ಮನೆಯಲ್ಲಿ ವಯಸ್ಸಾದ ಗಂಡ ಹೆಂಡತಿ ಇಬ್ಬರೇ ಇದ್ದರು. ರಾತ್ರಿ ಹತ್ತು ಗಂಟೆಗೆ ಯಾರೋ ಬಾಗಿಲು ಬಡೆದ ಸದ್ದಾಯ್ತು. ಹೆಂಡತಿ ಕಳ್ಳ ಏನಾದ್ರು ಬಂದಿದ್ರೆ ಎನ್ನುವ ಭಯದಲ್ಲಿಯೇ ಇದ್ದಳು, ಆಗ ಗಂಡ ಹೇಳಿದ ನಮ್ಮನ್ನು ಕೊಂದು ಎಲ್ಲವನ್ನು ತಗೆದುಕೊಂಡು ಹೋಗಲಿ. ನಮಗ್ಯಾರು ಇದ್ದಾರೆ ಎನ್ನುತ್ತಾ ಬಾಗಿಲು ತೆರೆದ, ಮುಂದೇನಾಯಿತು. ಕತೆಗಾರ್ತಿ ಬಿ.ಆರ್.ಯಶಸ್ವಿನಿ ಅವರ ಈ ಕತೆಯನ್ನು ಪೂರ್ತಿಯಾಗಿ ಓದಿ…
‘ರಾಯರೇ, ತುಂಬಾ ಹೊತ್ತು ಆಯಿತು. ಮಲಗೋಣ ಬನ್ನಿ. ನಿಮಗೆಷ್ಟು ಹೇಳಿದ್ರು ಆ ಉಯ್ಯಾಲೆ ಮೇಲೆ ಯೋಚನೆ ಮಾಡುತ್ತಾ ಕುಳಿತುಕೊಳ್ಳಬೇಡಿ ಅಂದ್ರು ಅಲ್ಲೆ ಕುಳಿತಿರುತ್ತಿರಾ. ನೀವು ಅಲ್ಲೆ ನಿದ್ದೆ ಮಾಡುತ್ತೀರಾ. ಕೆಳಗೆ ಬಿದ್ದು ಏನಾದರೂ ಪೆಟ್ಟಾದ್ರೆ ನಾನು ಎನ್ಮಾಡಬೇಕು. ನನಗೆ ಕೈಕಾಲೆಲ್ಲಾ ತರಗುಟ್ಟಿ ಹೋಗುತ್ತವೆ. ನಿಮ್ಮನ್ನು ಬಿಟ್ಟರೆ ನನ್ನ ಯಾರು ನೋಡಿಕೊಳ್ಳುತ್ತಾರೆ ಯಾಜಮಾನರೇ. ನಿಮಗೆ ಎಷ್ಟು ಹೇಳಿದರೂ ಕೇಳಲ್ಲ. ನನಿಗಂತು ಸಾಕಾಗಿದೆ. ಆ ದೇವರು ನಮಗಿಂತ ಚಿಕ್ಕ ವಯಸ್ಸಿನವರನ್ನೆಲ್ಲಾ ಮೇಲೆ ಕರೆದುಕೊಳ್ಳುತ್ತಾನೆ. ಆದರೆ ಇನ್ನೂ ಏನೇನು ನೋಡಬೇಕು ಅಂತ ನಮ್ಮನ್ನು ಇಲ್ಲೆ ಉಳಿಸಿ ಬಿಟ್ಟಿದ್ದಾನೆ. ನಾನೊಬ್ಬಳೇ ಬಡ್ಕೋಣತ್ತಿದ್ದೀನಿ ಏನಾದ್ರೂ ಮಾತಾಡ್ರಿ ಮಾರಾಯ್ರೆ’.
‘ರುಕ್ಕು, ರುಕ್ಕು… ಎಷ್ಟು ಚಂದವಾಗಿ ಬಾಯ್ತುಂಬಾ ರಾಯರೇ, ಯಜಮಾನರೇ, ಮಾರಾಯ್ರೆ, ಅಂತೆಲ್ಲಾ ಪ್ರೀತಿಯಿಂದ ಕರೆಯುತ್ತಿಯಾ… ನಮ್ಮಿಬ್ಬರ ನಡುವೆ ಇರುವ ಅನ್ಯೋನ್ಯತೆಯ ಬಾಂಧವ್ಯವು ನಮ್ಮನ್ನು ಕೊನೆ ಘಟ್ಟದವರೆಗೂ ತಂದು ನಿಲ್ಲಿಸಿದೆ. ನೀ ಏಕೆ ಚಿಂತೆ ಮಾಡ್ತೀಯಾ… ನಾನಿರುವವರೆಗೂ ನಿನಗೆ ಏನು ತೊಂದರೆಯಾಗದಂತೆ ನೋಡಿಕೊಳ್ಳುತ್ತೀನಿ … ಖುಷಿಯಾಯಿತಾ ನನ್ನ ಮುದ್ದು ರಾಣಿಗೆ ನಾನು ಮಾತಾಡಿದ್ದು’.
‘ಆಯ್ಯೋ ಖುಷಿ ಏನೋ ಆಯ್ತು ಮಾರಾಯ್ರೆ …ಆದ್ರೆ ನಮಗೇನು ಚಿಕ್ಕ ವಯಸ್ಸಾ ಒಳ್ಳೆ ಟೀನೇಜ್ ಲವರ್ಸ ತರಹ ನನ್ನ ಮುದ್ದು ರಾಣಿ ಅಂತೆಲ್ಲಾ ಕರೆಯುತ್ತೀರಾ..ನಮಗೆ ಮದುವೆ ವಯಸ್ಸಿಗೆ ಬಂದ ಮೊಮ್ಮಕ್ಕಳು ಇದ್ದಾರೆ.

ಫೋಟೋ ಕೃಪೆ : ಅಂತರ್ಜಾಲ
‘ಸುಮ್ಮನೆ ಇರು ರುಕ್ಕು. ಏನ್ ಮಕ್ಕಳೊ,ಮೊಮ್ಮಕ್ಕಳೊ… ನಾನು ಎಷ್ಟು ಸಾರಿ ಹೇಳಿದ್ದೀನಿ ನನ್ನ ಮಕ್ಕಳು ರಮೇಶ್, ಮಹೇಶನಿಗೆ ಸಂಬಂಧಗಳು ಎಂದರೆ ಯಾರು ಒಡೆಯಲು ಪ್ರಯತ್ನ ಪಟ್ಟರು ಬಿರುಕು ಮೂಡದಂತೆ ಬಂಧಿಯಾಗಿರಬೇಕು ಸಹೋದರರ ಸಂಬಂಧ ಅಂತ… ಅಣ್ಣ, ತಮ್ಮ ನೀವು ಒಗ್ಗಟ್ಟಿನಿಂದ ಹೊಂದಾಣಿಕೆಯಿಂದ ಇದ್ದರೆ ಯಾರು ನಿಮ್ಮನ್ನು ಬೇರ್ಪಡಿಸಲು ಆಗುವುದಿಲ್ಲ ಅಂತ…ಅವರು ಮದುವೆಯಾಗುವ ತನಕ ನನ್ನ ಮಾತುಗಳಿಗೆ ಗೌರವ ಕೊಟ್ಟು ನಡೆದುಕೊಳ್ಳುತ್ತಿದ್ದವರು, ಮದುವೆಯಾದ ಮೇಲೆ ವೈರಿಗಳಂತೆ ಕಿತ್ತಾಡುತ್ತಾರೆ’.
‘ನನ್ನ ಅಪ್ಪ ಅಮ್ಮ ಅಂತ ಕಿತ್ತಾಡುತ್ತಿದ್ದವರು ಈಗ ನಮ್ಮನ್ನ ನಾನ್ ಸಾಕಾಲ್ಲ, ನಾನು ಸಾಕಲ್ಲ ಅಂತ ಇಬ್ಬರು ಕಿತ್ತಾಡಿ ನಮ್ಮನ್ನೆ ಹೊರಗೆ ಇಟ್ಬಿಟ್ರು ನಮ್ಮ ಮಕ್ಕಳು’. ಒಂದಲ್ಲಾ ಎರಡಲ್ಲ ಸುಮಾರು ಸತಿ ಹೇಳಿದ್ದೆ ಸಂಬಂಧಗಳು ಎಂದರೆ ಜೇನುಗೂಡಿನಂತಿರಬೇಕು. ಯಾರು ಎಷ್ಟೆ ಜೇನುಗೂಡನ್ನು ಅಳಿಸಲು ಪ್ರಯತ್ನ ಪಟ್ಟು ಅಳಿಸಿದರೂ ಅವುಗಳ ಒಗ್ಗಟ್ಟಿನಿಂದ ಮತ್ತೊಂದು ಗೂಡು ಕಟ್ಟಿಕೊಳ್ಳುತ್ತವೆ.. ಆಗಿರಬೇಕು ಸಂಬಂಧಗಳೆಂದರೆ.
‘ರೀ….ಯಾರೋ ಕದ ತಟ್ಟಿದಂತೆ ಕೇಳಿಸಲಿಲ್ವಾ…
‘ಏಕೆ ನಾನು ಮಾತಾಡೋದು ನಿಲ್ಲಿಸಲಿ ಅಂತ ಕದ ತಟ್ಟುತ್ತಿದ್ದಾರೆ ಅಂತ ಹೇಳತ್ತಿದ್ದೀಯಾ ಚಿನ್ನಾ’…
‘ಥೋ… ಎಂತಾ ಮಾರಾಯ್ರೆ ನೀವು ಚಿನ್ನಾ,ಮುದ್ದು ಅಂತ … ನಿಮಗೆ ವಯಸ್ಸಾಯಿತ್ತಲ್ಲಾ ಸ್ವಲ್ಪ ಕಿವಿ ಮಂದ ಅಲ್ವೇ… ನಿಜವಾಗಿಯೂ ಕದ ತಟ್ಟುತ್ತಿದ್ದಾರೆ. ತಗೆಯೋಣ, ಬೇಡ್ವಾ… ರಾತ್ರಿ ಹತ್ತು ಗಂಟೆ ಆಗಿದೆ. ಇಷ್ಟು ಹೊತ್ತಲ್ಲಿ ಯಾರೊ ಬಂದರೊ ಏನೋ. ಕಳ್ಳರೇನೊ ಅಂತ ಭಯವಾಗುತ್ತಿದೆ’.
‘ಭಯ ಪಡಬೇಡ ರುಕ್ಕು…ಕಳ್ಳರೇನಾದ್ರು ಆಗಿದ್ರೆ ನಮ್ಮನ್ನು ಕೊಂದು ಮನೆಯಲ್ಲಿ ಇರೋದನ್ನ ದೋಚಿಕೊಂಡು ಹೋಗ್ಲಿ ಬಿಡು. ಅವರಾದ್ರು ಬದುಕಿಕೊಂಡ್ಲಿ. ನಾವಿದ್ದು ಏನ್ಮಾಡ್ಬೇಕಿದೆ. ತೆಗಿಯೋಗು ಬಾಗಿಲನ್ನು’.
‘ರೀ…ರೀ…ಯಜಮಾನ್ರೆ ಬನ್ರಿ. ಇಲ್ಲಿ ಯಾರ ಬಂದಿದ್ದಾರೆ ನೋಡಿ’.
‘ಯಾರು’…
‘ನಮ್ಮ ಮೊಮ್ಮಕ್ಕಳು’
‘ಏನ್ರಾಪ್ಪ ಇವತ್ತು ನಿಮ್ಮ ಅಜ್ಜಿ,ತಾತ ನೆನಪಿಗೆ ಬಂದ್ವಾ’.
‘ಅದು ಆಗಲ್ಲ ತಾತ..ನಾವು ಕೆಲಸಕ್ಕೆ ಹೋಗುತ್ತೇವೆ. ಸಮಯ ಸಿಗುತ್ತಿರಲಿಲ್ಲ ಊರಿಗೆ ಬರುವುದಕ್ಕೆ. ಈಗ ಅಪ್ಪ, ದೊಡ್ಡಪ್ಪ ನಮಗೆ ಮದುವೆ ನಿಶ್ಚಯ ಮಾಡಿದ್ದಾರೆ. ಅವರಿಬ್ಬರೂ ಕಿತ್ತಾಡಿದರು, ನೀವು ಚಿಕ್ಕ ವಯಸ್ಸಿನಲ್ಲಿ ನಮಗೆ ಹೇಳಿದ್ರಿ ಅಲ್ವಾ ಸಂಬಂಧಗಳೆಂದರೆ ಜೇನುಗೂಡಿನಂತೆ ಒಗ್ಗಟ್ಟಾಗಿ ಹೊಂದಾಣಿಕೆಯಿಂದ ಇರಬೇಕೆಂದು ಅದರಂತೆ ನಾವು ಇದುವರೆಗೂ ಕಿತ್ತಾಡಿಲ್ಲ. ಹೊಂದಾಣಿಕೆಯಿಂದ ಇದ್ದೇವೆ’.
‘ಮಕ್ಕಳೇ… ನಿಮ್ಮ ಅಪ್ಪ, ದೊಡ್ಡಪ್ಪ ನನ್ನ ಮಾತುಗಳಿಗೆ ಗೌರವ ಕೊಡದಿದ್ದರೂ ನೀವು ಗೌರವ ಕೊಟ್ಟಿದ್ದು ತುಂಬಾ ಖುಷಿಯಾಯಿತು…ಮತ್ತೇ ಏನು ವಿಷಯ ಬಂದಿದ್ದು’ …
‘ತಾತಾ ನಿಮ್ಮ ಮತ್ತು ಅಜ್ಜಿಯ ಮಧುರವಾದ ಪ್ರೀತಿಯ ಬಾಂಧವ್ಯ ನೋಡಿದ್ರೆ ನಮ್ಮ ಸಂಗಾತಿಗಳ ಜೊತೆ ಹೀಗೆ ಅನ್ಯೋನ್ಯವಾಗಿರಬೇಕೆಂದು ಆಸೆ. ನಿಮ್ಮಿಬ್ಬರ ಹಾಗೆ ಅನ್ಯೋನ್ಯತೆಯಿಂದ ಇರಬೇಕೆಂದರೆ ಏನು ಮಾಡಬೇಕು ಅಂತ ತಿಳಿದುಕೊಳ್ಳುವುದಕ್ಕೆ ಬಂದ್ವಿ. ಅಪ್ಪ, ಅಮ್ಮ ಇಬ್ಬರೂ ಯಾವಾಗಲೂ ಜಗಳವಾಡುತ್ತಾರೆ.. ಅವರನ್ನು ನೋಡಿ ನಮಗೆ ಮದುವೆ ಆಗುವುದೇ ಬೇಡ ಅಂತ ಆನ್ನಿಸುತ್ತಿದೆ’ .
‘ಮಕ್ಕಳೇ ಏಕೆ ಮದುವೆ ಬೇಡ ಅಂತೀರಾ. ನಾನು ನಿಮ್ಮಜ್ಜಿ ಇಲ್ಲಿವರೆಗೂ ಜೊತೆಯಾಗಿ ಸಾಗಿ ಬಂದು ಅಂತಿಮ ಘಟ್ಟಕ್ಕೆ ತಲುಪಿಲ್ಲವೇ. ಗಂಡ ಹೆಂಡತಿ, ಅಕ್ಕ ತಂಗಿ,ಅಣ್ಣ ತಮ್ಮ ಸಂಬಂಧಗಳು ಯಾವುದಾದರೂ ಸರಿ ಎರಡು ವ್ಯಕ್ತಿಗಳ ಮನಸ್ಸಲ್ಲಿ ನಮ್ಮವರು ಎನ್ನುವ ಆಗಾಧವಾದ ಪ್ರೀತಿ ಇರಬೇಕು’.
‘ತಪ್ಪನ್ನು ಮಾಡುವುದು ಮಾನವನ ಸಹಜ ಗುಣ ಆದರೆ ಅದನ್ನು ಕ್ಷಮಿಸಿ ಮುಂದಕ್ಕೆ ಸಾಗಬೇಕು ಹೊರತು ಹಠ ಸಾಧಿಸಬಾರದು..ಕ್ಷಮಿಸುತ್ತಾರೆ ಅಂದ ಮಾತ್ರಕ್ಕೆ ಪದೆ ಪದೆ ತಪ್ಪು ಮಾಡಬಾರದು ತಪ್ಪನ್ನು ತಿದ್ದಿಕೊಂಡು ಹೋಗುವ ಗುಣ ಬೆಳಸಿಕೊಂಡರೆ ಯಾವ ಸಂಬಂಧಗಳಲ್ಲಿಯೂ ಕೂಡ ಬಿರುಕು ಮೂಡುವುದಿಲ್ಲ’.
ಸಂಬಂಧಗಳ ನಡುವೆ ಮೂರನೇ ವ್ಯಕ್ತಿ ಪ್ರವೇಶಿಸಿ ಇಬ್ಬರ ನಡುವೆ ಮನಸ್ತಾಪ ಉಂಟು ಮಾಡಲು ಪ್ರಯತ್ನ ಪಟ್ಟರೂ ಸಹ ಅದಕ್ಕೆ ತಲೆ ಕೆಡಿಸಿಕೊಳ್ಳದೆ ನಾವೇನು, ನಮ್ಮವರೇನು ಅಂತ ಬಲವಾದ ನಂಬಿಕೆ ನಮ್ಮೊಳಗೆ ಇದ್ದರೆ ಮೂರನೇ ವ್ಯಕ್ತಿ ಅಲ್ಲ ಅಂತ ನೂರು ಜನ ಬಂದರೂ ಯಾವ ಸಂಬಂಧಗಳನ್ನು ಮುರಿಯುವುದಕ್ಕೆ ಆಗದೆ ಅವರೇ ಸುಮ್ಮನಾಗುತ್ತಾರೆ. ಅದನ್ನು ಬಿಟ್ಟು ಅವರ ಮಾತುಗಳಿಗೆ ಮರುಳಾಗಿ ಕುಣಿದರೆ ಅವರ ಸ್ವಾರ್ಥಕ್ಕೆ ನಮ್ಮನ್ನು ಬಲಿಪಶು ಮಾಡುತ್ತಾರೆ. ಅದಕ್ಕೆ ಬೇರೆಯವರ ಮಾತುಗಳಿಗೆ ಕಿವಿ ಕೊಡದೆ ನಿಮ್ಮ ನಿಮ್ಮ ನಡುವೆ ಬಲವಾದ ನಂಬಿಕೆಯಿರಬೇಕು.
ಸಂಬಂಧಗಳ ನಡುವೆ ನಾನು ಎಂಬ ಅಹಂ ಇರಬಾರದು. ನಾನು ಎಂಬ ಅಹಂ ಇದ್ದರೆ ಎತ್ತು ಏರಿಗೆ ಎಳೆದರೆ ಕೋಣ ನೀರಿಗೆ ಎಳೆಯುತ್ತದೆ. ಹಾಗೆ ಆಗುತ್ತೆ ಪರಿಸ್ಥಿತಿ. ಸಂಬಂಧಗಳು ಆಲದಮರದ ತರಹ ಇರಬೇಕು. ತನ್ನ ಬಿಳಿಲುಗಳಿಂದ ಕೂಡಿಕೊಂಡು ತನ್ನದೇಯಾದ ದೊಡ್ಡ ತೋಪನ್ನು ಸೃಷ್ಟಿಸುತ್ತದೇಯೊ ಆಗಿದ್ದರೆ ಯಾರು ಏನೇ ಮಾಡಿದ್ರು ನಮ್ಮ ನಮ್ಮ ಸಂಬಂಧಗಳ ಒಗ್ಗಟ್ಟನ್ನು ಮುರಿಯುವುದಕ್ಕೆ ಆಗುವುದಿಲ್ಲ.
‘ಇವತ್ತು ಇಷ್ಟು ಹೇಳಿದ್ದು ಸಾಕು. ಮುಂದೆ ಯಾವಾಗಲಾದರೂ ಹೇಳುತ್ತೇನೆ. ಸಂಬಂಧಗಳ ಮಹತ್ವ ತಿಳಿದುಕೊಂಡಿರಲ್ಲವೇ ಮಕ್ಕಳೇ ತಡವಾಯಿತು. ಇಲ್ಲೇ ಮಲಗಿ ಬೆಳಗ್ಗೆ ಎದ್ದು ತಿಂಡಿ ತಿಂದು ಹೋಗಿರುವಿರಂತೆ. ರುಕ್ಕು ಅವರಿಗೆ ಮಲಗೋಕೆ ವ್ಯವಸ್ಥೆ ಮಾಡಿ. ನೀನು ಮಲಗು.. ನಾನು ಮಲಗುತ್ತೇನೆ’.
‘ಶುಭರಾತ್ರಿ ಮಕ್ಕಳೇ..ಬರಿ ಮೊಮ್ಮಕ್ಕಳಿಗೆ ಹೇಳಿದೆ ಅಂತ ಬೇಜಾರ್ ಮಾಡ್ಕೊಬೇಡ್ವೆ ರುಕ್ಕು..ನಿನಗೂ ಶುಭರಾತ್ರಿ’.
‘ಏ… ಸುಮ್ಮನೆ ಮಲಕ್ಕೊಳ್ರಿ’.
ಸಂಬಂಧಗಳು ಉಳಿಯಬೇಕಾದರೆ ಅಹಂಕಾರವಲ್ಲ, ಅರ್ಥಮಾಡಿಕೊಳ್ಳುವಿಕೆ ಬೇಕು; ಹಠವಲ್ಲ, ಕ್ಷಮೆ ಬೇಕು; ಮೂರನೇ ವ್ಯಕ್ತಿಗಳ ಮಾತಿಗಿಂತ ನಮ್ಮವರ ಮೇಲೆ ಇರುವ ನಂಬಿಕೆ ಮುಖ್ಯ. ಜೀವನದ ಕೊನೆಯ ಘಟ್ಟದವರೆಗೂ ಜೊತೆಯಾಗಿರಲು ಪ್ರೀತಿ, ಸಹನೆ ಮತ್ತು ಹೊಂದಾಣಿಕೆಯೇ ಅಡಿಗಲ್ಲು.
- ಬಿ. ಆರ್.ಯಶಸ್ವಿನಿ
