ಸಂತರ ಮನುಷ್ಯನಿಗೆ ಬದುಕುವ ದಾರಿ ತೋರಿದ್ದಾರೆ. ಶಾಲೆಗಳಿಂದ ಕಲಿಯದೇ ಇದ್ದರೂ ಅವರು ಬದುಕಿನ ಅನುಭವದ ಪಾಠಶಾಲೆಯಿಂದ ಕಲಿತದ್ದು ಅಪಾರ. ಸಂತಶಿಶು ಇಮ್ತಿಯಾಜ್ ಖಾನ್ ಅವರ ಸಂತ ಮತ್ತು ನಾಯಿ ಲೇಖನವನ್ನು ತಪ್ಪದೆ ಓದಿ ….
ಯಾರೋ ಅಪರಿಚಿತನೊಬ್ಬ ಒಮ್ಮೆ ಸಂತ ರೂಮಿಯವರಿಗೆ ಕೇಳಿದ, ತಾವು ದೇವನ ಅತ್ಯಂತ ಆಪ್ತ ದಾಸರಾದುದು ಹೇಗೆ? ಎಂದು. ಅದೊಂದು ನಾಯಿಯಿಂದ ಎಂದು ರೂಮಿ ಉತ್ತರಿಸಿದರು. ಕೇಳುಗನಿಗೆ ಆಶ್ಚರ್ಯವಾಯಿತು. ನಾಯಿಯಿಂದವೇ? ಅದು ಹೇಗೆ? ಆತ ಮರಳಿ ಪ್ರಶ್ನಿಸಿದ.
ರೂಮಿ ಉತ್ತರಿಸಿದರು; ನಾನು ಒಮ್ಮೆ ಒಂದು ಓಣಿಯಿಂದ ಹಾದು ಹೋಗುತ್ತಿದೆ. ಅದು ಅತ್ಯಂತ ಇಕ್ಕಟ್ಟಿನ ಓಣಿಯಾಗಿತ್ತು. ನನ್ನ ದಾರಿಯಲ್ಲಿ ಅಡ್ಡವಾಗಿ ನಾಯಿಯೊಂದು ಮಲಗಿಕೊಂಡಿತ್ತು. ದಾರಿ ಮಧ್ಯೆ ಮೈಮರೆತು ಮಲಗಿರುವ ಆ ನಿಯತ್ತಿನ ಪ್ರಾಣಿಯ ಮೇಲೆ ನನಗೆ ಅತೀವ ಮರುಕ ಉಂಟಾಯಿತು. ನಾಯಿಯನ್ನು ಎಚ್ಚರಿಸಿ ನಿದ್ರಾಭಂಗಗೊಳಿಸಲು ಮನಸ್ಸಾಗಲಿಲ್ಲ. ಅದು ತಾನೇ ಎಚ್ಚರಾಗಲೆಂದು ಅಲ್ಲೇ ಪಕ್ಕ ಸರಿದು ಕಾದು ನಿಂತೆ. ಕೆಲವು ಸಮಯದ ಬಳಿಕ ನಾಯಿ ಎಚ್ಛೆತ್ತು ನನ್ನನ್ನು ನೋಡಿ ಓಡತೊಡಗಿತು. ಆ ನಾಯಿ ಅಲ್ಲಿಂದ ಹೋದನಂತರವಷ್ಟೇ ನಾನೂ ಹೊರಟು ಹೋದೆ. ನನ್ನ ಈ ಕರ್ಮ ದೇವನು ಮೆಚ್ಚಿಕೊಂಡು ನನಗೆ ತನ್ನ ಆಪ್ತ ದಾಸನನ್ನಾಗಿ ಮಾಡಿಕೊಂಡಿದ್ದಾನೆ. ಎಲ್ಲ ಅವನ ಲೀಲೆ ಎನ್ನುತ್ತ ಭಾವುಕಾರಾಗಿ ನುಡಿದರು.

ತುಂಬಾ ಚಿಕ್ಕ ವೃತ್ತಾಂತವಿದು. ಆದರೆ ದೊಡ್ಡ ಪಾಠವೊಂದನ್ನು ಹೇಳುತ್ತಿದೆ. ಸಂತರನ್ನು ಓದುವುದೆಂದರೆ ನನಗೆ ವೈಯಕ್ತಿವಾಗಿ ತುಂಬಾ ಇಷ್ಟ. ಎಂತಹ ಶ್ರೇಷ್ಠ ಜನ ಈ ಭೂಮಿ ಮೇಲೆ ಬದುಕಿ ಹೋಗಿದ್ದಾರಲ್ಲವೇ! ಎನಿಸುತ್ತದೆ. ಅಂತಹ ಜನ ಬದುಕಿದ್ದಾಗ ಈ ಭೂಮಿ ಮಳೆ ಬೆಳೆಯಿಂದ ಸಮೃದ್ಧವಾಗಿತ್ತು. ಬದುಕಿನಲ್ಲಿ ಸಂತಸ ನೆಲೆಸಿತ್ತು. ಈಗ ಅಂತಹ ಜನನೂ ಇಲ್ಲ ಬದುಕಿನಲ್ಲಿ ತೃಪ್ತಿಯೂ ಇಲ್ಲ. ಸುಮ್ಮನೆ ಜೀವ ಇದೆ ಅಂತ ಬದುಕುತ್ತೇವೆ ಅಷ್ಟೆ.
ನಮ್ಮ ಎಲ್ಲ ಸಮಸ್ಯೆಗಳಿಗೆ ಮೂಲ ಕಾರಣವೆಂದರೆ ನಮ್ಮ ನುಡಿಯಂತೆ ನಡೆಯಿಲ್ಲದಿರುವುದೇ ಎಂದು ನಾನು ಬಗೆದಿದ್ದೇನೆ. ನಾನು ಬೆಳೆದದ್ದು ಸಂತರ ಮಧ್ಯಯೇ ಆಗಿದ್ದರಿಂದ ನನಗೆ ಅಸಲಿ-ನಕಲಿ ಮುಖವಾಡದ ವ್ಯಕ್ತಿತ್ವಗಳ ಪರಿಚಯವಿದೆ. ಇತ್ತೀಚಿಗೆ ನಮ್ಮಲ್ಲಿ ವೇಷಧಾರಿಗಳು ಹೆಚ್ಚಾಗಿದ್ದಾರೆ. ಬೋಧನೆಗಳೂ ಹೆಚ್ಚಾಗಿವೆ. ಪಾಲಿಸುವವರ ಸಂಖ್ಯೆಯೇ ಇಲ್ಲ ಎನ್ನುವಷ್ಟು ಕ್ಷೀಣಿಸಿದೆ. ಮನುಷ್ಯ ಜಗತ್ತಿಗೆ ನೀತಿ ಹೇಳಲು ಹೊರಟಿದ್ದಾನೆ. ಆದರೆ ತಾನು ಮಾಡುವ ಕೆಲಸಮಾತ್ರ ತೀರ ನೀಚತನದ್ದೇ ಎಂಬುದು ಅವನಿಗೆ ಮರೆತುಹೋಗಿದೆ. ನಾವು ಪಡೆಯುತ್ತಿರುವ ಶಿಕ್ಷಣ ನಮ್ಮಲ್ಲಿ ಎಷ್ಟು ಮೌಲ್ಯ ಬೆಳಸಿದೆ; ಎಷ್ಟು ಸತ್ಯಕ್ಕೆ ತಲೆಬಾಗುವ ವಿಧೇಯತೆ ಕಲಿಸಿದೆ, ಎಲ್ಲವೂ ಗಮನಿಸಬೇಕಾದ ತುರ್ತು ಇದೆ.
ಸಂತರ ನಡೆ ನುಡಿ ಎರಡೂ ಶುದ್ಧ. ಮನುಷ್ಯನಿಗೆ ಬದುಕುವ ದಾರಿ ತೋರಿದ್ದಾರೆ ಅವರು. ಕಲ್ಲು ಗಾರೆಯ ಶಾಲೆಗಳಿಂದ ಕಲಿಯದೇ ಇದ್ದರೂ ಅವರು ಬದುಕಿನ ಅನುಭವದ ಪಾಠಶಾಲೆಯಿಂದ ಕಲಿತದ್ದು ಅಪಾರ. ಹತ್ತು ಗ್ರಂಥಗಳನ್ನು ಓದುವ, ಒಂದಿಷ್ಟು ಸಭ್ಯತೆಯಿಂದ ವರ್ತಿಸುವ, ಬೆಲ್ಲದಂತೆ ಮಾತನಾಡುವ ನಯವಂಚಕರನ್ನು ಒಳ್ಳೆಯವರು ಎಂದು ನಾವು ಬಗೆಯುತ್ತೇವೆ. ಆದರೆ ಅವರ ವರ್ತನೆಗಳಿಂದ ನಮ್ಮ ಗ್ರಹಿಕೆಗಳೆಲ್ಲ ತಪ್ಪು ಎಂದು ತಿಳಿದಾಗ ತೀರ ಹತಾಶೆಗೆ ಒಳಗಾಗುತ್ತೇವೆ. ಆಗೆಲ್ಲ ನಾಯಿಗಿರುವ ನೀಯತ್ತೂ ಮನುಷ್ಯನಿಗಿಲ್ಲವೇ ಎನಿಸುತ್ತದೆ!
ರತ್ನಾಕರ ವರ್ಣಿಯ ಮಾತು ಇಲ್ಲಿ ನೆನಪಾಗುತ್ತದೆ. ಶಾಸ್ತ್ರಬಲ್ಲವನಲ್ಲಿ (ವಿದ್ಯಾವಂತ) ಪ್ರೀತಿ, ಅನುಕಂಪೆ, ನಿಗರ್ವ, ಮೆಲ್ವಾತು, ಮುಕ್ತಿಶ್ರೀ ಚಿಂತೆ, ನಿಜಾತ್ಮ ಚಿಂತೆ ನೆಲೆ ನಿಲ್ಲಬೇಕು. ಹಾಗಲ್ಲದೇ ಅದೇ ಶಾಸ್ತ್ರಜ್ಞಾನದಿಂದ ಅವನು ಗರ್ವಿಷ್ಠನಾದರೆ, ಕಲಹ, ಅಹಂಕಾರ, ಅಜ್ಞಾನ ಅವನ ವ್ಯಕ್ತಿತ್ವದಲ್ಲಿ ಬಂದು ಬಿಟ್ಟರೆ ಆ ಶಾಸ್ತ್ರಿ ಶಸ್ತ್ರಕನಾಗಿ, ಅವನ ಶಾಸ್ತ್ರ ಶಸ್ತ್ರವಾಗಿ ಸಮಾಜವನ್ನು ಇರಿದು ಹಾಳುಮಾಡುತ್ತದೆ. ಎಷ್ಟು ಸತ್ಯವಾದ ಮಾತಲ್ಲವೇ!
- ಇಮ್ತಿಯಾಜ್ ಖಾನ್ – ಸಂತಶಿಶು
