ಸರೋದ್ ಮಾಂತ್ರಿಕ ಡಾ. ರಾಜೀವ್ ತಾರಾನಾಥ್ ಸಂಯೋಜಿಸಿ ವಾಣಿ ಜಯರಾಂ ಹಾಡಿರುವ ಬೇಂದ್ರೆ ಗೀತೆಯನ್ನು ಇಲ್ಲಿ ನೀಡಿರುವೆ. ಅದನ್ನು ಕೇಳುವುದಕ್ಕಿಂತ ಮೊದಲು ವಿಜಯಭಾಸ್ಕರ್ ಅವರು ಸಂಗೀತ ನೀಡಿರುವ ಇದೇ ಗೀತೆಯನ್ನು ಕುಸುಮಾ ಅವರ ಧ್ವನಿಯಲ್ಲಿ ಕೇಳಿ ಪ್ರಫುಲ್ಲಿತರಾಗಿ. – ಕೆ. ರಾಜಕುಮಾರ್ , ತಪ್ಪದೆ ಮುಂದೆ ಓದಿ…
ನನಗೂ ಸಂಗೀತಕ್ಕೂ ಸುಮಾರು 47 ವರ್ಷಗಳ ನಿರತರ ನಂಟು. ಗೀತೆಯ ಜೊತೆ ಸಂಗೀತದ ಬೆಸುಗೆ ನನ್ನದು. ಸಂಭ್ರಮದ ಸಿತಾರ್ ಎಂದರೆ ಬಲು ಮೋಜು. ಆದರೆ ಸರೋದ್ ಅದೇಕೋ ನನ್ನನ್ನು ಸೆಳೆಯಲೇ ಇಲ್ಲ. ನೋವು, ದುಃಖ ಮತ್ತು ಯಾತನೆಗೆ ಎಂದೂ ಹಿಂಚಲಿ ಕೀಲಿ (Rewind key) ಒತ್ತಿ ಅಭ್ಯಾಸವಿಲ್ಲ. ನೆನಪುಗಳ ಮಾತು ಮಧುರವಷ್ಟೇ. ಹಾಗಾಗಿ ಸಂಕಟ ಮತ್ತು ಯಾತನೆಯನ್ನು ಬದುಕಿನಿಂದ ಗಡಿಪಾರು ಮಾಡಿದ್ದೇನೆ. ಸೂತಕದ ಸ್ಥಿತಿಯಿಂದ ನನ್ನನ್ನು ಪಾರುಮಾಡಿದ್ದೇ ಸಂಗೀತ. ಅದು ಚಿತ್ರಗೀತೆ, ರಂಗಗೀತೆ, ಭಾವಗೀತೆ, ಶಾಸ್ತ್ರೀಯ ಗಾಯನ ಯಾವುದೇ ಆಗಿರಲಿ ಭೇದವಿಲ್ಲ. ಕರ್ನಾಟಕ ಅಥವಾ ಹಿಂದೂಸ್ತಾನಿ ಸಂಗೀತ ಎಂದು ನಾನು ಫರಕ್ ಮಾಡಿದವನಲ್ಲ.
ಬೇಕೆಂದಾಗಲೆಲ್ಲ ಸಿತಾರ್; ಸಂತಸದ ಕಾರಂಜಿ ಚಿಮ್ಮಿಸಿ ಅರುಣರಾಗವನ್ನು ಮನದುಂಬಿಸುತ್ತಿತ್ತು. ಸರೋದಿನ ದನಿ ಸಂಕಟದ ಛಾಯೆ ಹೊತ್ತು ತರುವ ವಾದ್ಯವೆಂದೇ ನನ್ನ ತಿಳಿವಳಿಕೆಯಾಗಿತ್ತು. ಗಣ್ಯರು ಮಹಾಪ್ರಸ್ಥಾನ ಹೊಂದಿದಾಗ ದೂರದರ್ಶನದಲ್ಲಿ ರಾಷ್ಟ್ರೀಯ ಶೋಕವನ್ನು ಸಾರಲು ಬಳಸುತ್ತಿದ್ದದ್ದೇ ಇದರ ವಾದನವನ್ನು. ಹಾಗಾಗಿ ಸರೋದ್ ಮಾಂತ್ರಿಕ ಉಸ್ತಾದ್ ಅಲಿ ಅಕ್ಬರ್ ಖಾನ್, ರಾಜೀವ್ ತಾರಾನಾಥರ ವಾದನ ಕೇಳಲು ಮನವನ್ನು ಅನುಗೊಳಿಸಿಕೊಳ್ಳಲೇ ಇಲ್ಲ. ನನ್ನ ತಪ್ಪು ತಿಳಿವಳಿಕೆ, ಪೂರ್ವಗ್ರಹ ಪೀಡನೆ ಅಥವಾ ಆ ವಾದ್ಯದ ಇತರ ಸಾಧ್ಯತೆಗಳ ಅರಿವು ಹೊಂದುವ ಇರಾದೆ ಇಲ್ಲದ್ದು ಇದಕ್ಕೆ ಕಾರಣವಿರಬಹುದು.

ವಾಣಿ ಜಯರಾಂ (ಫೋಟೋ ಕೃಪೆ : google)
ಸರೋದ್ ಮಾಂತ್ರಿಕ ಡಾ. ರಾಜೀವ್ ತಾರಾನಾಥ್ ಸಂಯೋಜಿಸಿ ವಾಣಿ ಜಯರಾಂ ಹಾಡಿರುವ ಬೇಂದ್ರೆ ಗೀತೆಯನ್ನು ಇಲ್ಲಿ ನೀಡಿರುವೆ. ಅದನ್ನು ಕೇಳುವುದಕ್ಕಿಂತ ಮೊದಲು ವಿಜಯಭಾಸ್ಕರ್ ಅವರು ಸಂಗೀತ ನೀಡಿರುವ ಇದೇ ಗೀತೆಯನ್ನು ಕುಸುಮಾ ಅವರ ಧ್ವನಿಯಲ್ಲಿ ಕೇಳಿ ಪ್ರಫುಲ್ಲಿತರಾಗಿ. ವಿಜಯಭಾಸ್ಕರ್ ಅವರು ಸಂಗೀತ ನೀಡಿರುವ ಸಂಘರ್ಷ ಚಿತ್ರದಲ್ಲಿ ಕಸ್ತೂರಿಶಂಕರ್ ಹಾಡಿರುವ “ಅರಿತೆ ನಾನು ನನ್ನ ನಿಲುವ ನಿಮ್ಮ ಹೃದಯ ರಾಜ್ಯದಿ” ಧಾಟಿಯನ್ನು ಇದು ಹೋಲುತ್ತದೆ. ವಿಜಯಭಾಸ್ಕರ್ ಅವರು ಬೆಳ್ಳಿಮೋಡದಲ್ಲಿ ಬೇಂದ್ರೆ ಅವರ “ಮೂಡಲ ಮನೆಯ ಮುತ್ತಿನ ನೀರಿನ ಎರಕವ ಹೊಯ್ದ” ಗೀತೆಗೆ ಭಿನ್ನವಾಗಿ ರಾಗ ಸಂಯೋಜಿಸಿ ಗೆದ್ದವರು. ಅನಂತರ ಶರಪಂಜರದಲ್ಲಿ “ಉತ್ತರ ಧ್ರುವದಿಂ ದಕ್ಷಿಣ ಧ್ರುವಕೂ” ಗೀತೆಗೆ ರಾಗ ಸಂಯೋಜಿಸಿ ಜಯಿಸಿದವರು. ಬೇಂದ್ರೆಯವರ ಜನಪ್ರಿಯ “ಇಳಿದು ಬಾ ತಾಯೆ ಇಳಿದು ಬಾ” ಹಾಡಿನ ರಾಗ ಸಂಯೋಜಕರೂ ವಿಜಯಭಾಸ್ಕರ್ ಅವರೇ. ಆ ವೇಳೆಗಾಗಲೇ ಕಾಳಿಂಗರಾಯರು ಈ ಹಾಡಿಗೆ ಸ್ವರ ಸಂಯೋಜಿಸಿ ಸೈ ಎನ್ನಿಸಿಕೊಂಡಿದ್ದರು. ಆದರೂ ವಿಜಯಭಾಸ್ಕರ್ ಅಂಜದೆ, ಅಳುಕದೆ ಮುಂತೊಡಗಿದರು.

ವಿಜಯಭಾಸ್ಕರ್ (ಫೋಟೋ ಕೃಪೆ : google )
ಗೀತೆಯ ಆಂತರ್ಯ ಅರಿತು ರಾಗ ಸಂಯೋಜಿಸಬೇಕು. ಆದರೆ ಗೀತೆಯ ಗ್ರಹಿಕೆ ಹೀಗೇ ಇರಬೇಕೆಂದಿಲ್ಲ. ಕವಿ ಸ್ವಾತಂತ್ರ್ಯ ಇರುವ ಹಾಗೆ ಓದುಗ, ಕೇಳುಗನ ಸ್ವಾತಂತ್ರ್ಯವೂ ಇರುತ್ತದೆ.
ಬೇಂದ್ರೆಯವರ “ಇಳಿದು ಬಾ ತಾಯೆ ಇಳಿದು ಬಾ” ಗೀತೆ ಕಾಳಿಂಗರಾಯರ ಕಂಠದಲ್ಲಿ ಜೀವಚೈತನ್ಯವು ಉಕ್ಕುಕ್ಕಿ ಮೊರೆಯುವುದನ್ನು ಮನಗಾಣಬಹುದು. ಗಂಗೆ ಭೋರ್ಗರೆದು ಇಳಿಯುವುದನ್ನೂ, ಆ ರಭಸವನ್ನೂ ಅವರು ತಮ್ಮ ಗಾಯನದಲ್ಲಿ ಸಾದರಪಡಿಸಿದ್ದಾರೆ. ನೆನೆದರೆ ಮೈ ಜುಮ್ ಎನ್ನುತ್ತದೆ. ಮನಸ್ಸು ರಸರೋಮಾಂಚನಗೊಳ್ಳು ತ್ತದೆ. ವಾಸ್ತವವಾಗಿ ಇದು ಕಾಳಿಂಗರಾಯರ ಶಿಷ್ಯ ಮೈಸೂರು ಅನಂತಸ್ವಾಮಿ ಅವರ ಸಂಯೋಜನೆ! ಕಾಳಿಂಗರಾಯರು ಬಹುವಾಗಿ ಮೆಚ್ಚಿದ ಕಾರಣಕ್ಕೆ ಅವರದೇ ಹೆಸರಿರಲಿ ಎಂದು ಅನಂತಸ್ವಾಮಿ ‘ಗುರುಭಕ್ತಿ’ ತೋರಿದರು. ಇನ್ನು ಪಿಬಿಎಸ್ ಗಾಯನ ಇದರ ಮುಂದೆ ಹಗಲಿನಬ್ಬರ ತಣ್ಣಗಾದಂತೆ ಸಪ್ಪೆ. ಏಕೋ ಏನೋ, ಗಂಗೆಯ ಚಲನೆ ಆ ಸಂಯೋಜನೆ ಯಲ್ಲಿ ಕಾಣದು.

SPB (ಫೋಟೋ ಕೃಪೆ : google)
SPB ತಾವು ಹಾಡಿದ ಸಿರಿವೆನ್ನೆಲ ಸೀತಾರಾಮಶಾಸ್ತ್ರಿ ಅವರ “ವಿಧಾತ ತಲಪುನ ಪ್ರಭವಿಂಚಿನದೀ” ತೆಲುಗು ಗೀತೆಯನ್ನು ಕುರಿತು ಹೇಳಿದ್ದು:
“ಸರಸಸ್ವರ ಸುರಝರೀ ಗಮನಮೌ ಸಾಮವೇದ ಸಾರಮಿದಿ” ಸಾಲನ್ನು ಸಾಮಾನ್ಯವಾಗಿ ಹಾಡಿದೆ. ಆದರೆ ಕೊನೆಗೆ ಅನ್ನಿಸಿದ್ದು ಸುರಝರಿಯ ಹರಿಯುವಿಕೆಯನ್ನು ಸಂಯೋಜನೆಯಲ್ಲಿ, ಗಾಯನದಲ್ಲಿ ಹಿಡಿದಿಡಬೇಕಿತ್ತು” ಎಂದು. SPB ಅವರು ವಿಜಯಭಾಸ್ಕರರ ಸಂಯೋಜನೆಯನ್ನು ಕೇಳಿದ್ದರೆ ಹೀಗೆಯೇ ಹೇಳುತ್ತಿದ್ದರು. ಕಾಳಿಂಗರಾಯರ ಗಾಯನದಿಂದ ಖಂಡಿತ ಪುಲಕಿತರಾಗುತ್ತಿದ್ದರು. ವಿಜಯಭಾಸ್ಕರ್ ಅವರು ಗಂಗೆಯ ಜುಳುಜುಳುವನ್ನು ವಾದ್ಯಗಳಲ್ಲಿ ಹಿಡಿದಿಟ್ಟಿದ್ದಾರೆ. ಆದರೆ ಕಾಳಿಂಗರಾಯರು ಬೇಂದ್ರೆಯವರ ಪದಪದಕ್ಕೂ ಜೀವ-ಭಾವ ತುಂಬಿದ್ದಾರೆ.
ಇಳಿದು ಬಾ ತಾಯೆ ಇಳಿದು ಬಾ ಎಂಬ ಗಂಗಾವತರಣ ಗೀತೆಯ ಕಡೆಯಲ್ಲಿ ಅಂಬಿಕಾತನಯನತ್ತೆ ಬಾ ಎಂದಿದೆ. ನತ್ತೆ ಎಂದು PBS ತಪ್ಪು ಹಾಡಿದರೆ ಅಥವಾ ಬೆಂದ್ರೆಯೇ ತಪ್ಪು ಬರೆದರೆ ಎಂಬ ಜಿಜ್ಞಾಸೆ ಉಂಟಾಗಿತ್ತು. ಅದಕ್ಕೆ ಉತ್ತರ ಇಲ್ಲಿದೆ:
ಅಂಬಿಕಾತನಯನತ್ತೆ ಎಂದು ಸರಿಯಾಗಿ ಹಾಡಿದ್ದಾರೆ ನಮ್ಮ ಪ್ರತಿವಾದಿ ಭಯಂಕರ ಶ್ರೀನಿವಾಸ್ = PBS.
ಅಂಬಿಕಾತನಯದತ್ತ ಎಂಬುದು ಬೇಂದ್ರೆ ಅವರ ಕಾವ್ಯನಾಮ. ಅವರ ಅತ್ತೆಯ ಹೆಸರು ಗಂಗಾಬಾಯಿ. ಬೇಂದ್ರೆ ಅವರ ಹೆಂಡತಿಯ ತಾಯಿ. ಇಳಿದು ಬಾ ತಾಯಿ ಇಳಿದು ಬಾ ಎಂದು ಬೇಂದ್ರೆ ಕರೆದಿದ್ದು, ಕೂಗಿದ್ದೂ ಗಂಗೆಯನ್ನು! ಮೊರೆ ಇಟ್ಟಿದ್ದು ಗಂಗೆಗಾಗಿ! ಅವರ ಅತ್ತೆಯ ಹೆಸರು ಗಂಗಾಬಾಯಿ ಎಂದು ಇದ್ದದ್ದರಿಂದ ಅಂಬಿಕಾತನಯನ ಅತ್ತೆ ಬಾ ಎಂದರು! = ಅಂಬಿಕಾತನಯನತ್ತೆ ಬಾ. ಇನ್ನೊಂದು ಅರ್ಥ ನತ್ತೆ ಎಂದರೆ ಈ ಕಡೆಗೆ ಎಂದರ್ಥ = ನತ್ತ = ಅತ್ತ = ಅಂಬಿಕಾತನಯನತ್ತೆ. ಗಂಗೆ ಇಳಿದು ಅಂಬಿಕಾತನಯನ ಕಡೆಗೆ/ಎಡೆಗೆ ಬರಬೇಕೆಂದು ಮೊರೆ. ಬೇಂದ್ರೆ ಸರಿಯಾಗಿ ಬರೆದಿದ್ದಾರೆ; ಗಾಯಕರು ಸರಿಯಾಗಿಯೇ ಹಾಡಿದ್ದಾರೆ. ನತ್ತೆ ಎಂಬುದು ಆ ಗೀತೆಯ ಚರಣದ ಕಡೆಯ ಪದಗಳ ಪ್ರಾಸಕ್ಕೂ ಹೊಂದಿಕೊಳ್ಳು ತ್ತದೆ: ಚಿತ್ತೆ, ಮುತ್ತೆ, ನತ್ತೆ!

ರಾಜೀವ್ ತಾರಾನಾಥ್ (ಫೋಟೋ ಕೃಪೆ : google )
ಮುಖ್ಯ ವಿಷಯವೆಂದರೆ ಒಂದು ಗೀತೆಗೆ ಹಲವು ಬಗೆಯ ರಾಗ ಸಂಯೋಜನೆಗಳಿದ್ದಾಗ ನಾವು ಅವುಗಳಲ್ಲಿ ಒಂದರ ಪರ ನಿಲ್ಲುತ್ತೇವೆ. ಇನ್ನೊಂದನ್ನು ಹೀಗಳೆಯುತ್ತೇವೆ. ಆದರೆ ನಾವು ಪೂರ್ವಗ್ರಹ ಪೀಡಿತರಾಗದೆ ಕೇಳಿ ಪ್ರತಿಕ್ರಿಯಿಸಬೇಕು. ಮನಸ್ಸು ಮುಕ್ತವಾಗಿರ ಬೇಕು; ಮುಚ್ಚಿಕೊಂಡಿರ ಬಾರದು. ವಿಜಯಭಾಸ್ಕರ್ ಅವರ ಧಾಟಿಯಲ್ಲಿ ಸಮರ್ಪಣಾ ಭಾವವಿದೆ. ರಾಜೀವ್ ತಾರಾನಾಥರ ಸಂಯೋಜನೆಯಲ್ಲಿ ಅನುಭೂತಿಯಿದೆ. ಶೃಂಗಾರಮಾಸವನ್ನು ಸ್ವಾಗತಿಸಲು ಅಣಿಯಾದ ಮನಸ್ಸು ಅದನ್ನು ಸಂಯಮದಿಂದಲೇ ಅಭಿವರ್ಣಿಸುತ್ತಿದೆ.
ಬಂತಿದೋ ಶೃಂಗಾರಮಾಸ
ಕಂತು ನಕ್ಕ ಚಂದ್ರಹಾಸ:
1) ವಿಜಯಭಾಸ್ಕರ್:
2) ರಾಜೀವ್ ತಾರಾನಾಥ್
- ಕೆ. ರಾಜಕುಮಾರ್ – ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಗೌರವ ಕಾರ್ಯದರ್ಶಿಗಳು, ಬೆಂಗಳೂರು.
