ರಾಕ್ಷಸೀಯ ಗುಣದ ಅಂಗುಲಿಮಾಲನನ್ನು ಕರುಣಾಮೈತ್ರಿಯಿಂದ ಬುದ್ಧಗುರುವು ಅರ್ಹಂತನನ್ನಾಗಿ ರೂಪಿಸುವಂತೆಯೇ ರಾಕ್ಷಸಿಯಾದ ಪೂತನಿಯನ್ನು ಕರುಣಾಮಯಿ ಪೂತನಿಯನ್ನಾಗಿ ಈ ರಂಗಪ್ರಸಂಗದಲ್ಲಿ ಮಲ್ಲಿಕಾರ್ಜುನಸ್ವಾಮಿ ಮಹಾಮನೆಯವರು ರೂಪಿಸಿದ್ದಾರೆ. ತಪ್ಪದೆ ನೋಡಲು ಬನ್ನಿ…
ಆತ್ಮೀಯ ಗೆಳೆಯ, ರಂಗ ನಿರ್ದೇಶಕರಾದ ಮಲ್ಲಿಕಾರ್ಜುನಸ್ವಾಮಿ ಡಿ.ಬಿ ಮಹಾಮನೆ ಅವರ ನಿರ್ದೇಶನದಲ್ಲಿ ಹಾಗೂ ಕಲಾವಿದೆ ನಿರ್ಮಲಾ ನಾದನ್ ಅವರ ಅಭಿನಯದಲ್ಲಿ ರೂಪಕಗಳು, ಪ್ರತಿಮೆಗಳು ಮತ್ತು ಸಂಕೇತಗಳಿಂದಲೇ ಪ್ರೇಕ್ಷಕರನ್ನು ಮುಟ್ಟುವ “ಪೂತನಿ” ಎಂಬ ಏಕವ್ಯಕ್ತಿ ರಂಗಪ್ರದರ್ಶನದ ಪೂರ್ವಭಾವಿ ಪ್ರದರ್ಶನವನ್ನು ಇವತ್ತು ಸಿವಗಂಗಾ ರಂಗಮಂದಿರಲ್ಲಿ ಆಯೋಜಿಸಲಾಗಿತ್ತು. ಪ್ರೊ.ರಾಜಪ್ಪ ದಳವಾಯಿ, ಡಾ.ಹೆಚ್.ಆರ್.ಸ್ವಾಮಿ, ಛಾಯಾ ಭಾರ್ಗವಿ ಹಾಗೂ ನಾನು ಪೂರ್ವಭಾವಿ ರಂಗಪ್ರದರ್ಶನದ ಗೆಜ್ಜೆಪೂಜೆಗೆ ಆಹ್ವಾನಿತರಾಗಿ ಭಾಗವಹಿಸಿದ್ದೆವು.

ಮೂಡಲಪಾಯ ಯಕ್ಷಗಾನ- ಬಯಲಾಟ ಪ್ರಸಂಗಕ್ಕೆ ಪೂತನಿ ಎಂಬ ರಂಗಪಠ್ಯವನ್ನು ಅಳವಡಿಸಲಾಗಿದೆ. ನಮ್ಮ ಬಯಲುಸೀಮೆಯಲ್ಲಿ ಮೂಡಲಪಾಯ ಯಕ್ಷಗಾನ -ಬಯಲಾಟ ಕಲೆಗೆ ದೀರ್ಘ ಕಾಲದ ಇತಿಹಾಸವಿದೆ. ಈ ಪಾರಂಪರಿಕ ಕಲೆಯ ಉಳಿವು ಮತ್ತು ಪೋಷಣೆಯ ನಿಟ್ಟಿನಲ್ಲಿ ಮಲ್ಲಿಕಾರ್ಜುನಸ್ವಾಮಿ ಅವರ ಪ್ರಯತ್ನ ಅತ್ಯಂತ ಮಹತ್ವದ್ದಾಗಿದೆ. ಬಯಲುಸೀಮೆಯ ಮೂಡಲಪಾಯ ಯಕ್ಷಗಾನ ಬಯಲಾಟದಲ್ಲಿ ಕಂದಪದ್ಯ, ಸೀಸಪದ್ಯ, ಯಾಲಪದ, ಜಂಪೆ, ತ್ತಿಪುಡೆ, ಮಟ್ಟು, ಮುಖವೀಣೆ, ಮೇಳ ಮುಂತಾದ ಸಂಗತಿಗಳಿಗೆ ಪ್ರಧಾನ ಸ್ಥಾನವಿದೆ.
ಮೂಡಲಪಾಯ ಯಕ್ಷಗಾನ- ಬಯಲಾಟದ ರಂಗಸ್ಥಲದ ಒಂದು ಮಗ್ಗುಲಿನಲ್ಲಿ ಮುಮ್ಮೇಳ ಮತ್ತು ಹಿಮ್ಮೇಳದ ಹಾಡುಗಾರಿಕೆ, ಕಂಚಿನ ಕೈತಾಳಗಳು, ಮದ್ದಳೆ, ಶೃತಿಕವೆ, ಸನಾದಿ ಮೇಳ, ಹಾರ್ಮೋನಿಯಂ, ತಬಲ, ಡಿಕ್ಕಿ, ದಂಬಡಿ, ಘಟ ಗಗ್ಗರಿ, ಮುಖವೀಣೆ, ಪಿಟೀಲು ಮುಂತಾದ ಸಂಗೀತೋಪಕರಣಗಳ ಸಮಜೋಡಿಯ ವಾದ್ಯಸಂಗೀತ, ವಿಸ್ತಾರವಾದ ರಂಗಸ್ಥಲದ ಮೇಲೆ ಕಲಾವಿದರ ಜಂಪೆ ತ್ರಿಪುಡೆ ಮಟ್ಟುಗಳ ವರಸೆಗಳಲ್ಲಿ ಮೈನರಗಳೆಲ್ಲವೂ ಸಡಿಲಗೊಳ್ಳುವಷ್ಟು ತಕದಿಮಿತೋಂ ತಕಿಟ ಕುಣಿತ – ಕುಪ್ಪಳಿಸುವಿಕೆ- ಕೇಕೆ ಆವುಟಗಳು, ರಂಗಸ್ಥಲದ ಮುಂದೆ ಬಯಲಾರದಲ್ಲಿ ರೋಮಾಂಚಿತರಾಗಿ ಝೇಂಕರಿಸುವ ಪ್ರೇಕ್ಷಕ ವರ್ಗ… ಸ್ವರನಿಪುಣ ಮೇಳದ ಹಾಡುಗಾರರ ಕಂಠಗಳಲ್ಲಿ ಉರಿದುಬ್ಬರಿಸುವ ಹಳಗನ್ನಡ ಹಾಡುಗಳ ಭಾಷಾ ಸೊಗಡು ! ಇವೆಲ್ಲವೂ ಸಾಂಪ್ರದಾಯಿಕ ಶೈಲಿಯ ಮೂಡಲಪಾಯ ಯಕ್ಷಗಾನ ಬಯಲಾಟ ಕಲೆಯಲ್ಲಿ ಕಾಣುವ ಪ್ರಧಾನ ಅಂಶಗಳು.

“ಪೂತನಿ” ಎಂಬ ಏಕವ್ಯಕ್ತಿ ಪ್ರದರ್ಶನದ ರಂಗಪ್ರಸಂಗದಲ್ಲಿ ಪೂತನಿ ಎಂಬ ಪೌರಾಣಿಕ ಪಾತ್ರವನ್ನು ಹೊಸ ಬೆಳಕಿನಲ್ಲಿ ನೋಡುವಂತೆ ರಂಗಪ್ರೇಕ್ಷಕರಿಗೆ ರಂಗಪಠ್ಯವು ಸಾಧ್ಯಮಾಡಿಕೊಟ್ಟಿದೆ. ಮಹಾಭಾರತ ಕಾವ್ಯದಲ್ಲಿ ಬರುವ ಪೂತನಿ ಒಬ್ಬ ರಾಕ್ಷಸಿ. ಅಲ್ಲಿ ವ್ಯಕ್ತವಾಗಿರುವಂತೆ ವಿಲಕ್ಷಣ ರಾಕ್ಷಸಿಯಾದ ಪೂತನಿಯು ಸುಂದರ ಮಹಿಳೆಯ ವೇಷ ಧರಿಸಿ ವಿಷಪೂರಿತ ಎದೆಹಾಲನ್ನು ಬಾಲಕ ಕೃಷ್ಣನಿಗೆ ಕುಡಿಸುವ ಮೂಲಕ ಅವನನ್ನು ಕೊಲ್ಲಲು ಪ್ರಯತ್ನಿಸುತ್ತಾಳೆ. ಪೌರಾಣಿಕ ಕಾವ್ಯದಲ್ಲಿ ವಿಷಕನ್ಯೆ ಅಥವಾ ರಾಕ್ಷಸಿ ಎಂದು ಅರ್ಥೈಸಲಾಗಿರುವ ಪೂತನಿಯ ಪಾತ್ರವನ್ನು ಆಧುನಿಕ ರಾಚನಿಕೋತ್ತರ ರಂಗಪಠ್ಯದಲ್ಲಿ ನಿರಚಿಸಿ ಮರುರೂಪಿಸಿರುವ “ಪೂತನಿ” ಎಂಬ ಪ್ರಸ್ತುತ ರಂಗ ಪ್ರಸಂಗದಲ್ಲಿ ರಂಗಪ್ರೇಕ್ಷಕರು, ಪೂತನಿಯಲ್ಲಿ ದುಷ್ಟ ರಾಕ್ಷಸಿಯನ್ನು ಕಾಣುವ ಬದಲಾಗಿ ಪ್ರೀತಿ ವಾತ್ಸಲ್ಯ ಭಾವನೆಗಳನ್ನು ತುಂಬಿಕೊಂಡ ಮಮತಾಮಯಿಯೂ ಕರುಣಾಮಯಿಯೂ ಆದ ತಾಯಿಯನ್ನು ಕಾಣುತ್ತಾರೆ.
ರಾಕ್ಷಸೀಯ ಗುಣದ ಅಂಗುಲಿಮಾಲನನ್ನು ಕರುಣಾಮೈತ್ರಿಯಿಂದ ಬುದ್ಧಗುರುವು ಅರ್ಹಂತನನ್ನಾಗಿ ರೂಪಿಸುವಂತೆಯೇ ರಾಕ್ಷಸಿಯಾದ ಪೂತನಿಯನ್ನು ಕರುಣಾಮಯಿ ಪೂತನಿಯನ್ನಾಗಿ ಈ ರಂಗಪ್ರಸಂಗದಲ್ಲಿ ಮಲ್ಲಿಕಾರ್ಜುನಸ್ವಾಮಿ ಮಹಾಮನೆಯವರು ರೂಪಿಸಿದ್ದಾರೆ. ತನ್ನೊಳಗೆ ಪ್ರೇಮಮಯಿ ಪೂತನಿಯ ಪಾತ್ರವನ್ನು ಕಲಾವಿದೆ ನಿರ್ಮಲಾ ನಾದನ್ ಅವರು ಅತ್ಯಂತ ಶ್ರದ್ಧೆ ಮತ್ತು ಲವಲವಿಕೆಯಿಂದ ರಂಗಪ್ರದರ್ಶನ ಸಂದರ್ಭದಲ್ಲಿ ಧಾರಣೆಪ್ರದರ್ಶನ ದಲ್ಲಿಯೇ ಮಾಡಿಕೊಂಡದ್ದು ಇವತ್ತಿನ ಪೂರ್ವಭಾವಿ ಪ್ರದರ್ಶನದಲ್ಲಿಯೇ ನಾವು ಗುರುತಿಸಿದೆವು. ನಿರ್ಮಲಾ ನಾದನ್ ಅವರು ಪೂತನಿಯ ಮಾತೃತ್ವದ ಭಾವನಾತ್ಮಕ ತರಂಗಗಳನ್ನು ನಮ್ಮಲ್ಲಿ ಅಭಿನಯದ ಮೂಲಕ ಮೂಡಿಸಿದರು. ಇಂತಹ ಮಾತೃತ್ವದ ರೂಪದಲ್ಲಿ ನಿರೂಪಣೆಯಾಗಿರುವ “ಪೂತನಿ” ಎಂಬ ಮೂಡಲಪಾಯ ಯಕ್ಷಗಾನ- ಬಯಲಾಟದ ಏಕವ್ಯಕ್ತಿ ರಂಗಪ್ರದರ್ಶನಕ್ಕೆ ನೀವು ಬನ್ನಿ… ನಿಮ್ಮವರನ್ನೂ ಕರೆತನ್ನಿ. ಕಲೆಯನ್ನು ಪ್ರೋತ್ಸಾಹಿಸಿರಿ. ಪ್ರದರ್ಶನದ ಸ್ಥಳ, ದಿನಾಂಕ, ವೇಳೆ, ಮುಂಗಡ ಬುಕ್ಕಿಂಗ್ ಮುಂತಾದ ಮಾಹಿತಿ ತಿಳಿದುಕೊಳ್ಳಲು ಮಲ್ಲಿಕಾರ್ಜುನಸ್ವಾಮಿ ಡಿ.ಬಿ ಮಹಾಮನೆ ಅವರ ಮೊಬೈಲ್ ಸಂಖ್ಯೆ : 9448970731 ಕ್ಕೆ ಕರೆ ಮಾಡಲು/ ವಾಟ್ಸಾಪ್ ಸಂದೇಶ ಕಳುಹಿಸಲು ಕೋರಲಾಗಿದೆ.
ಪ್ರೀತಿಯಿಂದ…
- ವಡ್ಡಗೆರೆ ನಾಗರಾಜಯ್ಯ
