ಜೀವನದ ರೇಖೆ ಒಂದೇ ಸಮನೆ ಹೋಗುತ್ತಿದ್ದರೆ ಆ ಜೀವನ ಬಹು ಬೇಗ ಉತ್ಸಾಹ ಕಳೆದು ಕೊಳ್ಳುತ್ತದೆ. ಆ ರೇಖೆಗಳು ಬದಲಾಗಬೇಕು. ಮೇಲಕ್ಕೆ ಹೋಗಬೇಕು. ಆಗಲೇ ಜೀವನದ ಸುಖಗಳನ್ನು ಅನುಭವಿಸಲು ಸಾಧ್ಯ.
ಅದೇ ಯೋಚನೆಯಲ್ಲಿ ಮಧ್ಯಾಹ್ನ ಮಲಗಿದ್ದೆ. ನಾಲ್ಕು ಗಂಟೆ ಸುಮಾರು ನನ್ನ ಮಾಧ್ಯಮದ ಮಿತ್ರನೊಬ್ಬ ಕರೆ ಮಾಡಿದ. ನಿದ್ದೆಗಣ್ಣಿನಲ್ಲಿಯೇ ಕರೆಯನ್ನು ಸ್ವೀಕರಿಸಿದೆ. ಶುಭಾಶಯಗಳು ಮ್ಮಾ… ಯಾವಾಗ ಪಾರ್ಟಿ ಕೊಡ್ತೀಯಾ ಅಂದ. ನಿದ್ದೆ ಮಾಡುವಳನ್ನು ಎಬ್ಬಿಸಿದ್ದಲ್ಲದೆ, ಪಾರ್ಟಿ ಬೇರೆ ಕೇಳ್ತಿದ್ದಾನೆ ಎನ್ನೋ ಸಿಟ್ಟಿಗೆ ‘ಏನೋ ನಿಂದು ಗೋಳು. ಮೊದ್ಲು ಏನ್ ವಿಷಯ ಅಂತ ನೇರವಾಗಿ ಹೇಳು. ಆ ಮೇಲೆ ಪಾರ್ಟಿ ವಿಚಾರ ಮಾತಾಡೋಣ’ ಎಂದು ಏರು ಧ್ವನಿಯಲ್ಲಿ ಮಾತನಾಡಿದೆ. ಎಷ್ಟಾದರೂ ಅವನು ನನ್ನ ಒಳ್ಳೆಯ ಸ್ನೇಹಿತ. ನನ್ನ ಸ್ವಭಾವವನ್ನು ಮೊದಲಿನಿಂದಲೂ ಅರಿತಿದ್ದರಿಂದ ನನ್ನ ಮಾತನ್ನು ಗಂಭೀರವಾಗಿ ತಗೆದುಕೊಳ್ಳಲಿಲ್ಲ. ‘ನೋಡು.. ಎಷ್ಟೋ ವರ್ಷದಿಂದ ಅಪ್ಪನಿಗೆ ರಾಜ್ಯೋತ್ಸವ ಪ್ರಶಸ್ತಿ ಬಂದಿಲ್ಲ ಅಂತ ಗೋಳಾಡ್ತಿದ್ದೆ. ಈ ವರ್ಷ ನಿನ್ನ ಆಸೆ ನೆರೆವೇರದೆ. ಆ ಮಾತನ್ನು ಕೇಳಿ ನಾನು ಹಾಸಿಗೆಯಿಂದ ಥಟ್ಟಂತ ಎದ್ದು ಕೂತೆ. ನಮ್ಮ ತಂದೆಗೆ ಪ್ರಶಸ್ತಿ ಸಿಕ್ಕಿರುವುದು ನಿಜಾನಾ? ರಂಗಭೂಮಿ ಸೇವೆಗಾ? ಅಥವಾ ಕಿರುತೆರೆ ಸಾಧನೆಗಾ? ಎಂದು ಕೇಳಿದೆ. ಕಾರಣ ನಮ್ಮ ತಂದೆ ಹೂಲಿಶೇಖರ ಎರಡು ಕ್ಷೇತ್ರದಲ್ಲಿ ಸಾಕಷ್ಟು ಸೇವೆಯನ್ನು ಸಲ್ಲಿಸಿದ ಬರಹಗಾರ. ಆ ಧೈರ್ಯದ ಮೇಲೆ ಅವನಿಗೆ ಕೇಳಿದೆ. ಅಯ್ಯೋ ಮಾರಾಯಿತಿ… ಟಿವಿಯಲ್ಲಿ ಬರ್ತಿದೆ ನೋಡು. ರಂಗಭೂಮಿ ಸೇವೆಗೆ ಆ ಪ್ರಶಸ್ತಿ ಬಂದಿದೆ ಎಂದು ಶುಭ ಹಾರೈಸಿ, ಫೋನ್ ಕೆಳಗೆ ಇಟ್ಟ.
ಪ್ರತಿ ವರ್ಷ ಅಕ್ಟೋಬರ್ ಕೊನೆಯಲ್ಲಿ ರಾಜ್ಯೋತ್ಸವ ಪ್ರಶಸ್ತಿಗೆ ಸಾಧಕರ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ಸಾಧಕರ ಪಟ್ಟಿ ಪ್ರಕಟವಾದ ದಿನ ನಾನು ಅಂದಿನ ದಿನಪತ್ರಿಕೆಯನ್ನು ಓದುತ್ತಲೇ ಇರಲಿಲ್ಲ. ನನ್ನ ಅಪ್ಪನ ಹೆಸರು ಆ ಪಟ್ಟಿಯಲ್ಲಿ ಇಲ್ಲದಿರುವಿಕೆಯ ನೋವು, ಬೇಸರ ಇರುತ್ತಿತ್ತು. ಆದರೆ ಈ ವರ್ಷ ಆ ಸಂತೋಷದ ದಿನ ಬಂದೆ ಬಿಟ್ಟಿತು. ಹಂಸಲೇಖ ಅವರು ನಮ್ಮ ಮನೆಗೆ ಕಾಲಿಟ್ಟ ಗಳಿಗೆಯೋ ಏನೋ ಆ ಸಿಹಿ ಸುದ್ದಿ ಬಂದೆ ಬಿಟ್ಟಿತು. ಈಗ ಹೂಲಿಶೇಖರ್ ಒಬ್ಬ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ. ಆಹಾ… ಈ ಒಳ್ಳೆಯ ಸುದ್ದಿಗಾಗಿ ಎಷ್ಟೋ ವರ್ಷದಿಂದ ಕಾಯುತ್ತಿದ್ದೆ. ಈಗ ಅಪ್ಪನಿಗೆ ನಾನೇ ಮೊದಲು ಅಭಿನಂದನೆ ಹೇಳಬೇಕು ಎಂದುಕೊಂಡು ಫೋನ್ ಮಾಡಿದೆ. ಅಷ್ಟೋತ್ತಿಗಾಗಲೇ ನನ್ನ ಫೋನು ಎಲ್ಲರಂತೆ ವೈಟಿಂಗ್ ಲಿಸ್ಟ್ ನಲ್ಲಿ ಕಾಯುತ್ತಿತ್ತು. ಆ ಸಂತೋಷ ತಡೆಯಲು ಆಗಲಿಲ್ಲ. ಬೇಗನೆ ಬ್ಯಾಗ್ ಹಾಕಿಕೊಂಡು, ನನ್ನ ಕಾರ್ ನಲ್ಲಿ ಅವರ ಮನೆಯತ್ತ ಹೊರಟೆ ಬಿಟ್ಟೆ. ಅಲ್ಲಿ ಹೋಗಿ ನೋಡಿದರೆ ಅಕ್ಕ-ಪಕ್ಕದವರೆಲ್ಲ ಶುಭ ಕೋರಲು ಮನೆಗೆ ಬರಲು ಶುರು ಮಾಡಿದ್ದರು. ಆದರೆ ಪ್ರಶಸ್ತಿ ಪಡೆದ ನಮ್ಮ ಅಪ್ಪ ಮಾತ್ರ ಬಿಡುವಿಲ್ಲದೆ ಫೋನ್ ನಲ್ಲಿ ಅಭಿನಂದನೆಯನ್ನು ಸ್ವೀಕರಿಸುತ್ತಲೇ ಇದ್ದರು. ಅಮ್ಮಾ ಹಾಗು ನನ್ನ ಅತ್ತಿಗೆ ಮನೆಗೆ ಬಂದವರಿಗೆ ಚಾಯ್ ಮಾಡಿ ಕೊಡುವುದರಲ್ಲಿ ಬ್ಯುಸಿ ಆಗಿಬಿಟ್ಟಿದ್ದರು. ಕೆಲವರಂತೂ ಅಪ್ಪನ ಫೋನ್ ಬ್ಯುಸಿ ಆಗಿರುವುದನ್ನು ನೋಡಿ, ನನ್ನ ಫೋನ್ ಗೂ ಕರೆ ಮಾಡಲು ಶುರು ಮಾಡಿದರು. ನಿಜ ಹೇಳಬೇಕೆಂದರೆ ಅಂದು ನಾನು ಸಾಧಕಳ ಸೀಟ್ ನಲ್ಲಿ ಕೂತ ಅನುಭವಾಯಿತು. ಮತ್ತೆ ಪೇಮೆಂಟ್ ಇಲ್ಲದೆ ಅಪ್ಪನ PA ಕೂಡ ಆದೆ. ಇರಲಿ, ನಾನು ಎಷ್ಟೋ ಸಾರಿ ಅಪ್ಪನಿಗೆ ವಿರೋಧ ಪಕ್ಷದವಳಾಗಿದ್ದೇನೆ, ವಿಮರ್ಶಿಕಿಯಾಗಿದ್ದೇನೆ, ಕಾರ್ ಡ್ರೈವರ್ ಆಗಿದ್ದೇನೆ. ಈಗ ಅಪ್ಪನಿಗಾಗಿ ಪೇಮೆಂಟ್ ಇಲ್ಲದೆ PA ಆಗಿದ್ದರಲ್ಲಿ ಸಂಕೋಚವೇನು ಇರಲಿಲ್ಲ.
ಪ್ರಶಸ್ತಿ ಬಂದಿದ್ದು, ಮನೆಯಲ್ಲಿ ಹಬ್ಬದ ವಾತಾವರಣವನ್ನೇ ಸೃಷ್ಟಿಸಿತು. ಈ ವರ್ಷ ದೀಪಾವಳಿಗೆ ಪಟಾಕಿಯನ್ನು ಹತ್ತಿಸದಿದ್ದರೂ, ಪ್ರಶಸ್ತಿಯು ಅಕ್ಕಪಕ್ಕದಲ್ಲೆಲ್ಲಾ ಸಿಕ್ಕಾಪಟ್ಟೆ ಸದ್ದು ಮಾಡಿತು. ಒಬ್ಬ ಸಾಧಕನಿಗೆ ಒಂದೇ ಪ್ರಶಸ್ತಿ ಎಷ್ಟು ಹುಮ್ಮಸ್ಸನ್ನು, ಪ್ರೋತ್ಸಾಹವನ್ನು ಕೊಡುತ್ತದೆ ಮತ್ತು ಆ ಪ್ರಶಸ್ತಿ ಬಂದಾಗ ಆ ಸಾಧಕನನ್ನು ಜನ ನೋಡುವ ದೃಷ್ಟಿಕೋನಗಳು ಹೇಗೆ ಬದಲಾಗುತ್ತದೆ ಅನ್ನುವುದನ್ನು ಅಂದು ಅಪ್ಪನಿಗೆ ರಾಜ್ಯೋತ್ಸವ ಪ್ರಶಸ್ತಿ ಬಂದಾಗ ನನಗೆ ಅರಿವಾಯಿತು. ಅಪ್ಪ ಏನಿಲ್ಲವೆಂದರೂ ೨೦೦ ಕಥೆಗಳು, ೫೦೦ ಬೀದಿನಾಟಕಗಳು, ೨೦ ಕಿರುತೆರೆ ಧಾರಾವಾಹಿಗಳು, ೧೫ ಕಾದಂಬರಿಗಳು, ಆಕಾಶವಾಣಿ ಕಥೆಗಳನ್ನು, ಧಾರಾವಾಹಿಗಳಿಗಾಗಿ ಒಂದು ಲಕ್ಷಕ್ಕೂ ಹೆಚ್ಚು ಪುಟಗಳಲ್ಲಿ ಚಿತ್ರಕಥೆ-ಸಂಭಾಷಣೆಯನ್ನು ಬರೆದಿದ್ದಾರೆ ಮತ್ತು ಹಲವಾರು ಪ್ರಶಸ್ತಿಗಳು ಬಂದಿವೆ. ಸಾಹಿತ್ಯ ಲೋಕವನ್ನು ಹೊರತು ಪಡಿಸಿ, ಹೂಲಿಶೇಖರ್ ಎಂದರೆ ಜನ ಸಾಮಾನ್ಯರಿಗೆ ಅಪರಿಚಿತ ವ್ಯಕ್ತಿ. ಬೆಂಗಳೂರಿನ ಹೆಮ್ಮಿಗೆಪುರ ನಿವಾಸಿಯಾಗಿ ಅಪ್ಪ ಇಪ್ಪತ್ತು ವರ್ಷಗಳೇ ಕಳಿದಿವೆ. ಆದರೆ ಅವರ ಸಾಧನೆ ನೆರೆಹೊರೆಯವರಿಗೆ ತಿಳಿದಿರಲಿಲ್ಲ. ಒಂದು ರೀತಿಯಲ್ಲಿ ಅಪ್ಪ ಎಲೆ ಮರೆಯ ಕಾಯಿಯಂತ್ತಿದ್ದರು. ಒಬ್ಬ ಸಾಧಕನ ಹಿರಿಮೆ ಪ್ರಶಸ್ತಿಯ ಮೂಲಕ ತಿಳಿಯಿತು ಎನ್ನುವುದೇ ಒಂದು ವಿಪರ್ಯಾಸ. ಇಂತಹ ಅಮೂಲ್ಯ ಪ್ರಶಸ್ತಿಗಳು ಸಾಧಕರ ಕೈ ಸೇರಬೇಕು.ಅಂದರೆ ಮಾತ್ರ, ಇನ್ನಷ್ಟು ಸಾಧಿಸಬೇಕೆನ್ನುವ ಛಲ ಸಾಧಕರಲ್ಲಿ ಮೂಡುತ್ತದೆ. ಆ ತೇಜಸ್ಸು ಅಂದು ಅಪ್ಪನಲ್ಲಿ ಕಾಣಿಸಿತು. ರಾಜ್ಯೋತ್ಸವ ಪ್ರಶಸ್ತಿ ಅಪ್ಪನಿಗೆ ಬಂದಿದ್ದೆ ತಡ, ಆಯಾ ಜಿಲ್ಲೆಯ ಸಚಿವರು, ಗಣ್ಯರಿಂದ ಹಿಡಿದು, ಕರ್ನಾಟಕದ ಮೂಲೆ ಮೂಲೆಯಿಂದಲೂ ಅಭಿನಂದನೆಗಳ ಸುರಿಮಳೆ ಹರಿದು ಬಂತು.
ಕೆಲವರು ಈ ಪ್ರಶಸ್ತಿಗೆ ನೀವು ಅರ್ಹರು ಎಂದರೆ, ಇನ್ನು ಕೆಲವರು ಯಾರ ಲಾಭಿಯಿಂದ ಬಂತು. ಮುಂದಿನ ವರ್ಷ ನಾನು ಪ್ರಯತ್ನಿಸುವೆ ಅನ್ನುವ ಕೆಲವು ಅವಿವೇಕಿ ಜನ ಅಪ್ಪನ ಸುತ್ತಲೂ ಇದ್ದಾರೆ. ಆರ್.ವಿ. ದೇಶಪಾಂಡೆ, ಎಂ.ಪಿ.ಪ್ರಕಾಶ, ಎಸ್.ಎಂ.ಕೃಷ್ಣ, ಕುಮಾರಸ್ವಾಮಿ ಹೀಗೆ ಹಲವಾರು ರಾಜಕೀಯ ಧುರೀಣರ ಜೊತೆ ಕೆಲಸ ಮಾಡಿರುವ ನಮ್ಮ ತಂದೆಗೆ ಲಾಭಿ ಮಾಡಿ ಪ್ರಶಸ್ತಿ ಪಡೆಯಲು ಇಷ್ಟು ವರ್ಷಗಳು ಕಾಯಬೇಕಿರಲಿಲ್ಲ ಎನ್ನುವುದು ಸತ್ಯ.
ಅಪ್ಪನ ಕಠಿಣ ಶ್ರಮ, ಪ್ರತಿಭೆಗೆ ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಸಂದಿದೆ.ಅದು ಕುಟುಂಬದವರಿಗೆಲ್ಲ ಸಂತೋಷ ತಂದಿದೆ. ಈ ಸಂತೋಷಕ್ಕೆ ಕಾರಣರಾದ ರಾಜ್ಯ ಸರ್ಕಾರಕ್ಕೆ ಹೃತ್ಪೂರ್ವಕ ಧನ್ಯವಾದಗಳು.ಹಾಗು ಶುಭ ಆರೈಸಿ, ಪ್ರೋತ್ಸಹಿಸುತ್ತಿರುವ ನಾಡಿನ ಎಲ್ಲ ಜನತೆಗೂ ಅಪ್ಪನ ಪರವಾಗಿ ನಾನು ಧನ್ಯವಾದವನ್ನು ಸಲ್ಲಿಸುತ್ತೇನೆ. ಮತ್ತು ಪ್ರತಿ ವರ್ಷವೂ ಯಾವ ಲಾಭಿಗೂ ಸೊಪ್ಪು ಹಾಕದೆ ಅರ್ಹ ಹಿರಿಯ ಸಾಧಕರಿಗೆ ಈ ಪ್ರಶಸ್ತಿ ಮುಡಿಗೇರಲಿ ಎನ್ನುವುದು ನನ್ನ ಆಶಯ.
ಲೇಖನ : ಶಾಲಿನಿ ಪ್ರದೀಪ್