ಜೀವನ ಸಮುದ್ರದ ಕಪ್ಪೆ ಚಿಪ್ಪು ಸ್ವಾತಿ ಮಳೆಯ ಹನಿಗಾಗಿ ಕಾಯುತ್ತಿದೆ…ಕವಿ ಪೀರಸಾಬ ನದಾಫ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವಿತೆಯನ್ನು ತಪ್ಪದೆ ಮುಂದೆ ಓದಿ…
ವಯಸ್ಸು ಕಳೆಯುತ್ತಿದೆ
ದೇಹ ಮಾಗುತ್ತಿದೆ
ಚಿತ್ರ ತಯಾರಾಗುತ್ತಿದೆ
ಅಂಗೈ ರೇಖೆಗಳು ಅಳಿಯುತ್ತಿವೆ
ಸಮೀಪ ಬರುತ್ತಿದ್ದಾನೆ
ಲಕ್ಷ್ಯದ ಪಥಿಕನವನು
ದಾರಿ ದೂರ ದೂರ
ಸರಿಯುತ್ತಿದೆ
ಜೀವನ ತೃಪ್ತಿಯು ಅಲ್ಲ
ಹಾಗೇ ಬಾಯಾರಿಕೆಯು ಅಲ್ಲ
ಯಾಕೆಂದರೆ ಪ್ರಿಯನು
ದೂರವು ಇಲ್ಲ ಹತ್ತಿರವೂ ಇಲ್ಲ
ನಾನವನನು ಕೂಡುವ ದಿನ
ಹತ್ತಿರವಾಗುತ್ತಿದೆ
ಆದರೂ ದುಗುಡ ದುಮ್ಮಾನವಿಲ್ಲ
ಕಣ್ಣಲ್ಲಿ ನೀರಿಲ್ಲ ಮಂದಹಾಸವೂ ಇಲ್ಲ
ಚುಕ್ಕಿಗಳು ನಳನಳಿಸುತ್ತಿವೆ
ಚಂದಿರ ಹೊಳೆಯುತ್ತಿದ್ದಾನೆ
ಜೀವನ ಸಮುದ್ರದ ಕಪ್ಪೆ ಚಿಪ್ಪು
ಸ್ವಾತಿ ಮಳೆಯ ಹನಿಗಾಗಿ
ಕಾಯುತ್ತಿದೆ
ಕಾಡಿನ ದಾರಿಯ ಮಧ್ಯ
ಕನವರಿಕೆಯಿಲ್ಲ
ಮತ್ತೇ ಹಳಹಳಿಕೆ
ಕಳೆದುಳಿದ ಕಲರವದಲಿ
ನಿರವ ಮೌನ ಆವರಿಸಿದೆ
ಒತ್ತೊತ್ತಾಗಿ ಒಂದಾಗಿ ಚಂದಾಗಿ
ಕುಳಿತ ಗಿಳಿಗಳೆರಡು ಮಾತನಾಡುತ್ತಿವೆ
ಇರುವ ಜಗದ ಹಣ್ಣು ಸಾಕೆಮಗೆ
ನಾಳಿನ ಚಿಂತೆ ನಾಳೆಗೆ
ಇಂದಿಷ್ಟು ನಮ್ಮ ಪಾಲು
ಸವಿಯೋಣ ಸವಿಗಳಗೆ
- ಪೀರಸಾಬ ನದಾಫ
