ಕಾಳೀ ಕಣಿವೆಯ ಕತೆಗಳು ಭಾಗ – 9

‘’ನನ್ನ ಜತೆಗೇ ತಂದಿದ್ದ ಹಳೆಯ ಟ್ರಂಕು ಹಿಡಿದು ಜೀಪು ಹತ್ತುತ್ತಿದ್ದಂತೆ ಹಿಂದೆಯೇ ಬಂದು ನಿಂತ ಅಡುಗೆಯ ಅಪ್ಪೂ ಕುಟ್ಟಿ ಕಣ್ಣಲ್ಲಿ ನೀರು ತಂದ.

‘ಸೇಕ್ರಪ್ಪೋರೇ…ಇನ್ನೊಂದೆರಡು ವರ್ಷ ಕಳೆದ್ರೆ ಸೂಪಾ ಆಣೆಕಟ್ಟು ಕಾಮಗಾರಿ ಸುರುವಾಗಬಹುದು. ನನಗೂ ಈ ಕಾಡು ಅಲೆದಲೆದು ಸಾಕಾಯ್ತು ಮಾರಾಯ್ರೇ. ವಯಸ್ಸೂ ಸವೆದೋಯ್ತು. ದೇಹ ದಣಿದಿದೆ ಸೇಕ್ರಪ್ಪೋರೇ. ಸೂಪಾ ಆಣೆಕಟ್ಟು ಕೆಲಸ ಸುರುವಾದ್ರೆ ಅಲ್ಲಿಗೆ ದೊಡ್ಡ ದೊಡ್ಡ ಕಂತ್ರಾಟುದಾರ್ರು ಬರ್ತಾರೆ. ನನ್ಗೆ ವಾಚಮನ್‌ ಕೆಲಸವಾದ್ರೂ ಅಡ್ಡೀಯಿಲ್ಲ. ನನಗೊಂದು ಒಳ್ಳೆಯ ಸಂಬಳದ ಕೆಲಸ ಕೊಡಿಸಿ ಸೇಕ್ರಪ್ಪೋರೇ…’ ಎಂದಾಗ ನನ್ನ ಕಣ್ಣಲ್ಲೂ ನೀರು ಬಂತು. ಅದು ಅವನ ಮನಸಿನ ಮಾತಾಗಿತ್ತು. ದನಿ ಬಾರದೆ ಹಾಗೇ ಕುಳಿತೆ. ಜೀಪು ಸೂಪಾದತ್ತ ಹೊರಟಿತು. ಎಲ್ಲವೂ ಅನಿರೀಕ್ಷಿತವಾಗಿ ನಡೆದುಹೋಯಿತು. ಇಡೀ ಸರ್ವೇ ತಂಡ ನನ್ನನ್ನೇ ನೋಡುತ್ತ ಟೆಂಟು ಮುಂದೆ ನಿಂತಿತ್ತು. ನಾನು ಖಿನ್ನವದನನಾಗಿ ಎಲ್ಲರಿಗೂ ಕೈ ಮಾಡಿದೆ. ಮುಂದಿನ ಸೀಟಿನಲ್ಲಿ ನಾಯಕ ಸಾಹೇಬರು ಕೂತಿದ್ದರು. ಸರಕಾರೀ ಜೀಪಿನಲ್ಲಿ ಮುಂದಿನ ಸೀಟಿನಲ್ಲಿ ಯಾವತ್ತಿದ್ರೂ ಸಾಹೇಬರೇ ಕೂಡಬೇಕು..ಹಿಂದಿನ ಸೀಟಿನಲ್ಲಿ ನಾನು ನನ್ನ ಟ್ರಂಕು ಹಿಡಿದು ಕುಳಿತುಕೊಂಡೆ. ಎಲ್ಲ ನೋಡುತ್ತಿದ್ದಂತೆ ಜೀಪು ಕೆಂಪು ಧೂಳನ್ನು ಎಬ್ಬಿಸುತ್ತ, ಕಾಡಿನ ದಾರಿ ಶೀಳಿಕೊಂಡು ಸೂಪಾದತ್ತ ಓಡಿತು’’

ಇದುವರೆಗೆ

ಕ್ಯಾಸಲ್‌ ರಾಕ್‌ ನಲ್ಲಿ ಪೋರ್ತುಗೀಜರ ವಾಸದ ಕಟ್ಟಡಗಳನ್ನು ನೋಡಿ ಬೆರಗಾದೆ. ಕಟ್ಟಡ ಕಾವಲು ಮಾಡುತ್ತಿದ್ದ ಮಾಂಜ್ರೇಕರ ಬಗಲಿನಲ್ಲಿಯೇ ಒಂದು ಅಂಗಡಿ ಇಟ್ಟುಕೊಂಡಿದ್ದ. ಅದರಲ್ಲಿ ಬೀಡಿ, ಸಿಗರೇಟು, ಬೆಂಕೀಪೊಟ್ಟಣ, ಗೋವಾ ಡ್ರಿಂಕ್ಸು ಬಾಟಲಿಗಳು, ಕರಿದ ಚಕ್ಕುಲಿ, ಹುರಿದ ಶೇಂಗಾ ಪೊಟ್ಟಣಗಳು ಇದ್ದವು. ಇವನ ಹತ್ತಿರ ವ್ಯಾಪಾರ ಮಾಡಿದರೆ ಪೋರ್ತುಗೀಜರ ಮನೆಯ್ಲಿ ಕೂತು ಕುಡಿಯಲು ಅವಕಾಶ ಕೊಡುತ್ತಿದ್ದ. ನನ್ನ ಜೊತೆಗೆ ಬಂದಿದ್ದ ಜಾನ್‌ ಮೆಲ್ಲಗೆ ನನ್ನ ಹಣ ಖರ್ಚು ಮಾಡಿಸುತ್ತಿದ್ದ. ನನಗೆ ಕ್ಯಾಸಲ್‌ ರಾಕ್‌ ತುಂಬ ಹಿಡಿಸಿತು. ನಮ್ಮ ಮುಂದಿನ ಸರ್ವೇ ಕ್ಯಾಂಪನ್ನು ಇಲ್ಲಿಯೇ ಮಾಡಬೇಕು ಎಂದು ಮೇಲಿನವರಿಗೆ ಹೇಳಬೇಕೆಂದು ಕೊಂಡೆ. ವಾಪಸು ಕಾಡಿಗೆ ನಡೆದು ನಮ್ಮ ಟೆಂಟಿಗೆ ಬಂದಾಗ ಧಾರವಾಡ ಆಫೀಸಿನ ಜೀಪು ಬಂದದ್ದು ಕಂಡಿತು. ಶ್ರೀ ವಿ.ವಾಯ್‌.ನಾಯಕ ಸಾಹೇಬರು ಬಂದಿದ್ದರು. ಮತ್ತು ಅವರು ಹೇಳಿದ ಸುದ್ದಿಯಿಂದ ನಾನು ಕಂಗಾಲಾದೆ. ನನ್ನನ್ನು ಸರ್ವೇ ಕ್ಯಾಂಪಿನಿಂದ ತಗೆದು ಯೋಜಿತ ಸೂಪಾ ಆಣೆಕಟ್ಟು ಸ್ಥಳಕ್ಕೆ ಎತ್ತಂಗಡಿ ಮಾಡಿದ್ದರು. ಮತ್ತು ಈಗಲೇ ತಮ್ಮೊಂದಿಗೆ ಹೊರಡಬೇಕು ಅಂದಾಗ ಮಾತಿಲ್ಲದೆ ನಾನು ನನ್ನ ಟ್ರಂಕನ್ನು ಎತ್ತಿಕೊಂಡು ಜೀಪು ಹತ್ತಿದೆ.

– ಮುಂದೆ ಓದಿರಿ

ಅಗಲುವ ಹೊತ್ತಿನಲ್ಲಿ ತಡಪಡಿಸುವ ಜೀವ

ನಾನು ಹಿಂದಿನಿಂದ ಜೀಪು ಹತ್ತಿ ಟ್ರಂಕನ್ನು ನನ್ನ ಕಾಲು ಬುಡದಲ್ಲಿಟ್ಟುಕೊಂಡೆ. ಬೆಳಗಾವಿಯಲ್ಲಿ ಓದುವಾಗ ನಾನು ಮಾಳಮಾರುತಿ ಗುಡ್ಡದ ಬಳಿಯಿದ್ದ ವಿಜಯನಗರ ಹಾಸ್ಟೆಲ್‌ನಲ್ಲಿದ್ದೆ. ಹಾಸ್ಟೆಲ್ಲಿನಲ್ಲಿ ಟ್ರಂಕಿದ್ದವನೇ ಸೇಫು. ಆಗ ಖಡೇ ಬಝಾರಿನಲ್ಲಿ ನಾಲ್ಕೂವರೆ ರೂಪಾಯಿ ಕೊಟ್ಟು ಕೊಂಡಿದ್ದ ಬಣ್ಣದ ತಗಡಿನ ಟ್ರಂಕು ಅದು. ಹಳೆಯದಾದರೂ ಅದರ ಮೇಲಿನ ಪ್ರೀತಿ ತಗ್ಗಿರಲಿಲ್ಲ. ಇನ್ನೇನು ಜೀಪು ಹೊರಡಬೇಕು. ಕೂಡಲೇ ಅಪ್ಪು ನನ್ನನ್ನೇ ದಿಟ್ಟಿಸುತ್ತ ವಿನೀತನಾಗಿ ನನ್ನ ಬಳಿ ಬಂದು ನಿಂತ. ನೋಡಿದರೆ ಅವನ ಕಣ್ಣು ಒದ್ದೆಯಾಗಿದ್ದವು. ನನಗೆ ಸಂಕಟವಾಯಿತು.

97071578_1061252307608487_3798392995531718656_o

‘ಯಾಕೆ ಅಪ್ಪೂ…? ನೀನೂ ಅಲ್ಲಿಗೇ ಬರುತ್ತೀಯಲ್ಲ ಇಲ್ಲಿಯ ಕೆಲಸ ಮುಗಿದ್ಮೇಲೆ. ಎಲ್ರೂ ಸೂಪಾದಲ್ಲಿ ಸೇರೋಣ’ ಅಂದೆ. ಆತ ಉಗುಳಿ ನುಂಗಿಕೊಂಡು ಹೇಳಲೋ ಬೇಡವೋ ಅನ್ನುತ್ತ ಸಣ್ಣಗೆ ದನಿ ತಗೆದ.

‘ಸೇಕ್ರಪ್ಪನೋರೇ, ನನಗೂ ಈ ಕಾಡು ಸಾಕಾಗಿ ಹೋಯ್ತು. ವಯಸ್ಸಾಯ್ತು ನೋಡಿ. ಅಲ್ಲಿ ಡ್ಯಾಮು ಕೆಲ್ಸ ಏನಾದ್ರೂ ಸುರು ಆದ್ರೆ ನನ್ನ ನೆನಪಿಟ್ಟುಕೊಳ್ಳಿ. ದೊಡ್ಡ ದೊಡ್ಡ ಕಂಪಣೀ ಜನ ಬರ್ತಾರೆ ನೋಡಿ. ಅಂಥ ಸಂದರ್ಭ ಬಂದ್ರೆ ನನಗೊಂದು ಒಳ್ಳೇ ಸಂಬಳ ಸಿಗೋ ಕೆಲಸ ನೋಡಿ. ಈ ಗೋರ್ಮೆಂಟಿನೋರಿಗಿಂತ ಖಾಸಗೀ ಜನ ಹೆಚ್ಚು ಸಂಬಳ ಕೊಡ್ತಾರೆ. ಎಲ್ಲಿದ್ರೂ ನಿಮಗೆ ನಾನೇ ಅಡುಗೆ ಮಾಡಿ ಹಾಕ್ತೀನಿ’ ಅಂದ ಮೆಲ್ಲಗೆ. ಅವನ ಕಣ್ಣಲ್ಲಿ ನೀರು ಇತ್ತು ಅನ್ನುವುದಕ್ಕಿಂತ ಈಗ ಅದು ನನ್ನ ಕಣ್ಣಲ್ಲಿತ್ತು. ಅಪ್ಪು ಕುಟ್ಟಿಗೆ ಇಲ್ಲಿಯ ಕಾಡಿನ ಏಕತಾನತೆ ಬೇಸರ ತರಿಸಿತ್ತು. ಆತ ಈ ಬಗ್ಗೆ ಯಾರ ಬಳಿಯೂ ಹೇಳಿಕೊಂಡಿರಲಿಲ್ಲ ಎಂದು ನನಗೆ ಆಗ ಅನಿಸಿತು. ಹಾಗೆ ನೋಡಿದರೆ ಸರ್ವೇ ತಂಡದವರ ತ್ಯಾಗ ದೊಡ್ಡದೇ. ಅದು ಹೊರ ಜಗತ್ತಿಗೆ ಗೊತ್ತಾಗುವಂಥದ್ದಲ್ಲ. ಹಗಲು ರಾತ್ರಿ ಅನ್ನದೇ ಕಾಡಿನಲ್ಲೇ ಇದ್ದು ದೇಶಕ್ಕಾಗಿ ಕೆಲಸ ಮಾಡಬೇಕು. ಅದೂ ಯಾವ ಸವಲತ್ತುಗಳೂ ಇಲ್ಲದ ಕಾಲದಲ್ಲಿ. ನಾನು ಸುಮ್ಮನೇ ತಲೆಯಾಡಿಸಿ ಅವನ ಕೈ ಹಿಡಿದೆ. ಈಗ ಎಲ್ಲರೂ ‘ಬೈಬೈ’ ಮಾಡುತ್ತಿದ್ದಂತೆ ಜೀಪಿನ ಚಾಲಕ ಮೆಹಬೂಬ ಎಕ್ಸಲೇಟರ್‌ ತುಳಿದ. ಜೀಪು ಕೆಂಪು ಧೂಳೆಬ್ಬಿಸುತ್ತ ಕಾಡಿನ ದಾರಿ ಸೀಳಿಕೊಂಡು ಜಗಲಬೇಟ್‌ ಮೂಲಕ ಸೂಪಾದತ್ತ ಓಡಿತೊಡಗಿತು.

ಸೂಪಾ ನೆಲದಲ್ಲಿ ಆತಂಕದ ಹೆಜ್ಜೆ

ಜೀಪು ಸೂಪಾ ಪ್ರವೇಶಿಸಿದಾಗ ಜೀಪಿನ ಹಿಂದೆ ಕುಳಿತಿದ್ದ ನನಗೆ ಮೊದಲು ಕಂಡದ್ದು ಮಲಯಾಳೀ ಲಕ್ಕೀ ಹೊಟೆಲ್ಲು. ಅದರ ಪಕ್ಕದಲ್ಲೇ ಇದ್ದ ಬೀಡೀ ಸಿಗರೇಟು ಪಾನ ದುಕಾನು. ಅದರಲ್ಲಿ ಒಳಗೆ ಕೂತು ಪಾನು ಕಟ್ಟುತ್ತಿದ್ದ ಕೆಂಪು ಕೆಂಪಾದ ಕೆನ್ನೆಯ, ತಲೆಗೆ ಕ್ರಾಫು ಮಾಡಿದ ತಕ್ಕ ಮಟ್ಟಿಗೆ ಸುಂದರಿಯೇ ಅನ್ನಬಹುದಾದ ಯುವತಿ. ಅಲ್ಲಿ ಪಾನು ತಿನ್ನುತ್ತಿದ್ದ ಒಂದಷ್ಟು ಗಂಡಸರು.

2

ಫೋಟೋ ಕೃಪೆ : Fancycave

ಅದರ ಪಕ್ಕದಲ್ಲಿಯೇ ಸರಕಾರೀ ಸಾರಾಯಿ ಅಂಗಡಿಯ ಗೂಡು. ಅಲ್ಲಿ ರಸ್ತೆ ಕ್ರಾಸು ಆಗಿತ್ತು. ಪೂರ್ವಕ್ಕೆ ಒಂದು ರಸ್ತೆ. ಬೋರ್ಡು ನೋಡಿದರೆ ದಾಂಡೇಲಿ ಇಪ್ಪತ್ನಾಲ್ಕು ಕಿ.ಮೀ. ಅನ್ನುವ ಬೋರ್ಡು. ಎದುರು ಹೋಗುವ ರಸ್ತೆ ಸೀದ ಕಾಳೀ ನದಿಯತ್ತ ಹೋಗಿ ಅಲ್ಲಿ ಬ್ರಿಟಿಷರ ಕಾಲದ ಎತ್ತರವಲ್ಲದ ಸೇತುವೆ. ಅದನ್ನು ದಾಟಿದರೆ ಮುಂದೆ ಅದು ಜೋಯಡಾ. ಕುಂಬಾರವಾಡಾ, ಅಣಶಿ, ಕದ್ರಾಗಳನ್ನು ದಾಟಿ ಅರಬೀ ಸಮುದ್ರದ ತಟದಲ್ಲಿರುವ ಸದಾಶಿವ ಗಡ ತಲುಪುತ್ತದೆ. ಇಲ್ಲಿಯೇ ಕಾಳೀ ನದಿಯು ಸಮುದ್ರ ಸೇರುವುದು. ಅದರಾಚೆ ಇರುವುದೇ ಕಾರವಾರ ನಗರ. ನಾನು ಇ.ಇ. ಸಾಹೇಬರನ್ನು ಆಗಾಗ ಇದೇ ಜೀಪಿನಲ್ಲಿ ಅಲ್ಲಿಗೆ ಕರೆದೊಯ್ತೀನಿ’’ ಜೀಪಿನ ಚಾಲಕ ಹೆಮ್ಮೆಯಿಂದ ನನಗೆ ಕತೆ ಹೇಳಿದ. ಮುಂದಿನ ಸೀಟಿನಲ್ಲಿ ಕೂತಿದ್ದ ನಾಯಕ ಸಾಹೇಬರಿಗೆ ಕಾಡಿನ ಪ್ರಯಾಣ ಸಾಕಾಗಿತ್ತೇನೋ.

ಅವರು ನನ್ನನ್ನು ದಾರಿಯಲ್ಲಿಯೇ ಬಿಟ್ಟು ಹೋದರು

’ಮೊದ್ಲು ನನಗೆ ಮನೆಗೆ ಬಿಡು ಮೆಹಬೂ’ ಎಂದು ಹೇಳಿದರು. ಕೂಡಲೇ ಆತ ಜೀಪು ಎಡಕ್ಕೆ ತಿರುಗಿಸಿ ನನಗೆ ಹೇಳಿದ. ’ನರಸಿಂಹ ಸಾಹೇಬ್ರ ಆಫೀಸು ಅದೇ ನೋಡಿ. ಇಲ್ಲಿಳಿದು ಹೋಗಿ’ ಅಂದ. ಅದರ ಹಿಂದೆಯೇ ನಾಯಕ ಸಾಹೇಬರು ಹೇಳಿದರು.

1

ಫೋಟೋ ಕೃಪೆ : ltl.cat

‘’ಹಾಂ!. ಶೇಖರ್‌ ನೀವು ಇಲ್ಲಿಯೇ ಇಳಿದುಕೊಳ್ಳಿ. ಅಲ್ಲಿ ಎಡಕ್ಕೆ ಕಾಣ್ತಿದೆಯಲ್ಲ. ಅದೂ ನಮ್ಮವರದ್ದೇ ಆಫೀಸು. ಅದು ಇನ್ವೆಸ್ಟಿಗೇಶನ್‌ ಸಬ್‌ ಡಿವಿಜನ್ ನಂಬರ್‌ ಟೂ. ಗೊತ್ತಲ್ಲ ಅದು ಮೆಕಾನಿಕ್‌ ಗ್ರುಪ್ಪು. ಹೆಡ್‌ ಕ್ಲಾರ್ಕು ಭೈರಾಚಾರಿ . ಇರೋದು ಅಲ್ಲೇನೇ. ಎಲ್ಲಾ ಹೇಳೀದೀನಿ ಅವ್ರಿಗೆ. ನಿಮಗೆ ಮೂರು ದಿನ ಇರೋದಕ್ಕೆ ವ್ಯವಸ್ಥೆ ಮಾಡ್ತಾರೆ. ಆಮೇಲೆ ನೀವು ಊರಲ್ಲಿ ಬಾಡಿಗೆ ರೂಮು ಹುಡುಕಿಕೊಳ್ಳಿ. ಐಬೀನೂ ಇಲ್ಲೇ ಇದೆ. ಹೈದರಾಬಾದು ಟೀಮು ನಾಳೆ ಐಬಿಗೇ ಬಂದು ಕ್ಯಾಂಪ್‌ ಹಾಕ್ತದೆ. ನಾನು ನಾಳೆ ಬೆಳಿಗ್ಗೆ ಸಿಗ್ತೇನೆ’’ ಅಂದರು. ನಾನು ನನ್ನ ಟ್ರಂಕು ಹಿಡಿದು ಕೆಳಗಿಳಿದೆ. ಸಂಜೆ ಹೊತ್ತು ಸೂಪಾ ನೆಲದ ಮೇಲೆ ಕಾಲಿಟ್ಟಾಗ ಮೈಯಲ್ಲಿ ಏನೋ ಒಂಥರ ನಡುಕ. ಆತಂಕ. ರೋಮಾಂಚನ. ಎಲ್ಲ ಒಟ್ಟಿಗೇ. ನನಗೆ ಸೂಚನೆ ಕೊಟ್ಟ ನಾಯಕ ಸಾಹೇಬರು ಹೊರಟೇ ಬಿಟ್ಟರು.

ಅವರು ಇರೋದೂ ಸೂಪಾದಲ್ಲಿಯೇ. ಇಲ್ಲಿಯೇ ಬಾಡಿಗೆ ಮನೆ ಮಾಡಿದ್ದಾರೆ ಎಂದು ಶಿರೋಡ್ಕರರು ಹೇಳಿದ್ದರು. ಕಾರವಾರದಲ್ಲಿದ್ದ ಸಂಸಾರವನ್ನು ಇಲ್ಲಿಗೇ ತಂದಿಟ್ಟುಕೊಂಡಿದ್ದಾರಂತೆ. ಸೂಪಾ ಊರು ತಲುಪಿದ ಕೂಡಲೇ ಅವರಿಗೆ ಮನೆಯ ಸೆಳೆತ ಹೆಚ್ಚಾಗಿರಬೇಕು. ನನ್ನನ್ನು ದಾರಿಯಲ್ಲಿಯೇ ಬಿಟ್ಟು ಹೊರಟೇ ಬಿಟ್ಟಿದ್ದರು. ಚಾಲಕ ಮೆಹಬೂಬ ರಾತ್ರಿಯೇ ಧಾರವಾಡಕ್ಕೆ ಹೋಗಬೇಕಾಗಿತ್ತೆಂಬ ಸಬೂಬು ಬೇರೆ ಹೇಳಿದರು.

ಇಂಜನಿಯರರ ಕಚೇರಿಯಲ್ಲಿ ಕೊಕ್-ಕೊಕ್‌ ಸದ್ದು

ಟ್ರಂಕು ಹಿಡಿದು ಕುಕ್ಕುಟ ಕಚೇರಿಯತ್ತ ನಡೆದೆ. ಅದು ಮೆಕ್ಯಾನಿಕ್‌ ವಿಭಾಗ ಸಬ್‌ಡಿವಿಜನ್‌ವಾದ್ದರಿಂದ ಅದಕ್ಕೂ ಸಂಬಂಧವಿರಲಿಲ್ಲ. ಆದರೂ ಸೂಪಾದಲ್ಲಿ ಇರುವ ನಮ್ಮ ಇಲಾಖೆಯ ಏಕೈಕ ಕಚೇರಿಯೆಂದರೆ ಅದೊಂದೇ ಆಗಿತ್ತು. ನಾನು ಕಚೇರಿಯ ಬಾಗಿಲಕ್ಕೆ ಹೋಗುವುದಕ್ಕೂ ಭೈರಾಚಾರಿಯವರು ಮೆಟ್ಟಿಲಿಳಿದು ಒಳಗಿಂದ ಬರುವುದಕ್ಕೂ ಸರಿ ಹೋಯಿತು.

2

ಫೋಟೋ ಕೃಪೆ : pintrest

‘ಓಹ್‌ ನೀವೇ ಅಲ್ವಾ ಶೇಖರ್‌? ಬನ್ನಿ. ನಾಯಕ್‌ ಅವರು ಎಲ್ಲ ಹೇಳಿದ್ದಾರೆ. ಆದ್ರೆ ಇಲ್ಲಿ ಮೂರೇ ದಿನ ಇರೋದಕ್ಕೆ ಅವಕಾಶ ಇದೆ. ನಮ್ಮ ಸಾಹೇಬ್ರು ಬೆಂಗಳೂರಿಗೆ ಹೋಗೀದಾರೆ. ಅವ್ರು ಬರೋದ್ರೊಳಗೆ ನೀವು ಇಲ್ಲಿಂದ ಖಾಲೀ ಮಾಡ್ಬೇಕು. ಯಾಕಂದ್ರೆ ಅವ್ರು ಬಂದ್ರೆ ಬೇರೆ ಯಾರೂ ಇಲ್ಲಿರೋದಕ್ಕೆ ಅವ್ರು ಬಿಡೋದಿಲ್ಲ. ಇಲ್ಲಿ ಇರೋದು ಅವ್ರು ಮತ್ತು ಅವರ ಚಿಕಣೀ ದಂಡು ಮಾತ್ರ’ ಅಂದರು ನಗುತ್ತ. ನನಗೆ ಸಮಾಧಾನವಾದರೂ ಅಚ್ಚರಿಗೊಂಡೆ. ಮತ್ತು ಅವರ ಹಿಂದಿನಿಂದ ಟ್ರಂಕು ಹಿಡಿದು ಕಚೇರಿ ಹೊಕ್ಕೆ. ಒಳಗೆ ಕಾಲಿಡುತ್ತಲೂ ಕೋಳಿಗಳ ‘ಕೊಕ್‌-ಕೊಕ್‌’ ಸದ್ದು ಕೇಳಿಸಿತು. ಬೇರೆ ಯಾರೂ ಅಲ್ಲಿರಲಿಲ್ಲ. ನನ್ನ ಆತಂಕವನ್ನು ಗಮನಿಸಿದ ಭೈರಾಚಾರಿಯವರು ಹೇಳಿದರು. ‘ನೋಡಿ. ಈ ಆಫೀಸೀನಲ್ಲಿ ಇರೋದೇ ಮೂರು ಜನ. ನಾನು, ಕ್ಯಾಶಿಯರ್‌ ಕಂ ಕ್ಲರ್ಕು, ಮ್ಯಾನೇಜರು ಎಲ್ಲಾ ಅನ್ನಿ. ಮತ್ತು ಆಫೀಸು ಜೀಪು ಚಾಲಕ ನಾಗೇಶ್‌ ಪೈ. ಆತ ಚಾಲಕನೂ ಹೌದು. ಸಿಪಾಯಿಯೂ ಹೌದು. ಇನ್ನು ಬೋರು ಮಶೀನ್ಸು ಎಲ್ಲಾ ಡ್ಯಾಮ್‌ ಸೈಟಿನಲ್ಲಿವೆ. ಒಟ್ಟು ಆರು ಬೋರು ಕಾಂಪ್ರೇಸರು ಮಶೀನು ಇದಾವೆ ಅನ್ನಿ. ಒಂದೊಂದು ಮಶೀನಿಗೆ ಒಬ್ಬೊಬ್ಬ ಆಪರೇಟರು, ನಾಲ್ಕು ಜನ ಹೆಲ್ಪರುಗಳಿದ್ದಾರೆ. ಅವರೂ ದಿನಗೂಲಿಯವರೇ ಅನ್ನಿ. ಒಂದು ಕೋರು ಬಾಕ್ಸ ಸ್ಟೋರು, ಒಂದು ಮಶಿನರಿ ಟೂಲ್ಸು ಸ್ಟೋರು ಇದೆ. ಅದಕ್ಕೆ ಅನಂತರಾಮ್‌ ಪಿಳ್ಳೆ ಅನ್ನೋರು ಸ್ಟೋರು ಕೀಪರು. ಅವ್ರೂ ವರ್ಕಚಾರ್ಜ ಸಿಬ್ಬಂದಿ. ಶರಾವತಿ ಎಬಿ ಸೈಟಿನಲ್ಲಿದ್ರು. ಅಲ್ಲಿ ಕೆಲಸ ಮುಗೀತು ನೋಡಿ. ಇಲ್ಲಿಗೆ ಹಾಕೀದಾರೆ.

ಇಲೆಕ್ಟ್ರಿಕ್‌ ಇಲಾಖೆಯ ಖಾಯಂ ಸಿಬ್ಬಂದಿ ಅಂದ್ರೆ ಮೂರೇ ಜನ

ಇಲಾಖೆಯ ಪರಮ್ನೆಂಟು ಸ್ಟಾಫು ಅಂದ್ರೆ ನಾನು, ಸಾಹೇಬರು ಮತ್ತು ಪೈ ಡ್ರೈವರ್‌ ಅಷ್ಟೇ. ಮೂರೇ ಜನ’’ ‘’ಮತ್ತೆ ಬೋರಿಂಗ್‌ ಮಶೀನು ಸಿಬ್ಬಂದಿ ಎಲ್ಲಿದಾರೆ ಸಾರ್‌?’’ ಎಂದು ಕೇಳಿದೆ. ‘’ಅವ್ರೆಲ್ಲಾ ಡ್ಯಾಮ್‌ ಸೈಟಿನಲ್ಲೇ ಇದಾರೆ. ಎಲ್ರೂ ದಿನಗೂಲಿ ಸ್ಟಾಫು. ಡ್ಯಾಮ್‌ ಸೈಟು ಇಲ್ಲಿಂದ ಒಂದೂವರೆ ಕೀ.ಮೀ. ದೂರ ಇರೋದು. ಅಲ್ಲಿ ಅವ್ರಿಗೆಲ್ಲಾ ಜಂಗ್‌ಶೀಟು ‘ಶೆಡ್ಡು’ ಹಾಕೀದಾರೆ. ಅಲ್ಲೇ ವಾಸ – ಅಲ್ಲೇ ಕೆಲಸ ಅವ್ರದ್ದು. ಹಾಂ, ಅಲ್ಲಿ ಶೆಡ್ಡನಲ್ಲಿರೋ ಸವಲತ್ತು ನಮ್ಮ ಮೆಕ್ಯಾನಿಕ್‌ ಕಚೇರಿಯವರಿಗೆ ಮಾತ್ರ ಇದೆ. ಯಾಕಂದ್ರೆ ನಮ್ಮ ಬಾಸೇ ಬೇರೆ. ನಿಮ್ಮ ಬಾಸೇ ಬೇರೆ ನೋಡಿ. ನಿಮ್ಮ ಬಾಸು ಸಿ.ಎಸ್‌.ಹೆಬ್ಲಿಯವ್ರು. ಅವ್ರು ಒಳ್ಳೆಯವರೇ ಬಿಡಿ. ಆದ್ರೆ ಕೆಲಸಗಾರರಿಗೆ ಏನೂ ಅನುಕೂಲ ಮಾಡಿಲ್ಲ’’ ಅಂದರು. ಅಷ್ಟರಲ್ಲಿ ಕೋಳಿಗಳ ‘ಕೊಕ್‌- ಕೊಕ್‌’ ದನಿ ಅಲ್ಲಿ ಹೆಚ್ಚಾಯಿತು. ನಾನು ಏನೆಂದು ಕೇಳುವ ಮೊದಲೇ ಭೈರಾಚಾರಿಯವರೇ ಹೇಳಿದರು.

1

ಫೋಟೋ ಕೃಪೆ : Mangabay-india

‘‘ನಮ್ಮ ಸಾಬೇಹರು ನರಸಿಂಹಯ್ಯ ಅಂತ. ನೀವೂ ಕೇಳಿರಬೇಕು. ಬೆಂಗಳೂರಲ್ಲಿ ಫ್ಯಾಮಿಲಿ ಬಿಟ್ಟು ಒಬ್ಬರೇ ಇಲ್ಲಿದಾರೆ. ಈ ಬಿಂಲ್ಡಿಂಗು ಬ್ರಿಟಿಷ್‌ ಕಾಲದ್ದು. ಸರಕಾರ ಬಾಡಿಗೆ ಕಟ್ಟುತ್ತೆ. ತಿಂಗಳಿಗೆ ಮೂವತ್ತು ರೂಪಾಯಿಯಂತೆ. ಭಾರೀನೇ ಆಯ್ತು. ಸಬ್‌ ಡಿವಿಜನ್‌ ಅಫೀಸೂ ಇದೇ. ಸಾಹೇಬರ ಮನೇನೂ ಇದೇ. ಇದು ಕಾಡಿನಲ್ಲಿರೋ ಊರು ನೋಡಿ. ಸಮಯ ಹೋಗಬೇಕಲ್ಲ. ಅದಕ್ಕೇ ಕೋಳಿಗಳನ್ನ ಸಾಕಿದಾರೆ. ಹತ್ತೆಂಟು ಅವೆ ಅನ್ನಿ. ಡೋಂಟ್‌ ವರೀ. ಸ್ಟೋರ್‌ ರೂಮಿನಲ್ಲಿ ಕೂಡಿ ಹಾಕಿ ಚಿಲಕ ಹಾಕೀದೀನಿ’’ ನನಗೆ ಅಚ್ಚರಿ ಆಯಿತು.

ಕಾಡಿನಲ್ಲಿ ಹುಲಿ-ಆನೆ-ಕರಡಿ ನೋಡಿ ಬಂದ ನಾನು ಇಲ್ಲಿ ಕುಕ್ಕುಟಗಳ ಮುಂದೆ ನಿಲ್ಲೋ ಹಾಗಾಯ್ತು

‘‘ಏನೂ….ಸಾಹೇಬರು ಆಫೀಸಿನಲ್ಲಿ ಕೋಳಿಗಳನ್ನು ಸಾಕೀದಾರಾ? ಏನು ಮೊಟ್ಟೇ ತಿನ್ನುತ್ತಾರಾ ಅವ್ರೂ…?’’

ನನ್ನ ಬೋಳೇತನಕ್ಕೆ ಭೈರಾಚಾರಿ ನಕ್ಕರು.

‘‘ಬರೀ ಮೊಟ್ಟೇನಾ. ಅದರ ಅಮ್ಮನ್ನೂ ತಿಂತಾರೆ. ನಮಗ್ಯಾಕೆ ಬಿಡಿ ದೊಡ್ಡವರ ಸುದ್ದಿ. ಹ್ಯಾಗೂ ನೀವಿರೋದು ಇಲ್ಲಿ ಬರೀ ಮೂರು ದಿನ. ಇರೋತನಕ ಕೋಳಿಗಳಿಗೆ ನೀರು, ಕಾಳು ಹಾಕ್ತಾ ಇರಿ. ನಾನೂ ಇರ್ತೇನೆ ಅನ್ನಿ’’

1

ಫೋಟೋ ಕೃಪೆ : Mount Abu

ಈಗ ನಾನು ಯೋಚನೆಗೆ ಬಿದ್ದೆ. ಅಲ್ಲಿ ದಟ್ಟ ಕಾಡಿನಲ್ಲಿ ಹುಲಿ,ಆನೆ, ಕರಡಿ, ಕಾಡುಕೋಣನ ಮುಂದೆ ನಿಂತು ಬಂದವ ನಾನು. ಈಗ ಇಲ್ಲಿ ಸಾಹೇಬರ ಕುಕ್ಕಟಗಳಿಗೆ ಕಾಳು-ನೀರು ಹಾಕಬೇಕು. ಮುಂದೆ ಇವರು ಇದೇ ಕೆಲಸ ನನಗೆ ಕೊಟ್ಟರೆ? ಗಾಬರಿಯಾದೆ. ಬೇಡ ಮೂರೇ ದಿನ ಇಲ್ಲಿದ್ದು ಅಷ್ಟರೊಳಗೆ ಬಿಡಾರ ಬದಲಿಸುವುದೇ ಕ್ಷೇಮ ಅಂದು ಕೊಂಡೆ. ನೋಡಿ ಇವ್ರೇ. ರಾತ್ರಿ ಇಲ್ಲಿ ನನ್ನ ಟೇಬಲ್‌ ಕೆಳಗೇ ಮಗಿಕೊಳ್ಳಿ. ಅಲ್ಲಿ ಮೂಲೇಲಿ ಚಾಪೆಯಿದೆ. ನಿಮ್ಮ ಹಾಸಿಗೆ ಬಿಡಿಸಿ ಕೊಂಡರಾಯ್ತು. ನನಗೆ ಮನೆಗೆ ಹೋಗೋದಕ್ಕೆ ಹೊತ್ತಾಯ್ತು. ಮನೇಲಿ ನಮ್ಮಾಕೆ ನಾನಿಲ್ದೆ ಇದ್ರೆ ಹೆದರಿಕೊಳ್ತಾಳೆ. ಊಟಕ್ಕೆ ಬೇಕಾದ್ರೆ ನೀವು ಇಲ್ಲಿರೋ ಲಕ್ಕೀ ಹೋಟೆಲ್ಲಿಗೇ ಹೋಗಿ. ಅಲ್ಲಿ ಕೇರಳಾ ಪರೋಟಾ, ಸೇರವಾ, ತುಂಬ ಚನ್ನಾಗಿರುತ್ತೆ. ಒಂದೊಂದ್‌ ಸಲ ನಾನು ಮನೆಗೆ ಪಾರ್ಸಲ್ಲು ಅಲ್ಲಿಂದ್ಲೇ ಒಯ್ಯೋದು ಎಂದು ಪುಸಲಾಯಿಸಿದ್ರು ಭೈರಾಚಾರಿ. ನಾನು ತಲೆ ಅಲ್ಲಾಡಿಸುತ್ತಲೂ ಅವರು ಎದ್ದು ಹೊರಗಿನ ಬೀಗ ತೋರಿಸಿ, ಬಂಗ್ಲೇ ಹೊರಗೆ ಆಚೆ ಕಕ್ಕಸು ಇದೆ. ಅದೂ ಆಫೀಸು ಕಕ್ಕಸು. ಹೋಗೋವಾಗ ಲೈಟು ಹಕ್ಕೊಳ್ಳಿ. ಒಂದೊಂದು ಸಲ ಒಳಗೆ ಹಾವು ಬಂದು ಮಲಗಿರ್ತವೆ ಎಂದು ಹೆದರಿಸಿದರು. ನಾನು ಬೆಳಿಗ್ಗೆ ಬೇಗ ಬಂದು ಬಿಡ್ತೀನಿ. ಅಷ್ಟರಲ್ಲಿ ಕೋಳಿಗಳಿಗೆ ಕಾಳು, ನೀರು ಹಾಕಿ. ಹಾಂ…! ಬೆಕ್ಕು ಬಂದೀತು ಹುಷಾರು. ಕೋಳಿಗಳ ಸದ್ದು ಕೇಳಿ ಒಮ್ಮೊಮ್ಮೆ ನರಿಯೂ ಬರುತ್ತೆ ಎಂದು ಇನ್ನೂ ಹೆದರಿಸಿದರು ಪುಣ್ಯಾತ್ಮ.

ಸಾಹೇಬರು ಮಲಗುವ ಕೋಣೆ ಮತ್ತು ಕೋಳಿಗಳ ಸ್ಟೋರು ರೂಮು. 

ಸಧ್ಯ ಮಲಗಲು ಜಾಗ ಸಿಕ್ಕಿದೆಯಲ್ಲ. ನಾಳೆ ಎಲ್ಲ ಬಿಟ್ಟು ಬಾಡಿಗೆ ಮನೆ ಹುಡುಕಬೇಕು. ನಾಯಕ ಸಾಹೇಬರು ಸಹಾಯ ಮಾಡ್ತೀನಿ ಅಂದಿದ್ದಾರೆ. ನಾಳೆಯೇ ಹೈದರಾಬಾದ ಟೀಮು ಬರುತ್ತದಂತೆ. ಎಷ್ಟು ಜನರು ಬರುತ್ತಾರೋ. ಅವರು ಹೇಗೋ ಏನೋ. ನಾನು ಯೋಚಿಸುವ ಮೊದಲೇ ಭೈರಾಚಾರಿಯವರು ‘ಹೊತ್ತಾಯಿತು. ನಮ್ಮಾಕೆ ಕಾಯ್ತಿರತಾಳೆ’ ಎಂದು ಇನ್ನೊಮ್ಮೆ ಹೇಳಿ ಹೊರಟೇ ಬಿಟ್ಟರು. ನಾನು ಒಮ್ಮೆ ಇಡೀ ಬಂಗಲೆಯನ್ನು ಕಣ್ಣಾಡಿಸಿ ನೋಡಿದೆ. ಹೌದು. ಇದೂ  ಬ್ರಿಟಿಷರ ಕಾಲದ್ದೇ ಇರಬೇಕು. ತಾರಸೀ ಮೇಲೆ ಕೆಂಪು ಹಂಚುಗಳು. ಯಾವುದೋ ಕಾಲದ ಫ್ಯಾನು. ಸಾಹೇಬರು ಕೂಡುತ್ತಿದ್ದ ಖುರ್ಚಿಯ ಎದುರು ಗೋಡೆಯ ಮೇಲೆ ಹಳೆಯ ಮಾದರಿಯ ನಿಲುವುಗನ್ನಡಿ. ಸೀಸಂ ಕಟ್ಟಿಗೆಯ ಖುರ್ಚಿ ಮೇಜುಗಳು. ಅವರು ಕೂಡುತ್ತಿದ್ದ ಎಡಗಡೆಯ ಕೋಣೆಯೇ ಅವರು ಮಲಗುವ ಕೋಣೆಯಂತೆ. ಅಲ್ಲಿ ಯಾರಿಗೂ ಪ್ರವೇಶವಿಲ್ಲ. ಅದಕ್ಕೆ ಹೊಂದಿಕೊಂಡೇ ಅಡುಗೇ ಮನೆಯೂ ಇದೆಯಂತೆ. ಅಡುಗೇ ಕೆಲಸಕ್ಕೆ ಸ್ಥಳೀಯನೇ ಆದ ಕಮಲಾಕರ ಎಂಬ ಮರಾಠೀ ಹುಡುಗ ಬರುತ್ತಾನಂತೆ. ಅವನಿಗೂ ಸರಕಾರೀ ಲೆಕ್ಕದಲ್ಲಿಯೇ ಸಂಬಳವಂತೆ. ಕೋಳೀ ಮಾಂಸದಡಿಗೆ ಪೊಗದಸ್ತಾಗಿ ಮಾಡುತ್ತಾನಂತೆ. ಮಾತಿನ ನಡುವೆ ಭೈರಾಚಾರಿಯವರೇ ಇದನ್ನು ಹೇಳಿದ್ದರು. 

ರಾತ್ರಿ ಎಂಟಾಯಿತು. ಅದುವರೆಗೆ ನೆನಪೇ ಆಗಿರದಿದ್ದ ಹಸಿವು ಈಗ ನನ್ನನ್ನು ಮೇಲಕ್ಕೆಬ್ಬಿಸಿತು. ಈ ಊರಲ್ಲಿ ಖಾನಾವಳಿಗಳಿರಲಿಲ್ಲ. ಕಾಮತಿ ಹೊಟೆಲ್ಲು ಹೊಳೆಯಾಚೆ ಇತ್ತು. ಇಲ್ಲಿ ಶುದ್ಧ ಶಾಖಾಹಾರಿ ಹೋಟೆಲ್ಲು ಸಿಗುವುದಿಲ್ಲ ಎಂಬ ಅರಿವು ನನಗೂ ಇತ್ತು. ಕೊನೆಗೆ ಹನುಮಂತ್ಯಾನ ಕತೆಯಲ್ಲಿ ಬಂದಿದ್ದ ಕೇರಳದ ಮೂಸಾನ ಲಕ್ಕೀ ಹೊಟೆಲ್‌ ನೆನಪಾಯಿತು.

ಮೂಸಾನ ಅಂಗಡಿಯ ಕೇರಳಾ ಪರೋಟಾ ಮತ್ತು ಸೇರ್ವಾ ಆಗ ಸೂಪಾದಲ್ಲಿಯೇ ಫೇಮಸ್ಸು

ಭೈರಾಚಾರಿಯವರೂ ಅಲ್ಲಿಂದಲೇ ಪರೋಟಾ-ಸೇರವಾ ಪಾರ್ಸೆಲ್ಲು ಕಟ್ಟಿಸಿಕೊಂಡು ಹೆಂಡತಿಗೂ ತಿನ್ನಿಸುತ್ತಿದ್ದರಲ್ಲ. ಈಗೀಗ ಅವರ ಹೆಂಡತಿಗೆ ಮೂಸಾನ ಲಕ್ಕೀ ಹೋಟೆಲ್ಲಿನ ರುಚಿ ನಾಲಿಗೆಗೇರಿ ಅಲ್ಲಿಯದೇ ಮೊಟ್ಟೇ ಸಾರು ಬೇಕು ಅಂದಳಂತೆ. ಪಾಪ ಪತಿರಾಯ ಕದ್ದು ಅದನ್ನೂ ಮನೆಗೆ ಒಯ್ದು ಕೊಡತೊಡಗಿದರಂತೆ. ಎಲ್ಲವನ್ನೂ ತಾವಾಗಿಯೇ ಬಾಯಿ ಬಿಟ್ಟಿದ್ದರು ಅವರು.

1

ಫೋಟೋ ಕೃಪೆ : You Tube

ಅಲ್ಲಿ ಮತ್ತೆ ಕೂಡಲಾಗಲಿಲ್ಲ. ಹಸಿದ ಹೊಟ್ಟೆಯಲ್ಲಿ ಯಾರೂ ದೇಶ ಭಕ್ತರಾಗುವುದಿಲ್ಲವಂತೆ. ಹಾಗೇ ಹಸಿದ ಹೊಟ್ಟೆಯಲ್ಲಿ ಯಾರೂ ಮಡಿ-ಹುಡಿ-ನೇಮ ಮಾಡುವುದಿಲ್ಲ. ಒಳಗೆ ಸ್ಟೋರ್‌ ರೂಮಿನಲ್ಲಿದ್ದ ಕೋಳಿಗಳು ಗದ್ದಲ ಎಬ್ಬಿಸಿದ್ದವು. ಕಾಳು ಹಾಕಬೇಕಾಗಿತ್ತೇನೋ. ಅತ್ತ ಗಮನ ಕೊಡದೆ ಕಚೇರಿಗೆ ಬೀಗ ಹಾಕಿ ರಸ್ತೆಯ ಮಿಣುಕು ದೀಪದ ಕೆಳಗೆ ಕಾಲು ಹಾಕುತ್ತ ಮೂಸಾನ ಲಕ್ಕೀ ಹೋಟೆಲ್ಲು ಕಡೆಗೆ ನಡೆದೆ.

ಇದ್ದುದರಲ್ಲಿಯೇ ಊರಲ್ಲಿ ದೊಡ್ಡದಾಗಿ ಕಾಣುವ ಮಲಬಾರೀ ಹೋಟೆಲ್ಲದು. ಅದಕ್ಕಂಟಿಯೇ ಇದ್ದ ಪಾನ-ಬೀಡಾ ಅಂಗಡಿಯಲ್ಲಿದ್ದ ಆ ಬಿಳೀ ಹುಡುಗಿ ಇನ್ನೂ ಕೂತಿದ್ದಳು. ಅವಳ ವ್ಯಾಪಾರ ರಾತ್ರಿ ಲಕ್ಕೀ ಹೋಟೆಲ್ಲು ಕದ ಹಾಕುವವರೆಗೆ ನಡೆಯುತ್ತಿರಬೇಕು. ನನ್ನತ್ತ ನೋಡಿದಳು. ಥೇಟ್‌ ಗೋವಾ ಪಡಿಯಚ್ಚು. ಹೊಸ ಗಿರಾಕಿ ಅಂದುಕೊಂಡಿರಬೇಕು.

ಅಬ್ಬಾ! ಮೂಸಾನ ನಡುವಿನಲ್ಲಿತ್ತು ಕಣ್ಣು ಕುಕ್ಕುವ ಚೂರಿ

ನಾನು ಸೀದ ಒಳಗೆ ಹೋದೆ. ಬಲಕ್ಕೆ ಎತ್ತರದ ಗಲ್ಲಾ ಪೆಚ್ಚಿಗೆ. ಅಲ್ಲಿ ಮೂಸಾ ಕೂತಿದ್ದ. ನೋಡಿದರೆ ಭಯ ಹುಟ್ಟಿಸುವ ನಿಲುವು. ಎತ್ತರದ ಹುರಿಕಟ್ಟು ಮೈಯ ಆಳು. ದಪ್ಪ ಮೀಸೆ ಬಿಟ್ಟಿದ್ದ. ಬಿಳೀ ಲುಂಗಿ. ಬಿಳೀ ಅಂಗಿ ತೊಟ್ಟಿದ್ದ. ಲುಂಗಿಯನ್ನು ಒಂದು ಅಗಲ ಚರ್ಮದ ಬೆಲ್ಚಿನಲ್ಲಿ ಬಿಗಿದು ಕಟ್ಟಿಕೊಂಡಿದ್ದು ಕಂಡಿತು. ಬೆಲ್ಟಿಗೆ ತೂಗು ಹಾಕಿದ್ದ ಗೇಣುದ್ದ ಚರ್ಮದ ಪೋಚು. ಅದರಲ್ಲಿ ಫಲಫಳ ಹೊಳೆಯುವ ಚೂರಿಯೊಂದನ್ನು ನೇತು ಬಿದ್ದಿತ್ತು. ಬಹುತೇಕ ಮಲಯಾಳಿಗಳು ಇಂಥ ಬೆಲ್ಟುಗಳಿಗೆ ಚಾಕು-ಚೂರಿಗಳನ್ನು ಕಟ್ಟಿಕೊಂಡಿರುತ್ತಾರೆಂದು ಅಪ್ಪೂ ಒಮ್ಮೆ ನನಗೆ ಹೇಳಿದ್ದ. ಇಂಥವನ ಅಂಗಡಿಯಲ್ಲಿದ್ದ ಹನುಮಂತ್ಯಾ ಇಲ್ಲಿಂದ ಓಡಿ ಹೋದದ್ದೇ ಸರಿಯಾಯಿತು. ಇಲ್ಲದಿದ್ದರೆ ಒಂದಿನ ಈತ ಅವನನ್ನು ಕೊಂದೇ ಬಿಡುತ್ತಿದ್ದನೇನೋ ಅಂದುಕೊಂಡೆ.

ಹಲಗೆಗಳನ್ನು ಉದ್ದಕ್ಕೂ ಗೂಟಕ್ಕೆ ಬಡಿದು ಮಾಡಿದ ‘ಗಾವಟೀ ಟೇಬಲ್‌’ ಮುಂದೆ ಕೂತೆ. ತಕ್ಷಣ ಇನ್ನೊಬ್ಬ ಸಿಡಿಕು ಮೋರೆಯ ನಡು ವಯಸ್ಸಿನ ಮಲಯಾಳಿ ಕಾಕಾ ನೀರಿನ ಜಗ್ಗು ತಂದು ಮುಂದಿಟ್ಟ. ಅಲ್ಲಿ ಲೋಟ ಕೊಡುವ ಪದ್ಧತಿ ಇರಲಿಲ್ಲ. ಹತ್ತಾರು ಜನ ಒಂದೇ ಜಗ್ಗನ್ನು ಎತ್ತಿ ನೀರು ಕುಡಿಯುವುದು ಅಲ್ಲಿಯ ಪದ್ಧತಿ..

2

ಫೋಟೋ ಕೃಪೆ : Tayaria Ward

‘’ಯಂದ ವೇಣಾ…?’’ ಆತ ಮಲಯಾಳಿಯಲ್ಲಿ ತುಸು ಒರಟಾಗಿಯೇ ಕೇಳಿದ. ನಾನು ಏನಿದೆ ಎಂದು ಕನ್ನಡದಲ್ಲಿ ಪ್ರತಿಯಾಗಿ ಕೇಳಿದೆ. ‘’ಪರೋಟಾ-ಸೇರ್ವಾ, ಮೀನ್‌ ಕರೀ, ಮೀನು ಫ್ರಾಯೀ, ಮೊಟ್ಟೇ ಸಾಂಬಾರ್‌, ಚಿಕನ್ನು ಸಾಂಬಾರ್‌, ಮಟನ್‌ ಪ್ರಾಯಿ, ಬಾಯಿಲ್ಡು ರಾಯಿಸ್, ಗೆಣಸು ಪಲ್ಯ, ಮಜ್ಜಿಗೆ, ರಸಮ್ಮೂ…’’.

ಒಂದೇ ಉಸುರಿಗೆ ಬಡಬಡಿಸಿದವನೇ ಅಡುಗೇ ಮನೆಯತ್ತ ಧಾವಿಸಿದ. ‘ಅಬ್ಬಾ! ಸಣ್ಣ ಊರಿನ ಹೊಟೆಲ್ಲಿನಲ್ಲಿಯೂ ಇಷ್ಟೊಂದು ಐಟಮ್ಮು…’ ಎಂದು ಉದ್ಗರಿಸಿದೆ. ಅಲ್ಲಿ ಒಂದು ದಿನ ಈ ಸಾಂಬಾರುಗಳನ್ನು ಮಾಡಿದರೆ ಮೂರು ದಿನ ಅದನ್ನೇ ಬಿಸಿ ಮಾಡಿ ಮಾರುತ್ತಾರೆ ಎಂದು ನನಗೆ ಗೊತ್ತಾಗಲೇ ಇಲ್ಲ. ಅಲ್ಲಿ ಎರಡು ಬೆಕ್ಕುಗಳು ಮೀನು ಪ್ರಾಯ್‌ ಮಾಡಿಟ್ಟಿದ್ದ ತಟ್ಟೆಯ ಸುತ್ತ ಗಿರಕಿ ಹೊಡೆಯುತ್ತಿದ್ದವು.

ನನಗೆ ಅನಿವಾರ್ಯ. ಅಂಗಾಲಿಗೆ ಹೇಸಿಗೆಯಿಲ್ಲ. ಕರುಳಿಗೆ ನಾಚಿಕೆಯಿಲ್ಲ ಎಂಬ ಗಾದೆ ಇಲ್ಲಿಗೂ ಸರಿ ಹೊಂದುತ್ತದೆ. ನಮಗೆ ಬೇಕಾದುದನ್ನು ನಾವು ಆರಿಸಿಕೊಂಡು ತಿನ್ನಬೇಕಷ್ಟೇ.

‘’ಎರಡು ಪರೋಟಾ ಸೇರ್ವಾ, ಗೆಣಸು ಪಲ್ಯ’’ ಆರ್ಡರು ಮಾಡಿದೆ. ಆತ ಮುಖ ಸಿಂಡರಿಸಿಕೊಂಡು ‘ನಲ್ಲ ಗಿರಾಕಿ…’ ಎಂದು ವ್ಯಂಗ್ಯವಾಗಿ ಗೊಣಗಿ ಮತ್ತೆ ಒಲೆಯ ಕಡೆಗೆ ಹೋದ.


ಮುಂದಿನ ಸಂಚಿಕೆಯಲ್ಲಿ – ಹೈದರಾಬಾದಿನಿಂದ ಬಂದರು ಭೂಗರ್ಭ ಶಾಸ್ತ್ರಜ್ಞರು. ಹಿರಿಯ ಅಧಿಕಾರಿ ಶೇಷಗಿರಿಯವರದು ವಿಚಿತ್ರ ವ್ಯಕ್ತಿತ್ವ. ಸೂಪಾ ಡ್ಯಾಮ ಸೈಟಿನಲ್ಲಿ ಮೊದಲ ಬಾರಿ ಕಾಲಿಟ್ಟೆ. ಅಲ್ಲಿ ಶ್ರೀಧರ ಕಾಣಕೋಣಕರ ಮತ್ತು ಚಾಂದಗೋಡಿಯವರ ಪರಿಚಯ. ಸ್ಟೋರ ಕೀಪರ್‌ ಪಿಳ್ಳೆಯ ಜತೆಗೆ ಜಗಳ. ಡ್ಯಾಮ ಫೌಂಡೇಶನ್‌ ರೇಖೆಯಲ್ಲಿ ಕಲ್ಲುಗಳನ್ನು ಹುಡುಕಿದ್ದು

– ಓದಿರಿ ಪ್ರತಿ ಶನಿವಾರ ರೋಚಕ ಕತೆಗಳು


  • ಹೂಲಿಶೇಖರ್
    (ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು- ನಾಟಕಕಾರರು- ಚಿತ್ರ ಸಂಭಾಷಣಕಾರರು)

bf2fb3_58479f997cba4852bd3d7a65d4c785a4~mv2.png

0 0 votes
Article Rating

Leave a Reply

1 Comment
Inline Feedbacks
View all comments
Lakshmi Nadagouda

ಓದಲು ಮಜವಾಗಿದೆ. ಆದರೆ ಆಗಿನ ನಿಮ್ಮ ಪರಿಸ್ಥಿತಿ ನೆನೆದರೆ?… ಕುತೂಹಲ ಹುಟ್ಟಿಸುವ ಕಂತು

Home
News
Search
All Articles
Videos
About
1
0
Would love your thoughts, please comment.x
()
x
%d bloggers like this:
Aakruti Kannada

FREE
VIEW