ಲೇಖಕರು, ಸಾಹಿತಿಗಳಾದ ಎನ್.ಎಸ್. ಶ್ರೀಧರ ಮೂರ್ತಿ ಅವರ ‘ಅಂದದ ಹೆಣ್ಣಿನ ನಾಚಿಕೆ’ ಪ್ರಬಂಧ ಸಂಕಲನ ಕುರಿತು ಸ್ವತಃ ಅವರ ಅಭಿಪ್ರಾಯ ಮತ್ತು ಅನುಭವವನ್ನು ಹಂಚಿಕೊಂಡಿದ್ದಾರೆ. ತಪ್ಪದೆ ಓದಿ…
ಪುಸ್ತಕ : ಅಂದದ ಹೆಣ್ಣಿನ ನಾಚಿಕೆ
ಲೇಖಕರು: ಎನ್.ಎಸ್. ಶ್ರೀಧರ ಮೂರ್ತಿ
ಪ್ರಕಾಶಕರು: ಮಡಿಲು ಪ್ರಕಾಶನ
ಪುಸ್ತಕ ಖರೀದಿಸಲು: 9342274331
ನನ್ನ ಹೊಸ ಪ್ರಬಂಧ ಸಂಕಲನ ‘ಅಂದದ ಹೆಣ್ಣಿನ ನಾಚಿಕೆ’ ಮಡಿಲು ಪ್ರಕಾಶನದಿಂದ ಪ್ರಕಟವಾಗಿ ಈಗ ಹೊರ ಬಂದಿದೆ. ಪ್ರಬಂಧ ಹಾಗೆ ನೋಡಿದರೆ ನನ್ನ ಮಾಧ್ಯಮವೇ ಅಲ್ಲ. ಶಾಲಾ ಕಾಲೇಜು ದಿನಗಳ ಸ್ಪರ್ಧೆಗಳನ್ನು ಹೊರತು ಪಡಿಸಿದರೆ ನಾನು ಎಂದಿಗೂ ಪ್ರಬಂಧಗಳನ್ನೇ ಬರೆದವನಲ್ಲ. ‘ಉಷಾ ಕಿರಣ’ದಲ್ಲಿದ್ದಾಗ ಹಿರಿಯ ಮಿತ್ರರಾದ ಎಸ್.ದಿವಾಕರ್ ಒಂದು ಪ್ರಬಂಧ ಬರೆಸಿದ್ದರು. ಅದು ನಾನೂ ಪ್ರಬಂದ ಬರೆಯ ಬಲ್ಲೆ ಎನ್ನುವ ಆತ್ಮವಿಶ್ವಾಸವನ್ನು ತಂದ ಮೊದಲ ಪ್ರಸಂಗ.
‘ಪಂಪಭಾರತ’ದಲ್ಲಿನ ಒಂದು ಪ್ರಸಂಗ, ಹಸ್ತಿನಾಪುರದ ಅರಸ ಶಂತನು ಬೇಟೆಗಾಗಿ ಹೋದಾಗ ಸುಂದರಿ ಸತ್ಯವತಿಯನ್ನು ಕಂಡು ಮೋಹಗೊಂಡ. ‘ನೀಂ ಬಾ ಪೊಪೆಂ’ ಎಂದು ಕರೆದ. ಅವಳಾದರೂ ನಾಚಿಕೆಯಿಂದ ‘ಬೇಡುವೊಡೆ ನೀವೆಮ್ಮಯ್ಯನಂ ಬೇಡಿರೆ’ ಎಂದಳು. ಮುಂದಿನ ಕಥೆ ನಿಮಗೆ ಗೊತ್ತು. ಮುಳಿಯ ತಿಮ್ಮಪ್ಪಯ್ಯನವರು ಹೇಳುವಂತೆ ‘ಅಂದದ ಹೆಣ್ಣಿನ ನಾಚಿಕೆ’ ಮಹಾಭಾರತಕ್ಕೆ ಕಾರಣವಾಯಿತು. ಇದು ಗೀತರಚನೆಕಾರ ವಿಜಯನಾರಸಿಂಹ ಅವರನ್ನು ಎಷ್ಟು ಸೆಳೆಯಿತು ಎಂದರೆ ‘ಬಾರೆ ಬಾರೆ ಚಂದದ ಚೆಲುವಿನ ತಾರೆ’ ಗೀತೆಯಲ್ಲಿ ಅದನ್ನು ಬಳಸಿ ಕೊಂಡರು. ಇದೆಲ್ಲವನ್ನೂ ಇಟ್ಟು ಕೊಂಡು ನಾನು ‘ಅಂದದ ಹೆಣ್ಣಿನ ನಾಚಿಕೆ’ ಪ್ರಬಂಧವನ್ನು ಬರೆದಾಗ ಹಿರಿಯರಾದ ಡಾ.ಸಿ.ಪಿ.ಕೆ ಇದನ್ನು ತುಂಬಾ ಅಂದವಾದ ಬರವಣಿಗೆ ಎಂದು ಮೆಚ್ಚಿ ಕೊಂಡಿದ್ದರು. ಇವೆಲ್ಲವೂ ಒಂದು ರೀತಿಯಲ್ಲಿ ನಾನು ಪ್ರಬಂಧ ಬರೆಯ ಬಲ್ಲೆ ಎನ್ನುವ ಆತ್ಮವಿಶ್ವಾಸ ತಂದು ಕೊಟ್ಟ ಕ್ಷಣಗಳು. ಏಕೋ ಮೊನ್ನೆ ಈ ಮೂವತ್ತು ವರ್ಷಗಳಲ್ಲಿ ನಾನು ಎಷ್ಟು ಪ್ರಬಂಧ ಬರೆದಿದ್ದೇನೆ ಎಂದು ಹುಡುಕಿದೆ. ಸುಮಾರು ನಲವತ್ತು ಪ್ರಬಂಧಗಳು ಸಿಕ್ಕವು. ಅದರಲ್ಲಿನ ಇಪ್ಪತ್ತೈದು ಪ್ರಬಂದಗಳನ್ನು ಆರಿಸಿ ಈ ಸಂಕಲನವನ್ನು ತಂದಿದ್ದೇನೆ. ನಾನು ಇಷ್ಟಪಡುವ ಪ್ರಬಂಧಕಾರರಾದ ಕೆ.ಸತ್ಯನಾರಾಯಣ್ ಅವರನ್ನು ಮುನ್ನುಡಿ ಬರೆಯಿರಿ ಎಂದು ಕೋರಿ ಕೊಂಡಾಗ ಅವರು ಅಧ್ಯಯನಪೂರ್ಣ ಮುನ್ನುಡಿ ಬರೆದು ಕೊಟ್ಟಿದ್ದಾರೆ. ಅವರ ಅಭಿಮಾನಕ್ಕೆ ನಾನು ಕೃತಜ್ಞನಾಗಿದ್ದೇನೆ. ಈ ಪ್ರಬಂಧಗಳನ್ನು
ಪ್ರಕಟಿಸಿದ ಪತ್ರಿಕೆಗಳ ಪಟ್ಟಿ ದೊಡ್ಡದಿದೆ. ಅವರೆಲ್ಲರಿಗೂ ವಂದನೆಗಳು. ಅಕ್ಕರೆಯಿಂದ ಕೃತಿಯ ಕರಡಚ್ಚು ತಿದ್ದಿ ಕೊಟ್ಟ ಶಮ ನಂದಿಬೆಟ್ಟ ಅವರಿಗೂ ಕೃತಜ್ಞತೆಗಳು.

ಇದು ನನ್ನ 50ನೆಯ ಪುಸ್ತಕ. 1995ರಲ್ಲಿ ನನ್ನ ಮೊದಲ ಪುಸ್ತಕ ‘ಅಭಿಮುಖ’ ಪ್ರಕಟವಾದಾಗ ಇಷ್ಟು ದೂರ ಬರುತ್ತೇನೆ ಎನ್ನುವ ಚಿಕ್ಕ ಕನಸೂ ಕೂಡ ಇರಲಿಲ್ಲ. ಆ ಪುಸ್ತಕ ಬಂದಿದ್ದು ‘ಸಂಚಯ’ದಿಂದ, ಗೆಳೆಯ ಡಿ.ವಿ.ಪ್ರಹ್ಲಾದ ಪ್ರೀತಿಯ ಒತ್ತಾಯದಿಂದ ಮೊದಲ ಕೃತಜ್ಞತೆ ಅವರಿಗೆ ಸಲ್ಲ ಬೇಕು. ಸ್ವಭಾವತಃ ಬಾಹ್ಯ ಒತ್ತಡವಿಲ್ಲದೆ ಬರೆಯದ ಆಲಸಿ ನಾನು. ಹೀಗಾಗಿ ಇಷ್ಟು ದೂರ ಬಂದಿರುವ ಹೆಗ್ಗಳಿಕೆ ಬರೆಸಿದವರಿಗೇ ಸೇರ ಬೇಕು. ನನ್ನ ಬರಹಗಳನ್ನು ಅಭಿಮಾನದಿಂದ ಓದುತ್ತಾ ಬಂದ ಓದುಗರ ಒತ್ತಾಸೆ ಕೂಡ ನಾನು ನಿರಂತರವಾಗಿ ಬರೆಯಲು ಕಾರಣವಾಗಿದೆ. ನಾಡಿನ ಪ್ರತಿಷ್ಟಿತ ಪ್ರಕಾಶಕರಾದ ಸಪ್ನ, ಅಂಕಿತ, ವಸಂತ, ಉದಯ, ರಾಷ್ಟ್ರೋತ್ಥಾನ ಸೇರಿದಂತೆ ಹಲವರು ನನ್ನ ಪುಸ್ತಕಗಳನ್ನು ಪ್ರೀತಿಯಿಂದ ಪ್ರಕಟಿಸಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡಮಿ, ಕನ್ನಡ ಸಾಹಿತ್ಯ ಪರಿಷತ್, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಚಲನಚಿತ್ರ ಅಕಾಡಮಿ, ಚಲನಚಿತ್ರ ವಾಣಿಜ್ಯ ಮಂಡಳಿಗಳು ರೂಪಿಸಿದ ಯೋಜನೆಗಳಿಗೆ ಅನುಗುಣವಾಗಿ ನನ್ನ ಹಲವು ಪುಸ್ತಕಗಳು ಬಂದಿವೆ. ನಾನು ಇಷ್ಟು ಬರವಣಿಗೆ ಮಾಡಲು ಮುಖ್ಯ ಕಾರಣ ಅವರು. ಎಲ್ಲರಿಗೂ ಧನ್ಯವಾದ ಹೇಳಲು ಇದು ಸದಾವಕಾಶ.
ನನ್ನ ಹಲವು ಪ್ರಮುಖ ಪುಸ್ತಕಗಳನ್ನು ಪ್ರಕಟಿಸಿರುವ ಮಹೇಶ್ ತಮ್ಮ ‘ಮಡಿಲು’ ಪ್ರಕಾಶನದ ಮೂಲಕ ಈ ಪುಸ್ತಕ ಪ್ರಕಟಿಸುತ್ತಿರುವುದು ಅರ್ಥಪೂರ್ಣವಾಗಿದೆ. ಕೃತಿಯನ್ನು ಪಡೆಯಲು ಇಚ್ಚಿಸುವವರು ಅವರನ್ನು ಸಂಪರ್ಕಿಸ ಬಹುದು (9342274331) ಈ ಕೃತಿಯನ್ನು ಅನ್ ಲೈನ್ ಮೂಲಕ ಪಡೆಯಲು ಬಯಸುವವರು https://imojo.in/1I0BgkG ಈ ಲಿಂಕ್ ಮೂಲಕ ಪಡೆಯ ಬಹುದು.
- ಎನ್.ಎಸ್. ಶ್ರೀಧರ ಮೂರ್ತಿ (ಲೇಖಕರು, ಸಾಹಿತಿಗಳು, ನಿವೃತ್ತ ಪತ್ರಕರ್ತರು, ಉಪನ್ಯಾಸಕರು)
