ಸಾಹಿತ್ಯ ಕ್ಷೇತ್ರದಲ್ಲಿ ರಾಜಕೀಯ ಪ್ರವೇಶವಾಗಿದೆ, ಈಗ ಪ್ರಶಸ್ತಿಗಳಿಂದ ಹಿಡಿದು ಗೋಷ್ಠಿಗಳಲ್ಲಿ, ಸಮಾರಂಭ, ಸಮಾವೇಶಗಳಲ್ಲಿ ಆಹ್ವಾನಿತರಾಗಿ ಭಾಗವಹಿಸುವುದಕ್ಕೂ ವಶೀಲಿಗಳು ಹೆಚ್ಚಾಗಿವೆ . ಆಕಾಶವಾಣಿಯ ಸಹಾಯಕ ನಿರ್ದೇಶಕರಾದ ನೂತನ ದೋಶೆಟ್ಟಿ ಅವರ ಒಂದು ವಿಹಾರ ಸಂಕಿರಣವನ್ನು ತಪ್ಪದೆ ಮುಂದೆ ಓದಿ…
ದಶಕದ ಹಿಂದೆ ಸಾಹಿತ್ಯ ಸಮ್ಮೇಳನಗಳಿಗೆ ಒಂದು ರೀತಿಯ ಗ್ಲಾಮರ್ ಆವರಿಸಿಕೊಳ್ಳಲು ಆರಂಭವಾಯಿತು ಅನ್ನಿಸುತ್ತಿದೆ. ಅದುವರೆಗೆ ಲೇಖಕರು ಅನುಭವಿಸುತ್ತಿದ್ದ ಗೌರವ ಸ್ಥಾನ ಆಯಾ ಪ್ರಾದೇಶಿಕ , ಸ್ಥಳೀಯ, ವಿಭಾಗ ಮಟ್ಟದ ರಾಜಕೀಯ ನಾಯಕರಿಗೆ ವರ್ಗಾವಣೆಯಾಗಿ ಅವರು ಸಾಹಿತ್ಯ ವೇದಿಕೆಗಳಲ್ಲಿ ತಮ್ಮ ಅಚ್ಚ ಬಿಳುಪಿನ ಉಡುಪುಗಳೊಂದಿಗೆ ಕಾಣಿಸಿಕೊಳ್ಳಲು ಆರಂಭಿಸಿದ್ದು ಆಗಲೇ. ಅವರ ಭಾಗವಹಿಸುವಿಕೆ ಹೆಚ್ಚಾದಂತೆ ಸಾಹಿತ್ಯ ಮೇಳಗಳಿಗೆ ಹಣದ ಹರಿವೂ ಹೆಚ್ಚಿತೆನ್ನಿ. ಸಾವಿರದಲ್ಲಿ ನಡೆಯುತ್ತಿದ್ದ ಸಾಹಿತ್ಯ ಸಮ್ಮೇಳನಗಳು ಲಕ್ಷಗಳಲ್ಲೂ ನಂತರದಲ್ಲಿ ಕೋಟಿಗಳಲ್ಲೂ, ಈಗಂತೂ ಹಲವಾರು ಕೋಟಿಗಳಲ್ಲಿ ತೂಗುತ್ತಿವೆ. ರಾಜಕೀಯ ಪ್ರವೇಶ ಸಾಹಿತ್ಯ ಕ್ಷೇತ್ರದಲ್ಲಿ ಆದಂತೆ ಪ್ರಶಸ್ತಿಗಳಿಂದ ಹಿಡಿದು ಗೋಷ್ಠಿಗಳಲ್ಲಿ, ಸಮಾರಂಭ, ಸಮಾವೇಶಗಳಲ್ಲಿ ಆಹ್ವಾನಿತರಾಗಿ ಭಾಗವಹಿಸುವುದಕ್ಕೂ ವಶೀಲಿಗಳು ಹೆಚ್ಚಿದವು. ಆ ಕಾರಣದಿಂದ ಆರಂಭವಾದದ್ದು ಪ್ರಾದೇಶಿಕ ಪ್ರಾತಿನಿಧ್ಯ. ಇದು ಹಳ್ಳಿಗಳ ಮಟ್ಟದಿಂದ ರಾಷ್ಟ್ರೀಯ ಮಟ್ಟದ ಸಾಹಿತ್ಯದ ಎಲ್ಲ ಕಾರ್ಯಕ್ರಮಗಳು, ವೇದಿಕೆಗಳಲ್ಲಿ ಕಡ್ಡಾಯವಾಯಿತು.ಈಗಂತೂ ಯಾವುದೇ ಮುಜುಗರಗಳಿಲ್ಲದೆ ನಿರ್ಭಿಡೆಯಿಂದ ಹಾಗೂ ಹಕ್ಕೊತ್ತಾಯದಿಂದ ಇದು ನಡೆಯುತ್ತಿದ್ದಂತೆ ಇದೆ. ದಶಕದ ಹಿಂದೆ ಕೆಲ ಲಕ್ಷಗಳಲ್ಲಿ ನಡೆಯುತ್ತಿದ್ದ ಸಾಹಿತ್ಯ ಸಮ್ಮೇಳನಗಳು ಈಗ ಹಲ ಕೋಟಿಗಳಿಗೆ ಭಡ್ತಿ ಹೊಂದಿದಂತೆ ನಡೆಯುತ್ತಿದ್ದುದು ಮಾತ್ರವಲ್ಲದೆ ಉತ್ಸವ, ಜಾತ್ರೆ, ಸಂತೆಗಳಾಗಿ ಕರೆಯಲ್ಪಡುತ್ತಿವೆ; ಇದರಲ್ಲೇನು ತಪ್ಪು? ಕನ್ನಡದ ಕೆಲಸ ಎಂಬ ಸಮಜಾಯಿಷಿಯೊಂದಿಗೆ.

ಆಧುನಿಕ ಕರ್ನಾಟಕ , “ಕನ್ನಡಕ್ಕಾಗಿ ಕೈ ಎತ್ತು. ನಿನ್ನ ಕೈ ಕಲ್ಪವೃಕ್ಷವಾಗುತ್ತದೆ” ಎಂದು ಕುವೆಂಪು ಆದಿಯಾಗಿ ನಂಬಿಕೊಂಡು ಬಂದ ನಾಡು. (ಹಣದ ಅಬ್ಬರದ ಈ ದಿನಗಳಲ್ಲಿ ಯಾರ ಯಾರ ಕೈ ಕಲ್ಪವೃಕ್ಷವಾಗುತ್ತಿದೆಯೋ ಬಲ್ಲವರಾರು? ) ನವ್ಯ, ನವ್ಯೋತ್ತರ, ಬಂಡಾಯ ಮೊದಲಾದ ಸಾಹಿತ್ಯ ಚಳವಳಿಗಳ ಅಲೆಯೆಬ್ಬಿಸಿದ ನಾಡು. ವೈಚಾರಿಕ, ಶಾಬ್ದಿಕ, ಅಭಿವ್ಯಕ್ತಿ, ಅನುಭವಗಳ ಮೂಸೆಯಲ್ಲಿ ಸಾಹಿತ್ಯ ಪಕ್ವವಾದಾರೂ ಅದಕ್ಕೆ ಈ ಹಿಂದೆ ಅಬ್ಬರದ, ಆಡಂಬರದ ಲೇಪವಿರಲಿಲ್ಲ. ಅಖಿಲ ಭಾರತ ಸಾಹಿತ್ಯ ಸಮ್ಮೇಳನ, ದಸರಾ ಮೊದಲಾದ ವಿಶೇಷ ಸಂದರ್ಭಗಳಲ್ಲಿ ಅಧ್ಯಕ್ಷರ ಮಾತುಗಳಿಗೆ ಸಾಹಿತ್ಯ ಲೋಕ ಕಿವಿತೆರೆದು ಕುಳಿತುಕೊಳ್ಳುತ್ತಿತ್ತು. ಗೋಷ್ಠಿಗಳು ಸಂಚಲನ ಮೂಡಿಸುವಂತಿದ್ದರೆ, ಕವಿಗೋಷ್ಠಿಗಳು ರಸದೌತಣವನ್ನು ಉಣಬಡಿಸುತ್ತಿದ್ದವು. ಸಮಾರೋಪ ಭಾಷಣಗಳು ಮುದ್ರಿತ ಪ್ರತಿಯಾಗದೇ ಅನುಷ್ಠಾನಕ್ಕೆ ರಹದಾರಿಯಾಗುತ್ತಿದ್ದವು. ಸರ್ಕಾರಗಳೂ ಈ ಭಾಷಣಗಳಲ್ಲಿ ಬರುತ್ತಿದ್ದ ವಿಷಯಗಳಿಗೆ, ಸಲಹೆ, ಅಹವಾಲುಗಳಿಗೆ ಕಿವಿಯಾಗುತ್ತಿದ್ದವು. ಇಂತಿಪ್ಪ ಸಾಹಿತ್ಯ ಲೋಕ ಸರ್ಕಾರದ ಹಣ ಸಹಾಯಕ್ಕೆ ತೆರೆದುಕೊಂಡಿದ್ದು ಅದರ ಗತಿ – ಮತಿಯನ್ನು ಬದಲಾಯಿಸುವಷ್ಟು ಶಕ್ತವಾಯಿತು. ಗುಂಪುಗಾರಿಕೆ, ವಶೀಲಿಗಳು ಕಣ್ಣಿಗೆ ರಾಚುವಷ್ಟು ದಟ್ಟವಾದಾಗ ಪರ್ಯಾಯ ಹಾಗೂ ಪ್ರತಿರೋಧದಲ್ಲಿ ಹತ್ತಾರು ಗುಂಪುಗಳು, ಸಂಘ-ಸಂಸ್ಥೆಗಳು ಸಾಹಿತ್ಯವನ್ನು ಉಳಿಸುವ, ಬೆಳೆಸುವ ಮಹದುದ್ದೇಶದಿಂದ ಚುರುಕಾದವು. ಪ್ರಶಸ್ತಿಗಳು ಹೆಚ್ಚಿದವು. ಅವಕಾಶಗಳು ಹೆಚ್ಚಿದವು. ಇದರ ಪರಿಣಾಮವಾಗಿ ಪೈಪೋಟಿಯೂ. ಇದು ಮತ್ತೆ ತಂದು ನಿಲ್ಲಿಸಿದ್ದು ಹಣದ ಅಂಗಳಕ್ಕೆ!
ಈ ಹೊತ್ತಿಗೆ ಕನ್ನಡ ಪುಸ್ತಕೋದ್ಯಮ ದೊಡ್ಡ ಉದ್ಯಮವಾಗಿ ಬೆಳೆದಿದೆ. ಪ್ರತಿ ವರ್ಷ 5000 ಅಥವಾ ಹೆಚ್ಚು ಪುಸ್ತಕಗಳು ಪ್ರಕಟವಾಗುತ್ತಿವೆ. ಈ ಬೃಹತ್ ಉದ್ಯಮದ ನೆರಳಲ್ಲಿ ಅನೇಕ ಚಿಕ್ಕ ಉದ್ಯಮಗಳು, ಕಲಾವಿದರು, ಲೇಖಕರು, ಸಂಚಾರ ವ್ಯವಸ್ಥೆ, ಇವೆಂಟ್ ಮ್ಯಾನೇಜ್ಮೆಂಟ್, ಡಿಟಿಪಿ, ಮುದ್ರಕರು, ಛಾಯಾಗ್ರಾಹಕರು ಮೊದಲಾದ ಹತ್ತಾರು ಉದ್ಯಮಗಳು ಉಸಿರಾಡುತ್ತಿರುತ್ತವೆ. ಇವೆಲ್ಲವುಗಳಿಗೆ ಆಮ್ಲಜನಕ ಒದಗಿಸುವ ಏಕೈಕ ಆಸರೆ ಓದುಗ. ಅವನನ್ನು ಸೆಳೆಯಲು, ಅದರಲ್ಲೂ ಯುವ ಓದುಗರನ್ನು ಸೆಳೆಯಲು ಈ ದೊಡ್ಡ ವ್ಯವಸ್ಥೆ ಹೆಣೆದ ತಂತ್ರ ಅತ್ಯಂತ ವ್ಯವಸ್ಥಿತವಾಗಿದ್ದರೂ ಅದು ಕನ್ನಡ ನಾಡು ನುಡಿಯ ಬೆಳವಣಿಗೆಗೆ ಅವಶ್ಯಕ ಎಂಬ ಸಮಾಧಾನ ಇನ್ನು ಉಳಿದೀತೆ ಎಂದು ಪ್ರಶ್ನಿಸಿಕೊಳ್ಳಬೇಕಾದ ಕಾಲಘಟ್ಟ ಇದು.
ಉಚಿತ ಪುಸ್ತಕಗಳನ್ನು ಹಂಚುವ ಮೂಲಕ, ದೊಡ್ಡ ಮೊತ್ತದ ಬಹುಮಾನ ನೀಡುವ ಮೂಲಕ, ಸೆಲೆಬ್ರಿಟಿಗಳನ್ನು ಆಹ್ವಾನಿಸುವ ಮೂಲಕ, ಒಂದು ಛಾವಣಿಯ ಅಡಿಯಲ್ಲಿ ಎಲ್ಲರನ್ನೂ ಸೇರಿಸುವ ಮೂಲಕ ಇಂದು ಸತತವಾಗಿ ಆಗುತ್ತಿರುವ ಪ್ರಯತ್ನಗಳು ಕನ್ನಡವನ್ನು, ಭಾಷೆಯನ್ನು ಉಳಿಸುವುದಕ್ಕೆ ಮಾತ್ರ ಎಂದು ಒಪ್ಪಿಕೊಳ್ಳುವುದು ಕಷ್ಟವಾಗುತ್ತಿದೆ. ಈ ಎಲ್ಲ ಕಾರ್ಯಕ್ರಮಗಳಿಗೆ ಹಣದ ಹೊಳೆ ಹರಿಯಲೇಬೇಕು. ಲಕ್ಷಗಳು, ಕೋಟಿಗಳು ಕೈ ಬದಲಾಯಿಸುವಾಗ ಎಲ್ಲವೂ ನಿರ್ಮಲವಾಗಿರಲಾರದು ಎಂಬುದು ಕ್ಲೀಷೆಯಲ್ಲ. ಈ ಪ್ರಮಾಣದ ಹಣದ ಹರಿವು ಬಂದುದಾದರೂ ಎಲ್ಲಿಂದ, ಯಾರಿಂದ, ಯಾಕಾಗಿ? ಕೇಳಿಕೊಳ್ಳಬೇಕಿದೆ. ಲಾಭವಿಲ್ಲದೆ ವ್ಯಾಪಾರಕ್ಕಿಳಿಯದ ವ್ಯಾಪಾರಿ ಹಾಗೂ ಕಾಸಿನ ವಾಸನೆಯಿರದೆ ಏನನ್ನೂ ಮಾಡದ ಈಗಿನ ರಾಜಕಾರಣಿ, ಎರಡನ್ನೂ ಅಳತೆತೂಗಿ ಸೇರಿಸುವ ಬ್ಯೂರೋಕ್ರಸಿ ಈ ಮೂರರ ಪಕ್ಕಾ ಎರಕವಾಗಿರುವಂತಿದೆ ಇಂದಿನ ಸಾಹಿತ್ಯಲೋಕ. ಇವಿಷ್ಟು ಸಾಲದಂತೆ ಗುಂಪುಗಾರಿಕೆಯೂ ಹೆಚ್ಚುತ್ತಿದೆ. ತಮ್ಮ ಜಾತಿ, ಪಂಗಡದವರ , ಪರಿಚಿತರ, ಸ್ನೇಹಿತರ, ತಮಗೆ ಬೇಕಾದವರ ಹೆಸರುಗಳನ್ನು ಗೋಷ್ಠಿಗಳಿಗೆ, ಪ್ರಶಸ್ತಿಗಳಿಗೆ ಸೂಚಿಸುವುದರ ಜೊತೆಗೆ ಅವರ ಪುಸ್ತಕಗಳು ಬಿಡುಗಡೆಯಾಗುವಂತೆಯೂ ನೋಡಿಕೊಂಡು, ಪ್ರಶಸ್ತಿಗಳನ್ನೂ ಕೊಡಿಸುವವರೆಗೆ ಲಾಬಿ ಮಾಡುವ ಲಾಬಿಕೋರರೂ ಇದ್ದಾರು. ಹೇಳಲಾಗುವುದಿಲ್ಲ. ಸಾಹಿತ್ಯಕ್ಕೆ ಸಂಬಂಧಿಸಿದಂತೆ ಬಹಳ ಸುಂದರ ಮಾತೊಂದು ಹಿಂದೆ ಚಾಲ್ತಿಯಲ್ಲಿತ್ತು. ” ಕಾಳು ಉಳಿಯುತ್ತದೆ, ಜೊಳ್ಳು ಹಾರಿ ಹೋಗುತ್ತದೆ”. ಈಗ ಕಾಳು – ಜೊಳ್ಳು ಹೇಳುವವರು ಯಾರು? ನಿಸಾರ್ ಸರ್ ಬಹಳ ಹಿಂದೆಯೇ ಚೆನ್ನಾಗಿ ಗುರುತಿಸಿದಂತೆ, ” ಮಂದೆಯಲಿ ಒಂದಾಗಿ , ಇದರ ಬಾಲ ಅದು , ಮತ್ತೆ ಅದರ ಬಾಲ ಇದು..”
ಶಿಕ್ಷಣ ಕ್ಷೇತ್ರದಲ್ಲೂ ಕೆಲ ದಶಕಗಳ ಹಿಂದೆ ಹಣದ ಹೊಳೆ ಹರಿದಿದ್ದು ಇಂದು ಆ ಕ್ಷೇತ್ರ ಪಕ್ಕಾ ವ್ಯಾಪಾರವಾಗಿ ಬದಲಾಗಿರುವುದನ್ನು ಮರೆಯುವಂತಿಲ್ಲ. ಅದು ಸಾಹಿತ್ಯ ಕ್ಷೇತ್ರಕ್ಕೂ ಬರುವ ಲಕ್ಷಣಗಳು ಕಾಣುತ್ತಿವೆ. ಆದ್ದರಿಂದ ವೇದಿಕೆಯಲ್ಲಿ ಆಯೋಜಕರು ನೀಡುವ ದೊಡ್ಡ ಮೊತ್ತದ ಚೆಕ್ ಅಥವಾ ತುಂಬಿದ ಲಕೋಟೆಗೆ ಕೈಯೊಡ್ಡುವ ಮೊದಲು ಆ ಹಣ ಎಲ್ಲಿಂದ ಬಂದಿದೆ ಎಂಬ ಮೂಗಾಳಿಯನ್ನು ಸಂವೇದನಾಶೀಲ ಲೇಖಕರು ಒಮ್ಮೆ ಹಿಡಿಯುವಂತಾಗಲಿ. ಹೆಸರು, ಹಣ, ಗ್ಲ್ಯಾಮರ್ ಗೆ ಪರ್ಯಾಯವಾಗಿ ಸಾಹಿತ್ಯ ನಿಲ್ಲದಿರಲಿ ಎಂಬ ಸದಾಶಯ.
- ನೂತನ ದೋಶೆಟ್ಟಿ – ಲೇಖಕಿ, ಸಹಾಯಕ ನಿರ್ದೇಶಕರು ಆಕಾಶವಾಣಿ, ಬೆಂಗಳೂರು.
