ಸಾಯಂಕಾಲದ ಹೊತ್ತು ಅಪ್ಪ ಚಾಯ್ ಸ್ವಾದಿಸುತ್ತಿದ್ದರೆ, ನಾನು ಅಕ್ಕ-ಪಕ್ಕದ ಸುದ್ದಿಯ ಸ್ವಾದದಲ್ಲಿದ್ದೆ. ಆಗ ಅಚಾನಕ್ಕಾಗಿ ಅಪ್ಪನ ಮೊಬೈಲ್ ರಿಂಗ್ ಆಗತೊಡಗಿತು. ಅಪ್ಪ ಹಲೋ… ಹಲೋ… ಎಂದು ಮೂರ್ನಾಲ್ಕು ಬಾರಿ ಹೇಳಿದ ಮೇಲೆ ಆ ಕಡೆಯಿಂದ ಒಂದು ಹಲೋ ಎನ್ನುವ ಧ್ವನಿ ಬಂತು. ‘ಥತ್… ಫೋನ್ ನೆಟ್ ವರ್ಕ್ ಸರಿ ಇಲ್ಲವೇನೋ’ ಎಂದು ಕೊಂಡು ಅಪ್ಪ ನೆಟ್ ವರ್ಕ್ ಹುಡುಕಿಕೊಂಡು ಹೊರಗೆ ಹೋದರು. ನಾನು ಬಿಸಿ ಬಿಸಿ ಸುದ್ದಿಯಲ್ಲಿ ಮುಳುಗಿದ್ದೆ.
ಅರ್ಧಗಂಟೆ ಕಳೆದ ಬಳಿಕ ಅಪ್ಪ, ಎನ್ನನ್ನು ಮಾತನಾಡದೆ ಗಪ್-ಚುಪ್ ಆಗಿ ಸೋಫಾ ಮೇಲೆ ಬಂದು ಕೂತರು. ನಾನು ಅಕ್ಕ-ಪಕ್ಕದ ಸುದ್ದಿಯನ್ನೆಲ್ಲಾ ಬಿಟ್ಟು, ಮೊಬೈಲ್ ಕರೆಯತ್ತ ತಿರುಗಿದೆ. ಅಪ್ಪ… ಯಾರ ಫೋನ್? ಏನು ಅಷ್ಟೊಂದು ಯೋಚಿಸುತ್ತಿದ್ದೀರಿ? ಎಂದೆ. ಅಪ್ಪ ಬೇಸರದಲ್ಲಿ ‘ಯಾರೋ…ಸಿನಿಮಾದಲ್ಲಿ ಸಂಭಾಷಣೆ ಬರೆಯೋದಕ್ಕೆ ಹಳ್ಳಿ ಬಿಟ್ಟು ಬೆಂಗಳೂರಿಗೆ ಬಂದಿದ್ದನಂತೆ, ಎರಡು ಮೂರೂ ಸೀರಿಯಲ್ ಗೆ ಸಂಭಾಷಣೆಯನ್ನು ಬರೆದಿದ್ದಾನೆ ಅಂತೆ ಎಂದು ಅವನ ಕತೆಗೆ ಫುಲ್ ಸ್ಟಾಪ್ ಹಾಕದೆ ಒಂದೇ ಸಮನೆ ಹೇಳುತ್ತಿದ್ದರು. ನಾನು ಆತುರಗೇಡಿ ಆಂಜಯ್ಯನ ಥರ ಮಧ್ಯದಲ್ಲೇ ಬಾಯಿ ಹಾಕಿದೆ. ‘ಅದಕೇನಾಯಿತು? ಈಗ ಸಿನಿಮಾ ಡೈರೆಕ್ಟ್ ಮಾಡ್ತಾರಾ? ನಿಮಗೆ ಕಥೆ ಕೇಳುತ್ತಿದ್ದಾರಾ?’ ಎಂದಿದಷ್ಟೇ ನೋಡಿ.
ನಮ್ಮಪ್ಪನ ಕೋಪ ಎಲ್ಲಿತ್ತೋ ಕಾಣೆ. ಯಾವಾಗ್ಲೂ ನಿನಗೆ ತಮಾಷೆಯೇ ಎಂದು ಏರು ಧ್ವನಿಯಲ್ಲಿ ಕೂಗಾಡ ತೊಡಗಿದರು. ಅವರ ಧ್ವನಿ ನೋಡಿ ನಾನು ಗಾಬರಿಯಾಗಿ ಸುಮ್ಮನೆ ಕೂತೆ. ಸ್ವಲ್ಪ ಹೊತ್ತಿಗೆ ತಮ್ಮನ್ನು ತಾವೇ ಸುಧಾರಿಸಿಕೊಂಡು ‘ಪಾಪ… ಮಾತೋಡೊಕ್ಕೆ ೨೬ ವರ್ಷದ ಆಸುಪಾಸಿನ ಹುಡುಗ ಅಂತ ಕಾಣ್ಸುತ್ತೆ. ಸಿನಿಮಾ ಹುಚ್ಚಿಗೆ ಊರು ಬಿಟ್ಟು ಇಲ್ಲಿಗೆ ಬಂದಿದ್ದಾನೆ. ನಿರ್ಮಾಪಕರು, ನಿರ್ದೇಶಕರು ದುಡ್ಡು ಕೊಡದೆ ಪುಕ್ಷಟ್ಟೆ ಕೆಲಸ ಮಾಡಿಸ್ಕೊಂಡಿದ್ದಾರೆ. ಅವನು ಸಹ ಸಿನಿಮಾ ಜೋಶ್ ನಲ್ಲಿ ಸ್ವಲ್ಪ ದಿನ ಪುಕ್ಷಟ್ಟೆ ದುಡ್ಡಿದ್ದಿದ್ದಾನೆ. ಆದರೆ ಅವನ ಹೊಟ್ಟೆ ಈಗ ಕೇಳ್ಬೇಕಲ್ಲ. ಈಗ ಒಂದು ಹೊತ್ತಿನ ಊಟಕ್ಕೂ ಒದ್ದಾಡ್ತಿದ್ದಾನೆ ಎಂದಾಗ ಆತನ ಮೇಲೆ ಸಹಜವಾಗಿಯೇ ನನಗು ಕನಿಕರ ಹುಟ್ಟಿತು. ‘ಮುಂದೆ ಅವನ ಕತೆ ಏನು? ಅಂದೇ.
ತನ್ನ ರೂಮ್ ನ ಹತ್ತಿರದ ಅಂಗಡಿಯವನ ಪೆಟಿಎಂ ನಂಬರ್ ಕೊಟ್ಟಿದ್ದಾನೆ… ಅಲ್ಲಿಗೆ ದುಡ್ಡು ಕಳ್ಸೋಕೆ ಹೇಳಿದ್ದಾನೆ ಅಂದರು. ಈ ಬೆಂಗಳೂರಿನಲ್ಲಿ ದುಡ್ಡು ಕೇಳಿದ್ರೆ ಸಂಬಂಧಿಕರನ್ನೇ ದೂರ ಇಡುವ ಕಾಲವಿದು. ಅಂಥದರಲ್ಲಿ ಅಥಾ-ಪಥಾ ಇಲ್ಲದವನಿಗೆ ದುಡ್ಡುಕಳಸೋದು ಎಷ್ಟರ ಮಟ್ಟಿಗೆ ಸರಿ ಎನ್ನುವ ವಾದ ನನ್ನದಾಗಿತ್ತು. ಅದಕ್ಕೆ ಅಪ್ಪ ಉತ್ತರಿಸುವ ಗೋಜಿಗೆ ಹೋಗಲಿಲ್ಲ. ಸುಮ್ಮನೆ ಮೊಬೈಲ್ ತಗೆದುಕೊಂಡು ೧,೦೦೦ ರೂಪಾಯಿಯನ್ನು ಆ ವ್ಯಕ್ತಿ ಕೊಟ್ಟ ಪೆಟಿಎಂ ನಂಬರ್ ಗೆ ಕಳುಹಿಸಿಬಿಟ್ಟರು. ನನಗೆ ಪ್ರತಿವಾದಿಗಳಿಲ್ಲದಿದ್ದರಿಂದ ನನ್ನ ವಾದವು ಕೂಡ ಅಲ್ಲಿಗೆ ನಿಂತಿತು. ‘ನಿಜವಾಗ್ಲೂ ಅವನಿಗೆ ಕಷ್ಟ ಇದ್ರೆ ಆ ದುಡ್ಡು ಉಪಯೋಗ ಆಗುತ್ತೆ. ಇಲ್ಲದಿದ್ದರೆ ಆ ದುಡ್ಡನ್ನು ದೇವರ ಹುಂಡಿಗೆ ಹಾಕಿದ್ವಿ ಅಂತ ಮರೆತು ಬಿಡೋಣ’ ಎಂದರು ಅಪ್ಪ. ಅ
ಮತ್ತೆ ಅಪ್ಪನ ಮೊಬೈಲ್ ಗೆ ಕರೆ ಬಂತು. ‘ಸರ್… ನೀವು ಕಳಿಸಿದ ದುಡ್ಡು ತಲುಪಿದೆ. ದಿಕ್ಕು-ದೆಸೆ ಇಲ್ಲದವನಿಗೆ ದುಡ್ಡು ಕೊಟ್ಟು ತುಂಬಾನೇ ಉಪಕಾರ ಮಾಡಿದ್ರಿ. ಧನ್ಯವಾದಗಳು ಸರ್. ಸೀರಿಯಲ್, ಸಿನಿಮಾ ಯಾವುದು ನನಗೆ ಬೇಡ. ಊರ ಕಡೆಗೆ ಹೋಗ್ಬಿಡ್ತೀನಿ ಸರ್. ನಿಮ್ಮ ಸಹಾಯವನ್ನು ಎಂದು ಮರೆಯಲ್ಲ’ಎಂದು ಫೋನ್ ಇಟ್ಟ. ಸಿನಿಮಾ-ಸೀರಿಯಲ್ ಹುಚ್ಚಿನಲ್ಲಿ ಯುವಕರು ತಮ್ಮ ಬದುಕನ್ನು ಹಾಳು ಮಾಡಿಕೊಂಡಿದ್ದನ್ನು ಅಪ್ಪ ಕಣ್ಣಾರೆ ಕಂಡಿದ್ದರು.ಹಾಗಾಗಿ ಫೋನ್ ಕರೆ ಮಾಡಿದ ವ್ಯಕ್ತಿಯ ಪರಿಸ್ಥಿತಿಯನ್ನು ನೆನೆದು ಅಪ್ಪ ಕ್ಷಣ ಭಾವುಕರಾದರು. ಅವನಿಗೆ ಅಪ್ಪನ ಫೋನ್ ನಂಬರ್ ಎಲ್ಲಿ ಸಿಕ್ಕಿತು ಎನ್ನುವ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿಯಿತು. ಆದರೆ ಅವನು ಜೀವನದಲ್ಲಿ ದುಡ್ಡೇ ದೊಡ್ಡಪ್ಪ ಎನ್ನುವ ನೀತಿ ಪಾಠವನ್ನು ಕಲಿತನು ಎನ್ನುವುದು ಸತ್ಯ.
ಎಷ್ಟೋ ಜನ ಅಪ್ಪನ ಹತ್ತಿರ ಸಂಭಾಷಣೆ ಬರಿಯೋಕೆ ನಿಮ್ಮ ಸಹಾಯಕನಾಗಿ ಬರ್ತೀನಿ ಅಂತ ಮನೆಯ ಬಾಗಿಲವರೆಗೂ ಬಂದಿದ್ದಾರೆ. ಆಗ ಅಪ್ಪ ಅವರಿಗೆ ಹೇಳಿದ್ದು ಒಂದೇ ಮಾತು. ಈ ಬಣ್ಣದ ಲೋಕಕ್ಕೆ ಬರ್ತೀನಿ ಅಂದ್ರೆ ಕೈಯಲ್ಲಿ ಒಂದು ಕೆಲಸ ಇಟ್ಕೊಂಡು ಬನ್ರೀ. ಇಲ್ಲಿ ಅದೃಷ್ಟ ಇದ್ರೆ ಜಾಕ್ ಪಾಟ್. ಇಲ್ಲದಿದ್ರೆ ಲೂಸ್ ಯುವರ್ ಪಾಕೆಟ್ ಅನ್ನುತ್ತಿದ್ದರು. ಕನಸ್ಸೋತ್ತು ಮನೆಯ ಬಾಗಿಲಿಗೆ ಬಂದಿದ್ದ ಎಷ್ಟೋ ಯುವಕರಿಗೆ ಅಪ್ಪನ ಮಾತು ಕೇಳಿ ಅಪಶಕುನ ನುಡಿತಲ್ಲ ಈ ಮನುಷ್ಯ ಎಂದು ಮನಸ್ಸಿನಲ್ಲಿ ಬೈದ್ದುಕೊಂಡು ಬೇರೆಯವರ ಕಡೆ ಸಹಾಯಕರಾಗಿ ಕೆಲಸಕ್ಕೆ ಸೇರಿದ್ದು ಇದೆ. ಇನ್ನು ಕೆಲವರು ಅಪ್ಪನ ಮಾತಿಗೆ ಬೆಲೆಕೊಟ್ಟು ಊರು ಸೇರಿದ್ದು ಇದೆ.
ಇಲ್ಲಿ ನಮ್ಮ ತಂದೆಯ ಬಗ್ಗೆ ಹೇಳುವುದಕ್ಕಿಂತ ಬಣ್ಣದ ಲೋಕದ ವಾಸ್ತವ ವಿಚಾರದ ಬಗ್ಗೆ ಇಂದಿನ ಪೀಳಿಗೆಗೆ ಅರಿವು ಮೂಡಿಸುವುದು ಅನಿವಾರ್ಯ. ದೂರದಲ್ಲಿ ಕೂತು ನೋಡುವವರಿಗೆ ಬಣ್ಣದ ಲೋಕದ ಅಂದ-ಚಂದ ಮಾತ್ರ ಕಾಣುತ್ತದೆ. ಅದರ ಅಂದಕ್ಕೆ ಮರುಳಾಗಿ ಎಷ್ಟೋ ಜನ ಹಳ್ಳಿ ಬಿಟ್ಟು, ಮನೆ- ಮಠ ಬಿಟ್ಟು ಬಣ್ಣದ ಲೋಕವೇ ನನ್ನ ಪ್ರಪಂಚ ಎಂದು ಬರುತ್ತಾರೆ. ಹಾಗೆ ಬಂದವರೆಲ್ಲ ರಾಕಿಂಗ್ ಸ್ಟಾರ್ ಯಶ್ ಆಗುವುದಿಲ್ಲ ಅಥವಾ ರಾಧಿಕಾ ಪಂಡಿತ್ ಆಗುವುದಿಲ್ಲ. ಆದರೆ ಅವರಿಗೆ ಸತ್ಯದ ಅರಿವಾಗುವಷ್ಟರಲ್ಲಿ ಮುಂದಿನ ದಡವನ್ನು ಸೇರಲಾಗದೆ. ವಾಪಸ್ಸ ಹಿಂದಿನ ದಡಕ್ಕೂ ಹೋಗಲಾಗದೆ ನಡುನೀರಿನಲ್ಲಿ ನಿಂತು ಬಿಡುತ್ತಾರೆ. ಹೀಗೆ ಬಣ್ಣದ ಲೋಕವನ್ನು ನಂಬಿ ಬಂದ ಎಷ್ಟೋ ಕಲಾವಿದರು, ತಂತ್ರಜ್ಞರು, ನಿರ್ದೇಶಕರ ಬದುಕು ಅತಂತ್ರವಾಗಿದ್ದನ್ನು ನೋಡಿದ್ದೇವೆ, ಕೇಳಿದ್ದೇವೆ.
ಹಿಂದೆ ವರ್ಷಕ್ಕೆ ಎರಡು ಅಥವಾ ಮೂರೂ ಸಿನಿಮಾಗಳು ಬಿಡುಗಡೆಯಾಗುತ್ತಿದ್ದವು. ಬೆರಳೆಣಿಯಷ್ಟೇ ನಾಯಕರು-ನಾಯಕಿಯರು ಇರುತ್ತಿದ್ದರು. ಆ ಸಿನಿಮಾವನ್ನು ನೋಡಲು ಜನ ಕಾತುರದಿಂದ ಕಾಯುತ್ತಿದ್ದರು. ಆದರೆ ಇಂದಿನ ಪರಿಸ್ಥಿತಿ ಹಾಗಿಲ್ಲ. ಸೆನ್ಸಾರ್ ಮಂಡಳಿಗೆ ವರ್ಷಕ್ಕೆ ಕನಿಷ್ಠವೆಂದರೂ ೨೦೦ಕ್ಕೂ ಹೆಚ್ಚು ಸಿನಿಮಾಗಳು ಬರುತ್ತವೆ.ಅವುಗಳಲ್ಲಿ ಒಂದು ಅಥವಾ ಎರಡು ಸಿನಿಮಾಗಳು ಮಾತ್ರ ಗೆಲ್ಲುತ್ತವೆ. ಗೆಲ್ಲುವ ಆ ಒಂದು, ಎರಡು ಸಿನಿಮಾಗಳು ಸೂಪರ್ ಸ್ಟಾರ್ ಹಾಕಿಕೊಂಡು ಮಾಡಿದಂತಹ ಸಿನಿಮಾವಾಗಿರುತ್ತವೆ. ಇನ್ನುಳಿದ ಸಿನಿಮಾಗಳಲ್ಲಿ ಬಹುತೇಕವಾಗಿ ನಿರ್ಮಾಪಕರಿಂದ ಹಿಡಿದು ನಾಯಕ-ನಾಯಕಿಯವರೆಗೂ ಎಲ್ಲರೂ ಹೊಸಬರೇ ಆಗಿರುತ್ತಾರೆ. ಬಣ್ಣದ ಬದುಕು ತೆರೆಯ ಮೇಲೆ ಬಣ್ಣ ಬಣ್ಣವಾಗಿಯೇ ಕಾಣುತ್ತದೆ. ತೆರೆಯ ಹಿಂದೆ ಅದರ ನೈಜ್ಯ ಬಣ್ಣವೇ ಬೇರೆ. ಯಾರೋ ಕತೆ ಬರೆಯುತ್ತಾರೆ. ಯಾರೋ ಸಾಹಿತ್ಯ ಬರಿಯುತ್ತಾರೆ. ಯಾರೋ ಸಹನಿರ್ದೇಶನ ಮಾಡುತ್ತಾನೆ. ಅಸಲಿಗೆ ಶ್ರಮ ಹಾಕುವವರೇ ಬೇರೆ. ಕೊನೆಗೆ ಹೆಸರು ಮಾಡುವುದು ಪ್ರಧಾನ ನಿರ್ದೇಶಕ, ದುಡ್ಡು ಮಾಡುವುದು ನಿರ್ಮಾಪಕರು, ಕಲಾವಿದರು ಮಾತ್ರ. ಇಲ್ಲಿ ಗೆಲ್ಲುವರು ಯಾರೋ, ಸೋಲುವರು ಯಾರೋ ಗೊತ್ತಾಗುವುದೇ ಇಲ್ಲ.
ಬಣ್ಣದ ಲೋಕದಲ್ಲಿ ಕೆಲಸ ಮಾಡುವುದು, ಪ್ರೀತಿಸುವುದು ತಪ್ಪಲ್ಲ. ಆದರೆ ಅದೇ ನನ್ನ ಲೋಕವೆಂದು ಕೂತರೆ ಆಪತ್ತು ಕಟ್ಟಿಟ್ಟ ಬುತ್ತಿ. ಕೈಯಲ್ಲಿ ಒಂದು ಕೆಲಸ,ಬ್ಯಾಂಕ್ ಲ್ಲಿ ಒಂದಷ್ಟು ದುಡ್ಡು ಇದ್ದರೇ ಇಲ್ಲಿನೀವು ಸೇಫ್.ಇಲ್ಲದಿದ್ದರೆ ಸೋಲುಂಡವರಲ್ಲಿ ನೀವು ಒಬ್ಬರಾಗಿರುತ್ತೀರಿ. ಬಣ್ಣದ ಲೋಕಕ್ಕೆ ಹೆಜ್ಜೆ ಇಡುವಾಗ ಎಚ್ಚರವಿರಲಿ ಎನ್ನುತ್ತಾ ನಾನು ಕಂಡ ಕೆಲವು ಸತ್ಯವನ್ನು ಇಲ್ಲಿ ಲೇಖನದ ಮೂಲಕ ಬಿಚ್ಚಿಡುವ ಪ್ರಯತ್ನ ಮಾಡಿದ್ದೇನೆ.
ಲೇಖನ : ಶಾಲಿನಿ ಪ್ರದೀಪ್