ಪುಸ್ತಕ ಓದುವ ಕಾಲವೊಂದಿತ್ತು. ಆದರೆ ಇಂದು ತಂತ್ರಜ್ಞಾನದ ಕಾಲ. ಈ ತಂತ್ರಜ್ಞಾನವೂ ಮನುಷ್ಯನ ಕ್ರಿಯಾಶೀಲತೆಯನ್ನು ನುಂಗಿ ಹಾಕುತ್ತಿದೆ. ಈ ವಿಚಾರದ ಕುರಿತು ಶಿಕ್ಷಕರಾದ ಬಿ.ಆರ್.ಯಶಸ್ವಿನಿ ಅವರು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
‘ಅಮ್ಮ ಪ್ರಬಂಧ ಬರೆಯಲು ಗುರುಗಳು ವಿಷಯ ನೀಡಿದ್ದಾರೆ, ಹೇಳಿಕೊಡು ಬಾ ಅಮ್ಮ’… ಎಂದು ಕರೆಯುತ್ತಿದ್ದರು ಮಕ್ಕಳು. ಪ್ರಬಂಧ, ಲೇಖನ ಬರೆಯಲು ಹೇಳಿಕೊಡುವುದಕ್ಕೆ ಅಮ್ಮ ಮನೆಯ ಮೂಲೆಯಲ್ಲಿ ಅವಿತುಕೊಂಡು ಧೂಳು ಹಿಡಿದ ಪುಸ್ತಕಗಳ ತಂದು ಮಕ್ಕಳೇ ನೀವೊಷ್ಟು ಓದಿ. ನಾನಷ್ಟು ಓದುತ್ತೇನೆ. ಬೇಕಾಗಿರುವ ವಿಷಯಗಳನ್ನು ಸಂಗ್ರಹಿಸಿ ಪ್ರಬಂಧ ರಚಿಸೋಣಾ ಎಂದಳು. ಅಮ್ಮನಿಗೆ ಹಿಂತಿರುಗಿಸಿ ಮಾತಾಡದೆ ತುಟಿಕ್, ಪಿಟಿಕ್ ಅನ್ನದೆ ಮಕ್ಕಳು ಓದತೊಡಗಿದರು. ಪುಸ್ತಕದೊಳಗೆ ಮುಳುಗಿ ಬೇಕಾಗಿದ್ದ ಮಕ್ಕಳು, ಮಾಹಿತಿಗಳ ಜೊತೆಗೆ ಮತ್ತೊಂದಷ್ಟು ಮಾಹಿತಿಗಳನ್ನು ತಿಳಿದುಕೊಂಡರು.
ಆಗೆಲ್ಲಾ ಶಾಲೆಗಳಲ್ಲಿ ಕ್ವಿಜ್ ಸ್ಪರ್ಧೆ ಏರ್ಪಡಿಸಿದಾಗ ಮಕ್ಕಳು ಉತ್ತರ ನೀಡಲು ತಡವರಿಸದೆ ಉತ್ತರ ನೀಡುತ್ತಿದ್ದರು. ನಿಂತ ಜಾಗದಲ್ಲೆ ಪ್ರಬಂಧ, ಲೇಖನಗಳು ಎಲ್ಲಾ ಬರೆಯುವಂತ ಜ್ಞಾನವನ್ನು ಮಕ್ಕಳು ಸಂಪಾದಿಸಿಕೊಂಡಿದ್ದರು.
ಈಗ ಹೇಗಾಗಿದೆ ಗೊತ್ತಾ. ಮೊಬೈಲ್ ಗಳು ಬಂದು ಧೂಳು ಹಿಡಿದ ಪುಸ್ತಕಗಳು ಕೊಳೆತು ಹೋಗುವಂತ ಸ್ಥಿತಿಗೆ ತಲುಪಿ ಬಿಟ್ಟಿವೆ. ಏಕೆಂದರೆ ಮಕ್ಕಳು ಏನಾದರೂ ಪ್ರಬಂಧ ,ಲೇಖನ ಬರೆಯಿರಿ ಎಂದರೆ ಗೂಗಲ್ ನಲ್ಲಿ ಸರ್ಚ್ ಮಾಡೋದು, ಒಂದು ಸೆಕೆಂಡ್ ಗೆ ಬೇಕಾಗಿರುವ ಮಾಹಿತಿ ಸಿಗುತ್ತೆ. ಅದನ್ನೆ ಕಾಪಿ ಮಾಡೋದು ಅಷ್ಟೇ ಕೆಲಸ. ಎಷ್ಟು ಸುಲಭವಾದ ಕೆಲಸ. ಅದಕ್ಕೆ ಏಕೆ ಮಾಹಿತಿಗಳನ್ನು ಸಂಗ್ರಹಿಸಲು ಪುಟಗಟ್ಟಲೆ ಪೇಜ್ ಗಳ ತಿರುಗಿಸೋದು. ಪುಟ ತಿರುಗಿಸುವುದರ ಜೊತೆಗೆ ಪ್ರತಿ ಸಾಲುಗಳನ್ನು ಚಾಚು ತಪ್ಪದೆ ಓದಬೇಕು. ಎಷ್ಟೊಂದು ಕಷ್ಟದ ಕೆಲಸ ಅಂತ ಸೋಮಾರಿಗಳನ್ನಾಗಿಸಿ ಬಿಟ್ಟಿದೆ ಈ ತಂತ್ರಜ್ಞಾನ.
ಮೊದಲೆಲ್ಲ ಪದಗಳ ಅರ್ಥ ತಿಳಿದುಕೊಳ್ಳಬೇಕು ಎಂದರೆ ಕನ್ನಡ, ಇಂಗ್ಲೀಷ್, ನಿಘಂಟು ಪುಸ್ತಕದ ಮೊರೆ ಹೋಗಿ ಒಂದು ಪದದ ಅರ್ಥ ಹುಡುಕಲು ಹೋಗಿ ಆ ಪದದ ಜೊತೆಗೆ ಆನೇಕ ಪದಗಳ ಅರ್ಥ ತಿಳಿದುಕೊಳ್ಳುತ್ತಿದ್ದೇವು. ಆದರೆ ಈಗ ಗೂಗಲ್ ನಲ್ಲಿ ಸರ್ಚ್ ಮಾಡಿದರು ಸಾಕು ಬರುತ್ತವೆ. ಅಲ್ಲವೇ?.
ಗೂಗಲ್ ಗೆ ಅಷ್ಟೇ ಸೀಮಿತವಾಗದ ತಂತ್ರಜ್ಞಾನ ಈಗ ಅದಕ್ಕಿಂತ ಮುಂದುವರೆದು ಚ್ಯಾಟ್ ಜಿಪಿಟಿಯನ್ನ ಸೃಷ್ಟಿಸಿದ್ದಾರೆ. ಇದರೊಳಗಂತು ಹೊಕ್ಕರೆ ಶುದ್ದ ಸೋಮಾರಿಗಳಾಗುವುದಂತು ಖಚಿತ.. ನಾವೇನು ಹೇಳುತ್ತೇವೊ ಅದನ್ನು ಚಿಟಿಕೆ ಹೊಡೆಯುವಷ್ಟರಲ್ಲಿ ತಯಾರಿಸಿ ಕೊಟ್ಟರೆ ಯಾರ ಕಷ್ಟ ಪಡುತ್ತಾರೇ ನೀವೇ ಹೇಳಿ.. ಚ್ಯಾಟ್ ಜಿಪಿಟಿ ಬದಲು ನಮ್ಮ ದೇಶದ ಬೆನ್ನೆಲುಬು ರೈತನಿಗೊಂದು ಇಂತಹ ತಂತ್ರಜ್ಞಾನದ ಆವಿಷ್ಕಾರ ಬೇಕಿತ್ತು.ದುಡಿಯುವ ಕೈ ಒಂದಾಗಿದೆ ತಿನ್ನುವ ಕೈ ಹತ್ತಾಗಿವೆ. ಕೆಲಸ ಮಾಡಲು ಕೆಲಸಗಾರರು ಸಿಗದೆ ಬೆಳೆ ಬೆಳೆಯುವುದಕ್ಕೂ ಪರದಾಡುತ್ತಿದ್ದಾರೆ ರೈತರು.. ನಿಜಕ್ಕೂ ಇಂತಹ ಕೆಲಸಗಳಿಗೆ ಬೇಕಿತ್ತು ತಂತ್ರಜ್ಞಾನದ ಅವಿಷ್ಕಾರ.
“ಚ್ಯಾಟ್ ಜಿಪಿಟಿ ಸಹಾಯಕರಾಗಿರಬೇಕೆ ಹೊರತು , ಆದೇ ಶಿಕ್ಷಕರಾಗಿರಬಾರದು. ಇಲ್ಲಿ ತಂತ್ರಜ್ಞಾನವನ್ನು ತೆಗಳುತ್ತಿರುವುದಲ್ಲ.. ಅಷ್ಟೊಂದು ಮುಂದುವರೆದ ಮಾನವನ ವಿಕಾಸತನಕ್ಕೆ ಗೌರವ ಸಲ್ಲಿಸಬೇಕು ನಿಜ. ನನ್ನ ಬರಹದ ಮೂಲ ಉದ್ದೇಶ. ಯಾವಾಗಲೂ ತಕ್ಕಡಿಯಲ್ಲಿ ತೂಕ ಸಮನಾಗಿದ್ದರೆ ಮಾತ್ರ ಅದಕ್ಕೊಂದು ಬೆಲೆ,ಗೌರವ ಎಲ್ಲವೂ ದೊರಕುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ಹೇಗಾಗಿದೆ ಎಂದರೆ. ತಕ್ಕಡಿಯಲ್ಲಿ ತೂಕ ತಂತ್ರಜ್ಞಾನದ ಕಡೆ ವಾಲಿದೆ ಹೊರತು ಸ್ವಂತ ಅರಿತುಕೊಂಡ ಜ್ಞಾನದ ಕಡೆಗೆ ಅಲ್ಲ.
ಇದನ್ನೆಲ್ಲಾ ನೋಡಿದಾಗ ನನಗೆ ಸಂತ ಶಿಶುನಾಳ ಶರೀಫರ
ಕೋಡಗನ ಕೋಳಿ ನುಂಗಿತ್ತಾ|
ನೋಡವ್ವ ತಂಗಿ ಕೋಡಗನ ಕೋಳಿ ನುಂಗಿತ್ತಾ..
ಆಡು ಆನೆಯ ನುಂಗಿ
ಗೋಡೆ ಸುಣ್ಣವ ನುಂಗಿ
ಆಡಲು ಬಂದ ಪಾತರದವಳ ಮದ್ದಳೆ ನುಂಗಿತ್ತಾ…
ನೋಡವ್ವಾ ತಂಗಿ ಕೋಡಗನ ಕೋಳಿ ನುಂಗಿತ್ತಾ…
ಈ ಗೀತೆಯಲ್ಲಿ ಇರುವ ಪ್ರತಿ ಸಾಲುಗಳು ನಿಜವಾಗುವಂತಹ ಸಂದರ್ಭ ಬಹಳ ದೂರ ಇಲ್ಲ ಹತ್ತಿರದಲ್ಲೇ ಇದೆ ಅಂತ ಅನ್ನಿಸುತ್ತದೆ.
ತಂತ್ರಜ್ಞಾನ ಮಾನವನ ನುಂಗಿತ್ತಾ, ನೋಡಿ
ತಂತ್ರಜ್ಞಾನ ಮಾನವನ ನುಂಗಿತ್ತಾ… ಅನ್ನುವಂತೆ ಆಗುತ್ತದೆ ಅಲ್ಲವೇ?
ತಂತ್ರಜ್ಞಾನ ತಯಾರು ಮಾಡಿದ ವ್ಯಕ್ತಿ ಬುದ್ದಿವಂತನಾಗಿದ್ದಾನೆ. ಆದರೆ ಅವನ ಸುಳಿಯೊಳಗೆ ಸಿಲುಕಿಕೊಂಡು ಮೂರ್ಖರಾಗಿರುವರು ನೂರು ಜನ ಆಗಿರುತ್ತಾರೆಂದಷ್ಟೆ ನನ್ನ ಲೇಖನದ ಮೂಲ ಉದ್ದೇಶ. ಮಕ್ಕಳಿಗೆ ಸ್ವಲ್ಪವಾದರೂ ಪುಸ್ತಕದಲ್ಲಿ ಮಾಹಿತಿ ಕಲೆಹಾಕುವುದನ್ನು ರೂಢಿಸಿಕೊಳ್ಳುವಂತೆ ಫೋಷಕರು ಕಲಿಸಬೇಕೆಂದಷ್ಟೆ ನನ್ನ ಉದ್ದೇಶ.
- ಬಿ.ಆರ್.ಯಶಸ್ವಿನಿ
