ಯಾವುದೆ ಹಬ್ಬ ವೃತ ಉಪವಾಸ ಆಚರಿಸಿದರೂ ಒಂದು ದೈವಿಕ ಶಕ್ತಿಯ ಪ್ರಾರ್ಥನೆ ಇರುತ್ತದೆ. ಆ ಪ್ರಾರ್ಥನೆ ಲೋಕದಲ್ಲಿ ಶಾಂತಿ, ಸಮೃದ್ಧಿ ನೆಲೆಸಿರುತ್ತದೆ ತಪ್ಪದೆ ಮುಂದೆ ಓದಿ…
ಸತ್ಯಂ ಶಿವಂ ಸುಂದರಂ ಈ ವಾಕ್ಯದಲ್ಲಿ ನಮ್ಮ ಜೀವನವೆ ತುಂಬಿದೆ.ನಮ್ಮ ಮನಸ್ಸು ಸುಂದರವಾಗಿದ್ದರೆ ಜಗತ್ತು ಸುಂದರ, ಪ್ರಕೃತಿ ಸುಂದರ, ಆದಮೇಲೆ ನಮ್ಮ ಜನನ, ಸ್ಥಿತಿ,ಲಯ ಎಲ್ಲವೂ ನಿಯಮ ಬದ್ಧವಾಗಿ ಸುಂದರ ಎನಿಸುವುದು.ಇಷ್ಟಕ್ಕೆಲ್ಲ ಮನಸ್ಸು ಕಾರಣ.ಇದಕ್ಕಾಗಿ ಶಿವನ ಆರಾಧನೆಯನ್ನು ಹಿಂದುಗಳು ಭಕ್ತಿ ಗೌರವದಿಂದ ಆಚರಿಸುವರು.
ಪ್ರತಿ ತಿಂಗಳ ಕೃಷ್ಣ ಪಕ್ಷ ಚತುರ್ದಶಿ ಎಂದು ಶಿವರಾತ್ರಿ ಇರುವುದು. ನಿತ್ಯವೂ ಶಿವನ ಪೂಜೆ ಪಂಚಾಕ್ಷರ ಜಪ ಮಾಡುವರು.ಆದರೆ ಮಾಘ ಮಾಸದ ಕೃಷ್ಣ ಪಕ್ಷದ ಚತುರ್ದಶಿ ಮಹಾ ಶಿವರಾತ್ರಿ ಎಂದು ದೊಡ್ಡ ಹಬ್ಬವನ್ನಾಗಿ ಆಚರಿಸುವರು. ಯಾವದೆ ಹಬ್ಬ ವೃತ ಉಪವಾಸ ಆಚರಿಸಿದರೂ ಒಂದು ದೈವಿಕ ಶಕ್ತಿಯ ಪ್ರಾರ್ಥನೆ ಅಂತೂ ನಿಜ.ಆ ಪ್ರಾರ್ಥನೆ ಲೋಕದಲ್ಲಿ ಶಾಂತಿ ಸಮೃದ್ಧಿ ನೆಲೆಸುತ್ತದೆ ಎನ್ನುವ ನಂಬಿಕೆಯೂ ಸತ್ಯ.ವಿಶ್ವಾಸ ನಂಬಿಕೆಯಿಂದ ಮಾಡಿದರೆ ಸತ್ಯವೆನಿಸಿದ ಅಗೋಚರ ಶಕ್ತ ಸಮಯಾನುಸಾರವಾಗಿ ಎಲ್ಲರ ಅನುಭವಕ್ಕೆ ಬಂದೆ ಬರುವುದು.ಮಹಾಶಿವರಾತ್ರಿ ದಿವಸ ಭಕ್ತಿಯಿಂದ ಮಾಡಿದ ಶಿವನ ಆರಾಧನೆಯ ಸತ್ಯವನ್ನು ತಿಳಿಸುವುದು.
ಶಿವನು ಇಲ್ಲದೆ ವಿಷ್ಣು ಇಲ್ಲ ವಿಷ್ಣು ಇಲ್ಲದೆ ಶಿವನಿಲ್ಲ . ಎಂದು ಜ್ಞಾನಿಗಳು ಹೇಳುವುದು ನಿಜ.ಯಾವದೇ ಸಾಧನೆ ಮಾಡಲು ಮನಸ್ಸು ಮುಖ್ಯ.ಮನಸ್ಸಿಗೆ ಅಧಿಪತಿಯು ಶಿವನು.ಮನಸ್ಸಿದ್ದರೆ ಮಾರ್ಗ.ಅಂತಹ ಸಜ್ಜನರಿಗೆ ಮುಕುತಿಪಥವನು ತೋರುವನು ಮತಿ ಪ್ರೇರಿಸುವ ಪಾರ್ವತಿ ಪತಿ ಪರಮ ಶಿವನು. ಪರಮಾತ್ಮನು ನಮಗೆ ಸಹಾಯವಾಗಲೆಂದು ಎಲ್ಲವನ್ನು ಸೃಷ್ಟಿ ಮಾಡಿದ್ದಾನೆ.”ಕೆರೆಯ ನೀರನು ಕೆರೆಗೆ ಚೆಲ್ಲಿ ವರವ ಪಡೆದಂತೆ.” ಇಷ್ಟೇ ಅದನ್ನು ನಂಬಿಕೆ ಭಕ್ತಿಯಿಂದ ಮಾಡಬೇಕು.
ಶಿವನಿಗೆ ಶಿವರಾತ್ರಿ ದಿನ ಬಿಲ್ವಪತ್ರೆ ಅರ್ಪಿಸುವ ಪದ್ಧತಿ ಇದೆ.ಮನುಷ್ಯನಲ್ಲಿ ಸತ್ವ, ರಜ ತಮಸ್ಸು ಈ ಮೂರು ಗುಣಗಳು ಇರುತ್ತವೆ.ಈ ಮೂರು ಗುಣಗಳ ಪ್ರತೀಕವೆ ಬಿಲ್ವಪತ್ರೆ. ನಮ್ಮಲ್ಲಿರುವ ಕಾಮ, ಕ್ರೋಧ,ಮದ ಮತ್ಸರ, ದ್ವೇಷ ಅಸೂಯೆ ಈ ಆರು ವೈರಿಗಳನ್ನು ನಾಶ ಮಾಡಿ ಸತ್ವಗುಣವನ್ನು ಸ್ಥಾಪಿಸಲು ರಜೋಗುಣವನ್ನು ತಾಮಸ ಅಂದರೆ ಆಲಸ್ಯ ನಿಲ೯ಕ್ಷ ಬಾರದಂತೆ ನೀಡು ಎಂದು ಶುದ್ಧ ಮನಸ್ಸಿನಿಂದ ಬಿಲ್ವಪತ್ರೆ ಅರ್ಪಿಸಬೇಕು.
ಹಾಲಿನ ಅಭಿಷೇಕ ಶಿವನಿಗೆ ಪ್ರೀತಿ ಎಂದು ಹೇಳುವರು. ಹಾಲು ವಾತ್ಸಲ್ಯದ ಪ್ರತೀಕ.ಕರುಣಾಮಯಿಯಾದ ಶಿವನನ್ನು ನಮಗೆ ಶಾಂತಿ ಸಮೃದ್ಧಿ ಭಕ್ತಿ ನೀಡೆಂದು ಹಾಲಿನ ಅಭಿಷೇಕ ಮಾಡುತ್ತಾರೆ. ಆದರೆ ಮನದಲ್ಲಿ ಅಧಿಕಾರ ಹಣ ಮೊದಲಾದ ಮದಗಳನ್ನು ತುಂಬಿಕೊಂಡು ಹಾಲು ಅಭಿಷೇಕ ಮಾಡಿದರೆ ಮಹಾದೇವ ನಮ್ಮನ್ನು ಮೋಹಗೊಳಿಸುವನು.ಆ ಹಾಲು ಹಾಲಾಹಲವಾಗಿ ಮನಸ್ಸು ಅಶುಚಿ ಆಗುವುದು.ತ್ರಿಲೋಚನವುಳ್ಳ ಶಿವನಿಗೆ ಮುಕ್ಕಣ್ಣ ಎನ್ನುವರು.ಎರಡು ಕಣ್ಣುಗಳಲ್ಲಿ ಸೂರ್ಯ ಚಂದ್ರ ನೆಲೆಸಿರುವರು.ಅವೆರಡು ಕಾಲಮಾನದ ದಿನಗಳನ್ನು ಸೂಚಿಸುತ್ತವೆ.ಮೂರನೆ ಕಣ್ಣಲ್ಲಿ ಅಗ್ನಿಯನ್ನು ಧರಿಸಿರುವನು.ಭಕ್ತರಿಂದ ಯಾವುದೇ ಅಹಿತ ಕರ್ಮಗಳು ದುರಾಲೋಚನೆ ಬರದಂತೆ ದುರಾಸೆಯನ್ನು ಸುಡುವನು.ವಿಹಿತ ಕರ್ಮಗಳನು ಯಜ್ಞದಂತೆ ಸ್ವೀಕರಿಸುವನು.
ಶಿವರಾತ್ರಿ ದಿನ ನಾವು ಮಾಡಿದ ಕರ್ಮಗಳನ್ನು ಭಕ್ತಿಯಿಂದ ಸಮರ್ಪಿಸಿ ನನ್ನಿಂದ ಯಾವುದೇ ತಪ್ಪು ಆದಲ್ಲಿ ಕ್ಷಮಿಸಿ ಮತ್ತೇ ಆಗದಂತೆ ಕರುಣಿಸು ಎಂದು ಪ್ರಾರ್ಥಿಸುತ್ತಾ ಬಿಲ್ವಪತ್ರೆ, ಹಾಲು ಮುಂತಾದವುಗಳನ್ನು ಸಮರ್ಪಿಸಬೇಕು.ಪುಣ್ಯಕರ್ಮವನ್ನು ಆಚರಿಸುತ್ತಾ ಮೋಕ್ಷಾನಂದವನ್ನು ಪ್ರಾರ್ಥಿಸುವ ದಿನವೇ ಶಿವರಾತ್ರಿ.
ಓಂ ನಮಃ ಶಿವಾಯ.
ಬ್ರಹ್ಮನ ತನಯ ಮಹಾದೇವ
ಅಹಂ ಪರಿಹರಿಸಿ ಕಾವದೇವ
ಓಂ ನಮಃ ಶಿವಾಯ
ಮತಿ ಪ್ರೇರಿಸುವಪಾರ್ವತಿ ಪತಿ
ಇತಿ ಮಿತಿ ಕರುಣಿಸು ಮನಾಧಿಪತಿ
ಓಂ ನಮಃ ಶಿವಾಯ
ಮನಸ್ಸು ನಿಲ್ಲಿಸು ಹರಿಯಲ್ಲಿ
ತನುಗೊಳಿಸು ಲಯದಲ್ಲಿ
ಓಂ ನಮಃ ಶಿವಾಯ
ಓಂ ನಮಃ ಶಿವಾಯ
ಓಂ ನಮಃ ಶಿವಾಯ
- ಸಂಧ್ಯಾ ಟಿ
