ನಿರ್ದೇಶಕರಿಗೆ, ನಟರಿಗೆ ಸಿಗುವ ಪೂರ್ಣಪ್ರಮಾಣದ ಗೌರವ ಲೇಖಕರಿಗೂ ಸಿಗಲಿ

ಬೆಳಗಿನಜಾವಾ ೯ ಗಂಟೆ ಸುಮಾರು ಅಪ್ಪನ ಮೊಬೈಲ್ ಗೆ ಒಂದು ಕರೆ ಬಂತು. ಅಪ್ಪ ಸ್ನಾನಕ್ಕೆ ಹೋಗಿದ್ದರಿಂದ ಆ ಕರೆಯನ್ನು ಅವರು ಸ್ವೀಕರಿಸಲಿಲ್ಲ. ಅಪ್ಪನಿಗೆ ಸಿನಿಮಾದವರು, ಸಾಹಿತಿಗಳ ಒಡನಾಟ ಇರುವುದರಿಂದ ಅವರಿಗೆ ಗಣ್ಯವ್ಯಕ್ತಿಗಳ ಕರೆಗಳು ಬರುವುದು ಸಾಮಾನ್ಯ. ಅಂದು ಕೂಡ ಅವರ ಮೊಬೈಲ್ ಗೆ ಕರೆ ಬಂದುದ್ದು ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕನದ್ದು. ಅದನ್ನು ಎತ್ತುವ ದುಃಸಾಹಸಕ್ಕೆ ನಾನು ಹೋಗಲಾರದೆ ಮೊಬೈಲ್ ನ್ನು ನೋಡಿಯೂ ನೋಡದಂತೆ ಪಕ್ಕದಲ್ಲಿಯೇ ನಾನು ಕುಳಿತಿದ್ದೆ.

ಸ್ನಾನ ಮುಗಿಸಿಕೊಂಡು ಬಂದ ಅಪ್ಪ, ಯಾರದು ಫೋನ್? ಎನ್ನುವಷ್ಟರಲ್ಲಿ ಅಮ್ಮ ಅವರ ಕೈಯಲ್ಲಿ ಮೊಬೈಲ್ ಇಟ್ಟರು. ‘ಓಹ್…ಸರ್ ಫೋನ್’ ಎನ್ನುತ್ತಾ ಮೊಬೈಲ್ ಹಿಡಿದು ಮನೆಯ ಬಾಗಿಲ ಹೊರಗೆ ಹೋಗಿ ನಿಂತರು. ಅವರಿಬ್ಬರ ನಡುವೆ ಏನು ಸಂಭಾಷಣೆ ನಡೆಯುತ್ತಿತ್ತೋ ದೂರದಿಂದ ನೋಡುತ್ತಿದ್ದ ನನಗೆ ಅರ್ಥವಾಗಲಿಲ್ಲ. ಆದರೆ ಅವರು ನಗು ನಗುತ್ತ ಮಾತಾಡತ್ತಿದ್ದನ್ನು ನೋಡುತ್ತಿದ್ದಾಗ ಏನೋ ಸಿಹಿ ಸುದ್ದಿಯೇ ಇರಬೇಕೆಂದು ಊಹಿಸಿದೆ.

ಅಪ್ಪ ಫೋನ್ ಇಟ್ಟ ಮೇಲೆ ಅವರಲ್ಲಿ ಏನೋ ಒಂದು ಉತ್ಸಾಹ, ಕಣ್ಣಲ್ಲಿ ಏನೋವೊಂದು ಹೊಳಪು ಎದ್ದು ಕಾಣಿಸಿತು. ಅದಕ್ಕೆ ಕಾರಣ ಕಾದಂಬರಿಯನ್ನು ರಂಗರೂಪಕ್ಕೆ ತರುವ ಜವಾಬ್ದಾರಿಯನ್ನು ನಿರ್ದೇಶಕ, ಅಪ್ಪನಿಗೆ ನೀಡಿದ್ದು ತುಂಬಾ ಸಂತೋಷವಾಗಿತ್ತು. ಬಹುಶಃ ಅಪ್ಪ ಇವರಿಗೂ ಬರೆದ ನಾಟಕಗಳ ಸಂಖ್ಯೆ ಕನಿಷ್ಠವೆಂದರೂ ೭೦ ಇರಬಹುದು. ಈಗ ನೈಜ್ಯ ಕತೆ ಆಧಾರಿತ ಕಾದಂಬರಿಯನ್ನು ರಂಗರೂಪಕ್ಕೆ ತರುವುದು ಒಂದು ರೀತಿಯಲ್ಲಿ ಸಂತೋಷ ಎನ್ನುವುದಕ್ಕಿಂತ ಅದರಲ್ಲಿ ಬಹು ದೊಡ್ಡ ಸವಾಲು ಅಡುಗಿತ್ತು. ಆದರೆ ರಾಣಿ ಆದಿಲ್ ಶಾಯಿ, ನಾಲ್ವಡಿ ಕೃಷ್ಣರಾಜ ಒಡೆಯರ್, ಅಮಟೂರ್ ಬಾಳಪ್ಪ ಸೇರಿದಂತೆ ಸುಮಾರು ನೈಜ್ಯ ಕತೆಗಳನ್ನು ರಂಗರೂಪಕ್ಕೆ ಈಗಾಗಲೇ ತಂದಿದ್ದ ಅಪ್ಪನಿಗೆ, ಈ ಹೊಸ ನಾಟಕ ಬರೆಯುವುದು ಅಷ್ಟೇನು ಕಷ್ಟವೆನ್ನಿಸಲಿಲ್ಲ. ಈಗ ನಿರ್ದೇಶಕರು ನೀಡಿದ ನಿಗದಿತ ಸಮಯದೊಳಗೆ ನಾಟಕದ ರಚನೆ ಮಾಡಬೇಕು. ಅದನ್ನು ರಂಗರೂಪಕ್ಕೆ ತರುವ ಮೊದಲು ಕಾದಂಬರಿಯಲ್ಲಿನ ಸೂಕ್ಷ್ಮತೆಗಳನ್ನು ಟಿಪ್ಪಣಿ ಮಾಡಿಟ್ಟುಕೊಳ್ಳಬೇಕು. ಮತ್ತೆ ಯಾವ ದೃಶ್ಯವನ್ನು ಆಕರ್ಷಣೀಯ ಗೊಳಿಸಬೇಕು ಮತ್ತು ಯಾವುದನ್ನೂ ಇಲ್ಲ ಎನ್ನುವ ಬಗ್ಗೆ ಹತ್ತಾರು ಆಲೋಚನೆಗಳು ಹಗಲು ರಾತ್ರಿ ಅವರನ್ನು ಕಾಡತೊಡಗಿದವು.

ಹೀಗೆ ಆಲೋಚನೆ- ಸಮಾಲೋಚನೆಯಲ್ಲಿ ಶುರುವಾದ ನಾಟಕದ ರಚನೆ ಬರು ಬರುತ್ತಾ ಸಿನಿಮಾದ ಕೆಲಸದಂತೆ ಸಾಗ ತೊಡಗಿತು. ಬರೆದ ದೃಶ್ಯವನ್ನು ನಿರ್ದೇಶಕನ ಜೊತೆ ಚರ್ಚಿಸಬೇಕು. ಚರ್ಚೆಯಲ್ಲಿ ಕೆಲವಷ್ಟು ಬದಲಾವಣೆಗಳು ಆಗುತ್ತಿದ್ದವು ಆ ಸಂದರ್ಭದಲ್ಲಿ ಕೆಲವೊಮ್ಮೆ ಬರೆದದ್ದನ್ನು ಅಳಿಸಿ ಹೊಸದನ್ನು ಬರೆಯಬೇಕಿತ್ತು. ಆದರೆ ಅವುಗಳಿಗೆಲ್ಲಾ ಬೇಸರಿಸಿಕೊಳ್ಳದೆ ಅಪ್ಪ, ನಾಟಕದ ಮೂಲಕ ಕತೆಯ ಶ್ರೀಮಂತಿಕೆಯನ್ನುತೋರಿಸುವ ಉತ್ಸಾಹದಲ್ಲಿ ದೃಶ್ಯಗಳನ್ನು ಬರೆದು-ಬರೆದು ಹಾಕುತ್ತಿದ್ದರು. ಈ ನಾಟಕದ ರಚನೆ ಕನಿಷ್ಠವೆಂದರೂ ಮೂರೂ ತಿಂಗಳುಗಳ ಕಾಲ ನಡೆಯಿತು. ನಾಟಕ ಒಂದು ರೂಪ ತಾಳುತ್ತಿದೆ ಎನ್ನುವಾಗ ನಾಟಕಕ್ಕೆ ಕಲಾವಿದರ ಆಡಿಷನ್ ಕೂಡ ನಡೆಯಿತು.

ಹೀಗೆ ಇನ್ನೇನು ನಾಟಕ ಸಿಹಿ ದ್ರಾಕ್ಷಿಯಾಗಿ ಅದನ್ನು ಆಸ್ವಾದಿಸಬೇಕು ಎನ್ನುವಷ್ಟರಲ್ಲಿ ಎಲ್ಲೋ ಒಂದು ಕಡೆ ನಾಟಕ ಬರು ಬರುತ್ತಾ ಅಪ್ಪನಿಗೆ ಹುಳಿ ದ್ರಾಕ್ಷಿಯಾಗ ತೊಡಗಿತು. ಇದಕ್ಕೆ ಬಹಳಷ್ಟು ಕಾರಣಗಳಿದ್ದವು. ಈ ನಾಟಕಕ್ಕಾಗಿ ಅಪ್ಪ ೪೨ ದೃಶ್ಯಗಳನ್ನು ಬರೆದಿದ್ದರು. ಅಷ್ಟೆಲ್ಲ ಬರೆದ ಮೇಲೆ ಕೆಲವೆರಡು ದೃಶ್ಯಗಳ ಬದಲಾವಣೆ ಮಾಡಿ ಅಲ್ಲಿ ಇನ್ನೊಬ್ಬ ಲೇಖಕನ ಎಂಟ್ರಿ ಕೊಡಿಸಿದಷ್ಟೇ ಅಲ್ಲ, ಅಪ್ಪನ ಹೆಸರಿನ ಜೊತೆ ಆ ಲೇಖಕನ ಹೆಸರು ಸೇರಿಸಿದ್ದರು. ಎಲ್ಲೋ ತುಂಬಾ ಇಷ್ಟಪಟ್ಟು -ಕಷ್ಟಪಟ್ಟು ಬರೆದ ನಾಟಕದಲ್ಲಿ ಇನ್ನೊಬ್ಬರಿಗೆ ಪಾಲುಕೊಡಲು ಅಪ್ಪನ ಮನಸ್ಸು ಒಪ್ಪಲಿಲ್ಲ. ಅಷ್ಟೇ ಅಲ್ಲ ಆ ನಾಟಕದ ಮೊದಲ ಪ್ರದರ್ಶನಕ್ಕೆ ಅಪ್ಪನನ್ನೇ ಮರೆತದ್ದು ಇನ್ನೊಂದು ವಿಪರ್ಯಾಸ.

ಮೂಡಲಮನೆ, ಗಂಗಾ ಸೇರಿದಂತೆ ೨೦ ಕ್ಕೂ ಹೆಚ್ಚು ಧಾರಾವಾಹಿಗಳಿಗೆ ಕಥೆ-ಚಿತ್ರಕತೆ-ಸಂಭಾಷಣೆಯನ್ನು ಯಾವ ಸಹಾಯಕ ಬರಹಗಾರನಿಲ್ಲದೆ ೬೦೦ ಸಂಚಿಕೆಗಳನ್ನು ಒಬ್ಬರೇ ಬರೆಯುವ ಸಾಮರ್ಥ್ಯ ನನ್ನ ಅಪ್ಪನಲ್ಲಿ ಇತ್ತು ಎನ್ನುವುದಾದರೆ, ಒಂದು ನಾಟಕವನ್ನು ಅಷ್ಟೇ ಸುಲಭವಾಗಿ ಬರೆಯುವ ಸಾಮರ್ಥ್ಯ ಅವರಲ್ಲಿತ್ತು ಎನ್ನುವುದು ಸತ್ಯ. ಮೊದಲಿನಿಂದಲೂ ಅವರೊಬ್ಬ ಸ್ವತಂತ್ರ ಬರಹಗಾರ. ಹೀಗಿರುವಾಗ ಈ ನಾಟಕದಲ್ಲಿ ಎಲ್ಲಿ ಎಡವಟ್ಟಾಯಿತು ಎಂದು ಹುಡುಕುತ್ತ ಹೋದರೆ ಅಲ್ಲಿ ನಿರ್ದೇಶಕ ಅಪ್ಪನಿಗೆ ತಿಳಿಯಂತೆ ಇನ್ನೊಬ್ಬ ಲೇಖಕನ ಹೆಸರು ಸೇರಿಸಿದ್ದು ತಪ್ಪಾ? ಅಥವಾ ಅಪ್ಪ ಇದಕ್ಕೆ ಚಕಾರ ಎತ್ತದೆ ತೆಪ್ಪಗೆ ಕೂತಿದ್ದು ತಪ್ಪಾ?. ಹೌದು ತಪ್ಪಿರುವುದು ನನ್ನ ಅಪ್ಪನಲ್ಲಿ. ಈ ರೀತಿ ಎಡವಟ್ಟು ಮಾಡುವ ನಿರ್ದೇಶಕರು ಸಾಲು ಸಾಲಾಗಿ ಸಿಗುತ್ತಾರೆ. ಆದರೆ ಅವರು ಮಾಡಿದ ತಪ್ಪಿನಿಂದ ತಮಗೆ ನೋವಾಗಿದೆ ಎಂದು ಹೇಳದೆ ಸುಮ್ಮನೆ ಕೂರುವುದಿದೆಯಲ್ಲ ಅದು ಲೇಖಕನ ಬಹು ದೊಡ್ಡ ತಪ್ಪು.

(ತಮ್ಮ ನಾಟಕ ನೋಡಲು ಮನೆಯವರೊಂದಿಗೆ ರಂಗ ಶಂಕರದಲ್ಲಿ ಸರದಿ ಸಾಲಿನಲ್ಲಿ ನಿಂತಿರುವ ಹೂಲಿಶೇಖರ)

ಅಪ್ಪ ಮಾತನಾಡುವುದಿಲ್ಲ ಎನ್ನುವ ಕಾರಣಕ್ಕೆ ಹಲವಾರು ತಂಡಗಳು ಅವರ ಮೌನದ ಲಾಭ ಪಡೆದುಕೊಳ್ಳುತ್ತಿವೆ. ಅಪ್ಪನ ನಾಟಕಕ್ಕೆ ಗೌರವ ಧನ ಕೊಡುವುದಿರಲಿ ವೇದಿಕೆಯಲ್ಲಿ ನಾಟಕ ರಚನಾಕಾರ ನಮ್ಮ ಅಪ್ಪನ ಹೆಸರು ಹೇಳದೆ ಇರುವ ತಂಡಗಳು ಇವೆ. ಕೆಲವು ಬಾರಿ ತಮ್ಮ ನಾಟಕಕ್ಕೆ ತಾವೇ ಕ್ಯೂ ನಲ್ಲಿ ನಿಂತು ಟಿಕೆಟ್ ಪಡೆದು ನಾಟಕವನ್ನು ನೋಡಿ ಬಂದಿದ್ದಾರೆ. ಇನ್ನು ಕೆಲವೊಮ್ಮೆ ಅವರ ನಾಟಕಕ್ಕೆ ಹೋದಾಗ ಅವರೊಂದಿಗೆ ಮೊಮ್ಮಕ್ಕಳಿದ್ದ ಕಾರಣ ಅವರನ್ನು ಸಭಿಕರ ಖುರ್ಚಿಯಲ್ಲಿ ಕೂಡಲು ಬಿಡದೆ ತಮ್ಮ ನಾಟಕವನ್ನು ದೂರದಿಂದ ನೋಡಿ ಮನೆಗೆ ಬಂದದ್ದು ಇದೆ.

ಈ ರೀತಿಯ ಘಟನೆಗಳು ಸಾಕಷ್ಟು ಬಾರಿ ನಡೆದಿದೆ. ಆದರೆ ಅಪ್ಪ ಅವುಗಳನ್ನೆಲ್ಲ ಅವಮಾನ ಅಥವಾ ಮುಜುಗುರವೆಂದುಕೊಂಡಿಲ್ಲ. ಬದಲಾಗಿ ತಂಡಗಳು ತಾವು ಮಾಡಿದ ತಪ್ಪಿಗೆ ಮುಜುಗುರ ಪಟ್ಟುಕೊಂಡಿವೆ ಮತ್ತು ಕ್ಷಮೆ ಕೇಳಿವೆ. ಕೆಲವು ತಪ್ಪುಗಳು ಈಗಲೂ ಕೆಲವೆಡೆ ನಡೆಯುತ್ತಲೇ ಇವೆ.ಆದರೆ ಅಪ್ಪ ಮಾತ್ರ ಬದಲಾಗಿಲ್ಲ.ಈಗಲೂ ಅದೇ ಮೌನ. ಈಗಲೂ ತಮ್ಮ ನಾಟಕವನ್ನು ನೋಡಲು ಸರದಿ ಸಾಲಿನಲ್ಲಿ ನಿಲ್ಲುತ್ತಾರೆ. ಈಗಲೂ ಮನೆಯವರಿಗೆಲ್ಲ ತಮ್ಮ ಜೇಬಿನಿಂದ ಹಣ ತಗೆದು ಅವರ ನಾಟಕಕ್ಕೆ ಟಿಕೆಟ್ ಕೊಳ್ಳುತ್ತಾರೆ. ಯಾವುದೇ ತಂಡಗಳು ಅಪ್ಪನ ನಾಟಕವನ್ನಾಡಲಿ ಅಥವಾ ಪ್ರೀತಿಯಿಂದ ಯಾರೇ ಕಾರ್ಯಕ್ರಮಕ್ಕೆ ಕರೆಯಲಿ ನನಗೆ ಕಾರ್ ಕಳುಹಿಸಿ ಅಥವಾ ದುಡ್ಡು ಕೊಡಿ ಎಂದೂ ಕೇಳುವ ಮನುಷ್ಯನಲ್ಲ. ಬಸ್, ಮೆಟ್ರೋ ಟ್ರೈನ್ ಗಳಲ್ಲಿ ನೆತ್ತಾಡುತ್ತಾ ಒಂದು ಕೈಯಲ್ಲಿ ಶಾಲು,ಗಂಧದ ಹಾರದ ಬ್ಯಾಗ್ ಹಿಡಿದು ಸನ್ಮಾನ ಮಾಡಿಸಿಕೊಂಡು ಮನೆಗೆ ಬರುವ ನನ್ನ ಅಪ್ಪನದು ಸರಳ ವ್ಯಕ್ತಿತ್ವ.

ಅವರ ಸರಳತೆಯ ಬಗ್ಗೆ ನನಗೆ ಹಿರಿಮೆ ಇದೆ. ಆದರೆ ಎಲ್ಲೋ ಒಂದು ಕಡೆ ಭಯವು ಇದೆ. ಅವರ ಸರಳ ವ್ಯಕ್ತಿತ್ವ ಅವರ ನಡೆಗೆ ತೊಡಕಾಗಬಾರದು.ಅದು ಅವರಿಗೆ ಮುಳ್ಳಾಗದೇ ಹೂವಾಗಿರಲಿ. ಜೊತೆಗೆ ನಿರ್ದೇಶಕರಿಗೆ, ನಟರಿಗೆ ಸಿಗುವ ಪೂರ್ಣಪ್ರಮಾಣದ ಗೌರವ ಲೇಖಕನಿಗೂ ಸಿಗಲಿ ಎನ್ನುವುದು ನನ್ನಈ ಲೇಖನದ ಮುಖ್ಯಉದ್ದೇಶವು ಆಗಿದೆ.

ಲೇಖನ : ಶಾಲಿನಿ ಪ್ರದೀಪ್

ak.shalini@outlook.com

 

 

0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW