ಪುಟ್ಟಣ್ಣ ಕಣಗಾಲ್ ರವರಿಗೆ ಅವಕಾಶಗಳೇ ಇಲ್ಲದ ವೇಳೆ ಶ್ರೀನಾಥ್ ರವರು ತಮ್ಮ ಸ್ನೇಹಿತರೊಡಗೂಡಿ ‘ಮಾನಸ ಸರೋವರ’ ಚಿತ್ರವನ್ನು ನಿರ್ಮಿಸಿದರು. ಈ ಹಿರಿಯ ನಟ ಪ್ರಣಯರಾಜ ಶ್ರೀನಾಥ್ ಅವರಿಗೆ ೮೧ ವರ್ಷ, ಅವರೊಂದಿಗೆ ಕಳೆದ ಸುಮಧುರ ಕ್ಷಣಗಳ ಬಗ್ಗೆ ನಿತಿನ್ ಅಂಕೋಲಾ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಎಲ್ಲರೊಡನೆಯೂ ಸಲಿಲದಂತೆ ಬೆರೆಯುವ ಸ್ನೇಹಜೀವಿ, ವಿವಾದರಹಿತ ಬದುಕಿಗೆ ಮುನ್ನುಡಿ ಬರೆದ ಪಾರದರ್ಶಕ ವ್ಯಕ್ತಿತ್ವದ ಸೂಕ್ಷ್ಮ ಸಂವೇದನಾಶೀಲ ಕಲಾವಿದ, ಪುಟ್ಟ ಮಕ್ಕಳಿನಿಂದ ಹಿಡಿದು ವಯೋವೃದ್ಧರ ತನಕ ಎಲ್ಲಾ ವರ್ಗದ ಅಭಿಮಾನಿಗಳನ್ನು ಸಂಪಾದಿಸಿರುವ ಸೌಜನ್ಯ ನಟ ಪ್ರಣಯರಾಜ ಡಾ.ಶ್ರೀನಾಥ್.

1967ರಲ್ಲಿ ತೆರೆಕಂಡ ‘ಲಗ್ನಪತ್ರಿಕೆ’ ಚಿತ್ರದ ಮೂಲಕ ಕನ್ನಡ ಬೆಳ್ಳಿಲೋಕಕ್ಕೆ ಅಂಬೆಗಾಲಿಟ್ಟು ‘ಮಧುರ ಮಿಲನ’ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕ ನಟನಾಗಿ ತಮ್ಮ ಅಸ್ತಿತ್ವಕ್ಕೆ ಭದ್ರ ಬುನಾದಿ ಹಾಕಿದರು. ಆ ವೇಳೆ ವರನಟ ಡಾ.ರಾಜಕುಮಾರ್ ರವರು ಶತ ಚಿತ್ರಗಳನ್ನು ಪೂರೈಸಿ ಚಿತ್ರರಂಗದಲ್ಲಿ ಆಲದ ಮರವಾಗಿ ಬೆಳೆದಿದ್ದರು.ತಮ್ಮ ವಿಭಿನ್ನ ಅಭಿನಯ ಕೌಶಲ್ಯದಿಂದ ಕಲಾತ್ಮಕ,ಸಾಂಸಾರಿಕ ಮತ್ತು ಮನಕಲುಕುವ ಕಾದಂಬರಿ ಆಧಾರಿತ ಪ್ರೇಮಕಥೆಯುಳ್ಳ ಚಲನಚಿತ್ರಗಳಲ್ಲಿ ಅತಿ ಹೆಚ್ಚಾಗಿ ಅಭಿನಯಿಸಿ ಅಲ್ಲಲ್ಲಿ ಆಕ್ಷನ್ ಚಲನಚಿತ್ರಗಳಲ್ಲಿ ಪಾತ್ರ ನಿರ್ವಹಿಸುತ್ತಾ ತಮ್ಮದೇ ಆದ ಅಭಿಮಾನಿ ವರ್ಗವನ್ನು ಹುಟ್ಟಿಸಿಕೊಂಡು ಪ್ರಣಯರಾಜ ಎಂಬ ಬಿರುದನ್ನು ಗಳಿಸಿ ಕನ್ನಡ ಚಿತ್ರರಂಗದಲ್ಲಿ ದ್ವಿತೀಯರಾಗಿ ಶತಚಿತ್ರಗಳನ್ನು ಪೂರೈಸಿದ ನಾಯಕನಟ ಎಂಬ ಹೆಗ್ಗಳಿಕೆಗೆ ಪಾತ್ರರಾದರು.ಕನ್ನಡ ಚಿತ್ರೋದ್ಯಮ ಹಮ್ಮಿಕೊಂಡಿದ್ದ ‘ಶತಚಿತ್ರನಟ ಶ್ರೀನಾಥ್ ಸನ್ಮಾನ’ ಸಮಾರಂಭದಲ್ಲಿ ವರನಟ ಡಾ.ರಾಜಕುಮಾರ್ ರವರ ಅಮೃತ ಹಸ್ತದಿಂದ ಅಭಿನಯ ಚಕ್ರವರ್ತಿ ಎಂದು ಬಿರುದು ನೀಡಲಾಯಿತು.
ಹಣದ ಆಮಿಷವಿಲ್ಲದೆ ನಿರ್ಮಾಪಕರ ಒಳಿತಿಗೆ ಯಾವುದೇ ಪಾತ್ರ ಬಂದರು ಅದನ್ನು ವಿನಮ್ರತೆಯಿಂದಲೇ ಬಣ್ಣ ಹಚ್ಚುತ್ತಿದ್ದ ಶ್ರೀನಾಥ್ ರವರು ಬರೋಬ್ಬರಿ ನೂರ ತೊಂಬತ್ತೆಂಟು ಚಲನಚಿತ್ರಗಳಲ್ಲಿ ನಾಯಕ ನಟನಾಗಿ ಅಭಿನಯಿಸುತ್ತಾ ಯುವ ನಟರ ಪ್ರವೇಶವಾಗುತ್ತಿದ್ದಂತೆ ಚಿಕ್ಕ ಪಾತ್ರಗಳ ಬಗ್ಗೆ ಲೆಕ್ಕ ಹಾಕದೆ ಸ್ನೇಹಕ್ಕೆ ಆತ್ಮೀಯತೆ ಬೆಲೆಕೊಟ್ಟು ಎರಡನೇ ನಾಯಕ ಪೋಷಕ ಪಾತ್ರ ಖಳ ನಾಯಕನು ಸೇರಿದಂತೆ ಉಳಿದ ನಾಯಕರೊಂದಿಗೆ ಇತರ ಪಾತ್ರಗಳನ್ನು ನಿರ್ವಹಿಸಿದರು. ಇವರ ಬಹುತೇಕ ಸಿನಿಮಾಗಳು ಸ್ತ್ರೀಯರು ಮೆಚ್ಚುವ,ಕುಟುಂಬ ಸಮೇತ ನೋಡುವ ಚಿತ್ರಗಳಾಗಿವೆ.

ಪುಟ್ಟಣ್ಣ ಕಣಗಾಲ್ ರವರಿಗೆ ಅವಕಾಶಗಳೇ ಇಲ್ಲದ ವೇಳೆ ಶ್ರೀನಾಥ್ ರವರು ತಮ್ಮ ಸ್ನೇಹಿತರೊಡಗೂಡಿ ಮಾನಸ ಸರೋವರ ಚಿತ್ರವನ್ನು ನಿರ್ಮಿಸಿದರು. ನಾನು ನಿರ್ಮಾಪಕರಲ್ಲಿ ಒಬ್ಬನಾಗಿರುತ್ತೇನೆ, ಪುಟ್ಟಣ್ಣ ನಾಯಕನ ಪಾತ್ರ ಯಾರಿಗೆ ಬೇಕಾದರೂ ಕೊಡಲಿ ಎಂದು ಸುಮ್ಮನೆ ಇದ್ದರು ಶ್ರೀನಾಥ್. ಆದರೆ ಪುಟ್ಟಣ್ಣನವರು ತನಗೆ ನಿರ್ದೇಶನಕ್ಕೆ ಅವಕಾಶ ನೀಡಿ ಔದಾರ್ಯ ಮೆರೆದ ತನ್ನ ನೆಚ್ಚಿನ ಶಿಷ್ಯ ಶ್ರೀನಾಥ್ ರನ್ನೇ ಚಿತ್ರಕ್ಕೆ ಹೀರೋ ಮಾಡಿ ಸೈ ಎನಿಸಿಕೊಂಡರು.ಡಾ. ಆನಂದ ಪಾತ್ರದಲ್ಲಿ ನೀನೇ ಸಾಕಿದ ಗಿಣಿ ಎಂದು ಭಗ್ನಪ್ರೇಮಿಯಾಗಿ ಮನೋಜ್ಞವಾಗಿ ಅಭಿನಯಿಸಿದ ಶ್ರೀನಾಥ್ ರ ನಟನ ಚಾತುರ್ಯತೆಯ ಇನ್ನೊಂದು ಮಜಲನ್ನು ಪುಟ್ಟಣ್ಣ ವಿಭಿನ್ನವಾಗಿ ತೋರಿಸಿ ಕನ್ನಡ ಸಿನಿ ಅಧ್ಯಾಯದಲ್ಲಿ ಬ್ರಾಂಡ್ ಮಾರ್ಕ್ ಆಗಿದ್ದು ಇತಿಹಾಸ.ಧರಣಿ ಮಂಡಲ ಮಧ್ಯದೊಳಗೆ,ಶಿಖಾರಿ, ದಿಗ್ವಿಜಯ,ಬಾಳೊಂದು ಭಾವಗೀತೆ,ಸುಳಿ ಇವೆಲ್ಲವೂ ಇವರ ನಿರ್ಮಾಣದ ಇನ್ನಿತರ ಚಲನಚಿತ್ರಗಳಾಗಿವೆ.ಇನ್ನು ಶ್ರೀನಾಥ್ ರ ಚಿತ್ರದ ಹಾಡುಗಳ ಕುರಿತು ಹೇಳೋದಾದರೆ ಸಂಗೀತಪ್ರಿಯರಿಗೆ ಜೇನ ಹನಿ ಸವಿದ ಹಾಗೆ.ಕೆಲವೊಂದು ಚಿತ್ರಗೀತೆಗಳು ಯುಗ ಯುಗಕ್ಕೂ ಸಲ್ಲುವ ಗೀತೆಗಳು ಎಂದರೆ ಅತಿಶಯೋಕ್ತಿಯಾಗಲಾರದು. ಅರ್ಥಗರ್ಭಿತ ಪದಪುಂಜಗಳಿಂದ ಕೂಡಿದ ಸಾಹಿತ್ಯ ಕರ್ಣ ಮನೋಹರವಾಗಿ ಸಂಯೋಜಿಸಿದಂತಹ ಸಂಗೀತದ ಲಾಲಿತ್ಯ ಇವೆರಡು ಮಿಶ್ರಣಗೊಂಡು ಶ್ರೀನಾಥ್ ಚಲನಚಿತ್ರದ ಹಾಡುಗಳಲ್ಲಿ ಸಾಕ್ಷಾತ್ಕಾರಗೊಂಡಿವೆ.
ಬೆಸುಗೆ ಚಿತ್ರಕ್ಕೆ ಫಿಲಂ ಫೇರ್ ಪ್ರಶಸ್ತಿ,ಶ್ರೀ ರಾಘವೇಂದ್ರ ವೈಭವ ಚಿತ್ರಕ್ಕೆ ಶ್ರೇಷ್ಠ ನಟ ರಾಜ್ಯ ಪ್ರಶಸ್ತಿ,ಕಲಾರತ್ನ ಪ್ರಶಸ್ತಿ,ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ,ಜೀವಮಾನ ಸಾಧನೆಗೆ ಡಾ. ರಾಜಕುಮಾರ್ ಪ್ರಶಸ್ತಿ ಹಾಗೆ ಈ ವರ್ಷ ಆಗಸ್ಟ್ ನಲ್ಲಿ ನಲವತ್ತೇಳು ವರ್ಷಗಳ ಬಳಿಕ ಜೀವಮಾನ ಸಾಧನೆಗೆ ಫಿಲಂ ಫೇರ್ ಪ್ರಶಸ್ತಿ ಮೊದಲಾದ ಉನ್ನತ ಪ್ರಶಸ್ತಿಗಳ ಸರಮಾಲೆಯು ಶ್ರೀನಾಥ್ ರ ಮುಡಿಗೇರಿದೆ.ಉದಯ ಟಿವಿಯಲ್ಲಿ ಪ್ರಸಾರಗೊಳ್ಳುತ್ತಿದ್ದ ‘ಆದರ್ಶ ದಂಪತಿಗಳು’ ಕಾರ್ಯಕ್ರಮದಿಂದಾಗಿ ಶ್ರೀನಾಥ್ ಕನ್ನಡ ಜನತೆಯ ಕುಟುಂಬ ಸದಸ್ಯರಾಗಿ ಬಿಟ್ಟರು.ಆದರ್ಶ ದಂಪತಿಗಳು ಅಂದ್ರೆ ಶ್ರೀನಾಥ್ ಶ್ರೀನಾಥ್ ಅಂದ್ರೆ ಆದರ್ಶ ದಂಪತಿಗಳು ಅನ್ನೋ ಮಟ್ಟಿಗೆ ಕಾರ್ಯಕ್ರಮ ಜನಪ್ರಿಯತೆ ಪಡೆದಿತ್ತು.ಕಿರುತೆರೆಯಲ್ಲಿ ಕೆಲವೊಂದು ಧಾರಾವಾಹಿಗಳನ್ನು ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದರು.ಇನ್ನು ಮೂರು ವರ್ಷಗಳು ಕಳೆದರೆ ಶ್ರೀನಾಥ್ ರ ಚಿತ್ರ ಜೀವನಕ್ಕೆ ಅರವತ್ತು ವರ್ಷಗಳು ತುಂಬಲಿವೆ.
ನಾನು ಕೆಲಸದಲ್ಲಿ ಎಷ್ಟೇ ಬ್ಯುಸಿ ಇದ್ದರು ತಮ್ಮನ್ನು ಭೇಟಿ ಮಾಡಲು ಮನೆ ವಿಳಾಸ ಅರಸಿ ಬಂದವರಿಗೆ ಸ್ವಲ್ಪ ಸಮಯ ನೀಡಿ ಮಾತನಾಡಿ ಕಳಿಸುವ ನಿಗರ್ವಿ. ತುಂಬು ಜೀವನದ ಮೆಟ್ಟಿಲೇರುತ್ತಿರುವ ಹಿರಿಯ ನಟ ಪ್ರಣಯರಾಜ ಶ್ರೀನಾಥ್ ಅವರು 81ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಅವರ ಮುಂದಿನ ಜೀವನದಲ್ಲಿ ಸಂತೋಷ,ಸಂಭ್ರಮ,ಆರೋಗ್ಯ ಮನೆ ಮಾಡಲಿ..
- ನಿತಿನ್ ಅಂಕೋಲಾ
