ಕರೆಯದೆ ಬರುವುದು ಉಗಾದಿ…ಕೇಳದೆ ಕವಿ ತೋರುವ ಸುಹಾದಿ…ಬೇವಿನ ರಸಕೆ ಬೆಲ್ಲದ ಪಾಕ…ಬೆಂಶ್ರೀ ರವೀಂದ್ರ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…
ಸಂವತ್ಸರಗಳಿಗಿಲ್ಲ ಲಗಾಮು
ಅದಕೆ ಖುಷಿಯ ಹಂಗಾಮು
ನೋವಿಗೆ ಹಚ್ಚಿ ಮುಲಾಮು
ಕಾಲರಾಯಗೆ ಹಾಕಿ ಸಲಾಮು
ಬಾಗಿಲಿಗೆ ಚಿಗುರಿನ ತೋರಣ
ಅಡುಗೆಲಿ ಕಣಕದಿ ಹೂರಣ
ಬೇವಿನ ರಸಕೆ ಬೆಲ್ಲದ ಪಾಕ
ಪಂಚಾಂಗ ಶ್ರವಣದ ಟೇಕ
ಎಲೆಯುದಿರಿಸಿ ಹೂಮಳೆಗೈದು
ಹಸುರಲಿ ಹೊಳೆಯುವ ಹೊಂಗೆ
ಸುಗಂಧ ಸೂಸಿ ಅರಳಿದೆ ಸಂಪಿಗೆ
ಬರದಲೂ ನೀಗದ ಛಲ ಬುವಿಗೆ
ಕರೆಯದೆ ಬರುವುದು ಉಗಾದಿ
ಕೇಳದೆ ಕವಿ ತೋರುವ ಸುಹಾದಿ
ಜಿದ್ದಾಜಿದ್ದಿಲಿ ಸಾವಿನ ರಣರಣ
ಯಾರದೋ ತೆವಲಿಗೆ ರಕ್ತಪಣ
ಜಾರುವ ಕ್ಷಣಕಿಲ್ಲವು ತಡೆಯು
ಇರುವ ಕ್ಷಣದಲಾಗಲಿ ಭಾಗ್ಯವು
ಮಂಜಾಗದ ಜಾಗರ ಊಟವು
ಒಗ್ಗಟ್ಟಿನ ನಡೆ ಮೇಲೋಗರವು
- ಬೆಂಶ್ರೀ ರವೀಂದ್ರ
