ಕರ್ನಾಟಕದ ಹೆಸರನ್ನು ದೇಶವಿದೇಶಗಳಲ್ಲಿ ಹೆಸರುವಾಸಿ ಮಾಡಿದ ‘ಅಮೋಘವರ್ಷ ನೃಪತುಂಗ’ ನ ಕುರಿತು ಲೇಖಕ ಪ್ರಶಾಂತ ಹೊಸಮನಿ ಅವರು ಬರೆದ ಮಾಹಿತಿಪೂರ್ಣ ಲೇಖನವಿದು, ತಪ್ಪದೆ ಓದಿ…
ನಮ್ಮ ಸಮೃದ್ಧ ಕರ್ನಾಟಕ ಸಂಸ್ಕೃತಿ ಸಾಹಿತ್ಯದ ನೆಲೆವೀಡು, ಪಾರಂಪರಿಕ ನೆಲೆಗಳ ನಲ್ಮೆಯ ತಾಣ, ಹಲವು ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ಸಮೃದ್ಧ ಕರ್ನಾಟಕಕ್ಕೆ ಹಿಂದೆ ಆಳಿಹೋದ ಹಲವು ವಂಶಗಳು ಸಂಸ್ಕೃತಿ ಸಾಹಿತ್ಯದ ತಳಪಾಯವಾಗಿವೆ. ಈ ನಿಟ್ಟಿನಲ್ಲಿ ಕರ್ನಾಟಕದ ಪ್ರಸಿದ್ಧ ವಂಶ ರಾಷ್ಟ್ರಕೂಟರೂ ಅಪಾರವಾದ ಕೊಡುಗೆಯನ್ನು ನೀಡಿದ್ದಾರೆ. ಇವರಲ್ಲಿ ಪ್ರಸಿದ್ಧನಾದ ದೊರೆ ‘ಅಮೋಘವರ್ಷ ನೃಪತುಂಗ’ ಈತನ ಕೊಡುಗೆ ಕರ್ನಾಟಕ್ಕೆ ಅಪಾರವಾಗಿದ್ದು, ಆಧುನಿಕತೆಯ ಅರಿವಿನಲ್ಲಿ ಬದುಕುತ್ತಿರುವ ನಾವುಗಳು, ಆ ಕಾಲದಲ್ಲೇ ಕರ್ನಾಟಕದ ಹೆಸರನ್ನು ದೇಶವಿದೇಶಗಳಲ್ಲಿ ಹೆಸರುವಾಸಿ ಮಾಡಿದ ‘ಅಮೋಘವರ್ಷ ನೃಪತುಂಗ’ ನ ಕುರಿತಾಗಿ ತಿಳಿದುಕೊಳ್ಳೋಣ.

ಉತ್ತರ ಭಾರತ ಹಾಗೂ ಶ್ರೀಲಂಕಾ ಒಳಗೊಂಡಂತೆ ತಮ್ಮದೇ ಛಾಪು ಮೂಡಿಸಿದ್ದ ರಾಷ್ಟ್ರಕೂಟರು ಮೂಲತಃ ಕನ್ನಡಿಗರಾಗಿದ್ದು, ಚಾಲುಕ್ಯರ ಸಾಮಂತರಾಗಿದ್ದ ಇವರು, ‘ಯದು’ ವಂಶಕ್ಕೆ ಸೇರಿದವರಾಗಿದ್ದಾರೆ. ಮಧ್ಯಪ್ರದೇಶದ ಜಬ್ಬಲಪುರದಲ್ಲಿ ದೊರೆತಿರುವ ‘ಜ್ಯೂರಾ ಪ್ರಶಸ್ತಿ’ ಎಂಬ ಶಾಸನ ಸಂಪೂರ್ಣ ಕನ್ನಡಲಿಪಿಯಲ್ಲಿರುವುದರಿಂದ, ಇವರು ಮೂಲತಃ ಕನ್ನಡಿಗರು ಎಂಬುದಾಗಿ ತಿಳಿಯಬಹುದಾಗಿದೆ. ಇವರ ಸಾಮ್ರಾಜ್ಯ ಉತ್ತರದ ನರ್ಮದಾ ನದಿಯಿಂದ ದಕ್ಷಿಣದ ಕಾವೇರಿವರೆಗಲ್ಲದೇ, ಪೂರ್ವದ ಆಂದ್ರದಿಂದ ಪಶ್ಚಿಮದ ಅರಬ್ಬಿಸಮುದ್ರವರೆಗೂ ವಿಸ್ತಾರವಾಗಿತ್ತು.

ರಾಷ್ಟ್ರಕೂಟರ ಅಪ್ರತಿಮ ವೀರನಾಗಿದ್ದ ತಂದೆ ಮುಮ್ಮಡಿ ಗೋವಿಂದನು ಕ್ರಿ.ಶ.814 ಮರಣಾನಂತರ ಕೇವಲ 14 ನೇ ವಯಸ್ಸಿನಲ್ಲಿ ಪಟ್ಟಕ್ಕೇರಿದ ಅಮೋಘವರ್ಷ ನೃಪತುಂಗ ಕ್ರಿ.ಶ. 878 ರವರೆಗೆ 62 ವರ್ಷಗಳ ಕಾಲ ರಾಜ್ಯಭಾರ ಮಾಡುತ್ತಾನೆ. ಪೂರ್ವದ ಚಾಲುಕ್ಯ ಹಾಗೂ ತಲಕಾಡಿನ ಗಂಗರೊಂದಿಗೆ ಹೋರಾಡಿ, ತನ್ನ ಸಾಮ್ರಾಜ್ಯ ವಿಸ್ತರಿಸಿಕೊಳ್ಳುತ್ತಾನೆ. ಈಗಿನ ಆಂಧ್ರಪ್ರದೇಶದ ‘ಮಾನ್ಯಖೇಟ’ ವನ್ನು ತನ್ನ ರಾಜಧಾನಿಯನ್ನಾಗಿಸಿಕೊಂಡು, ಜನತೆಯ ಆಶೋತ್ತರಗಳಿಗೆ ಸದಾ ಸ್ಪಂದನೆ ನೀಡುತ್ತಾ ಜನಮಾನಸದಲ್ಲಿ ನೆನೆಯುವಂತೆ ಮಾಡುತ್ತಾನೆ. ಇದಕ್ಕೆ ಪೂರಕವೆಂಬಂತೆ ,ತನ್ನ ಸಾಮ್ರಾಜ್ಯದಲ್ಲಿ ತೀವ್ರ ಕ್ಷಾಮ ಉಂಟಾದಾಗ ಜ್ಯೋತಿಷಿಯೋರ್ವರು, ಕರವೀರಪುರ ಎಂದು ಕರೆಯುತ್ತಿದ್ದ ‘ಕೋಲ್ಹಾಪುರದ ಮಹಾಲಕ್ಷ್ಮಿ’ ಗೆ ಹೆಬ್ಬೆರಳು ಅರ್ಪಿಸಿದರೆ ಕ್ಷಾಮ ದೂರವಾಗುತ್ತದೆ, ಎಂಬ ಜ್ಯೋತಿಷಿಯ ಮಾತಿನಿಂದ ವಿಚಲಿತಗೊಳ್ಳದೇ ತನ್ನ ಸಾಮಂತರ ಸಮ್ಮುಖದಲ್ಲಿ ಕೊಲ್ಲಾಪುರದ ಮಹಾಲಕ್ಷ್ಮಿಯ ದೇವಿಗೆ ತನ್ನ ‘ಬಲಗೈ ಹೆಬ್ಬೆರಳನ್ನು’ ಕತ್ತರಿಸಿ ನೈವೇದ್ಯವಾಗಿ ನೀಡಿದ, ಎಂದು ಇತಿಹಾಸ ಪುಟಗಳು ಈತನ ಹೃದಯ ವೈಶಾಲ್ಯತೆಯನ್ನು ತಿಳಿಸುತ್ತವೆ. ತನ್ನ ಶಾಂತಿಪ್ರಿಯತೆಗೆ ಉದಾಹರಣೆ ಎಂಬಂತೆ ತನ್ನ ಸಾಮ್ರಾಜ್ಯ ವಿರೋಧಿಗಳಾದ ಗಂಗರ ಭೂತುಗನಿಗೆ ತನ್ನ ಮಗಳಾದ ‘ಚಂದ್ರಬಲಜ್ಜ’ಳನ್ನು ಕೊಟ್ಟು ಮದುವೆ ಮಾಡಿಕೊಡುತ್ತಾನೆ. ಇನ್ನೊಬ್ಬ ಮಗಳಾದ ‘ಶಂಭಾಳ’ನ್ನು ಪಲ್ಲವರ ದೊರೆ ‘ನಂದಿವರ್ಮ’ನಿಗೆ ಕೊಟ್ಟು ಮದುವೆ ಮಾಡಿದ. ಇದರಿಂದ ಯುದ್ಧದಿಂದ ಆಗುವ ಕಾರ್ಯನ್ನು ಶಾಂತಿ ಸಹಕಾರದಿಂದ ಗೆಲ್ಲಬಹುದು ಎಂಬುದಾಗಿ ತಿಳಿಸುತ್ತಾನೆ.

ಸ್ವತಃ ಕವಿಯಾಗಿದ್ದ ಈತನ ಆಶ್ರಯದಲ್ಲಿ ಕನ್ನಡ ಹಾಗೂ ಸಂಸ್ಕೃತ ಸಾಹಿತ್ಯಗಳು ಪ್ರವರ್ಧಮಾನಕ್ಕೆ ಬಂದವು. ಅರಬ್ ಪ್ರವಾಸಿಗ ಹಾಗೂ ಗ್ರಂಥಕಾರ ‘ಸುಲೇಮಾನ್’ ಅಮೋಘವರ್ಷನನ್ನು ಚೀನಾ,ಬಾಗ್ದಾದ್ ಕಾನ್ಸಟಾಂಟಿನೋಪಲ್ ರಾಜರುಗಳಿಗೆ ಹೋಲಿಕೆ ಮಾಡಿ ಬರೆದಿದ್ದಾನೆ. ಅಲ್ಲದೇ ಸುಲೇಮಾನ್ ಹೇಳುವಂತೆ ‘,ಪ್ರಪಂಚದ ಪ್ರಸಿದ್ಧ ನಾಲ್ಕು ಅರಸರಲ್ಲಿ ಇವನೂ ಕೂಡಾ ಒಬ್ಬನಾಗಿದ್ದ’,ಎಂಬುದಾಗಿ ಹೇಳುತ್ತಾನೆ. ಕರ್ನಾಟಕದ ಕೀರ್ತಿ ಬೆಳಗಿಸಿದ ದೊರೆಗಳಲ್ಲಿ ಮಂಚೂಣಿಯಲ್ಲಿದ್ದಾನೆ. ಹಿಂದೂ ಹಾಗೂ ಜೈನ ಧರ್ಮವನ್ನು ಸಮಾನವಾಗಿ ಪರಿಗಣಿಸಿ ಜನರ ಪ್ರೀತಿಗೆ ಪಾತ್ರನಾದ, ಈತನನ್ನು ಶಿವಸ,ನೃಪತುಂಗ, ಅತಿಶಯಧವಳ, ವೀರನಾರಾಯಣ, ಲಕ್ಷ್ಮೀವಲ್ಲಭೇಂದ್ರ, ಶ್ರೀ ವಲ್ಲಭ, ಹಾಗೂ ಮಾರ್ತಾಂಡ ಎಂಬ ಹಲವು ಬಿರುದುಗಳಿಂದ ಸನ್ಮಾನಿತನಾಗಿದ್ದಾನೆ.

ಈತನ ಕಾಲಾವಧಿಯಲ್ಲಿ ‘ಮಹಾವೀರಾಚಾರ್ಯರು’ ಬರೆದ ‘ಗಣಿತ ಸಾರ ಸಂಗ್ರಹ’ ಪ್ರಸಿದ್ಧಿಯನ್ನು ಪಡೆದಿತ್ತು, ಬ್ರಿಟಿಷರು ಭಾರತವನ್ನಾಳುವ ಪೂರ್ವಕ್ಕಿಂತ ಇದೇ ಪುಸ್ತಕದ ಅಂಶಗಳನ್ನು ಭಾರತದಲ್ಲಿ ಬೋಧಿಸಲಾಗುತ್ತಿತ್ತು. ಕನ್ನಡ ಪ್ರಾಚೀನ ಗ್ರಂಥ ‘ ಕವಿರಾಜ ಮಾರ್ಗ’ ದ ಕರ್ತೃ ‘ಶ್ರೀವಿಜಯ’ ಅಥವಾ ‘ನೃಪತುಂಗ’ ಎಂಬುದಾಗಿ ಹೇಳಲಾಗಿದೆ. ಇದಲ್ಲದೇ ಸ್ವತಃ ನೃಪತುಂಗ ಸಂಸ್ಕೃತ ಭಾಷೆಯಲ್ಲಿ ಬರೆದ ‘ಪ್ರಶ್ನೋತ್ತರ ಮಾಲಿಕೆ’ , ಶಕಟಾಯನ ಬರೆದ ವ್ಯಾಕರಣ ಗ್ರಂಥ ‘ಅಮೋಘ ದೃಥಿ’ , ಜೀನಸೇನಾಚಾರ್ಯ ಬರೆದ ‘ ಮಹಾಪುರಾಣ’ , ಉಗ್ರಾದಿತ್ಯ ಬರೆದ ‘ಕಲ್ಯಾಣ ಕಾರಕ’ ವಿದ್ಯಾನಂದಿ ಬರೆದ ‘ತತ್ವಾರ್ಥಿ ಶ್ಲಕೋರ್ಥಿಕ’ ಹೀಗೆ ಹಲವು ವಿದ್ವಾಂಸರಿಗೆ ಆಶ್ರಯದಾತನಾಗಿದ್ದ ನೃಪತುಂಗನನ್ನು ನಾವುಗಳು ಆಧುನಿಕತೆಯ ಪ್ರಭಾವಗಳಿಗೆ ಒಳಪಟ್ಟು ಮರೆಯುತ್ತಿದ್ದೇವೆ. ಇತನ ಸಾಧನೆಯನ್ನು ತಿಳಿಸುವ ಡಾ.ರಾಜ್ ಕುಮಾರ್ ರವರ ಅಭಿನಯದ 200 ನೇ ಚಿತ್ರವಾಗಿ ಹಾಗೂ ಸಿಂಗೀತಂಶ್ರೀನಿವಾಸ್ ರವರ ನಿರ್ದೇಶನದಲ್ಲಿ ತೆರೆಕಾಣಬೇಕಾಗಿದ್ದ ” ಅಮೋಘವರ್ಷ ನೃಪತುಂಗ ” ಚಲನಚಿತ್ರ ಬಿಡುಗಡೆಗೊಳ್ಳಲಿಲ್ಲವೋ..? ಅಥವಾ ತಯಾರಾಗಲಿಲ್ಲವೋ ..? ಎಂಬುದು ನಾಡಿನ ಜನತೆಗೆ ತಿಳಿಯದಾಗಿದೆ. ಅದ್ಭುತ ಕಥೆಯೊಂದು ನಾಡಿನ ಜನತೆಗೆ ಸಿನಿಮಾ ರೂಪದಲ್ಲಿ ಮುಟ್ಟಲಿಲ್ಲ ಎಂಬ ಕೊರಗು ‘ಅಮೋಘವರ್ಷ ನೃಪತುಂಗ’ ನ ಆಸಕ್ತ ಅಭಿಮಾನಿಗಳಲ್ಲಿದೆ. ಅದೇನೆ ಆಗಲಿ ಕಳೆದು ಹೋದ ಮನೆತನಗಳು ಹಾಗೂ ರಾಜರುಗಳು ಕರ್ನಾಟಕಕ್ಕೆ ನೀಡಿದ ತಮ್ಮದೇಯಾದ ಕೊಡುಗೆಯನ್ನು ಪ್ರತಿಯೊಬ್ಬ ಕನ್ನಡಿಗನು ಸ್ಮರಿಸುವಂತ ಕಾರ್ಯವಾಗಬೇಕಾಗಿದೆ.
- ಪ್ರಶಾಂತ ಹೊಸಮನಿ (ಕತೆಗಾರರು, ಲೇಖಕರು) ನಾಗಠಾಣ ತಾ.ಜಿ.ವಿಜಯಪುರ.
