ನಾಯಕನಷ್ಟೇ ಅಭಿಮಾನ ಬೆಳೆಸಿಕೊಂಡ ಈ ಖಳನಾಯಕರು

ಸಿನಿಮಾದಲ್ಲಿ ಖಳನಾಯಕನ ಪಾತ್ರ ಇದ್ದರೇ ಸಿನಿಮಾಕ್ಕೆ ಒಂದು ಕಳೆ ಮತ್ತು ನಾಯಕನಿಗೂ ಒಂದು ಬೆಲೆ. ಹಾಗೆಯೆ ಖಳನಾಯಕರೆಂದ ಮೇಲೆ ವಸಿಷ್ಠ ಸಿಂಹ, ಧನಂಜಯನಂತಹ ಕಲಾವಿದರಿದ್ದರೇ ಆ ಸಿನಿಮಾದಲ್ಲಿ ಪ್ರೇಕ್ಷಕನಿಗೆ ಏನೋ ಒಂದು ಕುತೂಹಲವಿರುತ್ತದೆ.

ಇಂದಿನ ಬಹುತೇಕ ಸಿನಿಮಾಗಳಲ್ಲಿ ನಾಯಕನದೇ ದರ್ಬಾರು. ಅವುಗಳ ಮಧ್ಯೆ ಈ ಜೋಡಿ ಖಳನಾಯಕನ ಪಾತ್ರಕ್ಕೂ ಬೆಲೆ ಇದೆ ಎಂದು ತೋರಿಸಿ ಕೊಟ್ಟಿದ್ದಾರೆ. ಇತ್ತೀಚಿಗೆ ವಸಿಷ್ಠ, ಧನಂಜಯ ಅಭಿನಯದ ಕೆಲವು ಸಿನಿಮಾಗಳನ್ನು ನೋಡಿದೆ. ಅವರ ಅಭಿನಯವು ತುಂಬಾನೇ ಇಷ್ಟವಾಯಿತು. ಕೆಲವು ಸಿನಿಮಾಗಳಲ್ಲಿ ನಾಯಕನ ಪಾತ್ರಕ್ಕಿಂತ ಇವರ ಪಾತ್ರವೇ ಹೆಚ್ಚು ಖುಷಿ ಕೊಟ್ಟಿತು ಎನ್ನಬಹುದು. ಅವರಿಬ್ಬರೂ ಯಾವುದೇ ಸಿನಿಮಾದ ಹಿನ್ನೆಲೆಯಿಂದ ಬಂದವರಲ್ಲ. ತಮ್ಮ ಕಠಿಣ ಪರಿಶ್ರಮ, ಶ್ರದ್ದೆಯಿಂದ ಇಂದು ಕನ್ನಡದ ಬಹು ಬೇಡಿಕೆಯ ಖಳನಾಯಕರಾಗಿದ್ದಾರೆ. ಅದರಲ್ಲಿಯೂ ನಮ್ಮ ಕನ್ನಡದ ಹುಡುಗರೆಂದರೆ ಅವರ ಮೇಲೆ ನಮಗೆ ಸ್ವಲ್ಪ ಅಭಿಮಾನ ಹೆಚ್ಚಾಗಿಯೇ ಇರುತ್ತದೆ.

ಅದರಲ್ಲಿಯೂ ಕನ್ನಡಿಗರೆಂದರೆ ಪ್ರತಿಭೆಗಳಿಗೇನು ಭರವಿಲ್ಲ. ಹಾಗಿದ್ದರೂ ಕೂಡ ನಮ್ಮ ನಿರ್ಮಾಪಕ ಹಾಗು ನಿರ್ದೇಶಕರಿಗೆ ಹೊರಗಿನಿಂದ ಕಲಾವಿದರನ್ನು ಕರೆಸಿಕೊಳ್ಳುವ ಒಂದು ಕೆಟ್ಟ ಛಾಳಿ ಇದೆ. ಅದರಲ್ಲಿ ಖಳನಾಯಕನ ಪಾತ್ರವೂ ಕೂಡ ತುತ್ತಾಗಿ ಹೋಗಿದೆ. ಬಾಲಿವುಡ್, ಟಾಲಿವುಡ್ ಸೇರಿದಂತೆ ಬೇರೆ ಬೇರೆ ಭಾಷೆಗಳಿಂದ ಖಳನಾಯಕರನ್ನು ಕರೆಸಿಕೊಂಡು ಸಿನಿಮಾ ಮಾಡುತ್ತಾರೆ. ಸಾಲದಕ್ಕೆ ಈಗ ಹಾಲಿವುಡ್ ನಿಂದಲೂ ಕಲಾವಿದರು ಕನ್ನಡ ಚಿತ್ರರಂಗವನ್ನು ಪ್ರವೇಶಿಸುತ್ತಿದ್ದಾರೆ. ಇದನ್ನು ನಿರ್ದೇಶಕರು, ನಿರ್ಮಾಪಕರು ಕನ್ನಡ ಸಿನಿಮಾದ ಬೆಳವಣಿಗೆ ಎಂದುಕೊಂಡಿದ್ದಾರೋ ಅಥವಾ ನಮ್ಮ ಕನ್ನಡಿಗರಲ್ಲಿ ಪ್ರತಿಭೆಯ ಕೊರತೆಯಿದೆ ಎಂದು ಕೊಂಡಿದ್ದಾರೋ ಗೊತ್ತಿಲ್ಲ. ಇಂತಹ ಮನಸ್ಥಿತಿ ಇರುವ ಚಿತ್ರರಂಗದಲ್ಲಿ ಕನ್ನಡದವರು ಬೇರೂರುವುದು ತುಂಬಾನೇ ಕಷ್ಟ. ಆದರೆ ಈ ಜೋಡಿಗಳು ಬಂದ ಸವಾಲುಗಳನ್ನು ಧೈರ್ಯವಾಗಿ ಎದುರಿಸಿ ಚಿತ್ರರಂಗದಲ್ಲಿ ಗಟ್ಟಿಯಾಗಿ ತಳವೂರಿದ್ದಾರೆ.ಅವರ ಪ್ರತಿಭೆಗೆ, ಶ್ರಮಕ್ಕೆ ಶಭಾಷಗಿರಿಯನ್ನು ಸಲ್ಲಿಸಲೇಬೇಕು.

ಹಿಂದಿನ ಸಿನಿಮಾಗಳಲ್ಲಿ ಕತೆಗೆ ಪೂರಕವಾಗಿ ಖಳನಾಯಕರು ಇರುತ್ತಿದ್ದರು. ಜೊತೆಗೆ ಕ್ಯಾಮೆರಾ ಕಣ್ಣುಗಳು, ಲೈಟ್ ಎಫೆಕ್ಟ್, ಸೌಂಡ್ ಎಫೆಕ್ಟ್ ಎಲ್ಲ ಎಫೆಕ್ಟ್ ಕೊಟ್ಟು ಖಳನಾಯಕನನ್ನು ಇನ್ನಷ್ಟು ಭಯಾನಕವಾಗಿ ತೆರೆಯ ಮೇಲೆ ನಿರ್ದೇಶಕ ತೋರಿಸುತ್ತಿದ್ದರು. ಆದರೆ ಕಾಲ ಬದಲಾಯಿತು. ನಿರ್ದೇಶಕರು ಬದಲಾದರು. ಕಲಾವಿದರಂತೂ ಎಂದೋ ಬದಲಾದರು. ಹೀಗೆ ಬದಲಾಗುತ್ತಾ ಹಳೆಯ ಮುಖಗಳೆಲ್ಲವೂ ದೂರ ಹೋಗಿ ಹೊಸ ಮುಖಗಳು, ಹೊಸ ಪ್ರಯೋಗಗಳು ಎದುರಾದವು.

ಈಗಿನ ಖಳನಾಯಕನ ಪಾತ್ರ ಮಾಡುವವನಿಗೆ ಸಾಕಷ್ಟು ಪೈಪೋಟಿ ಹಾಗೂ ಸವಾಲುಗಳಿವೆ. ಅವುಗಳೆಲ್ಲದಕ್ಕೂ ಅವನು ಮಾನಸಿಕವಾಗಿಯೂ ಅಥವಾ ದೈಹಿಕವಾಗಿಯೂ ಸಬಲನಾಗಿರಲೇ ಬೇಕು. ನಿರ್ದೇಶಕರು ಹೇಳಿದ ಹಾಗೆ ತನ್ನ ದೇಹವನ್ನೆಲ್ಲ ಆಗಾಗ ಡ್ರಿಲ್ ಮಾಡುತ್ತಲೇ ಇರಬೇಕು. ಅವರು ಸಿಕ್ಸ್ ಪ್ಯಾಕ್ ಅಂದರೆ ಸಿಕ್ಸ್ ಪ್ಯಾಕ್, ಎಟ್ ಪ್ಯಾಕ್ ಅಂದರೆ ಎಟ್ ಪ್ಯಾಕ್, ಅದ್ಯಾವುದು ಬೇಡ ಎಂದರೆ ಡಯಟ್ ಮಾಡಿ ಸಣ್ಣಗಾಗಬೇಕು. ಈ ಹಿಂದೆ ವಸಿಷ್ಠ ಅವರು ‘ಕವಚ’ ಸಿನಿಮಾಕ್ಕಾಗಿ ಸಾಕಷ್ಟು ದಪ್ಪವಾಗಿದ್ದರು. ಮತ್ತೆ ಅವರ ಮುಂದಿನ ಸಿನಿಮಾಕ್ಕಾಗಿ ಮತ್ತೆ ಸಹಜ ಸ್ಥಿತಿಗೆ ಬಂದರು. ಅವರಿಗಿರುವ ಕೆಲಸದ ಮೇಲಿನ ಶ್ರದ್ದೆಯನ್ನು ನೋಡಿ ನಾನು ಆಗಾಗ ಮೆಚ್ಚಿ ಹುಬ್ಬೇರಿಸಿದ್ದೇನೆ.

ದೇಹವನ್ನು ಡ್ರಿಲ್ ಮಾಡುವುದಷ್ಟೇ ಅಲ್ಲ. ಅವುಗಳ ಜೊತೆಗೆ ಅಪಾಯಕಾರಿಯಾದ ಫೈಟ್ ಗಳು ಹಾಗೂ ಅಪಾಯಕಾರಿ ಸನ್ನಿವೇಶಗಳಿಗೆ ನಟನಾದವನು ಸಿದ್ಧನಾಗಿರಬೇಕು. ಈ ಹಿಂದೆ ಧನಂಜಯ ಅವರು ಪಾತ್ರಕ್ಕಾಗಿ ಕುದುರೆಯನ್ನು ಓಡಿಸುವುದನ್ನು ಕಲಿತರಂತೆ. ಅಷ್ಟೇ ಅಲ್ಲ ಆ ಕುದುರೆಯನ್ನು ಓಡಿಸುವಾಗ ದುರದೃಷ್ಟಕ್ಕೆ ಕುದುರೆಯೇ ಅವರ ಮೇಲೆ ಬಿದ್ದು ಅವರ ಕಾಲು ಮುರಿದು ಹೋಗಿತಂತೆ. ಅಷ್ಟೆಲ್ಲ ದುರಂತವಾದರೂ ಧನಂಜಯ ಹೆದರಿ ಸಿನಿಮಾದಿಂದ ದೂರ ಸರಿಯಲಿಲ್ಲ. ಮತ್ತೆ ಬಣ್ಣ ಹಚ್ಚಿದರು. ಮತ್ತೆ ಅಪಾಯಕಾರಿ ಸನ್ನಿವೇಶಗಳಿಗೆ ಸಿದ್ದರಾದರು. ತಮ್ಮ ಜೀವ ಕೈಯಲ್ಲಿ ಹಿಡಿದುಕೊಂಡು, ಪಾತ್ರಕ್ಕೆ ನ್ಯಾಯ ಒದಗಿಸಿದರು.

ವಸಿಷ್ಠ, ಧನಂಜಯ ಅವರ ಸಿನಿಮಾವನ್ನು ಪರದೆಯ ಮೇಲೆ ನೋಡುವಾಗ ಅವರ ಸಹಜ ಅಭಿನಯ ಮಾತ್ರ ನಮ್ಮ ಕಣ್ಣಿಗೆ ಕಾಣುತ್ತದೆ. ಆದರೆ ಆ ಪಾತ್ರಕ್ಕಾಗಿ ಅವರು ಪಟ್ಟ ಕಷ್ಟಗಳು, ಅಪಾಯಗಳು ನಮಗೆ ಕಾಣುವುದಿಲ್ಲ. ಅವರ ಅಮೋಘ ಅಭಿನಯದಲ್ಲಿ ನಾವು ತೇಲಿ ಹೋಗುತ್ತೇವೆ. ಬಹುಶಃ ಇದೇ ಕಾರಣಕ್ಕೆ ಜನ ಈ ಜೋಡಿಗಳ ಮೇಲೆ ನಾಯಕನಷ್ಟೇ ಪ್ರೀತಿಯನ್ನು ಕೊಟ್ಟಿದ್ದಾರೆ ಎನ್ನಬಹುದು.

ಒಂದು ವಿಪರ್ಯಾಸ ನೋಡಿ ಈ ಜೋಡಿಯ ನಡುವೆ ಸಾಕಷ್ಟು ಸಾಮ್ಯತೆಗಳಿವೆ. ಇಬ್ಬರು ಓದಿದ್ದು ಇಂಜಿನಿಯರಿಂಗ್ ಪದವಿ. ಮೊದಲು ಕೆಲಸ ಶುರು ಮಾಡಿದ್ದೂ ಮಲ್ಟಿನ್ಯಾಷನಲ್ ಕಂಪನಿಯಲ್ಲಿ. ಇಬ್ಬರು ಬಣ್ಣ ಹಚ್ಚಿ ಒಂದೇ ಸಿನಿಮಾದಲ್ಲಿ ಖಳನಾಯಕರಾಗಿ ಚಿಟ್ಟೆ ಹಾಗು ಡಾಲಿಯಾಗಿ ಗುರುತಿಸಿಕೊಂಡರು. ಹೀಗೆ ಇಬ್ಬರು ಕನ್ನಡದಲ್ಲಿ ಹಂತ ಹಂತವಾಗಿ, ಜೊತೆಯಾಗಿ ಬಹು ಎತ್ತರಕ್ಕೆ ಖಳನಾಯಕರಾಗಿ ಬೆಳೆದರು. ಈಗ ಕುಚುಕು ಗೆಳೆಯರಾಗಿ ಕನ್ನಡದ ಹೆಮ್ಮೆಯ ಕಲಾವಿದರಾಗಿದ್ದಾರೆ.

ಎಷ್ಟೋ ಸಾರಿ ಜೊತೆಗೆ ಕೆಲಸ ಮಾಡುವ ಸಹದ್ಯೋಗಿ ಮುಂದೆ ಹೋದರೆ, ಕಾಲು ಎಳೆಯುವವರೇ ಹೆಚ್ಚು. ಆದರೆ ಈ ಕುಚುಕು ಗೆಳೆಯರು ಮಾತ್ರ ಹಾಗಲ್ಲ. ಒಟ್ಟೊಟ್ಟಿಗೆ ಸಿನಿಮಾ ಮಾಡಿದರು. ಒಟ್ಟೊಟ್ಟಿಗೆ ಟಿವಿ ಶೋಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಸಾಲದಕ್ಕೆ ಖಳನಾಯಕನ ವಿಭಾಗದಲ್ಲಿ ಯಾವುದೇ ಪ್ರಶಸ್ತಿ ಬಂದರು ಅವರಿಬ್ಬರ ಹೆಸರು ಆಯ್ಕೆ ಆಗಿರುತ್ತದೆ. ಅಲ್ಲಿ ಅವರಿಬ್ಬರೂ ಪ್ರತಿಸ್ಪರ್ಧಿಗಳಾಗಿ, ಮುಖ ಸೊಟ್ಟಗೆ ಮಾಡಿಕೊಳ್ಳದೆ ಒಬ್ಬರಿಗೊಬ್ಬರು ಬೆನ್ನುತಟ್ಟುತ್ತಾರೆ. ಮೊನ್ನೆ ‘ಐಫಾ’ ಪ್ರಶಸ್ತಿಯಲ್ಲೂ ಅವರಿಬ್ಬರ ಹೆಸರು ಆಯ್ಕೆ ಆಗಿತ್ತು. ಪ್ರಶಸ್ತಿಯು ಅವರಿಬ್ಬರ ನಡುವೆ ಕಣ್ಣು ಮುಚ್ಚಾಲೆ ಆಡಿ, ಧನಂಜಯ ಅವರ ಕೈ ಸೇರಿತು. ವಸಿಷ್ಠ ಅವರು ಪ್ರಶಸ್ತಿಯು ಗೆಳೆಯನ ಪಾಲಾಗಿದ್ದಕ್ಕೆ ಬೇಸರಗೊಳ್ಳಲಿಲ್ಲ.ಇತ್ತ ಕಡೆ ಧನಂಜಯ ಪ್ರಶಸ್ತಿ ತಮ್ಮ ಕೈ ಸೇರಿದ ಮೇಲೆ ವೇದಿಕೆಯಲ್ಲಿ ಗೆಳೆಯ ವಸಿಷ್ಠನಿಗೆ ಧನ್ಯವಾದವನ್ನು ಹೇಳುವುದನ್ನು ಮರೆಯಲಿಲ್ಲ. ಚಿತ್ರರಂಗದಲ್ಲಿ ಸಾಕಷ್ಟು ಕುಚುಕು ಗೆಳೆಯರಿದ್ದಾರೆ. ಇನ್ನೂ ಕುಚುಕು ಗೆಳೆಯನ ಮೇಲೆ ಹಲ್ಲು ಮಸೆಯುವರಿದ್ದಾರೆ. ಆದರೆ ಇವರಿಬ್ಬರ ಗೆಳೆತನ ಹೀಗೆ ಯಾರ ಕಣ್ಣು ಬೀಳದೆ ಸದಾ ಕಾಲ ಕುಚುಕು ಗೆಳೆಯರೇ ಆಗಿರಲಿ ಎನ್ನುವ ಆಶಯ.

ಇನ್ನೂ ಅವರ ಅಭಿನಯವನ್ನು ಹೊರತು ಪಡಿಸಿ ಒಂದೆರಡು ಮಾತನ್ನು ನಾನು ಹೇಳಬೇಕೆಂದರೆ ವಸಿಷ್ಠ ಅವರ ಜೊತೆ ನಾನು ನೇರವಾಗಿ ಮಾತನಾಡದಿದ್ದರೂ, ಪರೋಕ್ಷವಾಗಿ ಮಾತಾಡಿದ್ದೇನೆ. ಅಭಿಮಾನಿಗಳೊಂದಿಗೆ ಯಾವಾಗಲು ಪ್ರೀತಿಯಿಂದ ನಡೆದುಕೊಳ್ಳುವ ಅತ್ಯಂತ ಸರಳ ವ್ಯಕ್ತಿ ವಸಿಷ್ಠ. ಅವರಿಗೆ ಏನೇ ಪ್ರಶ್ನೆ ಕೇಳಲಿ ಮನಸ್ಸು ಬಿಚ್ಚಿ ಮಾತಾಡುತ್ತಾರೆ, ಅದಕ್ಕೆ ಉತ್ತರಿಸುತ್ತಾರೆ. ನಾನು ಸಿನಿಮಾದ ಬಗ್ಗೆ ಹಲವಾರು ಪ್ರಶ್ನೆಗಳನ್ನು ಕೇಳಿ ಅವರ ತಲೆ ತಿಂದಿದ್ದೇನೆ. ಅವುಗಳಿಗೆಲ್ಲ ತಾಳ್ಮೆಯಿಂದ ಉತ್ತರಿಸಿದ್ದಾರೆ. ಇನ್ನೂ ಕೆಲವು ಪ್ರಶ್ನೆಗಳಿಗೆ ಅವರಿಂದ ಉತ್ತರ ಬರಬೇಕಿದೆ. ಇನ್ನು ಧನಂಜಯ ಅವರೊಂದಿಗೆ ಪರೋಕ್ಷವಾಗಿಯೂ ಕೂಡ ನಾನು ಮಾತನಾಡಿಲ್ಲ. ಆದರೆ ಅವರ ಸಂದರ್ಶನದ ಮುಖಾಂತರ ಸ್ವಲ್ಪ ಮಟ್ಟಿಗೆ ಅವರ ಬಗ್ಗೆ ತಿಳಿದುಕೊಂಡಿದ್ದೇನೆ. ಧನಂಜಯ ಎಂದರೆ ಅಹಂಕಾರಿ ಮನುಷ್ಯ ಎಂದು ಹೇಳುತ್ತಾರೆ. ಆದರೆ ನನಗೆ ಅವರಲ್ಲಿ ಅಹಂಕಾರ ಕಾಣಲಿಲ್ಲ.ಬದಲಾಗಿ ನೇರ ನುಡಿಯ ಮನುಷ್ಯ. ಮತ್ತು ತಾವು ಅನುಭವಿಸಿದ ನೋವುಗಳನ್ನು ಮುಲಾಜಿಲ್ಲದೆ ನೇರವಾಗಿ ಎಲ್ಲರ ಎದುರು ಹೇಳುವ ದಿಟ್ಟ ನಟ ಅನಿಸಿತು.

ಕೊನೆಯದಾಗಿ ಹೇಳಬೇಕೆಂದರೆ ಈಗ ಈ ಜೋಡಿ ನಾಯಕರಾಗಿ ಬಡ್ತಿ ಪಡೆದಿದ್ದಾರೆ. ಹೊಸ ಲುಕ್, ಹೊಸ ಸ್ಟೈಲ್ ನೊಂದಿಗೆ ಬೆಳ್ಳಿ ಪರದೆಯ ಮೇಲೆ ಕಾಣಿಸಿಕೊಳ್ಳಲು ಕಾತುರರಾಗಿದ್ದಾರೆ. ಯಾರ ಆಸರೆ ಇಲ್ಲದೆ ಎತ್ತರಕ್ಕೆ ಬೆಳೆದ ಈ ಜೋಡಿಗೆ ಯಾವುದೇ ಪಾತ್ರವನ್ನು ಕೊಟ್ಟರು ಅಚ್ಚುಕಟ್ಟಾಗಿ ನಿಭಾಯಿಸಬಲ್ಲ ಶಕ್ತಿ ಇದೆ. ಖಳನಾಯಕನ ಪಾತ್ರದಲ್ಲಿ ಈ ಜೋಡಿಯನ್ನು ಬಹುಬೇಗನೆ ಜನರು ಅಪ್ಪಿಕೊಂಡಿದ್ದರು. ಅದೇ ರೀತಿ ನಾಯಕನ ಪಾತ್ರವನ್ನು ಕೂಡ ಜನ ಅಷ್ಟೇ ಪ್ರೀತಿಯಿಂದ ಅಪ್ಪಿಕೊಳ್ಳುತ್ತಾರೆ ಎನ್ನುವ ನಂಬಿಕೆಯಿದೆ.

ವಸಿಷ್ಠಸಿಂಹ ಹಾಗು ಧನಂಜಯ ಅವರು ನಾಯಕರಾಗಿಯೂ ಹಾಗು ಖಳನಾಯಕರಾಗಿಯೂ ಬಣ್ಣ ಹಚ್ಚಲಿ. ಪ್ರೇಕ್ಷಕರಿಗೆ ಇನ್ನಷ್ಟು ಒಳ್ಳೆಒಳ್ಳೆಯ ಸಿನಿಮಾಗಳನ್ನು ಕೊಡಲಿ ಎನ್ನುವುದೆ ಆಕೃತಿ ಕನ್ನಡದ ಆಶಯ ಇಬ್ಬರಿಗೂ ಶುಭವಾಗಲಿ..

ಲೇಖನ : ಶಾಲಿನಿ ಪ್ರದೀಪ್

ak.shalini@outlook.com

 

 

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW