ಬಣ್ಣ-ಬಣ್ಣದ ಮುಖವಾಡಗಳು ಕೆಲವೊಂದು ಹಳೆಯವು ಒಂದಷ್ಟು ಹೊಸವು…ಕವಿ ಚೇತನ್ ಗವಿಗೌಡ ಅವರ ಈ ಕವನವನ್ನು ತಪ್ಪದೆ ಮುಂದೆ ಓದಿ…
ನಮ್ಮೂರ ಸಂತೆ ಬೀದಿ
ಸುತ್ತಲೂ ಅಂಗಡಿ ಮುಗ್ಗಟ್ಟು
ಮಾಂಸ ತೂಕ ಮಾಡುತ್ತಿರುವ
ಮುಲ್ಲಾ ಸಾಬಿ
ಮಲ್ಲಿಗೆಯ ಪೊಟ್ಟಣ ಕಟ್ಟುತ್ತಿರುವ
ಹೆಂಗಸು
ಬಿಕಾರಿಯಾಗದೆ ಉಳಿದ ಅದೆಷ್ಟೋ
ಸರಕು ಸಾಮಾನು
ಕೈಚೀಲ ಹಿಡಿದು ಹೆಜ್ಜೆ ಹಾಕುವವನಿಗೆ
ಅದೆಷ್ಟು ಆಯ್ಕೆಗಳು?
ಹೆಜ್ಜೆಗೆಜ್ಜೆಗೂ ಅಂಗಡಿಗಳು
ಬದುಕಿನ ನೊಗವಿಡಿದು ಕುಳಿತ
ಒಂದಷ್ಟು ಜನರು
ಪಕ್ಕದಲ್ಲೇ ಒಂದು ಸರ್ಕಸ್ಸು
ಎಳೆಯ ಪಾದಗಳು
ಹಗ್ಗದ ಮೇಲೆ,
ಕೈಯಲ್ಲಿ ಎರಡು ಮಡಿಕೆ
ತಲೆಯ ಮೇಲೆ ಮತ್ತೊಂದು
ಬದುಕಿನ ಜವಾಬ್ದಾರಿಯೂ ಜೊತೆಗೆ
ಬಣ್ಣ-ಬಣ್ಣದ ಮುಖವಾಡಗಳು
ಕೆಲವೊಂದು ಹಳೆಯವು
ಒಂದಷ್ಟು ಹೊಸವು;
ಬೇಕಾದದ್ದು ಬೇಡದ್ದು ಕಡೆಗೆ
ಒಂದೊಂದು ಹೆಜ್ಜೆಯು
ಕಥೆಗಳ ಹೇಳುತಿದ್ದವು
ಮೆಚ್ಚದವರುಂಟೇ!?
ಆಕೆಯ ಧೈರ್ಯ
ನಾ ನಿಂತು ಮೂಕ ವಿಸ್ಮಿತನಾದೆ
ಕುರುಡು ಕವಿತೆಯನು
ಕಿವುಡ ಕೇಳಿದ ಹಾಗೇ!
ಎತ್ತರದ ಭಯವಿಲ್ಲ
ಆಳದ ಅರಿವಿಲ್ಲ
ಆ ಎಳೆಯ ಕಾಲುಗಳಲ್ಲಿ ನಡುಕವಿಲ್ಲ
ಆಕೆ ನಡೆಯುತ್ತಿದ್ದರೆ
ನನ್ನೆದೆ ನಡುಗುತಿತ್ತು
ಸ್ವಲ್ಪ ಆಯಾ ತಪ್ಪಿದರೆ?
ಬಿದ್ದರೆ?
ಅನಾಹುತವಾದರೆ?
ಗೆದ್ದರಷ್ಟೇ ಬದುಕು
ಅದೆಷ್ಟೇ ನೋವುಗಳಿದ್ದರೂ
ನಗುವನ್ನಷ್ಟೇ ಹಂಚುತಿದ್ದಳು
ಏನನ್ನೋ ಕೊಳ್ಳಲು ಹೋಗಿ
ಮತ್ತೇನನ್ನೋ ಪಡೆದು ಮರಳಿದೆ
- ಚೇತನ್ ಗವಿಗೌಡ
