‘ಸತ್ಕುಲಪ್ರಸೂತರು’ ಕೃತಿ ಪರಿಚಯ

ತಾರತಮ್ಯ ಸಮುದಾಯದಿಂದ ತಾರತಮ್ಯ ರಹಿತ ಸಮಾಜದೆಡಗಿನ ಯಾನದ ರೂಪಕ ಗುರುಪ್ರಸಾದ ಕಾಗಿನೆಲೆ ಅವರ  ಸತ್ಕುಲ ಪ್ರಸೂತರು ಕಾದಂಬರಿಗೆ ಮೂರು ಆಯಾಮಗಳು ಇವೆ. ಈ ಕೃತಿಯ ಕುರಿತು ಲೇಖಕರಾದ ರಘುನಾಥ್ ಕೃಷ್ಣಮಾಚಾರ್ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಪುಸ್ತಕ : ಸತ್ಕುಲ ಪ್ರಸೂತರು
ಲೇಖಕರು :  ಗುರುಪ್ರಸಾದ ಕಾಗಿನೆಲೆ
ಪ್ರಕಾಶನ : ಅಂಕಿತ ಪ್ರಕಾಶನ 

ಅವು :

  • ಸ್ವಧರ್ಮೇ ನಿಧನಂ ಶ್ರೇಯ
  • ಪರಧರ್ಮೋ ಭಯಾವ

    ಭಗವದ್ಗೀತೆಯ ಪರಿಕಲ್ಪನೆಯನ್ನು ಆಧರಿಸಿ ಬದುಕಿದ ಮೊದಲ ತಲೆಮಾರಿನ ಜನಾಂಗ.ಇದಕ್ಕೆ ನಿದರ್ಶನವಾಗಿ ನಿರೂಪಕನ ತಂದೆ ತಾಯಿಗಳನ್ನು ನೋಡಬಹುದು. ಅವರಿಗೆ ಅವರ ಜಾತಿಯನ್ನು, ಧರ್ಮವನ್ನು ಬಿಟ್ಟು ಬೇರೆ ಪರ್ಯಾಯ ಇಲ್ಲ. ಅದನ್ನು ಬಿಟ್ಟು ಹೋಗಲು ಹೊರಟ ,ಅನ್ಯ ಧರ್ಮದ ಯುವಕನನ್ನು ಮದುವೆಯಾಗಲು ಸಿದ್ದಳಾದ ಮೊಮ್ಮಗಳು ಮತ್ತು ತನ್ನ ಮಗ ಅವರ ಪಾಲಿಗೆ ಇದ್ದೂ ಸತ್ತಂತೆ.ಆದ್ದರಿಂದ ತನ್ನ ಸುತ್ತಲಿನ ಮಡಿವಂತ ಬ್ರಾಹ್ಮಣರ ಸಲುವಾಗಿ,ಅವನು ಬದುಕಿರುವಾಗಲೇ ಅವನಿಗೆ ಘಟಶ್ರಾದ್ಧ ಮಾಡಿ,ಅದರ ಆಘಾತ ತಾಳಲಾರದೆ ಪ್ರಾಣ ತ್ಯಾಗ ಮಾಡುತ್ತಾರೆ. ಇದು ಆ ಸಮುದಾಯದ ಅಮಾನುಷ ಸ್ವರೂಪಕ್ಕೆ ಹಿಡಿದ ಕನ್ನಡಿ. ಅಲ್ಲದೆ ಬಾಲ್ಯ ವಿವಾಹ ಕೂಡ ಆ ಸಮುದಾಯದ ಭಾಗ. ಕಾನೂನಿನ ಪ್ರಕಾರ ಅದನ್ನು ನಿಷೇಧಿಸಲಾಗಿದ್ದರು. ಅವರ ಹೆಂಡತಿ ಮಠದ ತೀರ್ಥಕ್ಕಾಗಿ, ಮಗ ಕರೆದರೂ ಅವನ ಜೊತೆಗೆ ಹೋಗುವುದಿಲ್ಲ.
  • ಕಾಡುತ್ತಿವೆ ಭೂತ ಕಾಲದ ಭ್ರೂಣ ಗೂಢಗಳು: ಇದರ ಪ್ರತಿನಿಧಿಯಾದ ನಿರೂಪಕ , ( ಎರಡನೇ ತಲೆಮಾರಿನ) ಉನ್ನತ ಶಿಕ್ಷಣ ಪಡೆದು ಅಮೇರಿಕಾದಲ್ಲಿ ನೆಲಸಿದ್ದರೂ, ತನ್ನ ಸಾಂಪ್ರದಾಯಿಕ ಬಾಲ್ಯದ ನೆನಪುಗಳಿಂದ ಅವನಿಗೆ ಬಿಡುಗಡೆ ಇಲ್ಲ. ತನ್ನ ತಂದೆಗೆ ತಾನೇ ಶ್ರಾದ್ಧ ಮಾಡುವ ಮೂಲಕ ತನ್ನ ಇಬ್ಬಂದಿತನದಿಂದ , ಬಿಡುಗಡೆ ಹೊಂದಲು ಪ್ರಯತ್ನ ಮಾಡುತ್ತಾನೆ. ಮಾಡಬೇಕು ಎನ್ನುವ ಕಾನೂನು ಇಲ್ಲದಿದ್ದರೂ. ಕೇವಲ ಕರ್ತವ್ಯ ಪ್ರಜ್ಞೆಯಿಂದ.ಸ್ವತ: ತನ್ನ ಸಮುದಾಯಕ್ಕಿಂತ ಭಿನ್ನವಾದ ಸಮುದಾಯದ ಹೆಣ್ಣನ್ನು ಮದುವೆ ಆಗಿದ್ದರೂ. ಅಮೇರಿಕಾದಲ್ಲಿ ಎರಡು ಸಮುದಾಯಗಳ ಆಚರಣೆಗಳನ್ನು ಅನುಸರಿಸುವ ಮೂಲಕ.ಇವನಿಗೆ ತನ್ನ ಮಗಳು ಅಕ್ಷರಾ ಅನ್ಯಧರ್ಮದ ಕೆವಿನ್ ನ್ನು ಮದುವೆಯಾಗಲು ನಿರ್ಧರಿಸಿರುವುದು ಸಂಕಷ್ಟಕ್ಕೆ ದೂಡಿದೆ. ಹುಡುಗನ ಧರ್ಮದ ಕುರಿತು ಆಧುನಿಕ ವಿದ್ಯುನ್ಮಾನ ಮಾಧ್ಯಮದ ಮೂಲಕ ಮಾಹಿತಿ ಸಂಗ್ರಹಿಸಿದ್ದಲ್ಲದೆ, ಸ್ವತಃ ಅವನ ತಂದೆ ತಾಯಿ ಮತ್ತು ಅಜ್ಜಿ ಅಜ್ಜರನ್ನು ಭೇಟಿಯಾಗುತ್ತಾನೆ, ಸ್ವತಃ ಹುಡುಗನಿಗೆ ಅದರ ಬಗ್ಗೆ ಆಸಕ್ತಿ ಇಲ್ಲದಿದ್ದರೂ.ಅವರ ಸಾಂಪ್ರದಾಯಿಕತೆ ಹಿಂದೂ ಧರ್ಮದ ಹಾಗೆ ಕಟ್ಟು ನಿಟ್ಟಿನ ನಿಯಮಗಳನ್ನು ಹೊಂದಿರುವ, ಅದನ್ನು ಪಾಲಿಸದಿದ್ದರೆ, ಮಗನ ಮದುವೆ ಅವರಿಗೆ ಅಧಿಕೃತ ಅಲ್ಲವೇ ಅಲ್ಲ.

  • ಮನುಷ್ಯ ಜಾತಿ ತಾನೊಂದೇ ವಲಂ: ಮೂರನೇ ತಲೆಮಾರಿನ ನಿರೂಪಕನ ಅಲ್ಲಿ ಹುಟ್ಟಿದ ಮಗಳಿಗೆ ಯಾವ ಧರ್ಮದ ಬಗ್ಗೆ ಕೂಡ ಆಸಕ್ತಿ ಇಲ್ಲ. ಅವಳ ಆಸಕ್ತಿ ಎಂದರೆ ಅಲ್ಲಿನ ಎನ್. ಆರ್. ಐಗಳಂತೆ ತನಗೆ ಇಷ್ಟವಾದ ಹುಡುಗನ ಜೊತೆಯ ಮದುವೆಯಲ್ಲಿ ,ಅಲ್ಲಿನ ತನ್ನ ಗೆಳತಿಯರ ಜೊತೆ ಕುಣಿಯುವುದು ಮಾತ್ರ. ತನ್ನ ಮದುವೆಯನ್ನು ತನಗೆ ಇಷ್ಟ ಬಂದ ಹಾಗೆ ಮಾಡಿ ಕೈಗೊಳ್ಳುವುದಾಗಿ,ಅದರ ಬಗ್ಗೆ ಉಳಿದವರ ಪ್ರವೇಶ ಅನಾವಶ್ಯಕ ಎಂದು ಘೋಷಿಸಿ ಅದರಂತೆ ನಡೆದುಕೊಂಡಳು.ಅವರ ಮದುವೆ ಆಗುವುದು ನೀರ ಮೇಲಿನ ತೇಲುವ ಹಡಗಿನಲ್ಲಿ. ನೀರಿಗೆ ಯಾವುದೇ ಜಾತಿ ಮತ ಧರ್ಮಗಳ ಹಂಗಿಲ್ಲ.ಅದರಂತೆ ಆ ವಧುವರರಿಗೂ,ಅವಳ ದೊಡ್ಡಮ್ಮ ತಾಳಲಾರದೆ ಹುಡುಗನ ಹಣೆಯ ಮೇಲೆ ಇಟ್ಟ‌ ಕುಂಕುಮವನ್ನು ಕೂಡಲೇ ಅಳಿಸಿಹಾಕುವುದು ಇದಕ್ಕೆ ನಿದರ್ಶನ. ಈ ಅರ್ಥದಲ್ಲಿ ಅವರು “ಮನುಷ್ಯ ಜಾತಿ ತಾನೊಂದೇ ವಲಂ “ಎನ್ನುವ ಪಂಪನ ವಿಶ್ವಪ್ರಜೆಗಳು. ತನ್ನ ಹಿಂದಿನ ಎರಡು ತಲೆಮಾರಿನ ದಾಟಲಾರದ ಕಂದಕವನ್ನು ಅವರು ದಾಟುತ್ತಾರೆ. ಇದಕ್ಕೆ ಕಾರಣ ಅವರು ಅಮೇರಿಕಾದಂತಹ ಮುಕ್ತ ಸಮಾಜದಲ್ಲಿ ಹುಟ್ಟಿ ಬೆಳೆದದ್ದು. ನಿರ್ದಿಷ್ಟ ಸಮುದಾಯದ ಭಾಗವಾಗಿ ಹುಟ್ಟಿದವರು, ಅವರನ್ನು ಬೆಂಬಲಿಸಿ ಅವರ ಮದುವೆಗೆ ಸಾಕ್ಷಿ ಆಗುವುದು ಒಂದು ಆರೋಗ್ಯಕರ ಬೆಳವಣಿಗೆ. ಈ ದೃಷ್ಟಿಯಿಂದ ಅವರು ಕಾದಂಬರಿಗೆ ಇಟ್ಟ‌ ಶೀರ್ಷಿಕೆ ಅರ್ಥ ಪೂರ್ಣ.ಅವರು ಯಾವುದೇ ನಿರ್ದಿಷ್ಟ ಜಾತಿ ಮತ ಧರ್ಮಗಳಿಗೆ ಸೇರದ ವಿಶ್ವಮಾನವರೆ ನಿಜವಾದ ಸತ್ಕುಲ ಪ್ರಸೂತರು.ಇದನ್ನು ಸಾಧಿಸಲು ಅವರು ನಾಲ್ಕು ಸಾಧನಗಳನ್ನು ಬಳಸುತ್ತಾರೆ.ಅವು ೧: ಸಮುದಾಯದ ತಾತ್ವಿಕ ನೆಲೆ. ಅವರು ಉಲ್ಲೇಖ ಮಾಡಿದ ತಾರತಮ್ಯ ನೀತಿ ಇದಕ್ಕೆ ನಿದರ್ಶನ.ಇದನ್ನು ಹೆಜ್ಜೆ ಹೆಜ್ಜೆಗೂ ದಾಟುವುದೇ ವಿಶ್ವ ಮಾನವನಾಗುವ ದಾರಿ. ಅದು ಅವರ ತಂದೆಯಿಂದಲೇ ಪ್ರಾರಂಭ. ನಿರ್ದಿಷ್ಟ ಸಮುದಾಯಕ್ಕೆ ಸೇರಿದ ಅವರು, ಅದನ್ನು ಇನ್ನೊಂದು ಸಮುದಾಯದ ಜತೆ ಸಂಬಂಧ ಬೆಳೆಸಿದರು. ನಿರೂಪಕ ಕೂಡ ಅವರ ತಂದೆಯ ದಾರಿಯಲ್ಲಿ ಸಾಗುತ್ತಾನೆ. ಅವರ ಮಗಳು ಅದನ್ನೂ ದಾಟುತ್ತಾಳೆ. ಅನ್ಯದೇಶೀಯ ಮತ್ತು ಧರ್ಮದವರನ್ನು ಮದುವೆ ಆಗುವ ಮೂಲಕ.

  • ಆಚರಣೆಗಳ ಮೂಲಕ: ನಿರ್ದಿಷ್ಟ ಸಮುದಾಯದ ಆಚರಣೆಗೆ ಸೀಮಿತವಾಗಿದೆ. ಮಾಧ್ವ ಮತದ ಆಚರಣೆಗಳಾದ ಮಠದ ತೀರ್ಥ, ಏಕಾದಶಿ ಉಪವಾಸ ಇತ್ಯಾದಿಗಳ ಉಲ್ಲೇಖ ಇದಕ್ಕೆ ನಿದರ್ಶನ. ಮೊದಲ ತಲೆಮಾರಿನ. ಅದೇ ರೀತಿ ಸ್ಮಾರ್ತ ಪಂಗಡದ ಆಚರಣೆಗಳಾದ ಶಿವಲಿಂಗ ಪೂಜೆ ವಿಭೂತಿ ರುದ್ರಾಕ್ಷಿ ಧಾರಣೆ ಇತ್ಯಾದಿ. ಇವುಗಳನ್ನು ಅಕ್ಕ ಪಕ್ಕದಲ್ಲಿ ಇಟ್ಟು ಪೂಜೆ ಮಾಡುವುದು . ಎರಡನೇ ತಲೆಮಾರಿನ ಈ ಆಚರಣೆ ಸೌಹಾರ್ದತೆಯ ಸಂಕೇತವಾಗಿದೆ.
  • ಭಾಷಿಕ ನೆಲೆ: ಅವರು ಬಳಸುವ ಸಮುದಾಯದ ಭಾಷೆಯಿಂದ ಮೊದಲುಗೊಂಡು, ರಾಷ್ಟ್ರೀಯ ಅಂತಾರಾಷ್ಟ್ರೀಯ ಭಾಷೆಗಳವರೆಗೆ ವೈವಿಧ್ಯಮಯ ಭಾಷಾ ಪ್ರಯೋಗ, ಸಮುದಾಯದ ಭಾಷೆಯ ಅಂಗವಾಗಿ ಹುಚ್ಚು ಸೂಳೆ ಮಗ, ರಾಷ್ಟ್ರೀಯ ಭಾಷೆಗೆ ಬಳಸುವ ಹಿಂದಿ ಮತ್ತು ಅಂತಾರಾಷ್ಟ್ರೀಯ ಇಂಗ್ಲಿಷ್. ಅವರ ಕಾದಂಬರಿಯ ವಸ್ತುವಿಗೆ ಅನುಗುಣವಾಗಿದೆ.
  • ಆಹಾರ ಪಾನೀಯಗಳು: ಸಂಡಿಗೆ ಹುಳಿ ಸಮುದಾಯದ ಅಡುಗೆಯಾದರೆ, ಸ್ಯಾಂಡ ವಿಚ್, ಪಿಜ್ಜಾ ಬರ್ಗರ್ ಮತ್ತು ಮಾದಕ ಪಾನೀಯಗಳು ಅಂತರ ರಾಷ್ಟ್ರೀಯ ಆಹಾರ ಪದ್ಧತಿಯ ದ್ಯೋತಕವಾಗಿ ಬಂದಿದೆ. ಮೇಲಿನವುಗಳಲ್ಲಿ ಆಗುವ ಪಲ್ಲಟಗಳು ಜರುಗುವುದು ನಿರ್ದಿಷ್ಟ ಸ್ಥಳಗಳಲ್ಲಿ. ಆಯಾ ಪರಿಸರದ ಅಂಗವಾಗಿ. ಆದ್ದರಿಂದ ಇಲ್ಲಿ ಪರಿಸರಕ್ಕೂ ಮತ್ತು ಪ್ರಜ್ಞೆಯನ್ನು ನಿಯಂತ್ರಿಸುವ ಮೇಲಿನವಕ್ಕು ಗಾಢವಾದ ಸಂಬಂಧ ಇದೆ. ಅದರಂತೆ ಆಯಾ ಪರಿಸರವನ್ನು, ಸಂಸ್ಕೃತಿಯನ್ನು ದಾಟುವ ಪ್ರಕ್ರಿಯೆ ಕೂಡ ನಿರಂತರವಾಗಿ ನಡೆಯುತ್ತಲೇ ಇರುತ್ತದೆ. ಹಾಗಾಗಿ ಇಲ್ಲಿ ಪರಿಸರ ಮತ್ತು ಪ್ರಜ್ಞೆಗಳ ನಿರಂತರ ಸಂಘರ್ಷ ನಡೆಯುತ್ತಲೇ ಇರುತ್ತದೆ. ಇಂತಹ ಸಂಕೀರ್ಣ ಪ್ರಕ್ರಿಯೆಯನ್ನು ಇದರಲ್ಲಿ ಸೆರೆ ಹಿಡಿದಿರುವುದು ಈ ಕಾದಂಬರಿಯ ಹೆಚ್ಚುಗಾರಿಕೆಯಾಗಿದೆ. ಇದನ್ನು ನನ್ನ ಗಮನಕ್ಕೆ ತರುವ ಮೂಲಕ, ಓದುವ ಅವಕಾಶ ಕಲ್ಪಿಸಿದ ಲೇಖಕರಾದ ಗುರು ಪ್ರಸಾದ್ ಕಾಗಿನೆಲೆ ಅವರಿಗೆ ಮತ್ತು ಇದನ್ನು ಪ್ರಕಟಿಸಿದ ಅಂಕಿತ ಪ್ರಕಾಶನದ ನನ್ನ ಸಹಪಾಠಿಗಳಾದ ಪ್ರಭಾ ಮತ್ತು ಪ್ರಕಾಶ್ ಕಂಬತ್ತಳ್ಳಿ ಅವರಿಗೆ ಅಭಿನಂದನೆಗಳು.

  • ರಘುನಾಥ್ ಕೃಷ್ಣಮಾಚಾರ್ – ಲೇಖಕರು, ಚಿಂತಕರು, ರಾಮನಿರಂಜನ್ ಝುನ್ಝುನ್ವಾಲ ಕಾಲೇಜು ಉಪನ್ಯಾಸಕರು.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading