ರಾಖಿ ಹಬ್ಬದಂದು ಸಹೋದರಿ ಸಹೋದರನ ಕೈಗೆ ಕಟ್ಟುವ ಕೇಸರಿ ದಾರ, ಬರಿ ದಾರವಲ್ಲ. ಅದು ರಕ್ಷೆಯ ಪ್ರತೀಕ. ಒಬ್ಬರ ಮೇಲೊಬ್ಬರು ನಂಬಿಕೆಯಾಗಿದೆ.
ಭಾರತೀಯ ಸಂಸ್ಕೃತಿಯಲ್ಲಿ ರಕ್ಷಾ ಬಂಧನ ಆಚರಣೆ ವಿಶೇಷವಾದ ಸ್ಥಾನವಿದೆ. ಶ್ರಾವಣ ಮಾಸದ ಹುಣ್ಣಿಮೆಯ ದಿನದಂದು ರಕ್ಷಾ ಬಂಧನವನ್ನು ಹಿಂದಿನಿಂದಲೂ ಆಚರಿಸುತ್ತಾ ಬಂದಿದೆ. ಅಣ್ಣ- ತಂಗಿಯರ ಬಾಂಧವ್ಯವನ್ನು ಈ ಹಬ್ಬವು ಭಾವನ್ಮಾತವಾಗಿ ಬೆಸೆಯುತ್ತದೆ. ಕಷ್ಟ ಕಾಲದಲ್ಲಿ ನಾನಿದ್ದೇನೆ ಎಂತಲೂ ಮತ್ತು ನಿನ್ನ ಸಂರಕ್ಷಣೆಗೆ ಸದಾ ಸಿದ್ದನಿದ್ದೇನೆ ಎಂದು ಅಣ್ಣ ತಂಗಿಗೆ ನೀಡುವ ಭರವಸೆಯ ದಿನವಾದರೆ, ಸದಾಕಾಲ ಅಣ್ಣ ನನ್ನ ಜೊತೆಗಿರುವನು ಎಂದು ತಂಗಿ ನಿರ್ಭಯವಾಗಿ, ಸಂತೋಷದಿಂದ ಇರುವುದರ ಜೊತೆಗೆ ಪರಸ್ಥರ ಒಬ್ಬರ ಮೇಲೊಬ್ಬರು ನಂಬಿಕೆಯನ್ನು ಬಲಗೊಳ್ಳಿಸುವ ದಿನವೇ ಈ ರಾಕೀ ಹಬ್ಬ ಎನ್ನಬಹುದು.
ರಕ್ಷಾ ಬಂಧನ ಪ್ರಾಚೀನ ಕಾಲದಿಂದ ಬಹಳ ಪ್ರಾಮುಖ್ಯತೆಯನ್ನು ಹೊಂದಿದೆ. ಈ ರಕ್ಷಾ ಬಂಧನಕ್ಕೆ ಹಲವಾರು ಕತೆಗಳು- ಪುರಾಣಗಳಿವೆ. ದೇವತೆ ಮತ್ತು ರಾಕ್ಷಸರ ನಡುವೆ ನಡೆಯುವ ಯುದ್ಧದ ಸಮಯದಲ್ಲಿ, ಇಂದ್ರನನ್ನು ದೈತ್ಯ ಬಲಿ ಸೋಲಿಸುತ್ತಾನೆ. ಆಗ ಅವನ ಪತ್ನಿ ಸಾಚಿಯು ವಿಷ್ಣು ಕೊಟ್ಟಿರುವ ನೂಲಿನ ಕಂಕಣವನ್ನು ಇಂದ್ರನ ಕೈಗೆ ಕಟ್ಟಿ ವಿಜಯಶಾಲಿ ಆಗಲಿ ಎಂದು ಪ್ರಾರ್ಥನೆ ಮಾಡುತ್ತಾಳೆ. ಅದರಂತೆ ಇಂದ್ರನು ಯದ್ಧದಲ್ಲಿ ವಿಜಯಶಾಲಿಯಾಗಿ, ಅಮರಾವತಿಯ ರಾಜ್ಯವನ್ನು ಮತ್ತೆ ಮರಳಿ ಪಡೆಯುತ್ತಾನೆ.
ಫೋಟೋ ಕೃಪೆ : WordsZz
ಶಿಶುಪಾಲನನ್ನು ಸುದರ್ಶನ ಚಕ್ರದಿಂದ ಶಿಕ್ಷಿಸುವಾಗ ಕೃಷ್ಣನ ಕೈ ಬೆರಳು ಗಾಯವಾಗುವ ಸಂದರ್ಭದಲ್ಲಿ ದ್ರೌಪದಿ ತನ್ನ ಸೀರೆಯನ್ನು ಹರಿದು ಗಾಯಕ್ಕೆ ಕಟ್ಟುತ್ತಾಳೆ. ಆಗ ಕೃಷ್ಣ ಅವಳಿಗೆ ಸಮಯ ಬಂದಾಗ ಈ ಉಪಕಾರವನ್ನು ತೀರಿಸುತ್ತೇನೆ ಎಂದು ವಾಗ್ದಾನ ನೀಡಿ ಅವಳನ್ನು ತಂಗಿಯಾಗಿ ಸ್ವೀಕರಿಸುತ್ತಾನೆ. ಅದರಂತೆ ದುಶ್ಶಾಸನ ದ್ರೌಪದಿಯ ವಸ್ತ್ರಾಪಹರಣ ಮಾಡುವಾಗ ಕೃಷ್ಣ ಅವಳಿಗೆ ಸೀರೆಯನ್ನು ನೀಡಿ ಆಕೆಯ ರಕ್ಷಣೆಯನ್ನು ಮಾಡುತ್ತಾನೆ.
ಇನ್ನೊಂದೆಡೆ ಮಹಾಭಾರತದಲ್ಲಿ ದ್ರೌಪದಿ ಕೃಷ್ಣನಿಗೆ ರಾಖಿ ಕಟ್ಟಿದಂತೆ, ಕುಂತಿ ತನ್ನ ಮೊಮ್ಮಗ ಅಭಿಮನ್ಯುವಿಗೆ ಯುದ್ಧಕ್ಕೆ ಹೋಗುವಾಗ ಕಂಕಣ ಕಟ್ಟಿ ಶುಭ ಕೋರುತ್ತಾಳೆ.
ಮತ್ತೊಂದು ಘಟನೆಯಲ್ಲಿ ಚಿತ್ತೂರಿನ ರಾಣಿ ಕರ್ಣಾವತಿಯು ಗಂಡನನ್ನು ಕಳೆದುಕೊಂಡು ವಿಧವೆಯಾಗಿದ್ದಳು. ಮತ್ತು ಚಕ್ರವರ್ತಿ ಬಹದ್ದೂರ್ ಷಾನು ಈಕೆಯ ರಾಜ್ಯದ ಮೇಲೆ ದಂಡೆತ್ತಿ ಬರುವ ನಿರ್ಧಾರಕ್ಕೆ ಬಂದಿದ್ದನು. ಆಗ ಆಕೆಯು ಚಕ್ರವರ್ತಿ ಹುಮಾಯೂನನ ಸಹಾಯವನ್ನು ಬಯಸಿ ರಾಖಿಯನ್ನು ಕಳುಹಿಸಿದ್ದಳು. ಆಗ ಹುಮಾಯೂ ರಾಣಿ ಕರ್ಣಾವತಿ ಕಳುಹಿಸಿದ ರಾಖಿಯನ್ನು ಸ್ವೀಕರಿಸಿ ತಾನು ಸಹಾಯಕ್ಕೆ ಧಾವಿಸುವುದಾಗಿ ಸೂಚಿಸಿದನು. ಆದರೆ ದುರಾದೃಷ್ಠವಶ ಹುಮಾಯೂ ಸೈನ್ಯವು ಅಲ್ಲಿಗೆ ತಲುಪಲು ತಡವಾಯಿತು.
ಫೋಟೋ ಕೃಪೆ : jagarana.com
ಇದೇ ವೇಳೆಗೆ ರಾಣಿ ಕರ್ಣಾವತಿಯು ಇತರೆ ಹೆಂಗಸರೊಂದಿಗೆ ಕೂಡಿ, ತನ್ನ ಮಾನ ರಕ್ಷಣೆಗೆ ಯುದ್ಧಕ್ಕೆ ಇಳಿದಾಗ ಪ್ರಾಣ ತ್ಯಾಗ ಮಾಡಿದ್ದಳು. ಮುಂದೆ ಬಹದ್ದೂರ್ ಷಾನನ್ನು ಹುಮಾಯೂನ್ ಹೊರಗೆ ಹಾಕಿ, ಕರ್ಣಾವತಿಯ ಮಗ ವಿಕ್ರಮಜೀತನನ್ನು ಸಿಂಹಾಸನದಲ್ಲಿ ಕೂರಿಸಿದನು ಎನ್ನುವ ಇತಿಹಾಸಗಳು ರಾಖಿಯ ಮಹತ್ವವನ್ನು ಸಾರುತ್ತವೆ.
ಹೀಗೆ ರಜಪೂತ ರಾಣಿಯರು ತಮ್ಮ ನೆರೆಯ ರಾಜ್ಯದ ರಾಜನಿಗೆ ರಾಖಿಯನ್ನು ಸಹೋದರತ್ವದ ಭಾವನೆಯಿಂದ ಕಳುಹಿಸುತಿದ್ದರು. ಈ ಹಬ್ಬವು ಪುರಾತನ ಕಾಲದಿಂದ ನಡೆದು ಬಂದಿದ್ದು ಪ್ರೀತಿ, ಸ್ನೇಹ, ಪವಿತ್ರತೆ, ಸಾಮರಸ್ಯದ ಸಂಕೇತವಾಗಿದೆ.
ಪ್ರತಿಯೊಬ್ಬ ಸಹೋದರಿಯು ಸಮಾಜದ ದುಷ್ಟಶಕ್ತಿಗಳಿಂದ ರಕ್ಷಣೆಗೆ ತನ್ನ ಸಹೋದರನ ಮುಂಗೈಗೆ ರಾಖಿಯನ್ನು ಕಟ್ಟುತ್ತಾಳೆ. ಪ್ರತಿಯೊಬ್ಬ ಸಹೋದರನೂ ಈ ಸಮಯದಲ್ಲಿ ಸಹೋದರಿಯೆಡೆಗೆ ತನ್ನ ಭ್ರಾತೃತ್ವ ಪ್ರೇಮವನ್ನು ಉಜ್ವಲಗೊಳಿಸಬೇಕೆಂಬುದು ರಕ್ಷಾಬಂಧನ ಹಬ್ಬದ ನೀತಿಯಾಗಿದೆ.
ಫೋಟೋ ಕೃಪೆ : BP Guide India
ಈ ಹಬ್ಬವನ್ನು ‘ನೂಲಹುಣ್ಣಿಮೆ’ ಎಂತಲೂ ಕೂಡಾ ಕರೆಯುತ್ತಾರೆ. ಹಿಂದೆ ರಾಖಿಯು ಸಾಧಾರಣ ನೂಲಿನಿಂದ, ರೇಷ್ಮೆ ದಾರದಿಂದ ಮಾಡಲಾಗುತ್ತಿತ್ತು. ಆದರೆ ಇಂದಿನ ಆಧುನಿಕ ಜೀವನ ಶೈಲಿಯ ಜೊತೆ ರಾಖಿಯು ಆಧುನೀಕರಣಗೊಂಡಿದೆ. ರಾಖಿಯ ಬದಲು ಬೆಳ್ಳಿ, ಬಂಗಾರದ ಬ್ರಾಸ್ ಲೇಟ್ ಗಳಾಗಿ ಹೋಗಿವೆ. ರಾಖಿಯ ಜೊತೆಗೆ ಭಾವನೆಗಳು ಕೂಡ ಬದಲಾಗಿವೆ. ಈಗ ಅಣ್ಣ-ತಂಗಿಯರಲ್ಲಿ ಮೊದಲಿನ ಪ್ರೀತಿ, ವಾತ್ಸಲ್ಯ, ಜವಾಬ್ದಾರಿಗಳು ಕಮ್ಮಿಯಾಗಿ ತೋರಿಕೆಯ ರಕ್ಷಾ ಬಂಧನವಾಗಿ ಹೋಗಿದೆ. ಮತ್ತೆ ಹಳೆಯ ಇತಿಹಾಸದ ರಾಖಿಯ ಮಹತ್ವ ಪ್ರತಿಯೊಬ್ಬ ಅಣ್ಣ-ತಂಗಿಯರು ತಿಳಿಯಬೇಕಾಗಿದೆ. ಮತ್ತೆ ಅದೇ ನಿಷ್ಕಲ್ಮಶ ಪ್ರೀತಿ, ವಾತ್ಸಲ್ಯ ಅವರಲ್ಲಿ ಕಾಣಬೇಕಿದೆ.
- ಶಾಲಿನಿ ಹೂಲಿ ಪ್ರದೀಪ್