ಇದೊಂದು ಸಿನಿಮಾದಲ್ಲಿನ ಸಿನಿಮಾದ ಕತೆ. ಶ್ರೀಮಂತರ ಕುಟುಂಬದಲ್ಲಿ ಹುಟ್ಟಿ, ಬೆಳೆದ ಕಥಾನಾಯಕನಿಗೆ ಕನ್ನಡ ಸಿನಿಮಾವೆಂದರೆ ಪಂಚಪ್ರಾಣ. ತಾನೊಬ್ಬ ದೊಡ್ಡ ಹೀರೊ ಆಗಬೇಕು ಕನ್ನಡ ಚಿತ್ರರಂಗದಲ್ಲಿ ತನ್ನದೆಯಾದ ಛಾಪು ಮೂಡಿಸಬೇಕೆನ್ನುವ ನೂರಾರು ಕನಸ್ಸುಗಳು. ಅವನ ಆಸೆಗೆ ಅವನ ಕುಟುಂಬದವರೇ ಅಡ್ಡ ಗೋಡೆ.
ಸಿನಿಮಾವನ್ನೇ ನಂಬಿ ಎಲ್ಲಿ ತನ್ನ ಜೀವನವನ್ನು ಸೂತ್ರವಿಲ್ಲದ ಗಾಳಿಪಟವನ್ನಾಗಿಸಿಕೊಳ್ಳುತ್ತಾನೆ ಎನ್ನುವ ಭಯ, ಕಾಳಜಿ ಅವನ ಮನೆಯವರಿಗೆ. ಆ ಕಾರಣಕ್ಕೆ ಅವನ ಕನಸ್ಸಿಗೆ ನೀರೆರೆಯುವುದಿಲ್ಲ. ಆದರೆ ಪಟ್ಟು ಬಿಡದ ಕಥಾನಾಯಕ ಸಿನಿಮಾದಲ್ಲಿ ಒಂದೇ ಒಂದು ಅವಕಾಶಕ್ಕಾಗಿ ಇಡೀ ಗಾಂಧಿನಗರವನ್ನೆಲ್ಲ ಸುತ್ತುತ್ತಾನೆ. ಅವಕಾಶ ಕೇಳಿಕೊಂಡು ಹೋದಾಗ ನಿರ್ದೇಶಕರು ಅವನಿಗೆ ಮಾಡುವ ಲೇವಡಿಗಳು ಬೇಸರವಾಗುತ್ತದೆ. ಗೆಳೆಯನ ಸಲಹೆ ಮೇರೆಗೆ ಕಥಾನಾಯಕ ಸಿನಿಮಾಕ್ಕೆ ತಾನೇ ನಿರ್ಮಾಪಕನಾಗಲು ಮುಂದಾಗುತ್ತಾನೆ. ಆಗ ಹಣಕ್ಕಾಗಿ ತನ್ನ ಮನೆಯಲ್ಲಿಯೇ ಕಳ್ಳತನ ಮಾಡಲು ಮುಂದಾಗುವಾಗ ಅಪ್ಪ-ಅಮ್ಮನ ಕೈಗೆ ಸಿಕ್ಕಿ ಬಿದ್ದು ಮನೆಯಿಂದ ಹೊರಗೆ ದಬ್ಬಿಸಿಕೊಳ್ಳುತ್ತಾನೆ.
ಇಲ್ಲಿಂದ ಕಥಾನಾಯಕನಿಗೆ ಸಿನಿಮಾ ಜಗತ್ತಿನ ನೈಜ್ಯ ಸ್ವರೂಪ ಪರಿಚಯವಾಗುತ್ತ ಹೋಗುತ್ತದೆ. ಹೀರೊ ಆಗಬೇಕು ಎಂದುಕೊಂಡವನಿಗೆ ಸಿನಿಮಾದಲ್ಲಿ ಕ್ಲಾಪ್ ಬಾಯ್ ಕೆಲಸ ಸಿಗುತ್ತದೆ. ಅಲ್ಲಿ ಅವನಿಗೆ ಆಗುವ ಅವಮಾನಗಳು ನೋಡುಗರ ಮನಸ್ಸನ್ನು ಹಿಂಡುತ್ತದೆ.
ಆದರೆ ಹಣೆಬರಹ ಎಲ್ಲ ಸಂದರ್ಭದಲ್ಲಿಯೂ ಒಂದೇ ಆಗಿರುವುದಿಲ್ಲ ನೋಡಿ. ಹಾಗೆಯೇ ಕಥಾನಾಯಕನ ಹಣೆಬರಹ ಬದಲಾಗುತ್ತದೆ. ತಾನು ಕೆಲಸ ಮಾಡುತ್ತಿದ್ದ ಸಿನಿಮಾ ಯುನಿಟ್ ನಲ್ಲಿ ನಾಯಕನ ದುರಹಂಕಾರಕ್ಕೆ ಈಡಿ ಚಿತ್ರ ತಂಡ ತತ್ತರವಾಗಿ ಹೋಗಿರುತ್ತದೆ. ಅವನ ಹೀಯಾಳಿಸುವ ಮಾತುಗಳು ನಿರ್ದೇಶಕನ ತಾಳ್ಮೆಯನ್ನು ಕೆಣುಕುತ್ತದೆ. ಬೇಸತ್ತ ನಿರ್ದೇಶಕ ಅವನೊಂದಿಗೆ ವಾಗ್ವಾದಕ್ಕೆ ಇಳಿಯುತ್ತಾನೆ. ಕುಪಿತ ಕೊಂಡ ಸಿನಿಮಾದ ನಾಯಕ ನನ್ನಿಂದಲೇ ಸಿನಿಮಾ. ನಾನು ಕೈ ಬಿಟ್ಟರೆ ನಿನ್ನ ಕತೆ ಅಷ್ಟೇ. ತಾಕತ್ತಿದ್ರೆ ಈ ಕ್ಲಾಪ್ ಬಾಯ್ ನ್ನು ಹೀರೊ ಮಾಡಿ ತೋರಿಸು ಅಂತ ನಿರ್ದೇಶಕನಿಗೆ ಸವಾಲೊಡ್ಡುತ್ತಾನೆ. ನಿರ್ದೇಶಕ ತನ್ನ ಮನೆ ಮಾರಿ ಸಾಕಷ್ಟು ಸಿನಿಮಾಗಳನ್ನು ತೆಗೆದಿದ್ದೇನೆ. ಅದರಲ್ಲಿ ಸಾಕಷ್ಟು ಯುವ ಕಲಾವಿದರನ್ನು ನಾಯಕನಾಗಿ ಬೆಳ್ಳಿತೆರೆಗೆ ಪರಿಚಯಿಸಿದ್ದೇನೆ. ಈಗ ನೀನು ಕೊಡುವ ಸವಾಲನ್ನು ನಾನು ಸ್ವೀಕರಿಸುತ್ತೇನೆ ಎಂದು ಕ್ಲಾಪ್ ಬಾಯ್ ಆಗಿದ್ದ ಕಥಾನಾಯಕನನ್ನು ತನ್ನ ಸಿನಿಮಾಕ್ಕೆ ರಾಜ್ ಎಂದು ಹೆಸರಿಡುವ ಮೂಲಕ ತಮ್ಮ ಸಿನಿಮಾಕ್ಕೆ ಹೀರೊ ಆಗಿ ಪರಿಚಯಿಸುತ್ತಾನೆ. ಹೀಗೆ ಮುಂದೆ ಕೆಲವಷ್ಟು ಫೈಟ್, ಕೆಲವಷ್ಟು ಎಮೋಷನಲ್ ಸನ್ನಿವೇಶಗಳು ನಡೆಯುತ್ತವೆ. ಕೊನೆಗೆ ಕಥಾನಾಯಕ ಅಂದುಕೊಂಡದ್ದನ್ನು ಸಾಧಿಸಿ ತೋರಿಸುತ್ತಾನೆ. ಅವನೊಬ್ಬ ದೊಡ್ಡ ನಟನಾಗಿ ಮಿಂಚುತ್ತಾನೆ.
ಇದು ಹತ್ತು ವರ್ಷದ ಹಿಂದೆ ಬಂದಂತಹ ‘ಕಲಾಕಾರ್’ ಸಿನಿಮಾದ ಒಂದು ಕತೆ. ಇದರ ನಿರ್ದೇಶನ, ನಿರ್ಮಾಪಕ ಹಾಗು ನಾಯಕತ್ವವನ್ನು ಹರೀಶ್ ರಾಜ್ ಅವರು ನಿರ್ವಹಿಸಿದ್ದರು. ಹರೀಶ್ ರಾಜ್ ಎಂದರೆ ಮತ್ಯಾರು ಅಲ್ಲ. ಬಗ್ ಬಾಸ್ ಸೀಸನ್ ೭ರ ಸ್ಪರ್ಧಿ. ಈ ಸಿನಿಮಾದಲ್ಲಿ ದ್ವಾರಕೀಶ, ಅವಿನಾಶ್, ಸುಧಾ ನರಸಿಂಹರಾಜು, ಸುಮನ್ ನಗರಕರ್, ರಾಧಿಕಾ ಗಾಂಧಿ ಸೇರಿದಂತೆ ದೊಡ್ಡ ತಾರಾ ಬಳಗವನ್ನು ಒಳಗೊಂಡತಂತಹ ಸಿನಿಮಾ.ಈ ಸಿನಿಮಾ ಈಗ ಯಾಕೆ ನನಗೆ ನೆನಪಿಗೆ ಬಂತು ಎನ್ನುವುದಕ್ಕೆ ಮುಖ್ಯ ಕಾರಣವೇ ಹರೀಶ ರಾಜ್.ಬಹು ದಿನಗಳ ನಂತರ ಅವರನ್ನು ಬಿಗ್ ಬಾಸ್ ವೇದಿಕೆಯಲ್ಲಿ ನೋಡಿದಾಗ ಒಬ್ಬ ಸೋತ ಕಲಾವಿದನ ಹಳೆಯ ಪರಿಚಯ ಕಣ್ಣ ಮುಂದೆ ಬಂತು.
ಅದೇ ಹರೀಶ್ ರಾಜ್ ಅವರು ಬಿಗ್ ಬಾಸ್ ಮನೆಯಲ್ಲಿ ನೂರು ದಿನಗಳ ಕಾಲ ಪೂರೈಸುತ್ತಿದ್ದಂತೆ ಅವರ ಮೇಲಿದ್ದ ‘ಸೋಲು’ ಎನ್ನುವ ಹಣೆ ಪಟ್ಟಿ ಕಳಚಿ, ಪತ್ರಕರ್ತ ರವಿ ಬೆಳೆಗೆರೆ ಅವರು ಹೇಳಿದಂತೆ ಸೋಲನ್ನು ಗೆಲ್ಲುವ ಸರ್ದಾರನಾಗಿ ಎಲ್ಲರ ಮನ ಗೆದ್ದರು. ಇದಕ್ಕೆ ಅವರ ಶೇಷಮ್ಮನ ಪಾತ್ರ, ಶೇಷಪ್ಪನ ಪಾತ್ರ ಅಥವಾ ಮುದುಕನ ಪಾತ್ರಗಳು ಅವರಲ್ಲಿನ ಕ್ರಿಯಾಶೀಲತೆಗೆ ಸಾಕ್ಷಿಯಾದವು. ಆದರೆ ಅಂದಿನ ದಿನದಲ್ಲಿ ಅವರು ನಿರ್ಮಿಸಿದಂತ ಕಲಾಕಾರ್ ಸಿನಿಮಾದ ನೈಜ್ಯತೆ ಅಂದು ಜನರಿಗೆ ಮುಟ್ಟಲಿಲ್ಲ. ಅದೇ ಸಿನಿಮಾವನ್ನು ಇತ್ತೀಚಿಗೆ ಆನ್ ಲೈನ್ ನಲ್ಲಿ ನಾನು ನೋಡಿದಾಗ ಎಷ್ಟೋ ಕಲಾವಿದರ ನೋವು ಅರ್ಥವಾಯಿತು. ಹಿಂದೆ ಡಿ ಬಾಸ್ ದರ್ಶನ ಅವರು ಪಟ್ಟಂತಹ ಕಷ್ಟಗಳ ಒಂದು ಕುಣುಕನ್ನು ಕಲಾಕಾರ್ ಸಿನಿಮಾದಲ್ಲಿ ಕಾಣಬಹುದು ಹಾಗು ಕಲಾಕಾರ್ ಸಿನಿಮಾದಲ್ಲಿ ದ್ವಾರಕೀಶ್ ಅವರು ನಿರ್ವಹಿಸಿದಂತಹ ನಿರ್ದೇಶಕನ ಪಾತ್ರ ಬಹುಶಃ ಅವರ ಇಂದಿನ ಪರಿಸ್ಥಿತಿಯ ಪ್ರತಿಬಿಂಬವೆಂದೇ ಹೇಳಬಹುದು. ಕಲಾವಿದರ ಬದುಕಿನ ಚಿತ್ರಣವನ್ನು ಕಣ್ಣಿಗೆ ಕಟ್ಟುವಂತೆ ಕತೆ ಹೆಣೆದು ನಿರ್ದೇಶಿಸಿದ್ದ ಹರೀಶ ರಾಜ್ ಒಬ್ಬ ಅಪ್ರತಿಮ ಕಲಾವಿದ.
ಕಲಾವಿದನಿಗೆ ಸಿಕ್ಕ ವೇದಿಕೆಯನ್ನು ಸರಿಯಾಗಿ ಬಳಸಿಕೊಳ್ಳುವುದು ಕೂಡ ಒಂದು ಜಾಣತನ. ಅದನ್ನು ಹರೀಶ ರಾಜ್ ಸಂಪೂರ್ಣವಾಗಿ ಬಳಸಿಕೊಂಡಿದ್ದಾರೆ. ಹರೀಶ್ ರಾಜ್ ಅವರು ಬಿಗ್ ಬಾಸ್ ಮನೆಯಲ್ಲಿ ಇರುವಷ್ಟು ದಿನ ತಮ್ಮಲ್ಲಿನ ಪ್ರತಿಭೆಯನ್ನು ಹಾಡುವ ಮೂಲಕ, ಮಿಮಿಕ್ರಿ ಮಾಡುವ ಮೂಲಕ, ಹಾಸ್ಯದ ಮೂಲಕ ಪ್ರೇಕ್ಷಕನಿಗೆ ತನ್ನಲ್ಲೊಬ್ಬ ಅಪ್ಪಟ ಕಲಾವಿದನಿದ್ದಾನೆ ಎಂದು ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ. ಆದರೆ ಅವರು ಕೇವಲ ಶೇಷಮ್ಮ,ಶೇಷಪ್ಪನ ಪಾತ್ರಕ್ಕೆ ಮಾತ್ರ ಸೀಮಿತವಾಗಿಲ್ಲ. ಅವರಲ್ಲಿ ಹಲವಾರು ಕಲಾವಿದರಿದ್ದಾರೆ. ಪಾತ್ರದಾರಿಗಳಿದ್ದಾರೆ ಮತ್ತು ಅವರೊಬ್ಬ ಬಹುರೂಪಿ ಕಲಾವಿದ. ಮತ್ತು ಅವರಲ್ಲಿ ಒಳ್ಳೆಯ ಹಾಸ್ಯಪ್ರಜ್ಞೆ, ಭಾಷೆಯ ಮೇಲಿನ ಹಿಡಿತವಿರುವುದರಿಂದ ಅವರೊಬ್ಬ ಭವಿಷ್ಯತ್ ನಲ್ಲಿ ಭರವಸೆಯ ಅತ್ಯುತ್ತಮ ನಿರೂಪಕನಾಗ ಬಲ್ಲ ಶಕ್ತಿ ಇದೆ. ಆದರೆ ಅವರ ಪ್ರತಿಭೆಯನ್ನು ಕಿರುತೆರೆ ಅಥವಾ ಬೆಳ್ಳಿಪರದೆಗಳು ಸಮರ್ಪಕವಾಗಿ ಬಳಸಿಕೊಳ್ಳಬೇಕಿದೆಯಷ್ಟೆ.
ಇನ್ನು ಹರೀಶ್ ರಾಜ್ ಅವರು ಅಭಿನಯಿಸಿದಂತಹ ಮುಂದಿನ ಚಿತ್ರ ‘ಕಿಲಾಡಿ ಪೊಲೀಸ್’ ತೆರೆ ಮೇಲೆ ಬರಲು ಸಿದ್ಧವಾಗಿದೆ. ಮುಂಬರುವ ದಿನಗಳು ಅವರಿಗೆ ಸುಖಕರ ಹಾಗು ಯಶಸ್ವಿದಾಯಕವಾಗಿರಲಿ ಎನ್ನುವುದು ಆಕೃತಿ ಕನ್ನಡದ ಆಶಯ.
ಲೇಖನ : ಶಾಲಿನಿ ಹೂಲಿ ಪ್ರದೀಪ್