಿರ್ಧರಿಸಬಹುದು..ಅವನಿಲ್ಲದಿದ್ದರೆ ಬೆಳಕಿಲ್ಲ…ನಮ್ಮದು ಒಮ್ಮೊಮ್ಮೆ ತಪ್ಪೆಣಿಕೆಯಾಗಿಬಿಡುತ್ತದೆ..ಮಗ ಕಾಣದ ಚಾಕ್ಯರ್ ಗೂ ಇದೇ ಆಗಿದೆ”.
ಭಾರತೀಯ ಚಿತ್ರರಂಗ, ಅದರಲ್ಲೂ ಮಲಯಾಳಮ್ ಚಿತ್ರರಂಗ ಹೆಮ್ಮೆಯಿಂದ ನೆನೆಸಿಕೊಳ್ಳಬೇಕಾದ ಚಿತ್ರ ’ಪಿರವಿ’.
ಕನ್ನಡದಲ್ಲೂ ಹಲವು ಹಿರಿಯ ಕಲಾವಿದರಿದ್ದಾರೆ. ಅವರ ಪ್ರತಿಭೆ ಒಮ್ಮೊಮ್ಮೆ ಅಚ್ಚರಿತರುತ್ತದೆ. ಆದರೆ ಸರಿಯಾದ ಪಾತ್ರ ಪೋಷಣೆಯಿಲ್ಲದೇ, ಪರಿಕಲ್ಪನೆಯ ಅರಿವಿಲ್ಲದೇ ಪಾತ್ರಗಳು ಸೊರಗಿವೆ:
ಅವಿಸ್ಮರಣೀಯವಾಗಬಹುದಾಗಿದ್ದ ’ಪ್ರಾಣೇಶಾಚಾರ್ಯ’ರ ಪಾತ್ರ ನಿರ್ದೇಶಕರ ಸೂಕ್ಷ್ಮತೆ-ಪ್ರಬುದ್ಧತೆಗಳ ಕೊರತೆಯಿಂದ ಹತ್ತರಲ್ಲಿ ಹನ್ನೊಂದಾಯಿತು. ’ಚಾಮಯ್ಯ ಮೇಷ್ಟ್ರು’ ಅಭಿನಯದಿಂದ ಆಪ್ತವಾದರು. ಬೇರೆಲ್ಲಾ ಕೋನಗಳಿಂದಲೂ ಸೊರಗಿದರು.
ಚಾಮಯ್ಯರಂತಹ ’ಸಹಿಷ್ಣು’, ತಮ್ಮ ಪ್ರೀತಿಪಾತ್ರ ಶಿಷ್ಯ ಕ್ರಿಶಿಯನ್ ಹುಡುಗಿಯೊಬ್ಬಳನ್ನು ಪ್ರೀತಿಸಿದ್ದು ಸಹಿಸಿಕೊಳ್ಳಲಿಲ್ಲ ಏಕೆ??..ಅಲಮೇಲುವನ್ನು ಮರೆತು ’ತ್ಯಾಗಿ’ಯಾಗಲು ಉಪದೇಶಿಸಿದ ಮೇಷ್ಟ್ರು, ತಮ್ಮ ಶಿಷ್ಯ ಮಾರ್ಗರೇಟ್ ಳಲ್ಲಿ ಒಲವು ಅರಸಿ ಹೋದಾಗ ಏಕೆ ಅಸಹಿಷ್ಣುವಾದರು. ಅಭಿಯಯವನ್ನು ಪರಾಕಾಷ್ಟೆಗೆ ಕೊಂಡೊಯ್ದು, ಕಥೆ-ನಿರೂಪಣೆಯಲ್ಲಿನ ತಪ್ಪುಗಳನ್ನು ಮುಚ್ಚುವುದೂ ಒಂದು (ಕು)ತಂತ್ರಗಾರಿಕೆಯೇ..’ಅವಳನ್ನು ಕರೆದುಕೊಂಡು ನೀನು ಊರುಬಿಟ್ಟು ಹೋಗೋ ಆಗಿದ್ರೆ ನನ್ನ ಹೆಣ ದಾಟಿಕೊಂಡು ಹೋಗು’ ಎನ್ನುವ ಚಾಮಯ್ಯ, ತಾವು ’ಮೇಷ್ಟ್ರು’ ಎಂಬುದನ್ನು ಏಕೆ ಸಂಪೂರ್ಣ ಮರೆತೇ ಬಿಟ್ಟರು? ಕೊನೆಗೂ ರಾಮಾಚಾರಿ ಮೇಷ್ಟ್ರ ಮಾತು ಕೇಳಲೇ ಇಲ್ಲ. ಅವನನ್ನು ತಿದ್ದಿಯೇ ಬಿಡುವ ಹುಂಬ ಹಠಕ್ಕೆ ಬಿದ್ದ ಮೇಷ್ಟ್ರು…ಮೇಷ್ಟ್ರನ್ನು ಅಕಾಸ್ಮಾತ್ತಾಗಿ ತಳ್ಳಿ ಪಶ್ಚಾತ್ತಾಪದಲ್ಲಿ ಬೇಯುತ್ತಾ ತಾನು ದುರ್ಗದ ದೈತ್ಯಬಂಡೆಯ ಮೇಲಿಂದ ಮಾರ್ಗರೇಟ್ ಳೊಂದಿಗೆ ಧುಮುಕಿದ ರಾಮಾಚಾರಿ, ನನ್ನನ್ನು ಪ್ರಶ್ನೆಗಳ ಕೂಪಕ್ಕೆ ತಳ್ಳಿದ್ದರು..ಒಣ ಪ್ರತಿಷ್ಟೆ, ಹುಂಬ ಹಠ, ಅಸಹನೆಗಳು ಪರಾಕಾಷ್ಟೆ ತಲುಪಿ ಇನ್ನೂ ಬದುಕಿ ಬಾಳಬೇಕಿದ್ದ ಜೀವಗಳನ್ನು ತರಗೆಲೆಗಳಂತೆ ಉರುಳಿಸಿದ ಆ ದೃಶ್ಯ ಅಂದಿನ ಎಳೆ ಮನಸ್ಸುಗಳನ್ನು ಕ್ಷೋಭೆಗೊಳಿಸಿದ್ದು ನಿಜ..ಆದರೆ ಪ್ರಶ್ನೆಗಳನ್ನು ಕೆದಕದೇ ಹೋಯಿತು.
ಇದ್ಯಾವುದನ್ನೂ ಕುಚೋದ್ಯಕ್ಕಾಗಿ ಬರೆಯುತ್ತಿಲ್ಲ. ಒಂದು ಪಾತ್ರವನ್ನು ಸೃಷ್ಟಿಸುವಾಗ ಹಲವು ಆಯಾಮಗಳಿಂದ ನೋಡಬೇಕಾಗುತ್ತದೆ. ತರ್ಕಬದ್ಧವಾಗಿ ವಿಶ್ಲೇಷಿಸಬೇಕಾಗುತ್ತದೆ. ನಮ್ಮ ಸಿನಿಮಾದ ಹಲವು ’ಜನಪ್ರಿಯ’ ಪಾತ್ರಗಳಲ್ಲಿ ಈ ರೀತಿಯ ವಿಶ್ಲೇಷಣೆಯ ಕೊರತೆ ಕಂಡುಬರುತ್ತದೆ.
ಈ ಎಲ್ಲಾ ಗೊಂದಲಗಳ ನಡುವೆ ಮನಸ್ಸಿನಲ್ಲಿ ಉಳಿಯುವವರು ’ನಾಂದಿ’ಯ ಮೂರ್ತಿ, ಪಂತುಲು ತಮಗೇ ಸೃಷ್ಟಿಸಿಕೊಂಡ ’ರಂಗಪ್ಪ ಮೇಷ್ಟ್ರು’, ವಾಸುದೇವರಾವ್ ಪರಕಾಯ ಪ್ರವೇಶ ಮಾಡಿದ ’ಚೋಮ’, ಲೋಕೇಶ್ ರ ’ಗೆಂಡೆತಿಮ್ಮ’ ಮತ್ತು ’ಭುಜಂಗಯ್ಯ’, ಎಲ್ ವಿ ಶಾರದಾ ಅಭಿನಯಿಸಿದ ’ಫಣಿಯಮ್ಮ’… ಆದರೆ ಪಟ್ಟಿ ಬಹಳ ಬೆಳೆಯುವುದಿಲ್ಲ. ಹಲವು ಮನೋಜ್ಞ ಸನ್ನಿವೇಶಗಳನ್ನು ಲೀಲಾಜಾಲವಾಗಿ ನಿರ್ವಹಿಸಿದ ಬಾಲಣ್ಣ, ’ರಂಗನಾಯಕಿ’ಯಲ್ಲಿ ದಶರಥನ ಪಾತ್ರವಹಿಸುತ್ತಿದ್ದಾಗಲೇ ರಂಗದ ಮೇಲೆ ಕುಸಿದು ಕೊನೆಯುಸಿರೆಳೆಯುವ ’ಶಾಮಣ್ಣ’ನ ಪಾತಧಾರಿ ರಾಜಾನಂದ್, ಇದೇ ಗುಂಪಿಗೆ ಸೇರಬಹುದಾದ ಬ್ರಹ್ಮಾವರ್, ಶೃಂಗೇರಿ ರಾಮಣ್ಣ ಇನ್ನೂ ಹಲವರ ಪ್ರತಿಭೆಯನ್ನು ನಾವು ಎಷ್ಟು ಸಮರ್ಪಕವಾಗಿ ಬಳಸಿಕೊಂಡಿದ್ದೇವೆ.??. ’ರಾಘವ ಚಾಕ್ಯರ್’ ಬಗ್ಗೆ ಇಲ್ಲಿ ಬರೆದಿರುವುದಕ್ಕೂ ಇವರಿಗೂ ಏನು ಸಂಬಂಧ ಎಂಬ ಪ್ರಶ್ನೆ ಉದ್ಭವಿಸಬಹುದು. ಪ್ರಶ್ನೆ ಇರುವುದು ಪ್ರತಿಭೆಗೆ ತಕ್ಕ ಪಾತ್ರ, ಮತ್ತದರ ನಿರೂಪಣೆಯಲ್ಲಿ. ಇಲ್ಲಿ ಚಾಕ್ಯರ್ ರ ಪಾತ್ರ ಒಂದು ಉದಾಹರಣೆಯಷ್ಟೇ, ಹಾಗಾದರೆ ಇವರೆಲ್ಲಾ ’ರಾಘವ ಚಕ್ಯಾರ್’ ಆಗುತ್ತಾರೋ? ’ಇಲ್ಲ’ ಎಂದು ಖಂಡಿತ ನುಡಿಯಲಾಗದು…’ಗೊತ್ತಿಲ್ಲ’ ಎಂದು ಒಪ್ಪಬೇಕಾಗುತ್ತದೆ. ಪ್ರೇಂ ಜಿ ಕೂಡಾ ಮೊದಲು ಮಾಡಿದ್ದು ಸಣ್ಣಪುಟ್ಟ ಪಾತ್ರಗಳೇ. ಚಾಕ್ಯರ್ ಪಾತ್ರ ಬರುವಷ್ಟರಲ್ಲಿ ಪ್ರೇಮ್ ಜಿ ಮಾಗಿದ್ದರು. ಪ್ರತಿಭೆಯ ಸಮರ್ಪಕ ಪೋಷಣೆ, ಅದಕ್ಕೆ ಪೂರಕವಾದ ಕಥೆ-ಪಾತ್ರಗಳತ್ತ ನಮ್ಮ ನಿರ್ದೇಶಕರು ಗಮನಹರಿಸಬೇಕಿದೆ. ಶಿವಕುಮಾರ್ ಜೀವತುಂಬಿ ಅಭಿನಯಿಸಿದ ’ಮರುಪಕ್ಕಮ್’, ಬಚ್ಚನ್ ಅಭಿನಯದ ’ಬ್ಲಾಕ್’, ಇವು-ಇಂತಹವು ವಯೋಸಹಜವಾದ ಪ್ರತಿಭೆ, ಕಲಾವಿದನ ಸಾಮರ್ಥ್ಯಗಳನ್ನು ಗಮನದಲ್ಲಿಟ್ಟು ಸೃಷ್ಟಿಸಿದ ಪಾತ್ರಗಳು. ಇಂತಹ ಪಾತ್ರಗಳು ನಮ್ಮ ಕಲಾವಿದರಿಗೂ ಸಿಗಲಿ. ಇತ್ತೀಚಿನ ದಿನಗಳಲ್ಲಿ ತಮಿಳಿನ ಸೂರಿ(ವಿಡುದಲೈ), ವಡಿವೇಲು(ಮಾಮನ್ನನ್) ಬಹಳ ಗಮನಸೆಳೆದಿದ್ದಾರೆ. ವೆಟ್ರಿಮಾರನ್-ಮಾರಿ ಸೆಲ್ವರಾಜ್ ತರಹದ ಟ್ರೆಂಡ್ ಸೃಷ್ಟಿಸುತ್ತಿರುವ ನಿರ್ದೇಶಕರ ಚಿತ್ರಗಳಲ್ಲಿ, ಹಾಸ್ಯಕ್ಕೆ ಸೀಮಿತಗೊಂಡಿದ್ದ ವಡಿವೇಲು ಅಥವಾ ಸೂರಿ ಪ್ರಮುಖ ಪಾತ್ರಗಳಲ್ಲಿದ್ದಾರೆ ಎಂಬ ಸುದ್ದಿ ಹಲವರ ಹುಬ್ಬೇರಿಸಿತ್ತು. ಇಬ್ಬರೂ ಅಭಿನಯದಲ್ಲಿ ಮಾಗಿದ್ದಾರೆ. ಆ ನಂಬಿಕೆ ಸ್ವತಃ ಆ ಇಬ್ಬರು ಕಲಾವಿದರಿಗೂ ಇತ್ತು. ಆ ಚಿತ್ರದ ನಿರ್ದೇಶಕರಿಗೂ ಇವರ ಮೇಲೆ ಅಪಾರ ವಿಶ್ವಾಸವಿತ್ತು. ನಿರ್ದೇಶಕರಿಗೆ ಕಲಾವಿದರ ಕುರಿತಾದ ಈ ವಿಶ್ವಾಸ ಮಹತ್ವದ್ದು.
’ಪಿರವಿ’ಯಂತಹ ಚಿತ್ರ ಬರಲು, ಚಾಕ್ಯರ್ ರಂತಹ ಸಶಕ್ತ-ಸದೃಢ-ಮನೆಮನ ತಲುಪುವ ಪಾತ್ರ ಸೃಷ್ಟಿಸಲು ಮತ್ತೊಂದು ’ಎಮರ್ಜೆನ್ಸಿ’ ಬರುವ ಅಗತ್ಯವಿಲ್ಲ. ಸಮಕಾಲೀನ ಸಾಮಾಜಿಕ ತಲ್ಲಣಗಳಿಗೆ, ರಾಜಕೀಯ ವೈಪರೀತ್ಯಗಳಿಗೆ ಕಣ್ಣು-ಕಿವಿಯಾದರೆ ಸಾಕು. ಅದು ಮೊದಲ ಹೆಜ್ಜೆ.
ಜಾತಿ ವೈಷಮ್ಯದ ಘಟನೆಗಳಿಗೆ, ಉಳ್ಳವರು-ಉಳುವವರ ನಡುವಿನ ಹೋರಾಟಕ್ಕೆ ಒಂದು ಇತಿಹಾಸವೇ ಇದೆ. ೨೦೦೦ದಲ್ಲಿ ಕಂಬಾಲಪಲ್ಲಿಯಲ್ಲಿಯಲ್ಲಿ ನಡೆದ ದುರ್ಘಟನೆ ನಮ್ಮನ್ನು ಕಲಕಬೇಕಿತ್ತು. ಈ ಘಟನೆಗೆ ಸಂಬಂಧಿಸಿದಂತೆ ೪೬ ಜನ ಆರೋಪಿಗಳನ್ನು ದೋಷಮುಕ್ತರನ್ನಾಗಿಸಿ ಹೈಕೋರ್ಟ್ ತೀರ್ಪು ನೀಡಿತು. ಇದ್ದ ಒಬ್ಬನೇ ಪ್ರತ್ಯಕ್ಷಸಾಕ್ಷಿ ವೆಂಕಟರಾಯಪ್ಪ ಐದಾರು ವರ್ಷಗಳ ಹಿಂದೆ ತೀರಿಕೊಂಡರು. ಅವರ ಕುಟುಂಬದ ಐದು ಜನ (ಒಟ್ಟು ೭ ಜನ)ಬಲಿಷ್ಟಜಾತಿಯ ದೌರ್ಜನ್ಯಕ್ಕೆ ಬೂದಿಯಾಗಿ ಹೋದರು. ’ಕಂಬಾಲಪಲ್ಲಿ’ ಹೆಸರಿನ ಚಿತ್ರ ಕೂಡಾ ಬಂದು ಹೋಯಿತು. ಆದರೆ ಅದು ಹತ್ತರಲ್ಲಿ ಹನ್ನೊಂದನೆಯ ಚಿತ್ರವಾಯಿತು. ಚಿತ್ರವನ್ನು ಜನ ಅಂದೇ ಮರೆತರು. ವೆಂಕಟರಾಯಪ್ಪ ಪ್ರೇಕ್ಷಕರನ್ನು ತಲುಪಲಿಲ್ಲ ಎಂಬುದೇ ದುರಂತ.
ರಂಗಪ್ಪ ಮೇಷ್ಟ್ರು, ಚಾಮಯ್ಯ, ಚೋಮನಾಚೆ ಬಾಗಿ ನೋಡಿದಾಗ ಚಾಕ್ಯರ್ ತರದವರನ್ನು ದೃಷ್ಟಿಸಬಹುದು. ಕನ್ನಡ ತೆರೆಗೆ ತಬರ(ತಬರನ ಕಥೆ), ಇರ್ಯ(ಕನಸೆಂಬೋ ಕುದುರೆಯನೇರಿ) ದಕ್ಕಿದ್ದು ಈ ರೀತಿಯ ವಿಶಾಲ ನೋಟದಿಂದ..ಅದರ ವ್ಯಾಪ್ತಿ ಇನ್ನೂ ವಿಸ್ತಾರವಾಗಬೇಕು.
ರಾಜಕೀಯ ಪಲ್ಲಟಗಳು, ಸ್ಥಿತ್ಯಂತರಗಳಿಗೆ ಕನ್ನಡ ಚಿತ್ರರಂಗ ಕಣ್ಣಾಗಿದ್ದು-ಕಿವಿಯಾಗಿದ್ದು ಕಡಿಮೆ. ಕನ್ನಡ ಚಿತ್ರರಂಗದ ಈ ಸ್ಪಂದನಶೀಲತೆಯ ಕೊರತೆಯಿಂದಲೇ ನಮ್ಮಲ್ಲಿನ ಹಲವು ಪ್ರತಿಭೆಗಳು ಸಂಜೆಯ ಹೊತ್ತಿಗೆ ಮೂರು ಮೊಣ ನೇಯ್ದು ತೃಪ್ತವಾಗಬೇಕಾಯಿತು.
ಭರವಸೆ ಆರದಿರಲಿ.
- ರಾಘವನ್ ಚಕ್ರವರ್ತಿ
