‘ಮೌನ ಮಾತಾದಾಗ’ ಪುಸ್ತಕಕ್ಕಾಗಿ ರವಿಬೆಳಗೆರೆಯವರಿಂದ ಒಂದು ಹಿನ್ನುಡಿಯನ್ನು ಬರೆಸಿಕೊಂಡೆ. ಕೆಲಸದ ಒತ್ತಡದ ನಡುವೆಯೇ ನನ್ನ ಬಗ್ಗೆ ಬರೆದ ಆ ಪುಟ್ಟ ಬರಹ ರವಿಬೆಳಗೆರೆಯವರ ಹೃದಯಕ್ಕೆ ಹಿಡಿದ ಕನ್ನಡಿಯಂತಿತ್ತು. ಖ್ಯಾತ ಪತ್ರಕರ್ತರಾದ ಗಣೇಶ ಕಾಸರಗೋಡು ಅವರು ಅಕ್ಷರ ಮಾಂತ್ರಿಕ ರವಿಬೆಳಗೆರೆ ಅವರ ಕುರಿತು ಬರೆದ ಲೇಖನವನ್ನು ತಪ್ಪದೆ ಮುಂದೆ ಓದಿ…
ಅಕ್ಷರ ಮಾಂತ್ರಿಕ ರವಿಬೆಳಗೆರೆಯನ್ನು ಬೆಂಗಳೂರಿಗೆ ಕರೆಸಿದ್ದು ನಾನೇ ಎಂಬ ಹುಂಬ ಗರ್ವ!
ನಾನು ‘ಹಾಯ್ ಬೆಂಗಳೂರ್’ ಪತ್ರಿಕೆಗೆ ಬರೆಯುತ್ತಿದ್ದ ಅಂಕಣದ ಹೆಸರು : ‘ಮೌನ ಮಾತಾದಾಗ’. ಇದೇ ಹೆಸರಿನಲ್ಲಿ ಪುಸ್ತಕವೊಂದನ್ನು ಹೊರತಂದೆ. ಇದು ಪ್ರಕಾಶಕ ಗೆಳೆಯ ಪರಶಿವಪ್ಪನವರ ಸಾಹಸ. ಅವರ ‘ಸ್ನೇಹಾ ಬುಕ್ ಹೌಸ್’ ಮಳಿಗೆ ಉದ್ಘಾಟನಾ ದಿನದಂದು ಬಿಡುಗಡೆಗೊಂಡ ಪುಸ್ತಕವಿದು. ಈ ಪುಸ್ತಕಕ್ಕಾಗಿ ರವಿಬೆಳಗೆರೆಯವರಿಂದ ಒಂದು ಹಿನ್ನುಡಿಯನ್ನು ಬರೆಸಿಕೊಂಡೆ. ಕೆಲಸದ ಒತ್ತಡದ ನಡುವೆಯೇ ನನ್ನ ಬಗ್ಗೆ ಬರೆದ ಆ ಪುಟ್ಟ ಬರಹ ರವಿಬೆಳಗೆರೆಯವರ ಹೃದಯಕ್ಕೆ ಹಿಡಿದ ಕನ್ನಡಿಯಂತಿತ್ತು. ಈ ಬರಹದಲ್ಲಿ ರವಿಬೆಳಗೆರೆಯವರು ತಮ್ಮನ್ನು ಬೆಂಗಳೂರಿಗೆ ಕರೆಸಿಕೊಂಡು ಆಶ್ರಯ ನೀಡಿದ ನನ್ನ ಬಗ್ಗೆ ಬರೆದುಕೊಂಡಿದ್ದಾರೆ. ಆ ಬರಹದ ವಿವರ ಇಂತಿದೆ :
◆ ರವಿ ಕಂಡದ್ದು.
‘ಕಷ್ಟ ಕಾಲದಲ್ಲಿ ಸಿಕ್ಕ ಗೆಳೆಯರು ಕಳೆದು ಹೋಗುವುದಿಲ್ಲವಂತೆ. ನನ್ನ ಬದುಕಿನ ಅತ್ಯಂತ ಕಷ್ಟ ಕಾಲದಲ್ಲಿ ನನಗೆ ಬೆಂಗಳೂರಿನ ಫುಟ್’ಪಾತೊಂದರ ಮೇಲೆ ದೊಡ್ಡ ನೆರಳಾಗಿ ಸಿಕ್ಕಿದವರು ಗಣೇಶ್ ಕಾಸರಗೋಡು. ಹತ್ತು ವರ್ಷದ ನಂತರ ನಾನು ಏನಾಗುತ್ತೇನೆ ಎಂಬುದು ನನಗೇ ಗೊತ್ತಿರಲಿಲ್ಲ. ಆದರೆ ನನ್ನೊಳಗೊಬ್ಬ ಬರಹಗಾರ ಇದ್ದಾನೆ ಎಂಬುದನ್ನು ತಕ್ಷಣ ಅರ್ಥ ಮಾಡಿಕೊಂಡವರು ಗಣೇಶ್. ನನಗೆ ಅವತ್ತು ಕೂರಲು ಕುರ್ಚಿ, ನೆತ್ತಿಗೆ ನೆರಳು ಮತ್ತು ಒಂದು ಉದ್ಯೋಗ ಕಲ್ಪಿಸಿಕೊಟ್ಟವರು ಇದೇ ಗಣೇಶ್ ಕಾಸರಗೋಡು. ಅವರ ಪ್ರೀತಿಯನ್ನು ಎಂದೂ ಮರೆಯಲಾರೆ.

‘ಬದುಕು ನಮ್ಮನ್ನು ಜೊತೆಜೊತೆಯಾಗಿಯೇ ಕಷ್ಟಗಳಿಗೆ ನೂಕಿತು. ನಾವು ಹುಂಬರಂತೆ, ಮೂರ್ಖರಂತೆ, ಸಿಪಾಯಿಗಳಂತೆ, ಕೂಲಿಯವರಂತೆ ಯಾರಿಗೋಸ್ಕರವೋ ದುಡಿದೆವು. ನಿದ್ದೆಗೆಟ್ಟೆವು. ಕುಟುಂಬ ಸೌಖ್ಯ ಕಳೆದುಕೊಂಡೆವು. ಒಟ್ಟೊಟ್ಟಿಗೇ ಬದುಕಿದೆವು. ಕಣ್ಣೀರಿಟ್ಟೆವು. ಇವತ್ತು ಹಿಂದಿರುಗಿ ನೋಡಿದರೆ ಅದನ್ನೆಲ್ಲಾ ಮಾಡಿದ್ದು ನಾವೇನಾ ಅಂತ ಆಶ್ಚರ್ಯವಾಗುತ್ತದೆ. ನನ್ನ ಪಾಡಿಗೆ ನನ್ನನ್ನು ಬರೆಯಲು ಬಿಟ್ಟು, ಜಗತ್ತೇ ಮರೆತು ಹೋಗಿದ್ದ ಪತ್ರಿಕೆಯೊಂದನ್ನು ರೂಪಿಸಿ, ಅದು ಮಾರುಕಟ್ಟೆಯಲ್ಲಿ ರಾಕೆಟ್ ವೇಗದಲ್ಲಿ ಬೆಳೆಯುವುದನ್ನು ಕಂಡು ಮಗುವಿನಂತೆ ಚಪ್ಪಾಳೆ ತಟ್ಟಿದವರು ಗಣೇಶ್ ಕಾಸರಗೋಡು. ಆ ಪತ್ರಿಕೆಯ ಹೆಸರು : ‘ಕರ್ಮವೀರ’!

‘ಹಾಗೆ ನೋಡಿದರೆ, ಇವು ಇಬ್ಬರಿಗೂ ಸುಖದ ದಿನಗಳೇನಲ್ಲ. ಇವತ್ತಿಗೂ ನಾವು ಬರೆದೇ ಬದುಕಬೇಕು. ಆದರೆ ಇವು ಕಡುಕಷ್ಟದ ದಿನಗಳೇನಲ್ಲ. ಕಷ್ಟದ ದಿನಗಳನ್ನು ಹಿಂದಕ್ಕೆ ಹಾಕಿ ಮುಂದೆ ಬಂದಿದ್ದೇವೆ. ನನ್ನ ಪತ್ರಿಕೆಗೆ ಗಣೇಶ್ ಕಾಸರಗೋಡು ಅಂಕಣ ಬರೆಯುತ್ತಾರೆ. ಯಾರದೋ ಮೌನವನ್ನು ಮಾತಾಗಿಸುತ್ತಾರೆ. ತಾವು ಮಾತ್ರ ಸುಮ್ಮನುಳಿಯುತ್ತಾರೆ. ತುಂಬಾ ಸಾಧಾರಣವಾದುದರಲ್ಲೂ ಒಂದು ಅಪರೂಪವನ್ನು ಹುಡುಕುವ ಅವರಲ್ಲಿ ಪಳಗಿದ ಪತ್ರಕರ್ತನಿದ್ದಾನೆ. ಹೀಗಾಗಿ ಗಣೇಶ್ ಎಲ್ಲೆಡೆಗೂ ಸಲ್ಲುತ್ತಾರೆ…’

ಇಂಥಾ ರವಿಬೆಳಗೆರೆಯನ್ನು ನಾನು ಬೆಂಗಳೂರಿಗೆ ಕರೆಸಿಕೊಂಡ ಘಟನೆ ಒಂದು ರೋಚಕ ಅನುಭವ :
ನನ್ನ ವೃತ್ತಿ ಬದುಕಿನ ಎರಡನೇ ಮಜಲಿನಲ್ಲಿ ನಿಂತಿದ್ದೆ. ಆಗಿನ ‘ಚಿತ್ರದೀಪ’ ಸಿನಿಮಾ ಪತ್ರಿಕೆ ಮುಚ್ಚಿದ ನಂತರ ನಾವೇ ಶುರುಮಾಡಿದ್ದ ‘ಚಿತ್ರತಾರ’ ಪತ್ರಿಕೆ ಕೂಡಾ ಕೈಕೊಟ್ಟ ಸಂದರ್ಭದಲ್ಲಿ ನಾನು ಅನಿವಾರ್ಯವಾಗಿ ‘ಅಭಿಮಾನಿ ಪ್ರಕಾಶನ’ ಸಂಸ್ಥೆಯನ್ನು ಸೇರಿಕೊಳ್ಳಲೇ ಬೇಕಿತ್ತು. ಆತ್ಮೀಯವಾಗಿ ಗೆಳೆಯನ ಪ್ರೀತಿ ನೀಡಿ ನನ್ನನ್ನು ಆ ಸಂಸ್ಥೆಗೆ ಕರೆಸಿಕೊಂಡವರು ಟಿ.ವೆಂಕಟೇಶ್. ಹಾಗೆ ಸೇರಿಕೊಂಡಾಗ ನನ್ನ ಹೆಗಲ ಮೇಲೆ ಬಿದ್ದ ಪ್ರಕಟಣೆಗಳ ಭಾರ ಒಟ್ಟು ಆರು ಮ್ಯಾಗಜಿನ್’ಗಳದ್ದು : ಅಭಿಮಾನಿ, ಅಭಿಮಾನ, ಕ್ರೀಡಾವಾರಪತ್ರಿಕೆ, ತಾಯಿ, ಸಂಚು, ಅರಗಿಣಿ. ಒಂದು ರೀತಿಯಲ್ಲಿ ಇದೊಂದು ಒನ್ ಮ್ಯಾನ್ ಶೋ! ಮಿರರ್ ಇಮೇಜನ್ನು ಆಸ್ಲಾನ್ ಶೀಟ್ ಮೇಲೆ ಉಲ್ಟಾ ಅಂಟಿಸುವುದರಿಂದ ಹಿಡಿದು ಲೇಖನಗಳನ್ನು ಬರೆಯುವ ತನಕದ ಕೆಲಸ! ಒಗ್ಗಿ ಹೋಗಿತ್ತು. ನಿಭಾಯಿಸಿಕೊಳ್ಳುತ್ತಿದ್ದೆ. ಗಣೇಶ ನಾಯಕ್ ಎಂಬ ಹೆಸರಿನ ಪತ್ರಕರ್ತ ಗೆಳೆಯ ನನ್ನ ಹೆಗಲೆಣೆಯಾಗಿ ದುಡಿಯುತ್ತಿದ್ದ. ಬರೆಯುವುದರಲ್ಲಿ ನಿಸ್ಸೀಮ. ಗಣೇಶ ಬೀಡಿ ಸೇದುತ್ತಾ ರೀಫಿಲ್ ಹಿಡಿದು (ಈತ ಪೆನ್ನು ಬಳಸುತ್ತಿರಲಿಲ್ಲ) ಕೂತನೆಂದರೆ ಸಣಕಲು ದೇಹವನ್ನು ಹಿಂದೆ ಮುಂದೆ ಅಲ್ಲಾಡಿಸುತ್ತಾ ಪುಟಗಟ್ಟಲೆ ಬರೆಯುತ್ತಿದ್ದ. ಇಂಥಾ ಗಣೇಶ ನಾಯಕ್ ಒಂದು ದಿನ ಇದ್ದಕ್ಕಿದ್ದಂತೆಯೇ ನಾಪತ್ತೆಯಾದ. ಆ ಹೊತ್ತಿನಲ್ಲಿ ‘ಅಭಿಮಾನಿ ಪ್ರಕಾಶನ’ಕ್ಕೆ ಎಂಟ್ರಿ ಕೊಟ್ಟದ್ದೇ ಈ ರವಿಬೆಳಗೆರೆ!
ಕಥೆಗಾರನಾಗಿ ರವಿಬೆಳಗೆರೆ ನನಗೆ ಗೊತ್ತಿದ್ದ ವ್ಯಕ್ತಿಯಾಗಿದ್ದರು. ಊರು ಬಳ್ಳಾರಿ ಅಂತಲೂ ಗೊತ್ತಿತ್ತು. ಅತ್ಯುತ್ತಮ ಬರಹಗಾರ ಎನ್ನುವುದೂ ಗೊತ್ತಿತ್ತು. ಆದರೆ ಬಳ್ಳಾರಿಯಲ್ಲಿ ಏನು ಮಾಡುತ್ತಿದ್ದಾರೆ ಎನ್ನುವುದು ಗೊತ್ತಿರಲಿಲ್ಲ. ಒಂದು ದಿನ ಮಧ್ಯಾಹ್ನ ರವಿಬೆಳಗೆರೆ ನಮ್ಮ ರಾಜಾಜಿನಗರದ ರಾಜಕುಮಾರ್ ರಸ್ತೆಯಲ್ಲಿರುವ ‘ಅಭಿಮಾನ ಪ್ರಕಾಶನ’ಕ್ಕೆ ಬಂದರು. ರಾಜಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷರೋ, ಕಾರ್ಯದರ್ಶಿಯೋ ಆಗಿದ್ದ ಟಿ.ವೆಂಕಟೇಶ್ ಹುಟ್ಟು ಹಾಕಿದ ಈ ಸಂಸ್ಥೆಯ ಬಾಲ್ಯದ ದಿನಗಳವು. ಈಗಿನ ಬೃಹತ್ ಬಿಲ್ಡಿಂಗಿನ ಪಕ್ಕದ ಜೀರ್ಣಾವಸ್ಥೆಯಲ್ಲಿದ್ದ ಬಿಲ್ಡಿಂಗಿನಲ್ಲಿ ಆಫೀಸಿತ್ತು.
ರವಿ ಬಂದವರೇ ನನ್ನ ಮುಂದೆ ಕುಳಿತು ಬಿಟ್ಟರು. ಸೋತ ಮುಖ. ಸೋತ ಧ್ವನಿ, ಸೋತ ಬದುಕು ಅವರನ್ನು ಹೈರಾಣು ಮಾಡಿತ್ತು. ಕಣ್ಣಗುಡ್ಡೆ ಹೊರಬಂದಂತಿತ್ತು! ರಮ್ಮಿನ ಘಾಟು ವಾಸನೆ. ನಾನು ಕೇಳಿದೆ : ‘ಯಾಕೆ ರವೀ ಹೀಗಿದ್ದೀರಿ? ಏನು ಸಮಸ್ಯೆ?’
ರವಿ ಎಲ್ಲವನ್ನೂ ಹೇಳಿಕೊಂಡರು. ಮತ್ತೆ ಮುಖ ಸಪ್ಪಗೆ ಮಾಡಿಕೊಂಡು ವಿನಂತಿಸಿಕೊಂಡರು : ‘ಗಣೇಶ್, ನಿಮ್ಮಲ್ಲೇನಾದ್ರೂ ಕೆಲ್ಸಾ ಖಾಲಿ ಇದೆಯಾ?’
ನನ್ನ ಎದೆ ಹೊಡೆದುಕೊಂಡಿತು. ರವಿಯಿಂದ ನಾನು ಇಂಥಾದ್ದೊಂದು ಪ್ರಶ್ನೆಯನ್ನು ನಿರೀಕ್ಷಿಸಿರಲಿಲ್ಲ. ನಾನು ಒಂದು ಕ್ಷಣ ಗಾಬರಿ ಬಿದ್ದೆ. ದೊಡ್ಡ ಹೆಸರಿನ ಕಥೆಗಾರನೊಬ್ಬ ಹೀಗೆ ಹತಾಶನಾಗಿ ಬಂದು ನೌಕರಿಗಾಗಿ ಬೇಡಿಕೆಯಿಡುವುದಿದೆಯಲ್ಲಾ, ಅದೊಂದು ದೊಡ್ಡ ನೋವಿನ ಸಂಗತಿ. ಆದರೂ ಪ್ರಯತ್ನಿಸಿಯೇ ಬಿಡೋಣ ಅಂತ ಟಿ.ವೆಂಕಟೇಶ್ ಚೇಂಬರ್’ಗೆ ಹೋದೆ. ವಿಷಯ ತಿಳಿಸಿದೆ. ಅವರ ಮುಖ ಕಪ್ಪಿಟ್ಟಿತು. ಬೇರೇನನ್ನೂ ಹೇಳಲಿಲ್ಲ : ‘ಸದ್ಯಕ್ಕೆ ಅವರ ವಿಳಾಸ ಪಡೆದು ವಾಪಸ್ಸು ಕಳಿಸಿಬಿಡಿ’ ಅಂದರು ವೆಂಕಟೇಶ್. ನನಗೆ ನಿರಾಸೆಯಾಯಿತು.

ಇದನ್ನು ರವಿಬೆಳಗರೆಗೆ ಹೇಗೆ ಹೇಳುವುದೆಂದೇ ತಿಳಿಯದೇ ಕಂಗಾಲಾದೆ. ಆದರೆ ಅನಿವಾರ್ಯ, ಹೇಳಲೇ ಬೇಕಿತ್ತು : ‘ಅಡ್ರೆಸ್ ಕೊಟ್ಟು ಹೋಗಿ, ಮುಂದೆ ನೋಡೋಣ ಅಂದ್ರು ವೆಂಕಟೇಶ್’ ಎಂದೆನ್ನುತ್ತಿರುವಂತೆಯೇ ರವಿಯ ಮುಖ ವಿವರ್ಣವಾಯಿತು. ಅಡ್ರೆಸ್ ಕೊಟ್ಟು ನಿರಾಸೆಯಿಂದಲೇ ಹೊರಟು ಹೋದರು ರವಿ. ಅವರ ದುರಾದೃಷ್ಟವೆಂದರೆ ಅಷ್ಟು ಹೊತ್ತಿಗಾಗಲೇ ಗಣೇಶ ನಾಯಕ್ ಬಂದು ಕೆಲಸಕ್ಕೆ ಸೇರಿಕೊಂಡಿದ್ದರು.
ರವಿಬೆಳಗೆರೆ ಹಿಂದಿರುಗಿದ ಐದಾರು ತಿಂಗಳಲ್ಲೇ ಮತ್ತದೇ ಗಣೇಶ ನಾಯಕ್ ನಾಪತ್ತೆಯಾದರು! ಈಸಾರಿ ಹೋದವರು ಬರಲೇ ಇಲ್ಲ. ಕೆಲಸದ ಒತ್ತಡ ಹೆಚ್ಚಾಯಿತು. ನನ್ನ ರೇಗಾಟವೂ ಜಾಸ್ತಿಯಾಯಿತು. ಅನ್ಯಥಾ ಶರಣಂ ನಾಸ್ತಿ ಎನ್ನುವಂತೆ ಬೇರೆ ದಾರಿಯಿಲ್ಲದೇ ವೆಂಕಟೇಶ್ ಬಳಿ ಹೋಗಿ ‘ಯಾರನ್ನಾದ್ರೂ ಕರೆಸಿ, ನಾನು ಸುಸ್ತು ಹೊಡೆದು ಹೋದೆ…’ ಅಂದೆ.
ನನ್ನ ದಯನೀಯ ಸ್ಥಿತಿ ಕಂಡು ವೆಂಕಟೇಶ್ ಮನಸ್ಸು ಕರಗಿತೇನೋ. ಅವರಂದರು : ‘ಆದಿನ ರವಿಬೆಳಗೆರೆ ಅಂತ ಬಂದಿದ್ರಲ್ಲಾ? ಅವ್ರನ್ನು ತಕ್ಷಣ ಕರೆಸಿ. ಈಗ್ಲೇ ಟೆಲಿಗ್ರಾಂ ಕೊಡಿ…’ ಅಂತ ಹೇಳಿ ತಮ್ಮ ಟೇಬಲ್ ಮೇಲಿದ್ದ ಟೆಲಿಗ್ರಾಂ ಫಾರಮ್ಮನ್ನು ನನ್ನೆಡೆ ಎಸೆದು ಬಿಟ್ಟರು! ಆನಂದ ತುಂದಿಲನಾದ ನಾನು ಅಲ್ಲೇ, ಅದೇ ಟೇಬಲ್ ಮೇಲೆಯೇ ಟೆಲಿಗ್ರಾಂ ಬರೆದೆ :
‘RAVI, START IMMEDIATELY’
ಟೆಲಿಗ್ರಾಂ ತಲುಪಿದ ಮಾರನೇ ದಿನವೇ ರವಿ ಹಾಜರ್! ಬೆಂಗಳೂರೆಂಬ ದೈತ್ಯ ಊರಿಗೆ ರವಿಬೆಳೆಗರೆ ಎಂಬ ದೈತ್ಯ ಬರಹಗಾರನ ಎಂಟ್ರಿಯಾದದ್ದು ಹಾಗೆ!
– ಈ ವಿವರಗಳನ್ನು ಸಾಕ್ಷಾತ್ ರವಿಬೆಳಗೆರೆಯವರೇ ಹೇಳುತ್ತಾರೆ, ಕೇಳಿ :
- ಗಣೇಶ ಕಾಸರಗೋಡು – ಖ್ಯಾತ ಸಿನಿ ಬರಹಗಾರರು, ಪತ್ರಕರ್ತರು, ಹಳೆಯ ಸಿನಿಮಾದ ಕೊನೆಯ ಫ್ರೆಮ್ ‘ಶುಭಂ’ ಕೃತಿಯ ಲೇಖಕರು
