ಸಂಸಾರಿಕ ಹರಟೆ (ಭಾಗ -೧)

ಉತ್ತರ ಕರ್ನಾಟಕ ಭಾಷೆಗೆ ಅದರದೇ ಆದ ಸೊಗಡಿದೆ. ಉತ್ತರ ಕರ್ನಾಟಕದ ಜವಾರಿ ಭಾಷೆಯಲ್ಲಿ ಶ್ರೀವಲ್ಲಭ ಕುಲಕರ್ಣಿ ಅವರು ‘ಸಂಸಾರಿಕ ಹರಟೆ’ ಎನ್ನುವ ಶೀರ್ಷಿಕೆಯಲ್ಲಿ ಸರಣಿಮಾಲಿಕೆ ಬರೆಯಲಿದ್ದಾರೆ, ತಪ್ಪದೆ ಮುಂದೆ ಓದಿ…

***

ನಾನs ಮನಿ ಬಿಟ್ಟ ಹೋಗ್ತೇನಿ

****

ಯಾರಿದ್ದೀರಿ ಒಳಗ ? ಮಾಮಿsss ಇದ್ದಿರೇನು? ತಲಬಾಗಲಾ ತಕ್ಕೊಂಡ್ ಕೂತ್ ಬಿಟ್ರ, ಕಳ್ರ ಬಂದ್ರೂ ಗೊತ್ತಾಗಂಗಿಲ್ಲ..

ಓ.. ಯಾರು? ಅಯ ನೀನಾ .. ಬಾ ಸವಕಾಶ ..ಇಲ್ಲೇ ಹಿತ್ಲ ಕಡೆ ಬಾ.. ಜ್ವಾಳಾ ನುಶಿ ಹಿಡದಾವು.. ಘಲ್ಲಸ್ಲಕತ್ತಿದೆ.. ಪೀಡಾ..ಚೀಲಾ ಗ್ವಾಡಿ ಬಾಜೂ ಇಟ್ಟಿದ್ದ ತಪ್ಪಾತು.. ನಮ್ ನಮ್ ಆಗ್ಯಾವು.. ಹಿಟ್ಟಿಗೂ ಬರದಂಗ ಆತು..

ಮಾಮಿ ಅದಕ್ಯಾಕ್ ಅಷ್ಟ ತ್ರಾಸ್ ಪಡ್ತೀರಿ.. . . ? ಕಂಡಷ್ಟ ಕಡ್ಡಿ ಕಸಾ ತಗದು, ಮಾಳಿಗಿ ಮ್ಯಾಲೆ ಪ್ಲಾಸ್ಟಿಕ್ ಚೀಲದಾಗ ಹರುವಿ ಕೈ ಆಡಿಸಿ ಬರ್ರಿ.. ಎರಡ ದಿನಾ ಬಿಸಿಲಿಗೆ ಹಾಕಿದ್ರ… ಸಾಕು… ಹಿಟ್ಟ ಬರಲಿಲ್ಲ ಅಂದ್ರೇನಾತು ..ನುಚ್ಚರ ಬರ್ತದ.. ತುಟ್ಟಿ ಜ್ವಾಳಾ..ಎಂಥಾ ನಕ್ಷತ್ರದಂಗ ಅವ..

ಹೂನವಾ ..ಭಾಳ ಚಂದ ಹೇಳ್ತಿ.. ಈ ಕಡ್ಡಿ ಕಸಾ ತಗಿಯೋದ್ರಾಗ ಕಣ್ಣಾಗ ಧೂಳ ಬಿದ್ದ ಹೋತು..ಸುಡಗಾಡ ಈ ಅಪಾರ್ಟ್ಮೆಂಟ್ ಒಳಗ ಹಿತ್ಲ್ಯಾವುದು , ಅಂಗ್ಳಾ ಯಾವುದು, ಮಾಳಿಗಿ ಯಾವುದು ತಿಳಿಯಂಗಿಲ್ಲ. ಅದೇನೋ ಅಂತಾರಲ್ಲss… ಅಖಂಡ ಮುಗಿಲಾಗ ತುಂಡು ಬಿಸಿಲಿಗೆ ಬರಾ..! ಅದೂ ಸುದ್ಧಾ ಕಾಣೋದ ಅಪರೂಪ ಆಗ್ಯದ‌ ನೋಡು.

ಇರಲಿ ನೀನೂ ಸ್ವಲ್ಪ ಕೈ ಜೋಡಸ್ತಿಯೇನು? ಸರಾಭರಾ ಕೆಲಸ ಆದ್ವಂದ್ರ.. ಮುಂದಿನ ಕೆಲಸ ಹಗರಾಗ್ತದ. . ಇನ್ನೂ ಮೈ ಬ್ಯಾರೆ ಆಗಿಲ್ಲಾ.. ಕುಕ್ಕರ್ ಇಳಸಬೇಕಾಗೇದ.. ಕೆಲಸದಕಿನೂ ಒಂದ್ವಾರ ಬರಂಗಿಲ್ಲ ಅಂದಾಳ.. ಒಗ್ಯಾಣ ಭಾಂಡಿನೂ ನನಗ ಬಿದ್ವು..

ಇಲ್ಲೆ ಬಂದಿದ್ದ ತಪ್ಪಾತ ನಾ (ಸ್ವಗತ) ಮಾಮಿ ರೀ, ನಮ್ಮ ಮನಿಯವರೂ ಮನ್ನೆ ಅವರ ಗುರುತು ಪರಿಚಯ ರೈತನ ಕಡೆ ಮದಲ ಪೀಕ ಅಂತ ಜ್ವಾಳಾ ತಂದಾರ…

” ಮೂಗು” ತಗಿಯೋದ್ರಾಗ ಸಾಕಾತ ನನಗ.. ಇನ್ ಪೂರ್ತಿ ಹಸಮಾಡಿ ಯಾವಾಗ ಹಿಟ್ಟಿಗೆ ಕಳಸ್ತೇನೇನೋ.. ಇವ್ರಿಗ್ಯರ ಭಕ್ರಿ ಇಲ್ಲಂದ್ರ ನಡಿಯಂಗಿಲ್ಲ.. ಅವೂ ನುಶಿ ಹಿಡದ ಕೂತಾವು…! ಇಲ್ಲೇ ತಂದ ಬಿಡ್ಲೇನು?

ಹೊಗ್ಗ ನಮ್ಮವ್ವಾ… ಇದೇನ್ “ನ್ಯಾನೋ ಬಫೇಲೋ” (ನುಶಿ) ಸಾಕಾಣಿಕೆ ಕೇಂದ್ರ ಅನ್ಕೊಂಡಿ.. ?

ಹ್ಹಹ್ಹಹ್ಹಾ …! ಭಾರೀ ಜೋಕ್ ಮಾಡ್ತೀರಿ..

ಅಕಿನೂ ಹಂಗ ಮಾಡ್ತಾಳ ಬೂಬ್ಣಿ..

ಯಾರ್ರಿ ಮಾಮಿ?

ಅಕಿನs ಕಾಕು

ಏನೋ ಬ್ಯಾಸರಾಗೇದ.. ಚಕ್ಕಾ(ಚೌಕಾಬಾರಾ) ಆಡೋಂಬಾ ಅಂತ ಹಂಗ ಮಾತಿಗೆ ಕರದ್ರ.. ತನ್ನ ಮನೀದು ಹತ್ತ ಕಿಲೋ ಅಕ್ಕಿ ಇಲ್ಲೇ ಆರಿಸಿದಂಗ ಮಾಡಿ.. ಈ ಮನಿ ತುಂಬ ಬಾಲ್ಹುಳಾ ಒಗದ ಹೋಗ್ಯಾಳ ! ಕಸಾ ಹೊಡದ ಹೊಡದ ಸಾಕಾತ ನನಗ…!

ಮನ್ನೆ ಏನಾತ ಗೊತ್ತನು? ಗೋದುಬಾಯಿ ಮಾರ್ಕೇಟ್ ಒಳಗ ಸಿಕ್ಕಿದ್ಲು..

ಮಾಮಿ ಯಾರ್ರಿ ಇವ್ರು ಗೋದು ಬಾಯಿ? ಹೆಸರ ಕೇಳಿದಂಗ ಅದ.. ನೆನಪ ಬರವಲ್ತು,..! ಇತ್ತಿತ್ಲಾಗ ಮರುವು ಭಾಳಾಗೇದ ನಮಗೂ.

ನಿನಗ ಅಕಿ ಪರಿಚಯ ಇಲ್ಲಳ. ಭಾಳ ತಲಿ ಕೆಡಿಸ್ಗೋಬ್ಯಾಡಾ. ನಮ್ಮೂರಿನಕಿ ಅಕಿ.. ಇರೋ ಒಬ್ಬ ಮಗಾ ಫಾರಿನ್ನು. ಇಲ್ಲಿಕಿ ಒಬ್ಬಾಕಿನ. ಪಾಪಂತ ಮನಿಗೆ ಕರದ್ರ….

ಖಾಲಿ ಕೂಡೋದೇನು , ಎಷ್ಟಂತರ ಪಂಟ್ ಬಡಿಯೂದು? ಅಂತ ಹಸ್ಮಾಡ್ಲಿಕ್ಕೆ ಕಡ್ಲಿಬ್ಯಾಳಿ ಇಲ್ಲೇ ಹೊತ್ಗೊಂಡ್ ಬಂದಾಳ..ಟಿವಿ ನೋಡ್ಕೋತ …ಬೆಂಚ್ ಹಳ್ಳ ಇಲ್ಲೇ ಒಗದ, ಮನಿ ತುಂಬ “ಬುರ್ಲಿ” ಬ್ಯಾರೆ ಹಾರಿಸಿ ಹೋಗ್ಯಾಳ… !

ಇಕಿ ಹಂಗನ ಥೇಟ್ “ಅಕಿ”ದೂ ಸ್ವಭಾವಾ !

“ಅಕಿ” ಅಂದ್ರ ಯಾರ್ರಿ…?

ಅಕಿನs ಮತ್ಯಾರು.. ಇದs ಬಾಜೂ ಮನಿಯಾಕಿ…
ತನ್ನ ಮನಿ ಪೇಂಟಿನ ಕೆಲಸ ನಡದದ ಅಂತ ಹಳೇ ಹಳೇ ಪುಸ್ತಾಕ ಎಲ್ಲಾ ನನ್ನ ಮನ್ಯಾಗ ಇಟ್ಟ ಹೋಗ್ಯಾಳ… ಐದ್ ಮಿನಿಟ್ ಒಳಗ … ಮನಿ ಮೂಲಿ ಮೂಲಿ ” ಸಿಲ್ವರ್ ಫಿಶ್ ” !

ಸಾಕಾಗಿ ಹೋತ್ವಾ ನನಗರೇ..

ಅದಕ್ಕ ಸುಮ್ನ ಒಂದ ಕೆಲಸಾ ಮಾಡ್ತೇನಿ…

ಈ ಮನಿ ಕಿಲಿ ನಿನ್ನ ಕಡೆ ಕೊಟ್ಟು ನಾ ಮನಿ ಬಿಟ್ಟ ಹೋಗಬೇಕಂತ ಮಾಡೇನಿ..! ಎಲ್ಲಾರೂ ಬಂದು ಇಲ್ಲೇ ಹಾಡು ಹಸೆ ಅನ್ಕೋತ … ಅಕ್ಕಿ ಜ್ವಾಳಾ ಆರಿಸ್ಗೋತ ಕೂಡ್ರಿ…ನನ್ನ ಮನಿ ಅಂಬೋದು “ನ್ಯಾನೋ ವರ್ಮಾಲಜಿ ಪಾರ್ಕ” ಮಾಡಿಟ್ಟೀರಿ!

ಹೋಗಲಿ… ಹ್ಯಾಂಗೂ ಬಂದೀ ಒಂದ ವಾಟೆ ಛಾ ನರ ಮಾಡಿ ಕೊಡ್ವಾ ತಾಯಿ… ಪುಣ್ಯಾ ಬರ್ತದ.

ಮಾಮಿ ರೀ .ನನಗ ನಮ್ಮ ಮನಿಯವರ ಫೋನ್ ಬಂತು.. ಯಾರೋ ಗೆಸ್ಟ್ ಬಂದಾರಂತ.. ನಾ ಆಮೇಲೆ ಸಿಗ್ತೇನಿ..

ಅಯ…ತಡೀಯsss ಹೊಂಟs ಬಿಟ್ಯಾ?
ಇಕಿನೂ ಅಕಿನ.. ಬರೇ ಮಾತು.. ವಟ್ಟ ಕೆಲಸ ಬ್ಯಾಡ್ರಿ ಈಗಿನವುಕ್ಕ…

ಹೋಗ್ ಹೋಗು ನೀವೇನಾದೀರಿ ನಮ್ಮ ಪಾಲಿಗೆ.
ಕೆಲಸ ಸ್ವಲ್ಪ ತಡಾ ಆದ್ರೂ ಚಿಂತಿಲ್ಲಾ.. ನಾನs ಸವಕಾಶ ಮಾಡ್ಕೋತೇನಿ…


  • ಶ್ರೀವಲ್ಲಭ ಕುಲಕರ್ಣಿ  – ಹುಬ್ಬಳ್ಳಿ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW