ಬೃಹತ್ ಅಣೆಕಟ್ಟಿನ ಗೋಡೆಯನ್ನೇ ಅಸಹಜವಾಗಿ ನಿಂತು ನೋಡುತ್ತಿದ್ದ ಆತನ ಕಣ್ಣಲ್ಲಿ ಆಕ್ರೋಶವಿತ್ತು, ಕಣ್ಣೀರು ಇತ್ತು, ಆತ ಯಾರು?… ಅನ್ನೋದನ್ನು ರಂಜಿತ್ ಕವಲಪಾರ ಅವರ ಅಂಕಣವನ್ನು ತಪ್ಪದೆ ಓದಿ…
ತನ್ನ ಎದುರಿಗಿದ್ದ ಬೃಹತ್ ಅಣೆಕಟ್ಟಿನ ಗೋಡೆಯನ್ನೇ ಅಸಹಜವಾಗಿ ನಿಂತು ನೋಡುತ್ತಿದ್ದ. ಆತನ ಕಣ್ಣಾಲಿಗಳು ತೇವಗೊಂಡಿದ್ದರು, ಆ ಕೆಂಪಾಗಿದ್ದ ಕಂಗಳಲ್ಲಿ ಏನೋ ಒಂದು ಆಕ್ರೋಶದ ಸುಳಿವೂ ಕಾಣಿಸುತ್ತಿತ್ತು. ಈ ವ್ಯಕ್ತಿಯನ್ನು ನಾನೆಲ್ಲೋ ನೋಡಿದ್ದೇನೆ ಎಂದು ಬಲವಾಗಿ ಅನ್ನಿಸಲು ಶುರುವಾಗಿ, ಎಲ್ಲಿ ಎಂದು ತಿಳಿಯದೇ ನಾನೂ ಅವರನ್ನು ಅಸಹಜವಾಗಿ ನೋಡುತ್ತಾ ಅವರ ಸನಿಹದಲ್ಲಿಯೇ ನಿಂತಿದ್ದೆ.
ಥಟ್ಟನೇ ಎಲ್ಲಿ ಎಂಬುದು ನೆನಪಾಗಿ, ನಾನು ಸಿಕ್ಕಾಪಟ್ಟೆ ಹೆದರಿಕೊಂಡೆ.
***
ಮಡಿಕೇರಿಯ ಹಳೆಯ ಖಾಸಗಿ ಬಸ್ ನಿಲ್ದಾಣವನ್ನು ನೀವು ನೋಡಿದ್ದರೆ, ಅಲ್ಲಿದ್ದ ಶೌಚಾಲಯದ ಪರಿಚಯವೂ ನಿಮಗೆ ಇರುತ್ತಿತ್ತು. ಸದಾ ಕೊಳಕು ಕೊಳಕಾಗಿ ಇರುತ್ತಿದ್ದ ಆ ಶೌಚಾಲಯದ ಸನಿಹದಲ್ಲೇ ಪ್ರಯಾಣಿಕರ ತಂಗುದಾಣವೂ ಇತ್ತು. ಆ ತಂಗುದಾಣದಲ್ಲಿ ಪ್ರಯಾಣಿಕರು ಮೂಗು ಮುಚ್ಚಿಕೊಂಡು ಕೂರುವಷ್ಟು ದುರ್ನಾತ ಶೌಚಾಲಯದ ಒಳಾಂಗಣದಿಂದ ಬರುತ್ತಿದ್ದ ಕಾರಣ, ಪ್ರಯಾಣಿಕರ‌್ಯಾರೂ ಆ ತಂಗುದಾಣದ ಒಳಗೆ ಹೋಗುತ್ತಿರಲಿಲ್ಲ. ತಂಗುದಾಣದ ಹೊರಗೇ ನಿಂತು, ಎಲ್ಲೆಂದರಲ್ಲಿ ಉಗಿಯುತ್ತಾ ಬಸ್ಸಿಗಾಗಿ ಅಲ್ಲೇ ಕಾಯುತ್ತಾ ನಿಂತಿರುತ್ತಿದ್ದರು.
ಕಿಕ್ಕಿರಿದು ಜನ ಅಲ್ಲಿ ಬಸ್ಸು ಹತ್ತಿ, ಇಳಿಯುವುದನ್ನು ಮಾಡುತ್ತಿದ್ದರೆ, ಕಣ್ಣು ಕಾಣದ ಭಿಕ್ಷುಕನೊಬ್ಬ ಹಾಡು ಹೇಳುತ್ತಾ ಆ ಬಸ್ಸಿನೊಳಗೆಲ್ಲಾ ಹೋಗಿ ಭಿಕ್ಷೆ ಬೇಡುತ್ತಿದ್ದ.
ಫೋಟೋ ಕೃಪೆ : google (ಸಾಂದರ್ಭಿಕ ಚಿತ್ರ )
ಪೆನ್ನು, ಏರ್ ಪಿನ್ನೂ, ಪ್ಯಾಕೇಟ್ ಕ್ಯಾಲೆಂಡರ್ ಜೊತೆಗೆ ಸೂಜಿದಾರವನ್ನೂ ಮಾರಾಟ ಮಾಡುತ್ತಿದ್ದ ವ್ಯಾಪಾರಿಯೊಬ್ಬ ರಾಗವಾಗಿ “ಪ್ಯಾಕೇಟ್ ಕ್ಯಾಲೆಂಡರ್, ಪ್ಯಾಕೇಟ್ ಕ್ಯಾಲಂಡರ್” ಎಂದು ಕೂಗುತ್ತಾ ಬಸ್ಸಿನಲ್ಲಿ ವ್ಯಾಪಾರ ಮಾಡುತ್ತಿದ್ದ. ಅಲ್ಲಿ ಇವರಿಬ್ಬರಲ್ಲದೇ ಹಾಡು ಬಾರದ ಕಾಲಿಲ್ಲದ ಭಿಕ್ಷುಕ, ಕುಂಟನಂತೆ ಅಭಿನಯಿಸುವ ಕುಡುಕ ಭಿಕ್ಷುಕನೂ ಇದ್ದ. ಪ್ಯಾಕೇಟ್ ಕ್ಯಾಲೇಂಡರ್ ಮಾರುವವನಲ್ಲದೆ ಕಡಲೇ ಮಾರುವವನೂ ಅಲ್ಲಿ ತಳ್ಳುಗಾಡಿಯಲ್ಲಿ ಕಡಲೆ ವ್ಯಾಪಾರ ಮಾಡುತ್ತಿದ್ದ. ಹೊರಾಂಗಣದಲ್ಲಿ ದಡೂತಿ ಮಹಿಳೆಯೊಬ್ಬಳು ಬುಟ್ಟಿಯಲ್ಲಿ ಗಾಜಿನ ಬಳೆಗಳನ್ನೂ ಜೊತೆಗೆ ಬಣ್ಣ ಬಣ್ಣದ ಬಿಂದಿಗಳನ್ನೂ ಮಾರಾಟ ಮಾಡುತ್ತಿದ್ದಳು.
“ಹಾಲೇರಿ, ಹಟ್ಟಿಹೊಳೆ, ಮಾದಾಪುರ ಎಂದು ಕೂಗುತ್ತಾ ಪ್ರಯಾಣಿಕರನ್ನು ತುಂಬಿಕೊಳ್ಳುತ್ತಿದ್ದ ‘ಅನುರಾಧ’ ಬಸ್ಸು ಹತ್ತಲು ನಾನು ಶಾಲೆ ಮುಗಿಸಿ ಅದೇ ಬಸ್ ತಂಗುದಾಣದಲ್ಲಿ ಕೆಲ ಕಾಲ ಭಾರದ ಶಾಲಾ ಬ್ಯಾಗ್ ಹೊತ್ತುಕೊಂಡು, ಪುರಾತನ ಸಿಮೆಂಟ್ ಕಂಬವೊಂದಕ್ಕೆ ಹೊರಗಿ ನಿಂತುಕೊಳ್ಳುತ್ತಿದ್ದೆ.
ಆ ತಂಗುದಾಣದಲ್ಲಿ ಪ್ರಯಾಣಿಕರು ಕೂರುತ್ತಿರಲಿಲ್ಲ ಎಂದು ನಾನು ಹೇಳಿದ್ದೆ. ಹಾಗಂತ ಅದರೊಳಗೆ ಮನುಷ್ಯರು ಇರುತ್ತಿರಲಿಲ್ಲಾ ಎಂದಲ್ಲ.
ಮೂತ್ರ ಮಾಡುವವರ ಬಳಿ, ಶೌಚಾಲಯ ಬಳಸುವವರ ಬಳಿ ಹಣ ಪಡೆಯಲು ಟೇಬಲ್ಲು ಹಾಕಿ, ಅಲ್ಲೊಬ್ಬ ಕುಡುಕ ಮುದುಕ ಮಧ್ಯಾಹ್ನದವರೆಗೆ ಕುಳಿತುಕೊಳ್ಳುತ್ತಿದ್ದ. ಮಧ್ಯಾಹ್ನದ ನಂತರ ಅಲ್ಲೇ ಮೂಲೆಯಲ್ಲಿ ಟೈಟಾಗಿ ಮಲಗಿಕೊಂಡಿರುತ್ತಿದ್ದ.
ಆತನೊಂದಿಗೆ ಅರೆ ಹುಚ್ಚರು, ಪೂರ್ತಿ ಹುಚ್ಚರು, ಜೊತೆಗೆ ಕುಡುಕರೂ ಆ ತಂಗುದಾಣದಲ್ಲಿ ಆಶ್ರಯ ಪಡೆಯುತ್ತಿದ್ದರು. ನಾನು ಶಾಲೆ ಮುಗಿಸಿ, ಅನುರಾಧ ಬಸ್ಸಿಗೆ ಹಾಗೆ ಕಾಯುತ್ತಾ ನಿಂತಿದ್ದ ಒಂದು ಸಂಜೆ, ಸಿಕ್ಕಾಪಟ್ಟೆ ಮೂತ್ರ ಬರುವಂತೆ ಆಗಿ, ಬೇರೆ ವಿಧಿ ಇಲ್ಲದೆ ಬಸ್ ತಂಗುದಾಣದ ಒಳಗೇ ಇದ್ದ ಶೌಚಾಲಯಕ್ಕೆ ಮೂಗು ಮುಚ್ಚಿಕೊಂಡೇ ನುಗ್ಗಿದೆ. ನುಗ್ಗಿದ ವೇಗದಲ್ಲೇ ಅಲ್ಲಿಂದ ಹೌಹಾರಿ ಓಡಿ, ಹೊರಗೆ ತುಂಬಾ ದೂರದವರೆಗೆ ತಲುಪಿದ್ದೆ. ಅಂದು ಹೇಗೋ ಮನೆ ತಲುಪಿದ್ದ ನನಗೆ ಎರಡು ದಿನ ಸುಡುವ ಜ್ವರ.
ಫೋಟೋ ಕೃಪೆ : google (ಸಾಂದರ್ಭಿಕ ಚಿತ್ರ )
ಮೂತ್ರಮಾಡಲು ಒಳಗೆ ನುಗ್ಗಿದ್ದ ನನಗೆ ಅದರೊಳಗಿದ್ದ ಗಡ್ಡಧಾರಿ ಹುಚ್ಚನನ್ನೂ ಆತನ ವೇಷವನ್ನೂ ನೋಡಿ ಭಯಗೊಂಡು, ಆತ ನನ್ನೆಡೆಗೇ ಓಡಿಬಂದಂತೆ ಅನ್ನಿಸಿ, ನಾನು ಅಲ್ಲಿಂದ ಓಡಿಹೋಗಿದ್ದೆ. ಇದಾಗಿ ವರುಷಗಳೇ ಕಳೆದು ಜಲಾಶಯಕ್ಕೆ ಬಾಗಿನ ಅರ್ಪಿಸಲು ನೀರಾವರಿ ಸಚಿವರು ಬರುವುದನ್ನು ವರದಿಮಾಡಲು ಹೋಗಿದ್ದ ನನಗೆ ಹೀಗೆ ಅಸಂಬದ್ಧವಾಗಿ ಅಣೆಕಟ್ಟನ್ನು ನೋಡುತ್ತಾ ನಿಂತಿರುವ ಈ ಮುದುಕ ಅಂದು ನನ್ನನ್ನು ಶೌಚಾಲಯದಲ್ಲಿ ಅಟ್ಟಿಸಿಕೊಂಡು ಬಂದ ಅದೇ ಮುದುಕ ಎಂದು ಅನ್ನಿಸಲು ತೊಡಗಿದ್ದ. ಶಾಲಾ ದಿನಗಳಲ್ಲಿ ಇದ್ದ ಭಯ ಈಗ ಕಡಿಮೆ ಆಗಿದ್ದ ನನಗೆ ಹಾಗೆ ಕಣ್ಣಾಲಿಗಳನ್ನು ತುಂಬಿಕೊಂಡು, ಬಿಟ್ಟ ಕಣ್ಣು ಬಿಟ್ಟು ಕೊಂಡು, ಕೆಂಪು ಕಣ್ಣು ಮಾಡಿಕೊಂಡು ನಿಂತಿದ್ದ ಆತನನ್ನು ಮಾತನಾಡಿಸುವ ಮನಸ್ಸಾಯಿತು. ನೀರಾವರಿ ಸಚಿವರು ಬರುವುದು ಇನ್ನೂ ತಡವಾಗುತ್ತದೆ ಎಂದು ಸುದ್ದಿ ತಿಳಿದ ನನಗೂ ಅವರು ಬರುವವರೆಗೆ ಬೇರೆ ಕೆಲಸ ಏನೂ ಇರಲಿಲ್ಲ. ಹಾಗಾಗಿ ಆ ಅರೆಹುಚ್ಚನ ಬಳಿಗೆ ನಡೆದು ಹೋದೆ. ಜಲಾಶಯವನ್ನು ದಿಟ್ಟಿಸಿ, ಆತ ಶಿಲೆಯಂತೆ ಕದಲದೆ ಹಾಗೇ ನಿಂತಿದ್ದ. ನಾನು ತೀರ ಸನಿಹ ಹೋಗಿ, ಧ್ವನಿಯನ್ನು ಸ್ವಲ್ಪ ಗಡುಸು ಮಾಡಿಕೊಂಡು. “ಯಾರು ನೀನು? ಇಲ್ಲೇನೂ ಮಾಡುತ್ತಿದ್ದೀಯಾ?” ಎಂದು ಕೇಳಿದೆನಷ್ಟೇ. ಆತ ನನ್ನನ್ನು ನೋಡಿದವನೇ ದೆವ್ವ ಕಂಡವನಂತೆ ಏನನ್ನೋ ಬಡಬಡಿಸುತ್ತಾ.. ಅಲ್ಲಿಂದ ಓಡಿಹೋದ. ದಿಢೀರ್ ಆತನ ಪ್ರತಿಕ್ರಿಯೆಗೆ ಹೇಗೆ ಸ್ಪಂದಿಸಬೇಕು ಎಂದು ತಿಳಿಯದೆ ನಾನು, ಆತ ಓಡುವುದನ್ನೇ ನೋಡುತ್ತಾ ಸುಮ್ಮನೆ ನಿಂತು ಬಿಟ್ಟಿದ್ದೆ.
ಇದೆಲ್ಲಾ ವಿದ್ಯಮಾನಗಳನ್ನು ದೂರದಿಂದಲೇ ಗಮನಿಸುತ್ತಿದ್ದ ಜಲಾಶಯದ ಸಿಬ್ಬಂದಿ ಏನೋ ಅನಾಹುತ ಆಯಿತೆಂದು ಭಾವಿಸಿ, ನನ್ನತ್ತ ಧಾವಿಸಿದ. ಬಂದವನೇ ಏನು? ಎತ್ತಾ? ಎಂದು ವಿಚಾರಿಸಲು ತೊಡಗಿದ. ನಾನು ನನ್ನ ಗುರುತಿನ ಚೀಟಿ ತೆಗೆದು, ಆತನಿಗೆ ನಾನು ಪತ್ರಕರ್ತ ಎಂಬುದನ್ನು ಸಾಬೀತು ಪಡಿಸಿ, ನಡೆದ ಸಂಗತಿಯನ್ನೂ ನನ್ನ ಶಾಲಾ ದಿನದ ಕೆಟ್ಟ ಅನುಭವವನ್ನೂ ಆತನಿಗೆ ಹೇಳಿದೆ. ನನ್ನ ಕಥೆ ಕೇಳಿದ ಅವನ ಮುಖದಲ್ಲಿ ಸಣ್ಣ ಕಿರುನಗೆ ಕಾಣಿಸಿತು “ಅಲ್ಲಾ ಇವರೇ ಆ ಹುಚ್ಚನೊಂದಿಗೆ ಮಾತನಾಡಲು ಹೋಗಿದ್ದೀರಲ್ಲಾ ಅದೂ ಆತ ಹುಚ್ಚ ಎಂದು ಗೊತ್ತಿದ್ದೂ ಕೂಡ” ಎಂದು ಇನ್ನಷ್ಟು ನಕ್ಕಂತೆ ನಟಿಸಿದ. ಆತ ನಕ್ಕರೂ ನಾನು ಗಂಭೀರವಾಗಿರುವುದನ್ನು ಕಂಡು ನಗು ನಿಲ್ಲಿಸಿ. “ಆತ ನಿಜವಾಗಿಯೂ ಹುಚ್ಚಾ ಇವರೇ ಇಲ್ಲೇ ಓಡಾಡಿಕೊಂಡಿರುತ್ತಾನೆ. ಏನೇನೋ ಬಡಬಡಿಸುತ್ತಾ ಇರುತ್ತಾನೆ. ಒಂದು ದಿನ ಆತನನ್ನು ಪೊಲೀಸರು ಎತ್ಹಾಕ್ಕೊಂಡು ಹೋಗಿದ್ದರು. ಮತ್ತೇ ಅವರಿಗೂ ಈತ ಹುಚ್ಚನೆಂದು ಸಾಭೀತಾಗಿ ಬಿಟ್ಟು ಕಳುಹಿಸಿದರು” ಅಂದ. ಪೊಲೀಸರು ಆತನನ್ನು ಎತ್ತಾಕಿಕೊಂಡು ಹೋದ ಕಥೆ ನಿಜಕ್ಕೂ ನಾವೆಲ್ಲರೂ ವಿಚಾರ ಮಾಡುವಂತಹಾ ಕಥೆಯೂ ಹೌದು ಎಂದು ಸಿಬ್ಬಂದಿ ಆ ಕಥೆಯನ್ನು ನನಗೆ ಪೂರ್ತಿ ಹೇಳಿದಾಗ ತಿಳಿಯಿತು.
ಫೋಟೋ ಕೃಪೆ : google (ಸಾಂದರ್ಭಿಕ ಚಿತ್ರ )
ಈ ಹುಚ್ಚ ಹಳೆಯ ಪರಿಸರ ವಾದಿಯಾಗಿದ್ದನಂತೆ. ಮರಕೊಯ್ಯುವ ಉಪಕರಣಗಳ ಅಂಗಡಿಗೆ ಒಮ್ಮೆ ಬೆಂಕಿಕೊಟ್ಟಿದ್ದ ಈತ ಅದೇ ದಿನ ಹಾರೆಕೋಲು ಒಂದನ್ನು ತಂದು ಇದೇ ಜಲಾಶಯದ ಗೋಡೆಯನ್ನು ಅಗೆಯಲು ತೊಡಗಿದ್ದನಂತೆ. ಇದನ್ನು ಗಮನಿಸಿದ ಸ್ಥಳೀಯರು ಈತನನ್ನು ಹಿಡಿದು, ಚೆನ್ನಾಗಿ ಬಾರಿಸಿ, ಪೊಲೀಸರಿಗೆ ಒಪ್ಪಿಸಿದ್ದರಂತೆ.
ತೀವ್ರ ಪರಿಸರ ವಾದಿಯಾಗಿದ್ದ ಈತನಿಗೆ ಈ ಮರಕೊಯ್ಯುವ ಆಧುನಿಕ ಉಪಕರಣಗಳ ಆವಿಷ್ಕಾರದ ಕುರಿತು ತೀವ್ರ ಅಸಮಾಧಾನವಂತೆ. ಈ ರೀತಿಯ ಉಪಕರಣಗಳ ಅತಿಯಾದ ಬಳಕೆಯಿಂದ ಮುಂದೊಂದು ದಿನ ನಾಡಿನ ಎಲ್ಲಾ ಮರಗಳು ಖಾಲಿಯಾಗಿ, ಜಿಲ್ಲೆ ಮರುಭೂಮಿಯಾಗುತ್ತದೆ ಎಂದು ಕ್ರಾಂತಿಕಾರಿ ಭಾಷಣಗಳನ್ನು ಮಾಡಿ, ಕಾಲೇಜು ಯುವಕರನ್ನು ಹುರಿದುಂಬಿಸಿ, ಈ ಉಪಕರಣಗಳ ಉತ್ಪಾದನೆ ವಿರುದ್ಧ ದೊಡ್ಡ ಮಟ್ಟದ ಹೋರಾಟಕ್ಕೆ ಇಳಿದಿದ್ದ ಈತನಿಗೆ ಸರಿಯಾಗಿ ವಿಧ್ಯಾರ್ಥಿಗಳು ಹಾಗೂ ಪ್ರಜ್ಞಾವಂತರ ಬೆಂಬಲ ಸಿಗದೆ ಹೀಗೆ ಹುಚ್ಚನಾಗಿದ್ದನಂತೆ. ಹುಚ್ಚು ತಲೆಗೆ ಏರಿದಾಗ ಕುಶಾಲನಗರದ ಮರಕೊಯ್ಯುವ ಉಪಕರಣಗಳ ಮಳಿಗೆಯೊಂದಕ್ಕೆ ಪೆಟ್ರೋಲ್ ಸುರಿದು, ಬೆಂಕಿ ಹಚ್ಚಿ ಹಾರೆಕೋಲು ಒಂದನ್ನು ಕೈಗೆತ್ತುಕೊಂಡು ಈ ಜಲಾಶಯದ ಗೋಡೆ ಒಡೆಯಲು ಪ್ರಯತ್ನಿಸುತ್ತಿದ್ದ ಎಂದು ಜಲಾಶಯದ ಸಿಬ್ಬಂದಿ ನನಗೆ ಹೇಳಿದಾಗ.
ಈ ಯಂತ್ರೋಪಕರಣಗಳ ಮಳಿಗೆ ಸುಟ್ಟ ವಿಚಾರದ ಕಾರಣ ತಿಳಿದರೂ ಈ ಜಲಾಶಯದ ಗೋಡೆ ಹೊಡೆಯುತ್ತಿದ್ದ ಕಾರಣ ಗೊತ್ತಾಗದೇ ಸಿಬ್ಬಂದಿಯೆಡೆಗೆ ಪ್ರಶ್ನಾರ್ಥಕ ನೋಟವೊಂದನ್ನು ಬೀರಿದ್ದೆ.
ಅದನ್ನು ಅರ್ಥ ಮಾಡಿಕೊಂಡು ಆತ “ಅಯ್ಯೋ ಸಾರ್ ಈ ಹುಚ್ಚನಿಗೆ ಪರಿಸರ ಕಾಳಜಿ ವಿಚಾರದಲ್ಲಿ ಸ್ವಲ್ಪ ಅತಿಯಾದ ಹುಚ್ಚು ಸಾರ್.. ಹೀಗೆ ಜಲಾಶಯಗಳನ್ನು ಕಟ್ಟುವುದು ಪ್ರಕೃತಿ ಬಾಹಿರ ಎಂದು ಬಲವಾಗಿ ನಂಬಿದ್ದ ಆತ. ನದಿ ನೀರಿನ ತಡೆಗಟ್ಟುವಿಕೆ ಅವೈಜ್ಞಾನಿಕ ಎಂದೂ ಕೂಡ ಕ್ರಾಂತಿ ಮಾಡಲು ಹೀಗೆ ಅಣೆಕಟ್ಟನ್ನೇ ಒಡೆದು ಹಾಕುವ ಕೆಲಸಕ್ಕೆ ಕೈಹಾಕಿದ್ದ ಎಂದು ಹೇಳಿದ.
ಇವನ ಕ್ರಾಂತಿಗೆ ಯಾರೂ ಸೊಪ್ಪು ಹಾಕದ ಕಾರಣ ಒಬ್ಬನೇ ಅಣೆಕಟ್ಟು ಒಡೆದು ಹಾಕಲು ಹೋಗಿ ಪೊಲೀಸರ ಅಥಿತಿ ಆಗಿದ್ದ ಎಂದು ನನಗೆ ಇನ್ನರ್ಧ ಕಥೆಯನ್ನೂ ಹೇಳಿ ಕಥೆಯನ್ನು ಮುಗಿಸಿದ.
ಫೋಟೋ ಕೃಪೆ : google (ಸಾಂದರ್ಭಿಕ ಚಿತ್ರ )
ಈ ಹುಚ್ಚನದೊಂದು ಅರ್ಥಪೂರ್ಣ ಕ್ರಾಂತಿಕಾರಿ ಕಥೆ ಹೌದಾದರೂ ಆತನ ಹೋರಾಟಕ್ಕೆ, ಆಲೋಚನೆಗಳಿಗೆ ಸಮಾಜದ ಬೆಂಬಲ ಸಿಕ್ಕದೆ ಈಗ ಹುಚ್ಚು ಹೆಚ್ಚಾಗಿ ಹೀಗೆ ಅಲೆಯುತ್ತಿರುತ್ತಾನಂತೆ. ಒಂದೆರಡು ಬಾರಿ ಈತನನ್ನು ಸ್ಥಳೀಯ ಸಮಾಜ ಸೇವಕರೆಲ್ಲಾ ಹಿಡಿದು, ಬಲವಂತವಾಗಿ ತಲೆಕೂದಲು, ಗಡ್ಡ ಬೋಳಿಸಿ, ಸ್ನಾನ ಮಾಡಿಸಿ, ಹೊಸ ಬಟ್ಟೆ ತೊಡಿಸಿ, ಆ್ಯಂಬುಲನ್ಸ್ ಹತ್ತಿಸಿ ಮೈಸೂರಿನ ಹುಚ್ಚಾಸ್ಪತ್ರೆ ಸೇರಿಸಿದ್ದರಂತೆ. ಆತ ಅಲ್ಲಿಂದಲೂ ತಪ್ಪಿಸಿಕೊಂಡು ಬಂದು ಈಗ ಇಲ್ಲೇ ಓಡಾಡುತ್ತಿದ್ದಾನಂತೆ.
**
ನೀರಾವರಿ ಸಚಿವರ ಶ್ರೀಮತಿಯವರಿಗೆ ಏನೋ ಆರೋಗ್ಯದಲ್ಲಿ ಏರುಪೇರಾಗಿ ಬಾಗಿನ ಅರ್ಪಿಸುವ ಅಂದಿನ ಕಾರ್ಯಕ್ರಮ ಮುಂದೂಡಿದ್ದರಿಂದ ನಾನು ವಾರ್ತಾ ಇಲಾಖೆ ಗಾಡಿಯಲ್ಲಿ ಮರಳಿ ಮಡಿಕೇರಿ ತಲುಪಿದ್ದೆ. ಗಾಡಿ ಮಡಿಕೇರಿ ತಲುಪಿ, ಹಳೆಯ ಖಾಸಗಿ ಬಸ್ಸು ನಿಲ್ದಾಣಕ್ಕೆ ಬಂದಾಗ, ಅಲ್ಲಿ ಬಸ್ ನಿಲ್ದಾಣ ಇದ್ದ ಜಾಗವೆಲ್ಲಾ ಪ್ರಾಕೃತಿಕ ವಿಕೋಪಕ್ಕೆ ಕುಸಿದು, ಬೃಹತ್ ಅಣೆಕಟ್ಟಿನಂತೆಯೇ ಕಾಣುವ ತಡೆಗೋಡೆಯ ಕೆಳಗೆ ಖಾಸಗಿ ಕಾರುಗಳು ನಿಂತಿದ್ದವು. ಅಂದು ಅಟ್ಟಿಸಿಕೊಂಡು ಬಂದ ಹುಚ್ಚ, ಇಂದು ಓಡಿಹೋದ ಆತ, ಆತನ ಕ್ರಾಂತಿಕಾರಿ ಕಥೆಗಳೆಲ್ಲವನ್ನೂ ಕೇಳಿ ನನಗೇ ಹುಚ್ಚು ಹಿಡಿದಿದೆಯೇನೋ ಅನ್ನಿಸಲು ತೊಡಗಿತ್ತು.
ಅವರಿಬ್ಬರೂ ಒಬ್ಬರೇ ಹೌದಾ ಎಂದು ನನಗೆ ಸಣ್ಣ ಸಂಶಯವೂ ಆಯಿತು. ಶಾಲಾ ಬಾಲಕನಾಗಿದ್ದ ನಾನು ಹೆದರಿ ಓಡುವಾಗ ಆತನ ಮುಖವನ್ನೂ ಸರಿಯಾಗಿ ಗಮನಿಸಿಯು ಇರಲಿಲ್ಲ. ಆದರೇ ನನ್ನ ಅಂತರಾಳ ಆತನೇ ಈತ, ಈತನೇ ಆತ ಎಂದು ಬಲವಾಗಿ ಹೇಳುತ್ತಿತ್ತು.
ಜಲಾಶಯಗಳನ್ನು ವಿರೋಧಿಸುವ, ಮರಕೊಯ್ಯುವ ಯಂತ್ರೋಪಕರಣಗಳ ಕುರಿತು ಅಸಮಾಧಾನ ವ್ಯಕ್ತಪಡಿಸುವ ಆತನ ಕ್ರಾಂತಿಕಾರಿ ಭಾಷಣವನ್ನೇ ಆತ ಈಗಲೂ ಬಡಬಡಿಸುತ್ತಾ ಓಡಾಡುತ್ತಿದ್ದಾನೆ ಎಂದು ಅನ್ನಿಸಲು ತೊಡಗಿತು..
- ರಂಜಿತ್ ಕವಲಪಾರ