‘ಪ್ರಿಯೇ ಚಾರುಶೀಲೆ’ ಕೃತಿ ಪರಿಚಯ

ನಾಗರಾಜ ವಸ್ತಾರೆಯವರ ಎಲ್ಲರೂ ಲೇಖಕರ ನೂತನ ಕೃತಿ ನಿಯುಕ್ತಿ ಪುರಾಣ ಓದುತ್ತಿರುವಾಗ ನಾನು ಈ ಹಿಂದಿನ ಕಾದಂಬರಿಯಾದ ಚಾರುಶೀಲೆಯೊಂದಿಗಿದ್ದೆ. ಈ ತರಹದ ಭಾಷಾ ಸಮೃದ್ಧ ಕಾದಂಬರಿ ನಾ ಓದಿಯೇ ಇರಲಿಲ್ಲ. ಲೇಖಕಿ ರಶ್ಮಿ ಉಳಿಯಾರು ಈ ಕೃತಿಯ ಕುರಿತು ತಮ್ಮ ಅಭಿಪ್ರಾಯವನ್ನು ಓದುಗರ ಮುಂದೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಪುಸ್ತಕ : ಪ್ರಿಯೇ ಚಾರುಶೀಲೆ
ಲೇಖಕರು : ನಾಗರಾಜ ವಸ್ತಾರೆ
ಪ್ರಕಾಶಕರು : ಛಂದ ಪುಸ್ತಕ (೨೦೧೯)
ಪುಟಗಳು: ೩೧೬ 
ಬೆಲೆ : ₹೨೯೫/-

ಪದ್ಯವೊಂದು ಗದ್ಯವಾದರೆ ಬಹುಶಃ ಹೀಗಿರುತ್ತದೇನೋ…!! ಆಹಾ ಕನ್ನಡ ಭಾಷೆಯ ಸೊಗಸೇ…! ಲೇಖಕರ ಬರವಣಿಗೆಯಲ್ಲಿ ಅದು ಬಳುಕಿ, ಕುಲುಕಿ, ಸುತ್ತಿ, ಸುಳಿದು, ಪಲುಕಿ, ಮುದದಿಂದ ನಲಿಯುವ ಪರಿಯನ್ನು ಓದಿಯೇ ಸವಿಯಬೇಕು. ಹೌದು, ಎಲ್ಲರೂ ವಸ್ತಾರೆಯವರ ನೂತನ ಕೃತಿ ನಿಯುಕ್ತಿ ಪುರಾಣ ಓದುತ್ತಿರುವಾಗ ನಾನು ಈ ಹಿಂದಿನ ಕಾದಂಬರಿಯಾದ ಚಾರುಶೀಲೆಯೊಂದಿಗಿದ್ದೆ. ಹೀಗೂ ಕನ್ನಡವನ್ನು ಬಳಕೆ ಮಾಡಬಹುದು ಎನ್ನುವುದು ತಿಳಿದೇ ಇರಲಿಲ್ಲ. ಅಸಲಿಗೆ ಈ ತರಹದ ಭಾಷಾ ಸಮೃದ್ಧ ಕಾದಂಬರಿ ನಾ ಓದಿಯೇ ಇರಲಿಲ್ಲ. ಅನೇಕ ಶಬ್ದಗಳನ್ನು ಹೀಗೂ ಬಳಸಬಹುದು ಅನ್ನುವುದು ಅಚ್ಚರಿ ಮೂಡಿಸಿತು. ಆ ಅಚ್ಚರಿಯೊಂದಿಗೆ ಚಾರುಶೀಲೆ ಒಳಗೆ ಸೆಳೆದು ಕರೆದೊಯ್ಯುತ್ತದೆ.

ಐಳನ್ ಧೀಮಣಿ ಮರುನ್ನದಿ ಎಂಬ ವಿಭಿನ್ನ ಹೆಸರುಳ್ಳ ಅಷ್ಟೇ ವಿಶಿಷ್ಟ ವ್ಯಕ್ತಿತ್ವದ ಮನಮೋಹಕ ಸೊಗಸುಗಾರ ತಾನೇ ಕಥಾನಾಯಕನಾಗಿ ನಿರೂಪಿಸುತ್ತಾ ಹೋಗುವ ಇದೊಂದು ಆಧುನಿಕ ಪ್ರೇಮ ಕಥೆ. ಆದರೆ ಬರಿ ಪ್ರೇಮಕಥೆಯಷ್ಟೇ ಅಲ್ಲ. ಅದಕ್ಕೂ ಮಿಗಿಲಾದದ್ದು ಇದರಲ್ಲಿದೆ.

ಸಾಧಾರಣವಾಗಿ ಬರೆದಿದ್ದರೆ ಈಗಣ ವೆಬ್ ಸೀರೀಸ್ಗಳಲ್ಲಿ ಕಾಣ ಸಿಗುವಂತಹ ದಿಢೀರ್ ಪರಿಚಯ, ಸಲಿಗೆ, ಪ್ರೀತಿ, ಪ್ರೇಮ, ಪ್ರಣಯದ ಕಥೆಯ ಒಂದು ದಿನದ ಕಥಾವಸ್ತುವನ್ನು ಅಸಾಧಾರಣವಾಗಿಸಿದ್ದು ಇದರ ಕಾನ್ವಾಸ್. ಕಥೆಗೆ ಆರಿಸಿಕೊಂಡ ಒಡಿಸ್ಸಾದ ಪುರಿ ಜಗನ್ನಾಥ ದೇವಾಲಯದ ರಥಯಾತ್ರೆ, ಐಳನೆಂಬವನ ವಾಹ್ ಎನ್ನಿಸುವಂತಹ ಚಿತ್ರಣ ಮತ್ತು ಎಲ್ಲಕ್ಕಿಂತ ಮಿಗಿಲಾಗಿ ಭಾಷೆಯನ್ನು ಬಹು ಸುಂದರವಾಗಿ ದುಡಿಸಿಕೊಂಡ ಲೇಖಕರ ಬೆರಗು ಮೂಡಿಸುವಂತಹ ಅತೀ ಮೋಹಕ ಬರವಣಿಗೆ… ಈ ಎಲ್ಲವೂ ಇದನ್ನು ಒಂದು ನೆನಪಿನಲ್ಲಿ ಉಳಿಯುವಂತಹ ಓದನ್ನಾಗಿಸಿವೆ. ತಮ್ಮ ಪತ್ನಿಯೊಂದಿಗೆ ಪುರಿ ದೇವಾಲಯಕ್ಕೆ ಹೋದ ಸಂದರ್ಭದಲ್ಲಿ ಅಲ್ಲಿನ ಎತ್ತರದ ಶಿಖರದ ಮೇಲೆ ಹಾರಾಡುವ ಧ್ವಜವನ್ನು ಒಂದು ಸಾವಿರ ವರ್ಷಗಳಿಂದಲೂ ನಿತ್ಯವೂ ಏರಿ ಬದಲಾಯಿಸುವ ವಿಚಾರ ಕೇಳಿ ಮೂಡಿದ ಒಂದು ಅನಿಸಿಕೆಯ ಮೇರೆಗೆ ಈ ಕಾದಂಬರಿ ರೂಪು ತಳೆಯಿತು ಎನ್ನುವ ವಿಷಯವನ್ನು ಲೇಖಕರು ಫೇಸ್ಬುಕ್ ಪೋಸ್ಟ್’ನಲ್ಲಿ ಬರೆದುದನ್ನು ಓದಿದೆ. ಅದರಂತೆಯೇ ಲೇಖಕರು ಪುರಿ ದೇಗುಲದ ಹಲವಾರು ಐತಿಹ್ಯಗಳನ್ನು ಮತ್ತು ವಿಶೇಷಗಳನ್ನು ಬರೆಯುತ್ತಾ ನಮಗೂ ಜಗದ್ಭದ್ರ, ಸುಭದ್ರ ಮತ್ತು ಬಲರಾಮರ ದರ್ಶನ ಮಾಡಿಸುತ್ತಾರೆ. ಕಳ್ಳತನವೇ ಇಲ್ಲದ ಪುರಿಯನ್ನು ಪರಿಚಯಿಸುತ್ತಾರೆ.

ಸೊಗಸಾದ ಅದ್ವಿತೀಯ ಮಾತುಗಾರನಾದ ಐಳನ ಆಸಕ್ತಿಗಳೇ ಕುತೂಹಲಕಾರಿ. ಅವನೇ ಹೇಳುವಂತೆ ಅರೆಗನ್ನಡ ಮತ್ತು ಅರೆ ತಮಿಳ ಹುಡುಗ ಅವನು. ಹೀಗೆ ಬೇರೆ ಬೇರೆ ಕಡೆಯ ವಿಭಿನ್ನತೆಯ ಸಂಕರಣಗೊಂಡ ಸಂತತಿ ಒಂದೋ ಬಹು ಸುಂದರ ರೂಪಿಗಳೋ ಇಲ್ಲಾ ಬಹು ಮೇಧಾವಿಗಳೊ ಆಗಿರುವರು ಎಂದೊಮ್ಮೆ ಓದಿದ್ದೆ. ಐಳ ಎರಡನ್ನೂ ಪಡೆದ ಭಾಗ್ಯವಂತ. ಇನ್ನು ಅವನಿಗೆ ಅಕಸ್ಮಾತ್ತಾಗಿ ಸಿಕ್ಕುವ ಮಾತಂಗಿಯೂ ಅತೀ ರೂಪಸಿ. ಅಪ್ರತಿಮ ನೃತ್ಯಗಾತಿ, ದಿಟ್ಟೆ. ಹಾಗೆ ನೋಡಿದರೆ ಅವಳ ಹೆಸರು ಮಾತಂಗಿಯೂ ಅಲ್ಲ. ಇಬ್ಬರೂ ಸಹ ತಮ್ಮದೇ ಆದ ಉದ್ದೇಶ ಹೊತ್ತು ಪುರಿಗೆ ಬಂದಿರುತ್ತಾರೆ. ಅವೇನು…?? ನೀವೇ ಓದಬೇಕು.

ಐಳನ ಅಭಿರುಚಿಗಳೋ ಹತ್ತಾರು. ಪಾಕ ತಜ್ಞ, ಟಿ.ವಿ ಶೋ ನಿರೂಪಕ, ವೆಬ್ ಸೀರೀಸ್ ಕೃರ್ತ, ಸಂಗೀತಗಾರ, ಭಾಷಾ ಪಂಡಿತ, ಸ್ಥಳದಲ್ಲೇ ಪದಕಟ್ಟಿ ಹಾಡಬಲ್ಲ ಚತುರ, ಬರಹಗಾರ, ಬಹು ವಿಷಯಗಳ ಬಗ್ಗೆ ಅಸಾಮಾನ್ಯ ಗ್ರಹಣ ಶಕ್ತಿ ಉಳ್ಳವ, ಪ್ರವಾಸಿಗ… ಹೀಗೆ… ಸಂಗತಿಗಳನ್ನು ಒರೆಗೆ ಹಚ್ಚಿ ನೋಡಬಲ್ಲ ಅತೀವ ಬುದ್ಧಿವಂತ. ಅಷ್ಟೇ ಅಲ್ಲ. ಭಾವುಕ ಸಹ. ಜಯದೇವ ಬರೆದ ಗೀತ ಗೋವಿಂದದ ಸಾಲುಗಳ ಉಲ್ಲೇಖ, ಅವಕ್ಕೆ ಐಳ ನೀಡುವ ಚೆಲುವಾದ ವ್ಯಾಖ್ಯಾನಗಳು ಅಲ್ಲದೇ ಅವನೇ ಕಟ್ಟುವ ಪದ್ಯದ ಸಾಲುಗಳು ಮನಸೂರೆಗೊಳ್ಳುತ್ತವೆ. ಪ್ರಿಯೇ ಚಾರುಶೀಲೆ ಎಂಬ ಶೀರ್ಷಿಕೆ ಸಹ ಅದೇ ಜಯದೇವ ಬರೆದ ಸಾಲುಗಳಿಂದ ಆಯ್ದದ್ದು.ಇಂತಿಪ್ಪ ಐಳ ಹಲವು ಸಲ ಫಿಲಾಸಫರ್ ಸಹ ಆಗುತ್ತಾನೆ. ಅವನ ಅಲೋಚನೆಗಳು ಪ್ರವಾಹದಂತೆ ನುಗ್ಗಿ ಬರುತ್ತವೆ.

ಇನ್ನು ಐಳ ಬರೆದ:

ಮೊದಲೆಂಬ ಮೊದಲಿಗೂ ಮೊದಲಾದುದೇನು
ತೊದಲೆಂಬ ತೊದಲಿನ ತೊದಲಾದರೂ ಏನು?….

ಹಗಲಿನ ಕೊನೆ ಮೊದಲು ಕರಿಗತ್ತಲ ಕಾನು!
ಹೆಗಲಿನ ಹೊರೆ ತಾನು ಬರಿಬತ್ತಲ ಬಾನು!

ಮತ್ತು

ಎಳೆ ಎಳೆ… ಇನ್ನೂ ಎಳೆ. ಹಿಗ್ಗಾ ಮುಗ್ಗಾ ಎಳೆ…
ಇನ್ನಷ್ಟು ಎಳೆ… ಎಳೆಯುವುದರಿಂದ ಅದು ಹತ್ತಿರವಾಗುತ್ತದೆ.
ಹಾಗೇ, ನೀನೂ ಅದಕ್ಕೆ! ಅದರ ಹತ್ತಿರಕ್ಕೆ! ಒಳ ಸನ್ನಿಧಾನಕ್ಕೆ! ಹೀಗಿನವುಗಳು ಮತ್ತೆ ಮತ್ತೆ ಓದಿಸಿಕೊಳ್ಳುತ್ತವೆ.

ಕಥೆಯನ್ನು ನಾನು ಹೇಳುವುದಿಲ್ಲ. ನೀವಿದನ್ನು ಇದರ ಓಘವನ್ನು ಸ್ವತಃ ಓದಿಯೇ ಸವಿದುಣ್ಣಬೇಕು. ಹಾ, ಒಂದೇ ಗುಕ್ಕಲ್ಲಿ ಮತ್ತು ಅವಸರದಲ್ಲಿ ಓದುವ ಓದು ಖಂಡಿತವಾಗಿ ಇದಲ್ಲ. ಇಷ್ಟಿಷ್ಟೇ ಚಪ್ಪರಿಸುವಂತದ್ದು. ‘ಒನ್ನಮೂನೆ’ ಬಹಳ ಇಷ್ಟವಾದ ಕಾದಂಬರಿ. ನಾಯಕ ಐಳನಂತೂ ನನಗೆ ಬಹುಕಾಲ ಸ್ಮೃತಿಯಲ್ಲಿ ಉಳಿಯುತ್ತಾನೆ.

ಪುಟ್ಟ ಕೊಸರು: ಕಾದಂಬರಿ ಈಗ ಐದು ವರ್ಷಗಳ ಹಿಂದಿನದ್ದು. ಅಂದರೆ ಸ್ಮಾರ್ಟ್ ಫೋನ್, ಯೂಟ್ಯೂಬ್ ಕಾಲದ್ದೇ. ಹಾಗಿದ್ದೂ ಒಂದು ಹಂತದಲ್ಲಿ ಐಳ ತನ್ನ ಪ್ರೇಯಸಿಯ ಕುರಿತು ಬಗೆ ಬಗೆಯಲ್ಲಿ ಗೂಗಲ್ ಮಾಡಿದಾಗ ಏನೆಂದರೆ ಏನೂ ಸಿಗದೇ ಹೋಗುವುದು ಅತಾರ್ಕಿಕವಾಯ್ತೇನೋ ಅಂತ ಅನ್ನಿಸಿತು. ಈ ಪುಸ್ತಕದ ಓದು ನಿಮಗೆ ಹಿಡಿಸುವುದರಲ್ಲಿ ನನಗಂತೂ ಸಂಶಯವಿಲ್ಲ. ಪುರುಸೊತ್ತಲ್ಲಿ ಓದಿ ನೋಡಿ.

ಧನ್ಯವಾದಗಳು


  • ರಶ್ಮಿ ಉಳಿಯಾರು

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW