ಮೊಗ್ಗುಗಳ ಸಂವಾದ…. ಹೂಗಳ ಸ್ತನ್ಯಕ್ಕೆರಗಿದ ದುಂಬಿಗಣ..ಕವಿಯತ್ರಿ.ಶಿವದೇವಿ ಅವನೀಶಚಂದ್ರ ಅವರ ಈ ಕವಿತೆಯನ್ನು ತಪ್ಪದೆ ಮುಂದೆ ಓದಿ…
ಚಿಟ್ಟೆಗಳ ಹಿಂಡೆದ್ದು
ಹೂದಳಗಳ ತೆರೆದು
ಹಾರುವ ಹೂಗಳೇ ಆಗಿ
ಪಸರಿಸಿದ ಚೆಲುವ
ನೋಡುತ್ತಾ ನಿಂತೆ
ಎದೆಯೊಳಗೂ ನೂರಾರು
ಭ್ರಮರಗಳ ಭ್ರಮೆಗಳ
ಹಾರಲುಬಿಟ್ಟು
ಒಂದು ರೆಂಬೆಯಲಿ
ಕಾವಳದ ಕಸೂತಿಯ
ಕವಿತೆ ಬರೆದು…
ಮತ್ತೊಂದರಲ್ಲಿ
ಅರೆತುಟಿತೆರೆದ ಮೊಗ್ಗುಗಳ
ಸಂವಾದ….
ಹೂಗಳ ಸ್ತನ್ಯಕ್ಕೆರಗಿದ
ದುಂಬಿಗಣ…
ಕಳ್ಳನಗೆ ಬೀರಿ ಹೊನ್ನ ಕಾಂತಿಯಲಿ
ಹೂಗಳೆದೆಯ ಗುಟ್ಟ ಹೊರಬಿಟ್ಟ
ಇನದೇವ…
ಗರಿಬಿಚ್ಚಿ ಆಗಸಕ್ಕೆ ನೆನೆದ ಬೆಳ್ಳಕ್ಕಿಗಳ
ನಲಿವಿನ ಓಟ..ಆಟ ಬೇಟ..
ಎಲ್ಲವೂ ……
ಸೂಜಿಗಲ್ಲು ಕವಿ ಹೃದಯಕೆ
ಈ ಜಗವೇ ಒಂದು ರಸರಂಗ…
ಸವಿವ ಜಿಹ್ವೆಗೆ…
- ಶಿವದೇವಿ ಅವನೀಶಚಂದ್ರ – ನಿವೃತ್ತ ಶಿಕ್ಷಕಿ,ಕವಿಯತ್ರಿ, ಅಂಕಣಕಾರ್ತಿ, ಕೊಡಗು
