ನೋದ್ ಅಗರವಾಲ್ ಅವರ ಒಂದು ಭಜನೆ “ಜಹ್ಞಾ ಭೇಜೋ ವಹೀ ಜಾಯೇಂಗೇ…..” ಪ್ರೇರಣೆಯಿಂದ ಕವಿಯತ್ರಿ ಗಿರಿಜಾ ಶಾಸ್ತ್ರಿ ಅವರ ಒಂದು ಸುಂದರ ಕವಿತೆಯನ್ನು ತಪ್ಪದೆ ಮುಂದೆ ಓದಿ…
“ಬಗ್ಗು ಬಡಿ ನಿನ್ನಿಷ್ಟದಂತೆ
ವಿಗ್ರಹ” ವಾಗುವೆ
ಹೊರಡೆಂದ ಕಡೆಗೆ
ಹಡಗನೇರುವೆ
ಭಯವಿಲ್ಲ
ಅನುಕೂಲ
ಪ್ರತಿಕೂಲ
ಹೂವು ಮುಳ್ಳುಗಳ
ಭೇದವಿಲ್ಲ
ಪಾತ್ರ ಮುಳುಗುವ
ಆತಂಕವಿಲ್ಲ
ಇರುವುದೊಂದೇ ಕೊರಗು
“ನಾ ತೊಟ್ಟ ದೇಹಗಳ ಲೆಕ್ಕ”
ಇಡುವ ಸೊಕ್ಕು
ನನ್ನಪರಾಧಂಗಳ
ಅರಿವಿಲ್ಲದ ಕೊಬ್ಬು
“ಬಯಕೆ ಬರುವ ಕಣ್ಸನ್ನೆಯೂ”
ಕಾಣೆ
“ಸಂಕಲ್ಪ ಬಲದ ಜಾಗರಣೆಯೂ”
ಅಪರಂಪಾರ ಕಡಲು
ನಡುವೆ ನಿಂತಿದ್ದೇನೆ ನಾನು
ಹಿಡಿದರೆ ಹಿಡಿ ಕೈ
ಬಿಟ್ಟರೆ ಬಿಡು
ಎತ್ತಿಕೊಳ್ಳುವೆ
ಕೈದುವ ನಾನೇ
ಬಿಕ್ಕುಗಳನ್ನು
ಸಿಕ್ಕುಗಳನ್ನು
ಬಿಡಿಸಿಕೊಳ್ಳುವೆ
ನಿರ್ದೇಶಿಸು
ತರ್ಜನಿ ಬೆರಳಲ್ಲಿ
ಕೂಡಲೇ ಹೊರಡುವೆ
ಹೊರಡೆಂದ ಕಡೆಗೆ
ಸಿದ್ಧಳಾಗುವೆ.
- ಡಾ. ಗಿರಿಜಾ ಶಾಸ್ತ್ರಿ
