ಡಬ್ಬದಲ್ಲಿದ್ದ ರವೆ ಉಂಡೆಗಳು ಒಂದೊಂದೇ ಖಾಲಿಯಾದವು.ಅವೆಲ್ಲವೂ ಎಲ್ಲಿ ಹೋದವು? ಹರಿಹರ ಬಿ ಆರ್ ಅವರ ಪುಟ್ಟ ಕತೆಯನ್ನು ಸಂಪೂರ್ಣವಾಗಿ ಓದಿ…
ಒಮ್ಮೆ ದಂಪತಿಗಳು ತನ್ನ ಹತ್ತು ವರ್ಷದ ಮಗನ ಹುಟ್ಟಿದ ಹಬ್ಬಕ್ಕೆ ಕೇಕನ್ನು ತರಿಸಿ ಚಾಕಲೇಟನ್ನು ತಂದು ಹಂಚಿಸುವುದು ಎಂದು ಮಾತಾಗಿತ್ತು. ಜೊತೆಗೆ ಭಾನುವಾರವಾದ್ದರಿಂದ ಗೆಳೆಯರ ಸಂಖ್ಯೆ ತಿಳಿದು ದೊಡ್ಡ ಕೇಕು ತರಿಸುವುದು ಎಂದೂ ಮಾತನಾಡಿಕೊಂಡಿದ್ದರು. ಈ ವಿಷಯವೆಲ್ಲ ಮಾತನಾಡಿಕೊಂಡಿದ್ದು ಮಗನಿಗೆ ಗೊತ್ತಿಲ್ಲ.
ಆ ದಿನ ಬಂತು. ಮಗನ ಸ್ನೇಹಿತರೆಲ್ಲ ಮನೆಗೆ ಬಂದಿದ್ದರು. ಊಟದ ವ್ಯವಸ್ಥೆ ತಪ್ಪಿಸಲು ನಾಲ್ಕು ಗಂಟೆ ಎಂದು ಎಲ್ಲರಿಗೂ ಮುಂಚೆಯೇ ತಿಳಿಸಿದ್ದೂ ಆಗಿತ್ತು. ಅದರಂತೆ ಜಮಾಯಿಸಿದ್ದರು. ಪೂರ್ವ ಸಿದ್ದತೆಗಳು ಸಾಗಿದ್ದವು. ಕತ್ತರಿಸಿದ್ದೂ ಆಯ್ತು. ಚಾಕಲೇಟ್ ಜೊತೆ ಚಿಕ್ಕ ಕಾಣಿಕೆ ಕೊಡುವಾಗ ಹುಡುಗನಿಗೆ ಮುಜುಗರವೆನಿಸಿ, ಅಮ್ಮನ ಬಳಿ ಹೋಗಿ ‘ನೀ ಮೊನ್ನೆ ಮಾಡಿದ್ದೆಯಲ್ಲ ರವೆ ಉಂಡೆ ಇವರಿಗೆಲ್ಲ ಕೊಡ್ತೀನಮ್ಮ’ ಎಂದು ಎಲ್ಲರೆದುರಿಗೆ ಹೇಳುತ್ತಿದ್ದವನು, ಅಮ್ಮ ಉತ್ತರಕ್ಕೂ ಕಾಯದೇ ಆ ಡಬ್ಬದ ಜೊತೆಗೆ ಕೋಡುಬಳೆ ಡಬ್ಬಗಳ ಸಹಿತ ಪ್ರತ್ಯಕ್ಷನಾಗಿದ್ದ. ಎಲ್ಲರನ್ನು ಕರೆದು ಒಂದೊಂದಾಗಿ ಕೊಟ್ಟು ಖಾಲಿ ಮಾಡಿದ್ದ. ಅಮ್ಮಾ ಬಂದು ‘ನನಗೆ’ ಎಂದು ಕೇಳಿದಾಗ ಮಗ ಪೆಚ್ಚಾಗಿದ್ದ. ಇದನ್ನೆಲ್ಲ ನೋಡುತ್ತಿದ್ದ ಅಪ್ಪ “ಎಲ್ಲರೂ ತಿನ್ನುತ್ತಿರುವ ಹಲ್ಲನ್ನು ನೋಡಿ ಬಾಯಿ ಬಿಟ್ಟೆಯಲ್ಲ. ಅದಕ್ಕೇ ‘ಹಂಚಿದವರಿಗೆ ಹಲ್ಲು ಬಾಯಿ’ ಅಂತ ಗಾದೆ ಮಾಡಿರಬೇಕು” ಎನ್ನುತ್ತಿದ್ದರು. ಹೆಂಡತಿ ಮನದೊಳಗೆ….
ಹೆಂಡತಿ ಕಚೇರಿಗೆ ದೀರ್ಘ ಕಾಲದ ರಜೆಯಿತ್ತೆಂದು ಸ್ವಲ್ಪ ಹೆಚ್ಚಾಗಿಯೇ ರವೆ ಉಂಡೆ ಕೋಡುಬಳೆ ಮಾಡಿ ಮನೆಯವರೊಂದಿಗೆಲ್ಲ ತಿನ್ನೋಣವೆಂದುಕೊಂಡಿದ್ದಳು. ಅದೂ ಇದನ್ನೆಲ್ಲ ಮಾಡುವ ದಿನ ಏನಾಗಿತ್ತು ಗೊತ್ತೇ? ಗಂಡ ಮತ್ತು ಮಗನ ಕೂಡಿಸಿಕೊಂಡು ಸಣ್ಣ ಪುಟ್ಟ ಸಹಾಯ ಪಡೆದು ಮಾಡುತ್ತಿರುವಾಗ ರುಚಿ ನೋಡಿರೆಂದು ಕೊಟ್ಟಳು. ಅವರಿಬ್ಬರೂ ತಿಂದ ನಂತರ “ಹೇಗಿದೆ” ಎಂದು ಕೇಳಿದಳು.
ಗಂಡನೇ “ಯಾಕೋ ಇನ್ನು ರುಚಿ ಗೊತ್ತಾಗ್ತಿಲ್ಲ. ಇನ್ನ ಸ್ವಲ್ಪ ಕೊಡು” ಎಂದು ಕೇಳಿದ. ಮಗನೂ ಕೈ ಒಡ್ಡಿದ ಆಗಲೂ ಇಬ್ಬರಿಗೂ ಕೊಟ್ಟು ಫಲಿತಾಂಶಕ್ಕೆ ಕಾಯುತ್ತಿದ್ದಳು. ಆಗಲೇ ಒಂದು ಸಿಹಿ ಮತ್ತು ಖಾರಾ ಎಂದು ಒಂದೊಂದು ಖಾಲಿಯಾಗಿತ್ತು. ಆಗ ಮಗನೇ “ಅಮ್ಮ ನಿನ್ನ ಮಾಡುವ ಕೈಗಳು ಚೆನ್ನಾಗಿದೆಯಮ್ಮ” ಎಂದು ಹೇಳಿದ ಅವನಿಗೆ ಎರಡೆರಡು ಕೊಟ್ಟು ಕಳಿಸಿದಳು.
ಗಂಡನೂ ಅದೇ ರೀತಿ ಹೇಳಿ, “ನೋಡ್ರೀ ನಿಮ್ಮ ಮಗನಿಗಿರುವಷ್ಟು ಬುದ್ದಿ ನಿಮಗಿಲ್ಲ” ಎಂದು ಹೇಳಿ ಡಬ್ಬಿ ಎತ್ತಿಟ್ಟೇ ಬಿಟ್ಟಳು. ನಿಧಾನವಾಗಿ ಬರುತ್ತಿದ್ದ ಅಪ್ಪನ ಕಂಡ ಮಗ “ನೋಡಮ್ಮ ಅಪ್ಪ” ಎನ್ನುತ್ತಲೇ ಅವನಿಗೆ ಕೊಟ್ಟಿದ್ದನ್ನು ತಿಂದು ಮುಗಿಸಿದ್ದ. ಇದನ್ನೆಲ್ಲ ನೆನೆಸಿಕೊಂಡು ಗಂಡನ ಮಾತಿಗೆ ಪ್ರತ್ಯುತ್ತರವಾಗಿ, ತಕ್ಷಣವೇ ಹೆಂಡತಿ ಅಲ್ಲರೀ ಹಂಚಿದವರಿಗಲ್ಲ ‘ಮಾಡಿದವರಿಗೆ ಹಲ್ಲು ಬಾಯಿ’ ಅಂತ ಗಾದೆ ಸರಿ ಮಾಡಬೇಕು ಎಂದು ಬೇಸರಿಸಿಕೊಂಡು ಹೇಳುತ್ತಿದ್ದಳು.
- ಹರಿಹರ ಬಿ ಆರ್ – ಅಕ್ಷಂತಲ ಬರಹ, ಬೆಂಗಳೂರು
