ಅವರ್ಣಿಯವಾದ ಬಂಧವೇ ರಕ್ಷಾ ಬಂಧನ

ಸಾಂಪ್ರದಾಯಿಕ ಹಿಂದು ಹಬ್ಬ ‘ರಕ್ಷಾ ಬಂಧನ’ (ರಕ್ಷಣೆಯ ಗಂಟು) ಸುಮಾರು 6000 ವರ್ಷಗಳ ಹಿಂದೆಯೇ, ಸಿಂಧೂ ಕಣಿವೆ ನಾಗರಿಕತೆಯ ಅವಧಿಯಲ್ಲಿ ಅಸ್ತಿತ್ವದಲ್ಲಿತೆಂದು ಅಂತ ಹೇಳಲಾಗುತ್ತದೆ ಈ ಹಬ್ಬದ ಕುರಿತು ಹಲವಾರು ಕಥೆಗಳು ಇದ್ದು, ಡಾ.ಮಲ್ಲಿಕಾರ್ಜುನ ಎಸ್ ಆಲಮೇಲ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಶುಭ ಶ್ರಾವಣ ಮಾಸದ ನೂಲು ಹುಣ್ಣಿಮೆಗೆ ಆಗಮಿಸುವ, ಪವಿತ್ರ ಭಾವನಾತ್ಮಕ, ಬ್ರಾತ್ವತ್ವದ ಸಂದೇಶವನ್ನು ನೀಡುವ, ಕಳಚಿದ ಸಂಬಂಧವನ್ನು ಕೂಡ, ಮರು ಬೆಸೆಯುವ ಹಬ್ಬ, ಅದುವೇ ರಕ್ಷಾ ಬಂಧನ. ( ರಕ್ಷಣೆಯ ಗಂಟು ) ಸಹೋದರ – ಸಹೋದರಿಯರ ಬೆಲೆ ಕಟ್ಟಲಾಗದ, ಅವರ್ಣಿಯವಾದ ಅಮೋಘ ಪ್ರೀತಿಯ ವ್ಯಕ್ತಪಡಿಸುವ ಸುದಿನ. ತನ್ನ ಸಹೋದರನ ರಕ್ಷಣೆ, ಆತನ ಸುಭೀಕ್ಷೆಗಾಗಿ ಭಗವಂತನಲ್ಲಿ ಪ್ರಾರ್ಥಿಸಿ, ಬಲಗೈ ಮಣಿಕಟ್ಟಿಗೆ ನೂಲಿನದಾರ (ರಾಖಿ) ರಕ್ಷಾ ಬಂಧನ ಕಟ್ಟುವ ಅಪೂರ್ವ ಹಬ್ಬವಾಗಿದೆ. ಹಿಂದಿನ ದಿನಮಾನದಿ ನೂಲು ಹುಣ್ಣಿಮೆ ಸಮಯದಲ್ಲಿ ನೂಲು ( ಹತ್ತಿ ) ಸಹ ಅಲುಗಾಡುತ್ತಿರಲಿಲ್ಲವೆಂದು ಹಿರಿಯರು ಹೇಳುವುದನ್ನು ಕೇಳಿದ್ದೇವೆ. ಆಗ ಪ್ರಕೃತಿಯು ಹಚ್ಚ ಹಸಿರಿನಿಂದ ಕಣ್ಮನ ಸೆಳೆಯುತ್ತ ಪ್ರಶಾಂತವಾಗಿ ಇರುತಿತ್ತು. ಆದ್ರೀಗ, ಮನುಜನ ದುರಾಸೆಗೆ ಹಸಿರು ನಾಶವಾಗಿ, ಕಾಂಕ್ರೆಟ್ ಕಾಡು ನಿರ್ಮಾಣ, ಬೃಹತ್ ಕಾರ್ಖಾನೆಗಳು ಉಗುಳುವ ವಿಷಯುಕ್ತ ಅನಿಲ ಮತ್ತು ವಾಹನಗಳ ಅಟ್ಟಹಾಸ ಪರಿಣಾಮದ ಫಲವಾಗಿ, ಜಾಗತಿಕ ತಾಪಮಾನ ಏರಿಕೆ, ಭುವಿಯ ರಕ್ಷಾ ಕವಚ ಓಜೋನ್ ಪರದೆಗೆ ರಂದ್ರ, ಹವಾಮಾನ ವೈಪರೀತ್ಯವಾಗಿ, ಮಳೆಯಲ್ಲಿ ಬಿಸಿಲು, ಬಿಸಿಲಲ್ಲಿ ಮಳೆಯೂ, ಚಳಿಯಲ್ಲಿ ಬಿಸಿಲು ಅನ್ನುವಂತ ಪರಸ್ಥಿತಿ ನಿರ್ಮಾಣವಾಗಿದೆ. ಇನ್ನಾದರೂ ಮನುಕುಲ ಎಚ್ಚೆತ್ತು ಹಸಿರು ಉಳಿಸಿ, ಬೆಳೆಸದಿದ್ದರೆ ಮುಂದೆ, ಪ್ರಕೃತಿಯ ಭೀಕರ,ಭೀಭತ್ಸ ಅವತಾರಕ್ಕೆ ನಾವೆಲ್ಲ ಬಲಿಯಾಗಬೇಕಾಗುತ್ತದೆ. ಮನುಜ ಧರಿತ್ರಿಯ ಮೇಲೆ ಅದೆಷ್ಟೆ ದೌರ್ಜನ್ಯವೆಸಗಿದರು, ಶ್ರಾವಣ ಮಾಸದಿ ಅಲ್ಪ ಸ್ವಲ್ಪವಾದ್ರೂ ವಾತಾವರಣ ಶುದ್ಧವಾಗಿರುವುದು, ಈ ಸುಸಂದರ್ಭದಿ ಆಗಮಿಸುವ ಸಾಂಪ್ರದಾಯಿಕ ಹಿಂದು ಹಬ್ಬ ‘ರಕ್ಷಾ ಬಂಧನ’ (ರಕ್ಷಣೆಯ ಗಂಟು) ಸುಮಾರು 6000 ವರ್ಷಗಳ ಹಿಂದೆಯೇ, ಸಿಂಧೂ ಕಣಿವೆ ನಾಗರಿಕತೆಯ ಅವಧಿಯಲ್ಲಿ ಅಸ್ತಿತ್ವದಲ್ಲಿತೆಂದು ಅಂತ ಹೇಳಲಾಗುತ್ತದೆ ಈ ಹಬ್ಬದ ಕುರಿತು ಹಲವಾರು ಕಥೆಗಳು ಇವೆ.

ಫೋಟೋ ಕೃಪೆ :  google

ಯುಗ ಯುಗಗಳಿಂದ ಆಚರಿಸಲ್ಪಡುತ್ತಿದೆ ರಕ್ಷಾ ಬಂಧನವು :

ಹಿರಣ್ಯಕಶ್ಯಪು ಮಗ ಪ್ರಹ್ಲಾದನ ಮೊಮ್ಮಗನಾದ ಬಲಿ ಚಕ್ರವರ್ತಿ ಒಬ್ಬ ಮಹಾನ್‌ ರಾಜನಾಗಿದ್ದನು ಮತ್ತು ವಿಷ್ಣುವಿನ ಪರಮ ಭಕ್ತನಾಗಿದ್ದನು. ಇಷ್ಟೆಲ್ಲ ಆತ ಸದ್ಗುಣ ಸಂಪನ್ನನಾಗಿದ್ದರು. ಈರೇಳು ಲೋಕಗಳನೆಲ್ಲ ತನ್ನ ಸಾಮರ್ಥ್ಯದಿಂದ ಗೆದ್ದು, ಇಂದ್ರದೇವನ ಸ್ವರ್ಗವನ್ನು ಕಿತ್ತುಕೊಂಡು, ದೇವತೆಗಳನೆಲ್ಲ ಓಡಿಸಿದ್ದ ಪರಿಣಾಮ ಬಲಿಯನ್ನು ಅಂತ್ಯಗಾಣಿಸುವುದು ದೇವತೆಗಳಿಗೆ ಅನಿವಾರ್ಯವಾಗಿತ್ತು.

ದೇವತೆಗಳೆಲ್ಲ ಮಹಾವಿಷ್ಣುವಿನಲ್ಲಿ ಮೊರೆಯಿಟ್ಟಾಗ ಅಭಯ ನೀಡಿ ಕಳಿಸಿದ್ದ. ಅದೆ ಸಮಯಕ್ಕೆ ಸರಿಯಾಗಿ ಬಲಿ ಚಕ್ರವರ್ತಿ ಸಕಲ ಲೋಕವನ್ನು ಗೆದ್ದ ಸಂಭ್ರಮಕ್ಕೆ ಯಜ್ಞವನ್ನು ಮಾಡುತ್ತಿದ್ದನು. ಇದೇ ಸಮಯವೆಂದರಿತ ವಿಷ್ಣುದೇವ, ತನ್ನ ಪರಮ ಭಕ್ತನಾದ ಬಲಿಯ ಹತ್ತಿರ ವಾಮನ ಅವತಾರದಲ್ಲಿ ಮುಂದೆ ಪ್ರತ್ಯಕ್ಷನಾಗಿ ಮೂರು ರೀತಿಯ ವರ ಬೇಕೆಂದು ಕೇಳುತ್ತಾನೆ. ಮೊದಲನೇ ವರವಾಗಿ ಭೂಮಿ ಕೇಳುತ್ತಾನೆ. ಎರಡನೇ ವರವಾಗಿ ಆಕಾಶ ದಾನಮಾಡುವಂತೆ ಕೇಳುತ್ತಾನೆ. ಮೂರನೇಯದಾಗಿ ಭೂಮಿಗಾಗಿ ಬಲಿಯ ತಲೆಯ ಮೇಲೆ ಪಾದವನ್ನು ಇಡುತ್ತಾನೆ. ಆಗ ಬಲಿಯು ವಿಷ್ಣುವಿನಲ್ಲಿ ಪ್ರಭು ನಾನು ನನ್ನೆಲ್ಲಾ ಸ್ವತ್ತನ್ನು ನಿನಗೆ ನೀಡಿದ್ದೇನೆ. ಈಗ ನೀನು ನನ್ನ ಕೋರಿಕೆಯ ಮೇರೆಗೆ ನನ್ನೊಂದಿಗೆ ಪಾತಾಳಕ್ಕೆ ಬರಬೇಕೆಂದು ಕೇಳಿಕೊಳ್ಳುತ್ತಾನೆ. ಭಕ್ತನ ಆಸೆಯ ಮೇರೆಗೆ ಭಗವಾನ್‌ ವಿಷ್ಣು ವೈಕುಂಠವನ್ನು ತ್ಯಜಿಸಿ ಪಾತಾಳಕ್ಕೆ ಹೋಗುತ್ತಾನೆ. ಇದರಿಂದ ಚಿಂತಿತಳಾದ ಲಕ್ಷ್ಮಿಯು ಬಡ ಮಹಿಳೆಯ ರೂಪ ಧರಿಸಿ ಬಲಿಯು ಇದ್ದಲ್ಲಿಗೆ ಬಂದು ಆತನಿಗೆ ರಕ್ಷಾ ದಾರವನ್ನು ಕಟ್ಟುತ್ತಾಳೆ. ಆಗ ಬಲಿ ಚಕ್ರವರ್ತಿ ತಾಯಿ ನಿಮಗೆ ಉಡುಗೊರೆಯಾಗಿ ನೀಡಲು ನನ್ನ ಬಳಿ ಈಗ ಏನೂ ಉಳಿದಿಲ್ಲ ಎನ್ನುತ್ತಾನೆ. ಲಕ್ಷ್ಮಿ ದೇವಿ ನನಗೆ ನಿನ್ನ ಉಡುಗೊರೆ ನನಗೆ ಏನು ಬೇಕಿಲ್ಲ. ಆದರೆ ನನ್ನ ಪತಿ ವಿಷ್ಣುವನ್ನು ನನಗೆ ಹಿಂದಿರುಗಿಸು ಎಂದು ಕೇಳಿಕೊಳ್ಳುತ್ತಾಳೆ. ನಂತರ ಬಲಿ ವಿಷ್ಣುವನ್ನು ಪಾತಾಳ ಲೋಕದಿಂದ ಲಕ್ಷ್ಮಿಯೊಂದಿಗೆ ವೈಕುಂಠಕ್ಕೆ ಕಳುಹಿಸುತ್ತಾನೆ.

ಕೃಷ್ಣ – ದ್ರೌಪದಿಯ ಕತೆ

ಶ್ರೀ ಕೃಷ್ಣನು ದುರುಳ ಶಿಶುಪಾಲನ ವಧೆಗೆ ತನ್ನ ಸುದರ್ಶನ ಚಕ್ರವನ್ನು ಬಳಸುವಾಗ, ಕೈ ಬೆರಳಿಗೆ ಗಾಯ ಮಾಡಿಕೊಳ್ಳುವನು. ವಿಪರೀತ ರಕ್ತಸ್ರಾವವಾಗುತ್ತಿರುವದನ್ನು ಕಂಡ ದ್ರೌಪದಿಯು ಶ್ರೀಕೃಷ್ಣನ ಮಣಿಕಟ್ಟಿಗೆ ತನ್ನ ಸೀರೆಯಿಂದ ಒಂದು ತುಂಡನ್ನು ಹರಿದು ರಕ್ಷಾ ಕವಚವಾಗಿ ( ರಾಖಿ ) ಕಟ್ಟಿದಳು. ಪರಿಣಾಮವಾಗಿ ಕೃಷ್ಣನು ದ್ರೌಪದಿಯನ್ನು ಸುರಕ್ಷಿತವಾಗಿಡಲು ಯಾವಾಗಲೂ ಸಹೋದರನಾಗಿ ಇರುತ್ತೇನೆ ಎಂದು ಭರವಸೆ ನೀಡಿದನು. ಮುಂದೆ ದ್ರೌಪದಿಯ ಕಷ್ಟ ಸಮಯ ( ವಸ್ತ್ರಾಪಹರಣ ) ದಲ್ಲಿ ಆಕೆಯ ಮಾನ ರಕ್ಷಣೆಯ ಮಾಡಿ ಕುರುಕ್ಷೇತ್ರ ಯುದ್ಧವನ್ನು ಗೆಲ್ಲಿಸಿ ಉಡುಗೊರೆಯಾಗಿ ಕೊಟ್ಟನು.

ನೊಬೆಲ್ ಪ್ರಶಸ್ತಿ ಪುರಸ್ಕೃತರು, ತಾಯಿ ಭಾರತಿಗೆ ಆರತಿ ಮಾಡಲು ಭರತ ಭುವಿಗೆ ರಾಷ್ಟ್ರಗೀತೆ ನೀಡಿದ ಮಹಾನ್ ಕವಿ ಶ್ರೀ ರವೀಂದ್ರನಾಥ ಟ್ಯಾಗೋರ್ ಅವರು ಕೂಡ ಬಂಗಾಳ ವಿಭಜನೆಯ ಸಮಯದಲ್ಲಿ (1905) ಸಾಮೂಹಿಕ ರಕ್ಷಾ ಬಂಧನ ಆಚರಣೆಯನ್ನು ಮುಂಚೂಣಿಗೆ , ಇದರಲ್ಲಿ ಅವರು ಹಿಂದೂ ಮತ್ತು ಮುಸ್ಲಿಂ ಮಹಿಳೆಯರು ಇತರ ಇತರ ಎಲ್ಲಾ ಕುಲದ ಪುರುಷರಿಗೆ ರಾಖಿ ಕಟ್ಟಲು ಮತ್ತು ಅವರನ್ನು ಸಹೋದರರನ್ನಾಗಿ ಮಾಡಲು ಪ್ರೇರೇಪಿಸಿದರು.ಇದು ಹಿಂದೂ ಮತ್ತು ಮುಸ್ಲಿಂ ಸಮುದಾಯಗಳ ನಡುವಿನ ಅಂತರವನ್ನು ಕಡಿಮೆ ಮಾಡಲು,ಹಾಗು ಬ್ರಿಟಿಷರ ದುಶ್ಕ್ರುತ್ಯವನ್ನು ಎದುರಿಸುವುದುಸಂಬಂಧಗಳು ಗಟ್ಟಿಯಾಗಿದ್ದರೆ ಎಂತಾ ಶಕ್ತಿಯನ್ನು ಎದುರಿಸಬಹುದು ಅನ್ನೋದು ಈ ಚಟುವಟಿಕೆಯ ಉದ್ದೇಶವಾಗಿತ್ತು.ಇದನೆಲ್ಲ ನಾವು ಅರ್ಥಮಾಡಿಕೊಳ್ಳಬೇಕಾಗಿದೆ ಏಕೆಂದ್ರೆ?

ಇತ್ತೀಚಿನ ದಿನಗಳಲ್ಲಿ ಸಂಬಂಧಗಳು ಮೌಲ್ಯ ಕಳೆದುಕೊಳ್ಳುತ್ತಿವೆ ಒಬ್ಬರ ಮೇಲೊಬ್ಬರಿಗೆ ನಂಬಿಕೆ, ವಿಶ್ವಾಸವಿಲ್ಲ, ಅಪನಂಬಿಕೆಯ ಅನುಮಾನಗಳು, ಸಂಬಂಧಗಳಲ್ಲಿ ಬಿರುಕು ಮೂಡಿಸಿ ಸಂಬಂಧಾನುಬಂಧವನ್ನೆ ಹಾಳು ಮಾಡುವದರ ಜೊತೆಗೆ ಕುಟುಂಬವನ್ನೆ ಒಡೆಯುತ್ತಿವೆ. ಪಿತ್ರಾರ್ಜಿತ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೂ ಸಮಪಾಲು ಕೊಡಬೇಕೆಂದು ಕಾನೂನು ರೂಪಿತವಾಯಿತು. ಅಂದಿನಿಂದ ಕೆಲವು ಹೆಣ್ಣು ಮಕ್ಕಳು ಹೇಳಿಕೆಯ ಮಾತುಗಳಿಗೋ, ಇಲ್ಲ ದುರ್ಬುದ್ದಿಯ ದುರಾಸೆಗೋ, ಹೆತ್ತವರ ಆಸ್ತಿಯಲ್ಲಿ ಪಾಲು ಕೇಳುತ್ತಿದ್ದಾರೆ. ಇದು ತಪ್ಪು ಅಂತ ನಾನು ಹೇಳುವುದಿಲ್ಲ. ಆದ್ರೆ, ಪಾಲು ಕೇಳುವುದಿಕ್ಕಿಂತ ಮೊದಲು ಒಂದು ಬಾರಿ ಶಾಂತವಾಗಿ ಕುಳಿತುಕೊಂಡು ಆತ್ಮಸಾಕ್ಷಿಯಾಗಿ ಯೋಚಿಸಿ ನೋಡಿ. ನಿಮ್ಮ ಹೆತ್ತವರು, ಒಡಹುಟ್ಟಿದವರು, ನೀವು ಹುಟ್ಟಿದಾಗಿಂದ ಇಲ್ಲಿಯವರೆಗೆ ನಿಮಗಾಗಿ ಎಷ್ಟೊಂದು ಪ್ರೀತಿ ಕೊಟ್ಟಿದ್ದಾರೆ. ನಿಮ್ಮ ಸುಖಕ್ಕಾಗಿ ಎಷ್ಟೆಲ್ಲ ಶ್ರಮಿಸಿದ್ದಾರೆ. ಮದುವೆ, ಇತ್ಯಾದಿ ಶುಭ ಕಾರ್ಯಗಳಿಗಾಗಿ ಅದೆಷ್ಟು ಸಾಲ ಸೂಲ ಮಾಡಿದ್ದಾರೆ. ನಿಮ್ಮ ಕನಸಿನ ಸಾಕಾರಕ್ಕಾಗಿ ಅವರು ಹಗಲು ರಾತ್ರಿ ಎನ್ನದೆ ತಮ್ಮ ಜೀವವನ್ನೆ ಸವಿಸಿದ್ದಾರೆ. ಎಲ್ಲಕಿಂತ ಹೆಚ್ಚಾಗಿ ಮಮತೆ ವಾತ್ಸಲ್ಯದ ಅಮೃತಧಾರೆ ಎರೆದಿದ್ದಾರೆ. ಹೊನ್ನು, ಮಣ್ಣಿಗಾಗಿ, ಇತಿಹಾಸದ ಪುಟಗಳಲ್ಲಿ ರಕ್ತ ಸಿಕ್ತ ಚರಿತ್ರೆಗಳೇ ಕಾಣಸಿಗುತ್ತವೆ. ಹೀಗಿರುವಾಗ ಈ ನಶ್ವರ ಪ್ರಪಂಚದಿ, ಕಲ್ಲು ಮಣ್ಣಿನ ಬೆನ್ನು ಹತ್ತಿ, ಹೆಣ್ಣಾಗಲಿ, ಗಂಡಾಗಲಿ, ಸಂಬಂಧಗಳ ಮೌಲ್ಯ ಹಾಳು ಮಾಡುವದೇಕೆ ಪ್ರೀತಿ, ಮಮತೆ, ವಾತ್ಸಲ್ಯ ಕಳೆದುಕೊಳ್ಳುವದೇ?. ಕುಟುಂಬಗಳು ದೇಶದ ಆಧಾರ ಸ್ತಂಭಗಳು. ಇದ್ದಂತೆ ಎಲ್ಲಾ ಕುಟುಂಬಗಳು ಒಂದಾಗಿದ್ದರೆ ದೇಶ ಸುಭದ್ರವಾಗಿರುವುದು. ಕುಟುಂಬಗಳು ಒಡೆದರೆ ದೇಶಕ್ಕೆ ಹಾನಿ ಮಾಡಿದಂತೆಯೇ ಸರಿ. ಇದನ್ನರಿತು ರಕ್ಷಾ ಬಂಧನ ಹಬ್ಬವನ್ನು ಸುಮನಸ್ಸಿನಿಂದ ಆಚರಿಸಿದರೆ, ಆ ಹಬ್ಬಕ್ಕೂ ಒಂದು ನಿಜವಾದ ಬರುತ್ತೆ ಅಲ್ಲವೇ?.


  •  ಡಾ.ಮಲ್ಲಿಕಾರ್ಜುನ ಎಸ್ ಆಲಮೇಲ – ಯಡ್ರಾಮಿ.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW