ಬಾಲ್ಯದಲ್ಲಿ ಅರಳಬೇಕಾದ ಪ್ರತಿಭೆಗೆ ನೀರೆರೆಯುವವರು ಇಲ್ಲದೆ ಕಮರಿದ ಕನಸಿಗೆ ಈಗ ಕಲೆಯ ರೆಕ್ಕೆಪುಕ್ಕಗಳು ಬಂದಿವೆ. ಮನದೊಳಗೆ ಮೂಡಿದ ಕಲ್ಪನೆಗಳಿಗೆ ಬಣ್ಣದ ರೂಪ ನೀಡುವಲ್ಲಿ ತೊಡಗಿದ್ದಾರೆ ಕಲಾವಿದೆ ವೀಣಾ ಗಂಗಾಧರಯ್ಯ.
ತಮ್ಮ ಕುಂಚದಲ್ಲಿ ಕಲಾರಸಿಕರನ್ನು ಸೆಳೆಯುವಂತಹ ಕಲೆಗಳನ್ನು ಮೂಡುತ್ತಿದ್ದು, ಅವರ ಚಿತ್ರ ಕಲೆ ಕಲಾವಿದರ ಮನಸ್ಸಿನ ಕೈಗನ್ನಡಿ ಎಂಬುದಕ್ಕೆ ಸಾಕ್ಷಿಯಾಗಿವೆ. ಕಲಿಕೆಯ ಹಂಬಲಕ್ಕೆ ಕುಂಚದ ಬೆಂಬಲ ಸಿಕ್ಕಿದೆ. ಹಾಗಾಗಿ ಕುಂಚದಿಂದ ಸೌಂದರ್ಯಕ್ಕೆ ಜೀವ ಕೊಡುವ ಪ್ರಯತ್ನ ಮಾಡುತ್ತಿದ್ದಾರೆ. ಪ್ರೋತ್ಸಾಹದ ಕೊರತೆಯ ನಡುವೆಯೂ ಸೃಜನಶೀಲ ಚಿತ್ರಕಲೆಗಳು ಮೂಡುತ್ತಿವೆ.
ಬಾಲ್ಯದಿಂದಲೂ ವಿದ್ಯಾಭ್ಯಾಸ ದ ಜತೆಗೆ ಚಿತ್ರಕಲೆ, ಸಂಗೀತದಲ್ಲಿ ಆಸಕ್ತಿ ಇತ್ತು. ಶಾಲಾ ದಿನದಲ್ಲಿ ಚಿತ್ರಕಲೆ ಬಿಡುಸುವ ಹವ್ಯಾಸ ಇತ್ತು. ಆದರೆ ಸರಿಯಾದ ಪ್ರೋತ್ಸಾಹ ಸಿಗದೆ ಮತ್ತು ಬಡತನದ ಕಾರಣ ಚಿತ್ರ ಕಲೆಯ ಪ್ರತಿಭೆ ತೆರೆಮರೆಗೆ ಸರಿಯಿತು. ಚಿತ್ರಕಲೆಗೆ ಬೇಕಾದ ಪರಿಕರಗಳನ್ನು ಖರೀದಿಸಲು ಹಣದ ಸಮಸ್ಯೆ ಇದ್ದ ಕಾರಣ ಹವ್ಯಾಸ ಮುಂದುವರಿಸಲು ಸಾಧ್ಯವಾಗಲಿಲ್ಲ.
ಕೆಲ ವರ್ಷದ ನಂತರ ಕೆಲಸಕ್ಕೆ ಹಂತ ಹಂತವಾಗಿ ಸಂಪಾದನೆ ತಕ್ಕಮಟ್ಟಿಗೆ ಓಕೆ ಎನ್ನುವಷ್ಟು ಬರುತ್ತಿದ್ದಂತೆ ತಮ್ಮ ಹವ್ಯಾಸ ಮತ್ತೆ ಮೊಳಕೆ ಹೊಡೆಯಲಾರಂಭಿಸಿತು. ಬರುವ ಸಂಬಳದಲ್ಲಿ ಇಂತಿಷ್ಟು ಉಳಿತಾಯ ಮಾಡುವ ಹಂತಕ್ಕೆ ಬಂದ ಬಳಿಕ ಚಿತ್ರಕಲೆಗೆ ಬೇಕಾದ ಪರಿಕರಗಳನ್ನು ಖರೀದಿಸಲು ಮುಂದಾದರು ಯಾರ ಸಹಾಯವಿಲ್ಲದೆ ತಮ್ಮ ಕನಸಿಗೆ ತಾವೇ ನೀರೆರೆಯಲು ಆರಂಭಿಸಿದರು. ಇದೀಗ ಪ್ರಕೃತಿ ಸೌಂದರ್ಯ, ಬುದ್ಧ, ಯೇಸು ಹೀಗೆ ಬಗೆಗೆಯ ಚಿತ್ರಗಳು ವೀಣಾ ಕುಂಚದಲ್ಲಿ ಮೂಡುತ್ತಿವೆ. ಕಲಾ ರಸಿಕರನ್ನು ಸೆಳೆಯುವ ಕಲೆಗಳನ್ನು ಕರಗತವಾಗಿವೆ. ಅವರ ಪ್ರತಿಯೊಂದು ಕಲಾಕೃತಿಗಳು ಮನಸೂರೆಗೊಳಿಸುತ್ತಿವೆ.
ಯೂಟ್ಯೂಬೇ ಶಿಕ್ಷಕ:
ವೀಣಾ ಅವರು ಚಿತ್ರಕಲೆ ಕಲಿಯಲು ಯಾವುದೇ ಚಿತ್ರಕಲಾ ಶಾಲೆಗೆ ಹೋಗಿಲ್ಲ ಅವರಿಗೆ ಯೂಟ್ಯೂಬೇ ಶಿಕ್ಷಕ. ಯೂಟ್ಯೂಬ್ ಅನ್ನು ವೀಕ್ಷಿಸುತ್ತಾ ತಮ್ಮ ಪ್ರತಿಭೆ ಅನ್ನು ಹೊರಜಗತ್ತಿಗೆ ತೋರಿಸಲು ನಿರ್ಧರಿಸಿದರು. ಕ್ರಿಯಾಶೀಲ ಚಿತ್ರಕಲೆ ಬಿಡಿಸುವುದನ್ನು ಕಲಿಯಲಾರಂಭಿಸಿ ಪ್ರತಿನಿತ್ಯ ಅಭ್ಯಾಸ ಮಾಡುತ್ತಿದ್ದರು. ತಮ್ಮಲ್ಲಿನ ಭಾವನೆ, ಕಲ್ಪನೆಗಳಿಗೆ ಬಣ್ಣದ ಸ್ವರೂಪ ನೀಡಲಾರಂಭಿಸಿದರು.
ಅವರ ಕುಂಚದಲ್ಲಿ ಅರಳಿದ ಚಿತ್ರಕಲೆಗಳು ನೋಡುಗರಲ್ಲಿ ಸಂತಸದ ಹೊಳೆಯನ್ನು ಹುಟ್ಟಿಸುತ್ತವೆ ಅವರಲ್ಲಿನ ಕಲ್ಪನೆಯು ಸೃಷ್ಟಿಯಾಗಿ ಕಲಾಕೃತಿಯ ರೂಪದಲ್ಲಿ ಅರಳಿ ನಿಂತು ಕಲಾರಸಿಕರನ್ನು ತಮ್ಮೆಡೆಗೆ ವಿಸ್ಮಯದಂತೆ ಸೆಳೆಯುತ್ತವೆ.
ಚಿತ್ರಕಲೆಯಿಂದ ಹಣ ಸಂಪಾದನೆ ಮಾಡಬಹುದು ಎಂಬುದು ವೀಣಾ ಅವರಿಗೆ ಮೊದಲು ತಿಳಿದಿರಲಿಲ್ಲ. ಕೇವಲ ಹವ್ಯಾಸಕ್ಜಾಗಿ ಕಲಾಕೃತಿಗಳನ್ನು ರಚಿಸುತ್ತಿದ್ದರು. ಚಿತ್ರಕಲೆಯಿಂದಲೂ ಹಣಸಂಪಾದನೆ ಮಾಡಬಹುದು ಎಂದು ತಿಳಿದ ಬಳಿಕ ಚಿತ್ರಸಂತೆಯಲ್ಲಿ ಭಾಗವಹಿಸುವ ಪ್ರಯತ್ನ ಮಾಡಿದರು. ಆದರೆ ಭಾಗವಹಿಸುವುದಕ್ಕೆ ಅವಕಾಶ ಸಿಗಲಿಲ್ಲ. ಆದರೂ ಕಲಾಕೃತಿಗಳನ್ನು ರಚಿಸುವುದನ್ನು ಬಿಟ್ಟಿಲ್ಲ.
ವೀಣಾ ಅವರು ಕೇವಲ ಚಿತ್ರಕಲೆಯಲ್ಲಿ ಮಾತ್ರವಲ್ಲದೇ ಸಂಗೀತದಲ್ಲಿಯೂ ಸದಭಿರುಚಿಯನ್ನು ಹೊಂದಿದ್ದಾರೆ. ಉತ್ತಮ ಕಂಠವನ್ನು ಹೊಂದಿದ್ದು, ಹಾಡುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಖಾಸಗಿ ಕಂಪನಿಯಲ್ಲಿ ಕೆಲಸಮಾಡುತ್ತಿರುವ ವೀಣಾ ಅವರ ಪ್ರವೃತ್ತಿ ಚಿತ್ರಕಲೆ, ಸಂಗೀತವಾಗಿದೆ. ಇಷ್ಟೇ ಅಲ್ಲ, ಬಿಡುವು ಸಿಕ್ಕಾಗ ತಮ್ಮಲಿನ ಪ್ರತಿಭೆ ಇತರರರಿಗೂ ಧಾರೆ ಎರೆಯುವ ಕೆಲಸ ಮಾಡುತ್ತಾರೆ.
ವೀಣಾ ಅವರ ಪ್ರತಿಭೆಗೆ ಸೂಕ್ತ ವೇದಿಕೆಯ ಅಗತ್ಯ ಇದೆ. ಇದಕ್ಕಾಗಿ ನಿರಂತರ ಹುಡುಕಾಟ ನಡೆಸುತ್ತಿದ್ದಾರೆ. ವೀಣಾ ಅವರ ಕಲಾಕೃತಿಗಳ ಬಗ್ಗೆ ಅಸಕ್ತಿ ಇರುವವರು ಅವರನ್ನು ಸಂಪರ್ಕಿಸಬಹುದು. ಅವರ ಮೊಬೈಲ್ ಸಂಖ್ಯೆ. 9538511237, 7829786469.
ಲೇಖನ : ಪ್ರಭುಸ್ವಾಮಿ ನಟೇಕರ್