ಲೇಖಕರಾದ ಜಯರಾಮಚಾರಿ ಅವರ ‘ಪ್ರೀತಿಲಿ ಬಿದ್ದ ಪಾಪಸ್ಕಳ್ಳಿ’ ಕೃತಿಯ ಕುರಿತು ಕಾರ್ತಿಕ್ ಕೃಷ್ಣ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ …
ಪುಸ್ತಕ : ಪ್ರೀತಿಲಿ ಬಿದ್ದ ಪಾಪಸ್ಕಳ್ಳಿ
ಲೇಖಕರು : ಜಯರಾಮಚಾರಿ
ಬೆಲೆ : ೧೫೦.೦೦
ಪ್ರಕಾಶನ : ಸಸಿ ಪ್ರಕಾಶನ
ಜಯರಾಮಚಾರಿ ಅವರ ಕಥೆಗಳು ನನಗೆ ಹಲವು ಕಾರಣಗಳಿಂದ ವಿಶೇಷ ಅನ್ನಿಸುತ್ತವೆ. ಸಾಮಾನ್ಯವಾಗಿ ಅವರ ಕಥೆಗಳಲ್ಲಿ ಪಾತ್ರಗಳು ‘ನಾನು ತೀರಾ ಸಾದಾ ಸೀದಾ’ ಎಂಬ ಮುಖವಾಡ ಹಾಕಿಕೊಂಡು ಓದುಗರ ದಾರಿ ತಪ್ಪಿಸುವುದಿಲ್ಲ. ಅವರ ಕಥೆಗಳಲ್ಲಿ ಭಾವನೆಗಳನ್ನು ಗುಡ್ಡೆ ಹಾಕಿಕೊಂಡು ದೇವದಾಸನಾಗುವ ಪಾತ್ರಗಳೂ ಇಲ್ಲ. ಇದ್ದರೂ ಬಹಳ ಕಡಿಮೆ. ಬದಲಿಗೆ, ಅವರ ಪಾತ್ರಗಳು ತುಂಬಾ Expressive. ತಮ್ಮ ಪ್ರೀತಿ, ಸೆಳೆತ ಮತ್ತು ಬಯಕೆಗಳನ್ನು ನೇರವಾಗಿ ಹೇಳಿಕೊಳ್ಳುವ, ಅದನ್ನು ಪಡೆಯಲು ಪ್ರಾಮಾಣಿಕ ಪ್ರಯತ್ನ ಮಾಡುವ ಜೀವಂತಿಕೆ ಅವುಗಳಿಗಿರುತ್ತವೆ.

ಕಥೆಗಳ ವೈಶಿಷ್ಟ್ಯ –
ಅನಿರೀಕ್ಷಿತ ತಿರುವುಗಳು: ಅವರ ಕಥೆಗಳು ಹುಟ್ಟುವ ಸಂದರ್ಭಗಳೇ ತುಂಬಾ ಡಿಫರೆಂಟ್. ಕಥೆ ಬೆಳೆಯುವ ಹಾದಿಯಲ್ಲಿ ಯಾವುದೋ ದೊಡ್ಡ ಯುದ್ಧ ನಡೆದೇ ಹೋಗುತ್ತದೆ ಎಂದು ಓದುಗ ನಿರೀಕ್ಷಿಸುವ ಹೊತ್ತಿಗೆ, ತುಂಬಾ ಹದವಾಗಿ ‘ಶಾಂತಿ ಸಂಧಾನ’ ನಡೆದುಹೋಗಿರುತ್ತದೆ.
ಸರಳ ಕಥನ ಶೈಲಿ: ಅರಗಿಸಿಕೊಳ್ಳಲು ಕಷ್ಟವಾಗುವ ಪದಗಳಾಗಲಿ ಅಥವಾ ಭಾರವಾದ ರೂಪಕಗಳ ಹಂಗಾಗಲಿ ಅವರಿಗಿಲ್ಲ. ನಮ್ಮ ಪಕ್ಕದಲ್ಲೇ ಕುಳಿತು ಕಥೆ ಹೇಳಿದಂತೆ ಅನಿಸುವ ಶೈಲಿಯೇ ಅವರ ಕಥನದ ಅಸಲಿ ಶಕ್ತಿ.
***
ಅವರ ಹೊಸ ಕಥಾ ಸಂಕಲನ, ಪ್ರೀತಿಲಿ ಬಿದ್ದ ಪಾಪಸ್ಕಳ್ಳಿ ಓದಿ ಮುಗಿಸಿದೆ. ಅವರದೇ ಮಾತಿನಲ್ಲಿ ಹೇಳುವುದಾದರೆ, ಅವರ ಕಥಾ ಬಾರಿನಲ್ಲಿ ಹೊಸ ವೈನುಗಳು ಹುಟ್ಟಿಕೊಂಡಿವೆ. ಅವರ signature ಶೈಲಿಯ ಕಥೆಗಳು ಇಲ್ಲೂ ಇವೆ. ಪ್ರೀತಿ, ಪ್ರೇಮ, ಸೆಳೆತ, ತಿರಸ್ಕಾರ, ಮಾಡರ್ನ್ ಕಾಮನೆ, ಟ್ವಿಸ್ಟು, ಫ್ಯಾಂಟಸಿ ಎಲ್ಲವೂ ಇವೆ. ಒಂದೇ ಮರದ ಕೊಂಬೆಗಳಂತೆ ಇಲ್ಲಿನ ಕಥೆಗಳು. ಪ್ರೀತಿಯೇ ಅದರ ಬೇರು.

ನನಗೆ ವೈಯಕ್ತಿಕವಾಗಿ ‘ಕಾಪುಚಿನೋ’ ಕಥೆ ತುಂಬಾ ಕನೆಕ್ಟ್ ಆಯ್ತು. ಯಾಕಂದ್ರೆ i have lived that experience. ‘ಮತ್ತೆ ಮಾಂಡೋವಿ’ ಮತ್ತಷ್ಟು ಕಾಡಿದರೆ, ‘ಡರ್ಟಿ ಟಾಕ್’ ಓದಿ ಸಿಕ್ಕಾಪಟ್ಟೆ ನಗು ಬಂತು. ‘ಸಿಟಿ ಆಫ್ ಸ್ಟಾರ್ಸ್’ ಓದುಗನನ್ನು ರಂಗಶಂಕರದಲ್ಲಿ ಅಲೆದಾಡಿಸಿದರೆ, ‘ಕಾರ್ನರ್ ಕಪಲ್’ ಮೊದಲು ಕಚಗುಳಿ ನೀಡಿ ಕೊನೆಯಲ್ಲಿ ಗಂಭೀರವಾಯಿತು.
ಒಟ್ನಲ್ಲಿ ಹೇಳೋದಾದ್ರೆ, ಇದೊಂದು ‘ರಿಫ್ರೆಶಿಂಗ್ ರೀಡ್’. ಹೊಸ ತರದ ಕಥೆಗಳನ್ನು ಹುಡುಕುವವರಿಗೆ ಇದು ಹೇಳಿ ಮಾಡಿಸಿದ ಪುಸ್ತಕ. ಆದರೆ ಒಂದು ಕಂಡೀಶನ್ — ನಿಮ್ಮ ಮಡಿವಂತಿಕೆಯನ್ನು ಸೈಡ್‌ಗೆ ಇಟ್ಟು, ಪಾತ್ರದ ಕಣ್ಣಲ್ಲಿ ಕಥೆಯನ್ನು ನೋಡಿ ಓದಬೇಕು, ಆಗ ಕಥೆಗಳು ಇನ್ನೂ ಹತ್ತಿರವಾಗುತ್ತವೆ.
- ಕಾರ್ತಿಕ್ ಕೃಷ್ಣ
