ರಾಗಿ ರೊಟ್ಟಿ ಹೊಟ್ಟೆ ತುಂಬಿಸುತ್ತದೆ. ಹುಳಿ ಮಜ್ಜಿಗೆ ದೇಹಕ್ಕೆ ತಂಪು ಕೊಡುತ್ತದೆ. ಉತ್ತಮ ಆಹಾರ ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ಇವುಗಳ ಜೊತೆ ಕೆಂಪುಮೆಣಸಿನ ಖಾರದ ಚಟ್ನಿ ಇದ್ರೆ ಬಾಯಿಗೆ ಸ್ವರ್ಗ ಅಲ್ಲವೇ? …ಇದನ್ನು ಮಾಡುವುದು ಹೇಗೆ ಅನ್ನೋದು ಹೋಟೆಲ್ ಉದ್ಯಮಿ ಅರುಣ್ ಪ್ರಸಾದ್ ಅವರು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಸಂಪ್ರದಾಯಿಕ ರಾಗಿ ರೊಟ್ಟಿ, ಬುತ್ತಿ ಎಂಬ ಆ ಕಾಲದ ಪ್ರಯಾಣಿಕರ ಆಹಾರ. ಕೆಂಪುಮೆಣಸಿನ ಖಾರದ ಚಟ್ನಿ ರೆಸಿಪಿ. ರಾಗಿರೊಟ್ಟಿ ಜೊತೆ ಬೆಣ್ಣೆ ನೀರುಳ್ಳಿ ಹಸಿಮೆಣಸು ಮಜ್ಜಿಗೆ ಒಂದು ಕಾಲದಲ್ಲಿ ದೀರ್ಘ ಪ್ರಯಾಣದಲ್ಲಿ ಬಳಸುವ ಆಹಾರ ಆಗಿತ್ತು.

ರಾಗಿರೊಟ್ಟಿ ಮುರಿದು ಕೆಂಪು ಮೆಣಸಿನ ಖಾರದ ಚಟ್ನಿಗೆ ಅದ್ದಿ ಅದನ್ನು ಬೆಣ್ಣೆ ಜೊತೆ ಸೇರಿಸಿ ಬಾಯಲ್ಲಿ ಹಾಕಿ, ಒಂದೆರೆಡು ಸಾರಿ ಮೆತ್ತಗೆ ನಾಲಿಗೆಯಲ್ಲಿ ತಿರುವಿ, ಆ ಕ್ಷಣದಲ್ಲಿ ಮನಸ್ಸು- ಕಣ್ಣು- ಮೂಗು- ನಾಲಿಗೆ ನಿರ್ಧರಿಸುವ ಪ್ರಮಾಣದಲ್ಲಿ ಈರುಳ್ಳಿ ಕಚಕ್ ಅಂತ ಕಚ್ಚಿಕೊಂಡು ಇವೆಲ್ಲದರ ಮಿಶ್ರಣ ಮಾಡುವ ನಾಲಿಗೆಗೆ ಚುರುಕು ಮುಟ್ಟಿಸಲು ಹಸಿ ಮೆಣಸು ಕಟಕ್ ಅಂತ ಹಲ್ಲಿನಿಂದ ಕತ್ತರಿಸಿ ಸ್ವಾದಿಸುವ ಸ್ವಾದಕ್ಕೆ ಸರಿಸಾಟಿಯೇ ಇಲ್ಲ ಅನ್ನಿಸದಿರಲಾರದು. ಇದು ಆ ಕಾಲದಲ್ಲಿ ಹೆಚ್ಚು ಕಾಲ ಪ್ರಯಾಣ ಮಾಡುವಾಗ ಹಾಳಾಗದೇ ತಾಜಾ ಉಳಿಯುವ ಆಹಾರದ ಬುತ್ತಿ ಆಗಿದೆ.
ಕೆಂಪು ಕಾರದ ಕೆಂಪು ಚಟ್ನಿ ರೆಸಿಪಿ
ಈ ಚಟ್ನಿಗೆ ಮಿಕ್ಸಿ ಮಾಡುವಾಗ ನೀರು ತಾಗಿಸದಂತೆ ನಾಜೂಕಾಗಿ ಕೆಂಪು ಮೆಣಸಿನಕಾಯಿ, ಬೆಳ್ಳುಳ್ಳಿ, ಜೀರಿಗೆ, ಮೆಂತ್ಯೆ, ಹುಣುಸೆ ಹಣ್ಣು, ಬೆಲ್ಲ ಮತ್ತು ಉಪ್ಪು ಸೇರಿಸಿ ತಯಾರಿಸಿದರೆ ಕೆಲ ದಿನಗಳ ಕಾಲ ಯಾವುದೇ ಹವಮಾನದಲ್ಲೂ ತಾಜಾ ಆಗಿ ಉಳಿಯುವ ಕೆಂಪು ಮೆಣಸಿನ ಕಾಯಿ ಖಾರದ ಚಟ್ನಿ ತಯಾರಾಗುತ್ತದೆ.
ಬಯಲು ಸೀಮೆಯ ಜನ ಒಂದು ಕಾಲದಲ್ಲಿ ಊರಿಂದ ಊರಿಗೆ ಪ್ರಯಾಣಿಸುವಾಗ ಮಾರ್ಗ ಮಧ್ಯದಲ್ಲಿ ಹಸಿವು ತಣಿಸಲು ತೆಗೆದು ಕೊಂಡು ಹೋಗುತ್ತಿದ್ದ ಬುತ್ತಿ ಬುಟ್ಟಿಯ ಆಹಾರವಾಗಿದ್ದ ರಿಂದ ರೊಟ್ಟಿಗೆ ಈ ಚಟ್ನಿ ಬೇಕೆ ಬೇಕಾಗಿತ್ತು.
- ಅರುಣ್ ಪ್ರಸಾದ್ – ಹೋಟೆಲ್ ಉದ್ಯಮಿ, ಲೇಖಕರು.
