‘ಸಂಬಂಧ’ ಸಣ್ಣಕತೆ – ಗುರು ಮೂರ್ತಿ

ತುತ್ತು ಅನ್ನ ಹಾಕಿದವಳಿಗೆ ಸೀರೆ ಕೊಡಿಸಿರುವೆ, ಕುಪ್ಪಸ ತಂದಿರುವೆ, ಕೈಗಳಿಗೆ ಬಳೆಗಳ ಹಾಕಿರುವೆ, ಮುಡಿಗೆ ಹೂವನ್ನುಇಟ್ಟಿರುವೆ ಕೇಳಿದ್ದನ್ನು ಕೊಟ್ಟಿರುವೆ ಆದರೆ ಅವಳ ತುಟಿಗಳಿಗೆ ಚುಂಬನ ಮಾತ್ರ ಕೊಟ್ಟಿಲ್ಲ. ಏಕೆ? ಅಂತೀರಾ, ಗುರು ಮೂರ್ತಿ ಅವರು ಯಾವ ಸಂಬಂಧದ ಕತೆಯನ್ನು ಓದುಗರಿಗೆ ಹೇಳುತ್ತಿದ್ದಾರೆ ತಪ್ಪದೆ ಮುಂದೆ ಓದಿ…

ಅವಳ ಜೊತೆ ನಾನಿರುವುದು ಸತ್ಯ.ಮನೆಯನ್ನು ಬಿಟ್ಟು, ನಾನವಳ ಮನೆಯಲ್ಲಿರುವುದು ಸುಳ್ಳಲ್ಲ.ಬೇಸರವಾದಗ ನನಗೆ ಅವಳೇ ಆಸರೆ. ಮನೆ, ಮನೆಯವರು ಬೇಡವೆನಿಸಿದಾಗ ಅವಳೇ ನನಗೆ ಬೇಕು ಅನಿಸುತ್ತಿದ್ದಳು. ನಮ್ಮಿಬ್ಬರ ಮಧ್ಯೆ ಇಲ್ಲದ ಸಂಬಂಧಗಳನ್ನು ಕಟ್ಟಿ ಮಾತನಾಡಿಕೊಳ್ಳುವರೆ ಹೆಚ್ಚು. ಅವಳನ್ನು ಇಟ್ಟುಕೊಂಡಿದ್ದಾನೆ ಅಂತಾರೆ.

ನಮ್ಮಿಬ್ಬರ ಸಂಬಂಧ ಎಂತಹುದು ಎಂಬುದು ನಮ್ಮಿಬ್ಬರಿಗೆ ಗೊತ್ತು. ಯಾರೂ ಊಹಿಸಲಾರದ‌ ಅನುಬಂಧ ,ಆ ಸಂಬಂಧ ಹೇಗೆ ಬೆಳೆಯಿತು ಎಂಬುದನ್ನು ಈಗ ಇಬ್ಬರು ಮರೆತು ಬಿಟ್ಟಿರುವೆವು.ಈಗ ಅದು ಅಪ್ರಸ್ತುತ. ಸಮಾಜ ಏಕೆ ಒಂದು ಗಂಡು ಒಂದು ಹೆಣ್ಣು ಒಟ್ಟಿಗೆ ಇದ್ದರೆ ಒಂದೇ ದೃಷ್ಟಿಯಿಂದ ನೋಡುತ್ತೆ ಅಂತ ಬಹಳ ಸಾರಿ ಯೋಚನೆ ಮಾಡಿದ್ದಿನಿ. ಆದರೆ ಉತ್ತರ ಮಾತ್ರ ಸಿಕ್ಕಿಲ್ಲ. ಉತ್ತರವನ್ನು ಹುಡುಕುವುದಕ್ಕೆ ಇಳಿಯಲಿಲ್ಲ. ಅವಳು ಯಾರು? ಎಲ್ಲಿಹಳು? ಏಕೆ ನಮ್ಮಿಬ್ಬರ ಮಧ್ಯೆ ಆ ಬೆಸುಗೆ ಬೆಳೆಯಿತು? ನಾನೇಕೆ ಅವಳ ಹಿಂದೆ ಬಿದ್ದೆ? ಅವಳಿಲ್ಲದೆ ನನ್ನ ಬದಕು ಇಲ್ಲವೆ ಇಲ್ಲ ಎಂದು ಏಕೆ ಅಂದ್ಕೊಂಡೆ.ಅವುಗಳನ್ನು ಹುಡುಕುವ ತಿಳಿಯುವ ತಾಳ್ಮೆ ನನಗಿಲ್ಲ.

ಕುಡಿದು ಬೀದಿಯಲ್ಲಿ ಬಿದಿದ್ದೆ. ಯಾರೂ ಎತ್ತಿ ಮನೆಗೆ ಕರೆದುಕೊಂಡು ಹೋಗಲಿಲ್ಲ. ಆಗ ಬಂದವಳೆ ಅವಳು.ನನ್ನ ಅವಳ ಮನೆಗೆ ಕರೆದ್ಯೊಯ್ದಳು.ನಾನು ವಾಂತಿ ಮಾಡಿದ ಬಟ್ಟೆಗಳನ್ನು ಬದಲಿಸಿದಳು.ತನ್ನ ಗುಡಿಸಿಲಿನಲ್ಲಿ ಮಲಗಿಸಿದಳು. ಹಸಿದಿದ್ದೆ,ಕರೆದು ತುತ್ತು ಅನ್ನ ಹಾಕಿದಳು, ತುತ್ತು ಗಳ ಮಾಡಿ ಉಣಿಸಿದಳು. ಆ ತುತ್ತು ಅನ್ನದಿಂದಲೇ ಇಬ್ಬರ ನಡುವಿನಲ್ಲಿ ಬೆಸುಗೆ ಬೆಸೆಯಿತು. ಇಬ್ಬರ ನಡುವಿನ ಬೆಸುಗೆಯನ್ನು ಸ್ನೇಹ ಅಂತಿರೊ? ಪ್ರೀತಿ ಅಂತಿರೊ? ಏನು ಅಂತಿರೊ? ನನಗೆ ಬೇಕಾಗಿಲ್ಲ. ಒಟ್ಟಿನಲ್ಲಿ ಇಬ್ಬರು ಒಟ್ಟಿಗೆ ಇರುವಂತೆ ಮಾಡಿದ್ದು ಎಂಬುದು ಮಾತ್ರ ಸತ್ಯ.

ತುತ್ತು ಅನ್ನ ಹಾಕಿದವಳಿಗೆ ಸೀರೆ ಕೊಡಿಸಿರುವೆ, ಕುಪ್ಪಸ ತಂದಿರುವೆ, ಕೈಗಳಿಗೆ ಬಳೆಗಳ ಹಾಕಿರುವೆ, ಮುಡಿಗೆ ಹೂವನ್ನುಇಟ್ಟಿರುವೆ ಕೇಳಿದ್ದನ್ನು ಕೊಟ್ಟಿರುವೆ ಆದರೆ ಅವಳ ತುಟಿಗಳಿಗೆ ಚುಂಬನ ಮಾತ್ರ ಕೊಟ್ಟಿಲ್ಲ. ಏಕೆ? ಅಂತಿರಾ, ಅವಳು ಎಂದಿಗೂ ನನಗೆ ಚುಂಬನ ಬೇಕು ಅಂತ ಕೇಳಲಿಲ್ಲ ನಾನು ಕೊಡಲಿಲ್ಲ. ಅವಳು ಪಕ್ಕದ ರಾಜ್ಯದ ಆಂಧ್ರದವಳು.ಅಪ್ಪ ಅಮ್ಮನ ಜೊತೆ ಗುಂಟೂರು ನಿಂದ ಬಂದವಳು.ನಮ್ಮ ಹೊಲ ಮಾಡಲು ಬಂದಿದ್ದರು.ಹೊಲದಲ್ಲಿಯೇ ಗುಡಿಸಲು ಹಾಕಿಕೊಂಡಿದ್ದರು. ನನ್ನದು ದೊಡ್ಡ ಮನೆ,ಮನೆ ಮಾತ್ರವಲ್ಲ ಮನೆತನ ಕೂಡ ದೊಡ್ಡದು‌.ಅಪ್ಪ ಊರ ಶಾನಭೋಗ.ಊರಲ್ಲಿ ಗೌರವ ಹೆಚ್ಚಿತ್ತು. ಎಲ್ಲರೂ ಮಾರ್ಯದೆ ಕೊಡ್ತ ಇದ್ದರು. ಅಪ್ಪನ ಮನೆಯನ್ನು ಮನೆತನವನ್ನು ಬಿಟ್ಟು ಹೊಲದಲ್ಲಿ ಹಾಕಿದ ಅವರ ಗುಡಿಸಲು ಸೇರಿದೆ.ನಾ ಗುಡಿಸಲು ಸೇರುವುದಕ್ಕೆ ಅವಳೇ ಕಾರಣ. ಅವಳೇ ನನ್ನ ಆ ಗುಡಿಸಲಿಗೆ ಕರೆದುಕೊಂಡು ಹೋಗಿ ಇಟ್ಟಿದ್ದು.

ಆ ದಿನ ನಾನು ಕುಡಿದಿದ್ದೆ.ಶಾನಭೋಗರ ಮಗ ಕುಡುಕ ಅಂತಲೇ ಎಲ್ಲರು ನನ್ನ ಕರೀತಾ ಇದ್ದರು. ಕುಡಿತದ ಅಭ್ಯಾಸ ಇತ್ತೆ ಹೊರತು, ಹೆಣ್ಣುಗಳ ಸಹವಾಸ ಇರಲಿಲ್ಲ. ವಿಪರೀತವಾಗಿ ಕುಡಿತಾ ಇದ್ದೆ,ಒಂದೆರಡು ಬಾರಿ ಕುಡಿದು ರಸ್ತೆಯಲ್ಲಿ ಮಲಗಿದ್ದು ಇದೆ. ಯಾರೊ ಪುಣ್ಯತ್ಮರು ಮನೆಗೆ ತಂದು ಹಾಕಿದ್ದರಂತೆ.ಆಗ ಅಮ್ಮ ನನ್ನ ಸ್ಥಿತಿ ಕಂಡು ಕಣ್ಣೀರು ಹಾಕಿ,ಇನ್ನ ಮೇಲೆ ಕುಡಿಯೋದಿಲ್ಲ ಅಂತ ಪ್ರಮಾಣ ಮಾಡು ಅಂತ ಪ್ರಮಾಣ ಮಾಡಿಸಿಕೊಂಡರು.ಪ್ರಮಾಣ ಮಾಡಿದ ದಿನದಿಂದ ಕುಡಿಯೊದನ್ನು ಬಿಟ್ಟು ಬಿಟ್ಟಿದೆ. ನಾನು ಅವಳ ಮನೆಯಲ್ಲಿ ಕಾಲ ಕಳೆಯೊದು ಅಮ್ಮನಿಗೆ ಗೊತ್ತಾಗಿ,ಮತ್ತೆ ಆಣೆ ಮಾಡಿಸಲು ಮುಂದಾದಳು,ನನ್ನ ಮನಸ್ಸು ಅವಳನ್ನು ಬಿಟ್ಟಿರಲು ಒಪ್ಪಲಿಲ್ಲ.ಅವಳನ್ನು ಬಿಟ್ಟಿರಲು ನನ್ನಿಂದ ಆಗುತ್ತಿರಲಿಲ್ಲ.

ಮಗನಿಗೆ ಮದುವೆ ಮಾಡಿದರೆ ಸರಿ ಹೋಗುತ್ತಾನೆ ಎಂದು ಅಮ್ಮ ಒಂದೆರಡು ಹೆಣ್ಣುಗಳ ನನ್ನ ಮುಂದೆ ಕೂಡಿಸಿದಳು .ಯಾರನ್ನು ಒಪ್ಪಲಿಲ್ಲ.ನನಗೆ ಮದುವೆ ಮಾಡಿಕೊಳ್ಳಲು ಇಷ್ಟವಾಗಲಿಲ್ಲ. ಅವಳ ಮನೇಲಿ ಸದಾ ಇರಬೇಕು,ಅವಳು ಮಾಡಿದ ಹಾಕಿದ್ದನ್ನು ತಿನ್ನಬೇಕು,ಅವಳ ಜೊತೆಯೇ ಇರಬೇಕು ಎಂದು ಕೆಲವೊಮ್ಮೆ ವಾರಗಟ್ಟಳೆ ಅವಳನ್ನು ಬಿಟ್ಟು‌ ಕದಲತ್ತಿರಲಿಲ್ಲ. ಹಿತನ್ಮಯಿ ಎಂದು ಕೂಗಿದೆ. ನನ್ನ ಕೂಗಿಗೆ ಗೆಜ್ಜೆಗಳ ಸದ್ದು ಕೇಳಿ ಬಂತು. ಅವಳೇ ಬಂದಿದ್ದು, ಗುಡಿಸಲ ಹೊರಗೆ ಹೂವನ್ನು ಕೊಯ್ಯುತ್ತಿದ್ದಳು.ಕೊಯ್ದ ಹೂವುಗಳ ಬುಟ್ಟೆಯಲ್ಲಿ ಹಿಡಿದು ನನ್ನ ಬಳಿ ಹೆಜ್ಜೆ ಹಾಕಿದಳು. ಹಗ್ಗದ ಮಂಚದ ಮೇಲೆ ಮಲಗಿದ್ದೆ. ಹಸಿವಾಗ್ತ ಇದೆ ಎಂದು ಕೇಳಿದೆ.ಬೆಳಿಗ್ಗೆ ಊಟ ಇಷ್ಟು ಬೇಗ ಜೀರ್ಣ ಆಗಿ ಹೋಯಿತ ಎಂದು ನಕ್ಕಳು.
ಏನಾದರು ಕೆಲಸ ಮಾಡು. ಒಂಟಿಯಾಗಿ ಮನೇಲಿ ಹೀಗಿರಬೇಡ ಎಂದಳು.ಕೆಲಸ ನನಗೆ ಯಾವ ಕೆಲಸ,ದುಡ್ಡು ಬೇಕಾದರೆ ಕೇಳು ಕೊಡ್ತಿನಿ ಅಂದೆ.ಯಾರಿಗೆ ಬೇಕು ನಿನ್ನ ದುಡ್ಡು,ನಿನ್ನ ಹೀಗೆ ನಾನೆ ಸಾಕಬಲ್ಲೆ,ಆದರೆ ಉದ್ಯೋಗಂ ಪುರುಷ ಲಕ್ಷಣಂ ಎಂದಳು ಹಿತನ್ಮಯಿ.

ಅಪ್ಪ ಮಾಡಿಟ್ಟ ಆಸ್ತಿನಾ ಐದು ತಲೆಮಾರು ತಿಂದರೂ ಸವೆಯೊದಿಲ್ಲ,ನಾನೇಕೆ ಉದ್ಯೋಗ ಮಾಡಲಿ ಎಂದು ಕೇಳಿದೆ.ಅದಕ್ಕೆ ಉತ್ತರವಾಗಿ ನಕ್ಕು ಬಿಟ್ಟಳು. ಲೋಟದಲ್ಲಿ ಹಾಲು, ಆ ಹಾಲಿಗೆ ಸಕ್ಕರೆ ಹಾಕಿಕೊಂಡು ತಂದಿದ್ದಳು.ಅವಳ ಕೈಯಲ್ಲಿನ ಹಾಲಿನ ಲೋಟ ಕೈಗೆ ತೆಗೆದು ಕೊಂಡು ಗಟ ಗಟ ಕುಡಿದು ಬಿಟ್ಟೆ .ಸಮಾಧಾನ ಎನಿಸಿತು. ಕೆಲಸ ಇಲ್ಲದೆ ನೀ ಸುಮ್ಮನೆ ಕೂಡಬೇಡ ,ಏನಾದರು ಒಂದು ಕೆಲಸವನ್ನು ಹುಡುಕಿಕೊ ಎಂದು ಪದೇ ಪದೇ ಹೇಳಿದಳು ಹಿತನ್ಮಯಿ. ದುಡಿಯೊದು ಏತಕ್ಕಾಗಿ ಹಣ ಗಳಿಸುವುದಕ್ಕಾಗಿ,ಆ ಹಣ ನನ್ನ ಮನೇಲಿ ಕಾಲು ಮುರುಕೊಂಡು ಬಿದ್ದಿರುವಾಗ ಕೆಲಸ ಮಾಡು ಎಂದು ಗಂಟು ಬಿದ್ದಾಳೆ ಎಂದು ಅವಳ ಮೇಲೆ ಬೇಸರವಾಯಿತು.

ಗುಡ್ಡದ ಮಲ್ಲಯ್ಯನ ಗುಡಿಗೆ ಇಬ್ಬರು ಹೋಗಿ ಬರೋಣ ಬಾ ಎಂದು ಕರೆದಳು ಹಿತನ್ಮಯಿ.ಬೇಡ ಬರೊಲ್ಲ ಅಂದ್ರೆ ಚೆನ್ನಾಗಿ ಬೈತಾಳೆ ಎಂದು ಹೊರಡಲು ಸಿದ್ದನಾದೆ. ಬಿಳಿ ಪಂಚೆ, ಬಿಳಿ ಷರಟ್ ಕೊಟ್ಟಳು, ಕೆದರಿದ ಕೂದಲನ್ನು ಅವಳೇ ಬಾಚಿದಳು. ತುಟಿ ಅಂಚಿನ ಮೀಸೆಯ ಮೇಲೆ ಕೈಯಾಡಿಸಿದಳು, ನಕ್ಕು ಐದು ನಿಮಿಷದಲ್ಲಿ ಬರ್ತಿನಿ ಎಂದು ಗುಡಿಸಿಲಿನ ಮರೆಗೆ ಹೋದಳು. ಬಿಳಿ ಬಣ್ಣದ ಸೀರೆಯುಟ್ಟು,ಅದರ ಅಂಚಿನ ಬಣ್ಣದ ಕೆಂಪು ರವಿಕೆ ತೊಟ್ಟು,ಉದ್ದನೇಯ ಸೆರಗನ್ನು ಬಿಟ್ಟು,ತಲೆಯ ತುಂಬಾ ದುಂಡು ಮಲ್ಲಿಗೆ ಮುಡಿದು,ಹಣೆಗೆ ಚಿಕ್ಕದಾದ ಕುಂಕುಮದ ಬೊಟ್ಟು ಇಟ್ಟು, ತುಟಿಗೆ ಕೆಂಪನೇಯ ರಂಗನ್ನು ಸವರಿ ಚೆಂದದ ಗೊಂಬೆಯಂತೆ ಕಾಣುತ್ತಿದ್ದಳು ಹಿತನ್ಮಯಿ.

ಇಬ್ಬರು ಸೇರಿ ಗುಡ್ಡದ ಮಲ್ಲಯ್ಯನ ಗುಡಿಗೆ ಹೊರಟು ನಿಂತೆವು.ಇಬ್ಬರನ್ನು ಊರಿನ ಜನ ವಿಚಿತ್ರ ರೀತಿಯಲ್ಲಿ ನೋಡಿ,ತಮ್ಮಲ್ಲಿಯೇ ಗುಸುಗುಸು ಮಾತಾಡಿಕೊಂಡರು. ಕೆಲವರು ಪ್ರೇಮಿಗಳು ಅಂದ್ರು,ಇನ್ನೂ ಕೆಲವರು ಅವಳನ್ನು ಇಟ್ಟುಕೊಂಡಿರುವೆ ಅಂದ್ರು,ಮತ್ತೆ ಕೆಲವರು ಭಾರೀ ಕುಳನೇ ಬುಟ್ಟಿಗೆ ಹಾಕಿಕೊಂಡಾಳೆ ಅಂದ್ರು. ಲೋಕಾಭಿನ್ನರುಚಿ ಅಲ್ವಾ! ಮಾತನಾಡುವವರ‌ ಬಾಯಿ ಮುಚ್ಚೊಕೆ ಆಗುತ್ತಾ? ಇಬ್ಬರು ಹೋಗಿ ಗುಡ್ಡದ ಮಲ್ಲಯ್ಯಗೆ ಕಾಯಿ ಒಡೆಸಿಕೊಂಡು ಬಂದೆವು. ಬುಡಂಪಾಡು. ಗುಂಟೂರು ಜಿಲ್ಲೆಯ ಗ್ರಾಮ.ಇದು ಹಿತನ್ಮಯಿಯ ಹುಟ್ಟೂರು.ಆ ಗ್ರಾಮಕ್ಕೆ ನನ್ನ ಕರೆದ್ಯೊಯ್ದಳು.ಆ ಊರಿನ ಪರಿಸರ ನನಗಿಷ್ಟವಾಯಿತು.ಅಲ್ಲಿಯ ಜನರು ಶ್ರಮ ಜೀವಿಗಳು.ಗದ್ದೆಯಲ್ಲಿ ಮೈಮುರಿದು ದುಡಿಯುತ್ತಿದ್ದರು.
ಆ ಗ್ರಾಮಕ್ಕೆ ಹೋದಾಗ,ಅಲ್ಲಿಯ ಶ್ರಮ ಜೀವಿಗಳ ಪ್ರಭಾವ ನನ್ನ ಮೇಲಾಯಿತು.ಶ್ರೀಮಂತರು ಅವರ ಮನೆಯವರು ಗದ್ದೆಯಲ್ಲಿ ದುಡಿಯುತ್ತಿದ್ದರು.ಅವರ ಶ್ರೀಮಂತಿಕೆಯ ಮುಂದೆ ನನ್ನ ಶ್ರೀಮಂತಿಕೆ ಶ್ಯೂನ್ಯ ಎನಿಸಿತು.

ಆ ಊರಿನ ಜನರು ಆದೆಷ್ಟು ಪ್ರಭಾವ ಬೀರಿದರೆಂದರೆ‌ ನಾನು ದುಡಿಯಬೇಕು ಎಂಬ ತುಡಿತ ನನ್ನಲ್ಲಿ ಹೆಚ್ಚಾಯಿತು.ಅಜ್ಜ ಅಪ್ಪ ಸಂಪಾದಿಸಿದ ದುಡ್ಡು ನನಗೆ ಬೇಡವೆನಿಸಿತು.
ಎರಡು ಎಕರೆ ಭೂಮಿಯನ್ನು ಆ ಗ್ರಾಮದಲ್ಲಿ ಖರೀದಿಸಿದೆ.ಬೇಸಾಯಕ್ಕೆ ಮುಂದಾದೆ,ನನ್ನ ಜೊತೆಯಾಗಿ ನಿಂತಳು.ನಾನೆ ಬೆಳೆದು ,ಬೆಳೆದ ಬೆಳೆಯನ್ನು ಮಾರಿ,ಮಾರಿದ ಹಣ ಕೈಯಲ್ಲಿ ಹಿಡಿದಾಗ ಕೈಗಳು ನಡುಗಿದವು. ಏನೊ ಸಾಧಿಸಿದ ಹಾಗೆ ಅನಿಸಿತು,ಜೀವನದಲ್ಲಿ ನಾನು ಈ ಮಟ್ಟಕ್ಕೆ ಬರುವೆನೆಂದು ಕನಸಿನಲ್ಲೂ ಎಣಿಸಿರಲಿಲ್ಲ.ನನ್ನ ಎಲ್ಲಾ ಈ ಸಾಧನೆಗೆ ಕಾರಣ ಹಿತನ್ಮಯಿ. ನನ್ನ ಬಾಳಲ್ಲಿ ಭದ್ರವಾಗಿ ಹೆಜ್ಜೆ ಹಾಕಿದ ಹಿತನ್ಮಯಿ ಯಾರು? ಗೆಳತಿಯೇ? ಪ್ರೇಯಸಿಯೇ? ಬಾಳ ಸಂಗಾತಿ ಆಗ ಬಯಸಿದವಳೇ? ಜನರು ಮಾತನಾಡುವ ಹಾಗೆ ಇಟ್ಟು ಕೊಂಡವಳೇ? ಇವು ಯಾವುದು ಅಲ್ಲ .ಅವಳು ಹಿತನ್ಮಯಿ ಅಷ್ಟೆ.ಅವಳು ನನ್ನ ಹಿತನ್ಮಯಿ.ಅವಳು ನನ್ನ ಬದಕನ್ನು ಬದಲಿಸಿದ ಹಿತನ್ಮಯಿ.ಯಾರ್ಯರು ಏನೇ ಅಂದು ಕೊಳ್ಳಲಿ ನಾ ತಲೆ ಕೆಡಿಸಿಕೊಳ್ಳುವುದಿಲ್ಲ.ಅವಳು ನನ್ನವಳು,ನನ್ನ ಹಿತನ್ಮಯಿ. ನಮ್ಮಿಬ್ಬರ ನಡುವಿನ ಸಂಬಂಧಕ್ಕೆ ನೀವು ಏನು ಹೇಳುವಿರಿ?.

– ಪ್ರೀತಿಯಿಂದ


  • ಗುರು ಮೂರ್ತಿ

5 1 vote
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW