ಖ್ಯಾತ ಸಿನಿ ಬರಹಗಾರ ಗಣೇಶ ಕಾಸರಗೋಡು ಅವರ ನೆನಪಿನಂಗಳದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್. ಅವರೊಂದಿಗಿನ ಒಡನಾಟದ ಬಗ್ಗೆ ಓದುಗರೊಂದಿಗೆ ಹಂಚಿಕೊಂಡಿದ್ದಾರೆ. ಮುಂದೆ ಓದಿ…
1980-81ರ ಸುಮಾರಿಗೆ ವೃತ್ತಿಬದುಕಿಗಾಗಿ ಬೆಂಗಳೂರು ಸೇರಿಕೊಂಡಾಗ ನನಗಿದ್ದ ಎರಡೇ ಎರಡು ಕೌತುಕವೆಂದರೆ : 1. ವಿಧಾನಸೌಧ 2. ರಾಜಕುಮಾರ್! ವಿಧಾನಸೌಧ ನೋಡಿದ್ದಾಯಿತು, ಇನ್ನು ರಾಜಕುಮಾರ್ ಅವರನ್ನು ನೋಡುವುದು ಹೇಗೆ? ಒಂದೇ ಒಂದು ಆಯ್ಕೆಯೆಂದರೆ ಕುಂಬಳಗೋಡಿನ ಫಾರ್ಮ್ ಹೌಸ್. ರಾಜಕುಮಾರ್ ಅಲ್ಲಿರುತ್ತಾರೆ ಎಂದು ಯಾರೋ ಹೇಳಿರುವ ಮಾತು ಕೇಳಿ ಸೈಕಲ್ ಹತ್ತಿ ಹೊರಟೇ ಬಿಟ್ಟೆ ಕುಂಬಳಗೋಡಿಗೆ! ಅಲ್ಲಿತ್ತು ‘ಲೋಹಿತ್ ಫಾರಂ’. ರಸ್ತೆಗೆ ಅಭಿಮುಖವಾಗಿ ಹಾಕಿಸಿರುವ ಬೋರ್ಡನ್ನು ಕಂಡು ಸಾಕ್ಷಾತ್ ರಾಜಕುಮಾರ್ ಅವರನ್ನೇ ಕಂಡಷ್ಟು ಖುಷಿಯಾಯಿತು! ಆದರೆ ಆ ರಾಕ್ಷಸ ಗೇಟು ದಾಟಿ ಒಳ ಹೋಗುವುದು ಹೇಗೆ? ಸೈಕಲ್ಲನ್ನು ಗೋಡೆಗೊರಗಿಸಿ ಗೇಟು ಹಾರಲು ಪ್ರಯತ್ನಿಸಿದೆ. ಯಾರೋ ಗದರಿದಂತಾಯಿತು! ಗೇಟಿನ ಕಬ್ಬಿಣದ ರಾಡ್ ಬಿಟ್ಟು ಜರ್ರನೆ ಇಳಿದು ಬಿಟ್ಟೆ…ಅಲ್ಲಿಗೆ ರಾಜಕುಮಾರ್ ಅವರನ್ನು ಭೇಟಿ ಮಾಡುವ ಪ್ರೋಗ್ರಾಮನ್ನು ಕ್ಯಾನ್ಸಲ್ ಮಾಡಿ ನಾನು ತಂದಿದ್ದ ಕ್ಲಿಕ್-3 ಕ್ಯಾಮೆರಾದಲ್ಲಿ ‘ಲೋಹಿತ್ ಫಾರಂ’ ಬೋರ್ಡಿನ ಫೋಟೋ ಕ್ಲಿಕ್ಕಿಸಿಕೊಂಡೆ! ಅದು ನನ್ನ ಮತ್ತು ‘ಲೋಹಿತ’ನ ಮೊಟ್ಟ ಮೊದಲ ಭೇಟಿ! ಈ ಹುಡುಗ ಇರುವುದೇ ಹಾಗೆ…
40 ವರ್ಷಗಳ ಹಿಂದೆ ರಾಜಕುಮಾರ್ ಕೊನೇ ಪುತ್ರನಿಗೆ ‘ಲೋಹಿತ್’ ಎಂಬ ಹೆಸರಿತ್ತು. ಆಗ ಆತನ ವಯಸ್ಸು 6 ವರ್ಷ! ಆಮೇಲೆ ಸಂಖ್ಯಾಶಾಸ್ತ್ರದ ಪ್ರಕಾರ ‘ಪುನೀತ್ ರಾಜಕುಮಾರ್’ ಎಂಬ ಹೆಸರನ್ನಿಡಲಾಯಿತು! ಈ ಘಟನೆಯ ವಿವರವನ್ನು ಒಮ್ಮೆ ಮಾತನಾಡುತ್ತಾ ಪುನೀತ್ ಬಳಿ ಹೇಳಿಕೊಂಡಾಗ ಜೋರಾಗಿ ನಕ್ಕು, ಭಕ್ತಿಯಿಂದ ಪಾದ ಮುಟ್ಟಿ ನಮಸ್ಕರಿಸಿದ್ದ ಪುನೀತ್! ಈ ಹುಡುಗ ಇರುವುದೇ ಹಾಗೆ…

ಈಗ ಹೇಳಲಿರುವ ಘಟನೆ ನಡೆದದ್ದು ಕಂಠೀರವಾ ಸ್ಟುಡಿಯೋದಲ್ಲಿ. ಅಂದು ಪುನೀತ್ ಅವರ ‘ಮಾಯಾಬಜಾರ್’ ಸಿನಿಮಾದ ಮುಹೂರ್ತ ಸಮಾರಂಭ. ನನ್ನ ಹಿರಿಯ ಮಗ ಅಭಿಷೇಕ್ ಅದಕ್ಕೆ ಕ್ಯಾಮರಾಮನ್. ಹೀಗಾಗಿ ನಾನು ಸಕುಟುಂಬ ಪರಿವಾರ ಸಮೇತ ಹೋಗಿದ್ದೆ. ನನ್ನ ಪತ್ನಿ ಗಾಯತ್ರಿ ದೂರದಲ್ಲೆಲ್ಲೋ ನಿಂತಿದ್ದಳು. ನಾನು ವಿಶ್ ಮಾಡಲೆಂದು ಪುನೀತ್ ಬಳಿ ಹೋದೆ. ‘ಒಬ್ಬರೇ ಬಂದ್ರಾ?’ – ಪುನೀತ್ ಕೇಳಿದ್ದಕ್ಕೆ ‘ಪತ್ನಿ ಜತೆ ಬಂದಿದ್ದೇನೆ’ ಅಂದೆ. ‘ಅವ್ರು ಎಲ್ಲಿದ್ದಾರೆ? ಯಾಕೆ ಬಿಟ್ಟು ಬಂದ್ರಿ? ಕರೀರಿ ಅವ್ರನ್ನು…’ – ಎಂದು ಹೇಳುತ್ತಾ ತಾವೇ ಖುದ್ದಾಗಿ ಗಾಯತ್ರಿ ಬಳಿ ಹೋಗಿ ‘ಯಾಕೆ ಇಲ್ಲೇ ನಿಂತು ಬಿಟ್ರಿ? ಬನ್ನಿ, ನಿಮ್ಮ ಮಗನ ಸಿನಿಮಾ ಇದು…’ – ಎಂದು ಹೇಳಿದ್ದಲ್ಲದೇ ಪಾದ ಮುಟ್ಟಿ ನಮಸ್ಕರಿಸಿ ಕೈ ಹಿಡಿದು ಮುಹೂರ್ತದ ಸ್ಪಾಟ್’ಗೆ ಕರೆದೊಯ್ದ ದೃಶ್ಯ ಇನ್ನೂ ಕಣ್ಣಲ್ಲಿದೆ! ಈ ಹುಡುಗ ಇರುವುದೇ ಹಾಗೆ…
2007ರ ಅದೊಂದು ದಿನ ಪ್ರೆಸ್’ಮೀಟ್’ವೊಂದರಲ್ಲಿ ಪಾರ್ವತಮ್ಮ ರಾಜಕುಮಾರ್ ಅವರು ನನಗೆ ಈ ಆಫರ್ ಕೊಟ್ಟಿದ್ದರು! ನಂಬಿದ್ರೆ ನಂಬಿ ಬಿಟ್ರೆ ಬಿಡಿ ಇದು ನಿಜ! ಅಂದು ಅವರು ಹೇಳಿದ್ದು : ‘ನಮ್ಮ ಪುನೀತ್’ಗೆ ನೀವಂದ್ರೆ ತುಂಬಾ ಇಷ್ಟ. ನಿಮ್ಮನ್ನು ನೋಡಿದಾಗಲೆಲ್ಲಾ ಅವ್ರ ಕೈಲಿ ಒಂದು ಒಳ್ಳೆಯ ಪಾತ್ರ ಮಾಡಿಸ ಬೇಕಮ್ಮಾ ಅಂತಿದ್ದ. ನೀವು ಅವ್ನ ಫಿಲಂನಲ್ಲಿ ಆಕ್ಟ್ ಮಾಡ್ತೀರಾ?’ – ಇದೆಂಥಾ ಆಹ್ವಾನ? ಒಪ್ಪದಿರುವುದುಂಟೆ? ಆ ಕ್ಷಣವೇ ಒಪ್ಪಿಗೆ ಕೊಟ್ಟಿದ್ದೆ. ಇದಾಗಿ 14 ವರ್ಷಗಳೇ ಕಳೆದರೂ ಪುನೀತ್ ಜೊತೆ ನಟಿಸುವ ಯೋಗ ಕೂಡಿ ಬಂದಿರಲಿಲ್ಲ. ಈ ನಡುವೆ ಪ್ರೆಸ್ ಮೀಟ್’ಗಳಲ್ಲಿ ಸಿಕ್ಕಾಗ ಪುನೀತ್ ಹೇಳುವುದಿತ್ತು : ‘ಅಣ್ಣಾ, ನಿಮಗೆ ಅಂತಿಂಥಾ ಪುಟ್ಟ ಪಾತ್ರ ಕೊಟ್ಟರೆ ಸರಿ ಹೋಗೋದಿಲ್ಲ. ಒಂದೊಳ್ಳೆಯ ಪಾತ್ರ ಸಿಕ್ಕಾಗ ಖಂಡಿತಾ ನಾವಿಬ್ಬರೂ ಜೊತೆ ಸೇರ್ತೀವಿ…’ – ಎಂದು ಹೇಳಿ ಪಾದ ಮುಟ್ಟಿ ನಮಸ್ಕರಿಸಿದ್ದ. ಇನ್ನೆಲ್ಲಿಯ ಯೋಗ? ಈ ಹುಡುಗ ಇರುವುದೇ ಹಾಗೆ…

ನಾನು ಸುದ್ದಿಟಿವಿಯಲ್ಲಿರುವಾಗ ಪುನೀತ್ ರಾಜಕುಮಾರ್ ಅವರನ್ನು ಆಹ್ವಾನಿಸಿದ ಘಟನೆ ನೆನಪಾಗುತ್ತದೆ. ಅದು ಶಾಂತಿನಗರದ BMTC ಒಂದು ಭಾಗ. ಅಚ್ಚುಕಟ್ಟಾದ ಸ್ಟುಡಿಯೋ. ಶಶಿಧರ ಭಟ್ ಸಪೋರ್ಟ್ ಇತ್ತು. ಅಲ್ಲಿಗೆ ನಾನು ಆಹ್ವಾನಿಸದ ಸ್ಟಾರ್, ಸೂಪರ್ ಸ್ಟಾರ್’ಗಳಿಲ್ಲ! ಹಾಗೆಯೇ ಪುನೀತ್ ಕೂಡಾ. ನನ್ನ ಪ್ರೀತಿಯ ಅಪ್ಪು ಸ್ಟುಡಿಯೋ ಒಳ ಪ್ರವೇಶಿಸುತ್ತಿರುವಂತೆಯೇ ಮಹಿಳಾ ಸಿಬ್ಬಂದಿಗಳಿಂದ ಆರತಿ ಎತ್ತಿ ಸ್ವಾಗತ. ಈ ಅನಿರೀಕ್ಷಿತವನ್ನು ಕಂಡು ಪುನೀತ್ ಕೊಂಚ ಗಲಿಬಿಲಿಗೊಂಡದ್ದನ್ನು ನಾನು ಗಮನಿಸಿದೆ. ನಂತರ ಸುಧಾರಿಸಿಕೊಂಡ ಪುನೀತ್ ಶೂ ಕಳಚಿಟ್ಟು ಸ್ಟುಡಿಯೋ ಪ್ರವೇಶಿಸಿದರು. ಶಶಿಧರ ಭಟ್ ಸ್ವಾಗತ ಕೋರಿ ತಮ್ಮೆ ಚೇ0ಬರಿಗೆ ಕರೆದುಕೊಂಡು ಹೋದರು. ನಂತರ ಸ್ಟುಡಿಯೋ ಪರಿಚಯ. ಸ್ಟಾಫ್ ಪರಿಚಯ. ಅಪ್ಪು ಅಚ್ಚರಿಯಿಂದ ಸ್ಟುಡಿಯೋ ವೀಕ್ಷಿಸಿದರು. ತಕ್ಷಣವೇ ಶಶಿಧರ ಭಟ್ ಅವರಿಂದ ಸಂದರ್ಶನಕ್ಕೆ ಬೇಡಿಕೆ. ಯಾವ ಪೂರ್ವ ತಯಾರಿ ಇಲ್ಲದಿದ್ದರೂ ಅಪ್ಪು ಒಪ್ಪಿಯೇ ಬಿಟ್ಟರು! ಭರ್ತಿ 2 ಗಂಟೆಗಳ ಲೈವ್ ಸಂದರ್ಶನ. ಸಂದರ್ಶನ ಮುಗಿಸಿ ಹೊರಟು ನಿಂತ ಪುನೀತ್ ನನ್ನನ್ನು ಬಿಗಿದಪ್ಪಿಕೊಂಡು ಬೀಳ್ಕೊಟ್ಟದ್ದು ಇನ್ನೂ ಕಣ್ಣಲ್ಲಿದೆ. ಈ ಹುಡುಗ ಇರುವುದೇ ಹಾಗೆ…

ಇನ್ನು ಒಂದೇ ಒಂದು ದಿನ, ನವೆಂಬರ್ 1. ಕನ್ನಡ ರಾಜ್ಯೋತ್ಸವ. ಮೂರು ವರ್ಷಗಳ ಹಿಂದೆ ನಾನು ಸದಾಶಿವನಗರದ ಪುನೀತ್ ಮನೆಯಲ್ಲಿದ್ದೆ. ಅಂದು ಅವರಿಗೊಂದು ಗಿಫ್ಟ್ ಕೊಡುವುದಿತ್ತು. ಸಿವಿಲ್ ಎಂಜಿನೀರ್ ಆಗಿರುವ ನನ್ನ ಕಿರಿಯ ಮಗ ಅಲೋಕ್ ಚಿತ್ರಕಲಾವಿದನೂ ಹೌದು! ಅದರಲ್ಲೂ ಡ್ಯುಡಲ್ ಕಲೆಯಲ್ಲಿ ಪಳಗಿದ್ದಾನೆ. ರಾಜ್ಯೋತ್ಸವ ದಿನದ ವಿಶೇಷವಾಗಿ ‘ಕನ್ನಡ’ ಅಕ್ಷರವನ್ನು ಪೋಣಿಸಿದ ಡ್ಯುಡಲ್ ಕೃತಿಯನ್ನು ತಯಾರು ಮಾಡಿಕೊಂಡಿದ್ದ ಅಲೋಕ್. ಅದನ್ನು ಅಪ್ಪುವಿಗೆ ಗಿಫ್ಟಾಗಿ ಕೊಡುವುದು ಉದ್ದೇಶ. ಇದೊಂದು ಅನಿರೀಕ್ಷಿತ ಭೇಟಿ. ಫ್ರೇಮ್ ಹಾಕಿಸಿದ್ದ ಆಕರ್ಷಕ ಡ್ಯುಡಲ್ ಕೃತಿಯನ್ನು ಅಪ್ಪು ಕೈಗಿಟ್ಟಾಗ ಕುತೂಹಲದಿಂದ ವೀಕ್ಷಿಸಿದರು. ‘ನನ್ನ ಮಗಳೂ #ಡ್ಯುಡಲ್_ಆರ್ಟ್‘ನಲ್ಲಿ ಪಳಗಿದ್ದಾಳೆ’ ಎಂದು ಹೇಳುತ್ತಾ ‘ಅಶ್ವಿನೀ’ ಅಂತ ಹೆಂಡತಿಯನ್ನು ಕರೆದು ಅಲೋಕನನ್ನು ಪರಿಚಯಿಸಿದರು. ನಂತರ ತಮ್ಮ ಒಡೆತನದ #PRK_ಸಂಸ್ಥೆಯ ಡ್ಯುಡಲ್ ಲೋಗೋ ಮಾಡಿಕೊಡುವಂತೆ ‘ಆರ್ಡರ್’ ಕೊಡಿಸಿದರು! ಈ ಹುಡುಗ ಇರುವುದೇ ಹಾಗೆ…
ನನ್ನ ನೇತೃತ್ವದ ಸಿನಿಮಾವೊಂದನ್ನು ಸೆನ್ಸಾರ್ ಬೋರ್ಡ್ ಸದಸ್ಯೆಯಾಗಿರುವ ಮೀರಾ ಅನುರಾಧಾ ಪಡಿಯಾರ್ ನಿರ್ಮಿಸುವುದಿತ್ತು. ಅದರ ಲೊಕೇಶನ್ ಚಾಮರಾಜನಗರ. ಹೀಗಾಗಿ ಅಲ್ಲಿ ನಡೆಯುವ ಮುಹೂರ್ತ ಸಮಾರಂಭಕ್ಕೆ ಪುನೀತ್ ರಾಜಕುಮಾರ್ ಅವರನ್ನು ಆಹ್ವಾನಿಸುವ ಯೋಚನೆಯಿತ್ತು. ಏಕೆಂದರೆ ಪುನೀತ್ ಅಲ್ಲಿನ ಮಣ್ಣಿನಮಗ! ಆದರೇನಾಯಿತು ನೋಡಿ. ಮುಂದೊಮ್ಮೆ ಸಿನಿಮಾ ಮುಹೂರ್ತ ನಡೆಯ ಬಹುದು. ಆದರೆ ಅಪ್ಪು ಎಲ್ಲಿದ್ದಾನೆ? ಈ ಹುಡುಗ ಇರುವುದೇ ಹಾಗೆ…

ಜರಗನಹಳ್ಳಿಯ ನಮ್ಮ ‘#ಅಮ್ಮನ_ಮನೆ‘ಗೆ ಪುನೀತ್ ಅವರನ್ನು ಆಹ್ವಾನಿಸಿದ್ದೆ. ‘ಏನು ಕೊಡಿಸ್ತೀರಿ ಅಣ್ಣಾ?’ – ಎಂದು ಅಪ್ಪು ಕೇಳಿದ್ದರು. ‘ಚಿಕನ್ ಸುಕ್ಕಾ, ನೀರುದೋಸೆ’ ಅಂದಿದ್ದೆ. ಬಾಯಲ್ಲಿ ನೀರು ತಂದು ಚಪ್ಪರಿಸುತ್ತಾ ಅಪ್ಪು ಹೇಳಿದ್ದರು : ‘ಖಂಡಿತಾ ಬರ್ತೇನೆ ಅಣ್ಣಾ. ನಿಮ್ಮ ಊರಿನ ತಿಂಡಿ ನನಗಿಷ್ಟ’…ಎಲ್ಲಿದ್ದಾನೆ ಅಪ್ಪು? ಈ ಹುಡುಗ ಇರುವುದೇ ಹಾಗೆ…
ಅಲೋಕ್ ಮದ್ವೆ ಹತ್ತಿರ ಬರ್ತಿದೆ. 2022ರ ಜನವರಿ 27ಕ್ಕೆ ಮಂಗಳೂರಿನಲ್ಲಿ ಮದುವೆ. ಮದುವೆಯ ನಂತರ ಬೆಂಗ್ಳೂರಿನಲ್ಲೊಂದು ಖಡಕ್ ರಿಸೆಪ್ಷನ್ ವ್ಯವಸ್ಥೆಗೊಳಿಸುತ್ತಿದ್ದೇನೆ. ನನ್ನನ್ನು 40 ವರ್ಷಗಳ ಕಾಲ ಸಾಕಿ ಸಲಹಿದ ಕನ್ನಡ ಚಿತ್ರರಂಗದ ಸಮಸ್ತರೂ ಅಂದು ಅಲ್ಲಿ ಹಾಜರಿರಬೇಕೆನ್ನುವುದು ನನ್ನ ಆಸೆ. ರಿಸೆಪ್ಷನ್ ನಡೆಯಲೂ ಬಹುದು. ಆದರೆ ಅಪ್ಪು ಎಲ್ಲಿದ್ದಾನೆ? ಈ ಹುಡುಗ ಇರುವುದೇ ಹಾಗೆ…ಶ್ಯೋ…
- ಗಣೇಶ ಕಾಸರಗೋಡು (ಖ್ಯಾತ ಸಿನಿ ಬರಹಗಾರರು, ಪತ್ರಕರ್ತರು, ಹಳೆಯ ಸಿನಿಮಾದ ಕೊನೆಯ ಫ್ರೆಮ್ ‘ಶುಭಂ’ ಕೃತಿಯ ಲೇಖಕರು)
