ಸ್ಕೇಟಿಂಗ್ ರಂಗದ ಶರವೇಗದ ವೀರ !

ಕನ್ನಡಿಗರಲ್ಲಿ ಪ್ರತಿಭೆಗಳಿಗೇನೂ ಕೊರತೆ ಇಲ್ಲ. ಮೂಲೆ ಮೂಲೆಯಲ್ಲೂ ಹುಡುಕುತ್ತ ಹೋದರೆ ಒಂದಲ್ಲ ಒಂದು ಪ್ರತಿಭೆಗಳನ್ನು ಕಾಣಬಹುದು. ಇದಕ್ಕೆ ಪುಷ್ಟಿ ನೀಡುವಂತೆ ನಮ್ಮ ಆಕೃತಿ ಕನ್ನಡದ ಕಣ್ಣಿಗೆ ಬಿದ್ದದ್ದು ರಾಷ್ಟ್ರೀಯ ಹಾಗು ಅಂತಾರಾಷ್ಟ್ರೀಯ ಸ್ಕೇಟಿಂಗ್ ಕ್ರೀಡಾ ಪಟು ರಾಘವೇಂದ್ರ ಸೋಮಯಾಜಿ ಅವರ ಪ್ರತಿಭೆ.

ನೋಡಲು ಸರಳವಾಗಿ ಕಾಣುವ ರಾಘವೇಂದ್ರ ಅವರು ಸ್ಕೇಟಿಂಗ್ ರಿಂಕ್ ನಲ್ಲಿ ಸ್ಕೇಟಿಂಗ್ ಕಟ್ಟಿಕೊಂಡು ನಿಂತರೆ ಅವರ ಸಾಟಿಗೆ ಇನ್ನೊಬ್ಬರು ನಿಲ್ಲಲಾರರು.ಅಂತಾರಾಷ್ಟ್ರೀಯ ರೋಲರ್ ಸ್ಕೇಟಿಂಗ್ ದಿಗ್ಗಜರ ಪಟ್ಟಿಯಲ್ಲಿ ರಾಘವೇಂದ್ರ ಸೋಮಯಾಜಿ ಅವರ ಹೆಸರು ಮೂವತ್ನಾಲ್ಕನೇಯ ಸ್ಥಾನ ಹಾಗು ರಾಷ್ಟ್ರೀಯ ಚಾಂಪಿಯನ್ ಶಿಪ್ ಐಸ್ ಸ್ಕೇಟಿಂಗ್ ನಲ್ಲಿ ರಾಘವೇಂದ್ರ ಅವರ ಹೆಸರು ಇಂದಿಗೂ ಮೊದಲ ಸ್ಥಾನದಲ್ಲಿದೆ. ರಾಘವೇಂದ್ರ ಅವರು ಕ್ರೀಡಾಲೋಕದಲ್ಲಿ ಕನ್ನಡದ ಕೋಡು ಅಂತಲೇ ಹೇಳಬಹುದು.

ಈಗಾಗಲೇ ರಾಷ್ಟ್ರೀಯ ಚಾಂಪಿಯನ್ ಶಿಪ್ ನಲ್ಲಿ೧೫ ಬಾರಿ ಬಂಗಾರದ ಪದಕಗಳು, ೭ ಬಾರಿ ಬೆಳ್ಳಿ ಪದಕಗಳನ್ನು ಮತ್ತು ೭ ಬಾರಿ ಕಂಚಿನ ಪದಕಗಳನ್ನು ಮತ್ತು ರಾಷ್ಟ್ರೀಯ ಮಟ್ಟದಲ್ಲಿ ೫ ಬಂಗಾರದ ಪದಕಗಳನ್ನು ಗೆದ್ದಿದ್ದಾರೆ. ರೋಲರ್ ಮತ್ತು ಐಸ್ ಸ್ಕೇಟಿಂಗ್ ಎರಡರಲ್ಲೂ ಹಿಡಿತ ಸಾಧಿಸಿರುವ ಅವರು ಐಸ್ ಸ್ಕೇಟಿಂಗ್ ನ್ಯಾಷನಲ್ ಚಾಂಪಿಯನಶೀಪ್ ನಲ್ಲಿ ೧೨ ಬಾರಿ ಬಂಗಾರದ ಪದಕಗಳನ್ನು, ಒಂದು ಬಾರಿ ಬೆಳ್ಳಿ ಪದಕವನ್ನು ಮತ್ತು ಇತರೆ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಒಟ್ಟು ೩೨ ಪದಕಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ನಾಲ್ಕು ವರ್ಷಕ್ಕೊಮ್ಮೆ ನಡೆಯುವ ‘೮ ನೇಯ ಏಶಿಯನ್ ವಿಂಟರ್ ಗೇಮ್ಸ್’ ಜಪಾನ್ ನಲ್ಲಿ ನಡೆದ ಐಸ್ ಸ್ಕೇಟಿಂಗ್ ಇಂಟರ್ ನ್ಯಾಷನಲ್ ಚಾಂಪಿನ್ ಶಿಪ್ ನಲ್ಲಿ ಭಾರತದ ಪ್ರತಿನಿಧಿಯಾಗಿ ಭಾರತದ ಧ್ವಜವನ್ನು ಹಿಡಿದು ಮುನ್ನಡೆದಿದ್ದಾರೆ. ಅದರಲ್ಲಿ ಪಾಲ್ಗೊಳ್ಳುವುದು ಅಷ್ಟು ಸುಲಭದ ಮಾತಲ್ಲ. ಅಷ್ಟೇ ಅಲ್ಲ ಚೀನಾ, ನೆದರ್ಲಾಂಡ್, ಸಪ್ಪೊರೊ, ತೈವಾನ್, ಟರ್ಕಿ, ಜಪಾನ ಸೇರಿದಂತೆ ಹಲವಾರು ದೇಶಗಳಲ್ಲಿ ನಡೆದ ಅಂತಾರಾಷ್ಟ್ರೀಯ ಸ್ಕೇಟಿಂಗ್ ಸ್ಪರ್ಧೆಗಳಲ್ಲಿ ಭಾಗವಹಿಸಿದ ಕೀರ್ತಿ ರಾಘವೇಂದ್ರ ಸೋಮಯಾಜಿ ಅವರದು. ಅವರಿಗೆ ಶರವೇಗ ಚತುರ ಬಿರುದು ಕೂಡ ಸಂದಿದೆ.

ಅವರ ಸಾಧನೆ ಆಕಾಶದೆತ್ತರಕ್ಕಾದರೂ, ರಾಘವೇಂದ್ರ ಅವರ ಹೆಸರನ್ನು ಜನ ಅಷ್ಟಾಗಿಯೂ ಗುರುತಿಸದೆ ಇರುವುದು ವಿಷಾದನೀಯ. ಕಾರಣ ಕ್ರಿಕೆಟ್, ಬ್ಯಾಡ್ಮಿಂಟನ್, ಟೆನಿಸ್ ಗಳ ಪ್ರಚಾರದ ಭರಾಟೆಯಲ್ಲಿ ಸ್ಕೇಟಿಂಗ್ ನಂತಹ ಹಲವಾರು ಆಟಗಳು ಮತ್ತು ಅವುಗಳ ಆಟಗಾರರಿಗೆ ಪ್ರಚಾರ ಸಿಗುತ್ತಿಲ್ಲ. ಅಷ್ಟೇ ಅಲ್ಲ ಆಟಕ್ಕೆ ಬೇಕಾದ ಸರಿಯಾದ ಅನುಕೂಲತೆಗಳು ದೊರೆಯುತ್ತಿಲ್ಲ. ಪ್ರತಿಯೊಂದು ಆಟದ ತರಬೇತಿಗೆ ಅದರದೇ ಆದ ಮೈದಾನಗಳಿವೆ, ಕೋರ್ಟಗಳಿವೆ. ಆದರೆ ಸ್ಕೇಟಿಂಗ್ ತರಬೇತಿ ಪಡೆಯಲು ಸರಿಯಾದ ರಿಂಕ್ ಗಳಿಲ್ಲ. ಅದರಲ್ಲೂ ರಾಘವೇಂದ್ರ ಅವರಂತ ಐಸ್ ಸ್ಕೇಟಿಂಗ್ ಆಟಗಾರರಿಗೆ ಅಭ್ಯಾಸ ಮಾಡಲು ಹತ್ತಿರದಲ್ಲಿ ಐಸ್ ಸ್ಕೇಟಿಂಗ್ ರಿಂಕ್ ಗಳಿಲ್ಲ. ಅವರು ಅಭ್ಯಾಸ ಮಾಡಬೇಕಾದರೆ ಡಿಸೆಂಬರ್ ತಿಂಗಳಲ್ಲಿ ದೆಹಲಿ,ಕೊಲ್ಕತ್ತಾ ಅಥವಾ ಮನಾಲಿಯಂತಹ ದೂರದ ಪ್ರದೇಶಗಳಿಗೆ ತೆರಳಬೇಕು. ಜೊತೆಗೆ ಅಲ್ಲಿನ ಖರ್ಚು ವೆಚ್ಚಗಳನ್ನು ಅವರೇ ಭರಿಸಬೇಕು. ಸ್ಕೇಟಿಂಗ್ ಆಟದಲ್ಲಿ ಎತ್ತರಕ್ಕೆ ಬೆಳೆದಷ್ಟು ಆರ್ಥಿಕ ಸಂಕಷ್ಟಗಳು ಆಟಗಾರನ ಪಾಲಿಗೆ ಎದುರಾಗುತ್ತವೆ. ಆದರೆ ಎಷ್ಟೇ ಕಷ್ಟಗಳು ಆಟಗಾರನ ಪಾಲಿಗೆ ಎದುರಾದರು ಕೂಡ ಅದನ್ನು ಎದುರಿಸಿ, ನಮ್ಮ ದೇಶಕ್ಕಾಗಿ ಆಡುತ್ತಿದ್ದೇವೆ. ನಮ್ಮ ದೇಶದ ಹೆಸರನ್ನು ಉತ್ತುಂಗಕ್ಕೆ ಕೊಂಡೊಯ್ಯಬೇಕು ಎನ್ನುವ ನಿಲುವ ಮಾತ್ರ ಆಟಗಾರನಲ್ಲಿರುತ್ತದೆ.

ರಾಘವೇಂದ್ರ ಅವರ ಸಾಧನೆಯ ಹಿಂದೆ ಹಲವು ನೋವುಂಡ ಕತೆಗಳಿವೆ. ಕಡುಬಡತನದಲ್ಲಿ ಹುಟ್ಟಿ ಬೆಳೆದ ಅವರು ನಡೆದು ಬಂದ ಹಾದಿ ಸುಗಮವಾಗಿರಲಿಲ್ಲ.ಹುಟ್ಟಿ ಬೆಳೆದದ್ದು ಅರಮನೆ ನಗರಿ ಮೈಸೂರನಲ್ಲಿಯಾದರೂ ಮನೆಯಲ್ಲಿ ಕಿತ್ತು ತಿನ್ನುವ ಬಡತನ. ಅವರ ತಂದೆ ವಿಶ್ವನಾಥ್ ಸೋಮಯಾಜಿ ಮತ್ತು ತಾಯಿ ನಳಿನಿ ರಸ್ತೆಯ ಬದಿಯ ಬಜ್ಜಿ ವ್ಯಾಪಾರಿಗಳು. ಸಾಲದಕ್ಕೆ ಅವರಿಗೆ ಮೂರು ಜನ ಮಕ್ಕಳು. ಎಲ್ಲರ ಹೊಟ್ಟೆ ತುಂಬಿಸಬೇಕು ಮತ್ತು ಎಲ್ಲರನ್ನು ಓದಿಸಬೇಕಾದ ದೊಡ್ಡ ಜವಾಬ್ದಾರಿ ಅವರ ಅಪ್ಪ-ಅಮ್ಮನ ಹೆಗಲ ಮೇಲಿತ್ತು. ಆಗ ಶಾಲೆಯಿಂದ ಬಂದು ಅಪ್ಪ-ಅಮ್ಮನ ಕೆಲಸದಲ್ಲಿ ಕೈ ಜೋಡಿಸಬೇಕಾದ ಅನಿವಾರ್ಯತೆಯೂ ಆ ಮಕ್ಕಳಿಗಿತ್ತು. ಅಪ್ಪ-ಅಮ್ಮ ಮಕ್ಕಳಿಗಾಗಿ ಪಡುತ್ತಿದ್ದ ಆ ಕಷ್ಟದ ದಿನಗಳು,ಮತ್ತು ಅವುಗಳ ನಡುವೆ ತಾವು ಬೆಳೆದು ಬಂದ ರೀತಿಯನ್ನು ಈಗ ನೆನಪಿಸಿಕೊಂಡರೆ ಸ್ಕೇಟಿಂಗ್ ನಲ್ಲಿ ಈ ಮಟ್ಟಕ್ಕೆ ಬೆಳೆಯುತ್ತೇನೆ ಎಂದು ಅವರು ಕನಸ್ಸಲ್ಲು ನೆನೆಸಿರಲಿಲ್ಲವೆಂದು ಹೇಳುವಾಗ ಭಾವುಕರಾದರು.

ನಾನು ಸ್ಕೇಟಿಂಗ್ ಕಲಿತದ್ದು ಕೂಡ ಒಂದು ಆಕಸ್ಮಿಕ ರೀತಿ ಎನ್ನುತ್ತಾ ತಮ್ಮ ಮನದಾಳದ ಮಾತನ್ನು ಒಂದೊಂದಾಗಿ ಬಿಚ್ಚಿಡುತ್ತಾ ಹೋಗುತ್ತಾರೆ. ಅಪ್ಪನ ಅಂಗಡಿಗೆ ಯಾರೋ ಒಬ್ಬ ಪುಣ್ಯಾತ್ಮ ಬಂದು ಸ್ಕೇಟಿಂಗ್ ಶೂವನ್ನು ೫೦ ರೂಪಾಯಿಗೆ ಮಾರಿದ. ಅಂದಿನ ಪರಿಸ್ಥಿಯಲ್ಲಿ ೫೦ರೂಪಾಯಿ ನಮಗೆಲ್ಲ ದೊಡ್ಡ ಹಣ. ಅದನ್ನು ಕೊಳ್ಳುವುದು ಅಪ್ಪನಿಗೆ ಕಷ್ಟವಿತ್ತು. ಆದರೆ ಮಾರಾಟಗಾರನ ಹಠಕ್ಕೆ ಮಣಿದು ಸ್ಕೇಟಿಂಗ್ ಶೂನ್ನು ಕೊಂಡು ಮನೆಗೆ ತಂದಿದ್ದರು. ಆಗ ಅಣ್ಣ, ಅಕ್ಕ ಸ್ಕೇಟಿಂಗ್ ಕಟ್ಟಿಕೊಂಡು ಬಿದ್ದರು. ಮತ್ತು ಇಬ್ಬರು ಅದರ ಸಹವಾಸದಿಂದ ದೂರ ಉಳಿದರು. ಕೊನೆಗೆ ಉಳಿದದ್ದು ನಾನು ಕೂಡ ಸ್ಕೇಟಿಂಗ್ ಕಟ್ಟಿಕೊಂಡು ಬಿದ್ದೆ. ಆದರೆ ಇಟ್ಟ ಹೆಜ್ಜೆಯನ್ನು ಹಿಂದಕ್ಕಿಡಲಿಲ್ಲ. ಮನೆಯ ಮುಂದಿನ ರಸ್ತೆಯಲ್ಲಿಯೇ ನಿಧಾನಕ್ಕೆ ಅಭ್ಯಾಸ ನಡಿಸಿದೆ. ಸ್ವಲ್ಪ ಧೈರ್ಯ ಬರುತ್ತಿದ್ದಂತೆ ಬೀದಿ ಬೀದಿಯಲ್ಲಿ ಸುತ್ತತೊಡಗಿದೆ. ಇದನ್ನು ಗಮನಿಸಿದ ಅಪ್ಪ ಇವನನ್ನು ಹೀಗೆ ಬಿಟ್ಟರೆ ಗಾಢಿಯ ಕೆಳಗೆ ಹೋಗಿಯೇ ಬಿಡುತ್ತಾನೆ ಎನ್ನುವ ಭಯಕ್ಕೆ ಸ್ಕೇಟಿಂಗ್ ಮಾಂತ್ರಿಕ ಕೆ.ಶ್ರೀಕಾಂತ್ ರಾವ್ ಸರ್ ಅವರ ಬಳಿ ನನ್ನನ್ನು ಸೇರಿಸಿದರು. ಅಲ್ಲಿಂದ ನನ್ನ ಸ್ಕೇಟಿಂಗ್ ಪಯಣ ಶುರುವಾಯಿತು. ಅವನ್ನೆಲ್ಲವನ್ನು ಈಗ ನಾನು ನೆನೆಸಿಕೊಂಡರೆ ಮೈ ರೋಮಾಂಚನವಾಗುತ್ತದೆ.

ಈ ಸಂದರ್ಭದಲ್ಲಿ ನನ್ನ ಗುರು ಶ್ರೀಕಾಂತ್ ಸರ್ ಬಗ್ಗೆ ಒಂದು ಮಾತನ್ನು ಹೇಳಲೇಬೇಕು. ಗುರಿ ನನ್ನ ಮುಂದಿತ್ತುನಿಜ. ಆದರೆ ಬೆನ್ನ ಹಿಂದೆ ನನ್ನ ಗುರು ಶ್ರೀಕಾಂತ್ ಸರ್ ನಿಂತಿದ್ದರು. ಹಾಗಾಗಿ ನಾನು ಸ್ಕೇಟಿಂಗ್ ನಲ್ಲಿ ಏನಾದರೂ ಯಶಸ್ಸು ಸಾಧಿಸಿದ್ದರೇ, ನನ್ನ ಗುರು ಶ್ರೀಕಾಂತ ಸರ್ ಪಾತ್ರ ದೊಡ್ಡದು ಎನ್ನುವಾಗ ರಾಘವೇಂದ್ರ ಅವರ ಕಣ್ಣುಗಳಂಚಿನಲ್ಲಿ ನೀರು ತುಂಬಿತ್ತು.

bf2fb3_d18531b4a00c465e814905a844f71ee4~mv2.jpg

(ಗುರು ಕೆ, ಶ್ರೀಕಾಂತ್ ರಾವ್ ಅವರೊಂದಿಗೆ ರಾಘವೇಂದ್ರ ಸೋಮಯಾಜಿ)

ಸ್ಕೇಟಿಂಗ್ ಆಟದ ಬಗ್ಗೆ ಹೇಳಬೇಕೆಂದರೆ ಸ್ಕೇಟಿಂಗ್ ಆಟ ಕಲಿಯುವುದು ಅಷ್ಟು ಸುಲಭವಲ್ಲ.ಈ ಆಟ ನೋಡಲು ಕಾರ್ ರೇಸ್ ನೋಡಿದಷ್ಟೇ ಎದೆ ಝಲ್ ಎನ್ನಿಸುತ್ತದೆ. ಕಾರಿನಷ್ಟೇ ವೇಗ, ಕಾರಿಗೆ ಅಡ್ಡವಾದರೆ ಆಕ್ಸಿಡೆಂಟ್ ಗ್ಯಾರಂಟಿ ಹಾಗೆಯೇ ಸ್ಕೇಟಿಂಗ್ ಆಟ. ಒಬ್ಬರ ಹಿಂದೆ ಒಬ್ಬರು ಅತಿವೇಗವಾಗಿ ಓಡುತ್ತಿರುತ್ತಾರೆ. ಅಲ್ಲಿ ಒಬ್ಬರು ಯಾಮಾರಿ ಬಿದ್ದರು ದೊಡ್ಡ ಅಪಘಾತವೇ ಆಗುತ್ತದೆ. ಹಾಗಾಗಿ ರಿಂಕ್ ನಲ್ಲಿ ಇಳಿದಾಗ ಏಕಾಗ್ರತೆ ಮುಖ್ಯ.ಅದನ್ನು ಈ ಆಟ ಕಲಿಸಿಕೊಡುತ್ತದೆ. ಜೊತೆಗೆ ಜೀವನದಲ್ಲಿ ಒಂದು ಶಿಸ್ತುನ್ನು ಕೂಡ ಕಲಿಯಬಹುದು. ಆಟಗಾರನ ಹಾದಿಯಲ್ಲಿ ಸಾಕಷ್ಟು ಕಲ್ಲು,ಮುಳ್ಳುಗಳಿರುತ್ತವೆ. ಆದರೆ ನಮ್ಮ ದೇಶಕ್ಕಾಗಿ ಆಡುತ್ತಿದ್ದೇವೆ ಎಂದಾಗ ಅವುಗಳೆಲ್ಲ ತೃಣಕ್ಕೆ ಸಮಾನವಾಗಿ ಬಿಡುತ್ತದೆ ಎಂದು ರಾಘವೇಂದ್ರ ಅವರು ಹೇಳುವಾಗ ದೇಶದ ಮೇಲಿನ ಅಭಿಮಾನ ಅವರಲ್ಲಿ ಎದ್ದು ಕಾಣುತ್ತಿತ್ತು.

ಒಬ್ಬ ಆಟಗಾರನ ದೇಹ ಮಿಷನ್ ನಂತೆ ಕೆಲಸ ಮಾಡುತ್ತದೆ. ಅವನ ದೇಹವೇ ಅವನಿಗೆ ದೊಡ್ಡ ಬಂಡವಾಳವಾಗಿರುತ್ತದೆ. ದೇಹವನ್ನು ಎಷ್ಟು ದಂಡಿಸಬೇಕು ಮತ್ತು ಅದರ ಆರೈಕೆ ಹೇಗೆ ಮಾಡಿಕೊಳ್ಳಬೇಕು ಎನ್ನುವುದು ಆಟಗಾರನಿಗೆ ಮಾತ್ರ ತಿಳಿದಿರುತ್ತದೆ. ರಾಘವೇಂದ್ರ ಅವರ ದಿನ ಶುರುವಾಗುವುದೇ ಬೆಳಗ್ಗೆ ಐದು ಘಂಟೆಗೆ ರಸ್ತೆಯಲ್ಲಿ ಸ್ಕೇಟಿಂಗ್ ತರಬೇತಿ ನೀಡುವ ಮೂಲಕ. ಅದಾದ ನಂತರ ಶಾಲೆಯಲ್ಲಿ ಸ್ಕೇಟಿಂಗ್ ತರಬೇತಿ. ಮತ್ತೆ ಸಾಯಂಕಾಲ ರಾಜರಾಜೇಶ್ವರಿ ನಗರದಲ್ಲಿರುವ ಬೆಸ್ಟ್ ಕ್ಲಬ್ ಸ್ಕೇಟಿಂಗ್ ರಿಂಕ್ ನಲ್ಲಿ ತರಬೇತಿ ನೀಡುವುದರ ಜೊತೆಗೆ ತಾವು ಕೂಡ ಅಭ್ಯಾಸವನ್ನು ಮಾಡುತ್ತಾರೆ. ಅನಂತರ ಜಿಮ್ ನಲ್ಲಿ ದೇಹ ದಂಡನೆ ಎಲ್ಲವೂ ಮುಗಿಯುವಷ್ಟರಲ್ಲಿ ರಾತ್ರಿ ಹತ್ತು ಗಂಟೆ ಆಗಿರುತ್ತದೆ. ದೇಹ ದಂಡನೆ ಮಾಡಿದ ನಂತರ ಆರೋಗ್ಯಕರ ಆಹಾರ ಸೇವನೆ, ಐಸ್ ಬಾತ್, ನಿದ್ದೆ ಈ ಮೂರನ್ನು ಕಟ್ಟುನಿಟ್ಟಾಗಿ ತಪ್ಪದೆ ಪಾಲಿಸುವ ಮೂಲಕ ತಮ್ಮ ಆರೋಗ್ಯಕರದ ಹಿಂದಿನ ರಹಸ್ಯವನ್ನು ಬಿಚ್ಚಿಡುತ್ತಾರೆ.

bf2fb3_54e844d6179f4278ba23fa948471ac35~mv2.jpg

(ರಾಘವೇಂದ್ರ ಸೋಮಯಾಜಿ ಮತ್ತು ಅವರ ಶಿಷ್ಯೆ ಅಂತಾರಾಷ್ಟ್ರೀಯ ಸ್ಕೇಟಿಂಗ್ ಆಟಗಾರ್ತಿ ಶಿಖಾ ರೈ)

ರಾಘವೇಂದ್ರ ಅವರ ಕೈಯಲ್ಲಿ ಪಳಗಿದ ಹದಿನೈದು ಜನ ಶಿಷ್ಯಂದಿರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಜೈಯಭೇರಿಯನ್ನು ಭಾರಿಸುತ್ತಿದ್ದಾರೆ.ಇತ್ತೀಚೆಗಷ್ಟೇ ಬಾಲಕಿಯರ ಸ್ಕೇಟಿಂಗ್ ವಿಭಾಗದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹನ್ನೊಂದನೇ ಸ್ಥಾನವನ್ನು ಗಿಟ್ಟಿಸಿಕೊಂಡ ‘ಚಿನ್ನದ ಹುಡುಗಿ‘ ಶಿಕಾ ರೈ ಅವರು ರಾಘವೇಂದ್ರ ಅವರ ಅಪ್ಪಟ ಶಿಷ್ಯೆ. ದೆಹಲಿ, ಪಂಜಾಬ್, ರಾಜಸ್ತಾನ ಸೇರಿದಂತೆ ಹಲವಾರು ದೂರದಸ್ಥಳಗಳಿಂದ ಬಂದು ರಾಘವೇಂದ್ರ ಅವರ ಬಳಿ ತರಬೇತಿಯನ್ನು ಪಡೆಯುತ್ತಿದ್ದಾರೆ.

bf2fb3_93324f53a86b4aee9c778e88c9cc6bd8~mv2.jpg

(ರಾಘವೇಂದ್ರ ಸೋಮಯಾಜಿ ಅವರ ತಂದೆ ಜಿ.ವಿಶ್ವನಾಥ್ ಸೋಮಯಾಜಿ ಮತ್ತು ತಾಯಿ ನಳಿನಿ.ಜಿ)

bf2fb3_f33f6ef97bfe4cbbb4d981a348daa946~mv2.jpg

(ಪತ್ನಿ ಸ್ವಾತಿ ಹಾಗು ಮಗಳು ಸ್ವರ ಅವರೊಂದಿಗೆ ರಾಘವೇಂದ್ರ ಸೋಮಯಾಜಿ)

ಪ್ರತಿ ಯಶಸ್ವಿ ಪುರುಷನ ಹಿಂದೆ ಮಹಿಳೆಯೊಬ್ಬಳು ಇರುತ್ತಾಳೆ ಎನ್ನುವ ಮಾತಿದೆ. ಹಾಗೆಯೇ ರಾಘವೇಂದ್ರ ಅವರ ಯಶಸ್ಸಿನ ಹಿಂದೆ ಅವರ ಧರ್ಮಪತ್ನಿಸ್ವಾತಿ ಅವರು ಸದಾ ಅವರ ಬೆನ್ನೆಲುಬಾಗಿ ನಿಂತಿದ್ದಾರೆ. ರಾಘವೇಂದ್ರ ಅವರಿಗೆ ಮದುವೆ, ಮಗುವಾದರೂ ಕೂಡ ಸ್ಕೇಟಿಂಗ್ ಮೇಲಿನ ಪ್ರೀತಿ ಮಾತ್ರ ಮಾಸಿಲ್ಲ. ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವಿಕೆ, ದೇಹ ದಂಡನೆ, ಅದೇ ಶಿಸ್ತು,ಅದೇ ದೇಶ ಪ್ರೇಮ ಯಾವುದು ಕೂಡ ಅವರಲ್ಲಿ ಬದಲಾಗಿಲ್ಲ. ಈಗಲೂ ಕೂಡ ದೇಶಕ್ಕಾಗಿ ಆಡುತ್ತಿದ್ದಾರೆ ಎನ್ನುವುದೇ ಇನ್ನೊಂದು ವಿಶೇಷ.

ರಾಘವೇಂದ್ರ ಅವರಲ್ಲಿ ಪ್ರತಿಭೆ ಇದೆ. ಅದು ಎಲೆಮರೆಯ ಕಾಯಿಯಾಗಿ ಉಳಿದುಕೊಳ್ಳಬಾರದು. ಹಾಗು ಅವರಂತೆ ಹಲವಾರು ಪ್ರತಿಭಾವಂತ ಆಟಗಾರರು ನಮ್ಮ ನಾಡಿನಲ್ಲಿದ್ದಾರೆ. ಅವರನ್ನು ಹುಡುಕಿ ಬೆಳಕಿಗೆ ತರುವಲ್ಲಿ ಮಾಧ್ಯಮದವರ ಬೆಂಬಲ ಬೇಕು. ಮತ್ತು ಎಲ್ಲೆಲ್ಲೋ ಪೊಲಾಗುತ್ತಿರುವ ಸರ್ಕಾರದ ಹಣ ಇಂತಹ ಪ್ರತಿಭಾವಂತ ಆಟಗಾರರಿಗೆ ತಲುಪಿಸಿದರೆ ಭವಿಷ್ಯತ್ತಿನಲ್ಲಿ ಅವರೇ ನಮ್ಮ ದೇಶದ ದೊಡ್ಡ ಆಸ್ತಿಯಾಗುತ್ತಾರೆ ಎನ್ನುವಲ್ಲಿ ಎರಡು ಮಾತಿಲ್ಲ.

ರಾಘವೇಂದ್ರ ಸೋಮಯಾಜಿ ಅವರು ಪಟ್ಟ ಶ್ರಮಕ್ಕೆ ಫಲ ಸಿಗಲಿ, ದೇಶಕ್ಕೆ ಇನ್ನಷ್ಟು ಪದಕಗಳನ್ನು ತರಲಿ ಮತ್ತು ಇನ್ನಷ್ಟು ಯುವ ಸ್ಕೇಟಿಂಗ್ ಆಟಗಾರರು ಅವರ ಗರಡಿಯಲ್ಲಿ ಪಳಗಲಿ. ಕ್ರಿಕೆಟ್ ಆಟಕ್ಕೆ ಸಿಕ್ಕಷ್ಟು ಪ್ರಾಮುಖ್ಯತೆ ಸ್ಕೇಟಿಂಗ್ ಆಟಕ್ಕೂ ಸಿಗಲಿ ಮತ್ತು ನಮ್ಮ ದೇಶದ ಹೆಸರನ್ನು ಇನ್ನಷ್ಟು ಎತ್ತರಕ್ಕೆ ಬೆಳೆಸಲಿ ಎಂದು ಆಕೃತಿ ಕನ್ನಡ ಆಶಿಸುತ್ತದೆ.

– ಅತಿ ಶೀಘ್ರದಲ್ಲಿ, ರಾಘವೇಂದ್ರ ಸೋಮಯಾಜಿ ಅವರೊಂದಿಗೆ ಮಾತುಕತೆ ವಿಡಿಯೋವನ್ನು ನಮ್ಮ ಆಕೃತಿಕನ್ನಡದಲ್ಲಿ ನೋಡಿ …

ರಾಘವೇಂದ್ರ ಸೋಮಯಾಜಿ ಬಗ್ಗೆ ಇನ್ನಷ್ಟು ಓದಿ :

 

ಲೇಖನ : ಶಾಲಿನಿ ಪ್ರದೀಪ್

ak.shalini@outlook.com

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW