ಅಂತ್ಯದ ಬಳಿಕ ಉಂಟು ಆರಂಭವು, ಶಿಶಿರದ ಬಳಿಕ ಬಾರದೇ ವಸಂತವು…ಕವಿ ಪದ್ಮನಾಭ.ಡಿ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವಿತೆಯನ್ನು ತಪ್ಪದೆ ಮುಂದೆ ಓದಿ…
ಮಾಗಿಯ ಕಾಲದ ನಸುಕಿನ ವೇಳೆ
ಎಲೆಗಳ ಮೇಲೆ ಕೊಂಬೆಯ ಮೇಲೆ
ಕಂಬನಿಯಂತೆ ಮಂಜಿನ ಹನಿಗಳು
ವಿದಾಯ ಹೇಳಿವೆ ಮರಕೆ ಎಲೆಗಳು//
ಸುಯ್ಯನೆ ಮಾರುತ ಬೀಸುತಲಿರಲು
ಎಲೆಗಳು ದೂರಕೆ ಹೋಗುತಲಿರಲು
ನಿಶ್ಚಲವಾಗಿಯೇ ನಿಂತಿದೆ ಮರವು
ಒಳಗಿದ್ದರೂ ವಿದಾಯದ ದುಃಖವು//
ಎಲೆಗಳು ಉದುರಿ ದೂರಾದರೇನು
ಸ್ವಾಗತಿಸುವೆ ನಾ ಹೊಸ ಚಿಗುರನ್ನು
ಆದರಿಸುವೆ ತನ್ನೆಡೆಗೆ ಬಂದವರನ್ನು
ನೀಡುವೆ ನೆರಳನ್ನು ಸಿಹಿಫಲವನ್ನು//
ಅಂತ್ಯದ ಬಳಿಕ ಉಂಟು ಆರಂಭವು
ಶಿಶಿರದ ಬಳಿಕ ಬಾರದೇ ವಸಂತವು
ಪುನರಾರಂಭವೇ ಸೃಷ್ಟಿ ನಿಯಮವು
ಎಂಬುವ ಪಾಠವ ಹೇಳಿದೆ ಮರವು//
- ಪದ್ಮನಾಭ. ಡಿ.
