ರಾಮಾಯಣದ ತತ್ವ, ಆದರ್ಶ ನೆನಪಿಸುವ ‘ರಾಮರಾಜ್ಯ’

‘ರಾಮರಾಜ್ಯ’ ಇದು ದಿವಂಗತ ವಿದ್ವಾಂಸ ಅಂಬಾತನಯ ಮುದ್ರಾಡಿ ಅವರ ನಾಟಕ ಕೃತಿ. ಶ್ರೀರಾಮನ ಚಿತ್ರಣದ ಒಂದು ಸುಂದರ ಕಾವ್ಯಕಲಾಕೃತಿ. ರಾವಣನ ವಧೆಯ ನಂತರ ಅಯೋಧ್ಯೆಯಲ್ಲಿ ಪಟ್ಟಾಭಿಷಕ್ತ್ತನಾದ ರಾಮನ ಚರಿತೆ ಇಲ್ಲಿಯ ವಸ್ತು. ಅಂಬಾತನಯ ಮುದ್ರಾಡಿ ಅವರ ರಾಮರಾಜ್ಯ ಕೃತಿಯ ಕುರಿತು ದತ್ತಾತ್ರೇಯ ಹೆಗಡೆ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಕೃತಿ : ರಾಮರಾಜ್ಯ
ಪ್ರಕಾರ : ನಾಟಕ
ಕೃತಿಕಾರರು : ಅಂಬಾತನಯ ಮುದ್ರಾಡಿ
ಪ್ರಕಶಕರು : ಹೊಸಸಂಜೆ ಪ್ರಕಾಶನ, ಕಾರ್ಕಳ
ಪುಟಗಳು : ೧೪೪
ಬೆಲೆ : ೧೦೦/-

ರಾಮ ಎಂದಿನಂತೆ ಒಂದು ದಿನ ಆಸ್ಥಾನಕ್ಕೆ ಬರುವಲ್ಲಿಂದ ತೊಡಗಿ ಲವಕುಶ ಕಾಳಗದವರೆಗಿನ ಘಟನೆಗಳು ಈ ನಾಟಕದಾದ್ಯಂತ ಒಪ್ಪವಾಗಿ, ಸಂಕ್ಷಿಪ್ತವಾಗಿ ಪೋಣಿಸಲ್ಪಟ್ಟಿವೆ.

ಇಲ್ಲಿನ ನಾಟಕ ಆರಂಭವಾಗುವುದು ರಾಮನ ಪಟ್ಟಾಭಿಷೇಕದ ತಯಾರಿಯಿಂದ ಅಲ್ಲ, ರಾಮನು ರಾವಣನನ್ನು ಸಂಹರಿಸಿ ಅಯೋಧ್ಯೆಗೆ ಮರಳಿ ಬಂದು ಪಟ್ಟಾಭಿಷೇಕವಾಗಿ ತನ್ನ ತಾಯಿ ಕೌಸಲ್ಯ ಭೇಟಿಗೆ ಬಂದಾಗ ಆರಂಭವಾಗುತ್ತದೆ. ಅಲ್ಲಿಂದ ನಿಧಾನವಾಗಿ ಸರಿಯುವ ರಾಮ ಕಥೆಯು ತನ್ನ ವಿಭಿನ್ನ ಮುಖಗಳಿಂದ ಒಂದಕ್ಕೊಂದು ಬೆಸೆದು ಮೂಲ ರಾಮಾಯಣದಲ್ಲಿ ಕಾಣುವ ಎಲ್ಲಾ ಮುಖಗಳನ್ನು ಸೂಕ್ಷ್ಮವಾಗಿ ನಮ್ಮೆದುರು ತೆರೆದಿಡುತ್ತದೆ. ಹೀಗೆ ತೆರೆದಿಡುವಾಗ ಪ್ರತಿ ಪಾತ್ರಗಳೂ ಆಯಾ ಪಾತ್ರಗಳ ಗೌರವವನ್ನು ಉಳಿಕೊಂಡು ಆ ಮೂಲಕ ರಾಮನ ಅಂತರಂಗ-ಬಹಿರಂಗಕ್ಕೆ ಬೆಳಕು ಚೆಲ್ಲುತ್ತವೆ. ರಾಮ ‘ರಾಮ’ನಾಗುವುದು ಹೇಗೆ ಮತ್ತು ಏಕೆ ಎನ್ನುವುದನ್ನು ಮತ್ತು ಏಕೆ ಎನ್ನುವುದನ್ನು ಈ ನಾಟಕವು ನಿಶ್ಯಬ್ದ ಸ್ವರೂಪದಲ್ಲಿ ಕಟ್ಟಿಕೊಡುತ್ತದೆ.

ಇಲ್ಲಿ ಬರುವ ಕೈಕೇಯಿ ದುಷ್ಟೆಯಲ್ಲ. ರಾಮನನ್ನು ಉಳಿಸಿದ ನಿಜ ತಾಯಿ. ತನ್ನ ಗಂಡ ಮತ್ತು ಮಗನ ಪ್ರ್ರಾಣ ಉಳಿಸುವಲ್ಲಿ ಯಾವ ಆಯ್ಕೆ ಶ್ರೇಷ್ಠ ಎನ್ನುವ ಸಂದರ್ಭದಲ್ಲಿ ರಾಮನ ಪರವಾಗಿ ನಿಲ್ಲುತ್ತಾಳೆ. ಅದರರ್ಥ ರಾಜ್ಯಕ್ಕೆ ‘ರಾಮರಾಜ್ಯ’ ಬರಲಿ ಎನ್ನುವ ದೂರದೃಷ್ಟಿ. ಇದು ತಾಯ್ತತನದ ಹೆಗ್ಗಳಿಕೆ.

ಇನ್ನೊಂದು ವಿಶೇಷವೆಂದರೆ, ನಮಗೆ ರಾಮ ರಾಜ್ಯ ಇಂದು ಯಾಕೆ ಕೈಗೆಟುಕುತ್ತಿಲ್ಲ ಎಂದರೆ ರಾಜ್ಯದ ಹಿತವನ್ನು ಬಯಸುವ ನಿಜವಾದ ತಾಯಂದಿರು ನಮ್ಮಲ್ಲಿ ಕಡಿಮೆ. ಸಾಕ್ಷಾತ್ ದೇವರೇ ಆಗಿದ್ದರೂ ದೇವರಿಗಿಂತ ಲೋಕದ ಸುಖವೇ ಮುಖ್ಯ ಎಂಬ ಭಾವನೆ ರಾಮರಾಜ್ಯದಲ್ಲಿತ್ತು. ಆದ್ದರಿಂದಲೇ ಅದನ್ನು ರಾಮರಾಜ್ಯ ಎನ್ನುತ್ತಿದ್ದರು ಎನ್ನುವುದನ್ನು ನಾಟಕ ಸೂಕ್ಷ್ಮವಾಗಿ ಇಲ್ಲಿ ಹೇಳುತ್ತದೆ.

ನವೋದಯ ಶೈಲಿಯಲ್ಲಿರುವ ಈ ನಾಟಕದಲ್ಲಿ ಇಬ್ಬರು ಸೂತ್ರಧಾರರು ಕಂಡುಬರುತ್ತಾರೆ. ಅವರಲ್ಲಿ ಒಬ್ಬ ಸನಾತನ (ಪುರುಷಪಾತ್ರ), ಮತ್ತು ನೂತನ (ಸ್ತ್ರೀಪಾತ್ರ). ಈ ಹೆಸರುಗಳೂ ಅರ್ಥಪೂರ್ಣವಾಗಿವೆ. ಇಲ್ಲಿ ಸನಾತನ ಸಾವಧಾನಿ, ಪರಂಪರೆಯ ಅಭಿಮಾನಿ, ನೂತನ ಆಧುನಿಕತೆಯ ಪ್ರತೀಕ, ತೀವ್ರಗಾಮಿನಿ. ಪರಂಪರೆಗಿಂತ ವೈಚಾರಿಕತೆಗೆ ಬೆಲೆಕೊಡುವವಳು. ಪ್ರತಿಯೊಂದನ್ನು ಪ್ರಶ್ನಿಸುವವ ಸ್ವಭಾವ.

ಇವರು ಪರಸ್ಪರ ಪ್ರೀತಿಸುವವರು ಅಲ್ಲ, ವಿವಾಹಿತರೂ ಅಲ್ಲ. ಆದರೆ ನಾಟಕ ಮುಂದುವರೆಯುತ್ತ ಹೋದಂತೆ ಸೀತೆ ಮತ್ತು ರಾಮನ ದಾಂಪತ್ಯದ ರಸಘಟ್ಟಗಳನ್ನು ನೋಡಿದ ಇವರಿಬ್ಬರೂ ತಾವು ಮದುವೆಯಾಗಬೇಕು ಎನ್ನುವಲ್ಲಿಗೆ ಬರುತ್ತಾರೆ. ಕುತೂಹಲದ ವಿಚಾರವೆಂದರೆ, ಇಬ್ಬರಲ್ಲಿ ಒಬ್ಬರಾದರೂ ‘ನಾನು ನಿನ್ನನ್ನು ಪ್ರೀತಿಸುತ್ತೇನೆ ಅಥವಾ ನೀನು ನನ್ನನ್ನು ಪ್ರೀತಿಸುವೆಯಾ, ಅಥವಾ ಮದುವೆಯಾಗುವೆಯಾ’ ಎಂದು ಎಲ್ಲೂ ಕೇಳುವುದಿಲ್ಲ. ಏಕೆಂದರೆ ವಾಸ್ತವದಲ್ಲಿ ಈ ಸೂತ್ರದಾರರಿಬ್ಬರೂ ಗಂಡೂ ಅಲ್ಲ, ಹೆಣ್ಣೂ ಅಲ್ಲ. ಆದ್ದರಿಂದ ಹೆಣ್ಣಿನೊಳಗೆ ಗಂಡು ಇದ್ದಾನೆ, ಗಂಡಿನೊಳಗೆ ಹೆಣ್ಣು ಇದ್ದಾಳೆ ಎಂಬ ಸತ್ಯವನ್ನು ನಾಟಕಕಾರರು ಇಲ್ಲಿ ಬಿಚ್ಚಿಟ್ಟಿದ್ದಾರೆ.

ಸೀತಾರಾಮರ ದಾಂಪತ್ಯದ ಅರಿವನ್ನು ನಮ್ಮ ಕಣ್‌ಪರದೆಯ ಮೇಲೆ ಸೂತ್ರದಾರರು ಬಿಂಬಿಸುವಂತಹ ಪಾತ್ರ ಗಮನಾರ್ಹವಾದುದು. ಗಂಡು- ಹೆಣ್ಣಿನ ವಿಚಾರದಲ್ಲಿ ಸದಾ ಸನಾತನ ಆಗಿರುತ್ತಾನೆ. ಆದರೆ ಹೆಣ್ಣು ಯಾವತ್ತೂ ಗಂಡಿಗೆ ನೂತನಳೇ ಎನ್ನುವ ಭಾವ ಇರುವಂತೆ ಶ್ರೀರಾಮ ಸನಾತನಿಯಾಗಿಯೇ ಇದ್ದ. ಸೀತೆಯು ರಾಮನಿಂದ ಆದರ್ಶದ ನೆಲೆಯಲ್ಲಿ ಆದ ಅನ್ಯಾಯವನ್ನು ಪ್ರತಿಭಟಿಸುವ ನೂತನವಾಗಿದ್ದಳು ಎನ್ನುವುದನ್ನು ನಾಟಕ ಪ್ರತಿಬಿಂಬಿಸುತ್ತದೆ.

ವಾಲ್ಮೀಕಿ ಆಶ್ರಮದಲ್ಲಿ ಒಬ್ಬಳೇ ಚಿಂತಿಸುತ್ತ ಕುಳಿತ ಗರ್ಭವತಿ ಸೀತೆ ಆತ್ಮವಿಮರ್ಶೆ ಮಾಡಿಕೊಳ್ಳುತ್ತಾಳೆ. ತನ್ನ ಈ ಅವಸ್ಥೆಗೆ ವನವಾಸ ಸಂದರ್ಭದಲ್ಲಿ ತಾನು ಲಕ್ಷ್ಮಣನಿಗೆ ಕೊಟ್ಟ ಮಾನಸಿಕ ಹಿಂಸೆಯೇ ಕಾರಣ. ಆತನ ಕಣ್ಣೀರಿನ ಫಲವನ್ನು ತಾನೀಗ ಉಣ್ಣುತ್ತಿದ್ದೇನೆ ಎಂದು ವಿಲಪಿಸುವುದನ್ನು ಕೃತಿಕಾರರು ಚಂದವಾಗಿ ಚಿತ್ರಿಸಿದ್ದಾರೆ.

ಇಲ್ಲಿ ಕೈಕೇಯಿಯದು ಮಮತಾಮಯಿ ಪಾತ್ರ. ರಾಮನನ್ನು ತನ್ನ ಮಗನೆಂದೇ ಕಾಣುವ ವಾತ್ಸಲ್ಯಮಯಿ. ಇದೇ ವೇಳೆ ಸೀತೆಯು ತನ್ನ ಪತಿಯನ್ನು, ಎಳೆಯ ಮಕ್ಕಳನ್ನು ಬಿಟ್ಟು ಭೂಗತವಾಗುವ ದುರಂತ ಸನ್ನಿವೇಶವನ್ನು ಎಂತಹ ಕಠೋರ ಹೃದಯ ಮತ್ತು ಮನಸ್ಸ್ಸು ಕರಗಬಲ್ಲ ದೃಷ್ಟಿಯಲ್ಲಿ ನಾಟಕಕಾರ ಕಟ್ಟಿಕೊಟ್ಟಿದ್ದಾರೆ. ಇದು ಕಣ್ಣೀರಧಾರೆಯನ್ನು ಹರಿಸುತ್ತದೆ. ಅದೇ ರೀತಿ ಬಂದ ಶತ್ರುಘ್ನ ಮತ್ತು ಪುಷ್ಕಳರೊಡನೆ ಎಳೆಯ ಮಕ್ಕಳಾದ ಲವಕುಶಾದಿಗಳ ಸಂಭಾಷಣೆ ಮನೋಜ್ಞವಾಗಿ ಮೂಡಿಬಂದಿದೆ.

ನಾಟಕ ಹೆಚ್ಚು ನಾಟಕೀಯತೆಗೆ ಒಳಗಾಗದೆ ಹೇಳಬೇಕಾದ್ದನ್ನು ಮಿತ್ರಸಂಹಿತವಾಗಿ ನಮ್ಮ ಮುಂದೆ ಇಡುವಲ್ಲಿ ಯಶಸ್ವಿಯಾಗಿದೆ. ಮೂಲ ರಾಮಾಯಣ ಎನ್ನುವುದನ್ನು ಆದರ್ಶದ ನೆಲೆಯಲ್ಲಿ ನಾವು ಕಲ್ಪಿಸಿಕೊಂಡರೆ ಈ ನಾಟಕದಲ್ಲಿ ಎಲ್ಲವೂ ಮಿತ್ರಸಂಹಿತವೇ ಆಗಿವೆ. ನಾವು ಇಂದು ಪ್ರಜಾಪ್ರಭುತ್ವದಲ್ಲಿ ಇರುವುದರಿಂದ ನಮಗೆ ಪ್ರಭುಸಂಹಿತಕ್ಕಿಂತ ಮಿತ್ರಸಂಹಿತ ಹೆಚ್ಚು ಆಪ್ತ ಎನ್ನುವುದನ್ನು ನಾವು ಊಹಿಸಬಹುದು.

ಇಲ್ಲಿ ಬರುವ ಹಾಡುಗಳು, ಸಂಭಾಷಣೆಗಳು ಕನ್ನಡ ನವೋದಯ ಕಾಲದ ದಿನಗಳನ್ನು ನಮಗೆ ನೆನಪಿಸುತ್ತವೆ. ಚುಟುಕಾದ ಸಂಭಾಷಣೆಗಳು ಮತ್ತು ವೇದೋಪನಿಷತ್ತಿನಿಂದ ಉದ್ಧರಿಸಿದ ಆಪ್ತವಾಕ್ಯಗಳು ಕೂಡ ಇಲ್ಲಿ ಮಿಂಚುತ್ತವೆ. ಇವು ನಾಟಕಕ್ಕೆ ಹೆಚ್ಚು ಆಪ್ತತೆಯನ್ನು ತಂದುಕೊಡುತ್ತವೆ. ನಾಟಕದ ಕಥೆ ಬಹಳ ರಮ್ಯವಾಗಿ ಇಲ್ಲಿ ಕಂಡುಬರುತ್ತದೆ. ಆಶ್ರಮವಾಸಿಗಳ ದೈನಂದಿನ, ಸರಳ ಮಾತುಕತೆ ತುಂಬಾ ಸೊಗಸಾಗಿದೆ. ಲವ-ಕುಶರ ವಿದ್ಯಾಭ್ಯಾಸ. ಬಿಲ್ವಿದ್ಯೆ ಪರಿಕ್ಷೆಯ ಸನ್ನಿವೇಶ, ಆಲ್ಲಿಯ ಆತ್ಮೀಯ, ಸರಸ ಸಂಭಾಷಣೆ ಅತ್ಯಂತ ಸಹಜವಾಗಿ ಮತ್ತು ಅಷ್ಟೇ ಮನೋಹಾರಿಯಾಗಿ ಚಿತ್ರಿಸಲ್ಪಟ್ಟಿದೆ. ಎಳೆಯರಿಗೆ ಸಹಜವಾದ ಪುಟ್ಟ ವಾಕ್ಯಗಳಲ್ಲಿ ಮಾತನಾಡುವ ಶೈಲಿ, ಚಿತ್ತಾಕರ್ಷಕವಾಗಿದೆ. ಹಲವೆಡೆ ಪ್ರಾಸಬದ್ಧ ಶಬ್ದಗಳ ಪ್ರಯೋಗ ಸೊಗಸಾಗಿ ಮೂಡಿಬಂದಿದೆ.

ಒಟ್ಟಿನಲ್ಲಿ, ಈ ನಾಟಕ ಸಶಕ್ತವಾಗಿ ಮೂಡಿಬಂದಿದೆ. ರಾಮರಾಜ್ಯದ ಕಲ್ಪನೆಯನ್ನು ಹಿಡಿದಿಡುವ ಮೂಲಕ ರಾಮಾಯಣದ ತತ್ವ, ಆದರ್ಶವೆನಿಸಿರುವ ಚಿಂತನೆಯನ್ನು ಮತ್ತೆ ನೆನಪು ಮಾಡುವ ನಿಟ್ಟಿನಲ್ಲಿ ಯಶಸ್ವಿಯಾಗಿದೆ. ವಾಲ್ಮೀಕಿಗೆ ಎಲ್ಲಿಯೂ ಅಪಚಾರವಾಗದಂತೆ ನೋಡಿಕೊಂಡಿದ್ದಾರೆ. ಈ ಕಾಲದ ಸ್ತ್ರೀ ಸಂವೇದನೆಗೆ ವಾಲ್ಮೀಕಿ ರಾಮಾಯಣದ ಕಾಲದಲ್ಲೂ ನ್ಯಾಯ ಇತ್ತು ಎನ್ನುವುದನ್ನು ತೋರಿಸಿದ್ದಾರೆ.


  • ದತ್ತಾತ್ರೇಯ ಹೆಗಡೆ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW