ಜೀವನದಲ್ಲಿ ಸಣ್ಣ ಸಣ್ಣ ವಿಷಯಗಳು ಹೇಗಿರುತ್ತೆ? ಅಂದ್ರೆ… ಈ ತರ ಕತೆಯನ್ನಾಗಿ ಮಾಡಬಹುದು….ಶಾಲಿನಿ ಹೂಲಿ ಪ್ರದೀಪ್ ಅವರ ದಿನನಿತ್ಯ ಬದುಕಿನ ಕತೆಗಳು ತಪ್ಪದೆ ಓದಿ…
ನೆಮ್ಮದಿ ದೇವಸ್ಥಾನದಲ್ಲಿ ಸಿಗುತ್ತೆ ಅಂತ ತಿಳಿದವರು ಹೇಳಿದ್ರು. ನೋಡೋಣ ಅಂತ ದೇವಸ್ಥಾನದೊಳಗೆ ದೇವರ ಮುಂದೆ ಹೋಗಿ ಕೂತಿದ್ದೆ. ನನಗಿಂತ ಸುಮಾರು ನಾಲ್ಕು ವರ್ಷ ದೊಡ್ಡವರಿರಬಹುದು ಪಕ್ಕದಲ್ಲಿ ಬಂದು ಕೂತು ಮಾತು ಶುರು ಮಾಡಿಕೊಂಡರು.
“ಮದುವೆ ಆಗಿ ಎಷ್ಟು ವರ್ಷ ಆಯ್ತು ?… ಮಕ್ಕಳು ಎಷ್ಟು?… ಅದು ಇದು ಪ್ರಶ್ನೆಗಳ ಸುರಿಮಳೆಗಳು ಬಿದ್ದವು. ಸರಿ, ತಪ್ಪು ಉತ್ತರಗಳನ್ನು ಅಲ್ಲಲ್ಲಿ ಕೊಟ್ಟು ಮುಗಿಸಲು ಎಷ್ಟೇ ಪ್ರಯತ್ನಿಸಿದರು ಅವರ ಪ್ರಶ್ನೆ, ಮಾತುಗಳು ಮುಗಿಯುವ ಲಕ್ಷಣವೇ ಕಾಣಲಿಲ್ಲ. ಕೊನೆಗೆ ಏನ್ ಅಡುಗೆ ಮಾಡಿದ್ರಿ ಅಂತ ಪ್ರಶ್ನೆ ಬಂತು. ಇಷ್ಟೊಂದು ಮಾತಾಡೋರು ಮನೆಗೆ ಬಂದ್ರೆ, ಏನ್ ಕತೆ… ಅಂತ ವಿಚಾರ ಮಾಡಿ.
“ಮನೆಗೆ ಹೋಗಿ ಅಡುಗೆ ಮಾಡಬೇಕು ,ನಿಮ್ದು ಅಡುಗೆ ಆಯ್ತಾ?”….ಅಂತ ಕೇಳಿದೆ.
ಅವರು “ಸೊಪ್ಪನ್ನೆಲ್ಲ ಬಿಡಿಸಿಟ್ಟು ಬಂದಿದ್ದೀನಿ, ಹೋಗಿ ಸೊಪ್ಪಿನ ಸಾರ್… ಅನ್ನ ಮಾಡಬೇಕು, ಮಕ್ಕಳು ಅದನ್ನ ತಿನ್ನೋಲ್ಲ. ಅವರಿಗೆ ಟೊಮ್ಯಾಟೋ ಸಾರು ಮಾಡಬೇಕು, ನಂಗೆ ನಿನ್ನೆ ಕಟ್ಟಿನ ಸಾರು ಉಳಿದಿದೆ, ಅದನ್ನೇ ತಿಂತೀನಿ”… ಅಂತ ಉದ್ದಕ್ಕೆ ಹೇಳ್ತಾ ಹೋದ್ರು.
ಹೀಗೆ ಕೂತ್ರೆ ಬೆಳಗ್ಗೆ ಅಡುಗೆಯಿಂದ ರಾತ್ರಿ ಅಡುಗೆವರೆಗೂ ಹೇಳಿ ತಲೆ ಬಿಸಿ ಮಾಡ್ತಾರೆ. ಅವರ ಮಾತಿಗೆ ಸರಿಯಾಗಿ ಬ್ರೇಕ್ ಬೀಳೋದು ನೋಡ್ಕೊಂಡು, ಎಸ್ಕೇಪ್ ಆಗ್ಬೇಕು ಅಂತ ಕಾಯ್ತಿದ್ದೆ. ಸರಿಯಾಗಿ ಮಾತಿನ ಮಧ್ಯೆ ಅವರಿಗೆ ಕೆಮ್ಮು ಬಂತು ಬ್ಯಾಗ್ ಲ್ಲಿ ತಂದಿದ್ದ ನೀರಿನ ಬಾಟಲಿ ಮುಚ್ಚಳ ತೆರೆದು ನೀರು ಕುಡಿಯುತ್ತಿದ್ದರು, “ನಾನು ಹೊರಡ್ತೀನಿ ಮಕ್ಕಳು ಸ್ಕೂಲ್ ನಿಂದ ಬರೋ ಸಮಯ ಆಯ್ತು”… ಅಂತ ಹೇಳಿ ಅಲ್ಲಿಂದ ಹೊರಟು ಬಿಟ್ಟೆ. ದೇವಸ್ಥಾನದಲ್ಲಿ ನೆಮ್ಮದಿ ಸಿಕ್ತಾ?… ಪ್ರಶ್ನೆಗೆ ದೇವರೇ ಉತ್ತರ ಕೊಡಬೇಕು.
ಮತ್ತೊಂದು ದಿನ ಸೂಪರ್ ಮಾರ್ಕೆಟ್ ಹೋಗಿದ್ದೆ. ಸಾಮಾನ್ನೆಲ್ಲ ಬಾಸ್ಕೆಟ್ ಗೆ ಹಾಕುತ್ತಿದ್ದೆ, ಪಕ್ಕದಲ್ಲಿ ಇದ್ದವಳು ಫೋನ್ ನಲ್ಲಿ ಯಾರಿಗೋ ‘ಈಗ ಮನೆಗೆ ಹೋಗಿ ಟೊಮ್ಯಾಟೋ ಸಾರು, ಅನ್ನ ಮಾಡಬೇಕು ರೀ”…ಅಂತ ತಾನು ಮಾಡುವ ಅಡುಗೆ ಲಿಸ್ಟ್ ಹೇಳುತ್ತಿದ್ದಳು. ನನ್ನನ್ನು ನೋಡಿ ಮುಗುಳ್ನಗೆ ಬೀರಿ ದಾಟಿ ಹೋದಳು. ನಾನು ಒಂದು ನಗು ಬೀರಿ ಸುಮ್ಮನಾದೆ.
ಗೆಳತಿ ಮೋಹಿನಿ ಜೊತೆಗೆ ಪಾರ್ಕ್ ಹೋಗಿದ್ದೆ. ಮೋಹಿನಿ ನಾನು ಬೆಂಚ್ ಮೇಲೆ ಕೂತಿದ್ದೆವು. ನಮ್ಮ ಪಕ್ಕದ ಬೆಂಚ್ ನಲ್ಲಿ ನಾಲ್ಕೈದು ಜನ ನಡುವಯಸ್ಸಿನ ಆಂಟಿಯರು ಈಗ ಹೋಗಿ ತರಕಾರಿ ಸಾರು ಮಾಡಬೇಕು ಅಂತ ಒಬ್ಬ ಆಂಟಿ ಹೇಳಿದ್ರೆ, ಇನ್ನೊಂದು ಆಂಟಿ ಅವರೇಕಾಳಿನ ಸಾರ್ ಮಾಡ್ತೀನಿ ಅಂತ, ಮತ್ತೊಬ್ಬಾಕೆ ಕಾಳಿನ ಕಟ್ಟು ತಗದು ಅದರ ಕಟ್ಟಿನ ಸಾರು ಮಾಡ್ತೀನಿ ಅಂತ. ಒಬ್ಬರಿಗಿಂತ ಒಬ್ಬರು ಅಡುಗೆ ಬಗ್ಗೆ ಹೇಳಿಕೊಳ್ಳುವುದರಲ್ಲೇ ಸ್ಪರ್ಧೆ ನಡೆದಿತ್ತು.
ತುಂಬಾ ಜನ ಹೆಣ್ಮಕ್ಕಳನ್ನ ನೋಡಿದ್ದೀನಿ ಅಡುಗೆ, ಅದರಲ್ಲೂ ಸಾರು ಅಂತ ಬಂದ್ರೆ ಅದರಷ್ಟು ಒಳ್ಳೆ ಟಾಪಿಕ್ ಹೆಣ್ಮಕ್ಕಳಿಗೆ ಬೇರೆ ಯಾವ ಟಾಪಿಕ್ ಲ್ಲೂ ಸಿಗೋಲ್ಲ. ಯಾರೇ ಪರಿಚಯದವರೇ ಸಿಗ್ಲಿ, ಹೊಸಬರೇ ಸಿಗ್ಲಿ ಯಾರನ್ನೇ ಕೇಳಿದ್ರೂ ಸಾಮಾನ್ಯವಾಗಿ ಹಾಗೂ ಸುಲಭವಾಗಿ ಹರಟುವ ಟಾಪಿಕ್ ಅಂದ್ರೆ ಅಡುಗೆ.
“ಯಾರನ್ನಾದ್ರೂ ಹೋಗಿ ನಿಮ್ಮನೆ ಅಡುಗೆ ಏನು?.. ಅಂತ ಕೇಳು ಮೋಹಿನಿ” ಅಂದೆ.
ಮೋಹಿನಿ ವಿಚಿತ್ರವಾಗಿ ನನ್ನತ್ತ ನೋಡಿ ‘ಯಾಕೆ?’… ಅಂದಳು.
“ನೋಡು, ಯಾರನ್ನೇ ಹೋಗಿ ಕೇಳು “ನಮ್ಮನೆ ಅಡುಗೆ ಅನ್ನ- ಸಾರು”… ಅಂತ ಸಿಂಪಲ್ ಆಗಿ ಹೇಳೋಲ್ಲ. ಸಾರಲ್ಲಿ ಸೊಪ್ಪು ಹಾಕಿದ್ರೆ ಸೊಪ್ಪಿನ ಸಾರು, ಬೆಳೆ ಹಾಕಿದ್ರೆ ಬೆಳೆ ಸಾರು, ಆಲೂಗಡ್ಡೆ ಹಾಕಿದ್ರೆ ಆಲೂಗಡ್ಡೆ ಸಾರು ಹೀಗೆ ಸಾರಲ್ಲಿ ಇರೋ ಸಾಮಗ್ರಿಗಳ ಹೆಸರನ್ನೆಲ್ಲ ಹೇಳಿ, ಉದ್ದ ಮಾಡಿ… ದಿನಾ ಒಂದೊಂದು ವೆರೈಟಿ ಅಡುಗೆ ಮಾಡ್ತೀವಿ ಅಂತ ಬಿಲ್ಡಪ್ ತಗೋತಾರೆ ಮೋಹಿನಿ”…ಎಂದೇ.
ಮೋಹಿನಿಗೆ ನನ್ನ ಮಾತು ನಿಜವೇನಿಸಿತೋ… ತಮಾಷೆ ಎನಿಸಿತೋ… ಅಥವಾ ಶಾಲಿನಿ ಮಾತು ಒಮ್ಮೆ ಪರೀಕ್ಷಿಸಿಯೇ ಬಿಡೋಣ ಅನ್ನಿಸಿತೋ ಗೊತ್ತಿಲ್ಲ. ಪಾರ್ಕ್ ಲ್ಲಿ ಎದುರಿಗೆ ಬಂದ ಪರಿಚಯಸ್ಥ ಮಹಿಳೆಗೆ “ಅಡುಗೆ ಆಯ್ತಾ?… ಏನ್ ಸಾರು?”…ಅಂದಳು.
“ಮಧ್ಯಾಹ್ನ ಸೌತೆಕಾಯಿ ಹಾಕಿ ಸಾರು ಮಾಡಿದ್ದೆ. ಅದೇ ರಾತ್ರಿಗೆ”… ಅಂದಾಗ ಮೋಹಿನಿ ನನ್ನತ್ತ ನೋಡಿ ಜೋರಾಗಿ ನಕ್ಕಳು.
“ನಿಜ ಶಾಲಿನಿ, ನೀನು ಹೇಳಿದ ಹಾಗೆ ಹೆಣ್ಮಕ್ಕಳಿಗೆ ಸಾರು ಮಾಡೋದೇ ದೊಡ್ಡ ಪ್ರಾಜೆಕ್ಟ್ ಆಗಿದೆ… ನಡಿ ಹೊರಡೋಣ”… ಅಂದಳು.
ಇಬ್ಬರೂ ಬೆಂಚ್ ಯಿಂದ ಎದ್ದು ಹೊರಟೆವು. ಪಾರ್ಕ್ ನ್ನ ವಾಚ್ ಮ್ಯಾನ್ ಅಮ್ಮ
“ಯಾಕ್ರವ್ವ… ಬೇಗ ಹೊರಟ್ರಿ… ಅಡುಗೆ ಮಾಡ್ಬೇಕಾ?.. ಏನ್ ಸಾರು” ಅಂದಾಗ…
ನಾನು, ಮೋಹಿನಿ “ತರಕಾರಿ ಸಾರು ಮಾಡಬೇಕು”…. ಅಂತ ಇಬ್ಬರೂ ಜೋರಾಗಿ ನಗುತ್ತಾ, ಒಬ್ಬವರಿಗೊಬ್ಬರು ಕೈ ತಟ್ಟಿ…ಪಾರ್ಕ್ ನಿಂದ ಹೊರಗೆ ಬಿದ್ದೆವು…
- ಶಾಲಿನಿ ಹೂಲಿ ಪ್ರದೀಪ್
