‘ರಸರಾಮಾಯಣ’ ಪರಿಚಯ – ಗಣಪತಿ ಹೆಗಡೆ ಕಪ್ಪೆಕೆರೆ



ಗಜಾನನ ಈಶ್ವರ ಹೆಗಡೆ ಅವರು ಬರೆದಿರುವ ‘ರಸರಾಮಾಯಣ’ ಯಕ್ಷಗಾನಕ್ಕೆ ಆಕರ ಗ್ರಂಥವಾಗಿ ಬಳಸಲ್ಪಡಬಹುದಾದ ಪುಸ್ತಕವಾಗಿದ್ದು, ಮುಂದಿನ ಪೀಳಿಗೆಗೆ ಇದು ಅತ್ಯಮೂಲ್ಯ ಸಂಪನ್ಮೂಲವಾಗಲಿದೆ.  ರಸರಾಮಾಯಣ ಪುಸ್ತಕದ ಬಗ್ಗೆ ಗಣಪತಿ ಹೆಗಡೆ ಕಪ್ಪೆಕೆರೆ ಅವರು ಓದುಗರಿಗೆ ಪರಿಚಯಿಸಿದ್ದಾರೆ…..

ರಸರಾಮಾಯಣ – ಕಾವ್ಯ ವಾಚನ ಮತ್ತು ವ್ಯಾಖ್ಯಾನ

ರಸರಾಮಾಯಣ, ಸಧ್ಯ ಮೈಸೂರಿನಲ್ಲಿ ನಿವೃತ್ತ ಜೀವನ ನಡೆಸುತ್ತಿರುವ #ಕನ್ನಡ_ಪ್ರಾಧ್ಯಾಪಕರಾಗಿದ್ದ, ಪ್ರೊಫೆಸರ್ ಗಜಾನನ ಈಶ್ವರ ಹೆಗಡೆಯವರ ಕೃತಿ. ಅವರು ನನಗೆ ಸಂಬಂಧದಲ್ಲಿ ದೊಡ್ಡಪ್ಪ. ಈ ಕೃತಿಯ ಮೇಲೆ ಕಣ್ಣಾಡಿಸಿದ್ದು ನನ್ನ ದೊಡ್ಡಪ್ಪ ಬರೆದ ಪುಸ್ತಕ ಎಂಬ ಕಾರಣಕ್ಕಾಗಿ. ಆದರೆ ಮೆಚ್ಚಿದ್ದು, ಆ ಕವನಗಳ ವ್ಯಾಖ್ಯಾನ ಮಾಡಲು ಪ್ರಯತ್ನಿಸುತ್ತಿರುವುದು ಮತ್ತು ಒಂದು ಅಂಥಹ ವ್ಯಾಖ್ಯಾನ ಕಾರ್ಯಕ್ರಮದ ಅನುಭವ ಹಂಚಿಕೊಳ್ಳುತ್ತಿರುವುದು ಆ ಕೃತಿ ನನಗೆ ನೀಡಿದ ಸಂತೋಷದ ಕಾರಣಗಳಿಂದಾಗಿ. ಈಗಾಗಲೇ ಯಕ್ಷಗಾನ – ನೃತ್ಯ – ಗಾಯನ – ವ್ಯಾಖ್ಯಾನ ಎಂಬ ಒಂದು ಕಾರ್ಯಕ್ರಮ ಈ ಕೃತಿಗೆ ರೂಪಗೊಂಡು ಹಲವಾರು ಕಡೆ ಕಾರ್ಯಕ್ರಮ ನಡೆದಿದೆ.

(ರಸರಾಮಾಯಣ ಎದೆಯ ಮೊಗ್ಗರಳಿ ಕೃತಿ ಲೇಖಕರು ಗಜಾನನ ಈಶ್ವರ ಹೆಗಡೆ)

ಎರಡ್ಮೂರು ತಿಂಗಳ ಹಿಂದೆ, ಮೈಸೂರಿನ ‘ಸವಿಗನ್ನಡ’ ಎಂಬ #ಸಾಹಿತ್ಯ_ಪತ್ರಿಕೆಯ ವತಿಯಿಂದ ರಸರಾಮಾಯಣ ಕೃತಿಯ, ಆಯ್ದ ಕವನಗಳ, ವಾಚನ ಮತ್ತು ವ್ಯಾಖ್ಯಾನ ಕಾರ್ಯಕ್ರಮ ನಡೆಯಿತು. ನಾನೂ ಸಹ ಭಾಗವಹಿಸಿದ್ದೆ. ಪ್ರತಿಯೊಬ್ಬರೂ ಸಹ ಒಂದೊಂದು ಕವನವನ್ನು ಆಯ್ಕೆ ಮಾಡಿಕೊಂಡು, ಅದನ್ನು ಓದಿ, ವ್ಯಾಖ್ಯಾನಿಸಬೇಕು.. ನನ್ನನ್ನು ಸೇರಿಸಿ ಈ ರೀತಿ ವ್ಯಾಖ್ಯಾನಿಸುವವರ ಸಂಖ್ಯೆ ಹತ್ತು. ಕೋವಿಡ್ ಕಾರಣದಿಂದ, ಸಾರ್ವಜನಿಕರಿಗೆ ಪ್ರವೇಶವಿರಲಿಲ್ಲ. ಹಾಗಾಗಿ ವೇದಿಕೆಯ ಮೇಲಿದ್ದ ಗಣ್ಯರನ್ನೂ ಸಹ ಲೆಕ್ಕ ಹಾಕಿದರೆ ಭಾಗವಹಿಸಿದವರ ಸಂಖ್ಯೆ ಹದಿನಾರಿರಬಹುದು. ಆದರೆ ಈ ಕಾರ್ಯಕ್ರಮ ಒಂದು ಮಾದರಿ ಕಾರ್ಯಕ್ರಮ ಎಂಬ ಭಾವನೆಯನ್ನು ನನ್ನಲ್ಲಿ ಹುಟ್ಟುಹಾಕಿತು.. ವ್ಯಾಖ್ಯಾನಿಸಿದ ಹತ್ತು ಜನರಲ್ಲಿ ಪುಸ್ತಕ ಬರೆಯದೇ ಇದ್ದ ವ್ಯಕ್ತಿ ಎಂದರೆ ನಾನೊಬ್ಬನೆ. ಪ್ರತಿಯೊಬ್ಬರೂ ಸಹ ಇನ್ನೊಬ್ಬರ ಮಾತಿಗೆ ಕಿವಿಯಾದರು. ಎಲ್ಲರೂ ಸಹ ಕನೆಕ್ಟೆಡ್ ಎಂದೆನಿಸುತ್ತಿತ್ತು. ಒಂದು ಸಾರ್ಥಕತೆ ನನಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಕ್ಕೆ ಲಭ್ಯವಾಯಿತು.. ಅದೆಷ್ಟೋ ಬಾರಿ ಜನ ಸೇರುವ ಕಾರ್ಯಕ್ರಮಗಳು ‘ಬರೀ ಗೌಜು, ನಿದ್ರೆ ಹಾಳು’ ಎಂಬಂತಿರುವುದನ್ನು ನಾನು ಕಂಡಿದ್ದೆ.. ಆದರೆ ಇಂಥಹ ಕೆಲವೇ ಕೆಲವು ಆಯ್ದ ವ್ಯಕ್ತಿಗಳ ಕಾರ್ಯಕ್ರಮ ನನಗೊಂದು ಹೊಸ ಅನುಭವ ನೀಡಿತು.

ಇನ್ನು ರಸರಾಮಾಯಣ ಕೃತಿಯ ಮತ್ತು ಅದರ ಸಾಧ್ಯತೆಯ ಕುರಿತು ನನಗನ್ನಿಸಿದ್ದು ಹೇಳಲೇ ಬೇಕು.. ಯಕ್ಷಗಾನವಿರಲಿ ಅಥವಾ ತಾಳಮದ್ದಲೆ ಇರಲಿ, ನಾವಿಂದು ಪರಂಪರೆಯ ಹಿರಿಮೆಯ ಮುಂದೆ ಚಿಕ್ಕವರಾಗಿದ್ದೇವೆ. ಅದರ ಭಾರವನ್ನು ಹೊರಲಾರದೆ ಬಸವಳಿದವೆನೋ ಎಂದು ಕೆಲವೊಮ್ಮೆ ಅನ್ನಿಸುತ್ತದೆ. ಯಾಕೆಂದರೆ, ಶೇಣಿ, ಸಾಮಗರಿರಬಹುದು ಅಥವಾ ಕೆರಮನೆ ಸಹೋದರಿರಬಹುದು.. ಅವರಿಂದ ಹೊರತಾದ ಹೊಸತನವನ್ನು ಬಹುತೇಕರಿಂದ ಕೊಡಲು ಸಾಧ್ಯವಾಗಿಲ್ಲ. ರಸರಾಮಾಯಣ ಓದಿ, ವಿಶ್ಲೇಷಿಸಿದರೆ ಮತ್ತು ಯಕ್ಷಗಾನದ ಪದ್ಯಗಳಿಗೆ, ಪಾತ್ರಗಳಿಗೆ ಅವನ್ನು ಅಳವಡಿಸಲು ಸಾಧ್ಯವಾದರೆ, ಸಂಪೂರ್ಣ ಹೊಸತನವನ್ನು ನೀಡಿದಂತೆ. ಈ ರಸರಾಮಾಯಣ ಕೃತಿ ಮುಂದಿನ ಕೆಲವು ತಲೆಮಾರಿಗೆ( 28 ವರ್ಷಕ್ಕೆ ಒಂದು ತಲೆಮಾರು ಎನ್ನುವುದು ವಾಡಿಕೆ) ಬೇಕಾದ ಸಂಪನ್ಮೂಲವನ್ನು ಒದಗಿಸುತ್ತದೆ. ಒಂದೊಳ್ಳೆ ಅರ್ಥಧಾರಿಗೆ ಬೇಕಾದ ಸರಕನ್ನು ಈ ಕೃತಿ ತೆರೆದಿಡುತ್ತದೆ. ಒಂದೊಳ್ಳೆ ಅರ್ಥಧಾರಿಯಾಗಲು ಈ ಕೃತಿ ಸಹಾಯಕ ಎಂದು ಹಿರಿಯ ಭಾಗವತರಾದ ಶ್ರೀ ಕಪ್ಪೆಕೆರೆ ಸುಬ್ರಾಯ ಭಾಗವತರು(ಅವರೂ ಸಹ ನನ್ನ ದೊಡ್ಡಪ್ಪ) ತಮ್ಮ ಅಭಿಪ್ರಾಯ ಹೇಳಿದ್ದಾರೆ.



ನಮಗೆ ಯಕ್ಷಗಾನ ನೋಡಲು ಬಹುತೇಕ ಸಂದರ್ಭದಲ್ಲಿ ಒಂದು ಪೂರ್ವ ಸಿದ್ಧತೆ ಬೇಕಾಗಿರುವುದಿಲ್ಲ. ಹಾಗೆಯೇ ಈ ಕೃತಿಯ ಕವನಗಳನ್ನೂ ಸಹ ಸುಮ್ಮನೆ ಖುಷಿಯಾಗಿ ಓದಬಹುದು.. ಕೆಲವಕ್ಕೆ ಒಂದೊಳ್ಳೆ ಪೂರ್ವ ಸಿದ್ಧತೆಯಾಗಲಿ ಅಥವಾ ಓದಿಕೊಂಡವರಲ್ಲಿ ಕೇಳಿ ತಿಳಿದರೆ ಆ ಸೊಗಸೇ ಬೇರೆ. ನಾನು ಎರಡು ಕವನಗಳನ್ನು ಅರ್ಥೈಸಲು ಮುಂದಿನ ಲೇಖನಗಳಲ್ಲಿ ಪ್ರಯತ್ನ ಮಾಡುತ್ತೇನೆ. ಅವೇನು ಬುದ್ಧಿ ಪೂರ್ವಕವಾಗಿ ಆಯ್ದ ಕವನಗಳಲ್ಲ.. ಇಡೀ ಕೃತಿಯೇ ವಿಶೇಷವಾಗಿರುವಾಗ ಯಾವ ಕವನವನ್ನು ವಿಶೇಷ ಎಂದು ಪ್ರತ್ಯೇಕಿಸುವುದು?? ಕನ್ನಡದ ಹಿರಿಯ ಕವಿಗಳಾದ ಶ್ರೀ ಹೆಚ್. ಎಸ್. ವೆಂಕಟೇಶ ಮೂರ್ತಿ ಯವರ ಸುಂದರ ಮುನ್ನುಡಿ ಮತ್ತು ಹಿರಿಯರಾದ ಶ್ರೀಮತಿ ವೈದೇಹಿಯವರ ಆಪ್ತ ಬೆನ್ನುಡಿ ಈ ಪುಸ್ತಕಕ್ಕಿದೆ.


  • ಗಣಪತಿ ಹೆಗಡೆ ಕಪ್ಪೆಕೆರೆ  ( ವೃತ್ತಿಯಲ್ಲಿ ಸಾಫ್ಟ್ ವೆರ್ ಇಂಜೀನಿಯರ್ ,ಹವ್ಯಾಸಿ ಬರಹಗಾರರು)

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW