ಬಿಳಿಮಲೆಯವರ ಆತ್ಮೀಯ ಸ್ನೇಹಬಳಗದ ಹರಹು ವಿಶ್ವ ವ್ಯಾಪಿಯಾದ್ದು, ನಮ್ಮೆಲ್ಲರಿಗೂ ಮಾರ್ಗದರ್ಶಿ ಗೆಳೆಯನಂತಿರುವ ಡಾ.ಪುರುಷೋತ್ತಮ ಬಿಳಿಮಲೆಯವರಿಗೆ ಜನುಮದಿನದ ಶುಭಹಾರೈಕೆಗಳು – ಗಿರಿಧರ ಕಾರ್ಕಳ, ತಪ್ಪದೆ ಮುಂದೆ ಓದಿ…
ಇದು ಬಸವಣ್ಣ ಕಂಡರಿಸಿದ ಕಾಕದರ್ಶನ..
ಆದರೆ, ಬಿಳಿಮಲೆಯವರ ಬದುಕಿನಲ್ಲಿ ಮಾತ್ರ ಕಾಗೆಯದು ಅಪಶಕುನದ ಪಾತ್ರ !! ಅವರು ಅದನ್ನೆಲ್ಲ ಮೀರಿ ನಿಂತು,ತಮ್ಮ ಪ್ರೀತಿ,ವಾತ್ಸಲ್ಯ, ಸಮೃದ್ಧ ಜೀವನಾನುಭವದ ಹಿನ್ನೆಲೆಯ ಚಿಕಿತ್ಸಕ ನೋಟದ, ಚಿಂತನೆಗಳ ಪನ್ನೀರ ಧಾರೆಯನ್ನು ಬಿಳಿಮಲೆಯ ಕಗ್ಗಾಡಿನ ಮೂಲೆಯಿಂದ ದೆಹಲಿಯ ವರೆಗೂ ಅಪಾರ ಸಂಖ್ಯೆಯ ಪ್ರತ್ಯಕ್ಷ, ಪರೋಕ್ಷ ವಿದ್ಯಾರ್ಥಿಗಳಿಗೆ, ಜ್ಞಾನದಾಹಿಗಳಿಗೆ ಮೊಗೆ ಮೊಗೆದು ಹರಿಸುತ್ತಲೇ ಬಂದಿದ್ದಾರೆ. ಹೋರಾಟದ ಬದುಕಿನಲ್ಲಿ ತಾನೇ ಬಿತ್ತಿ ಬೆಳೆದು ಸಂಪಾದಿಸಿದ ಅರಿವಿನ ಅಗುಳನ್ನು ಎಲ್ಲೆಡೆ ಹಂಚುತ್ತ ಜ್ಞಾನದಾಹಿಗಳ ಹಸಿವನ್ನು ನೀಗಿಸುತ್ತ ಬಂದಿದ್ದಾರೆ.

ನೀರು ಮುಟ್ಟಿದ, ಮುಟ್ಟಲೆತ್ನಿಸುವ ಕಾಗೆಗಳ ನಿರಂತರ ಬಾಯಾರಿಕೆಯನ್ನು ತಣಿಸಲು,ಸಿಹಿನೀರ ಸೆಲೆಗಳನ್ನು ಅರಸಲು ತೋರುಗಂಭವಾಗಿ ನಿಂತಿದ್ದಾರೆ.ಅಂತೆಯೇ,”ಕಾಗೆ ಮುಟ್ಟಿದ ನೀರು’ ರೂಪಕವಾಗಿ ತನ್ನ ಬದುಕನ್ನು ರೂಪಿಸಿದ ಬಗೆಯನ್ನು , ಚದುರಿ ಬಿದ್ದ ಆತ್ಮದ ತುಣುಕುಗಳನ್ನು ಪುಸ್ತಕ ರೂಪದಲ್ಲಿ ಒಂದೆಡೆ ಸೇರಿಸಿ ಮನೋಜ್ಞವಾಗಿ ಕಟ್ಟಿ ಕೊಟ್ಟು ನಮ್ಮ ಜೋಳಿಗೆಗೆ ತುಂಬಿದ್ದಾರೆ. ಈಗ ಇದು ಐದನೇ ಮುದ್ರಣ ಕಾಣುತ್ತಿರುವುದು,ಈ ಆತ್ಮಕಥನಕ್ಕೆ ಸಹೃದಯಿ ಕನ್ನಡಿಗರು ತೋರಿದ ಪ್ರೀತಿಗೆ ಸಾಕ್ಷಿ.

ಸುಳ್ಯದ ನೆಹರೂ ಸ್ಮಾರಕ ಕಾಲೇಜಿನಿಂದ ಆರಂಭವಾದ ಬಿಳಿಮಲೆಯವರ ಶಿಕ್ಷಕ ವೃತ್ತಿ, ಅಲ್ಲಿಂದ ಮಂಗಳೂರು ವಿ.ವಿ., ನಂತರ ಹಂಪೆ ಕನ್ನಡ ವಿ.ವಿ, ಅಲ್ಲಿಂದ ಅಮೇರಿಕನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯನ್ ಸ್ಟಡೀಸ್,ಅದನ್ನೂ ದಾಟಿ ದೇಶದ ಮುಂಚೂಣಿಯಲ್ಲಿರುವ ಪ್ರತಿಷ್ಠಿತ ಜೆ ಎನ್ ಯೂ ನಲ್ಲಿ ಅಧಿಕೃತವಾಗಿ ಕೊನೆಗೊಂಡಿದೆ. ಇದೀಗ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ನೇಮಕಗೊಂಡು ಕನ್ನಡವನ್ನು ಕಟ್ಟುವ ಕಾಯಕವನ್ನು ದೊಡ್ಡ ರೀತಿಯಲ್ಲಿ ವಿಸ್ತರಿಸುವ ಗುರುತರ ಜವಾಬ್ದಾರಿಯನ್ನು ಹೆಗಲಿಗೇರಿಸಿ ಕೊಂಡಿದ್ದಾರೆ.ಈ ಹೊಸ ಜವಾಬ್ದಾರಿಯನ್ನು ಕೂಡ ಅತ್ಯಂತ ಪ್ರಾಮಾಣಿಕವಾಗಿ ಯಶಸ್ವಿಯಾಗಿ ನಿಭಾಯಿಸಬಲ್ಲರೆನ್ನುವ ವಿಶ್ವಾಸ ಅವರನ್ನು ಬಲ್ಲ ಎಲ್ಲರಿಗೂ ತಿಳಿದಿದೆ.ಪ್ರತಿಷ್ಠಿತ ದೆಹಲಿ ಕನ್ನಡ ಸಂಘಕ್ಕೆ ಹೊಸ ರೂಪ ತಾಕತ್ತು ನೀಡಿದ ಅವರ ಅಪರೂಪದ ಸಂಘಟನಾ ಶಕ್ತಿ ಸಾಮರ್ಥ್ಯ ಕನ್ನಡ ಅಭಿವೃದ್ಧಿ ಪ್ರಾಧಿಕಾರವನ್ನು ಮುನ್ನಡೆಸುವಲ್ಲಿಯೂ ಖಂಡಿತ ನೆರವಾಗಬಲ್ಲುದು.
ಹೋದಲ್ಲಿ ಬಂದಲ್ಲಿ ನಿಂತಲ್ಲಿ ಕೂತಲ್ಲಿ ಸದಾ ಕನ್ನಡವನ್ನೇ ಧ್ಯಾನಿಸುತ್ತ, ನಮ್ಮೆಲ್ಲರ ಕನ್ನಡ ನಾಡು ನುಡಿ ಪರಂಪರೆಯ ಅರಿವನ್ನು ವಿಸ್ತರಿಸುತ್ತಿರುವ ಬಿಳಿಮಲೆಯವರು ಇನ್ನೂ ಸಾವಿರಾರು ವರ್ಷ ಹೀಗೇ ನಮ್ಮೊಂದಿಗಿರಲಿ..
- ಗಿರಿಧರ ಕಾರ್ಕಳ
