ರಾಷ್ಟ್ರ ಪ್ರಶಸ್ತಿ ವಿಜೇತ ಪ್ರಸಾಧನ ರಾಮಕೃಷ್ಣ ಅವರ ಸಾಧನೆ

ರಾಷ್ಟ್ರಪ್ರಶಸ್ತಿ ವಿಜೇತ ಪ್ರಸಾಧನ ಕಲಾವಿದ ರಾಮಕೃಷ್ಣ ಅವರ ಸಾಧನೆಯ ಬಗ್ಗೆ ಹರಿಕೃಷ್ಣ ಹರಿ ಅವರ ನೆನಪಿನ ಸುರಳಿಯಲ್ಲಿ ಹೊರಹೊಮ್ಮಿದ ಈ ಲೇಖನ. ಮುಂದೆ ಓದಿ…

ಕಳೆದ ಒಂಬತ್ತು ತಿಂಗಳಿಂದ ಕೋವಿಡ್ ನಿಂದಾಗಿ ಗೃಹಬಂಧನದಲ್ಲಿದ್ದ ಕಾರಣ ಇಲ್ಲಿ ಬೇಡವಾಗಿದ್ದರೂ ಅಲ್ಲಿ ಸಲ್ಲದಾಗಿ ಶಿಂಶುಪಾವೃಕ್ಷದ ಅಂತರಪಿಶಾಚಿಯಂತೆ ಜೊಂಪೆಯಾಗಿ ಜೋತಾಡುತ್ತಿದ್ದ ತಲೆಗೂದಲ ಸಂಪತ್ತನ್ನು ಇಂದು ಸಲೂನಿಗೆ ಒಪ್ಪಿಸಿ ನನ್ನ ಹೆಡ್ಡಾಫೀಸಿನಲ್ಲಿ ಮಿನಿಮಂ ಕೇಶ್ ಉಳಿಸಿಕೊಂಡು ಮನೆಗೆ ವಾಪಸ್ಸಾದೆ. ಸಲೂನಿನಲ್ಲಿ ಕ್ಷೌರಿಕನ ಕತ್ತರಿಯ ಆಕ್ಷನ್-ಕಟ್ ನಿಂದಾಗಿ ಮೈಗೆ ಹೊದಿಸಿದ ಏಪ್ರನ್ ಮೇಲೆ ಕುರಿಯ ಉಣ್ಣೆಯಂತೆ ಬೀಳುತ್ತಿದ್ದ ಧವಳಕೇಶರಾಶಿಯನ್ನು ಮಿಕಿ-ಮಿಕಿ ನೋಡುತ್ತಿದ್ದಂತೆ ನನ್ನ ನೆನಪು ೪೦ -೪೫ ವರ್ಷಗಳ ಹಿಂದೆ ೭೦ ರ ದಶಕದಲ್ಲಿ ನಡೆದ ಒಂದು ಘಟನೆಯನ್ನು ನೆನಪಿಸಿತು. ಇದು ನಡೆದದ್ದು, ಮಂಡ್ಯದಲ್ಲೋ ತುಮಕೂರಿನಲ್ಲೋ ಎಂಬುದು ಸ್ಪಷ್ಟವಿಲ್ಲ.

(ಪ್ರಸಾಧನ (ಮೇಕ್ ಅಪ್) ಕಲಾವಿದ ರಾಮಕೃಷ್ಣ)

ರಂಗಸಂಪದದ ‘ಕದಡಿದ ನೀರು’ ನಾಟಕ ವಿವಿಧ ಊರುಗಳಲ್ಲಿ ಪ್ರದರ್ಶಿತವಾಗುತ್ತಾ ಇದ್ದ ದಿನಗಳವು.

ಅಲ್ಲೊಂದೂರಲ್ಲಿ ನಾಟಕವಾಡಲು ನಮ್ಮ ತಂಡ ವ್ಯಾನಿನಲ್ಲಿ ಹೊರಟು ಊರು ತಲುಪಿ ಸೆಟ್ ಹಾಕುವ ಕೆಲಸದಲ್ಲಿ ತೊಡಗಿದ್ದೆವು. ನಮ್ಮ ಸಹಕಲಾವಿದೆ ಭಾರ್ಗವಿಯವರು ಮತ್ತು ಮೇಕಪ್ ಮಾಡಲು ಅವರ ಪತಿ ಮೇಕಪ್ ನಾಣಿಯವರು ನಂತರ ಬರುವ ನಿರೀಕ್ಷೆಯಿತ್ತು. ಅವರು ಬಂದ ನಂತರ ರಂಗತಾಲೀಮು ನಡೆಯಬೇಕಿತ್ತು.

ಮಧ್ಯಾಹ್ನ ಊಟದ ನಂತರ ಭಾರ್ಗವಿಯವರು ಬಂದರು. ಜೊತೆಯಲ್ಲಿ ನಾಣಿಯವರು ಇರಲಿಲ್ಲ. ಭಾರ್ಗವಿಯವರನ್ನು ನಾಗೇಶ್ ಕೇಳಿದರೆ ಅವರು “ನನ್ಗೇನ್ಗೊತ್ತು ನಾಗೇಶ್, ನನ್ಜೊತೆ ಅವ್ರು ಬರೋ ಪ್ರೋಗ್ರಾಮೇನಿದ್ಹಾಗಿರಲಿಲ್ಲ” ಅಂದರು.

ಮೇಕಪ್ಪಿನ ಸಮಸ್ಯೆ ಧುತ್ತೆಂದು ಬಂದು ನಿಂತಿತು.

(ಕರ್ನಾಟಕ ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷ ಆರ್ ನಾಗೇಶ್ ಅವರ ಅಪರೂಪದ ಚಿತ್ರ) (ಚಿತ್ರ ಸಂಗ್ರಹ : ಹರಿಕೃಷ್ಣ ಹರಿ ಅವರ ಫೇಸ್ ಬುಕ್ ಆಲ್ಬಮ್ )

ಯೋಚನೆ ಮಾಡುತ್ತಿದ್ದ ನಾಗೇಶರಿಗೆ ಅಲ್ಲೇ ತಮ್ಮೊಂದಿಗೆ ಸೆಟ್ ಹಾಕುತ್ತಿದ್ದ ರಾಮಣ್ಣ ಕಂಡರು. ರಾಮಣ್ಣ ಆ ಕಾಲದಲ್ಲಿ ನಾಣಿಯವರಿಗೆ ಸಹಾಯಕನಾಗಿ ಅವರ ಕೆಲಸದಲ್ಲಿ ನೆರವಾಗುತ್ತಿದ್ದರು.

“ಏ ರಾಮಣ್ಣ, ಬಾ ಇಲ್ಲಿ. ಇವತ್ತು ಮೇಕಪ್ ಕೆಲ್ಸ ನಿನ್ದು”.

ರಾಮಣ್ಣನಿಗೆ ದಿಗ್ಭ್ರಾಂತಿ. ಒಂದು – ಸ್ವತಂತ್ರವಾಗಿ ಇನ್ನೂ ಆತ ಮೇಕಪ್ ಮಾಡಲು ತೊಡಗಿರಲಿಲ್ಲ. ಎರಡು – ಮೇಕಪ್ ಮಾಡಲು ಸಾಮಗ್ರಿಗಳು!?.. ನಾಗೇಶ್ ರಾಮಣ್ಣನಿಗೆ ಮುಂದೆ ಯೋಚನೆ ಮಾಡಲು ಬಿಡಲೇ ಇಲ್ಲ, ರಾಮಣ್ಣನ ಕೈಗೆ ಒಂದೈದು ರೂಪಾಯಿಗಳನ್ನು (ಆಗಿನ ಕಾಲದ ದೊಡ್ಡ ಮೊತ್ತ, ಮೇಕಪ್ ಸಾಮಗ್ರಿಗಳಿಗೆ) ಕೊಟ್ಟು ಅಗತ್ಯ ಸಾಮಗ್ರಿಗಳನ್ನು ತರಲು ಕಳಿಸಿದರು. ರಾಮಣ್ಣ ಅನಿವಾರ್ಯವಾಗಿ‌ ಪೇಟೆಗೆ ಹೋಗಿ ಬೇಕಾದ್ದನ್ನು ಖರೀದಿ ಮಾಡಿಕೊಂಡು ತಂದರು.

ಸಾಯಂಕಾಲ ನಾಟಕಕ್ಕಾಗಿ ಒಬ್ಬೊಬ್ಬರಾಗಿ ಮೇಕಪ್ ಮಾಡಿಸಿಕೊಂಡ ನಂತರ ಕೊನೆಯವ ನಾನು ಕುಳಿತೆ. ನನ್ನದು ಹುಚ್ಚ ರಾಚ್ಯನ ಪಾತ್ರವಾಗಿದ್ದು ಮೇಕಪ್ ಸ್ವಲ್ಪ ಕ್ಲಿಷ್ಟವಾಗಿತ್ತು. ಅದಕ್ಕಾಗಿ ಕ್ರೇಪ್ ಹೇರುಗಳನ್ನು ಉಪಯೋಗಿಸಬೇಕಿತ್ತು. ಅದಕ್ಕಾಗಿ ಸ್ಪಿರಿಟ್ ಗಂ ಸಿಗದೆ ಪಂಕ್ಚರ್ ಅಂಗಡಿಯವರು ಪ್ಯಾಚ್ ಹಾಕಲು ಉಪಯೋಗಿಸುವ ಟ್ಯೂಬ್ ಖರೀದಿಸಲಾಗಿತ್ತು.‌

ಗಡ್ಡ ಮೀಸೆಗಳನ್ನು ಭಾಗಶಃ ಅಂಟಿಸುತ್ತಿದ್ದಂತೆ ರಾಮಣ್ಣನಿಗೆ ಅರಿವಾಯಿತು- ಕ್ರೇಪ್ ಹೇರ್ ಸಾಲದು ಅಂತ. ಇನ್ನೊಂದಿಷ್ಟು ಖರೀದಿ ಮಾಡಲು ಸಮಯವೇ ಇರಲಿಲ್ಲ.

“ಹರಿ, ಒಂದ್ಕೆಲ್ಸ ಆಗಿದೆ, ಏನೂ ತಿಳ್ಕೋಬೇಡಿ, ಕ್ರೇಪ್ ಹೇರ್ ಕಮ್ಮಿ ಆಗುತ್ತೆ ಅದಕ್ಕೇ, ನೀವೇನೂ ಮಿಸ್ಟೇಕ್ ಮಾಡ್ಕೊಳಲ್ಲಾಂದ್ರೆ ಒಂದ್ಕೆಲ್ಸ ಮಾಡ್ತೀನಿ, ನೀವು ಆಗ್ಲೀಂದ್ರೆ..”

ನನಗೂ ಸಮಸ್ಯೆ ಬಗೆಹರಿಯಬೇಕಿತ್ತು. ಏನು ಮಾಡ್ತಾರಿವ್ರು ಅನ್ನೋದಂತೂ ಗೊತ್ತಿಲ್ಲ.

“ಅದೇನ್ ಮಾಡುತ್ತೀರೋ ಮಾಡಿ ರಾಮಣ್ಣ, ಕೆಲ್ಸ ಆದ್ರಾಯ್ತು.”

ಫೋಟೋ ಕೃಪೆ : twitter (ರಾಮಕೃಷ್ಣ ಅವರಿಗೆ ರಾಷ್ಟ್ರ ಪ್ರಶಸ್ತಿ ತಂದುಕೊಟ್ಟ ಸಿನಿಮಾ ‘ಅಲ್ಲಮ’ ಚಿತ್ರ )

ರಾಮಣ್ಣ ಕತ್ತರಿಯೊಂದಿಗೆ ನನ್ನ ಬೆನ್ನಹಿಂದೆ ನಿಂತರು. ನನ್ನ ತಲೆಯಲ್ಲಿ ಆ ಕಾಲದಲ್ಲಿ ಸಮೃದ್ಧವಾಗಿ ಕೇಶರಾಶಿಯಿತ್ತು, ಜಡೆ ಹಾಕುವಷ್ಟಲ್ಲ. ನೋಡುನೋಡುತ್ತಿದ್ದಂತೆ ನನ್ನ ಹಿಂದಲೆಗೆ ಸ್ವಲ್ಪ ಆಯುಷ್ಕರ್ಮವಾಗಿ ರಾಮಣ್ಣನ ಕಾರ್ಯಸಾಧನೆಯಾಯಿತು. ನನ್ನ ಮೇಕಪ್ ‌ಸಂಪೂರ್ಣವಾಯಿತು.

ನಾಟಕ ಮುಗಿದ ನಂತರ ಮೇಕಪ್ ತೆಗೆಯುವಾಗ ಗಡ್ಡ ಮೀಸೆಗಳು ಬಹಳ ಸುಲಭವಾಗಿ ಕಳಚಿಕೊಂಡು ಬಂದವು. ಸ್ಪಿರಿಟ್ ಗಂ ಆಗಿದ್ದರೆ ಅಷ್ಟು ಸುಲಭವಾಗಿ ಬರುತ್ತಿರಲಿಲ್ಲ.

ಅಂದು ಸ್ವತಂತ್ರವಾಗಿ ಮೇಕಪ್ ಆರಂಭಿಸಿದ ರಾಮಣ್ಣ ಇತ್ತೀಚೆಗೆ ನಾಗಾಭರಣ ಅವರ ನಿರ್ದೇಶನದ “ಅಲ್ಲಮ” ಚಿತ್ರಕ್ಕೆ ಉತ್ತಮ ಪ್ರಸಾಧನಕ್ಕಾಗಿ ರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ಪಡೆದಿದ್ದಾರೆ.

ಈಗಲೂ ಆಗಾಗ ರಾಮಣ್ಣ ನನಗೆ ಸಿಕ್ಕಾಗ ಇಬ್ಬರಿಗೂ ಆ ಘಟನೆ ನೆನಪಾಗಿ ಸಣ್ಣದಾಗಿ ಒಂದು ನಗೆ ಇಣುಕುತ್ತದೆ.


  • ಹರಿಕೃಷ್ಣ ಹರಿ  (ರಂಗಭೂಮಿ ಕಲಾವಿದರು)

0 0 votes
Article Rating

Leave a Reply

1 Comment
Inline Feedbacks
View all comments
B S Ramamurthy

ಭೇಷ್ ಸರಿಯಾಗಿ ೯ ತಿಂಗಳಿಗೆ ಹೊರಗಡೆ ಬಂದಿದ್ದೀರಿ. ಜೊತೆಗೆ ಆಯುಷ್ಕರ್ಮವೂ ಆಗಿ ಮಿನಿ ” ಕೇಶವ” ಆಗಿದ್ದೀರಿ. ಅಭಿನಂದನೆಗಳು. ಇನ್ನು ರಾಮಣ್ಣನ ಬಗ್ಗೆ ಹೇಳ್ತಾ ಹೋದ್ರೆ ಬರೀತಾನೇ ಹೋಗಬೇಕಾಗುತ್ತೆ. ಭರಣನ ನಿರ್ದೆಶನದಲ್ಲಿ ಸಂಗ್ಯಾ ಬಾಳ್ಯ ಪುನರ್ ನಿರ್ಮಾಣ ವಾದಾಗ ನಾನು ಪರಮ್ಮನಾಗುವ ಅವಕಾಶ ಬಂದೊದಗಿತು. ಮುಂಬೈ ನಲ್ಲಿ ಮೊದಲ ಪ್ರದರ್ಶನ. ನನಗೆ ಸ್ವಲ್ಪ ಟೆನ್ಷನ್. ನೀವು ಮಾಡಿದಷ್ಟೇ ಚೆನ್ನಾಗಿ ಬರುತ್ತಾ ಅಂತ. ಈ ರಾಮಣ್ಣ ಅನ್ನೋ ಅದ್ಭುತ ಪ್ರಸಾಧನ ಮಾಂತ್ರಿಕ ಇದಾನಲ್ಲ ಪ್ರಸಾಧನ ಮಾಡುತ್ತಿದ್ದ ಹಾಗೆ ಪರಮ್ಮನ ಪಾತ್ರ ಅನಾವರಣಗೊಂಡಿತು. ನಾಟಕ ಅದ್ಭುತ ವಾಗಿ ಮೂಡಿಬಂತು. ನಾಟಕ ನೋಡಲು ಬಂದಿದ್ದ ದಂಪತಿಗಳು ಈ ಪಾತ್ರ ಮಾಡಿರುವುದು ಗಂಡೋ ಹೆಣ್ಣೋ ಅಂತ ಛಾಲೆಂಜ್ ಮಾಡಿಕೊಂಡು ಆ ಹೆಂಗಸು ಬೆಟ್ಟಿಂಗ್ ಗೆದ್ದರು. ಯಾರಿಗೂ ಗೊತ್ತಾಗದಂತೆ ಪಾತ್ರವನ್ನು ಮೂಡಿಸಬಲ್ಲ ಚತುರ ರಾಮಣ್ಣ. ಇದು ಒಂದು ಸನ್ನಿವೇಶ. ಹೇಳ್ತಾ ಹೋದ್ರೆ ಅದಕ್ಕೆ ಕೊನೆಯೇ ಇಲ್ಲ. ಅಂತಹ ಸಾಧಕ. 🤘👏🧚‍♀️🙏 ರಾಮಮೂರ್ತಿ (ರಂಗಸಂಪದ)

Home
Search
All Articles
Videos
About
1
0
Would love your thoughts, please comment.x
()
x
%d bloggers like this:
Aakruti Kannada

FREE
VIEW