2026 ಕ್ಕೆ ಚೀನಾದಲ್ಲಿ ರೋಬೋ ಒಂದು ತನ್ನ ಗರ್ಭದಲ್ಲಿ ಭ್ರೂಣವನ್ನು ಹೊತ್ತು ಮಗುವನ್ನು ಹೆರಲಿದೆಯಂತೆ. ಈ ವಿಷಯದಲ್ಲಿ ಕಾನೂನಿನ ಕೋನ ಪ್ರಸ್ತುತ ಏನಿದೆ ಎಂದು ವಕೀಲರಾದ ಅಂಜಲಿ ರಾಮಣ್ಣ ಅವರು ಹೇಳಿದ್ದೇನೆ.
ಇದರ ಕಾನೂನಿನ ಬಗ್ಗೆ ಸ್ಪಷ್ಟತೆ ಇಲ್ಲ. ಕೃತಕ ಮಗು ಪಡೆಯುವುದು ಈಗಿನ ಕಾನೂನು, ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿಯಲ್ಲಿ ಸುಲಭವಲ್ಲ. ಸದ್ಯಕ್ಕೆ ಲಭ್ಯವಿರುವ ಐವಿಎಫ್, ಬಾಡಿಗೆ ತಾಯ್ತನ ಎಲ್ಲವೂ ಕಾನೂನಿನ ವ್ಯಾಪ್ತಿಗೆ ಬರುತ್ತವೆ. ರೋಬೊದಿಂದ ಜನಿಸಲಿರುವ ಮಗುವಿಗೆ ಅಥವಾ ರೋಬೊ ಮೂಲಕ ಮಗು ಪಡೆಯುವ ವಿಧಾನಕ್ಕೆ ಇನ್ನೂ ಯಾವ ಕಾನೂನೂ ಬಂದಿಲ್ಲ.
ಇದಿನ್ನೂ ಪ್ರಯೋಗದ ಹಂತದಲ್ಲಿಇರುವುದರಿಂದ ಮುಂದಿನ ದಿನಗಳಲ್ಲಿಈ ಬಗ್ಗೆ ನಿಖರತೆ ಸಿಗಬಹುದು. ಆದರೆ ರೋಬೊವೊಂದಕ್ಕೆ ಜನಿಸುವ ಮಗುವಿನ ಜೈವಿಕ ತಂದೆ ತಾಯಿ ಯಾರು ಎನ್ನುವ ಪ್ರಶ್ನೆ ಇದ್ದೇ ಇರುತ್ತದೆ.
ಐವಿಎಫ್ ಮತ್ತು ಬಾಡಿಗೆ ತಾಯ್ತನದ ಕಾನೂನುಗಳಲ್ಲಿ ದಾನಿಗಳ ಬಗ್ಗೆ ತಿಳಿದು ಕೊಳ್ಳು ವ ಅಥವಾ ತಿಳಿದುಕೊಳ್ಳದೆ ಇರುವ ಅವಕಾಶ ಇದೆ. ಆದರೆ ರೋಬೋ ಮೂಲಕದ ಜನನದಲ್ಲಿ ಪರಸ್ಪರ ಒಪ್ಪಿಗೆ ಮೇರೆಗೆ ದಂಪತಿಯ ವೀರ್ಯ, ಅಂಡಾಣುಗಳ ಸಂಯೋಜನೆಯೇ, ಅಥವಾ ದಾನಿಗಳದ್ದೇ ಮತ್ತು ದಾನಿಗಳ ಪತ್ತೆ ಹಚ್ಚಲು ಅಧಿಕಾರ ಇದೆಯೇ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ.
ಜನಾಂಗಗಳ ಸ್ಪಷ್ಟತೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಇದು ಅಂತರಾಷ್ಟ್ರೀಯ ಕಾನೂನು ಕೂಡ ಅನ್ವಯವಾಗುವ ವಿಷಯ. ಉದಾಹರಣೆಗೆ ಆಫ್ರಿಕಾದ ಮಹಿಳೆಯೊಬ್ಬಳು ಭಾರತೀಯ ವಂಶವಾಹಿಯ ಮಗುವನ್ನು ಹೊತ್ತು ಹೆರಲು ಅವಕಾಶ ಪ್ರಸ್ತುತ ಇಲ್ಲ. ಆದರೆ ಇಲ್ಲಿ ರೋಬೊ ಯಾವ ಜನಾಂಗದ ಮಗುವಿಗೆ ತಾಯಿ ಆಗುತ್ತದೆ, ಮಗುವನ್ನು ನಂತರ ದತ್ತು ಸ್ವೀಕರಿಸಬೇಕೇ? ಅಕಸ್ಮಾತಾಗಿ ಆ ಮಗುವನ್ನು ಜೈವಿಕ ತಾಯ್ತಂದೆಯರು ತ್ಯಜಿಸಲು ಬಯಸಿದರೆ ಆ ಮಗುವಿನ ರಾಷ್ಟ್ರೀಯತೆ ಮತ್ತು ಇತರ ಹಕ್ಕುಗಳು ಏನು ಎನ್ನುವುದರ ಬಗ್ಗೆ ಸ್ಪಷ್ಟತೆ ಇಲ್ಲ.
ರೋಬೊ ಗರ್ಭದಿಂದ ಹೊರ ಬರುವ ಮಗುವಿಗೆ ಆಸ್ತಿ ಹಕ್ಕು, ಇನ್ನಿತರ ಸಂವಿಧಾನಿಕ ಹಕ್ಕುಗಳನ್ನು ಹೇಗೆ ಅನ್ವಯವಾಗುತ್ತದೆ? ಬಾಡಿಗೆ ತಾಯ್ತನದಲ್ಲಾದರೆ ತಾಯಿ ಮಗು ಹೆತ್ತ ನಂತರ ಅದರ ಜೈವಿಕ ಪೋಷಕರು ಮಗು ಪಡೆಯಲು ನಿರಾಕರಿಸಿದರೆ ಆ ಮಗುವನ್ನು ಅಡಾಪ್ಷನ್‌ಗೆ ನೀಡಲು ಅವಕಾಶ ಇದೆ. ಆದರೆ ರೋಬೊಗೆ ಜನಿಸಿದ ಮಗುವನ್ನು ಯಾರೂ ಸ್ವೀಕರಿಸದಿದ್ದರೆ ಮುಂದೇನು?
ಪೀಳಿಗೆಗಳೇ ರೋಬೋ ಜನನದಿಂದಾದರೆ ಪಿತ್ರಾರ್ಜಿತ ಹಕ್ಕುಗಳ ಸ್ಥಾನ ಮಾನವೇನು?ಸದ್ಯದ ಪರಿಸ್ಥಿತಿಯಲ್ಲಿ ಕಾನೂನಿನ ಸಂಕೀರ್ಣತೆ ಗಂಭೀರವಾಗಿದೆ.
- ಅಂಜಲಿ ರಾಮಣ್ಣ
