ದೆಹಲಿಯಲ್ಲಿ ನಾಳೆ ನಡೆಯುವ ಗಣರಾಜ್ಯೋತ್ಸವದ ರೋಚಕ ಹಂತ ಮತ್ತು ಬಹಳ ಬೇಗ ಮುಗಿದು ಬಿಡುವ ಭಾಗ, ವಾಯು ಪ್ರದರ್ಶನ. ಹಾಗಾಗಿ ಇದರ ಹಿನ್ನಲೆಯ ಒಂದಿಷ್ಟು ಮಾಹಿತಿ ಇಲ್ಲಿದೆ. ನಾಳೆ ಸಂಪೂರ್ಣ ಲೇಖನ ಮತ್ತು ಸುವರ್ಣ ನ್ಯೂಸ್ ವಾಹಿನಿಯಲ್ಲಿ ವಿವರಣೆ ಕೊಡುತ್ತೇನೆ. – ವಿಂಗ್ ಕಮಾಂಡರ್ ಸುದರ್ಶನ್ ತಪ್ಪದೆ ಮುಂದೆ ಓದಿ…
ಇನ್ನು ಸಮಾರಂಭದ ರೋಚಕ ಮುಕ್ತಾಯ ಹಂತವೆಂದರೆ ವಾಯು ಪ್ರದರ್ಶನ. ಈ ವರ್ಷದ ಜನವರಿ 26 ರಂದು ಗಣರಾಜ್ಯೋತ್ಸವದ ಸಂದರ್ಭದಲ್ಲಿ 51 ವಿಮಾನಗಳು ಭಾಗವಹಿಸಲಿವೆ. 29 ಯುದ್ಧ ವಿಮಾನಗಳು, 8 ಸಾರಿಗೆ ವಿಮಾನಗಳು, 13 ಹೆಲಿಕಾಪ್ಟರ್‌ಗಳು ಮತ್ತು ಒಂದು ಪಾರಂಪರಿಕ ವಿಮಾನ ಹೀಗೆ ಹಲವಾರು ವಿಮಾನಗಳು ದೆಹಲಿಯ ಆಗಸದಲ್ಲಿ ಹಾರಲಿವೆ. ರಫೇಲ್, ಸುಖೋಯ್-30, ಜಾಗ್ವಾರ್, ಸಿ-130 ಮತ್ತು ತೇಜಸ್ ಯುದ್ಧವಿಮಾನಗಳು ವೀಕ್ಷಕರನ್ನು ರೋಮಾಂಚನಗೊಳಿಸಲಿವೆ. ಈ ವಿಮಾನದ ಪೈಲಟ್ಟುಗಳಲ್ಲಿ ಹದಿನೈದು ಮಹಿಳಾ ಪೈಲಟ್ಟುಗಳಿದ್ದಾರೆ ಎನ್ನುವುದು ಈ ವರ್ಷದ ವಿಶೇಷತೆ. ಏರ್‌ಬಸ್ ಮತ್ತು ಟಾಟಾ ಸಮೂಹದ ಸಹಯೋಗದಲ್ಲಿ ನಿರ್ಮಿಸಲಾದ ಹೊಚ್ಚ ಹೊಸ C-295 ಸಾರಿಗೆ ವಿಮಾನವು ಪ್ರಪ್ರಥಮವಾಗಿ ಹಾರಲಿದೆ. ಈ ವೈಮಾನಿಕ ಪ್ರದರ್ಶನದಲ್ಲಿ ಒಂದು ಮಲ್ಟಿ ರೋಲ್ ಟ್ಯಾಂಕರ್ ಟ್ರಾನ್ಸ್‌ಪೋರ್ಟ್ (ಎಂಆರ್‌ಟಿಟಿ) ವಿಮಾನ ಮತ್ತು ಫ್ರಾನ್ಸ್‌ನ ಎರಡು ರಫೇಲ್ ವಿಮಾನಗಳು ಸಹ ಭಾಗವಹಿಸಲಿವೆ.

ಫೋಟೋ ಕೃಪೆ : google
ಎರಡನೇ ವಿಶ್ವ ಯುದ್ಧದಿಂದ ಹಿಡಿದು 1980 ರವರೆಗೆ ಭಾರತೀಯ ವಾಯುಸೇನೆಯಲ್ಲಿ 1947-48 ರ ಕಾಶ್ಮೀರ ಸಂಘರ್ಷದಲ್ಲಿ ಮತ್ತು 1971 ರ ಬಾಂಗ್ಲಾ ವಿಮೋಚನ ಯುದ್ಧದಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸಿದ DC-3, ಡಕೋಟ ಎನ್ನುವ ವಿಮಾನ ಈ ವರ್ಷದ ವಾಯುಪ್ರದರ್ಶನದಲ್ಲಿ ಭಾಗವಹಿಸಲಿದೆ. ಇಷ್ಟು ಹಳೆಯ ವಿಮಾನ ಹೇಗೆ ಅತ್ಯಾಧುನಿಕ ವಿಮಾನಗಳ ಜೊತೆ ಹಾರುತ್ತಿದೆ ಎನ್ನುವುದೇ ಒಂದು ರೋಚಕ ಕಥೆ.
ಮೋಹನ್ ಬಾರಿ ಎನ್ನುವ ಅಸ್ಸಾಮಿನ ವಾಯುನೆಲೆಯಲ್ಲಿ ಈ ಡಕೊಟಾ ವಿಮಾನದ ಘಟಕವಿತ್ತು. ಏರ್ ಕಮೋಡೋರ್ ಚಂದ್ರಶೇಖರ್ ಎನ್ನುವವರು ಆ ಘಟಕದ ಕಮಾಂಡಿಂಗ್ ಆಫೀಸರ್. ಅವರ ಮಗನಿಗೆ ವೈಮಾನಿಕ ವಿಷಯಗಳ ಬಗ್ಗೆ ಮತ್ತು ಈ ವಿಮಾನದ ಮೇಲೆ ಎಲ್ಲಿಲ್ಲದ ಆಕರ್ಷಣೆ. ಮುಂದೆ ಈ ಯುವಕ ಪೈಲಟ್ ಲೈಸನ್ಸ್ ಪಡೆದುಕೊಂಡರೂ ಅದನ್ನು ವೃತ್ತಿಯಾಗಿ ಮುಂದುವರೆಸಲಾಗಲಿಲ್ಲ, ಆದರೆ ಒಬ್ಬ ಯಶಸ್ವೀ ಉದ್ಯೋಗಪತಿಯಾದರು, ಮುಂದೆ ರಾಜಕೀಯಕ್ಕೂ ಪ್ರವೇಶಿಸಿದರು. ಅಷ್ಟೊತ್ತಿಗಾಗಲೇ ಈ ಡಕೊಟಾ ವಿಮಾನದ ಜೀವಾವಧಿ ಮುಗಿದು, ಕೆಲವು ಕಡೆ ಇದನ್ನು ಸ್ಮಾರಕವಾಗಿ ಸ್ಥಾಪಿಸಿದ್ದರೆ ಬಹುತೇಕ ದೇಶಗಳಲ್ಲಿ ಇದನ್ನು ಬಿಡಿಬಿಡಿಯಾಗಿಸಿ ಸ್ಕ್ರಾಪ್ ಆಗಿ ಮಾರಲಾಗಿತ್ತು. ಆದರೆ ಈ ಯುವಕನಿಗೆ ಹೇಗಾದರೂ ಮಾಡಿ ಈ ಗತಕಾಲದ ವಿಮಾನಕ್ಕೆ ಜೀವತುಂಬಿ ಮತ್ತೊಮ್ಮೆ ಹಾರಾಡಲು ಯೋಗ್ಯ ಮಾಡಿ ತಮ್ಮ ತಂದೆಯವರಿಗೆ ಬಳುವಳಿಯಾಗಿ ನೀಡಬೇಕು ಎನ್ನುವ ಮಹದಾಸೆ. ಇದರ ಬಿಡಿಭಾಗಗಳು, ಎಂಜಿನ್ನುಗಳು ಮತ್ತು ಬೇಕಾದ ಇತರೆ ಉಪಕರಣಗಳು ಎಲ್ಲಿ ಸಿಗಬಹುದು ಎಂದು ವಿಶ್ವದೆಲ್ಲೆಡೆ ಸುತ್ತಾಟ, ಅಲೆದಾಟ ಪ್ರಾರಂಭವಾಯಿತು. ಯಾರೂ ಇವರ ಈ ಹುಚ್ಚು ಆಸೆಯನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಅಂತೂ ಕೊನೆಗೆ ಇಂಗ್ಲೆಂಡಿನ ಕಾನ್ವೆಂಟರಿ ಎನ್ನುವ ವಾಯುನೆಲೆಯಲ್ಲಿ ಒಂದು ಮುರುಕು ಡಕೋಟಾ ವಿಮಾನ ಸಿಕ್ಕಿತು ಮತ್ತು ಅದನ್ನು ಹಾರಲು ಯೋಗ್ಯ ಮಾಡಿ, ಯುರೋಪಿನ ಅತಿ ಕಠಿಣ ವಾಯು ಯೋಗ್ಯತೆ ಪಡೆಯುವಂತೆ ಮಾಡುವ Reflight Airworks ಎನ್ನುವ ತಂಡವು ಇವರ ಕನಸಿಗೆ ಹೆಗಲಾಯಿತು.

ಲಕ್ಷಾಂತರ ರಿವೆಟ್ಟುಗಳನ್ನು ಹೊಡೆಯಲಾಯಿತು, ನೂರಾರು ಕಡೆ ವೆಲ್ಡಿಂಗ್ ಮಾಡಲಾಯಿತು, ಎಂಜಿನ್ನುಗಳು ಗುರ್ರು ಎನ್ನತೊಡಗಿದವು. ಹಲವಾರು ದಿನಗಳ ಪರಿಶ್ರಮದಿಂದ “ ಪರುಷುರಾಮ “ ಎನ್ನುವ ಹೆಸರಿನ ಈ ಮರುಸೃಷ್ಟಿತ ಡಕೋಟ ಬಾನಿಗೇರಿತು. ತಮ್ಮ ಮಗನ ಪರಿಶ್ರಮ ಸಾರ್ಥಕವಾದದ್ದನ್ನು ಕಂಡು ಏರ್ ಕಮೋಡೋರ್ ಚಂದ್ರಶೇಖರ್ ರವರು ಗದ್ಗದರಾದರು. ಮಗ ನೀಡುತ್ತಿರುವ ಈ ಬಳುವಳಿಯನ್ನು ಜಕ್ಕೂರಿನಲ್ಲಿರುವ ತಮ್ಮ ಸಂಸ್ಥೆಯಾದ Jupiter Aviation ನಲ್ಲಿ ಸೇರಿಸಿಕೊಳ್ಳದೆ ಈ ವಿಮಾನವನ್ನು ವಾಯುಸೇನೆಗೆ ಬಳುವಳಿಯಾಗಿ ನೀಡಲು ತೀರ್ಮಾನಿಸಿದರು. ವಾಯುಸೇನೆಯ ಪೈಲಟ್ಟುಗಳೂ ಸೇರಿದಂತೆ ಈ ಪರುಷುರಾಮನನ್ನು ಇಂಗ್ಲೆಂಡಿನಿಂದ ಭಾರತಕ್ಕೆ ಹಾರಿಸಿಕೊಂಡು ಬರುವ ತಂಡವೂ ತಯಾರಾಯಿತು, 15 April 2018 ಕ್ಕೆ ಗುಜರಾತಿನ ಜಾಮನಗರದ ವಾಯುನೆಲೆಗೆ ಬಂದು ಇಳಿದೇ ಬಿಟ್ಟಿತು. ಇದೇ VP -905 ವಿಮಾನ ಈ ವರ್ಷದ ಗಣತಂತ್ರ ಸಮಾರೋಹದ ವಾಯುಪ್ರದರ್ಶನದಲ್ಲಿ ಭಾಗವಹಿಸಲಿದೆ. ಚಿಕ್ಕಂದಿನಿಂದಲೇ ತಮ್ಮ ತಂದೆ ಹಾರಿಸುತ್ತಿದ್ದ ಡಕೋಟಾ ವಿಮಾನಗಳನ್ನು ಬೆರಗುಗಣ್ಣಿನಿಂದ ನೋಡುತ್ತಾ, ಮುಂದೊಂದು ದಿನ ಅಂತಹದ್ದೇ ವಿಮಾನವನ್ನು ವಾಯುಸೇನೆಗೆ ಬಳುವಳಿ ನೀಡಿದ ವ್ಯಕ್ತಿ ರಾಜ್ಯಸಭೆಯ ಸಾಂಸದ ಮತ್ತು ಕೇಂದ್ರೀಯ ಮಂತ್ರಿ ರಾಜೀವ್ ಚಂದ್ರಶೇಖರ್ !. ಅಂದ ಹಾಗೆ ವಿಮಾನದ ನಂಬರ್ VP -905 ಇದರ ಹಿನ್ನಲೆ ಏನು ಗೊತ್ತೇ? 26 ಅಕ್ಟೋಬರ್ 1947 ರಂದು ಇದೇ ನಂಬರಿನ ಡಕೋಟಾ ವಿಮಾನ ಸಿಖ್ ರೆಜಿಮೆಂಟಿನ ಸೈನಿಕರನ್ನು ಕಾಶ್ಮೀರದ ಶ್ರೀನಗರದ ವಾಯುನೆಲೆಯಲ್ಲಿ ಇಳಿಸಿ ಕಾಶ್ಮೀರವನ್ನು ಉಳಿಸಿಕೊಳ್ಳುವುದರಲ್ಲಿ ಮಹತ್ತರ ಪಾತ್ರ ವಹಿಸಿತ್ತು.
- ವಿಂಗ್ ಕಮಾಂಡರ್ ಸುದರ್ಶನ್
