ಪ್ರಾಧ್ಯಾಪಕನ ಪೀಠದಲ್ಲಿ ಕುಳಿತಾಗ – ಪ್ರಸನ್ನ ಕುಮಾರ್ ಸಂತೇಕಡೂರು

ಜೆಎಸ್ಎಸ್ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಪ್ರಾಧ್ಯಾಪಕನಾಗಿ ಪದೋನ್ನತಿ ಪಡೆದಿದ್ದು, ಈಗ ಸಂಪೂರ್ಣವಾಗಿ ಪ್ರೊಫೆಸರ್ ಪ್ರಸನ್ನ ಕುಮಾರ್ ಸಂತೇಕಡೂರು ಆಗಿದ್ದೇನೆ. ಇಲ್ಲಿ ನಮ್ಮ ಸಂಸ್ಥೆಯ ಹಲವರನ್ನ ನೆನೆಯಬೇಕು, ಆದರೆ ಎಲ್ಲರ ಹೆಸರನ್ನ ನಮೂದಿಸುವುದು ಕಷ್ಟದ ಕೆಲಸ.ಪ್ರಸನ್ನ ಸಂತೇಕಡೂರು ಅವರ ಸಾಧನೆಯ ಹಾದಿಯ ಕುರಿತು ಅವರ ಸ್ವಲಿಖಿತ ಲೇಖನವನ್ನು ತಪ್ಪದೆ ಮುಂದೆ ಓದಿ….

ಸುಮಾರು ಮೂವತ್ತು ವರ್ಷಗಳ ಕೆಳಗೆ ಶಿವಮೊಗ್ಗದ ಹೃದಯ ಭಾಗದಲ್ಲಿರುವ ಮಕ್ಕಳ ವಿದ್ಯಾ ಸಂಸ್ಥೆಯ ಮಹಾತ್ಮ ಗಾಂಧಿ ಪಾರ್ಕ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏಳನೇ ತರಗತಿ ಓದುತ್ತಿದ್ದೆ. ಅಲ್ಲಿ ಓದಿನಲ್ಲಿ ಮತ್ತು ಸಾಮಾನ್ಯ ಜ್ಞಾನದಲ್ಲೂ ಬಹಳ ಮುಂದೆ ಇದ್ದ ನನ್ನ ಸಹಪಾಠಿ ಹುಡುಗಿಯೊಬ್ಬಳಿದ್ದಳು. ಆರನೇ ತರಗತಿಯಲ್ಲಿ ಮೊದಲ ರ‍್ಯಾಂಕ್‌ ಬಂದಿದ್ದ ಅವಳಿಗೆ ಅಲ್ಲಿನ ಶಿಕ್ಷಕಿಯರೆಲ್ಲರೂ ತುಂಬಾ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು. ಅವರ ತಂದೆ ಅವಳನ್ನ ಅಟ್ಲಾಸ್ ಸೈಕಲ್ ಮೇಲೆ ಕುವೆಂಪು ರಸ್ತೆಯಲ್ಲಿದ್ದ ತಮ್ಮ ಮನೆಯಿಂದ ಶಾಲೆಗೆ ಕರೆದುಕೊಂಡು ಬಂದು ಬಿಟ್ಟು ತಮ್ಮ ಕೆಲಸಕ್ಕೆ ಹೋಗುತ್ತಿದ್ದರು. ಅವರನ್ನ ನೋಡಿದರೆ ಆ ಕಾಲದ ಸಾಹಿತಿಗಳ ಹಾಗೆ ಖಾದಿ ಜುಬ್ಬಾ ಹಾಕಿಕೊಂಡು ಒಂದು ಕಡೆ ಹೆಗಲಿನಲ್ಲಿ ಬಟ್ಟೆಯ ಬ್ಯಾಗನ್ನು ನೇತುಹಾಕಿಕೊಂಡಿರುತ್ತಿದ್ದರು. ಕೆಲವೊಮ್ಮೆ ಅವರು ತರಗತಿಯ ಒಳಗೆ ಬಂದು ತಮ್ಮ ಮಗಳನ್ನ ಕರೆದುಕೊಂಡು ಹೋಗುತ್ತಿದ್ದರು. ಅವರು ಶಾಲೆಯ ಒಳಗೆ ಬಂದಾಗ ಅಲ್ಲಿನ ಎಲ್ಲಾ ಶಿಕ್ಷಕಿಯರು ಅವರಿಗೆ ತುಂಬಾ ಗೌರವ ನೀಡುತ್ತಿದ್ದರು. ಕೆಲವು ಶಿಕ್ಷಕಿಯರು ಅವರನ್ನ ಭೌತಶಾಸ್ತ್ರದ ಬಹು ದೊಡ್ಡ ಪ್ರಾಧ್ಯಾಪಕರು ಹಾಗು ಅಮೇರಿಕಾದ ಕ್ಯಾಲ್ಟೆಕ್ (California Institute of Technology) ಅಲ್ಲಿ ಪಿಎಚ್.ಡಿ. ಮಾಡಿದ್ದಾರೆ ಎಂದು ಇನ್ನು ಕೆಲವರು ಎಂ.ಐ.ಟಿ.(Massachusetts Institute of Technology)ಯಲ್ಲಿ ಪಿಎಚ್.ಡಿ. ಮಾಡಿದ್ದಾರೆ ಎಂದು ತಮ್ಮ ತಮ್ಮಲ್ಲಿಯೇ ಮಾತನಾಡಿಕೊಳ್ಳುತ್ತಿದ್ದರು. ನನ್ನ ಗೆಳೆಯ ಮತ್ತು ಸಹಪಾಠಿ ಬಿ.ಎಂ. ಸತೀಶ ಇದೆ ಪ್ರಾಧ್ಯಾಪಕರು ಇಂಗ್ಲೆಂಡಿನ ಕೇಂಬ್ರಿಡ್ಜ್‌‌‌‌‌‌‌‌‌‌‌ ವಿಶ್ವವಿದ್ಯಾನಿಲಯ ಮತ್ತು ಜರ್ಮನಿಯ ಮ್ಯಾಕ್ಸ್ ಪ್ಲ್ಯಾಂಕ್ ಸಂಸ್ಥೆಗಳಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿದ್ದಾರೆಯಂತೆ ಎಂದು ತಿಳಿಸಿದ್ದ. ಆ ಪ್ರಾಧ್ಯಾಪಕರ ಬಗ್ಗೆ ಒಂದು ರೀತಿ ಹಲವು ದಂತಕತೆಗಳು ಹುಟ್ಟಿಕೊಂಡಿದ್ದವು ಎಂದು ಹೇಳಬಹುದು.

ಅಂದಿನಿಂದ ಆ ಪ್ರಾಧ್ಯಾಪಕರ ಚಿತ್ರ ನನ್ನ ಸ್ಮೃತಿಪಟಲದಲ್ಲಿ ಹಾಗೆ ಉಳಿಯಿತು. ಅವರ ಹಾಗೆ ನಾನು ದೊಡ್ಡ ಪ್ರೊಫೆಸರ್ ಆಗಬೇಕೆಂಬ ಆಸೆ ಮೂಡಿತು. ಅವರು ಶಿವಮೊಗ್ಗದ ಪ್ರತಿಷ್ಠಿತ ದೇಶಿಯ ವಿದ್ಯಾ ಸಂಸ್ಥೆಯ ಪದವಿ ಪೂರ್ವ ಮತ್ತು ಪದವಿ ಕಾಲೇಜುಗಳಲ್ಲಿ ಭೌತಶಾಸ್ತ್ರದ ಪ್ರಾಧ್ಯಾಪಕರಾಗಿದ್ದರು. ಖ್ಯಾತ ಲೇಖಕರಾಗಿರುವ ಪ್ರೊಫೆಸರ್ ರಹಮತ್ ತರೀಕೆರೆಯವರ ಒಂದು ಕಾಲದ ಸಹೋದ್ಯೋಗಿಯಾಗಿದ್ದರು. ಈಗ ಆ ಪ್ರೊಫೆಸರ್ ಇತ್ತೀಚೆಗೆ ತೀರಿ ಹೋಗಿದ್ದಾರೆ ಎಂದು ಅನಿಸುತ್ತೆ.

ನಾನು ಪ್ರೌಢಶಾಲೆಯಲ್ಲಿ ಓದುತ್ತಿದ್ದಾಗ ನಮ್ಮ ಊರಿನ ಹಿರಿಯ ಗೆಳೆಯ ಗೋಪಿ ಶಿವಮೊಗ್ಗದ ಸಹ್ಯಾದ್ರಿ ವಿಜ್ಞಾನ ಕಾಲೇಜಿನಲ್ಲಿ ಬಿ.ಎಸ್ಸಿ. ಓದುತ್ತಿದ್ದ. ಆಗ ಅವರಿಗೆ ಅನಂತಮೂರ್ತಿಯವರ ಏಳು ಉತ್ತಮ ಕತೆಗಳನ್ನ ಆಯ್ದು ಬಿ.ಎಸ್ಸಿ.ಗೆ ಪಠ್ಯಮಾಡಿದ್ದರು ಎಂದು ನೆನಪು. ಅದೇ ಸಮಯಕ್ಕೆ ಗೋಪಿ ದೇವನೂರು ಮಹಾದೇವರ “ಅಮಾಸ” ಮತ್ತು ಬೆಸಗರಹಳ್ಳಿ ರಾಮಣ್ಣನವರ “ಗಾಂಧಿ” ಕತೆಯ ಬಗ್ಗೆ ನನಗೆ ತಿಳಿಸಿದ್ದ. ಜೊತೆಗೆ ರಾಮಚಂದ್ರದೇವ ಅವರ ಮೂಗೇಲ ಮತ್ತು ಇತರ ಕತೆಗಳು ಪುಸ್ತಕ ನೀಡಿದ್ದ. ಅವನು ಬಿ.ಎಸ್ಸಿ.ಯ ನಂತರ ಎಂ.ಎಸ್ಸಿ. ಮಾಡಬೇಕು. ಆ ಮೇಲೆ ಪಿಎಚ್.ಡಿ. ಮಾಡಬಹುದು ಎಂದು ಹೇಳುತ್ತಿದ್ದ. ಎರಡು ವರ್ಷ ಪಿಎಚ್.ಡಿ. ಮಾಡಿದರೆ ಪ್ರೊಫೆಸರ್ ಆಗಬಹುದು ಎಂದು ತಿಳಿಸಿದ್ದ. ಆಗ ನಾನು ಕೂಡ ಪಿಎಚ್.ಡಿ. ಮಾಡಿ ಪ್ರೊಫೆಸರ್ ಆಗಬೇಕೆಂಬ ಆಸೆ ಚಿಗುರೊಡೆಯಿತು. ಪಿಎಚ್.ಡಿ. ಮಾಡಿದ ತಕ್ಷಣವೇ ಪ್ರೊಫೆಸರ್ ಆಗುವುದಿಲ್ಲ ಎಂದು ಆಮೇಲೆ ತಿಳಿಯಿತು.

ನಾನು ಸಹ್ಯಾದ್ರಿ ವಿಜ್ಞಾನ ಕಾಲೇಜಿನಲ್ಲಿ ಬಿ.ಎಸ್ಸಿ. ಮಾಡುತ್ತಿದ್ದಾಗ ನಮ್ಮ ಊರಿನ ಪಕ್ಕದ ಕಾಚಿನಕಟ್ಟೆಯ ಪ್ರಶಾಂತ್ ಅವರು ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಔದ್ಯೋಗಿಕ ರಸಾಯನ ಶಾಸ್ತ್ರದಲ್ಲಿ ಪಿಎಚ್.ಡಿ. ಮಾಡುತ್ತಿದ್ದಾಗ ಆಗಾಗ ಅವರ ಹತ್ತಿರ ಪಿಎಚ್.ಡಿ. ಹೇಗೆ ಮಾಡುವುದು ಎಂದು ಚರ್ಚಿಸುತ್ತಿದ್ದೆ. ಅದೇ ಸಮಯದಲ್ಲಿ ಈಗ ಮಣಿಪಾಲಿನಲ್ಲಿರುವ ಪ್ರೊ. ಯಶೋಧ ಮಾಳ್ಗರ್ ಅವರು ಕೂಡ ಆಗ ಔದ್ಯೋಗಿಕ ರಸಾಯನ ಶಾಸ್ತ್ರದಲ್ಲಿ ಪಿಎಚ್.ಡಿ. ಮಾಡುತ್ತಿದ್ದ ಬಗ್ಗೆ ನನ್ನ ಅಮ್ಮ ಆಗಾಗ ಹೇಳುತ್ತಿದ್ದದ್ದು ಜ್ಞಾಪಕ ಇದೆ. ಆಗ ಸಹ್ಯಾದ್ರಿ ವಿಜ್ಞಾನ ಕಾಲೇಜಿನಲ್ಲಿ ಗುರುಗಳಾಗಿದ್ದ ಪ್ರೊ. ಸತೀಶ್ ಜಿ.ಜೆ, ಪ್ರೊ. ಬಸವರಾಜ್ ಪದ್ಮಶಾಲಿ, ಪ್ರೊ. ಕೃಷ್ಣಸ್ವಾಮಿಯವರು ಬೇರೆ ಬೇರೆ ವಿಷಯದಲ್ಲಿ ಪಿಎಚ್.ಡಿ. ಮಾಡುತ್ತಿರುವುದನ್ನ ನೋಡಿದ್ದೆ.

ಆಮೇಲೆ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪಿಎಚ್.ಡಿ. ಮುಗಿಸಿ ನಾನು ಅಮೆರಿಕಾದಲ್ಲಿದ್ದಾಗ ಖ್ಯಾತ ಚಲನಚಿತ್ರ ನಿರ್ದೇಶಕ ಪುಟ್ಟಣ್ಣ ಕಣಗಾಲರ ಪಡುವಾರಳ್ಳಿ ಪಾಂಡವರು ಚಿತ್ರದಲ್ಲಿ ಬರುವ ಒಂದು ಹಾಡು ನನ್ನನ್ನ ತುಂಬಾ ಕಾಡುತಿತ್ತು.

ಅದು “ಜನ್ಮ ನೀಡಿದ ಭೂತಾಯಿಯ ನಾ ಹೇಗೆ ತಾನೆ ತೊರೆಯಲಿ, ಅನ್ನ ನೀಡಿದ ಈ ಮಣ್ಣನು ನಾ ಹೇಗೆ ತಾನೆ ಮರೆಯಲಿ?” ಎಂಬ ಹಾಡು.

ಭಾರತ ದೇಶ, ಕನ್ನಡ ನಾಡು, ಶಿವಮೊಗ್ಗ, ಸಂತೇಕಡೂರು ಎಲ್ಲಾ ಜ್ಞಾಪಕ ಬಂದಾಗ ಈ ಹಾಡು ತುಂಬಾ ಪ್ರಿಯವಾಗುತಿತ್ತು. ಅದನ್ನ ಆಗಾಗ ಕೇಳುತ್ತಿದ್ದೆ. ಅಲ್ಲಿ ಬರುವ ಪಡುವಾರಳ್ಳಿಯ ಮುಗ್ದ ಜನರನ್ನ ನೋಡಿದರೆ ನಮ್ಮ ಸಂತೇಕಡೂರಿನ ಮುಗ್ದ ಹಳ್ಳಿಗರು ಜ್ಞಾಪಕಕ್ಕೆ ಬರುತ್ತಿದ್ದರು. ಅಂತ ಒಳ್ಳೆಯ ಹಾಡನ್ನು ಬರೆದವರು ಪ್ರೊಫೆಸರ್ ದೊಡ್ಡರಂಗೇಗೌಡರು. ಅವರ ಹೆಸರಲ್ಲೂ ಈ ಪ್ರೊಫೆಸರ್ ಪದ ಸದಾ ಜೊತೆಗಿದೆ.

ಇನ್ನು ರೈತ ಸಂಘದ ಮಹಾನಾಯಕರಾಗಿದ್ದ ಪ್ರೊಫೆಸರ್ ಎಂ.ಡಿ. ನಂಜುಂಡ ಸ್ವಾಮಿಯರ ಜೊತೆಯೇ ಇದ್ದ ಪ್ರೊಫೆಸರ್ ಎಂಬ ಉಪಸರ್ಗ ಅಥವಾ ಶೀರ್ಷಿಕೆ ನನ್ನನ್ನು ತುಂಬಾ ಆಕರ್ಷಿಸಿತ್ತು.

ಅದೇ ಸಮಯದಲ್ಲಿ ನನ್ನ ಬಾಳ ಸಂಗಾತಿ ದಿವ್ಯಾಳ ಗುರುಗಳು ನಮ್ಮ ಕುಟುಂಬದ ಹಿತೈಷಿಗಳು ಆಗಿರುವ ಪ್ರೊ. ಎಂ.ಕೃಷ್ಣೇಗೌಡರು ಅಮೆರಿಕಾಗೆ ಬಂದಾಗ ಅವರ ಜೊತೆ ಮಾತನಾಡುವಾಗ ಅಥವಾ ಅವರ ಬಗ್ಗೆ ಬೇರೆಯವರು ಮಾತನಾಡುವಾಗ ಸದಾ ಪ್ರೊಫೆಸರ್ ಎಂಬ ಶೀರ್ಷಿಕೆಯನ್ನ ಬಳಸುವುದನ್ನ ಗಮನಿಸಿದ್ದೇನೆ. ಈಗಲೂ ಅವರನ್ನ ಎಲ್ಲರೂ ಪ್ರೊಫೆಸರ್ ಕೃಷ್ಣೇಗೌಡರು ಎಂದು ಕರೆಯುವುದನ್ನ ನಾವೆಲ್ಲಾ ಕೇಳಿದ್ದೇವೆ, ನೋಡಿದ್ದೇವೆ.

ಕಳೆದ ವರ್ಷ ಕರ್ನಾಟಕ ಸರ್ಕಾರ ಭಾರತ ರತ್ನ ಸರ್.ಸಿ.ವಿ. ರಾಮನ್ ಯುವ ವಿಜ್ಞಾನಿ ಪ್ರಶಸ್ತಿ ನೀಡಿದಾಗ, ನನ್ನ ಜೊತೆ ಪ್ರಶಸ್ತಿ ಪಡೆದ ಪ್ರತಿಯೊಬ್ಬರ ಹೆಸರ ಮುಂದೆ ಪ್ರೊಫೆಸರ್ ಎಂದು ನಮೂದಿಸಿತ್ತು. ಈಗ ಎಲ್ಲಾ ವಿಶ್ವವಿದ್ಯಾನಿಲಯಗಳಲ್ಲೂ, ಐಐಎಸ್ಸಿ, ಐಐಟಿಗಳಲ್ಲೂ ಸಹಾಯಕ ಪ್ರಾಧ್ಯಾಪಕ, ಸಹ ಪ್ರಾಧ್ಯಾಪಕ, ಪ್ರಾಧ್ಯಾಪಕ ಎಂದು ದರ್ಜೆಯನ್ನ ವಿಂಗಡಿಸಿರುವುದರಿಂದ ಆ ರೀತಿ ನಮೂದಿಸಿದ್ದರು ಎಂದು ಅನಿಸುತ್ತೆ.

ನಾಲ್ಕು ದಿನದ ಹಿಂದೆ ಜೆಎಸ್ಎಸ್ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಪ್ರಾಧ್ಯಾಪಕನಾಗಿ ಪದೋನ್ನತಿ ಪಡೆದಿದ್ದೇನೆ. ಈಗ ಸಂಪೂರ್ಣವಾಗಿ ಪ್ರೊಫೆಸರ್ ಪ್ರಸನ್ನ ಕುಮಾರ್ ಸಂತೇಕಡೂರು ಆಗಿದ್ದೇನೆ. ಇಲ್ಲಿ ನಮ್ಮ ಸಂಸ್ಥೆಯ ಹಲವರನ್ನ ನೆನೆಯಬೇಕು, ಆದರೆ ಎಲ್ಲರ ಹೆಸರನ್ನ ನಮೂದಿಸುವುದು ಕಷ್ಟದ ಕೆಲಸ.

ಕಳೆದ ಐದು ವರ್ಷಗಳಲ್ಲಿ ಪೂಜ್ಯ ಸ್ವಾಮೀಜಿಯವರು ನಮ್ಮ ಸಂಶೋಧನೆಯನ್ನ ಸದಾ ಪ್ರೋತ್ಸಾಹಿಸುತ್ತ, ಸಿಕ್ಕಾಗಲೆಲ್ಲಾ ಕೆಲಸ ಹೇಗೆ ನೆಡೆಯುತಿದೆ ಎಂದು ಕೇಳುತ್ತ ಸತ್ಯಶುದ್ಧ ಕಾಯಕದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿ ಆಶೀರ್ವದಿಸುತ್ತ ಬಂದಿದ್ದಾರೆ. ಜೊತೆಗೆ ಜೆಎಸ್ಎಸ್ ಉನ್ನತ ಶಿಕ್ಷಣ ಸಂಸ್ಥೆಯ ಕಾರ್ಯನಿರ್ವಾಹಕ ಕಾರ್ಯದರ್ಶಿಗಳು, ಮಾಜಿ ಉಪ ಕುಲಪತಿಗಳು, ಉಪ ಕುಲಪತಿಗಳು, ಕುಲಸಚಿವರು, ಡೀನ್ ಗಳು, ನಮ್ಮ ಜೆಎಸ್ಎಸ್ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲರು, ಉಪಪ್ರಾಂಶುಪಾಲರುಗಳು, ನಮ್ಮ ವಿಭಾಗದ ಮುಖ್ಯಸ್ಥರು, ಎಲ್ಲಾ ಸಹೋದ್ಯೋಗಿಗಳು, ಬೋಧಕೇತರ ಸಿಬ್ಬಂದಿಗಳು ಜೆಎಸ್ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನ ಸಂಸ್ಥೆಯ ಪ್ರತಿಯೊಬ್ಬರೂ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ನಮಗೆ ಪ್ರೋತ್ಸಾಹ ನೀಡುತ್ತ ಒಂದಲ್ಲ ಒಂದು ರೀತಿ ಸಹಾಯ ಮಾಡುತ್ತ ಬಂದಿದ್ದಾರೆ. ಇದು ಎಲ್ಲರನ್ನು ನೆನೆಯಲು ಸಕಾಲ.

ಭಾರತ ಸರ್ಕಾರದ ಜೈವಿಕ ತಂತ್ರಜ್ಞಾನ ಇಲಾಖೆ ಪ್ರತಿಷ್ಠಿತ ರಾಮಲಿಂಗಸ್ವಾಮಿ ಫೆಲೋಶಿಪ್ ನೀಡಿ ಐದು ವರ್ಷಗಳ ಕಾಲ ನಮ್ಮ ಸಂಬಳದ ಜೊತೆಗೆ ಸಂಶೋಧನ ಅನುದಾನವನ್ನು ನೀಡಿ ಪ್ರೋತ್ಸಾಹಿಸಿದೆ. ಜೊತೆಗೆ ಈ ಐದು ವರ್ಷಗಳಲ್ಲಿ ಬೇರೆ ಬೇರೆ ಶಾಲಾ ಕಾಲೇಜುಗಳ, ವಿಶ್ವವಿದ್ಯಾನಿಲಯಗಳ, ವಿಜ್ಞಾನ ಸಂಸ್ಥೆಗಳ ಅಧ್ಯಾಪಕರುಗಳು, ಪ್ರಾಧ್ಯಾಪಕರುಗಳು, ಪ್ರಾಂಶುಪಾಲರುಗಳು ನನ್ನನ್ನು ಕರೆಸಿ ಸಂಶೋಧನ ವಿಷಯದ ಬಗ್ಗೆ ಭಾಷಣ ಮಾಡಿಸಿದ್ದಾರೆ, ಪ್ರೋತ್ಸಾಹ ನೀಡಿದ್ದಾರೆ. ಭಾರತ ಸರ್ಕಾರದ ಜೈವಿಕ ತಂತ್ರಜ್ಞಾನ ಇಲಾಖೆ ಅಲ್ಲದೇ ಭಾರತೀಯ ವೈದ್ಯಕೀಯ ಸಂಶೋಧನ ಮಂಡಳಿ, ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ವಿಜ್ಞಾನ ಮತ್ತು ಎಂಜಿನೀಯರಿಂಗ್ ಸಂಶೋಧನ ಮಂಡಳಿ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಮತ್ತು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ ನಮಗೆ ಮೊದಲಿನಿಂದಲೂ ಪ್ರೋತ್ಸಾಹ ನೀಡುತ್ತ ಬಂದಿವೆ. ಮೈಸೂರು ಸೈನ್ಸ್ ಫೌಂಡೇಶನ್ ಸಂಪನ್ಮೂಲ ವ್ಯಕ್ತಿಗಳಿಗೆ ನೀಡುವ ಪ್ರಶಸ್ತಿ ನೀಡಿದೆ. ಕರ್ನಾಟಕ ಸರ್ಕಾರ ಸರ್. ಸಿ.ವಿ. ರಾಮನ್ ಯುವ ವಿಜ್ಞಾನಿ ಪ್ರಶಸ್ತಿ ನೀಡಿ ಪ್ರೋತ್ಸಾಹಿಸಿದೆ. ನಮ್ಮ ಜೆಎಸ್ಎಸ್ ವೈದ್ಯಕೀಯ ಮಹಾವಿದ್ಯಾಲಯ ಪ್ರತಿಷ್ಠಿತ ಪ್ರೊ. ವೈ.ಟಿ. ತಾತಾಚಾರಿ ಪ್ರಶಸ್ತಿ ನೀಡಿದೆ.

ನನ್ನ ಬದುಕಿನ ಈ ನಲವತ್ತೈದು ವರ್ಷಗಳ ಸುಧೀರ್ಘ ಪಯಣದಲ್ಲಿ ಹಲವಾರು ಜನ ಶಿಕ್ಷಕರುಗಳು, ಅಧ್ಯಾಪಕರುಗಳು, ಪ್ರಾಧ್ಯಾಪಕರುಗಳು, ಗೆಳೆಯ ಗೆಳತಿಯರು, ಹಿತೈಷಿಗಳು ಸಹಾಯ ಮಾಡುತ್ತ ನನ್ನ ಅಭ್ಯುದಯವನ್ನ ಸದಾ ಬಯಸಿ ಪ್ರೋತ್ಸಾಹಿಸುತ್ತ ಬಂದಿದ್ದಾರೆ. ಇಲ್ಲಿ ಎಲ್ಲರನ್ನ ಸ್ಮರಿಸುವುದು ಬಹಳ ಕಷ್ಟದ ಕೆಲಸ. ಗದುಗಿನ ತೋಂಟದಾರ್ಯ ಮಠದ ಶ್ರೀ ಸಿದ್ದರಾಮ ಸ್ವಾಮಿಗಳು ಪ್ರಜಾವಾಣಿಯಲ್ಲಿ ಋಣ ಸಂದಾಯದ ಬಗ್ಗೆ ಒಂದು ಲೇಖನ ಬರೆದಿದ್ದರು. ಆ ಲೇಖನದಲ್ಲಿ ಅವರು ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪನವರ ಕವನವನ್ನ ಪ್ರಸ್ತಾಪಿಸುತ್ತ ಅಲ್ಲಿನ ಸಾಲುಗಳನ್ನ ತಿಳಿಸಿ

“ಎನಿತು ಜನ್ಮದಲಿ, ಎನಿತು ಜೀವರಿಗೆ ಎನಿತು ನಾವು ಋಣಿಯೋ ? ತಿಳಿದು ನೋಡಿದರೆ ಬಾಳು ಎಂಬುದಿದು. ಋಣದ ರತ್ನದ ಗಣಿಯೋ!”.

ಸಮಾಜದಲ್ಲಿ ಪ್ರಾಣಿಗಳಾಗಿರುವ ನಾವೆಲ್ಲ ಒಂದಲ್ಲ ಒಂದು ರೀತಿ ಋಣಭಾರದಲ್ಲಿರುತ್ತೇವೆ. ಜನನದಿಂದ ಮರಣದವರೆಗೆ ತಂದೆ-ತಾಯಿಗಳ, ಗುರುಗಳ, ಸಮಾಜದ ಹಾಗೆಯೇ ಸರ್ವಶಕ್ತ ಭಗವಂತನ ಋಣದಲ್ಲಿ ನಾವು ಬದುಕನ್ನು ಕಟ್ಟಿಕೊಳ್ಳಬೇಕಾಗುತ್ತದೆ. ಋಣವಿಲ್ಲದೆ ಬದುಕಿದ್ದೇನೆ, ನನ್ನ ವ್ಯಕ್ತಿತ್ವದ ವಿಕಾಸಕ್ಕೆ ನಾನೇ ಕಾರಣ ಎನ್ನುವುದು ಧಾರ್ಷ್ಟ್ಯದ ಮಾತಾದೀತು ಎಂದು ತಿಳಿಸುತ್ತಾರೆ.

ಅನುಪಮಾ ನಿರಂಜನ ಅವರ ಋಣ ಕಾದಂಬರಿ ಆಧಾರಿತ ಋಣಮುಕ್ತಳು ಎಂಬ ಚಲನಚಿತ್ರವನ್ನ ಪುಟ್ಟಣ್ಣ ಕಣಗಾಲ್ ಅವರು ನಿರ್ದೇಶಿಸಿದ್ದಾರೆ. ಅದರ ಮುಖ್ಯಪಾತ್ರ ತನ್ನ ತಂದೆತಾಯಿಗಳ ಋಣವನ್ನ ತೀರಿಸಿ, ಗಂಡನ ಋಣವನ್ನು ತೀರಿಸಿ ಮಕ್ಕಳಿಗೆ ಒಳ್ಳೆಯ ತಾಯಿಯಾಗಿ ಕೊನೆಗೆ ಈ ಭೂಮಿಯಲ್ಲಿ ಹುಟ್ಟಿದ್ದಕ್ಕೆ ಮಣ್ಣಿನ ಋಣವನ್ನ ತೀರಿಸಬೇಕೆಂಬ ಆಶಯದಿಂದ ಅಬು ಪರ್ವತದಲ್ಲಿರುವ (ಮೌಂಟ್ ಅಬು) ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಮುಖ್ಯ ಆಶ್ರಮದಲ್ಲಿ ಸನ್ಯಾಸಿನಿಯಾಗಿ ಲೋಕದ ಋಣ ತೀರಿಸಲು ನಿರ್ಧರಿಸುವ ದೃಶ್ಯ ಮತ್ತು ನಿರ್ಧಾರ ಅಸಾಮಾನ್ಯವಾದದ್ದು.

ಇನ್ನು ಮುಂದೆ ಹೋಗಿ ಜೇಡರ ದಾಸಿಮಯ್ಯ
“ಇಳೆ ನಿಮ್ಮ ದಾನ ಬೆಳೆ ನಿಮ್ಮ ದಾನ ಸುಳಿದು ಬೀಸುವ ಗಾಳಿ ಅದು ನಿಮ್ಮ ದಾನ” ಎಂದು ದೇವರ ಋಣದ ಬಗ್ಗೆ ಮಾತನಾಡುತ್ತಾನೆ.

ಹಾಗಾಗಿ ನನ್ನನ್ನು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸದಾ ಪ್ರೋತ್ಸಾಹಿಸುತ್ತ ಬಂದಿರುವ ಪ್ರತಿಯೊಬ್ಬರಿಗೂ ನನ್ನ ಧನ್ಯವಾದಗಳು. ನಿಮ್ಮೆಲ್ಲರ ಪ್ರೀತಿ ವಿಶ್ವಾಸ ಮುಂದೆಯೂ ಹೀಗೆಯೇ ಇರಲಿ, ಜ್ಞಾನದ ಬಲದಿಂದ ನಮ್ಮಲ್ಲಿರುವ ಅಜ್ಞಾನದ ಅಂಧಕಾರವನ್ನು ತೊಲಗಿಸೋಣ ಎಂದು ಆಶಿಸುತ್ತ. ಎಲ್ಲರಿಗೂ ಜಗಜ್ಯೋತಿ ಬಸವೇಶ್ವರರ ಜನ್ಮದಿನದ ಶುಭಾಶಯಗಳು.


  • ಪ್ರಸನ್ನ ಸಂತೇಕಡೂರು – ವಿಜ್ಞಾನಿಯಾಗಿ ಮ್ಯಾಸ್ಸಿ ಕ್ಯಾನ್ಸರ್ ಸೆಂಟರಿನಿಂದ ಎಕ್ಸೆಲೆನ್ಸ್ ಇನ್ ಕ್ಯಾನ್ಸರ್ ರಿಸರ್ಚ್ ಅವಾರ್ಡ್ ಪಡೆದಿದ್ದಾರೆ, ಸಾಹಿತಿಯಾಗಿ ವಿಜಯ ಕರ್ನಾಟಕ ಪತ್ರಿಕೆಯ 2021ನೇ ಅವ್ವ ಪ್ರಶಸ್ತಿ ಪುರಸ್ಕೃತರು ಆಗಿದ್ದಾರೆ.

5 2 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW