ಭಾರತದಲ್ಲಿ ಅತಿ ಹೆಚ್ಚು ಚಿತ್ರಗೀತೆಗಳನ್ನು ಹಾಡಿರುವ ಗಾಯಕರು ಯಾರು? ಎನ್ನುವ ಚರ್ಚೆ 1960ರಿಂದಲೂ ಚಾಲ್ತಿಯಲ್ಲಿದೆ. 1971ರ ಜೂನ್ 11ರಂದು ಗಿನ್ನಸ್ ಬುಕ್ ಆಫ್ ವಲ್ಡ್ ರೆಕಾರ್ಡ ಲತಾ ಮಂಗೇಶ್ಕರ್ 25,000 ಸಾವಿರ ಚಿತ್ರಗೀತೆಗಳನ್ನು ಹಾಡಿದ್ದು ಮೊದಲ ಸ್ಥಾನದಲ್ಲಿದ್ದಾರೆ ಎಂದು ಪ್ರಕಟಿಸಿತು. ಆದರೆ ಅದನ್ನು ಮೊಹಮದ್ ರಫಿ ಪ್ರಶ್ನಿಸಿ ತಾವು ಮೂವತ್ತು ಸಾವಿರ ಚಿತ್ರಗೀತೆಗಳನ್ನು ಹಾಡಿರುವುದಾಗಿ ವಾದಿಸಿದರು. ಈ ವಾದ ವಿವಾದ ವಿಕೋಪಕ್ಕೆ ಹೋಗಿ ಗಿನ್ನಿಸ್ ತನ್ನ ದಾಖಲೆಯನ್ನು ಅಳಿಸಿತು. 1991ರ ಮಾರ್ಚಿ 12ರಂದು ಮತ್ತೊಮ್ಮೆ ಗಿನ್ನಿಸ್ ಆಶಾ ಭೋಂಸ್ಲೆ ಇಪ್ಪತ್ತು ಸಾವಿರ ಚಿತ್ರಗೀತೆಗಳನ್ನು ಹಾಡಿರುವುದು ದಾಖಲೆ ಎಂದು ಪ್ರಕಟಿಸಿತು. ಆದರೆ 22 ಭಾಷೆಗಳಲ್ಲಿ ಹಾಡಿರುವ ಯೇಸುದಾಸ್ ಹೆಚ್ಚು ಹಾಡಿದ್ದಾರೆ ಎಂಬ ವಾದ ಹುಟ್ಟಿಕೊಂಡು ಆ ದಾಖಲೆಯನ್ನೂ ಅಳಿಸಲಾಯಿತು.
ಡಿಜಿಟಲ್ ಯುಗ ಆರಂಭವಾದ ನಂತರ ಮೂವತ್ತು-ನಲವತ್ತು ಸಾವಿರಗಳ ಲೆಕ್ಕ ತಪ್ಪು ಎಂಬುದು ಅರ್ಥವಾಯಿತು. ಚಿತ್ರಗೀತೆಗಳ ನಿಖರವಾದ ಲೆಕ್ಕ ದೊರಕಲು ಆರಂಭವಾಯಿತು. ಕೊನೆಗೆ 2016ರಲ್ಲಿ ಅತಿ ಹೆಚ್ಚು ಚಿತ್ರಗೀತೆಗಳನ್ನು ಹಾಡಿದವರ ಸರಿಯಾದ ಲೆಕ್ಕ ಸಿಕ್ಕಿತು. ಆಗ ಬಂದ ಹೆಸರು ಅಚ್ಚರಿಯದಾಗಿತ್ತು. 17,695 ಚಿತ್ರಗೀತೆಗಳನ್ನು ಹಾಡಿದ ಪಿ.ಸುಶೀಲಾ ಭಾರತದಲ್ಲಿಯೇ ಅತಿ ಹೆಚ್ಚು ಚಿತ್ರಗೀತೆಗಳನ್ನು ಹಾಡಿದ್ದರು. ಆ ದಾಖಲೆ ಇಂದಿಗೂ ಪ್ರಶ್ನಾತೀತವಾಗಿಯೇ ಉಳಿದಿದೆ. ಸುಶೀಲಾ ಅವರು ಎಂದಿಗೂ ಹೀಗಿಯೇ ಐದು ರಾಷ್ಟ್ರಪ್ರಶಸ್ತಿ ಮತ್ತು 18 ರಾಜ್ಯ ಪ್ರಶಸ್ತಿಗಳನ್ನು ಪಡೆದರೂ ಎಂದಿಗೂ ಸುದ್ದಿಗೆ ಬಂದವರಲ್ಲ. ಅವರು ಸಂದರ್ಶನ ನೀಡಿದ್ದೂ ಅಪರೂಪ. ಹಾಡುವುದಷ್ಟೇ ನನ್ನ ಕೆಲಸ ಎಂದು ನಂಬಿದ ಗಾನ ತಪಸ್ಸು ಅವರದು.
ರಾಷ್ಟ್ರಪ್ರಶಸ್ತಿ ಪಡೆದ ಮೊದಲ ಗಾಯಕಿ ಅವರೂ ಎನ್ನುವದೂ ಕೂಡ ಸುದ್ದಿಯಾಗಲೇ ಇಲ್ಲ. ತನ್ನಷ್ಟಕ್ಕೇ ತಾನು ಹಾಡುತ್ತಾ ಬಂದ ಸುಶೀಲಮ್ಮ 1993ರಲ್ಲಿ ‘ಪುದಿಯ ಮಗನ್’ ಚಿತ್ರಕ್ಕೆ ಹಾಡಿದ ನಂತರ ನಿವೃತ್ತಿ ಘೋಷಿಸಿದರು. ನನಗೆ ಗೊತ್ತಿದ್ದ ಮಟ್ಟಿಗೆ ಚಿತ್ರರಂಗಕ್ಕೆ ನಿವೃತ್ತಿ ಘೋಷಿಸಿದ ಏಕೈಕ ಗಾಯಕರು. ಅವರು ನಂತರ ಸಂಶೋಧನೆಯಲ್ಲಿ ತೊಡಗಿಕೊಂಡರು. ಸಂಗೀತ ಮತ್ತು ಕಾಲದ ಕುರಿತ ಅವರ ಅಧ್ಯಯನ ಹಲವು ಮಹತ್ವದ ಸಂಗತಿಗಳನ್ನು ಬೆಳಕಿಗೆ ತಂದಿತು. ವೇದಕಾಲದ ಗಣಿತ ಮತ್ತು ಸಂಗೀತಕ್ಕೆ ಇರುವ ಸಂಬಂಧದ ಕುರಿತು ಯೋಚಿಸಿದ ಮೊದಲಿಗರು ಅವರು. 2008ರಲ್ಲಿ ಟ್ರಸ್ಟ್ ಸ್ಥಾಪಿಸಿ ಗುರುಕುಲದ ಮಾದರಿಯಲ್ಲಿ ಗಾಯಕರನ್ನು ರೂಪಿಸಲು ತೊಡಗಿದರು. ಅಗತ್ಯವಿರುವ ಗಾಯಕರಿಗೆ ಆರ್ಥಿಕ ಸಹಾಯ ನೀಡುವ ಯೋಜನೆ ರೂಪಿಸಿದರು. ಸದಾ ಸಾಧನೆಯಲ್ಲಿಯೇ ಇದ್ದರೂ ಸುದ್ದಿಯಿಂದ ದೂರವಿರುವ ಅಮ್ಮ ನನಗೆ ಸದಾ ಸ್ಪೂರ್ತಿ. ಅವರೊಂದಿಗೆ ಕಾಲ ಕಳೆಯುವುದು ಒಂದು ವಿಶಿಷ್ಟ ಅನುಭೂತಿ. ಅವರಿಗೆ ಇನ್ನೂ ಫಾಲ್ಕೆ ಬಂದಿಲ್ಲ ಎನ್ನುವ ಕೊರಗಂತೂ ಇದೆ. ಈ ಸುದ್ದಿ ಎತ್ತ ಬೇಡ ಎಂದು ಅವರ ಬಳಿ ಬೈಸಿಕೊಂಡಿದ್ದೂ ಇದೆ. ಇಷ್ಟೆಲ್ಲಾ ಬರೆಯಲು ಕಾರಣ ನವಂಬರ್ 13 ಅಮ್ಮನ 84ನೇ ಜನ್ಮದಿನ. ಶತ ಮಾನದ ಗಡಿ ಅಮ್ಮ ತಲುಪಲಿ, ಅದನ್ನು ಆಚರಿಸುವ ಸಂಭ್ರಮ ನಮ್ಮದಾಗಲಿ ಎಂಬ ಹಾರೈಕೆಯೊಂದಿಗೆ ಹುಟ್ಟು ಹಬ್ಬದ ಶುಭಾಶಯಗಳು ಅಮ್ಮ.
ಲೇಖನ : ಶ್ರೀಧರ ಮೂರ್ತಿ